ಬಾರ್ಕೂರು

ಮಾರ್ಗ: ಬ್ರಹ್ಮಾವರ-ಬಾರ್ಕೂರು
ದೂರ: ೪ ಕಿ.ಮೀ.

ವೀಕ್ಷಣಾ ಸ್ಥಳಗಳು. ಮೂಡುಕೇರಿ ಸೋಮೇಶ್ವರ ದೇವಸ್ಥಾನ ಶ್ರೀ ಪಂಚಲಿಂಗೇಶ್ವರ ಕಲ್ಲಿನ ಚಪ್ಪರ ಕತ್ತಲೆ ಬಸದಿ ಗಣಪತಿ ದೇವಸ್ಥಾನ

ಐತಿಹಾಸಿಕ ಬಾರ್ಕೂರು: ಆಳುಪರು, ಹೊಯ್ಸಳರು, ವಿಜಯನಗರ, ಕೆಳದಿ ಹಾಗೂ ಬೂತಾಳ ಪಾಂಡ್ಯನ ಇತಿಹಾಸ ಹೊಂದಿದೆ. ಹಂಪೆಯ ಹಿಂದಿನ ಅವಶೇಷದಂತೆ ಭಂಗವಾದ ರೀತಿಯಲ್ಲಿ ಕಂಡುಬರುವುದು. ಹಿಂದೆ ಇಲ್ಲಿ ೩೬೫ಕ್ಕೂ ಮಿಕ್ಕಿ ದೇವಸ್ಥಾನಗಳಿದ್ದು, ದಿನಕ್ಕೊಂದರಂತೆ ಅರಸರು ದೇವಸ್ಥಾನದ ಪೂಜೆ ಸಲ್ಲಿಸುತ್ತಿದ್ದರೆಂಬ ಪ್ರತೀತಿ ಇದೆ. ಇಲ್ಲಿ ಹತ್ತು ಕೇರಿಗಳಿದ್ದು. ಒಂದೊಂದು ಕುಲಕಸುಬುದಾರರಿಗೆ ಒಂದೊಂದು ಕೇರಿ ಇದ್ದಿತ್ತೆಂಬ ದಂತ ಕಥೆ ಇದೆ.

 

ಬ್ರಹ್ಮಾವರ-ಕೃಷಿ ಕೇಂದ್ರ

ಮಾರ್ಗ: ಬ್ರಹ್ಮಾವರ
ದೂರ: ೧ ಕಿ.ಮೀ.

ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಶಾಖೆಯಾಗಿರುವ ಇದು ೧೯೮೨ರಲ್ಲಿ ಸ್ಥಾಪಿತವಾಗಿದ್ದು ಶೈಕ್ಷಣಿಕ ಮಹತ್ವ ಪಡೆದ ಸ್ಥಳವಾಗಿದೆ. ಮೊಲಸಾಕಾಣೆ, ಕೋಳಿಸಾಕಣೆ, ಮಣ್ಣು, ನೀರು ಮತ್ತು ಸಸ್ಯ ವಿಶ್ಲೇಷಣೆ ಪ್ರಯೋಗಾಲಯ, ಹೈಬ್ರಿಡ್ ಗಿಡಗಳು. ಹೀಗೆ ಹತ್ತು ಹಲವು ಅಂಶಗಳನ್ನು ಹೊಂದಿದ ೩೪೦ ಎಕ್ರೆಗಳನ್ನು ವಿಶಾಲವಾದ ಜಾಗದಲ್ಲಿ ಇದು ಹಬ್ಬಿದೆ.

 

ಆಕಾಶವಾಣಿ ಬ್ರಹ್ಮಾವರ

ಮಾರ್ಗ: ಬ್ರಹ್ಮಾವರ
ದೂರ: ೧ ಕಿ.ಮೀ.

ಬ್ರಹ್ಮಾವರ ಕೆಮಿಕಲ್ಸ್ ಹಾಗೂ ವೆಸ್ಟ್‌‌ಕೋಸ್ಟ್ ಕೆಮಿಕಲ್ಸ್

ಇಲ್ಲಿ ಕೇಟನಾಶಕ ಮತ್ತು ಇತರ ರಾಸಾಯನಿಕ ಘಟಕ ತಯಾರಿಕೆಯನ್ನು ನೋಡಿ ತಿಳಿದುಕೊಳ್ಳಬಹುದು. ವೀಕ್ಷಣೆ ವೇಳೆ ಜಾಗರೂಕತೆ ಅಗತ್ಯ.

 

ಮಂದಾರ್ತಿ: ದುರ್ಗಾಪರಮೇಶ್ವರಿ ಅಮ್ಮನವರು

ಮಾರ್ಗ: ಬ್ರಹ್ಮಾವರ-ಬಾರ್ಕೂರು-ಮಂದಾರ್ತಿ
ದೂರ: ೧೬ ಕಿ.ಮೀ.

ಪಾತಾಳದಲ್ಲಿರುವ ನಾಗಕನ್ಯೆಯರಾದ ಮಂದರತಿ, ನಾಗರತಿ, ನೀಲರತಿ, ಚಾರುರತಿ, ದೇವರತಿ ಎನ್ನುವ ಪಂಚಕನ್ಯೆಯರು ವನಸಿರಿಯನ್ನು ಕಂಡು ಬೆರಗಾಗಿ ನೆಲೆನಿಂತ ಪುಣ್ಯ ಸ್ಥಳವಾಗಿದೆ. ಮಕ್ಕಳ ಪ್ರಾಪ್ತಿಗಾಗಿ ಬೆಳಕಿನ ಸೇವೆಯನ್ನು ಯಕ್ಷಗಾನದ ಮೂಲಕ ನೀಡುವ ಸಂಪ್ರದಾಯವಿದೆ. ಇಂದಿಗೂ ಸಾವಿರಾರು ಜನರಿಗೆ ನಿತ್ಯ ಅನ್ನ ದಾಸೋಹ ನಡೆಯುತ್ತದೆ. ಇಲ್ಲಿ ೪ ಯಕ್ಷಗಾನ ಮೇಳಗಳು ಭಕ್ತಾದಿಗಳ ಮನ ಬೆಳಗುತ್ತಿವೆ.

 

ಕೊಕ್ಕರ್ಣೆ – ಸೂರಾಲು ಅರಮನೆ,
ಮಹಾಲಿಂಗೇಶ್ವರ ನಾಲ್ಕುರು ಜೋಮ್ಲು ತೀರ್ಥ

ಮಾರ್ಗ: ಬ್ರಹ್ಮಾವರ-ಕೊಕ್ಕರ್ಣೆ-ಸೂರಾಲು
ದೂರ: ೨೩ ಕಿ.ಮೀ.

ಇದು ಇತಿಹಾಸ ಪ್ರಸಿದ್ಧ ಸ್ಥಳ. ಹಿಂದೆ ಒಂದು ಕಾಲು ಕಿ.ಮೀ ವಿಸ್ತಾರವುಳ್ಳ ಈ ಅರಮನೆ ಇಂದು ತೀರಾ ಶಿಥಿಲಾವಸ್ಥೆಯಲ್ಲಿದೆ. ಅಳುಪರ ಸಾಮಂತರು ಆಳಿದ ಚೋಳ ಮನೆತನಕ್ಕೆ ಸೇರಿದ ಸ್ಮಾರಕವಾಗಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ಮಾನ್ಯತೆ ಪಡೆದಿದೆ. ಸೂರಾಲು ಅರಮನೆಯ ಹತ್ತಿರದಲ್ಲಿದ್ದು ಕಲ್ಲಿನ ಉಂಗುರ ಮಾದರಿಯಲ್ಲಿದ್ದು ಒಂದರೊಳಗೊಂದು ಸರಪಣಿಯ ವಿಶೇಷತೆ ಇದೆ. ಇದು ಚಾರಣ ಸ್ಥಳವಾಗಿದ್ದು ಸುಂದರವಾಗಿದೆ. ಜಲಪಾತವಿದ್ದು ವೀಕ್ಷಣೆ ವೇಳೆ ಎಚ್ಚರ ಅಗತ್ಯ.

 

ಮೆಕ್ಕೆ ಕಟ್ಟು – ನಂದಿಕೇಶ್ವರ

ಮಾರ್ಗ: ಬ್ರಹ್ಮಾವರ-ಸ್ಯಾಬ್ರಕಟ್ಟೆ-ಶಿರಿಯಾರ
ದೂರ: ೨೦ ಕಿ.ಮೀ.

ಹಿಂದೆ ಅಶ್ವಮೇಧ ಯಾಗಮಾಡುವ ಸ್ಥಳವಾದುದರಿಂದ ಮೇಕೆಯನ್ನು ತಂದು ಕಟ್ಟುತ್ತಿದ್ದರಾದ್ದರಿಂದ ಮೇಕೆ ಕಟ್ಟು ಎಂಬ ಹೆಸರು ಬಂತು. ಈಗ ಇದು ಮೆಕ್ಕೆ ಕಟ್ಟು ಎಂದಾಗಿದೆ. ಈಶ್ವರ ಹಣಗಳ ಪ್ರತೀಕವಾಗಿ ವಿವಿಧ ಕೆತ್ತನೆಯ ಸುಮಾರು ೧೭೦ ವಿಗ್ರಹಗಳು ಇಲ್ಲಿವೆ. ಪ್ರತಿ ಸಂಕ್ರಮಣದ ದಿನ ಅನ್ನ ಸಂತರ್ಪಣೆ ಇದೆ.

 

ಪಡುಮುಂಡು-ಕಲ್ಲು ಗಣಪತಿ ದೇವಸ್ಥಾನ

ಮಾರ್ಗ: ಉಡುಪಿ-ಸ್ಯಾಬ್ರಕಟ್ಟೆ-ಶಿರಿಯಾರ
ದೂರ: ೧೩ ಕಿ.ಮೀ.

ಮೆಕ್ಕೆಕಟ್ಟು ಸಮೀಪದಲ್ಲಿರುವ (೧ ಕಿ.ಮೀ) ಇದು ಸಂಪೂರ್ಣ ಕಲ್ಲಿನಿಂದ ರಚಿತವಾದ ಗುಹಾಂತ ದೇವಾಲಯವಾಗಿದೆ. ಶಿಲ್ಪಿಗಳ ಕೈಚಾತುರ್ಯವನ್ನು ಮಕ್ಕಳೆಲ್ಲಾ ಆಸ್ವಾಧಿಸುವ ಸ್ಥಳವಾಗಿದೆ.

 

ನೀಲಾವರ-ಮಹಿಷಮರ್ಧಿನೀ ದೇವಾಲಯ

ಮಾರ್ಗ:  ಉಡುಪಿ-ಬ್ರಹ್ಮಾವರ-ಹೆಬ್ರಿ
ದೂರ: ೨೩ ಕಿ.ಮೀ.

ನೀಲಾವರ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸೀತಾನದಿಯ ದಡದ ಮೇಲೆ ಇರುವ ಇದು ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಬ್ರಹ್ಮಾವರ ಹೆಬ್ರಿ ಮಾರ್ಗದಲ್ಲಿ ಕುಂಜಾಲಿನಿಂದ ೩ ಕಿ.ಮೀ. ಉತ್ತರಕ್ಕೆ ಚಲಿಸಿದರೆ ಪ್ರಶಾಂತ ವಾತಾವರಣದ ಸೀತಾನದಿಯ ತಟದಲ್ಲಿ ಕಂಗೋಳಿಸುವ ಮಹಿಷಮರ್ಧಿನೀ ದೇವಾಲಯ ಅಪಾರ ಭಕ್ತ ಸಮೂಹವನ್ನು ಹೊಂದಿ ಪ್ರಸಿದ್ಧಿ ಪಡೆದಿದೆ. ಜಗತ್ತಿನಲ್ಲಿಯೇ ಅಪೂರ್ವವಾದ ಅತ್ಯಂತ ಪ್ರಾಚೀನವಾದ ರುದ್ರಾಕ್ಷಿ ಶಿಲೆಯಿಂದ ನಿರ್ಮಿತವಾದ ಶ್ರೀದೇವಿಯ ಚತುರ್ಬಾಹು ವಿಗ್ರಹ ಇಲ್ಲಿ ಕಾಣಬಹುದು. ಗಾಲವತೀರ್ಥ, ವ್ಯಾಘ್ರ, ವೀರಭದ್ರ ದೇವರಗುಡಿ ದೇವಾಲಯದ ಪಕ್ಕದಲ್ಲಿದೆ. ಸಮೀಪದಲ್ಲಿ ಕಲ್ಕುಡ್ಕ ಗುಡಿ ಇದೆ. ಅನತಿ ದೂರದಲ್ಲಿ ಪಂಚಮಿಖಾನ ಸುಬ್ರಹ್ಮಣ್ಯ ಗುಡಿ ಮತ್ತು ಪಂಚಮೀ ತೀರ್ಥ ಸ್ನಾನಘಟ್ಟವಿದೆ. ಇಲ್ಲಿ ಪುರಾತನವಾದ ಕಲ್ಲಿನ ಶಾಸನಗಳಿವೆ. ಸಮೀಪದಲ್ಲಿ ವಿಶಾಲವಾದ ನೂರಾರು ಸಂಖ್ಯೆಗಳುಳ್ಳ ಗೋಶಾಲೆ ಇದೆ. ೬ ಅಡಿ ಗಂಧದ ವೀರಭದ್ರನ ಮೂರ್ತಿ ಅಪರೂಪವಾಗಿದ್ದು, ಕರ್ನಾಟಕದಲ್ಲೇ ಪ್ರಥಮವೆನ್ನಬಹುದಾಗಿದೆ. ನೀಲಾವರದಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತದೆ.

 

ಕೋಟ – ಹಿರೇಮಹಾಲಿಂಗೇಶ್ವರ

ಮಾರ್ಗ:  ಉಡುಪಿ-ಬ್ರಹ್ಮಾವರ-ಕೋಟ
ದೂರ: ೨೫ ಕಿ.ಮೀ.

ಹಿರೇಮಹಾಲಿಂಗೇಶ್ವರ : ಇದೊಂದು ಇತಿಹಾಸ ಪೂರ್ವ ದೇವಾಲಯವಾಗಿದ್ದು ಶಿಲೆಯಿಂದ ರೂಪಿತವಾಗಿದೆ. ಇಲ್ಲಿ ಚೋಳ, ಚಾಲುಕ್ಯ ಮತ್ತು ಹೊಯ್ಸಳ ಶಿಲ್ಪ ಕಲೆಯನ್ನು ಹೊಂದಿದೆ. ವಿಜಯನಗರದ ಅರಸ ಬುಕ್ಕರಾಯನ ಉಲ್ಲೇಖವಿದೆ. ಗಜಪ್ರಷ್ಠಾಕಾರದ ಕಲ್ಲಿನ ಗೋಪುರ, ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾಬಾಲಿಕೆಯರನ್ನು ಹೋಲುವ ಕೆತ್ತನೆಗಳಿವೆ.

 

ಕೋಟಾ ಅಮೃತೇಶ್ವರಿ:

ದೇವಿಯ ಸ್ಥಾನದಲ್ಲಿ ಏಕಶಿಲಾ ರಕ್ತೇಶ್ವರಿ, ಪರಿವಾರ ದೇವತೆಗಳಾದ ವೀರಭದ್ರನ ಗುಡಿ, ನಾಗ, ಬೊಬ್ಬರ್ಯ, ಉಮ್ಮಲ್ತಿ ಇತ್ಯಾದಿ ದೇವರ ಗುಡಿಗಳಿವೆ. ದೇವಳದ ಉತ್ತರದಲ್ಲಿ ವಿಶಾಲವಾದ “ವರುಣ ತೀರ್ಥ” ಸರೋವರ ಇದೆ. ಅನತಿ ದೂರದಲ್ಲಿ ಶ್ರೀ ರಾಜಶೇಖರ ದೇವಾಲಯವಿದೆ. ಶ್ರೀ ದೇವಿಯ ಸನ್ನಿಧಿಯಲ್ಲಿ ಶಿವಲಿಂಗವು ಉದ್ಭವಿಸುವುದು. ಅಮೃತೇಶ್ವರಿ ಯಕ್ಷಗಾನ ಮೇಳವಿದೆ.