ಅವರು ಕಟ್ಟಿದರು ಮಹಾಸೌಧವನ್ನು
ಒಂದೊಂದು ಇಟ್ಟಿಗೆಯಲ್ಲು ಹಣೆಯ ಬೆವರನು ಬೆರಸಿ
ಬಿರು ಬಿಸಿಲ ನೆಲದ ಕಾವಲಿಯಲ್ಲಿ ಅಂಗಾಲನ್ನೆ
ಹಪ್ಪಳವಾಗಿ ಸೀಯಿಸಿ,
ಹಗಲಿರುಳು ಅಲೆದು, ಹೋರಾಡಿ,
ನಾಳಿನ ನಿನಗೆ ಒಳಿತಾಗಲೆಂಬ ಚಿಂತೆಯನ್ನು
ಹಾಸುತ್ತ – ಹೊದೆಯುತ್ತ ಕಟ್ಟಿದರು ಈ ನಿನಗೆ
ನೆರಳಾಗುವಂಥಾ ನೆಲೆಮಾಡವನ್ನು.

ಒಳಗುರಿವ ನಂದಾದೀಪಕ್ಕೆ,
ತಮ್ಮ ಪ್ರಾಣವನ್ನೆ ಕಷ್ಟಕಾರ್ಪಣ್ಯಗಳ
ಕಲ್ಲುಗಾಣಗಳಲ್ಲಿ ಅರೆದು
ಎಣ್ಣೆ ತೆಗೆದು,
ತುಂಬಿ ಹೋದರು ಅವರು ಎಲ್ಲಿಗೋ,
ನಿಶ್ಶಬ್ದವಾಗಿ,
ಆಕಾಶದಲ್ಲಾಕಾಶವಾಗಿ
ನಿನಗೆ ಅವಕಾಶವಾಗಿ.

ನೀ ಬಂದೆ ಇದರೊಳಕ್ಕೆ,
ನಿನಗೆ ಬೇಕು ಕೂರುವುದಕ್ಕೆ
ಮೆತ್ತನೆಯ ಸುಪ್ಪತ್ತಿಗೆ,
ನಿಟ್ಟುಸಿರು ಬಿಟ್ಟು ಸೀದೇ ಹೋಗುತ್ತೀಯ ನೀನು
ಇಲ್ಲದಿದ್ದರೆ ಕೂಳು ಒಪ್ಪೊತ್ತಿಗೆ,

ಕಾರಿಲ್ಲದೇ ಚಲಿಸದು ನಿನ್ನ ಶ್ರೀಪಾದ,
ಫೋನಿಲ್ಲದೇ ಸಾಗದು ನಿನ್ನ ವ್ಯವಹಾರ,
ಮೈಕಿನ ತುಂಬ ನಿನ್ನದೇ ಉಪನ್ಯಾಸ,
ಹೆಜ್ಜೆ ಹೆಜ್ಜೆಗೂ, ಸೇವೆ, ತ್ಯಾಗ, ಬಲಿದಾನಗಳ
ಘೋಷಣೆಯ ಆವೇಶ.

ಬೆಂಕಿಯಲ್ಲಿಳಿದು, ಉರಿದುರಿದು ಬೆಳಕಾಗಿ
ಹೊರಬರಲು ತಿಳಿಯದ ನಿನಗೆ
ಹಕ್ಕಿಲ್ಲ ಉತ್ತರಾಧಿಕಾರಿಯಾಗುವುದಕ್ಕೆ
ಈ ಚರಿತ್ರೆಗೆ.