ಕೊಲ್ಲೂರು – ಮೂಕಾಂಬಿಕ ಅಭಯಾರಣ್ಯ

ಮಾರ್ಗ: ಉಡುಪಿ- ಕುಂದಾಪುರ- ಕೊಲ್ಲೂರು
ದೂರ: ೭೦ ಕಿ.ಮೀ.

ಎಲ್ಲಾ ಜಾತಿಯ ಕಾಡು ಪ್ರಾಣಿ ಮತ್ತು ಪಕ್ಷಿಗಳು ಇಲ್ಲಿ ವಾಸವಾಗಿವೆ. ವಿಶೇಷವೆಂದರೆ ಕುವಸುರನೆಂಬ ರಾಕ್ಷಸ ವಾಸ ಮಾಡಿದ್ದ ಕಲ್ಲಿನ ಮಂಚ ಈಗಲೂ ಇದೆ. ವಿವಿಧ ಜಾತಿಯ ಮರ ಗಿಡಗಳು, ಪ್ರಾಣಿಪಕ್ಷಿಗಳು ಅರಣ್ಯದ ಮಧ್ಯಭಾಗಲ್ಲಿ ಸಂಚರಿಸುತ್ತವೆ.

 

ಬೈಂದೂರು – ಮರವಂತೆ ಬೀಚ್

ಮಾರ್ಗ: ಉಡುಪಿ- ಕುಂದಾಪುರ- ಬೈಂದೂರು
ದೂರ: ೪೮ ಕಿ.ಮೀ.

ಪಶ್ಚಿಮ ಭಾಗ ಅರಬ್ಬೀ ಸಮುದ್ರ, ಪೂರ್ವಭಾಗದ ಸೌಪರ್ಣಿಕಾ ತೀರದ ಭವ್ಯ ಕಲ್ಪನೆಯನ್ನು ಕಾಣುವ ಮನೋಹರ ಬೀಚ್ ಸಂಜೆ ಸೂರ್ಯಸ್ತದ ವೇಳೆ ಮನೋಹರ ಅನುಭವ. ಸುದೀರ್ಘವಾದ ಬೀಚ್ ಹೊಂದಿದ್ದು, ನದಿಯಲ್ಲಿ ಸಂಚರಿಸಲು ಬೋಟಿಂಗ್ ವ್ಯವಸ್ಥೆ ಇದೆ. ಸಮೀಪದಲ್ಲಿ ವರಹಾಸ್ವಾಮಿ ದೇವಸ್ಥಾನವಿದೆ. ಮಳೆ ಬಾರದಿದ್ದಾಗ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆ ಬರಿಸಿಕೊಳ್ಳುವ ಪ್ರತೀತಿ ಇದೆ. ಹತ್ತಿರದಲ್ಲಿ ಕುರು ಎಂಬ ಚಿಕ್ಕ ದ್ವೀಪದಂತೆ ಕಾಣುವ ಬಯಲು ಪ್ರದೇಶವಿದೆ. ಬಹಳ ಹತ್ತಿರದಿಂದ ಬೋಟ್‌ನಿಂದ ಮೀನುಗಾರಿಕೆ ಮಾಡುವುದನ್ನು ನೋಡಬಹುದು.

 

ಕಿರಿ ಮಂಜೇಶ್ವರ – ಅಗಸ್ತ್ಯೇಶ್ವರ ದೇವಾಲಯ

ಮಾರ್ಗ: ಉಡುಪಿ- ಕುಂದಾಪುರ
ದೂರ: ೫೬ ಕಿ.ಮೀ.

ಅಗಸ್ತ್ಯ ಮುನಿಯು ತಪಸ್ಸು ಮಾಡಿ ಸಮುದ್ರ ದಡದಲ್ಲಿ ವಾಸವಾಗಿದ್ದ ಈ ಮುನಿಯ ವಾಸದಿಂದ ಇಲ್ಲಿಯ ಸುತ್ತ ಮುತ್ತ ಊರು ಸೇರಿ ಕಿರಿಮಂಜೇಶ್ವರ ಎಂಬ ಬಿರುದಾಯಿತು. ಇಲ್ಲಿ ಅಗಸ್ತ್ಯೇಶ್ವರ ಗಣಪತಿ ಮತ್ತು ವಿಶಾಲಾಕ್ಷಿ ದೇವಸ್ಥಾನವಿದೆ. ವರ್ಷಕೊಮ್ಮೆ ಜಾತ್ರೆ ನಡೆಯುತ್ತದೆ. ಇದು ವರ್ಷದ ಕೊನೆಯ ಜಾತ್ರೆಯಾಗಿರುತ್ತದೆ.

 

ಕೊಲ್ಲೂರು – ಕೊಡಚಾದ್ರಿ

ಮಾರ್ಗ: ಉಡುಪಿ- ಕುಂದಾಪುರ- ಕೊಲ್ಲೂರು
ದೂರ: ೧೧೫ ಕಿ.ಮೀ.

ಕೊಲ್ಲೂರಿನಿಂದ ಪೂರ್ವದ ದಿಗಂತವನ್ನು ದಿಟ್ಟಿಸಿದಾಗ ಕಾಣಸಿಗುವ ಪಶ್ಚಿಮ ಘಟ್ಟದ ಬೆಟ್ಟ ಕೊಡ ಕೊಡಚಾದ್ರಿ ಚಾರಣಿಗರಿಗೆ ಸ್ವರ್ಗ. ಭಕ್ತ ಬಾವುಕರಿಗೆ ಕೈಲಾಸ. ಸುಮಾರು ಕೊಲ್ಲೂರಿನಿಂದ ೧೪ ಕಿ.ಮೀ. ದೂರದಲ್ಲಿದೆ ಸಮುದ್ರ ಮಟ್ಟದಿಂದ ೧೩೪೩ ಮೀ. ಎತ್ತರದಲ್ಲಿದೆ. ಆದಿಶಂಕರರ ಸರ್ವಜ್ಞ ಪೀಠವೂ ಇಲ್ಲಿದೆ. ಬೆಟ್ಟದ ಮೇಲೆ ಮೋಡಗಳ ಸಾಲು ಸಾಲು ಬದಿಯಿಂದ ಸಾಗುತ್ತದೆ. ಶಂಕರಾಚಾರ್ಯರು ತಪಸ್ಸು ಮಾಡಿದ ಸ್ಥಳ ಚಿತ್ರಮೂಲ ಬಹಳ ಪ್ರಸಿದ್ಧವಾಗಿದೆ. ಇಲ್ಲಿಯ ವಿಶೇಷ ಸೂರ್ಯಾಸ್ತಮಾನ ಹಾಗು ಸೂರ್ಯೋದಯವನ್ನು ನೋಡಬಹುದು. ಇಲ್ಲಿ ಸರ್ಕಾರಿ ವಸತಿ ಗೃಹವಿದೆ. ಈ ಸುಂದರ ತಾಣ ಚಾರಣಿಗರಿಗೆ ಭೂ ವೈಕುಂಠ. ಇದು ೫ ತಾಸುಗಳ ಕಾಲ್ನಡಿಗೆಯ ಮೂಲಕ ಯಾ ಬಾಡಿಗೆಯ ಜೀಪ್ ಮೂಲಕ ಕೊಲ್ಲೂರಿನಿಂದ ಪಯಣಿಸಬಹುದು.

 

ವೆಂಕಟರಮಣ ದೇವಸ್ಥಾನ

ಕೇಂದ್ರ: ಕಾರ್ಕಳ
ದೂರ: ೦.೧ ಕಿ.ಮೀ.

ಗೌಡ ಸಾರಸ್ವ ಬ್ರಾಹ್ಮಣರ ಆರಾಧ್ಯಮೂರ್ತಿ “ವೆಂಕಟರಮಣ ಸ್ವಾಮಿ” ಪಡುತಿರುಪತಿ ಖ್ಯಾತಿಯ ಈ ದೇವಾಲಯ ಕ್ರಿ.ಶ. ೧೪೫೯ರಲ್ಲಿ ಸ್ಥಾಪಿತವಾಯಿತು. ವಿಶ್ವಮಾನ್ಯ ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರು ಹೆಮ್ಮೆಯ ಕೊಡುಗೆಯಾಗಿ ನೀಡಿದ ನೆಲ್ಲಿಕಾರು ಶಿಲೆಯಿಂದ ಕಡಿದ ನಾಲ್ಕು ಕಂಬಗಳು ಶಿಲ್ಪಿ ರೆಂಜಾಳರವರ ಕಲಾ ನೈಪುಣ್ಯಕ್ಕೆ ಒಂದು ಸುಂದರ ನಿದರ್ಶನ. ಸೂಕ್ಷ್ಮಾತಿಸೂಕ್ಷ್ಮ ಇರುವೆ. ಜೇನುನೊಣ, ಮಿಡತೆ, ಫಲ, ಪುಷ್ಪ, ಪ್ರಾಣಿ ಪಕ್ಷಿಗಳ ಕೆತ್ತನೆ ಅತಿ ವಿಶಿಷ್ಠವಾದದ್ದು. ಕೂದಲಷ್ಟು ತೆಳ್ಳಗಿನ ದಾರವನ್ನೇ ಸಂದುಗಳಲ್ಲಿ ತೂರಿಸುವಷ್ಟು ಅದ್ಭುತ ರಚನೆಗಳು. “ವಿಶ್ವಕ್ಕೆ ಹೆಮ್ಮೆಯ ಕೊಡುಗೆ ಈ ಶಿಲ್ಪ” ಎಂಬ ಭಾವನೆ ಕಾರ್ಕಳ ಜನತೆಯವರದು.

 

ಅನಂತಶಯನ ದೇವಸ್ಥಾನ

ಕೇಂದ್ರ: ಕಾರ್ಕಳ
ದೂರ: ೦.೧ ಕಿ.ಮೀ.
(೦೮೨೫೮-೨೩೨೫೪೨, ೯೯೪೫೯೮೪೪೯೫)

ವೈಷ್ಣವ ನಾಮ ಸಂಪ್ರದಾಯದ ಹೊಯ್ಸಳ ಶಿಲ್ಪದ ಮಾದರಿ ದೇವಾಲಯ. ಎರಡು ಪ್ರಾಕಾರಗಳು ಪ್ರಧಾನ ಬಲಿಪೀಠ, ಧ್ವಜಸ್ತಂಭ, ನವರಂಗ, ಸುಖನಾಸಿ ಮತ್ತು ಗರ್ಭಗೃಹಗಳು ಇಲ್ಲಿನ ಮುಖ್ಯ ಅಂಗಗಳು. ಗರ್ಭಗುಡಿಯಲ್ಲಿ ಕರಿಶಿಲೆಯಿಂದ ನಿರ್ಮಿತವಾದ ಮೂರು ಸುರುಳಿ ಸುತ್ತಿರುವ ಏಳು ಹೆಡೆಯ ಆದಿಶೇಷನ ಮೇಲೆ ಶಂಖ, ಚಕ್ರ, ಗದಾ, ಪದ್ಮಧಾರಿಯಾದ ಶೇಷಶಯನ ಮಹಾವಿಷ್ಣುವು ಮಲಗಿದ್ದಾನೆ. ಪಾದಭಾಗದಲ್ಲಿ ಶ್ರೀದೇವಿ ಭೂದೇವಿಯರ ಮೂರ್ತಿಗಳಿವೆ. ಮಿಷ್ಣುವಿನ ನಾಭಿಯಿಂದ ಹೊರಟ ಕಮಲದಲ್ಲಿ ಬ್ರಹ್ಮ ಕುಳಿತಿದ್ದಾನೆ.

 

ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ಪೆರ್ವಾಜೆ

(೯೭೪೧೧೫೧೫೭೮)
ಕೇಂದ್ರ: ಕಾರ್ಕಳ

ದಾನಿಗಳ ನೆರವಿನಿಂದ ಅತ್ಯಂತ ಆಕರ್ಷಕವಾಗಿದ್ದು ಶೈಕ್ಷಣಿಕವಾಗಿ ಉತ್ತಮ ಗುಣ ಮಟ್ಟವನ್ನು ಕಾಯ್ದುಕೊಂಡು ಬರುತ್ತಿರುವ ಈ ಶಾಲೆಯು ಯಾವುದೇ ಖಾಸಗಿ ಶಾಲೆಗಿಂತ ಉತ್ತಮ ಮಟ್ಟದಲ್ಲಿದೆ.

 

ಚತುರ್ಮುಖ ಬಸದಿ

ದೂರ: ೨ ಕಿ.ಮೀ.

ಇಮ್ಮಡಿ ಭೈರವರಾಯನಿಂದ ಕ್ರಿ.ಶ. ೧೫೮೬ ರಲ್ಲಿ ನಿರ್ಮಾಣಗೊಂಡಿತ್ತು. ನಾಲ್ಕು ಮುಖವನ್ನು ಹೊಂದಿದೆ. ೨೪ ತೀರ್ಥಂಕರರ ಸಣ್ಣ ವಿಗ್ರಹಗಳಿವೆ. ಪಶ್ಚಿಮ ದ್ವಾರದಲ್ಲಿ ಅರಸನ ಶಾಸನವಿದೆ.

 

ಕಾರ್ಕಳ – ಗೊಮ್ಮಟೇಶ್ವರ

ಕೇಂದ್ರ: ಕಾರ್ಕಳ
ದೂರ: ೨ ಕಿ.ಮೀ.

ಕಾರ್ಕಳದ ಅರಸ ಭೈರವೇಂದ್ರನ ಮಗ ವೀರಪಾಂಡ್ಯನಿಂದ ಸ್ಥಾಪಿತವಾಯಿತು. ಜಗತ್ತಿನ ಎರಡನೇ ಅತಿ ಪ್ರಾಚೀನ ವಿಗ್ರಹವಾಗಿರುವ ಬಾಹುಬಲಿಯ ಈ ಏಕಶಿಲಾ ವಿಗ್ರಹ. ನಿಜವಾಗಿ ಗಾತ್ರದಲ್ಲಿ ಈಜಿಪ್ಟ್ ಕಲಾಕೃತಿಗಳಂತಿದ್ದು ಪ್ರತೀ ೧೨ ವರ್ಷಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.

 

ಆನೆಕೆರೆ ಮತ್ತು ರಾಮಸಮುದ್ರ

೨೫ ಎಕರೆ ವಿಸ್ತೀರ್ಣದ ಕೆರೆ. ಇತ್ತೀಚೆಗೆ ಉದ್ಯಾನವನವೊಂದನ್ನು ಇಲ್ಲಿ ನಿರ್ಮಿಸಲಾಗಿದ್ದು, ಸದ್ಯೋಜಾತ ಪಾರ್ಕ್ ಎಂಬುದಾಗಿ ಹೆಸರಿಸಲಾಗಿದೆ. ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ. ಆನೆಕೆರೆ ಪಕ್ಕದಲ್ಲಿರುವುದೇ ಸಿಗಡಿಕೆರೆ. ಹತ್ತಿರದಲ್ಲಿ ರಾಮ ಸಮುದ್ರವೆಂಬ ೪೨ ಎಕರೆ ವಿಸ್ತೀರ್ಣದ ಸರೋವರವಿದೆ. ಕಾರ್ಕಳ ಪುರಸಭೆಗೆ ಣಿರು ಸರವರಾಜು ಇದರಿಂದ ದೊರೆಯುತ್ತದೆ. ತೋಟಗಾರಿಕೆ ಮತ್ತು ಮೀನುಗಾರಿಕೆ ವಿಶೇಷ ಆಸಕ್ತಿ ವಹಿಸಿದೆ.

 

ಹಿರಿಯಂಗಡಿ – ಮಾನಸ್ತಂಭ

ಕೇಂದ್ರ: ಕಾರ್ಕಳ
ದೂರ: ೧.೫ ಕಿ.ಮೀ.

ಹಿರಿಯಂಗಡಿಯಲ್ಲಿನ ನೇಮಿನಾಥ ಬಸದಿಯ ಎದುರಿನ ೫೨ ೧/೨ ಅಡಿ ಎತ್ತರದ ಏಕಶಿಲಾ ಮಾನಸ್ತಂಭವನ್ನು ಅಭಿನವ ಪಾಂಡ್ಯ ದೇವಪ್ಪೊಡೆಯನು (೪ನೇ ವೀರ ಪಾಂಡ್ಯ) ಸ್ಥಾಪಿಸಿದನು. ಭಾರತದ ಏಕಶಿಲಾ ಸ್ತಂಭಗಳಲ್ಲೇ ಅತ್ಯುನ್ನತ ಎಂಬ ಕೀರ್ತಿಗೆ ಪಾತ್ರವಾದ ಈ ಸ್ತಂಭವನ್ನು ೧೪೫೫ ರಿಂದ ೧೪೬೫ ರ ಸುಮಾರಿಗೆ ನಿಲ್ಲಸಲಾಯಿತು. ಇದರ ತುದಿಯಲ್ಲಿ ನಾಲ್ಕು ಕಂಬಗಳ ಸಣ್ಣ ಮಂಟಪವಿದೆ. ಈಜಿಪ್ಟ್ ದೇಶದ ಬೃಹತ್ ಶಿಲಾಸ್ತಂಭಗಳಿಗೆ ಇದನ್ನು ಹೋಲಿಸಲಾಗಿದೆ.

 

ಶಿಲ್ಪ ಗ್ರಾಮ – ಶಿರವಂತೆ

ಕೇಂದ್ರ: ಕಾರ್ಕಳ
ದೂರ: ೧.೫ ಕಿ.ಮೀ.

ಶ್ರೀ ಶ್ಯಾಮರಾಯ ಆಚಾರ್ಯರು ಈ ಶಿಲ್ಪ ಗ್ರಾಮದ ಸ್ಥಾಪಕರು ಇಲ್ಲಿ ವಿವಿಧ ರೀತಿಯ ಶಿಲ್ಪ ಕಲಾಕೃತಿಗಳನ್ನು ರಚಿಸಲಾಗುತ್ತಿದೆ.

 

ವರಂಗ – ಬಸದಿ

ಮಾರ್ಗ: ಕಾರ್ಕಳ – ವರಂಗ -ಹೆಬ್ರಿ
ದೂರ: ೨೮ ಕಿ.ಮೀ.

ವರಂಗವು ಚಂದ್ರನಾಥ ಸ್ವಾಮಿಯ ಬಸದಿ, ನೇಮಿನಾಥ ಸ್ವಾಮಿಯ ಬಸದಿ, ಚತುರ್ಮುಖ ಅಥವಾ ಕೆರೆ ಬಸದಿ ಎಂಬ ಜೈನ ಬಸದಿಗಳಿಂದ ಕೂಡಿದೆ. ಇಲ್ಲಿಯ ಎರಡು ಚತುರ್ಮುಖ ಬಸದಿಗಳು ವಿಜಯನಗರ ಶೈಲಿಯಲ್ಲಿವೆ. ನೇಮಿನಾಥ ಬಸದಿಯ ಪ್ರಾಕಾರದ ಹೊರಗೆ, ಜಿಲ್ಲೆಯ ಮೊತ್ತಮೊದಲ ಅತೀ ಪ್ರಾಚೀನವಾದ ೪೫ ಅಡಿ ಎತ್ತರದ ಮಾನಸ್ತಂಭವಿದೆ. ನೇಮಿನಾಥ ಸ್ವಾಮಿಯ ಮುಂಭಾಗದ ಕಪೋತ ಚಾಲುಕ್ಯ ಶೈಲಿಯನ್ನು ಹೋಲುವಂತಿದೆ.

 

ಹೆಬ್ರಿ-ಕೂಡ್ಲು ತೀರ್ಥ, ಸೀತಾ ನದಿ ನಿಸರ್ಗಧಾಮ

ಮಾರ್ಗ: ಉಡುಪಿ -ಹೆಬ್ರಿ -ಆಗುಂಬೆ
ದೂರ: ೪೦ ಕಿ.ಮೀ.

ಕಾರ್ಕಳ ತಾಲೂಕಿನ ಹೆಬ್ರಿಯಿಂದ ಆಗುಂಬೆಯ ಕಡೆಗೆ ಹೋಗುವ ದಾರಿಯಲ್ಲಿ ಸಾಗಿ ಮಣ್ಣಿನ ಮಾರ್ಗದಲ್ಲಿ ೧೦ ಕಿ.ಮೀ. ದೂರ ಹೋದರೆ ಕಣ್ಮನ ಸೆಳೆಯುವ ಕೂಡ್ಲು ತೀರ್ಥ ಜಲಪಾತ ಸಿಗುತ್ತದೆ. ಸಾಧಾರಣ ೧೫೦ ಅಡಿ ಎತ್ತರದಿಂದ ಒಂದೇ ಧಾರೆಯಾಗಿ ಧುಮುಕುವ ಈ ವರ್ಣರಂಜಿತ ಜಲಪಾತವು ಸೀತಾನದಿಯಿಂದ ನಿರ್ಮಿತವಾಗಿದೆ. ಚಾರಣರ ದಣಿವನ್ನು ನಿವಾರಿಸುವ ಸುಂದರ ವಿಹಾರ ತಾಣವಿದು. ಇದೇ ದಾರಿಯಲ್ಲಿ ಸಿಗುವ ಸೀತಾನದಿ ನಿಸರ್ಗಧಾವೂ ರಮಣೀಯವಾಗಿದೆ.

ಸೀತಾ ನದಿ ರಾಫ್ಟಿಂಗ್ ಕ್ರೀಡೆ ಇದು ಚಾರಣ ಪ್ರೀಯರಿಗೆ ಜಲಕ್ರೀಡೆಯಾಗಿದೆ. ಸೋಮೇಶ್ವರ ವನ್ಯಜೀವಿ ಧಾಮವನ್ನು ಈ ಭಾಗದಲ್ಲಿ ವೀಕ್ಷಿಸಬಹುದಾಗಿದೆ.

 

ಕಾಂತವರ – ದೇವಸ್ಥಾನ

ಮಾರ್ಗ: ಕಾರ್ಕಳ – ಬೆಳುವಾಯಿ -ಕಾಂತಾವರ
ದೂರ: ೧೧ ಕಿ.ಮೀ.

ಇದು ಕಾರ್ಕಳ ತಾಲೂಕಿನ ದಕ್ಷಿಣ ಭಾಗದಲ್ಲಿರುವ ಕಾಂತಾವರ ಗ್ರಾಮದಲ್ಲಿದೆ. ವಿಶಾಲವಾದ ಈ ಪುರಾತನ ದೇವಾಲಯವು ಪ್ರಸಿದ್ದವಾಗಿದೆ. ಇಲ್ಲಿಯ ಶಿವಲಿಂಗವು ವಿಶಿಷ್ಟವಾಗಿದ್ದು ಬೇರೆ ಬಣ್ಣಗಳನ್ನು ಪಡೆಯುವುದು ಇದರ ವಿಶೇಷತೆ.

 

ಅತ್ತೂರು – ಸಂತ ಲಾರೆನ್ಸ್ ಚರ್ಚ್

ಮಾರ್ಗ: ಕಾರ್ಕಳ – ‌ಅತ್ತೂರು
ದೂರ: ೪ ಕಿ.ಮೀ.

ಸರ್ವಧರ್ಮ ಸಮನ್ವತೆಯ ಕೇಂದ್ರವಾಗಿ ರೂಪುಗೊಂಡ ಪವಾಡ ಪುರುಷ ಸಂತ ಲಾರೆನ್ಸರು ನೆಲೆನಿಂತ ಕಾರಣಿಕ ತಾಣ. ಪರ್ಪಲೆ ಗುಡ್ಡದ ಕೆಳಗೆ ಇರುವ ಕ್ರೈಸ್ತರ ಪ್ರಾಚೀನವಾದ ಅತ್ತೂರು ಚರ್ಚ್ ೧೭೫೯ ರ ಮೊದಲೇ ಸ್ಥಾಪಿತವಾಗಿತ್ತು. ಪ್ರತಿ ವರ್ಷದ ಜನವರಿ ತಿಂಗಳ ಕೊನೆಯ ಮಂಗಳವಾರ, ಬುಧವಾರ, ಗುರುವಾರದಂದು ಜರುಗುವ “ಸಾಂತ್ ಮಾರಿ” ಜಾತ್ರೆಯಲ್ಲಿ ಲಕ್ಷಕ್ಕೂ ಮಿಕ್ಕಿದ ಊರ, ಪರವೂರ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ.

 

ಮಿಯ್ಯಾರು – ಸಿ.ಇ. ಕಾಮತ್ ಕರಕುಶಲ ತರಬೇತಿ ಕೇಂದ್ರ

(೦೮೨೫೮-೨೭೨೫೫೨)
ಮಾರ್ಗ: ಕಾರ್ಕಳ – ಮಿಯ್ಯಾರು – ಬಿಜಗೋಳಿ
ದೂರ: ೭ ಕಿ.ಮೀ.

ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ವತಿಯಿಂದ ಪ್ರವರ್ತಕವಾಗಿರುವ ಈ ಸಂಸ್ಥೆ ಆಸಕ್ತಿಯುಳ್ಳ ಸ್ವಉದ್ಯೊಗಿಗಳಿಗೆ ತರಬೇತಿ ನೀಡುತ್ತದೆ. ೧೮ – ೨೫ ವರ್ಷದೊಳಗಿನ ಕನಿಷ್ಠ ೭ನೇ ತರಗತಿ ಪಾಸಾದ ಯುವಕರು ಮರ, ಮಣ್ಣು ಮತ್ತು ಶಿಲ್ಪ ಕಲೆ ಬಗ್ಗೆ ಇಲ್ಲಿ ಉಚಿತ ಊಟ ವಸತಿಯೊಂದಿಗೆ ತರಬೇತಿ ಪಡೆಯಬಹುದುದಾಗಿದೆ.

 

ನಿಟ್ಟೆ ವಿದ್ಯಾ ಸಂಸ್ಥೆಗಳು

ಮಾರ್ಗ: ಕಾರ್ಕಳ – ನಿಟ್ಟೆ – ಪಡುಬದ್ರಿ
ದೂರ: ೮ ಕಿ.ಮೀ.

ವಿವಿಧ ತಾಂತ್ರಿಕ ವೈದ್ಯಕೀಯ ಹಾಗೂ ಇನ್ನಿತರ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ ಇದೊಂದು ಶಿಕ್ಷಣ ಕೇಂದ್ರ.