ಸರ್ವಜ್ಞನ ಹೆಸರನ್ನು ಕನ್ನಡ ನಾಡಿನಲ್ಲಿ ಕೇಳದೆ ಇರುವವರೇ ಇಲ್ಲ ಎನ್ನಬಹುದು. ಅವನು ಕನ್ನಡದ ಬಹು ಜನಪ್ರಿಯ ಕವಿ.

ಆ ಕವಿಯ ವಚನಗಳನ್ನೆಲ್ಲ ಶ್ರಮಪಟ್ಟು ಸೇರಿಸಿ, ಪ್ರತಿ ವಚನವನ್ನೂ ಸರ್ವಜ್ಞ. ಹೇಗೆ ರಚಿಸಿರಬಹುದು- ಎಲ್ಲಿ ಜನರ ಬಾಯಿಂದ ಬಾಯಿಗೆ ಹೋಗುವಾಗ ಅಥವಾ ಬರೆದಿಟ್ಟಾಗ ತಪ್ಪಾಗಿರಬಹುದು ಎಂದು ವಿವೇಚಿಸಿ ಪ್ರಕಟಿಸಿದರು ಒಬ್ಬ ಹಿರಿಯರು. ಇದಕ್ಕಾಗಿ ಅನೇಕ ಹಸ್ತಪ್ರತಿಗಳನ್ನೂ ಅಚ್ಚಾದ ಪುಸ್ತಕಗಳನ್ನೂ ಪಂಕ್ತಿ ಪಂಕ್ತಿಯಲ್ಲಿ ಕಣ್ಣಿಟ್ಟು ಓದಬೇಕಾಯಿತು, ಒಂದು ಪ್ರತಿ ಯಲ್ಲಿದ್ದ ವಚನದ ಪದಪದವನ್ನೂ ಇನ್ನೊಂದು ಪ್ರತಿ ಯಲ್ಲಿದ್ದ ಅದೇ ವಚನದ ಪದಪದದೊಂದಿಗೆ ಹೋಲಿಸ ಬೇಕಾಯಿತು. ಅಭ್ಯಾಸ ಮಾಡಬೇಕಾಯಿತು. ಯೋಚಿಸ ಬೇಕಾಯಿತು. ತೀರ್ಮಾನಿಸಬೇಕಾಯಿತು, ತಮ್ಮ ಇತರ ವಿದ್ವಾಂಸರಿಗೆ, ಓದುಗರಿಗೆ ಒಪ್ಪಿಗೆಯಾಗುವಂತೆ ಪ್ರತಿ ಯೊಂದನ್ನೂ ವಿವರಿಸಬೇಕಾಯಿತು. ಹೀಗೆ ೧೯೨೮ ವಚನಗಳ ಪುಸ್ತಕವನ್ನು ಸಿದ್ಧಗೊಳಿಸಿ ಪ್ರಕಟಿಸುವುದಕ್ಕೆ ಒಂಬತ್ತು ವರ್ಷಗಳ ಕಾಲ ಹಿಡಿಯಿತು.

ಇಷ್ಟು ಶ್ರದ್ಧೆಯಿಂದ ಈ ಕೆಲಸವನ್ನು ಮಾಡಿದ ಹಿರಿಯರು ಉತ್ತಂಗಿ ಚನ್ನಪ್ಪನವರು. ಕನ್ನಡಕ್ಕೆ ದೊಡ್ಡ ಸೇವೆ ಮಾಡಿದ ಇವರು ಕ್ರೈಸ್ತ ಮತಕ್ಕೆ ಸೇರಿದವರು.

ಕನ್ನಡದ ಅಭಿವೃದ್ಧಿಗೆ ಈ ಮತದವರು, ಆ ಮತದವರು ಎನ್ನದೆ ಎಲ್ಲ ಮತದವರೂ ಶ್ರಮಿಸಿದ್ದಾರೆ.

ಬಾಲ್ಯ

ಉತ್ತಂಗಿ ಚನ್ನಪ್ಪನವರು ಮೂರನೇ ತಲೆಮಾರಿನ ಕ್ರಶ್ಚಿಯನ್ನರು. ಅವರ ಅಜ್ಜಂದಿರಾದ ಚನ್ನಪ್ಪಗೌಡರು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಗೌಡರ ಮನೆತನದವರು. ಲಗ್ನವಾಗಿ ೨೫ ವರ್ಷಗಳನಂತರ ಚನಪ್ಪಗೌಡರಿಗೆ ಗಂಡು ಕೂಸು ಜನನವಾಯಿತು. ಆ ಸಮಯಕ್ಕೆ ಅವರು ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ದರು. ಆ ಮಗನೇ ದಾನಿ ಯೇಲಪ್ಪ. ದಾನಿಯೇಲಪ್ಪನವರ ಮಗ ಚನ್ನಪ್ಪ ; ಅವರ ಜನನವಾದದ್ದು ೧೮೮೧ ರ ಅಕ್ಟೋಬರ್ ೨೮ ರಂದು. ಆಗ ಅವರ ತಂದೆ ಗದಗಬೆಟಗೇರಿಯ ಅನಾಥಾಶ್ರಮದ ಮೇಲ್ವಿಚಾರಕರಾಗಿದ್ದರು.

ಚನ್ನಪ್ಪನವರ ಬಾಲ್ಯ ಬೆಟಗೇರಿಯಲ್ಲಿಯೇ ಕಳೆಯಿತು. ಅವರು ಚಿಕ್ಕವರಿದ್ದಾಗ ಅಭ್ಯಾಸದಲ್ಲಿ ಬಹಳ ಮುಂದೆ ಇರಲಿಲ್ಲ. ಅವರೇ ತಮ್ಮ ಬಾಲ್ಯದ ಬಗ್ಗೆ ಒಂದೆಡೆ ಬರೆಯುವಾಗ, ‘ನನ್ನ ಬಾಲ್ಯದಲ್ಲಿ ಜ್ಞಾಪಕ ಶಕ್ತಿ ಕಡಿಮೆ. ಆದುದರಿಂದ ನಾನು ಬುದ್ಧಿಯಲ್ಲಿ ಮಂದ. ಕಲಿಯುವು ದರಲ್ಲಿ ಹಿಂದೆ. ತರಗತಿಯಲ್ಲಿ ಕಡೆಯವನಾಗಿದ್ದೆ. ಹೀಗಾಗಿ ನನಗೆ ತಂದೆಯವರಿಂದ ಜಾಣತನಕ್ಕಾಗಿ ಮೆಚ್ಚು ಸಿಕ್ಕಿದ್ದಕ್ಕಿಂತ, ದಡ್ಡತನಕ್ಕಾಗಿ ಪೆಟ್ಟು ಸಿಕ್ಕಿದ್ದು ಹೆಚ್ಚು’ ಎಂದಿದ್ದಾರೆ.

ಈ ಸನ್ನಿವೇಶದಿಂದಲೋ ಏನೋ ಅವರಿಗೆ ಚಿಕ್ಕವ ರಾಗಿದ್ದಾಗಿನಿಂದಲೇ ಏಕಾಂತ ಪ್ರಿಯತೆ ಹೆಚ್ಚಿತು. ಮುಂದಾದರೂ ಅವರನ್ನು ಅನೇಕರು ‘ಹಿಂಡಿನಗಲಿದ ಗಜ’ ಎಂದು ವರ್ಣಿಸುದ್ದುಂಟು.

ಬುದ್ಧಿವಂತ ವಿದ್ಯಾರ್ಥಿ

ಆದರೂ ಚನ್ನಪ್ಪನವರದು ಆಗಿನಿಂದಲೇ ಬಹು ಚಿಕಿತ್ಸಕ ಬುದ್ಧಿ. ತಮ್ಮ ಮನಸ್ಸಿಗೆ ಒಪ್ಪದ ವಿಚಾರವನ್ನು ಅವರು ಎಂದಿಗೂ ಸ್ವೀಕರಿಸುವವರಲ್ಲ. ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಒಂದು ದಿನ ಅವರಿಗೂ ಗಣಿತ ಶಿಕ್ಷಕರಿಗೂ ತೀಕ್ಷ್ಣವಾದ ಉಂಟಾ ಯಿತು. ಶಿಕ್ಷಕರು ಭೂಮಿತಿ ಹೇಳಿಕೊಡುತ್ತಿದ್ದರು. ಅವರು ಭೂಮಿತಿ ಪಾಠ ಹೇಳುತ್ತ, “ಉದ್ದಳತೆ ಮಾತ್ರವಿದ್ದು, ಅಗಲಳತೆ ಇಲ್ಲದ್ದಕ್ಕೆ ಸರಳ ರೇಖೆ ಎನ್ನಬೇಕು” ಎಂದು ವಿವರಣೆ ಹೇಳಿದರು. ಬಾಲಕ ಉತ್ತಂಗಿಯವರು ಕೂಡಲೇ ಎದ್ದು, “ಸರಳ ರೇಖೆಗೆ ಸ್ವಲ್ಪವಾದರೂ ಅಗಲಳತೆಯಿದ್ದೇ ಇದೆ” ಎಂದು ವಾದಿಸಿದರು. ಶಿಕ್ಷಕರು ಮಾತ್ರ ಇವರ ವಾದವನ್ನು ಒಪ್ಪಲಿಲ್ಲ. ಹಾಗೆಯೇ ಅಧ್ಯಾಪಕರು, “ಬಿಂದು (ಪಾಯಿಂಟ್)ವಿಗೆ ಸ್ಥಾನ ಮಾತ್ರ ಉಂಟು, ಉದ್ದವಿಲ್ಲ, ಅಗಲವಿಲ್ಲ” ಎಂದರು. “ಅದು ಹೇಗೆ ಸಾಧ್ಯ ? ಸೂಕ್ಷ್ಮಾಂಶದಲ್ಲಿಯಾದರೂ ಬಿಂದುವಿಗೆ ಉದ್ಧ, ಅಗಲ ಇರಲೇಬೇಕಲ್ಲ ?” ಎಂದು ಪ್ರಶ್ನಿಸಿದರು ಉತ್ತಂಗಿ. “ಇರುವುದಿಲ್ಲ” ಎಂದರು ಉಪಾಧ್ಯಾಯರು. “ಇರಲೇ ಬೇಕು” ಎಂದರು ಉತ್ತಂಗಿ. “ಇರುವುದಿಲ್ಲ ಎಂದು ಭಾವಿಸಬೇಕು” ಎಂದರು ಉಪಾಧ್ಯಾಯರು. “ಹೀಗೆ ಪುಸ್ತಕದಲ್ಲಿ ಬರೆದಿಲ್ಲವಲ್ಲ?” ಎಂದು ಕೇಳಿದರು ಉತ್ತಂಗಿ. ಅಧ್ಯಾಪಕರು ಕೋಪ ಮಾಡಿಕೊಂಡು ಕೂಗಾಡಿದರು. ವಿದ್ಯಾರ್ಥಿಗೆ ಬೇಸರವಾಯಿತು.

ತಪ್ಪು ಸಿದ್ಧಾಂತದ ಮೇಲೆ ಈ ಶಾಸ್ತ್ರ ನಿರ್ಮಾಣ ವಾಗಿದೆಯೆಂದು ಚನ್ನಪ್ಪನವರು ಖಚಿತವಾಗಿ ನಂಬಿದರು. ಅಂದಿನಿಂದ ಗಣಿತ ಶಾಸ್ತ್ರದ ಬಗ್ಗೆ ಅವರಿಗೆ ಜಿಗುಪ್ಸೆ ಯುಂಟಾಯಿತು. ಅವರು ಮೆಟ್ರಿಕ್ ಪರೀಕ್ಷೆಗೆ ಕುಳಿತಾಗ ಭೂಮಿತಿ ಪೇಪರಿನಲ್ಲಿ ದೊಡ್ಡ ಸೊನ್ನೆಯನ್ನು ಬರೆದು ಉತ್ತರಪತ್ರಿಕೆಯಲ್ಲಿ ಬೇರೆ ಏನೂ ಬರೆಯದೆ ಕೊಟ್ಟು ಬಂದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಅಲ್ಲಿಗೆ ಅವರ ಶಿಕ್ಷಣ ಮುಗಿಯಿತು.

ಮಗನು ಚೆನ್ನಾಗಿ ಓದಿ ಒಳ್ಳೆಯ ಸ್ಥಾನ ಪಡೆದು ಹೆಸರು ಗಳಿಸಬೇಕು ಎಂದು ಚನ್ನಪ್ಪನವರ ಅಪೇಕ್ಷೆ. ಅವರಿಗೆ ನಿರಾಸೆಯಾಯಿತು. ಮತ್ತೆ ಮೆಟ್ರಿಕ್ ಪರೀಕ್ಷೆಗೆ ಕೂಡಲು ಚನ್ನಪ್ಪನವರು ಒಪ್ಪಲಿಲ್ಲ. ಯಾವುದಾದರೂ ಯಂತ್ರ ವಿದ್ಯೆ ಕಲಿಯಲು ಅವರ ಆಸೆ. ಆದರೆ ತಂದೆಗೆ ವರಮಾನ ಕಡಿಮೆ. ಎಲ್ಲಿಯೂ ಹಣದ ಸಹಾಯ ಸಿಕ್ಕಲಿಲ್ಲ.

ದೈವಜ್ಞಾನ ಶಾಲೆ

ಅದಾದನಂತರ ಅವರ ತಾಯಿಯ ಇಚ್ಛೆಯ ಪ್ರಕಾರ ಮಂಗಳೂರಿನ ದೈವಜ್ಞಾನ ಶಾಲೆಯನ್ನು ಸೇರಿದರು. (ದೈವಜ್ಞಾನ ಶಾಲೆಯಲ್ಲಿ ಕ್ರೈಸ್ತಮತದ ಉಪದೇಶಕರಿಗೆ ಶಿಕ್ಷಣ ಕೊಡುತ್ತಾರೆ.) ಅಲ್ಲಿಯೂ ಸತ್ಯಸಂಗತಿಗಳನ್ನು ತಿಳಿಯುವ ಹವ್ಯಾಸ. ಉತ್ತಂಗಿಯವರು ನಿಷ್ಠ ದೇಶಾಭಿ ಮಾನಿಗಳು. ಭಾರತ ಸ್ವತಂತ್ರವಾಗಬೇಕೆಂದು ಹಂಬಲಿಸು ತ್ತಿದ್ದರು. ಬಾಲಗಂಗಾಧರತಿಲಕರು ಭಾರತದ ಮಹಾ ನಾಯಕರಲ್ಲಿ ಒಬ್ಬರು. ಅವರು ಪ್ರಾರಂಭಿಸಿದ ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿ ಚನ್ನಪ್ಪನವರು ಕೆಲಸ ಮಾಡಿದರು. ಆಗಿನಿಂದ ಅವರು ಖಾದಿಯ ಅಂಗಿ ತೊಡಹತ್ತಿದರು. ಮೊದಲು ಕ್ರೈಸ್ತ ಧರ್ಮೋಪದೇಶಕರು ತೊಡುತ್ತಿದ್ದ ಅಂಗಿಗಳು ಮುಂಗೈ ತೋಳಿನವೂ ಪರದೇಶಿ ಕಾರ್ಖಾನೆಗಳಲ್ಲಿ ಮಾಡಿದ್ದವೂ ಆಗಿದ್ದವು. ಖಾದಿ ಅಂಗಿ ತೊಡುವುದನ್ನು ವಿದೇಶಿ ಕ್ರೈಸ್ತಮತದ ಉಪದೇಶಕರು ಮೊದಮೊದಲು ವಿರೋಧಿಸಿದರು. ಆದರೆ ಉತ್ತಂಗಿ ಯವರು ತಮ್ಮ ಹಠ ಬಿಡಲಿಲ್ಲ. ಮಿತವ್ಯಯ ದೃಷ್ಟಿಯಿಂದ ಖಾದಿ ಅಂಗಿಯನ್ನು ಹಾಕಿಕೊಳ್ಳುವುದು ಯೋಗ್ಯವಾದ ವಿಚಾರವೆಂದರಿತು, ಮುಂದೆ ಧರ್ಮೋಪದೇಶಕರಿಗೆಲ್ಲ ಅದನ್ನೇ ಸಮವಸ್ತ್ರವನ್ನಾಗಿ ಅಂಗೀಕರಿಸಲಾಯಿತು. ಉತ್ತಂಗಿಯವರು ತಮ್ಮ ಕೊನೆಯ ಗಳಿಗೆಯವರೆಗೆ ಖಾದಿ ಅಂಗಿಯನ್ನೇ ತೊಡುತ್ತಿದ್ದರು.

ಚರ್ಚ್ ಸ್ವತಂತ್ರವಾಗಬೇಕು

ಆ ಶಾಲೆಯಲ್ಲಿ ಓದುತ್ತಿರುವಾಗಲೇ ಬಾಸೆಲ್ ಮಿಷನ್ ಚರ್ಚ್ ಸ್ವತಂತ್ರವಾಗಬೇಕೆಂಬ ಉದ್ದೇಶದಿಂದ, ಕೆಲವು ಸ್ನೇಹಿತರೊಂದಿಗೆ ಒಂದು ಪತ್ರಿಕೆಯನ್ನು ಪ್ರಾರಂಭಿ ಸಿದರು. ಅದರಲ್ಲಿ ಪ್ರಕಟವಾದ ವಿಚಾರಗಳು ಹಲವರು ಕ್ರೈಸ್ತ ಉಪದೇಶಕರಿಗೆ  ಹಿಡಿಸಲಿಲ್ಲ. ಆ ಪತ್ರಿಕೆಯನ್ನು ಇತರ ಕ್ರಿಶ್ಚಿಯನ್ ವಿದ್ಯಾರ್ಥಿಗಳು, ಭಕ್ತರು ಓದಲೇಬಾರ       ದೆಂದು ಕಟ್ಟಪ್ಪಣೆ ಮಾಡಿದರು. ಸತ್ಯಕ್ಕಾಗಿ ಪ್ರತಿಭಟನೆ, ಹೋರಾಟ ಇಲ್ಲಿಯೂ ಮುಂದುವರೆಯಿತು. ಯಾವ ಪುಸ್ತಕಗಳನ್ನು ಓದುವುದಕ್ಕೆ ಆಕ್ಷೇಪಣೆ ಇದ್ದಿತೊ ಅಂಥ ಪುಸ್ತಕಗಳನ್ನು ಅವರು ಓದಿಯೇ ತೀರಬೇಕೆಂಬ ಹಠ. ಚನ್ನಪ್ಪನವರ ನಿಲವಿಗಾಗಿ ಅವರನ್ನು ಧರ್ಮಶಿಕ್ಷಣ ಸಂಸ್ಥೆಯಿಂದಲೇ ಹೊರಹಾಕುವ ಸಂಭವವೂ ಇತ್ತು. ಆದರೂ ಧೈರ್ಯದಿಂದ ಕೆಲಸ ಮಾಡಿದರು.

ಚನ್ನಪ್ಪನವರು ೧೯೦೪ ರಲ್ಲಿ ಕೊನೆಯ ಪರೀಕ್ಷೆ ಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾದರು. ಧಾರವಾಡಕ್ಕೆ ಹಿಂದಿರುಗಿದರು. ಅವರು ಬೆಟಗೇರಿಯ ಉಪದೇಶಕರೆಂದು ನೇಮಿಸಲ್ಪಟ್ಟರು.

ವಿಶಾಲ ಮನಸ್ಸಿನ ಮತೋಪದೇಶಕ

ಕ್ರೈಸ್ತ ಉಪದೇಶಕರಾಗಿ ಉತ್ತಂಗಿಯವರ ಜೀವನ ಪ್ರಾರಂಭವಾಯಿತು. ತಮ್ಮದೇ ಆದ ಬೋಧನ ಕ್ರಮ ಹಾಗೂ ಪದ್ಧತಿಗಳನ್ನು ಅವರು ಅನುಸರಿಸಲಾರಂಭಿಸಿ ದರು. ಅವರು ಕ್ರೈಸ್ತಮತದ ಉಪದೇಶಕರು. ಆದರೆ ಇತರ ಮತಗಳ ವಿಷಯವನ್ನೂ ಶ್ರದ್ಧೆಯಿಂದ ತಿಳಿದು ಕೊಂಡವರು, ಅವುಗಳಲ್ಲಿನ ಒಳ್ಳೆಯ ಅಂಶಗಳನ್ನು ಗುರುತಿಸಿದವರು. ಅವನ್ನು ವಿವರಿಸಿ ಹೇಳುತ್ತಿದ್ದರು. ಅದಕ್ಕೆ ವಿರೋಧ ಹಾಗೂ ಪ್ರತಿಭಟನೆಗಳು ಕಂಡು ಬಂದವು. ಅವರು ಇತರ ಮತಗಳನ್ನು ಕುರಿತು ಒಳ್ಳೆಯ ಮಾತು ಗಳನ್ನು ಹೇಳುವುದನ್ನು ಮೇಲಿನ ಅಧಿಕಾರಿಗಳು ಸಹಿಸು ತ್ತಿರಲಿಲ್ಲ. ಅವರ ಮೇಲಿನ ಅಧಿಕಾರಿಗಳಾಗಿದ್ದ ವಿದೇಶಿ ಮತೋಪದೇಶಕರಲ್ಲಿ ಕೆಲವರು ‘ಕ್ರೈಸ್ತ ಧರ್ಮದಲ್ಲಿ ವಿಶ್ವಾಸವಿಲ್ಲದ ಉಪದೇಶಕ’ನೆಂದು ಆಡಿಕೊಂಡರು. ಕೆಲವು ದಿನಗಳನಂತರ ಉತ್ತಂಗಿಯವರನ್ನು ಅವರು ಇತರ ಮತಗಳನ್ನು ಶ್ಲಾಘಿಸುವುದು ತಪ್ಪಲ್ಲವೇ ಎಂದು ಕೇಳಿಯೇ ಬಿಟ್ಟರು.

‘ಸರಳರೇಖೆಗೆ ಸ್ವಲ್ಪವಾದರೂ ಅಗಲಳತೆ ಇದ್ದೇ ಇದೆ.’

ಆಗ ಉತ್ತಂಗಿಯವರು ಹೇಳಿದ ಮಾತುಗಳು ಇವು:

“ದೇವರ ಸೇವೆಯ ಹೆಸರಿಟ್ಟುಕೊಂಡು ಹೊರಟ ಮಿಷನ್ ಕಾರ್ಯವು ಜನಸಂಖ್ಯೆಯನ್ನು ಬೆಳಸುವ ಭರದಲ್ಲಿ ವ್ಯಾಪಾರದ ಕಲಂಕವನ್ನು ಹಚ್ಚಿಕೊಂಡಿದೆ. ಈ ತರಹದ ಕಲಂಕವನ್ನಿಟ್ಟುಕೊಂಡು ಮಾಡಿದ ಕಾರ್ಯ ಉಸುಬಿನ ಮೇಲೆ ಮನೆ ಕಟ್ಟಿದಂತಾಗುವುದರಿಂದ ಅದು ಬಹುಕಾಲ ಬಾಳದು. ನಾವು ತಿಳಿಯದ ಜನರಿಗೆ ಅವರ ಧರ್ಮದಲ್ಲಿರುವ ಸತ್ಯಾಂಶಗಳನ್ನು ತಿಳಿಸಿಕೊಟ್ಟ ಮೇಲೆಯೂ ಅವರು ಸ್ವಧರ್ಮದಲ್ಲಿ ಶಾಂತಿಯನ್ನು ಕಾಣದೆ ಕ್ರೈಸ್ತ ಧರ್ಮವನ್ನು ಸ್ವೀಕರಿಸುವುದಕ್ಕೆ ಸಿದ್ಧ ವಾದರೆ ಮಾತ್ರ ನಿಜವಾದ ಧರ್ಮಾಂತರ ; ಇಲ್ಲವಾದರೆ ಸ್ಥಳಾಂತರವಷ್ಟೇ.”

ಇದು ಮಾತ್ರವಲ್ಲದೆ ಮತೋಪದೇಶ ಸಂಸ್ಥೆಯಿಂದ ಸಂಬಳ ತೆಗೆದುಕೊಳ್ಳುತ್ತಿದ್ದ ಕಾಲದಲ್ಲಿಯೇ ಚನ್ನಪ್ಪನವರು ಅನೇಕ ಕಡೆಗೆ ಹೋಗಿ ಬಸವನ್ನನವರು, ಅವರಿಂದ ಸ್ಥಾಪಿತವಾದ ಅನುಭವ ಮಂಟಪ, ಅದರಲ್ಲಿ ಮೆರೆಯು ತ್ತಿದ್ದ ಶಿವಶರಣರು ಮುಂತಾದವರನ್ನು ಕುರಿತು ಪೂಜ್ಯ ಭಾವದಿಂದ ಭಾಷಣಗಳನ್ನು ಕೊಡಲಾರಂಭಿಸಿದರು.

ಮರೆಯಬೇಡಿ

ಈ ಬಗೆಯ ವಿಶಾಲ ಭಾವದ, ಸತ್ಯ ನಿಷ್ಠುರರಾದ ಚನ್ನಪ್ಪನವರ ಮೇಲೆ ಕ್ರೈಸ್ತಮತೋಪದೇಶಕರು ಸಿಟ್ಟಿಗೆದ್ದರು. ‘ನಿಮ್ಮನ್ನು ಮಿಷನ್ ಕೆಲಸದಿಂದ ಏಕೆ ಕತ್ತುಹಾಕಬಾರದು?’ ಎಂದು ಕೇಳಿ ಆಜ್ಞಾಪತ್ರವನ್ನೂ ಕಳಿಸಿದರು.

ಈ ವಿಷಯದಲ್ಲಿ ಪತ್ರ ಬರೆದ ಕೆ. ಬಿ. ಲೂಥಿ ಎಂಬ ಅಧಿಕಾರಿಗಳಿಗೆ ಉತ್ತಂಗಿಯವರೇ ಉತ್ತರಿಸಿದರು: ‘ಮಾನ್ಯ ಅಧ್ಯಕ್ಷರೇ, ತಾವು ನನ್ನ ಮೇಲಿನ ಅಧಿಕಾರಿ ಗಳಾಗಿರುವುದೇನೋ ನಿಜ. ಆದರೆ ತಾವೂ ನನ್ನಂತೆ ಬಾಸೆಲ್ ಮಿಷನ್ನಿನ ಸೇವಕರಲ್ಲೊಬ್ಬರೆಂಬುದನ್ನು ನಿವೇಂದಿಗೂ ಮರೆಯಲಾಗದು. ಕ್ರಿಸ್ತನಲ್ಲಿರುವ ಸತ್ಯವನ್ನು ಸಾರಿ ತಿಳಿಸುವುದೇ ನಮ್ಮಿಬ್ಬರ ಕರ್ತವ್ಯವಾಗಿದೆ. ಇದನ್ನು ಸಾಂಗಗೊಳಿಸುವುದರಲ್ಲಿ, ವಿದೇಶಿಯರಾದ ತಮಗೆಷ್ಟು ಉಪದೇಶ ಸ್ವಾತಂತ್ರ್ಯವಿದೆಯೋ ಅದಕ್ಕೂ ಹೆಚ್ಚಿನ ಸ್ವಾತಂತ್ರ್ಯವು ಈ ದೇಶದವನಾದ ನನಗೆ ಇದೆಯೆಂದು ತಮಗೆ ಕಠೋಕವಾಗಿ ಅರಿಕೆ ಮಾಡುತ್ತೇನೆ.’

ಈ ಪತ್ರಕ್ಕೆ ಅಧಿಕಾರಿಗಳಿಂದ ಮಾರುತ್ತರ ಬರಲಿಲ್ಲ. ಸತ್ಯಪರಿಪಾಲನೆಯ ವಿಷಯದಲ್ಲಿ ಅವರು ಕಟು ನಿಷ್ಠುರ ವ್ಯಕ್ತಿ. ಅದಕ್ಕಾಗಿಯೇ ಅವರ ಪೂಜ್ಯ ಗುರುವಾದ ಸರ್ವಜ್ಞನಂತೆ ಅವರು ಒಬ್ಬ ತಲೆತಿರುಕನೆಂದೇ ಅನೇಕರು ಕರೆದದ್ದುಂಟು.

ವಚನ ಸಾಹಿತ್ಯ

ಒಮ್ಮೆ ಕೆಲಸಕ್ಕೆ ಸೇರಿದ ಮೇಲೆ ಉತ್ತಂಗಿಯವರು ಬಿಡುವಿಲ್ಲದೆ ಕೆಲಸ ಮಾಡಿದರು. ಅವರು ಒಬ್ಬ ಅತ್ಯಂತ ಕಾಯಕನಿಷ್ಠ ವ್ಯಕ್ತಿ. ಕೈಗೊಂಡ ಕೆಲಸವನ್ನು ಮನಮುಟ್ಟಿ ಶ್ರದ್ಧೆಯಿಂದ ಮಾಡುವುದು ಅವರ ಸ್ವಭಾವ. ೧೯೫೦ ರಲ್ಲಿ ಅವರು ಕನ್ನಡದ ಇನ್ನೊಬ್ಬ ಹಿರಿಯ ವಿದ್ವಾಂಸರಾದ ಎಸ್. ಎಸ್. ಭೂಸನೂರಮಠ ಅವರೊಂದಿಗೆ ‘ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿಯರು’ ವಚನಗಳ ಸಂಪಾದನೆ ಹೊಣೆಯನ್ನು ಹೊತ್ತರು. ಇದಕ್ಕಾಗಿ ಮತ್ತೊಬ್ಬ ಹಿರಿಯರು ಚನ್ನಪ್ಪನವರಿಗೆ ನೆರವಾಗುವಂತೆ ತಿಂಗ ಳೊಂದಕ್ಕೆ ಇಂತಿಷ್ಟು ಸಂಬಳವೆಂದು ಗೊತ್ತುಮಾಡಿ ಒಬ್ಬ ಬರೆಯುವವನನ್ನು ಅವರಿಗೆ ನೇಮಿಸಿಕೊಟ್ಟರು. ಚನ್ನಪ್ಪ ನವರು ಈ ಕೆಲಸದ ವಿಷಯ ಹೀಗೆ ಹೇಳಿದ್ದಾರೆ : “ನಾನೂ ಹಾಗೂ ಲೇಖಕನೂ ಕೂಡಿಕೊಂಡು ದಿನಾಲು ಆರು ತಾಸುಗಳ ಕೆಲಸ ಮಾಡಿ, ಕೈಬರಹದ ಪ್ರತಿ ಅಚ್ಚಿಗೆ ಸಿದ್ಧವಾಗಬೇಕಾದರೆ ಸುಮಾರು ಒಂದೂವರೆ ವರ್ಷ ಬೇಕಾಯಿತು. ಈ ವಚನ ಗ್ರಂಥವನ್ನು ಸಂಪೂರ್ಣ ಸಂಗ್ರಹ, ಶುದ್ಧೀಕರಣ, ಸಂಶೋಧನೆ ಹೀಗೆ ಮೂರೂ ದೃಷ್ಟಿಕೋನಗಳನ್ನಿಟ್ಟುಕೊಂಡು, ಸಿದ್ಧಪಡಿಸಲಾಗಿದೆ. ವಚನಗಳ ಸಂಗ್ರಹಕ್ಕೆ ೬ ತಿಂಗಳು ಹಿಡಿದರೆ, ಶುದ್ಧೀಕರನಕ್ಕೆ ಒಂದು ವರ್ಷ ಹಿಡಿಯಿತು.” ಈ ಮಾತಿನಲ್ಲಿ ಪುರಾತನ ಗ್ರಂಥಗಳ ಸಂಪಾದನೆಯ ಕಾರ್ಯ ಎಷ್ಟು ಶ್ರಮ ಹಾಗೂ ತೊಡಕಿನದಾಗಿದೆ ಎಂಬುದರ ಅರಿವಾಗುತ್ತದೆ. ಇದು ಅಪಾರ ಶ್ರದ್ಧೆಯ ಕಾರ್ಯ. ಹಳಕಟ್ಟಿ, ಉತ್ತಂಗಿ ಯವರಂಥ ವಿದ್ವಾಂಸರು, ಅಪಾರ ಶ್ರದ್ಧೆಯಿಂದ ಕಾರ್ಯ ಮಾಡಿದ್ದು ದರಿಂದಲೇ ನಮಗೆ ಆ ಅಮೂಲ್ಯವಾದ ಸಾಹಿತ್ಯ ಭಂಡಾರ ದೊರಕುವಂತಾಯಿತು. ಹೀಗೆ ತಮ್ಮ ವಿರಾಮ ಕಾಲವನ್ನೆಲ್ಲ ಉತ್ತಂಗಿಯವರು ಕನ್ನಡ ಸಾಹಿತ್ಯದ ಹಲವು ಹಳೆಯ ಗ್ರಂಥಗಳ ಸಂಪಾದನೆಗಾಗಿ ವಿನಿಯೋಗಿಸಿದರು.

‘ಸಿದ್ಧರಾಮ ಸಾಹಿತ್ಯ ಸಂಗ್ರಹ’ ಅವರ ಇನ್ನೊಂದು ಅಮೂಲ್ಯವಾದ ಕಾಣಿಕೆ. ಸಿದ್ಧರಾಮನ ಚರಿತ್ರೆಯ ಬಗ್ಗೆ ಇದ್ದ ಸಂದೇಹಗಳನ್ನು ಉತ್ತಂಗಿಯವರು ತಮ್ಮ ಸಂಶೋಧನ ಪರಿಶ್ರಮದಿಂದ ಪರಿಹಾರ ಮಾಡಿದರು. ಸಾಹಿತ್ಯಕ ಹಾಗೂ ಶಾಸನಗಳ ಆಧಾರದ ಮೇಲಿಂದ ಆತ ೧೧೬೦ರ ಸುಮಾರಿನಲ್ಲಿ ಬದುಕಿದ್ದ, ಹಾಗು ಬಸವಣ್ಣನವರ ಸಮಕಾಲೀನನಾಗಿದ್ದನೆಂತಲೂ ಆತನು ಐದು ಮಹಾ ಕೃತಿಗಳನ್ನು ರಚಿಸಿದ್ದನೆಂತಲೂ ದೃಢೀಕರಿಸಿದರು. ಹೀಗೆ ಉತ್ತಂಗಿಯವರು ಹಲವಾರು ಗ್ರಂಥಗಳ ಸಂಪಾದನೆ ಕಾರ್ಯ ಹಾಗೂ ಸಂಶೋಧನಾ ಗ್ರಂಥ ರಚನೆ ಮಾಡಿದರು. ಸಂಶೋಧನಾತ್ಮಕ ಹಾಗೂ ವಿಮರ್ಶಾತ್ಮಕ ಸಂಪಾದನೆಯ ಕಾರ್ಯದಲ್ಲಿ ಅತಿ ಮೊದಲಿಗರಲ್ಲಿ ಇವರೂ ಒಬ್ಬರು.

ಕರ್ತವ್ಯನಿಷ್ಠೆ

ಉತ್ತಂಗಿಯವರು ಕರ್ತವ್ಯನಿಷ್ಠ ಕರ್ಮಯೋಗಿಗಳು ತಮಗೆ ಸಲ್ಲದ ಒಂದು ಬಿಡಿಗಾಸನ್ನೂ ಸ್ವೀಕರಿಸಲು ಅವರು ನಿರಾಕರಿಸುತ್ತಿದ್ದರು. ಜಯದೇವಿತಾಯಿ ಲಿಗಾಡೆಯವರ ಆದೇಶದ ಮೇರೆಗೆ ಅವರು ಸಿದ್ಧರಾಮ ಸಾಹಿತ್ಯವನ್ನು ಸಂಗ್ರಹಿಸಿ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆಯುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅದಕ್ಕಾಗಿ ಅವರು ತಿಂಗಳಿಗೆ ಒಂದುನೂರು ರೂಪಾಯಿಯ ಗೌರವ ಧನವನ್ನು ಸ್ವೀಕರಿಸಲು ಒಪ್ಪಿದರು. ಈ ಕೆಲಸ ಕೈಗೊಂಡ ಕೆಲವು ದಿನಗಳನಂತರ ಅವರು ಕಾಯಿಲೆ ಬಿದ್ದರು. ಪುಸ್ತಕ ಬರೆಯುವ ಕೆಲಸವೂ ಕೆಲವು ದಿನ ನಿಂತಿತು. ತಾಯಿಯವರು ಪ್ರತಿ ತಿಂಗಳಿನಂತೆ ಹಣ ಕಳಿಸಿದರು. ಉತ್ತಂಗಿಯವರು ಬಹಳ ತೊಂದರೆಯಲ್ಲಿದ್ದರೂ ಈ ಹಣವನ್ನು ಸ್ವೀಕರಿಸಲು ನಿರಾಕರಿಸಿದರು. ಅವರು ಮನೆತನದ ಪರಿಸ್ಥಿತಿಯನ್ನರಿತ ತಾಯಿಯವರು ಎಷ್ಟು ಹೇಳಿದರೂ ಒಪ್ಪಲಿಲ್ಲ. ಕೊನೆಗೆ ಇಬ್ಬರಿಗೂ ಬೇಕಾದ ಸ್ನೇಹಿತರೊಬ್ಬರ ಮುಖಾಂತರ ಅವರ ಮನವೊಲಿಸ ಬೇಕಾಯಿತು. ತಾವು ಗುಣಮುಖರಾದ ಅನಂತರ ಬೇರೆ ಗೌರವಧನ ಸ್ವೀಕರಿಸದೇ ಆ ಕೆಲಸ ಪೂರೈಸಿಕೊಡುವ ಅವಕಾಶ ಮಾಡಿಕೊಟ್ಟರೆ ಮಾತ್ರ ಅದನ್ನು ಸ್ವೀಕರಿಸು ವುದಾಗಿ ಉತ್ತಂಗಿಯವರು ಹೇಳಿದರು. ಆ ಕರಾರಿನಿಂದ ಹಣ ಸ್ವೀಕರಿಸಿದರು.

ಸರ್ವಜ್ಞನ ಆಕರ್ಷಣೆ

ಅವರ ಜ್ಞಾನದಾಹ ಹಾಗೂ ಜೀವನದ ಉದಾತ್ತ ಮೌಲ್ಯಗಳಿಗೆ ಪ್ರಚೋದನೆ, ಸ್ಫೂರ್ತಿ ನೀಡುವುದರಲ್ಲಿ ಸಾಹಿತ್ಯ ಶೋಧನೆ ಕಾರ್ಯದಲ್ಲಿ ಒಂದು ಅತ್ಯಂತ ಅನಿ ರೀಕ್ಷಿತ ಹಾಗೂ ಆಹ್ಲಾದಕರ ಘಟನೆಯೆಂದರೆ ಸರ್ವಜ್ಞನ ಜೀವನ ಸಾಹಿತ್ಯ ಪರಿಚಯ. ತಾವು ಸರ್ವಜ್ಞನ ಅಭ್ಯಾಸ ಹೇಗೆ ಆರಂಭಿಸಿದರು ಎಂಬುದರ ಬಗೆಗೆ ಅವರೇ ಉಲ್ಲೇಖಿಸಿ ಹೇಳಿದ್ದುಂಟು. ಒಬ್ಬ ಪರದೇಶದ ಪಾದ್ರಿಗೆ ಉತ್ತಂಗಿಯವರು ಕನ್ನಡ ಹೇಳಿಕೊಡುತ್ತಿದ್ದರು. ಅವರು ಚನ್ನಪ್ಪನವರನ್ನು ಸರ್ವಜ್ಞನ ಬಗ್ಗೆ ವಿಚಾರಿಸುತ್ತ, “ಸರ್ವಜ್ಞನ ಉದಾರವಾದ ವಿಚಾರಗಳು ಹಾಗೂ ಜಾತೀಯತೆ, ಮೂರ್ತಿಪ್ರಜೆಗಳ ಖಂಡನೆಯನ್ನು ನೋಡಿದರೆ ಆತ ಕ್ರಿಶ್ಚಿಯನ್ ಧರ್ಮತತ್ತ್ವಗಳಿಂದ ಪ್ರಭಾ ವಿತನಾಗಿರಬೇಕು” ಎಂದು ಉದ್ಗರಿಸಿದರು. ಸಾವಿರಾರು ಮೈಲಿಗಳ ದೂರದಿಂದ ಬಂದ ಈ ಪರದೇಶದ ಪಾದ್ರಿಗೆ ಸರ್ವಜ್ಞನ ಬಗೆಗೆ ಇಷ್ಟು ಜ್ಞಾನವಿದ್ದಾಗ, ಅದೇ ಜಿಲ್ಲೆ ಯವರಾದ ತಮಗೆ ಈ ವಿಷಯದ ಎಳ್ಳಷ್ಟೂ ಜ್ಞಾನ ವಿಲ್ಲದ್ದು ಅವರಿಗೆ ತುಂಬ ನಾಚಿಕೆಯನ್ನುಂಟುಮಾಡಿತು. ಸರ್ವಜ್ಞನ ಬಗ್ಗೆ ಆಳವಾದ ಅಭ್ಯಾಸ ಮಾಡಿ ಅವನ ಹಲವಾರು ವಚನಗಳನ್ನಾದರೂ ಇಂಗ್ಲಿಷಿನಲ್ಲಿ ಭಾಷಾಂತರ ಮಾಡಬೇಕೆಂಬ ನಿರ್ಧಾರವನ್ನು ಅವರು ಅಂದೇ ಕೈಗೊಂಡರು.

ಸರ್ವಜ್ಞನ ವಚನಗಳ ಅಭ್ಯಾಸವನ್ನು ಪ್ರಾರಂಭಿಸುವ ತೀರ್ಮಾನವನ್ನೇನೊ ಮಾಡಿದರು.

ಪರಿಷ್ಕರಿಸುವ ಕೆಲಸ

ಆದರೆ ಮೊದಲನೆಯ ಸಮಸ್ಯೆ ಸರ್ವಜ್ಞನ ವಚನ ಗಳನ್ನು ಸಂಪಾದಿಸುವುದೇ ಆಯಿತು. ಆಗಲೇ ಸರ್ವಜ್ಞನ ವಚನಗಳನ್ನು ಹಲವರು ಪ್ರಕಟಿಸಿದ್ದರು. ಅವನ್ನು ಓದಲು ಉತ್ತಂಗಿಯವರು ಪ್ರಾರಂಭಿಸಿದಾಗ, ಒಂದೇ ವಚನ ಒಂದು ಪುಸ್ತಕದಲ್ಲಿದ್ದಂತೆ ಇನ್ನೊಂದರಲ್ಲಿ ಇರಲಿಲ್ಲ ಎಂಬುದು ಕಂಡುಬಂದಿತು. ಯಾವ ಪಾಠವನ್ನು ಒಪ್ಪುವುದು? ಒಂದು ಪ್ರತಿಯಲ್ಲಿ-

ಕ್ಷೀರದೊಳು ಘೃತವಿರಲು ನೀರಿನಲ್ಲಿ ಸಿಲ್ಕಿಹುದು
ಅರಿಗೆ ತೊರದಿರುವಂತೆ ಯನ್ನೊಳಗೆ
ಸಾರಿಹನು ಶಿವನು ಸರ್ವಜ್ಞ ||

ಎಂದಿತು. (ಕ್ಷೀರ ಎಂದರೆ ಹಾಲು, ಘೃತ ಎಂದರೆ  ತುಪ್ಪ.) ಮತ್ತೊಂದು ಪ್ರತಿಯಲ್ಲಿ-

ಕ್ಷೀರದೊಳಿಹ ಘೃತ ನೀರಿನಲ್ಲಿ ಕಲ್ಮಷವು
ಅರಿಗೆ ತೊರದಿರುವಂತೆ ಯನ್ನೊಳಗೆ
ಸಾರಿಹನು ಶಿವನು ಸರ್ವಜ್ಞ ||

ಎಂದಿತು. ಯಾವುದನ್ನು ಒಪ್ಪುವುದು ? ತುಪ್ಪ ನೀರಿನಲ್ಲಿ ಸಿಕ್ಕಿದೆ ಎಂದರೆ ಅರ್ಥವೇನು ? ನೀರಿನಲ್ಲಿ ಕಲ್ಮಷ ಕಾಣುವುದಿಲ್ಲ ಎಂಬ ಮಾತು ಸರಿಯೆ, ಅಲ್ಲದೆ ಶಿವನನ್ನು ಕಲ್ಮಷಕ್ಕೆ ಹೋಲಿಸುತ್ತಾರೆಯೆ ? ಕೆಲವು ಕಡೆ ಇದ್ದ ಪಾಠ ತಪ್ಪು ಎನ್ನುವುದು ಸ್ಪಷ್ಟವಾಗಿತ್ತು. ಒಂದು ವಚನದ ಮೊದಲ ಪಂಕ್ತಿ, ‘ಅರಸನೋಲೈಸುವರೆ ಕರಭೀತಿ ಬೈಕೈಯ’ ಎಂದಿತ್ತು. ‘ಬೈಕೈಯ’ ಎಂದರೇನು ? ಇಂತಹ ಕಷ್ಟಗಳು ಎದ್ದವು.

ಉತ್ತಂಗಿಯವರು, ಅವರ ಕೃತಿಗಳು.

ಸರ್ವಜ್ಞನಿಗಾಗಿ

ಅದಕ್ಕಾಗಿ ಮೊದಲನೆಯ ಕಾರ್ಯವೆಂದರೆ ವಚನ ಗಳ ಸಂಗ್ರಹ ಹಾಗೂ ಸರಿಯಾದ ಪರಿಷ್ಕರಣೆ. ಅವರು ನಾಡಿನಾದ್ಯಂತ ತಿರುಗಾಡಿ ಸುಮಾರು ಇಪ್ಪತ್ತು ಕೈಬರಹ ಪ್ರತಿಗಳ ಸಂಗ್ರಹ ಮಾಡಿದರು. ಇವುಗಳನ್ನು ಪರಿಷ್ಕರಿಸಲು (ಎಂದರೆ ವಿಮರ್ಶಿಸಿ ಅಗತ್ಯವಾದ ಕಡೆ ತಿದ್ದಲು) ಆರಂಭಿಸಿದಾಗ, ತಾವು ಕೈಗೊಂಡ ಕಾರ್ಯ ಎಷ್ಟು ಕಷ್ಟದ್ದಾಗಿದೆ ಎಂಬುದರ ಅರಿವಾಯಿತು. ಅವರೇ ಇದರ ಬಗ್ಗೆ ಉಲ್ಲೇಖಿಸಿ, “ವಚನಗಳ ವಿಷಯ ವರ್ಗೀಕರಣಕ್ಕೆ ಕೈ ಹಚ್ಚಲು ‘ನವಾಜು ಮಾಡಲಿಕ್ಕೆ ಹೋದರೆ, ಮಸೀದಿ ಯೇ ಕೊರಳಿಗೆ ಬಿದ್ದಂತಾಯಿತು’. ಇಪ್ಪತ್ತು ಪ್ರತಿಗಳಲ್ಲಿರುವ ಸುಮಾರು ಎರಡು ಸಾವಿರ ವಚನಗಳನ್ನು ವರ್ಗೀಕರಿಸ ಬೇಕಾದರೆ, ಅವುಗಳನ್ನು ನಲ್ವತ್ತು ಸಾವಿರ ಸಲ ಓದುವ ಪ್ರಸಂಗ ಬಿತ್ತು. ಇದರಿಂದ ನನ್ನ ಜ್ಞಾನತಂತುಗಳು ಬಲಹೀನವಾಗಿ, ಜನರ ಮುಖದ ಗುರುತು ಸಿಗದಷ್ಟು ಕಣ್ಣಿನ ದೃಷ್ಟಿ ಮಂದವಾಯಿತು” ಎಂದು ಹೇಳಿದ್ದಾರೆ.

ಆದರೆ ಈ ಅಭ್ಯಾಸದಿಂದ ಸರ್ವಜ್ಞನ ಬಗೆಗೆ ಅಪಾರವಾದ ಆಸಕ್ತಿ, ಗೌರವ ಉತ್ಪನ್ನವಾಗಿದ್ದವು. ಎಷ್ಟೋ ಕಷ್ಟಗಳು ಬಂದರೂ ಆಸಕ್ತಿ ಕುಂಠಿತಗೊಳ್ಳುವುದು ಸಾಧ್ಯವಿರಲಿಲ್ಲ.

ತತ್ತ್ವಶಾಸ್ತ್ರ ಅವರಿಗೆ ಬಹಳ ಪ್ರಿಯವಾದ ವಿಷಯ. ನಮ್ಮ ದೇಶ, ಪಾಶ್ಚಾತ್ಯ ದೇಶಗಳ ತತ್ತ್ವಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ತತ್ತ್ವಶಾಸ್ತ್ರವನ್ನು ಕುರಿತು ಪುಸ್ತಕ ಬರೆಯಲು ಯೋಚಿಸಿದ್ದರು. ಆದರೆ ಅಭ್ಯಾಸ ಮಾಡುತ್ತ ಮಾಡುತ್ತ ಒಂದು ಘಟ್ಟದಲ್ಲಿ ನಿರಾಸೆ ಯಾಯಿತು. ತತ್ತ್ವಶಾಸ್ತ್ರವನ್ನು ಕುರಿತು ಬರೆಯುವ ಯೋಚನೆಯನ್ನು ಬಿಟ್ಟರು. ಇನ್ನು ಯಾವ ಬಗೆಯ ಪುಸ್ತಕವನ್ನು ಬರೆಯುವ ಸಾಧ್ಯತೆಯೂ ಇಲ್ಲ ಎಂದು ತೋರಿತು.

ಇದನ್ನು ವಿವರಿಸುತ್ತ ಚನ್ನಪ್ಪನವರು ಹೀಗೆ ಬರೆದಿದ್ದಾರೆ- ‘ಗ್ರಂಥ ರಚನೆಯನ್ನು ಬಿಟ್ಟು, ಆತ್ಮಜ್ಞಾನ ಮಾಡಿಕೊಂಡು, ಸದ್ದಿಲ್ಲದೆ ಒಂದು ದಿನ ಈ ಲೋಕ ವನ್ನು ಬಿಟ್ಟುಹೋದರಾಯಿತು ಎಂದು ನನ್ನೊಳಗೆ ನಿಷ್ಕರ್ಷೆ ಮಾಡಿಕೊಂಡಿದ್ದೆ. ಹೀಗೆ ಭಗ್ನಾಶನಾದ ನನ್ನ ಜೀವನದ ಹಾದಿಯಲ್ಲಿ ಸರ್ವಜ್ಞನೆಂಬ ತಿರುಕನ ಸಂದರ್ಶನವಾಯಿತು. ಉಭಯತರ ಹಾಡು ಒಂದೇ ಎನಿಸಿತು. ಆಗ ನಾನು ಅವನಲ್ಲಿ ನನ್ನನ್ನು ಕಂಡೆ. ಇಬ್ಬರಿಗೂ ಮೇಳವಾಯಿತು. ಕರಿಗೆ ಕರಿ ಕೂಡಿದಂತಾಗಿ ಪರಸ್ಪರರಲ್ಲಿ ಹಿರಿದು ಸ್ನೇಹ ಉಂಟಾಯಿತು. ಪ್ರಿಯನು ಪ್ರೇಯಸಿಯ ಭಾಷೆಯನ್ನು ಕಲಿಯುವಂತೆ ನಾನು ಸರ್ವಜ್ಞನಿಂದ ಸರ್ವಜ್ಞನಿಗಾಗಿ ಕನ್ನಡವನ್ನು ಕಲಿತೆ. ಕನ್ನಡ ವ್ಯಾಕರಣ, ಛಂದಸ್ಸು, ಕಾವ್ಯ, ಅಲಂಕಾರ ಮುಂತಾದ ಶಾಸ್ತ್ರಗ್ರಂಥಗಳನ್ನು ಓದಿದ್ದು, ಸರ್ವಜ್ಞನ ಕಾರ್ಯವನ್ನು ಕೈಗೊಂಡನಂತರ. ನಾನು ವೀರಶೈವ ಧರ್ಮವನ್ನರಿತು ಕೊಳ್ಳಲು ಯತ್ನಿಸಿದ್ದು ಸರ್ವಜ್ಞನಿಗಾಗಿಯೇ. ಇದೇ ಸಮಯಕ್ಕೆ ಜ್ಞಾನವೆಂದರೆ ಕ್ರಿಯೆ, ಕ್ರಿಯೆಯೆಂದರೆ ಜ್ಞಾನ ಎಂದು ನನಗೆ ಮನವರಿಕೆ ಯಾದುದುರಿಂದ, ಕ್ರಿಯಾ ರಹಿತವಾದ ತತ್ತ್ವ ವಿಚಾರಕ್ಕೆ ವಿಮುಖನಾಗಿ, ಕ್ರಿಯಾಸಹಿತ ವಾದ ತತ್ತ್ವ ವಿಚಾರಕ್ಕೆ ವಿಮುಖನಾಗಿ, ಕ್ರಿಯಾಸಹಿತವಾದ ಅನುಭಾವಕ್ಕೆ ಅಭಿಮುಖನಾದೆ. ಮುತ್ತು ಕಳೆದು ಕೊಂಡವನಿಗೆ ಮಾಣಿಕ್ಯ ದೊರೆತಂತಾಯಿತು. ನನ್ನಿಂದ ಶೋಧಿಸಲ್ಪಟ್ಟ ಅನುಭವ ಮಂಟಪವು ನನಗೆ ನೆರೆಮನೆ ಯಾಯಿತು. ಅನುಭಾವದ ಆಗರಗಳಾದ ಉಪನಿಷತ್ತು. ಭಗವದ್ಗೀತೆ, ವಚನಶಾಸ್ತ್ರ ಮುಂತಾದ ಉದ್ಗ್ರಂಥಗಳು ನನ್ನ ಪ್ರೀತಿಗೆ ಪಾತ್ರವಾದುವು.”

ಸರ್ವಜ್ಞನ ಬಗ್ಗೆ ಆಸಕ್ತಿ ಹುಟ್ಟಿದನಂತರ ಅವರಿಗೆ ಹಗಲಿರುಳು ಸರ್ವಜ್ಞನ ಬಗ್ಗೆಯೇ ವಿಚಾರ. ಊರೂರು ತಿರುಗಿದರು; ಸರ್ವಜ್ಞನ ಬಗೆಗೆ ಆಸಕ್ತಿಯುಳ್ಳ ಪಂಡಿತರನ್ನು ಭೇಟಿಮಾಡಿದರು. ಕೈಬರಹದ ಪ್ರತಿಗಳು ಸಿಕ್ಕುವುವೆಂದಾಗ ಎಷ್ಟು ದೂರವಾದರೂ ಹೋಗುವರು. ಅವುಗಳನ್ನು ಸಂಗ್ರಹಿಸಿದರು. ಹಗಲೂ ರಾತ್ರು ಅವುಗಳನ್ನು ಪರಿಷ್ಕರಿಸಿದರು. ಪರಿಷ್ಕರಿಸಿ ಸರ್ವಜ್ಞನು ರಚಿಸದೆ ಅವನ ಹೆಸರಿನಲ್ಲಿ ಇತರರರು ರಚಿಸಿದುದನ್ನು ಕಂಡು ಹಿಡಿದರು. ‘ಮಕ್ಕಳು ಅತ್ತಿ ಹಣ್ಣನ್ನು ಹುಡುಕುವಂತೆ ನಾನು ಸರ್ವಜ್ಞನ ವಚನಗಳನ್ನು ಹುಡುಕಿದೆ’ ಎಂದು ಅವರೇ ಒಂದೆಡೆ ಹೇಳಿದ್ದುಂಟು.

ಪ್ರಾರ್ಥನೆ

ಉತ್ತಂಗಿಯವರು ಸರ್ವಜ್ಞನ ವಚನಗಳನ್ನು ಸಂಪಾದಿಸುತ್ತಿದ್ದ ಈ ಸಮಯದಲ್ಲಿ ಫಕ್ಕನೆ ಅವರ ತಂದೆ ತೀರಿಕೊಂಡರು. ಉತ್ತಂಗಿಯವರು ಸಂಪಾದನೆಯ ಕಾರ್ಯದ ಶ್ರಮದಿಂದ ಭಯಂಕರ ರೋಗಕ್ಕೆ ತುತ್ತಾದರು. ಸಾವು ನಿಶ್ಚಿತವೆಂದು ತಿಳಿದಾಗ ಅವರು ತಮ್ಮ ಮನೆತನದ ಸಂಕಷ್ಟಗಳ ಬಗೆಗೆ ಚಿಂತಿಸಲಿಲ್ಲ. ಆದರೆ ಕೈಗೆತ್ತಿಕೊಂಡು ಅರ್ಧಕ್ಕೆ ನಿಂತ ಸರ್ವಜ್ಞನ ಕಾರ್ಯದ ಬಗೆಗೆ ತುಂಬಾ ಯೋಚನೆಯಾಯಿತು. ಆಗ ಅವರು ದೇವರಲ್ಲಿ ಹೀಗೆ ಮೊರೆ ಇಟ್ಟರು : “ಸರ್ವಾಂಶರ್ಯಾಮಿಯಾದ ದೇವನೇ, ಸರ್ವ ಹೃದಯಾಂತರಂಗವನ್ನೇ ನೀನು ಅರಿತಿರುವೆ. ನಾನು ಈ ಕಾರ್ಯವನ್ನು ಸ್ವಾರ್ಥ, ಸ್ವಪ್ರತಿಷ್ಠೆಗೋಸ್ಕರ ಕೈಗೊಂಡಿರುವುದಾದರೆ, ಅದನ್ನು ಇಲ್ಲಿಯೇ ನಿಲ್ಲಿಸಿಬಿಡು. ಸರ್ವಜ್ಞನ ಸೇವೆ, ದೇಶಸೇವೆ ಮತ್ತು ನಿನ್ನ ಉಪಾಸನೆ ಯೆಂದು ಕೈಗೊಂಡಿರುವುದಾದರೆ, ಅಲ್ಪನಾದ ನನ್ನಿಂದ ಈ ಸೇವೆಯನ್ನು ಮಾಡಿಸಿಕೊಳ್ಳಲು ನೀನು ಇಷ್ಟಪಟ್ಟರೆ, ನನ್ನನ್ನು ಇನ್ನು ಕೆಲವು ದಿವಸ ಉಳಿಸು.”

ಶ್ರಮ ಸಾರ್ಥಕವಾಯಿತು

ದೇವನಿಗೆ ಅವರ ಈ ಅಂತಃಕರಣದ ಪ್ರಾರ್ಥನೆ ಕೇಳಿದಂತೆ ಕಾಣುತ್ತದೆ. ಅವರು ಗುಣಮುಖರಾದರು. ಅನಂತರ ಆರು ವರ್ಷಗಳವರೆಗೆ ಸತತವಾಗಿ ದುಡಿದ ಅನಂತರ ಸರ್ವಜ್ಞನ ವಚನಗಳ ಹಸ್ತಪ್ರತಿ ಸಿದ್ಧವಾಯಿತು. ಆದರೆ ಅದನ್ನು ಅಚ್ಚು ಹಾಕಿಸಲಿಕ್ಕೆ ಅವರಿಗೆ ಸಾಧ್ಯವಿರ ಲಿಲ್ಲ. ಹಣದ ಸಹಾಯಕ್ಕಾಗಿ ಹಲವರನ್ನು ಯಾಚಿ ಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಧಾರವಾಡದ ಕರ್ನಾಟಕ ಪ್ರಿಂಟಿಂಗ್ ವರ್ಕ್ಸ್‌ನ ಒಡೆಯರಾದ ಯಶವಂತರಾವ ಜಠಾರರು ಈ ಗ್ರಂಥ ಪ್ರಕಟಿಸಲು ಮುಂದೆ ಬಂದರು. ಸುದೀರ್ಘ ಮುನ್ನುಡಿಯೊಂದಿಗೆ ಸಂಪೂರ್ಣ ಗ್ರಂಥ ಮುದ್ರಣವಾಗಬೇಕಾದರೆ ಮತ್ತೆ ಕೆಲವು ತಿಂಗಳು ಹಿಡಿದವು. ಇದಕ್ಕಾಗಿ ಉತ್ತಂಗಿಯವರು ಐದುನೂರು ರೂಪಾಯಿಗಳ ಸಾಲ ಮಾಡಬೇಕಾಯಿತು. ಆ ದಿನಗಳಲ್ಲಿ ಅದು ದೊಡ್ಡ ಮೊತ್ತವೇ ಸರಿ.

ಇದೇ ಸಮಯದಲ್ಲಿ ಅವರಿಗೆ ಹಾವೇರಿಗೆ ವರ್ಗವಾಯಿತು. ಸಾಲವನ್ನು ತೀರಿಸದೇ ಗೌರವದಿಂದ ಧಾರವಾಡವನ್ನು ಬಿಡುವಂತಿರಲಿಲ್ಲ. ಕನ್ನಡದ ಕೆಲವರು ಹಿರಿಯರು ಅವರ ಕೆಲಸದಲ್ಲಿ ಆಸಕ್ತಿ ವಹಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲು ಉತ್ತಂಗಿಯವರಿಗೆ ಆಮಂತ್ರಣ ಬಂದಿತು. ಸಮ್ಮೇಳನದ ಸಮಯದಲ್ಲಿ ಉತ್ತಂಗಿಯವರ ಸಾಧನೆಯ ಬಗೆಗೆ ಪ್ರಭಾವಿತರಾದ ಹಿರಿಯರು ಉತ್ತಂಗಿಯವರಿಗೆ ಸಹಾಯ ಮಾಡಲು ಮುಂದಾದರು. ಖ್ಯಾತ ನಾಟಕಕಾರರಾದ ಗರೂಡ ಸದಾಶಿವರಾಯರು ಒಂದು ನಾಟಕ ಪ್ರದರ್ಶನಗಳಿಕೆ ಯಾದ ೩೦೦ ರೂಪಾಯಿ ಕಾಣಿಕೆಯಿತ್ತರು. ಅಂತೂ ೫೦೦ ರೂಪಾಯಿ ಕೂಡಿತು. ಉತ್ತಂಗಿಯವರಿಗೆ ಋಣ ಮುಕ್ತರಾಗಿ ಗೌರವದಿಂದ ಧಾರವಾಡವನ್ನು ಬಿಟ್ಟು ಹಾವೇರಿಗೆ ಹೋಗಲು ಅನುಕೂಲವಾಯಿತು.

ಉತ್ತಂಗಿಯವರ ಪರಿಶ್ರಮದ ಫಲವಾಗಿ ಸರ್ವಜ್ಞ ವಚನ ಸಂಗ್ರಹ ಹೊರಬಂದಿತು. ಪ್ರಕ್ಷಿಪ್ತ ವಚನಗಳನ್ನು ಪರಿಷ್ಕರಿಸಿ, ಹೊಂದಿಸಿ, ಸುಂದರವಾಗಿ ಪ್ರಕಟಿಸಿದರು.  ಅವರು ಮಾಡಿದ ಕೆಲಸದ ನಿದರ್ಶನವಾಗಿ ಹಿಂದೆ ನಾವು ಗಮನಿಸಿದ ವಚನಗಳನ್ನೇ ತೆಗೆದುಕೊಳ್ಳಬಹುದು. ಒಂದು ವಚನದ ಎರಡು ಪಾಠಗಳು ಸಿಕ್ಕವು, ಎರಡೂ ಅರ್ಥವಾಗುವಂತಿರಲಿಲ್ಲ ಎಂದು ನೋಡಿದೆವಲ್ಲ? ಬಹು ಶ್ರಮಪಟ್ಟು ಕಡೆಗೆ ಚನ್ನಪ್ಪನವರು ಅದರ ಪಾಠವನ್ನು ಹೀಗೆ ನಿರ್ಣಯಿಸಿದರು –

ಕ್ಷೀರದ ಘೃತ ವಿಮಲ ನೀರಿನೊಳು ಶಿಖಿಯಿರ್ದು
ಆರಿಗೂ ತೋರದದರಂತೆ ಎನ್ನೊಳಗೆ
ಸಾರಿಹನು ಶಿವನು ಸರ್ವಜ್ಞ ||

‘ಅರಸನೋಲೈಸುವರೆ ಕರಭೀತಿ ಬೈಕೈಯ’ ಎಂದ ರೇನು? ಚನ್ನಪ್ಪನವರು ಇದನ್ನು ತಿದ್ದಿದರು: ‘ಅರಸ ನೋಲೈಸುವರೆ ಕರಭೀತಿ ಬೇಕಯ್ಯ.’

ಉತ್ತಂಗಿಯವರೇ ಹೇಳಿದಂತೆ ಊರೂರು ಸಂಚರಿಸಿ ಧರ್ಮವನ್ನೂ ನೀತಿಯನ್ನೂ ವ್ಯವಹಾರಜ್ಞಾನ ವನ್ನೂ ಪ್ರಸಾರ ಮಾಡಿದ ಸರ್ವಜ್ಞ ವಿಶಿಷ್ಯ ವ್ಯಕ್ತಿ. ಜನಸಾಮಾನ್ಯರಿಗೆ ಅರ್ಥವಾಗುವಂತೆ ಸುಲಭವಾದ ಕನ್ನಡದಲ್ಲಿ ಸುಲಭವಾಗಿ ನೆನಪಿನಲ್ಲುಳಿಯುವ ತ್ರಿಪದಿಗಳಲ್ಲಿ ವಿವೇಕವನ್ನು ಅಡಕಮಾಡಿ ಜನತೆಗೆ ಕೊಟ್ಟ ಸರ್ವಜ್ಞ ಹಿರಿಯ ವ್ಯಕ್ತಿ. ಅವನ ವಚನಗಳನ್ನು ಪರಿಷ್ಕರಿಸಿ ಜನರಿಗೆ ಲಭ್ಯ ಮಾಡಿಕೊಟ್ಟ ಉತ್ತಂಗಿಯವರು ದೊಡ್ಡ ಉಪಕಾರ ಮಾಡಿದರು.

ತಿರುಳ್ಗನ್ನಡ ತಿರುಕ

ಸರ್ವಜ್ಞನ ವಚನಗಳ ಸಂಪಾದನೆ ಹಾಗೂ ವಿಮರ್ಶೆಗಳನ್ನಷ್ಟೇ ಅವರು ಬಿಟ್ಟುಹೋಗಿದ್ದರೂ ಉತ್ತಂಗಿ ಯವರು ಕನ್ನಡ ಸಾಹಿತ್ಯದಲ್ಲಿ ಅಮರರಾಗಿರುತ್ತಿದ್ದರು. ಈ ಹೊತ್ತು ಸರ್ವಜ್ಞ ಕನ್ನಡಿಗರ ಮನೆಮಾತಾಗಿದ್ದರೆ ಅದಕ್ಕೆ ಬಹುಮಟ್ಟಿಗೆ ಕಾರಣರಾದವರು ಉತ್ತಂಗಿಯವರು. ಅವರು ಸರ್ವಜ್ಞ ವಚನಗಳನ್ನು ಇಷ್ಟೊಂದು ನಿಷ್ಠೆ ಹಾಗೂ ಪರಿಶ್ರಮದಿಂದ ಸಂಗ್ರಹಿಸಿರದಿದ್ದರೆ, ಅವುಗಳ ಪ್ರಕಟಣೆಗೆ ಇನ್ನೆಷ್ಟು ಸಮಯ ಹಿಡಿಯುತ್ತಿತ್ತೋ ಎಷ್ಟು ವಚನಗಳು ಅಪ್ರಕಟಿತವಾಗಿಯೇ ಉಳಿಯುತ್ತಿದ್ದವೋ ಹೇಳುವುದು ಕಷ್ಟ.

ಬಡತನದಲ್ಲಿ ಹುಟ್ಟಿ ಬೆಳೆದರೂ ವಿಶಾಲ ಪಾಂಡಿತ್ಯ ಗಳಿಸಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕ್ರೈಸ್ತ ಹಾಗೂ ವೀರಶೈವ ಧರ್ಮ, ಮತಕ್ಕೆ ಸಂಬಂಧಪಟ್ಟಂತೆ ಹದಿನಾರು ಪುಸ್ತಕಗಳನ್ನು ಬರೆದು ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿದರು. ಅವರ ಕನ್ನಡ ಸಾಹಿತ್ಯ ಸೇವೆ ಮತ್ತು ಪಾಂಡಿತ್ಯದಿಂದ ಅವರಿಗೆ ೧೯೪೯ ರಲ್ಲಿ ಕಲಬುರ್ಗಿ ಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಯಂತಹ ಗೌರವ ಸ್ಥಾನವನ್ನು ತಂದುಕೊಟ್ಟವು. ಆಗಲೂ ಎಂಥ ಸೌಜನ್ಯ! ಈ ಸಮ್ಮೇಳನದಲ್ಲಿ ಅವರು ತಮ್ಮನ್ನು ಚಿತ್ರಿಸಿಕೊಂಡ ರೀತಿ ಹೀಗೆ –

“ಕನ್ನಡ ಸಾಹಿತ್ಯದಲ್ಲಿ (ಸರ್ವಜ್ಞ) ಒಬ್ಬ ತಲೆ ತಿರುಕ. ಆತನ ಬಗೆಗೆ ಬರೆದ ಇನ್ನೊಬ್ಬ ತಿರುಕ ನಾನು. ತಿರುಳ್ಗನ್ನಡ ತಿರುಕ!”

ಹರಿಜನರಿಗಾಗಿ

ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಾರರಾಗಿ ಜೀವನ ನಡೆಸಿದ ಉತ್ತಂಗಿಯವರು ಚರ್ಚಿನ ಭಾರತೀ ಕರಣಕ್ಕಾಗಿ ಹೋರಾಡಿದರು. ಮೂವತ್ತಮೂರು ವರ್ಷ ಕಾಲ ಸತತ ಕ್ರಿಶ್ಚಿಯನ್ ಧರ್ಮಗುರುಗಳಾಗಿ ಕಾರ್ಯ ಮಾಡಿದರೂ ಅವರು ಯಾವಾಗಲೂ ಸಮಾಜದ ಹಿತ  ಚಿಂತನೆಯಲ್ಲಿ ನಿರತರಾಗಿರುತ್ತಿದ್ದರು.

‘ಜ್ಞಾನಾರ್ಜನೆಯಲ್ಲಿ ಹಿರಿಯರು, ಕಿರಿಯರು ಎನ್ನುವ ಮಾತು ಎಲ್ಲಿ ಬಂತು ?"

ಭಾರತದ ಸರ್ವತೋಮುಖ ಅಭಿವೃದ್ಧಿಗೆ ಎದುರಾದ ಆತಂಕಗಳಲ್ಲಿ ನಮ್ಮನ್ನು ಬಹುಕಾಲ ಅಂಟಿಕೊಂಡ ಅಸ್ಪೃಶ್ಯತೆಯ ಜಾಡ್ಯವೂ ಒಂದು. ಕೆಲವರನ್ನು ಹೀನಾಯವಾಗಿ ಕಂಡು ದೂರ ಇಡುವ ಈ ಅಸ್ಪೃಶ್ಯತೆಯ ನಿವಾರಣೆಯಾಗದೆ ಸಮಾಜದಲ್ಲಿ ನೆಮ್ಮದಿ ಯಿರಲಾರದು, ಈ ಕಾರಣದಿಂದ ಸಮಾಜದ ಪ್ರಗತಿಯೂ ಆಗಲಾರದು ಎಂಬುದನ್ನು ಉತ್ತಂಗಿಯವರು ಅರಿತಿದ್ದರು. ಈ ದಿಶೆಯಲ್ಲಿ ಉತ್ತಂಗಿ ಚನ್ನಪ್ಪನವರು ಮಾಡಿದ ಕೆಲಸ ಪ್ರಶಂಸನೀಯವಾಗಿದೆ. ಅವರು ಹಾವೇರಿ ಹತ್ತಿರದ ಕನವಳ್ಳಿ ಗ್ರಾಮದ ಹರಿಜನರ ಕೇರಿಯಲ್ಲಿ ವಾಸವಾಗಿದ್ದು, ಹರಿಜನರ ಬೌದ್ಧಿಕ, ಸಾಮಾಜಿಕ ಹಾಗೂ ಆರ್ಥಿಕ ಉನ್ನತಿಗಾಗಿ ಶ್ರಮಿಸಿದುದನ್ನು ಇಂದಿಗೂ ಅನೇಕರು ಸ್ಮರಿಸುತ್ತಾರೆ. ಜಾತೀಯತೆಯ ನಿವಾರಣೆಗಾಗಿ ಅವರು ಬಹಳಷ್ಟು ಶ್ರಮಿಸಿರುವರು. ಜಾತೀಯತೆಯು ಭಾರತದ ಏಳ್ಗೆಗೆ ಕಾಲ್ತೊಡಕಾಗಿದೆಯೆಂದು ಅವರು ಅರಿತಿದ್ದರು. ಅನವಶ್ಯವಾದ ಇಂಥ (ಜಾತೀಯತೆಯ) ದುರಭಿಮಾನ ದಿಂದ ಛಿನ್ನವಿಚ್ಚಿನ್ನವಾಗಿ ಹೋಗಿರುವ ನಮ್ಮ ಋಗ್ವೇದದ ಪುರಾಣ ಪುರುಷನ ತಲೆ, ಬಾಹು, ತೊಡೆ, ಪಾದಗಳು ನಮ್ಮ ದೇಶಕ್ಕೆ ಬಂದೊದಗಿರುವ ಭಯಂಕರವಾದ ಸಂಕಟವನ್ನು ಹೋಗಲಾಡಿಸಬಲ್ಲ ಸಂಜೀವಿನಿ ಕಡ್ಡಿಯಿಂದ ತಿರುಗಿ ಕೂಡಿಕೊಳ್ಳುವಂತೆ ಮಾಡಿ, ಅವು ಒಂದೇ ಶರೀರದೊಳಗಿನ ಅವಯವಗಳಂತೆ ಸರ್ವ ಪಂಥಗಳು ಭರತ ಖಂಡದ ಐಕ್ಯಕ್ಕಾಗಿ ಕೆಲಸ ಮಾಡುವುದನ್ನು ಕಣ್ಣು ತುಂಬಾ ನೋಡಿ ಆನಂದಪಡುವ ಸಮಯವನ್ನು ಈಶ್ವರನು ಬೇಗನೇ ಕೊಡಲೆಂದು ಉತ್ತಂಗಿಯವರು ‘ಜಾತೀಯತೆಯ ನಿರ್ಮೂಲನವೂ ರಾಷ್ಟ್ರೀಯ ಭಾವೈಕ್ಯವೂ’ ಎಂಬ ಗ್ರಂಥದಲ್ಲಿ ಪ್ರಾರ್ಥಿ ಸಿರುವರು. ಇದರಿಂದ ಅವರಲ್ಲಿದ್ದ ಉಜ್ವಲ ರಾಷ್ಟಾಭಿ ಮಾನವೂ ವ್ಯಕ್ತವಾಗುತ್ತದೆ.

ಜ್ಞಾನದಾಹ, ವಿನಯ

ಉತ್ತಂಗಿಯವರಿಗೆ ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಎಷ್ಟು ತೀವ್ರವಾಗಿತ್ತು. ಅವರ ವಿನಯ ಎಷ್ಟು ಹಿರಿದು ಎಂದು ತೋರಿಸುವ ಒಂದು ಪ್ರಸಂಗವನ್ನು ಕನ್ನಡದ ಹಿರಿಯರೊಬ್ಬರು ಹೇಳಿದ್ದಾರೆ. ಉತ್ತಂಗಿಯವರಿಗೆ ೫೨೫೩ ವರ್ಷ ವಯಸ್ಸಾಗಿದ್ದಾಗ, ಒಮ್ಮೆ ಸಂಜೆ ಎಲ್ಲಿಯೋ ಹೊರಟಿದ್ದರು. ಎಂ. ಎ. ತರಗತಿಯ ಇಬ್ಬರು ವಿದ್ಯಾರ್ಥಿಗಳು ವಾಯು ವಿಹಾರಕ್ಕೆಂದು ಹೊರಟಿದ್ದವರು ವಚನ ಸಾಹಿತ್ಯವನ್ನು ಕುರಿತು ಮಾತನಾಡಿಕೊಂಡು ಹೋಗುತ್ತಿದ್ದರು. ಅವರಲ್ಲಿ ಒಬ್ಬರು ಈಗ ಪ್ರೊಫೆಸರ್ ಎಸ್. ಎಸ್. ಮಾಳವಾಡ ರೆಂದು ಪರಿಚಿತರಾಗಿರುವ ಸಾಹಿತಿಗಳು. ಉತ್ತಂಗಿ ಯವರಿಗೆ ಅವರ ಮಾತುಗಳು ಕೇಳಿಸಿದವು, ಅವರ ಆಸಕ್ತಿ ಕೆರಳಿಸಿತು. ತರುಣ ವಿದ್ಯಾರ್ಥಿಗಳ ಹಿಂದೆಯೇ ಹೆಜ್ಜೆ ಹಾಕಿದರು. ಸುಮಾರು ಒಂದು ಗಂಟೆಯ ಕಾಲ ಅವರ ಚರ್ಚೆಯನ್ನು ಕೇಳುತ್ತ ನಡೆದರು.

ತರುಣರಿಗೂ ತಮ್ಮ ಹಿಂದೆ ಈ ಹಿರಿಯರು ಬರು ತ್ತಿದ್ದುದು ತಿಳಿಯಿತು. ನಿಂತು ಅವರ ಕಡೆ ತಿರುಗಿದರು. ಮಾಳವಾಡರು ಅವರನ್ನು, “ಇದೇನು, ಇಷ್ಟು ಹೊತ್ತು ನೀವು ಸದ್ದಿಲ್ಲದೆ ನಮ್ಮನ್ನು ಹಿಂಬಾಲಿಸಿದಿರಲ್ಲ ?” ಎಂದು ಕೇಳಿದರು.

ಉತ್ತಂಗಿಯವರು, “ನೀವು ವಚನ ಸಾಹಿತ್ಯವನ್ನು ಕುರಿತು ಚರ್ಚೆ ಮಾಡುತ್ತಿದ್ದಿರಿ, ಅದನ್ನು ಕೇಳಬೇಕೆಂದು ಬಂದೆ. ನಿಮ್ಮ ಚರ್ಚೆಗೆ ಅಡ್ಡಿಯಾಗಬಾರದು ಎಂದು ಸದ್ದಿಲ್ಲದೆ ಬಂದೆ. ಕ್ಷಮಿಸಿ” ಎಂದರು.

ಮಾಳವಾಡರು, “ಕ್ಷಮಿಸುವ ಮಾತೇಕೆ ? ನಮ್ಮಂತಹ ಕಿರಿಯರ ಚರ್ಚೆಯಿಂದ ತಮ್ಮಂತಹ ಹಿರಿಯ ವಿದ್ವಾಂಸರಿಗೆ ಏನು ಪ್ರಯೋಜನ ?” ಎಂದು ಕೇಳಿದರು.

ಉತ್ತಂಗಿಯವರೆಂದರು, “ಹಾಗಲ್ಲ ! ಜ್ಞಾನಾರ್ಜನೆ ಯಲ್ಲಿ ಹಿರಿಯರು, ಕಿರಿಯರು ಎನ್ನುವ ಮಾತು ಎಲ್ಲಿ ಬಂತು ? ನಿಮ್ಮ ಚರ್ಚೆಯ ಕೆಲವು ಅಂಶಗಳು ಸ್ವಾರಸ್ಯ ವಾಗಿ ತೋರಿದವು. ಬೇರೆ ಕೆಲಸಕ್ಕೆ ಹೊರಟವನು ನಿಮ್ಮ ಹಿಂದೆಯೇ ಬಂದೆ. ವಾಯುಸೇವನೆಯ ಅಲೆದಾಟವೂ ಆಯಿತು, ಉತ್ಸಾಹಿ ತರುಣರ ಸ್ವಾರಸ್ಯಕರ ಮಾತುಗಳನ್ನೂ ಕೇಳಿದಹಾಗಾಯಿತು.”

ಈ ಪ್ರಸಂಗವನ್ನು ಪ್ರೊಫೆಸರ್ ಮಾಳವಾಡರೇ ವಿವರಿಸಿದ್ದಾರೆ.

ಉದಾತ್ತ ಜೀವನ

ತೀಕ್ಷ್ಣಮತಿಗಳೂ ವಿಮರ್ಶಾತ್ಮಕ ದೃಷ್ಟಿಯುಳ್ಳವರೂ ಆದ ಉತ್ತಂಗಿಯವರು ಹಾಸ್ಯಪ್ರಿಯರೂ ಹೌದು. ಈ ಹಾಸ್ಯಪ್ರವೃತ್ತಿಗರಾಗಿಯೇ ಅವರು ಸರ್ವಜ್ಞನನ್ನು ಅಷ್ಟು ಮೆಚ್ಚಿಕೊಂಡರೋ ಏನೋ? ಉತ್ತಂಗಿಯವರದು ಕಷ್ಟಮಯ ಜೀವನ. ಮನುಷ್ಯ ಪಡಬಾರದ ಬವಣೆಯ ನ್ನೆಲ್ಲ ಅವರು ಜೀವನದಲ್ಲಿ ಅನುಭವಿಸಿದರು. ಆಗಲೇ ಹೇಳಿದಂತೆ, ಅವರು ಸಿದ್ಧರಾಮ ಸಾಹಿತ್ಯದ ಕೆಲಸ ಮಾಡುತ್ತಿದ್ದಾಗ ಕಾಯಿಲೆ ಬಿದ್ದರು. ಅವರು ಹೆಂಡತಿ ಕಾಯಿಲೆಯಿಂದ ಇಪ್ಪತ್ತೈದು ವರ್ಷಗಳ ಕಾಲ ಹಾಸಿಗೆ ಹಿಡಿದರು. ಬಡತನದಿಂದಲೂ ಅವರು ಬಳಲಿದರು. ಇತರ ಧರ್ಮಗಳನ್ನು ಗೌರವದಿಂದ ಕಾಣುವ ಅವರ ವಿಶಾಲ ಮನಸ್ಸಿನಿಂದ ಅವರ ಮೇಲಧಿಕಾರಿಗಳ ಅಸಮಾಧಾನವನ್ನು ಎದುರಿಸಬೇಕಾಯಿತು. ಆದರೆ ಇವೆಲ್ಲಕ್ಕೂ ಎದೆಗುಂದದ ವ್ಯಕ್ತಿ ಉತ್ತಂಗಿ. ಈ ಕಷ್ಟ ಸಹಿಷ್ಣುತೆ ಅವರಿಗೆ ಎಲ್ಲಿಂದ ಬಂತು ? ಅವರು

ಧರ್ಮದಲ್ಲಿ, ದೇವರಲ್ಲಿ ಅಪಾರ ಶ್ರದ್ಧೆಯುಳ್ಳವರಾಗಿದ್ದರು. ಇದರಿಂದಾಗಿ ಅವರದು ಸದಾ ಸಂತೃಪ್ತ ಜೀವ. ಜೀವನದ  ಸಂಕಷ್ಟಗಳನ್ನು ಮರೆತು ಸಮಾಧಾನ ಚಿತ್ತದಿಂದ ನಸುನಗುತ್ತ ಬದುಕುವ ಅವರ ಮನೋಭಾವ ಉದಾತ್ತ ವಾದದ್ದು. ಅವರ ಹೆಂಡತಿಯು ರೋಗದಿಂದ ಜರ್ಜಿತ ರಾದಾಗ ಅವರು ತೆಗೆದ ಉದ್ಗಾರ ಇಂತಿದೆ.

“ಆಕೆಯ ಶುಶ್ರೂಷೆಯಲ್ಲಿ ನಾನು ತೋರಿಸಿದ ಅಸಾಧಾರಣ ಸಹನೆ ಮತ್ತು ಶಾಂತಿಯನ್ನು ಕಂಡು ಕೆಲವರು ನನ್ನನ್ನು ಅನೇಕ ಸಲ ‘ಪತ್ನೀವ್ರತ’ನೆಂತಲೂ ‘ಶಠಣ’ನೆಂತಲೂ ಕರೆದದ್ದುಂಟು. ಇದಕ್ಕೆ ಸಂತೋಷ ಪಟ್ಟು ಒಪ್ಪಿಕೊಂಡರೆ ಆತ್ಮವಂಚನೆಯೇ ಸರಿ. ಏಕೆಂದರೆ ಈ ದಾಂಪತ್ಯ ಜೀವನದಲ್ಲಿ ಈ ಶುಶ್ರೂಷೆಯಲ್ಲಿ ನಾನು ತೋರಿಸಿದ ಸಹನಶೀಲತೆಗಿಂತ ಇಂತಹ ಕಠಿಣ ರೋಗವನ್ನು ಇಪ್ಪತ್ತೈದು ವರ್ಷಗಳವರೆಗೆ ಸಹಿಸಿದ ಆಕೆಯಲ್ಲಿ ಕಂಡುಬಂದ ದೀರ್ಘ ಸಹನೆಯು ನನಗಿಂತ ಎಷ್ಟೋ ಪಾಲು ಅಧಿಕವಾಗಿದೆ.”

ಸಿದ್ಧರಾಮನ ಕಾರ್ಯವನ್ನು ಕೈಗೊಂಡ ಕೆಲವು ದಿನಗಳಲ್ಲಿ ಅವರು ಅರ್ಧಾಂಗವಾಯುವಿನಿಂದ ಪೀಡಿತ ರಾದರು. ಆ ನೋವಿನಿಂದ ಬಹುದಿನ ಬಳಲಿದ ಅವರ ಬಾಯಿಂದ ಬಂದ ಒಂದೇ ಒಂದಾದ ಉದ್ಗಾರದ ಮಾತು ಹೀಗಿದೆ – “ಈ ರೋಗ ಬಡವರಿಗೆ ಬರ ಬಾರದು !”

ತಮ್ಮ ಆತ್ಮಚರಿತ್ರೆಯಲ್ಲಿ ತಾವು ಶ್ರಮಿಸುತ್ತಿದ್ದ ಚರ್ಚಿನ ಭಾರತೀಕರಣ ಹಾಗೂ ಭಾರತ ಸ್ವಾತಂತ್ರ್ಯ ಇವೆರಡೂ ಕನಸುಗಳು ನನಸಾದದ್ದರಿಂದ ಅವರಿಗಾದ ಅಪರಿಮಿತ ಆನಂದವನ್ನು ವ್ಯಕ್ತಪಡಿಸುತ್ತ, “ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಪೂರ್ವದಲ್ಲಿಯೇ ಉತ್ತರ ಕರ್ನಾಟಕ ದಲಿರುವ ಬಾಸೆಲ್ ಮಿಷನ್‌ನ ಕ್ರೈಸ್ತರೆಲ್ಲರಿಗೆ ಘಟನಾತ್ಮಕ ವಾಗಿ ಧಾರ್ಮಿಕ ಸ್ವಾತಂತ್ರ್ಯ ದೊರೆಯಿತೆಂದು ತಿಳಿಸಲು ಸಂತೋಷಪಡುತ್ತೇನೆ. ಈ ಎರಡು ಬಗೆಯ ಸ್ವಾತಂತ್ರ್ಯ ಗಳನ್ನು ಕಣ್ಣುತುಂಬ ನೋಡಿ ಸಾಯುವ ಭಾಗ್ಯವು ನನಗೆ ದೊರೆತುದರಿಂದ ಆನಂದ ಬಾಷ್ಪಗಳು ಸುರಿಯುತ್ತವೆ. ಕಷ್ಟಜೀವಿಯಾದರೂ ನನ್ನ ನಗೆಮುಖವನ್ನು ಕಂಡ ಯಾರೂ ನಾನು ದುಃಖ ಜೀವಿಯೆಂದು ಹೇಳಲಾರರು” ಎಂದು ಉದ್ಗರಿಸಿದ್ದುಂಟು.

ಇಂಥ ಉದಾತ್ತಚಿತ್ತರಾದ ಉತ್ತಂಗಿಯವರು ಮರಣವನ್ನು ಕೂಡ ಅತ್ಯಂತ ಪ್ರೀತಿಯಿಂದ ಅಪ್ಪಿದಂತೆ ಕಾಣುತ್ತದೆ. ೧೯೬೨ ರ ಆಗಸ್ಟ್ ೨೮ ರಂದು, ಎಂಬತ್ತೆರ ಡನೆಯ ವರ್ಷದಲ್ಲಿ ಅವರು ತೀರಿಕೊಂಡರು. ಅವರ  ಮಿತ್ರರಾದ ಕೊನೆಸಾಗರ ಅವರು ಅವರ ಮರಣದ ದೃಶ್ಯವನ್ನು ಸ್ಮರಿಸಿ ಅವರು ‘ಹೇ ಪ್ರೇಮಸ್ವರೂಪಿ!’ ಎಂದು  ದೇವರನ್ನು ಸ್ಮರಿಸಿ ಕಣ್ಣುಮುಚ್ಚಿದರೆಂದು ಬಣ್ಣಿಸಿದರು.

ಒಮ್ಮೆ ಉತ್ತಂಗಿಯವರು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ಸಾಹಿತಿಗಳೂ ಪಂಡಿತರೂ ಆದ ದೇವುಡು ನರಸಿಂಹ ಶಾಸ್ತ್ರಿಗಳು ಉತ್ತಂಗಿಯವರನ್ನು ಮನೆಗೆ ಆಹ್ವಾನಿಸಿದರು. ಉತ್ತಂಗಿಯವರು ಅವರ ಮನೆಯನ್ನು ಮುಟ್ಟುತ್ತಲೇ ದೇವುಡು ಅವರು ಒಂದು ತಂಬಿಗೆ ನೀರನ್ನು ತಂದು ಉತ್ತಂಗಿಯವರ ಪಾದ ತೊಳೆಯಲು ಉದ್ಯುಕ್ತರಾದರು. ಆಶ್ಚರ್ಯಗೊಂಡು ಉತ್ತಂಗಿಯವರು, “ದೇವುಡು ಇದೇನು ಮಾಡುತ್ತಿದ್ದೀರಿ?” ಎಂದು ಸಂಕೋಚದಿಂದ ಹಿಂದೆ ಸರಿಯಹತ್ತಿ ದಾಗ ದೇವುಡು, “ಮಹಾನುಭಾವನಾದ ಆ ಯೇಸುವಿನ ಪಾದ ತೊಳೆಯುವ ಪುಣ್ಯ ನನಗೆ ಈ ಜನ್ಮದಿಂದ ಸಿಗುವ ಸಾಧ್ಯತೆಯಿಲ್ಲ. ಆತನ ಅಂತರಂಗದ ಶಿಷ್ಯರಾದ, ಆತನ ಪ್ರೀತಿಗೆ ಪಾತ್ರರಾದ ನಿಮ್ಮ ಪಾದವನ್ನು ತೊಳೆಯುವ ಪುಣ್ಯವಾದರೂ ನನ್ನದಾಗಲಿ” ಎಂದು ಅವರು ಹೇಳಿ ತಮ್ಮ ಅಭೀಷ್ಟವನ್ನು ಪೂರೈಸಿಕೊಂಡರಂತೆ.

ಉತ್ತುಂಗ ವ್ಯಕ್ತಿತ್ವ

ಉತ್ತಂಗಿಯವರು ನಿಷ್ಠೆಯ ಕಾಯಕವನ್ನು ದೇವರ ಸೇವೆಯೆಂದೇ ಭಾವಿಸಿದ್ದರು.

ಉತ್ತಂಗಿಯವರ ಸಂಗಾತಿ ಬಡತನ. ಯೇಸುಕ್ರಿಸ್ತನ ಸಂದೇಶವನ್ನು ಜನರಿಗೆ ಹೇಳಿಕೊಡುತ್ತಿದ್ದ ಉತ್ತಂಗಿ ಯವರು ತಮ್ಮ ಪ್ರಭುವಿನಂತೆಯೇ ಹಣವನ್ನು ದೂರ ಇಟ್ಟರು. ಹಣ ಬೇಕು ಎಂದು ಆಸೆ ಪಡಲಿಲ್ಲ, ಹಣವಿಲ್ಲ ಎಂದು ದುಃಖ ಪಡಲಿಲ್ಲ. ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲ ‘ದೇವರ ಇಚ್ಛೆ’ ಎಂದು ತಾಳ್ಮೆಯಿಂದ ಸಹಿಸಿ ಕೊಂಡರು. ಧರ್ಮಕ್ಕೂ ದೇಶಾಭಿಮಾನಕ್ಕೂ ಸಂಬಂಧ ವಿಲ್ಲ ಎಂಬುದನ್ನು ತಮ್ಮ ಬಾಳಿನಲ್ಲಿ, ಬರಹಗಳಲ್ಲಿ ತೋರಿಸಿಕೊಟ್ಟರು. ಜ್ಞಾನವನ್ನು, ಹಿರಿಮೆಯನ್ನು ಎಲ್ಲಿ ಕಂಡರೂ ತಲೆ ಬಾಗುವುದು ಧರ್ಮ ರಕ್ತಗತವಾದವರ ರೀತಿ ಎಂಬುದನ್ನು ತೋರಿಸಿಕೊಟ್ಟರು. ಭಾರತದಲ್ಲಿನ ಕ್ರೈಸ್ತ ಸಂಸ್ಥೆಗಳು ಭಾರತೀಯವಾಗಬೇಕು, ಅಲ್ಲಿನ ಅಧಿಕಾರಿಗಳು ನಡೆಯಲ್ಲಿ, ಉಡುಪಿನಲ್ಲಿ, ದೇಶ ಸೇವೆಯಲ್ಲಿ, ಇಲ್ಲಿಯ ಜನರಲ್ಲಿ ಒಂದಾಗಬೇಕು ಎಂಬ ತತ್ತ್ವವನ್ನು ಆಚರಿಸಿದರು. ಅವರು ಕ್ರೈಸ್ತ ಧರ್ಮದ ಹಿರಿಯರನ್ನು ಕುರಿತೂ ಪುಸ್ತಕಗಳನ್ನು ಬರೆದರು, ಕ್ರೈಸ್ತ ರಲ್ಲದ ಬಸವೇಶ್ವರರು – ಮೋಳಿಗೆಯ ಮಾರಯ್ಯ – ಸಿದ್ಧರಾಮರನ್ನು ಕುರಿತೂ ಬರೆದರು. ಅನುಭವ ಮಂಟಪವನ್ನು ಕುರಿತು ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ಬರೆದರು. (ಕಲ್ಯಾಣದಲ್ಲಿ ಜ್ಞಾನಿಗಳೂ ಭಕ್ತರೂ ಸೇರಿ ಜಿಜ್ಞಾಸೆ ನಡೆಸುತ್ತಿದ್ದ ಸ್ಥಳ ಅನುಭವ ಮಂಟಪ.)

ಕ್ರೈಸ್ತ ನಲ್ಲದ ಸರ್ವಜ್ಞನ ವಚನಗಳ ಅಧ್ಯಯನಕ್ಕಾಗಿ ವರ್ಷಗಳೇ ಸವೆಸಿದರು. ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದರು.

‘ಅವರ ನಡೆ ಚೆನ್ನ, ನುಡಿ ಚೆನ್ನ’ ಎಂದು ಮಹಾ ಶಿವಶರಣ ಮಾದಾರ ಚೆನ್ನಯ್ಯನನ್ನು ಕುರಿತು ಹೇಳಿದ ಬಸವಣ್ಣನವರ ಮಾತು ಉತ್ತಂಗಿಯವರಿಗೆ ಚೆನ್ನಾಗಿ ಒಪ್ಪುತ್ತದೆ. ಚನ್ನಪ್ಪನವರ ನಡೆ ಚೆನ್ನ, ಅವರ ನುಡಿ ಚೆನ್ನ. ತಮ್ಮ ನಿಷ್ಠೆಯ ಪರಿಶ್ರಮದಿಂದ ಅನೇಕ ಕನ್ನಡ ಕವಿಗಳನ್ನು ಅದರಲ್ಲಿಯೂ ಸರ್ವಜ್ಞನನ್ನು ಬೆಳಕಿಗೆ ತಂದ ಉತ್ತಂಗಿ ಚನ್ನಪ್ಪನವರನ್ನು ಕನ್ನಡಿಗರು ಅತ್ಯಂತ ಗೌರವ ಆದರ ಗಳಿಂದ ಬಹುಕಾಲ ಸ್ಮರಿಸುವುದರಲ್ಲಿ ಸಂದೇಹವಿಲ್ಲ.