ಪೂರ್ವದ ಸಹ್ಯಾದ್ರಿ ಮತ್ತು ಪಶ್ಚಿಮದ ಅರಬ್ಬೀ ಸಮುದ್ರದ ನಡುವಿನ ಪರಶುರಾಮ ಸೃಷ್ಠಿಯ ಪ್ರಕೃತಿ ರಮ್ಯ ತಾಣವೇ ಉಡುಪಿ ಜಿಲ್ಲೆಯಾಗಿದೆ. ಸುಂದರವಾದ ಈ ಜಿಲ್ಲೆ ೩೫೭೫ ಚದುರ ಕಿ.ಮೀ. ವಿಸ್ತೀರ್ಣದ ಭೂಪ್ರದೇಶವನ್ನು ಒಳಗೊಂಡಿದೆ. ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕನ್ನು  ಒಳಗೊಂಡ ಈ ಜಿಲ್ಲೆ ವಿಶ್ವಮಾನ್ಯತೆಯನ್ನು ಪಡೆದಿದೆ. ಆಧ್ಯಾತ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸಿನ ದಾಪುಗಾಲು ಇಟ್ಟು; ಅಭಿವೃದ್ಧಿ ಪಥದತ್ತ ಈ ಜಿಲ್ಲೆ ಸಾಗುತ್ತಿದೆ.

ಉಡುಪಿ ತುಳುವಿನ “ಒಡಿಪು” ಎಂಬ ಪದದಿಂದ ಬಂದಿದೆ. ಉಡುಪಿಗೆ ಸಂಸ್ಕೃತದಲ್ಲಿ ರಜತ ಪೀಠ ಎಂದು ಕರೆಯುತ್ತಾರೆ. ಪರಶುರಾಮ ಕ್ಷೇತ್ರದ ಏಳು ಪುಣ್ಯ ಕ್ಷೇತ್ರಗಳಲ್ಲಿ ರಜತ ಪೀಠವೂ ಒಂದಾಗಿದೆ. ಇನ್ನುಳಿದ ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಕೊಲ್ಲೂರು ಈ ಜಿಲ್ಲೆಯಲ್ಲಿದೆ. ಉಳಿದ ಗೋರ್ಕಣವು ಉತ್ತರ ಕನ್ನಡ ಜಿಲ್ಲೆಯಲ್ಲೂ, ಕುಕ್ಕೆಸುಬ್ರಹ್ಮಣ್ಯವು ದಕ್ಷಿಣ ಕನ್ನಡ ಜಲ್ಲೆಯಲ್ಲೂ ಇದೆ.

ಶಾಷನಗಳ ಪ್ರಕಾರ ಆಳುಪರು, ಹೊಯ್ಸಳರು, ವಿಜಯನಗರದ ಅರಸರು, ಕೆಳದಿಯ ಅರಸರು, ಮೈಸೂರಿನ ಸುಲ್ತಾನರು ಈ ಜಲ್ಲೆಯನ್ನು ಆಳಿರುತ್ತಾರೆ. ಕ್ರಿ.ಶ. ೧೭೯೯ ರಲ್ಲಿ ಟಿಪ್ಪುವಿನ ಮರಣಾ ನಂತರ ಈ ಜಿಲ್ಲೆ ಬ್ರಿಟಿಷರ ಕೈವಶವಾಗಿ ಮದ್ರಾಸ್ ಪ್ರಾಂತೀಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿತು. ೧೯೫೬ ರಲ್ಲಿ ಭಾಷಾವಾರು ಪ್ರಾಂತ್ಯಗಳು ಉದಯವಾದಾಗ ಮೈಸೂರು ರಾಜ್ಯಕ್ಕೆ ಸೇರಿತು. ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದ ಉಡುಪಿ ೨೫-೦೮-೧೯೯೭ ರಂದು ಹೊಸ ಜಿಲ್ಲೆಯಾಯಿತು. ಈ ಜಲ್ಲೆಯಲ್ಲಿ ೯ ಹೋಬಳಿಗಳಿವೆ. ಉಡುಪಿ ನಗರ ಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಗಿದೆ. ೧೪೬ ಗ್ರಾಮ ಪಂಚಾಯಿತಿಯನ್ನು ಒಳಗೊಂಡಿರುವ ಉಡುಪಿ ಜಿಲ್ಲೆಯಲ್ಲಿ ಜನಸಾಂದ್ರತೆ ಪ್ರತೀ ಕಿ.ಮೀಗೆ ೨೯೦ ಆಗಿರುತ್ತದೆ. ಮುದ್ರಣ, ಹೋಟೆಲ್, ಹೆಂಚಿನ ಕಾರ್ಖಾನೆ, ಗೇರು ಬೀಜ, ಮೀನು ಸಂಸ್ಕರಣೆ, ಪಿವಿಸಿ ಪೈಪ್, ಅಕ್ಕಿಗಿರಣಿ ಹಾಗೂ ಇಂಟರ್ ಲಾಕ್ ಪೇವರ್ಸ್ ಪ್ರಮುಖ ಉದ್ಯಮಗಳಾಗಿವೆ.

೨೦೧೧ ರ ಜನಗಣತಿಯ ಪ್ರಕಾರ ೧೧,೭೭,೯೦೮ ಜನಸಂಖ್ಯೆಯುಳ್ಳ ಉಡುಪಿ ಜಿಲ್ಲೆಯು ೧೦೫ ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿದೆ. ಶೇಕಡಾ ೮೦ ರಷ್ಟು ಜನ ಇಲ್ಲಿ ಸಾಕ್ಷರರಾಗಿದ್ದಾರೆ. ಈ ಜಿಲ್ಲೆಯನ್ನು ಪ್ರಾಕೃತಿಕವಾಗಿ ಕರಾವಳಿ ಪ್ರದೇಶ, ಒಳನಾಡು ಪ್ರದೇಶ, ಪಶ್ಚಿಮ ಘಟ್ಟಗಳ ಪ್ರದೇಶವೆಂದು ೩ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಭತ್ತ, ದ್ವಿದಳ ಧಾನ್ಯ, ಕಬ್ಬು, ನೆಲಗಡಲೆ, ರಬ್ಬರ್, ಅಡಿಕೆ ಮತ್ತು ತೆಂಗು ಪ್ರಮುಖ ಬೆಳೆಗಳಾಗಿವೆ. ಸೀತಾ, ಸ್ವರ್ಣ, ವಾರಾಹಿ, ಗಂಗೊಳ್ಳಿ ಪ್ರಮುಖ ನದಿಗಳಾಗಿವೆ. ಚಕ್ರ ಕುಬ್ಜ, ಸೌಪರ್ಣೀಕಾ ಇತರ ನದಿಗಳು.

ಉಡುಗೆ – ತೊಡುಗೆ: ಬಿಸಿಲ ಬೇಗೆ ಮತ್ತು ಬೆವರುವಿಕೆ ಪ್ರಮಾಣ ಜಾಸ್ತಿ ಇರವುದರೆಂದ ಹತ್ತಿ ಬಟ್ಟೆಗಳನ್ನು ಆಯ್ಕೆ ಮಾಡಿಕಳ್ಳುವುದು  ಈ ಪ್ರದೇಶದಲ್ಲಿ ಸೂಕ್ತವಾಗಿದೆ. ತರುಣರು ಹೆಚ್ಚಾಗಿ ಪ್ಯಾಂಟ್-ಶರ್ಟ್, ತರುಣಿಯರು ಚೂಡಿದಾರ, ಜೀನ್ಸ್ ಧರಿಸುತ್ತಾರೆ. ಮಹಿಳೆಯರು ಸೀರೆ, ವಯೋವೃದ್ಧರು ಧೋತಿ ಹಾಗೂ ವೃದ್ಧೆಯರು ಸೀರೆ ಧರಿಸುತ್ತಾರೆ.

ವಾಯುಗುಣ: ಮಾರ್ಚ್ ಏಪ್ರಿಲ್ ಮೇ ನಲ್ಲಿ ಬಿಸಿ ಬೇಸಿಗೆ, ಜೂನ್ ಜುಲೈ ಆಗಸ್ಟ್‌ನಲ್ಲಿ ಮಾನ್ಸೂನ್‌ನಿಂದ ಧಾರಾಕಾರ ಮಳೆ, ಸಪ್ಟೆಂಬರ್ ಅಕ್ಟೋಬರ್ ರಮ್ಯಕಾಲ, ನವಂಬರ್ ಡಿಸೆಂಬರ್ ತಂಪು, ಜನವರಿ ಫೆಬ್ರವರಿ ಚಳಿ ಅನುಭವ.

ಆಹಾರ: ಉಡುಪಿ ಅಡುಗೆ ವಿಶ್ವ ಪ್ರಸಿದ್ಧ. ಇಡ್ಲಿ ವಡೆ-ದೋಸೆ- ಹೋಟೆಲುಗಳಲ್ಲಿ ಜನಪ್ರಿಯ ಹೊಳಿಸಿದ ಕೀರ್ತಿ ಉಡುಪಿಗೆ ಸಲ್ಲಬೇಕು. ಕುಸಬಲಕ್ಕಿ ಅನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಪತ್ರೋಡೆ, ಕೊಟ್ಟೆಕಡಬು, ಓಲೆ ಕಡುಬು, ಶಾವಿಗೆ, ಹಾಲ್‌ಬಾಯಿ, ಹೋಳಿಬಜೆ, ನೇರುದೋಸೆ, ಪುಂಡಿ, ಖಾರದೋಸೆ, ಮಸಾಲೆದೋಸೆ, ಕೋಳಿರೊಟ್ಟಿ ಇವು ಗ್ರಾಮೀಣ ತಿನಿಸುಗಳಾಗಿವೆ. ತುಳು ಶಿವಳ್ಳಿ ಬ್ರಾಹ್ಮಣರ ಅಡುಗೆ, ಕೊಂಕಣಿ ಸುಮುದಾಯದವರ ಅಡುಗೆ, ಬಂಟರ ಬಗೆ ಬಗೆಯ ಅಡುಗೆಯ ಶೈಲಿ ಜನಪ್ರಿಯವಾಗಿವೆ.

ಸಸ್ಯ ಸಂಪತ್ತು: ತೆಂಗು, ಕಂಗು, ಮಾವು, ಹಲಸು, ಗೇರು ಯಥೇಚ್ಛವಾಗಿದೆ. ಸುಮಾರು ೧,೨೨,೧೩೨ ಹೆಕ್ಟೇರು ಪ್ರದೇಶಗಳಲ್ಲಿ ವ್ಯವಸಾಯ ಮಾಡುತ್ತಾರೆ, ಭತ್ತ, ಉದ್ದು, ಹುರುಳಿ, ಹೆಸರು, ಅಲಸಂದೆ, ಅವಡೆ, ನೆಲಗಡಲೆ, ಎಳ್ಳು, ರಬ್ಬರ್, ಅಡಿಕೆ, ಕೋಕೋ, ಬಾಳೆ, ಮಾವು, ಸಿಹಿಜೇನು, ಶುಂಠಿ, ವೀಳ್ಯದೆಲೆ, ಕರಿಮೆಣಸು, ಕಬ್ಬು, ಮಟ್ಟಿಗುಳ್ಳ (ಬದನೆ), ಹಸಿವೆಣಸು, ಬೆಂಡೆ, ಸೌತೆ, ಕಲ್ಲಂಗಡಿ, ಇತ್ಯಾದಿಗಳನ್ನು ಬೆಳೆಸುತ್ತಾರೆ.

ಉದ್ದಿಮೆ: ಜಿಲ್ಲೆಯಲ್ಲಿ ೨ ಬಟ್ಟೆ, ೫ ರಾಸಾಯನಿಕ, ೨ ಇಂಜಿನೀಯರಿಂಗ್ ಇವುಗಳು ಸೇರಿದಂತೆ ಸುಮಾರು ೨೬೧ ಕೈಗಾರಿಕೆಗಳಿವೆ. ಅಟೋಮೋಬೈಲ್, ಇಲೆಕ್ಟ್ರಿಕಲ್, ಕೆಮಿಕಲ್, ಆಹಾರ ತಯಾರಿಕೆ ಸೇರಿದಂತೆ,ಸುಮಾರು ೨,೪೫೦ ಉದ್ದಿಮೆಗಳಿವೆ. ಸುಮಾರು ೧೫,೫೦೦ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ.

ಪ್ರಾಣಿ – ಪಕ್ಷಿಗಳು: ಪಶ್ಚಿಮ ಘಟ್ಟದಲ್ಲಿ ವನ್ಯ ಜೀವಿಗಳಾದ ಹುಲಿ, ಚಿರತೆ, ಆನೆ, ಜಿಂಕೆ, ಕಾಡುಕೋಣ, ನಾಗರಹಾವು, ಕಾಳಿಂಗ ಸರ್ಪ, ನವಿಲು, ಮಂಗ, ಕಾಗೆ, ಗೂಬೆ, ಗಿಳಿ, ಬಾವುಲಿ ಮುಂತಾದ ವಿವಿಧ ಜಾತಿ ಪ್ರಾಣಿ ಪಕ್ಷಿಗಳಿವೆ. ಸೋವೇಶ್ವರ ಮತ್ತು ಮೂಕಾಂಬಿಕಾ ಅಭಯಾರಣ್ಯಗಳು ಆಶ್ರಿತ ತಾಣಗಳಾಗಿವೆ.

ಪತ್ರಿಕಾ ರಂಗ: ಉದಯವಾಣಿ, ತುಷಾರ, ರೂಪತಾರ, ತರಂಗ ಇವು ಮಣಿಪಾಲದಿಂದ ಪ್ರಕಟವಾಗುತ್ತಿದ್ದು, ಅನೇಕ ಸ್ಥಳೀಯ ಪತ್ರಿಕೆಗಳು ಜನಪ್ರಿಯವಾಗಿವೆ.

ಉಷ್ಣಾಂಶ: ಕನಿಷ್ಠ ೨೫ ರಿಂದ ಗರಿಷ್ಠ ೩೪ ಡಿಗ್ರಿ ಸೆಲ್ಸಿಯಸ್.

ಪುಷ್ಪ: ಶಂಕರಪುರ ಮಲ್ಲಿಗೆ, ಹೆಮ್ಮಾಡಿ ಸೇವಂತಿ ಮತ್ತು ಗುಲಾಬಿ ಪ್ರಧಾನ ಪುಷ್ಪ ಕೃಷಿಯಾಗಿದೆ.

 

ಕರಾವಳಿ ತೀರ ಪ್ರದೇಶ

ಮರವಂತೆ, ಒತ್ತಿನೆಣೆ, ಕಾಪು, ಮಲ್ಪೆ, ಹಂಗಾರಕಟ್ಟೆ, ಪಡುಕೆರೆ, ಗಂಗೊಳ್ಳಿ, ಉಪ್ಪುಂದ, ಕೊಡೇರಿ, ಸೋಮೇಶ್ವರ, ಸಮುದ್ರ ಕಿನಾರೆಗಳಾಗಿವೆ.

ಸಂಪರ್ಕ:

ಖಾಸಗಿ ಬಸ್ಸುಗಳು ಒಡನಾಟವೇ ಹೆಚ್ಚಾಗಿದೆ, ಸರಕಾರಿ ಬಸ್ಸುಗಳ ಸಂಖ್ಯೆ ಕಡಿಮೆ ಇದೆ. ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿವೆ.

ಭಾಷೆ:

ಕನ್ನಡ, ತುಳು, ಕೊಂಕಣಿ ಪ್ರಮುಖ ಭಾಷೆಗಳು, ಕುಂದಗನ್ನಡ, ಬ್ಯಾರಿ ಭಾಷೆ ಇನ್ನಿತರ ಉಪಭಾಷೆಗಳನ್ನು ಮಾತನಾಡುವವರ ಸಂಖ್ಯೆ ಸಾಕಷ್ಟಿದೆ. ಉರ್ದು, ಮಲಯಾಳಂ, ತಮಿಳು ಭಾಷಿಕರೂ ಇದ್ದಾರೆ.

ಬಂದರು:

ಮಲ್ಪೆ, ಹೆಜಮಾಡಿ, ಗಂಗೊಳ್ಳಿ, ಹಂಗಾರಕಟ್ಟೆ ಪ್ರಮುಖ ಕಿರು ಬಂದರುಗಳಾಗಿವೆ.

ಬ್ಯಾಂಕಿಂಗ್:

ಸಿಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ಗೆ ಉಡುಪಿ ತವರೂರು. ಪಿಗ್ಮಿ ಯೋಜನೆಯ ಜನಪ್ರಿಯತೆಯ ಕೊಡುಗೆ ಸಿಂಡಿಕೇಟ್ ಬ್ಯಾಂಕಿನದ್ದಾಗಿದೆ. ಸಹಕಾರಿ ಬ್ಯಾಂಕ್ (ಶಿಕ್ಷಕ, ವ್ಯವಸಾಯ, ಭೂ ಅಭಿವೃದ್ಧಿ) ಬ್ಯಾಂಕ್ ಪ್ರಸಿದ್ದವಾಗಿದೆ.

ಪ್ರಸಿದ್ಧರು:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತ, ನಂದಳಿಕೆಯ ಲಕ್ಷ್ಮೀನಾರಾಯಣ (ಮುದ್ದಣ್ಣ), ಶ್ರೀ ಕೃಷ್ಣ ಸೂಕ್ತಿಯ ಕಡೇಕಾರು ರಾಜಗೋಪಾಲರಾಯರು, ನವಯುಗದ ಹೊನ್ನಯ್ಯ ಶೆಟ್ಟಿ, ಸಾಂತ್ಯಾರು ವೆಂಕಟರಾಜರು, ಪಾವೆಂ ಖ್ಯಾತಿಯ ಪಾಡಿಗಾರು ವೆಂಕಟರಮಣ ಆಚಾರ್ಯ, ಯು.ಆರ್. ಅನಂತಮೂರ್ತಿ, ಮೊಗೇರಿ ಗೋಪಾಲಕೃಷ್ಣ ಅಡಿಗ, ವಿಜ್ಞಾನಿ ಯು.ಆರ್. ರಾವ್, ಡಾ. ತೋನ್ಸೆ ಮಾಧವ ಪೈ, ವೀರಪ್ಪ ಮೊಯಿಲಿ, ಶಂಕರನಾರಾಯಣ ಸಾಮಗ, ಪ್ರೇಮಾಭಟ್, ಎಂ.ಟಿ.ಆರ್. ಸದಾನಂದ ಮಯ್ಯ, ರಾಮದಾಸ ಸಾಮಗ, ಕಾಳಿಂಗ ನಾವಡ, ಹಾರಾಡಿ ರಾಮ ಗಾಣಿಗ, ಶಿಲ್ಪಿ  ರೆಂಜಾಳ ಗೋಪಾಲ ಕೃಷ್ಣ ಶೆಣೈ, ಜಸ್ಟೀಸ್ ಕೆ.ಎಸ್. ಹೆಗ್ಡೆ, ಲೋಕಾಯುಕ್ತ ಸಂತೋಷ್ ಹೆಗ್ಡೆ, ಸಂತೊಷ ಕುಮಾರ್ ಗುಲ್ವಾಡಿ, ಪತ್ರಿಕಾ ರಂಗದ ಭೀಷ್ಮ ಮಾಧವ ವಿಠಲ್ ಕಾಮತ್, ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್, ಸಹಕಾರಿ ದುರೀಣ ಮೊಳಹಳ್ಳಿ ಶಿವರಾಮ.

ಪ್ರಕಾಶ ಮತ್ತು ದೀಪಿಕಾ ಪಡುಕೋಣೆ, ಡಾ. ನಾ.ಮೊಗಸಾಲೆ, ಬನ್ನಂಜೆ ಗೋವಿಂದ ಆಚಾರ್ಯ, ಪ್ರೊ. ಮುರಾರಿ ಬಲ್ಲಾಳ್, ವೈದೇಹಿ, ದುಂಡಿರಾಜ್, ವ್ಯಾಸರಾಯ ಬಲ್ಲಾಳ್, ಅಂಬಾತನಯ ಮುದ್ರಾಡಿ, ಸೂರ್ಯನಾರಾಯಣ ಚಡಗ, ಉಪ್ಪುಂದ ಚಂದ್ರಶೇಖರ ಹೊಳ್ಳ, ಚಿತ್ರ ನಟರಾದ ಉಪೇಂದ್ರ, ಸುನಿಲ್, ವಿನಯಾಪ್ರಸಾದ್, ಸದಾಶಿವ ಬ್ರಹ್ಮಾವರ್, ಎಂ.ಎಸ್. ಕಾರಂತ, ಪಿ.ಕಾಳಿಂಗರಾವ್, ನಿರ್ದೇಶಕರಾದ ಶ್ಯಾಮ್ ಬೆನೇಗಲ್, ಮಹೇಶ್ ಭಟ್, ಸಮತ ಭದ್ರಗಿರಿ ಅಚ್ಯುತದಾಸರು ಮತ್ತು ಕೇಶವದಾಸರು, ಗೋಂಬೆಯಾಟದ ಕೊಗ್ಗ ಕಾಮತ್, ಜಾದುಗಾರ ಶಂಕರ್ ಹಾಗೂ ಇತರ ಅನೇಕರನ್ನು ಕಾಣಬಹುದಾಗಿದೆ.

ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ

ಯಕ್ಷಗಾನ, ತಾಳ ಮದ್ದಲೆ, ಹೂವಿನ ಕೋಲು,ನಾಗಮಂಗಲ, ಢಕ್ಕೆ ಬಲಿ, ಭೂತಕೋಲ, ಸಿರಿ ಜಾತ್ರೆ, ಕಂಬಳ, ಕೋಳಿ ಅಂಕ, ಗೊಂಬೆಯಾಟ, ಪಾಡ್ಧನ, ತೆಂಬರೆ ನಲಿಕೆ, ಕುಡುಬಿಯವರ ಹೋಳಿ ಕುಣಿತ, ಸುಗ್ಗಿ ಕುಣಿತ, ಕೋಲಾಟ, ಕೆಥೋಲಿಕ್ ಮಾಂಡ್ ಸೊಬಾನ್, ಕೊಂಕಣಿ ಖಾರ್ವಿ ಮೇಳ, ಮುಸ್ಲಿಮರ – ವೈವಿಧ್ಯಮಯವಾದ ಜನಪದ ಕಲೆಗಳು ಇಲ್ಲಿವೆ, ಕನ್ನಡದ ಖ್ಯಾತ ವಿದ್ವಾಂಸ ಪ್ರೋ. ಮರಿಯಪ್ಪ ಭಟ್ಟ ಹೇಳಿದಂತೆ ಉಡಪಿ ಜಿಲ್ಲೆ ಜನಪದ ಕಲೆಗಳ ಮ್ಯೂಸಿಯಂ ಎಂದರೂ ತಪ್ಪಾಗಲಾರದು.

ಗೊಡ್ಡೆ ಜನಾಂಗದವರ ಕಂಗಿಲು, ಕಾಕರ್ಳದ ಮಾಂಕಾಳಿ ಕುಣಿತ, ಕಡಲ ಜನರ ಹೌದೇರಾಯರ ಓಲಗ, ಕುಂದಾಪುರದ ಸಾವಿರ ಹಣ್ಣಿನ ವಸಂತ, ಪಾಣರಾಟ, ಮಾಯೆದ ಪುರುಷೆ, ಚುಣ್ಣ ವೈದ್ಯರ ಢಕ್ಕೆ ಬಲಿ, ಆಶ್ಲೇಷ ಬಲಿ, ಕಾಡ್ಯ ನಾಟ, ಕಾಪುವಿನ ಪಿಲಿಕೋರಿ, ಮರಾಠಿ ಜನರ ಗೋದೋಳು ಪೂಜೆ, ಬಂಟ ಜನಾಂಗದ ಕುಲೆ ನಲಿಕೆ, ಹುಲಿವೇಷ, ಅಜ್ಜಿ ಓಡಿಸುವುದು, ಕದಿರ ಹಬ್ಬ, ಬಲೀಂದ್ರ ಪೂಜೆ ಮುಂತಾದುವುಗಳು ಉಡುಪಿ ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಶ್ರೀಮಂತವಾಗಿರಿಸಿದೆ.

ನಾಡು, ನುಡಿ ಸಂಸ್ಕೃತಿಗೆ ಸಂಬಂಧಿಸಿದಂತೆ ಈ ನೆಲದ ಪ್ರತಿಯೊಂದು ಊರು, ಕಲ್ಲುಗಳು ತಮ್ಮದೇ ಆದಂತಹ ಕಥೆಗಳನ್ನು ಹೇಳುತ್ತವೆ. ಇವುಗಳ ಪರಿಚಯ ನಮ್ಮ ಮಕ್ಕಳಿಗೆ ಆಗಬೇಕಾಗಿರುವುದು ಅವಶ್ಯಕ. ಈ ಕೈಪಿಡಿಯಲ್ಲಿ ಕೆಲವೊಂದು ಪ್ರೇಕ್ಷಣೀಯ ಸ್ಥಳಗಳು ಪರಿಚಯ ಮಾಡಿಕೊಡಲಾಗಿದೆ. ಇದರ ಸದುಪಯೋಗವನ್ನು ಶಿಕ್ಷಕರು, ಮಕ್ಕಳು ಪಡೆಯುವಂತಾಗಬೇಕು. ನನ್ನ ಜನ, ನನ್ನ ಊರು ಮತ್ತು ತನ್ನ ಸುತ್ತ ಮುತ್ತಲಿನ ಸ್ಥಳಗಳನ್ನೂ ಸಂದರ್ಶಿಸುತ್ತಾ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಜ್ಞಾನವನ್ನೂ ಪಡೆಯುವಂತಾಗಲಿ. ಮಕ್ಕಳ ಸಹಜ ಕುತೂಹಲ ಆಸಕ್ತಿನ್ನು ಹೆಚ್ಚಿಸುವುದರ ಮೂಲಕ ಗುಣಮಟ್ಟದ ಕಲಿಕೆಗೆ ಒತ್ತುಕೊಡುವುದೇ ಜಿಲ್ಲಾ ಪ್ರವಾಸದ ಆಶಯವಾಗಿದೆ.