ಸಾಂಪ್ರದಾಯಿಕ ವಿದ್ವಜ್ಜನ ಕುಟುಂಬದಲ್ಲಿ ಜನನ. ಸಂಸ್ಕೃತ, ವೇದ ಶಾಸ್ತ್ರಗಳಲ್ಲಿ ಪರಿಣತರು. ಭರತನಾಟ್ಯದ ಕಡೆ ಹೆಚ್ಚಿನ ಒಲವು. ವೇದಾಧ್ಯಾಯನ ಮಾಡುವ ಕಾಲದಲ್ಲಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥರು ಇವರ ಸಹಪಾಠಿಗಳು. ಶ್ರೀಗಳ ಮೂಲಕ ಚೆನ್ನೈನ ಉಡ್‌ಲ್ಯಾಂಡ್ಸ್‌ ಹೋಟೆಲ್ ಮಾಲೀಕರಾದ ಶ್ರೀಕೃಷ್ಣರಾವ್ ಅವರ ಪರಿಚಯವಾಗಿ ಅವರ ನೆರವಿನಿಂದ ಭರತನಾಟ್ಯ ಕಲಿಕೆ, ಹೆಸರಾಂತ ಭರತನಾಟ್ಯ ಗುರುಗಳಾದ ಕಾಂಚೀಪುರಂ ಎಲ್ಲಪ್ಪ ಅವರಲ್ಲಿ ಏಳು ವರ್ಷಗಳ ಶಿಷ್ಯ ವೃತ್ತಿ ಮಾಡಿ ಭರತನಾಟ್ಯ. ನಟುವಾಂಗದಲ್ಲಿ ಸಾಕಷ್ಟು ಪರಿಣತಿ ಪಡೆದಿದ್ದಾರೆ.

೧೯೬೨ರಿಂದೀಚೆಗೆ ಹಲವಾರು ನೃತ್ಯ ನಾಟಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಚಲನಚಿತ್ರಗಳಿಗೆ ನಾಟ್ಯ ಸಂಯೋಜನೆ ಮಾಡಿದ್ದಾರೆ. ’ಶ್ರೀನಿವಾಸ ಕಲ್ಯಾಣ’ ’ಮಹಿಷಾಸುರ ಮರ್ದಿನಿ’, ’ಗೀತೋಪದೇಶ’, ’ಗಿರಿಜಾಕಲ್ಯಾಣ’ ಮುಂತಾದ ಪ್ರಸಂಗಗಳಿಗೆ ಪ್ರಭಾತ್ ಕಲಾವಿದರಾಗಿ ನಾಟ್ಯ ಸಂಯೋಜನೆ ಮಾಡಿದ ಮೇಧಾವಿ.

೧೯೯೧ರಲ್ಲಿ ಚಿದಂಬರಂನ ನಾಟ್ಯಾಂಜಲಿ ಉತ್ಸವದಲ್ಲಿ ’ನೃತ್ಯ ಮಯೂರ್ ಪ್ರಶಸ್ತಿ, ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ವಿಶೇಷ ಪ್ರಾತ್ಯಕ್ಷಿಕೆ-ಸೋದಾಹರಣ, ೧೯೮೭ರಲ್ಲಿ ರಷ್ಯ ಪ್ರವಾಸ ಮಾಡಿದ ಭಾರತದ ರಾಯಭಾರಿ.

ಪೊಲ್ಲಾಚಿ ತಮಿಳ್ ಇಸೈ ಸಂಸ್ಥೆಯ ’ನಾಟ್ಯ ಕಲೈ ಮಾಮಣಿ’, ೧೯೯೦ರಲ್ಲಿ ಭರತನಾಟ್ಯದ ಶ್ರೇಷ್ಠ ಗುರು ಎಂಬ ಪ್ರಶಂಸೆ, ಪೇಜಾವರ ಶ್ರೀಗಳಿಂದ ’ನೃತ್ಯಕಲಾ ಮಹೋದಧಿ’ ಪ್ರಶಸ್ತಿ, ಉಡುಪಿಯಲ್ಲಿ ನಡೆದ ’ಕರ್ನಾಟಕ ಗಾನಕಲಾ ಪರಿಷತ್ತಿನ’ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್ ಸದಸ್ಸಿನಲ್ಲಿ ಸನ್ಮಾನಗಳನ್ನು ಹೊಂದಿದ್ದಾರೆ. ಚನ್ನೈನ ನಾರದ ಗಾನಸಭಾ, ಕೃಷ್ಣಗಾನ ಸಭಾ, ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿಂದ ಗೌರವ ಸನ್ಮಾನ ಪಡೆದಿರುವ ಉಡುಪಿ ಲಕ್ಷ್ಮಿನಾರಾಯಣ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೧-೦೨ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.