ಉತ್ತಂಗಿ ಚನ್ನಪ್ಪ ಎಂದೇ ಖ್ಯಾತರಾದ ರೆವರೆಂಡ್‌ಚನ್ನಪ್ಪ ಉತ್ತಂಗಿಯವರು ೧೮೮೧ ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರಿಗೆ ಓದಿಗಿಂತ ಯಂತ್ರಕಲಾಕೌಶಲ್ಯ ಮತ್ತು ಪ್ರಯೋಗಗಳಲ್ಲಿ ಆಸಕ್ತಿ. ತಂದೆಯ ಬಲವಂತಕ್ಕೆ ಕಟ್ಟುಬಿದ್ದು ದೈವಜ್ಞಾನ ಶಾಲೆಯಲ್ಲಿ ಶಿಕ್ಷಣ ಪಡೆದು ಅಲ್ಲಿಯೇ ಕೆಲಸಕ್ಕೆ ಸೇರಿದರು. ಧಾರವಾಡ, ಗದಗ, ಮುಂಡರಗಿ, ಹಾವೇರಿ, ಹುಬ್ಬಳ್ಳಿಗಳಲ್ಲಿ ಕ್ರೈಸ್ತ ಬೋಧಕರಾಗಿ ಕೆಲಸ ಮಾಡಿದರು. ಚನ್ನಪ್ಪನವರ ವ್ಯಕ್ತಿತ್ವವನ್ನೆಲ್ಲಾ ಸರ್ವಜ್ಞ ಆವರಿಸಿಕೊಂಡಿದ್ದನು. ಆದ್ದರಿಂದ ಅವರು ‘ಸರ್ವಜ್ಞ,ನ ವಚನಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದರು. ಸುಮಾರು ೨೦೦೦ ವಚನಗಳನ್ನು ಶೋದಿಸಿ ಸಂಗ್ರಹಿಸಿದರು.

ಟಿಪ್ಪಣಿಗಳೊಡನೆ ಸರ್ವಜ್ಞನ ವಚನಗಳನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿದರು. ಕ್ರೈಸ್ತ ಧರ್ಮದವರಾದರು ಬಸವಣ್ಣ, ಸಿದ್ದರಾಮ, ಇತರ ವಚನಕಾರರನ್ನು, ಹಿಂದೂಧರ್ಮವನ್ನು ಆಳವಾಗಿ ಅಧ್ಯಯನ ಮಾಡಿ, ಅನೇಕ ಉಪನ್ಯಾಸಗಳನ್ನು ನೀಡುತ್ತಿದ್ದುದ್ದು ಇವರ ಸಮನ್ವಯ ಮನೋಭಾವವನ್ನು ತೋರಿಸುತ್ತದೆ. ವಿಶ್ವದ ಧರ್ಮಗಳನ್ನೆಲ್ಲಾ ತೌಲನಿಕ ದೃಷ್ಟಿಯಿಂದ ಅಭ್ಯಾಸಮಾಡಿದರು.

‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ, ‘ಹಿಂದೂಸಮಾಜದ ಹಿತಚಿಂತಕ, ‘ಮಕ್ಕಳ ಶಿಕ್ಷಣಪಟ, ‘ನಾರಾಯಣ ವಾಮನ ತಿಲಕರ ಜೀವನ ಚರಿತ್ರೆ, ‘ಬಸವೇಶ್ವರನೂ ಅಸ್ಪೃಷ್ಯರ ಉದ್ಧಾರವೂ, ‘ಸಾಧು ಸುಂದರ ಸಿಂಗರ ದೃಷ್ಟಾಂತ ದರ್ಪಣ, ‘ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು, ‘ಅನುಭವ ಮಂಟಪದ ಐತಿಹಾಸಿಕತೆ, ಸಿದ್ಧರಾಮ ಸಾಹಿತ್ಯ ಸಂಗ್ರಹ, ಆದಯ್ಯನ ವಚನಗಳು, ಮೃತ್ಯುಂಜಯ, ಇವು ಇವರ ಕನ್ನಡ ಕೃತಿಗಳು.‘ಅನುಭವ ಮಂಟಪ ಇವರು ಇಂಗ್ಲಿಷಿನಲ್ಲಿ ಬರೆದ ಕೃತಿ.

ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ‘ಸರ್ವಜ್ಞನ ವಚನಗಳ ಸಂಶೋಧನೆ, ವಚನಾಂಕಿತದಲ್ಲಿರುವ ಐತಿಹ್ಯಾಂಶಗಳು, ಜನಪದ ಸಾಹಿತ್ಯ, `Contribution of Christian Missionaries for the development of Karnataka, Synopsis for the studies in Lingayathism’, ಇವರು ಬರೆದಿರುವ ಲೇಖನಗಳು.