ಜೋಗದಿಂದ ಬಚಗಾರು, ಕೋಗಾರು ಾರ್ಗವಾಗಿ ಭಟ್ಕಳದ ರಸ್ತೆ ಹಿಡಿದರೆ ಸುಮಾರು ೭೦ ಕಿ.ಮೀ. ಉದ್ದದ ರಸ್ತೆಯಲ್ಲಿ ಮನಸ್ಸಿಗೆ ನೆಮ್ಮದಿ ಕೊಡಬಹುದಾದ ಅಚ್ಚಹಸುರಿನ ಕಾಡು ಕಣ್ಣು ತುಂಬಿಕೊಳ್ಳುತ್ತದೆ. ನಿತ್ಯ ಹರಿದ್ವರ್ಣ ಎಂದು ಹೇಳಬಹುದಾದ, ಸದಾ ಹಸಿರು ಚೆಲ್ಲುವ ನಾನಾ ಜಾತಿಯ ಮರಗಿಡಬಳ್ಳಿಗಳಿಂದ ಕಂಗೊಳಿಸುವ ಈ ಅರಣ್ಯ ಪ್ರದೇಶ ಗೋವರ್ಧನಗಿರಿ, ಕಾನೂರು ಕೋಟೆ, ಮೇಘಾನೆ ಮುಂತಾದ ಬೆಟ್ಟ ಸಾಲುಗಳನ್ನು ಒಳಗೊಳ್ಳುತ್ತದೆ.

ಈ ಬೆಟ್ಟ ಸಾಲುಗಳು ಮತ್ತು ಭಟ್ಕಳಗಳ ನಡುವಿನ ಹೆಗ್ಗಾಡಿನ ಹಲವು ತಾಣಗಳಲ್ಲಿ ತಮ್ಮ ನೆಲೆ ಕಂಡುಕೊಂಡಿರುವ ಗೊಂಡರು ಸಾಂಸ್ಕೃತಿಕವಾಗಿ ತುಂಬಾ ವೈಶಿಷ್ಟ್ಯಪೂರ್ಣ ಜನಾಂಗ. ಇವರು ಆಂಧ್ರಪ್ರದೇಶ ಮತ್ತು ಮಧ್ಯ ಪ್ರದೇಶಗಳ ಕಡೆಯಿಂದ ಯಾವುದೋ ಕಾಲದಲ್ಲಿ ವಲಸೆ ಬಂದಿರಬಹುದೆಂದು ಕೆಲವರ ವಾದ. ಆದರೆ ಅದಕ್ಕೆ ತಕ್ಕ ಪುರಾವೆಗಳಿಲ್ಲ. ಇದೊಂದು ಊಹೆ ಎಂದೇ ನನ್ನ ನಂಬಿಕೆ. ಏಕೆಂದರೆ ಗೊಂಡರು ಅಚ್ಚಕನ್ನಡಿಗರು. ಬೇರೆ ಭಾಷೆಯ ಅಥವಾ ತೆಲುಗು ಮತ್ತಿತರ ಭಾಷೆಗಳ ಲವಲೇಶ ಗಂಧವೂ ಇವರಿಗಿಲ್ಲ. ಇವರ ಮೈಬಣ್ಣ ಮುಖಚಹರೆ ಮತ್ತು ವೇಷಭೂಷಣಗಳು ಕೂಡ ಹೊರಗಿನದಲ್ಲ. ಅಲ್ಲದೆ ಇವರು ಆಚರಿಸುವ ಹಾಗೂ ಅನುಸರಿಸುವ ಆಚರಣೆ ಹಾಗೂ ಸಂಪ್ರದಾಯಗಳು ಮಲೆನಾಡಿನ ಒಕ್ಕಲಿಗರ ಹಾಗೂ ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗರ ಸಂಪ್ರದಾಯಗಳನ್ನೇ ಹೆಚ್ಚಾಗಿ ಹೋಲುತ್ತವೆ. ಹೀಗಾಗಿ ‘ಗೌಡ’ ಪದವೇ ಗೊಂಡ ಆಗಿರುವ ಸಾಧ್ಯತೆಗಳೇ ಹೆಚ್ಚು. ಅಲ್ಲದೆ ಗೊಂಡರು ಪ್ರಧಾನವಾಗಿ ಬೇಸಾಯಗಾರರು. ಬೇಟೆ ಅಥವಾ ಇತರ ಉಪಕಸುಬು ಇವರಿಗೆ ಪ್ರಾಮುಖ್ಯವಲ್ಲ. ಆದರೆ, ಹೆಗ್ಗಾಡಿನಲ್ಲಿ ನೆಲೆ ಕಂಡುಕೊಂಡು ಅನಾದಿಕಾಲದಿಂದ ವಾಸವಾಗಿರುವ ಇವರು ಹೊರ ಜಗತ್ತಿನಿಂದ ಬೇರ್ಪಟ್ಟವರು.

ನಾಗವಳ್ಳಿ, ಹಾಡುವಳ್ಳಿ, ಕುಂಟುವಾಣಿ, ಮಾರುಕೇರಿ, ಹಲ್ಯಾಣಿ, ಭಟ್ಕಳ ಮತ್ತು ಶಿರಾಲಿ ಮುಂತಾದಂತೆ ಹೆಗ್ಗಾಡಿನ ಹಲವು ತಾಣಗಳಲ್ಲಿರುವ ಗೊಂಡರು ತಮ್ಮ ಮನೆಗಳನ್ನು ಸುಂದರ ತಾಣಗಳಲ್ಲಿ ಕಟ್ಟಿಕೊಂಡಿದ್ದಾರೆ. ಭಟ್ಕಳ ಮತ್ತು ಶಿರಾಲಿಯ ಗೊಂಡರು ನಗರ ಜೀವನದ ರುಚಿಯನ್ನು ಕಂಡವರು. ಆದರೆ ಭಟ್ಕಳದಿಂದ ಹತ್ತು ಕಿ.ಮೀ. ನಷ್ಟು ಹಿಂದೆ ಸರಿದರೆ ಸಿಗುವ ಮಹಾಕಾಡಿನಲ್ಲಿರುವ ಗೊಂಡರ ಸಾಂಸ್ಕೃತಿಕ ಸಿರಿತನವೇ ಬೇರೆ. ಅವರ ಪರಿಸರ ಸಂಪೂರ್ಣ ಭಿನ್ನವಾದದ್ದು.

ನೀಲ ಪರ್ವತ ಸಾಲುಗಳ ಹಿನ್ನಲೆಯಲ್ಲಿ ಮರಗಿಡಬಳ್ಳಿಗಳ ನಡುವೆ ವಿಶಾಲ ಹುಲ್ಲಿನ ಹಾಸು ಮನೆ. (ಅಲ್ಲಲ್ಲಿ ಮಂಗಳೂರು ಹೆಂಚುಗಳೂ ಕಾಣಿಸಿಕೊಳ್ಳುತ್ತಿವೆ) ಇತರ ಗಿರಿಜನರಿಗೆ ಹೋಲಿಸಿದರೆ ಗೊಂಡರ ಮನೆಗಳು ವಿಶಾಲವಾದವುಗಳು. ಮನೆ ಮುಂಭಾಗದಲ್ಲಿ ಕಣ. ಕಣದ ಮಧ್ಯೆ ಮೇಟಿ. ಕಣದ ಒಂದು ಪಕ್ಕದಲ್ಲಿ ತುಳಸೀ ಕಟ್ಟೆ, ಮತ್ತೊಂದು ಪಕ್ಕದಲ್ಲಿ ಭತ್ತದ ಹುಲ್ಲಿನ ಮುಡಿ, ಅದರಲ್ಲಿ ಬತ್ತ ತುಂಬಿ ಯಾವ ಮಳೆ ಗಾಳಿಗೂ ಜಗ್ಗದಂತೆ ಭದ್ರಗೊಳಿಸುತ್ತಾರೆ. ಇದೊಂದು ಜಾನಪದ ಕೃಷಿ ವಿಶೇಷ. ಗೊಂಡರ ಪ್ರತಿ ಮನೆ ಮುಂದೆಯೂ ಮೇಟಿ ಕಂಬ, ತುಳಸೀಕಟ್ಟೆ ಮತ್ತು ಈ ಭತ್ತದ ಮುಡಿ ಇದ್ದೇ ಇರುತ್ತದೆ. ಮನೆಯ ಒಳಗಿನ ಮೂಲೆಯಲ್ಲಿ ಗೋಡೆಗೆ ಒರಗಿಸಿದಂತೆ ಒಂದು ಮಂಚವಿರುತ್ತದೆ. ಈ ಮಂಚಕ್ಕೂ ಒಂದು ವಿಶೇಷವುಂಟು. ಮನೆಯ ಹಿರಿಯ ಈ ಮಂಚದ ಮೇಲೆ ಮಲಗುತ್ತಾನೆ. ಮನೆಯಲ್ಲಿ ಮದುವೆಯಾದಾಗ ಮದುಮಕ್ಕಳನ್ನು ಇದೇ ಮಂಚದ ಮೇಲೆ ಕೂರಿಸಿ ಧಾರೆ ಎರೆಯುತ್ತಾರೆ. ಒಳಕೋಣೆಯನ್ನು ‘ದೇವರ ಕೋಣೆ’ ಎನ್ನುತ್ತಾರೆ. ಶಾಖಾಹಾರದ ಕೋಣೆಯೂ ಇದೇ. ಈ ಕೋಣೆಯಲ್ಲಿ ಸಾಮಾನ್ಯವಾಗಿ ತಿರುಪತಿ ವೆಂಕಟರಮಣನ ಫೋಟೋ ಇರುತ್ತದೆ. ಎಲ್ಲ ಗೊಂಡರೂ ತಿರುಪತಿಯ ವಿಶೇಷ ಭಕ್ತರು. ಈ ಮನೆಗೆ ಹೊಂದಿಕೊಂಡಂತೆ ಪಕ್ಕದ ಪುಟ್ಟ ಗುಡಿಸಲಿನಲ್ಲಿ ದೊಡ್ಡ ಹಂಡೆ. ಸದಾ ಕಾದ ನೀರು, ಇಲ್ಲಿ ಕೈಕಾಲು ತೊಳದೇ ಒಳ ಹೋಗಬೇಕು. ದನಕರುಗಳನ್ನು ಕಟ್ಟಲು ಪ್ರತ್ಯೇಕ ಕೊಟ್ಟಿಗೆ ಇರುತ್ತದೆ. ಗೊಂಡರು ಪ್ರಮುಖವಾಗಿ ವ್ಯವಸಾಯ ಮಾಡುವವರಾದ್ದರಿಂದ ಇವರ ಕೊಟ್ಟಿಗೆಯ ತುಂಬ ವಿಶೇಷವಾದ ಕೃಷಿ ವಸ್ತುಗಳೇ ತುಂಬಿರುತ್ತವೆ. ನೊಗ, ಜೊತೆಗೆ ಕುಕ್ಕೆ, ಉಪ್ಪಿನ ಮರಿಗೆ, ನೀರಿನ ಮರಿಗೆ, ಬೆತ್ತ ಮತ್ತು ಬಿದಿರಿನ ಕಲಾತ್ಮಕ ಬುಟ್ಟಿ, ಹಡಿಗೆ ಮುಂತಾದ ವಸ್ತುಗಳು ವಿಶೇಷ ವಿನ್ಯಾಸಗಳಿಂದ ಕೂಡಿರುತ್ತವೆ. ಗೊಂಡರ ನೊಗ ನಿಜಕ್ಕೂ ಸುಂದರವಾದದ್ದು. ಗೊಂಡರು ಈಗಲೂ ಸೇರು ಅಥವಾ ಕೆ.ಜಿ. ಲೆಕ್ಕ ಕಂಡಿಲ್ಲ. ಅವರದೇ ಆದ ಅಳತೆಯ ಸಾಮಾನುಗಳನ್ನು ಇಟ್ಟುಕೊಂಡಿದ್ದಾರೆ. ಕೊಳಗ, ಆನೆ, ಸಿದ್ದಿ, ಅಳ್ಳ ಇವರ ಅಳತೆಯ ಸಾಧನಗಳು. ನಮ್ಮಲ್ಲಿ ಹಿಂದೆ ಬಳ್ಳ, ಪಡಿ, ಪಾವು ಇದ್ದ ನೆನಪು ಇವುಗಳನ್ನು ನೋಡಿದಾಗ ಬರುತ್ತದೆ. ಗೊಂಡರ ಮನೆಯ ಮಜ್ಜಿಗೆ ಕಡಿಯುವ ಕಡೆಗೋಲು ತುಂಬಾ ಕಲಾತ್ಮಕವಾಗಿರುತ್ತದೆ. ವಿಶೇಷವಾದ ಕುಸುರಿ ಅದಕ್ಕಿರುತ್ತದೆ.

ಎಣ್ಣೆಗೆಂಪು ಬಣ್ಣದ ಧೃಡಕಾಯದ ಗೊಂಡರು ಪ್ರಕೃತಿ ಮಾತೆಯಂತೆಯೇ ನೋಡಲು ಸುಂದರ. ಸಂಕುಚಿತತೆ ಇಲ್ಲದ ವಿಶಾಲ ಮನಸ್ಸು, ಸರಳತೆಯೇ ಮೈವೆತ್ತ ಸ್ವಭಾವ, ಮುಗ್ಧ ನೋಟ. ಪ್ರತಿ ಗಂಡಸರ ಕಿವಿಯಲ್ಲೂ ಕೊಂಡಲು, ಕೈಗೆ ಲೋಹದ ಕಡಗ. ಸ್ವಲ್ಪ ಬೋಳಿಸಿದ ತಲೆಗೆ ಹಿಂಜುಟ್ಟಿನ ಸಿಂಗಾರ. ದೊಡ್ಡ ಅಂಗಿ, ಮೊಣಕಾಲಿನವರೆಗೆ ಮುಂಡಾಸು. ಎಲೆ ಅಡಿಕೆ ಜಗಿದ ರಂಗಿನ ತುಟಿಯ ತುಂಬಾ ನಸುನಗುವಿನ ಅಪ್ಯಾಯಮಾನ ಕಳೆ. ಹೆಂಗಸರು ಸಾಮಾನ್ಯವಾಗಿ ತುರುಬು ಕಟ್ಟುತ್ತಾರೆ. ಕೆಂಪು ಅಥವಾ ನೀಲಿಬಣ್ಣದ ಕಂಬಿ ಸೀರೆ ಸೆರಗನ್ನು ಹಿಂದಿನಿಂದ ತಂದು ಕೊರಳಿಗೆ ಕಟ್ಟಿದ ಸರಕ್ಕೆ ಸಿಕ್ಕಿಸಿ ಮುಂಭಾಗ ಮುಚ್ಚುವಂತೆ ಮಾಡುತ್ತಾರೆ. ಇದೊಂದು ವಿಶೇಷ ರೀತಿಯ ಉಡುಗೆ. ಸಾಮಾನ್ಯವಾಗಿ ಹಿರಿಯ ಹೆಂಗಸರು ಹೀಗೆ ಸೀರೆಯಲ್ಲೇ ಇಡೀ ಮೈಮುಚ್ಚುತ್ತಾರಾದರೆ ಈಗಿನ  ಹುಡುಗಿಯರು ಮುದುಕಿಯರನ್ನು ಹಂಗಿಸಲೋ ಎಂಬಂತೆ ಬಣ್ಣ ಬಣ್ಣದ ರವಿಕೆ ತೊಡುತ್ತಾರೆ. ಮೂಗು, ಕಿವಿ ಮತ್ತು ಕುತ್ತಿಗೆಗೆ ವಿವಿಧ ಆಭರಣಗಳನ್ನು ಧರಿಸುವ ಗೊಂಡರ ಹೆಣ್ಣು ಮಕ್ಕಳು ನಿಜಕ್ಕೂ ಸಹಜ ರೂಪಸಿಯರು.

ದೀವಳಿಗೆ, ಶಿವರಾತ್ರಿ, ಹೋಳಿ ಮತ್ತು ಸುಗ್ಗಿ ಗೊಂಡರ ಸಂಭ್ರಮದ ಹಬ್ಬಗಳು. ದೇವರು, ದೈವ, ಭೂತ ಮತ್ತು ಪ್ರೇತಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಇವರು ತುಂಬಾ ನೇಮನಿಷ್ಟೆಯಿಂದ ಆಚರಣೆ ಸಂಪ್ರದಾಯಗಳನ್ನು  ಉಳಿಸಿಕೊಂಡಿದ್ದಾರೆ. ಹೋಳಿ ಮತ್ತು ಶಿವರಾತ್ರಿಗಳಲ್ಲಿ ಇವರು ಕುಣಿಯುವ ಸುಗ್ಗಿ ಮತ್ತು ಹೋಳಿ ಹಳಬು ನೃತ್ಯ ಮಲೆನಾಡಿನ ಗಿರಿಜನರಲ್ಲಿಯೇ ವಿಶಿಷ್ಟವಾದದ್ದು. ತಲೆಗೆ ಪೇಟ, ಕೆಂಪು ಪಂಚೆ, ಕಾಲಿಗೆ ಕಡಗ, ಎದೆಗೆ ಹಳದಿ ವಸ್ತ್ರ, ಕೈಯಲ್ಲಿ ಢಕ್ಕೆ. ಢಕ್ಕೆಯ ತಾಳಕ್ಕೆ ತಕ್ಕಂತೆ ನಿಯತವಾಗಿ ಹೆಜ್ಜೆ. ಹಿಂದೆ ಮುಂದೆ ಸೆಣೆಯುತ್ತಾ ಬಿರುಸಿನಿಂದ ಮಾಡುವ ಈ ನರ್ತನ ಕುತೂಹಲಕರವಾದದ್ದು. ಇವರ ಜೊತೆಗೆ ಪಟ್ಟೆಪಟ್ಟೆಯಾದ ಬಟ್ಟೆ ಹಾಕಿ ಕಾಮನ ವೇಷ ಹಾಕಿದ ಇಬ್ಬರು ದೊಣ್ಣೆ ಹಿಡಿದು ಕುಣಿಯುತ್ತಾ ಕಲಾವಿದರ ಹಿಂದೆಮುಂದೆ ಓಡಾಡುತ್ತಾರೆ. ಗೊಂಡರ ಮಹಿಳೆಯರು ಸೊಗಸಾದ ಹಾಡುಗಾರ್ತಿಯರು. ತ್ರಿಪದಿಗಳಲ್ಲದೆ ಅನೇಕ ಕಥನಕವನಗಳನ್ನು ಹಾಡುವ ಇವರಲ್ಲಿ ಅಪೂರ್ವ ಕಲಾವಿದೆಯರಿದ್ದಾರೆ.

ಮೊದಲಿಗೆ ಜಟ್ಟಿಗ, ಬ್ಯಾಟೆಬೀರ, ಮಾಸ್ತಿ, ಚೌಡಿ ಮತ್ತು ಕೊಗ್ತಿ ಮುಂತಾಗಿ ಅವರದೇ ಆದ ದೇವರುಗಳನ್ನು ಪೂಜಿಸುತ್ತಿದ್ದ ಗೊಂಡರು ಯಾವುದೋ ಒಂದು ವಿಶಿಷ್ಟ ಸಂದರ್ಭದಲ್ಲಿ ತಿರುಪತಿ ವೆಂಕಟರಮಣನ ಭಕ್ತರಾದಂತೆ ಕಂಡುಬರುತ್ತದೆ. ಹದಿನೈದು ಹದಿನಾರನೇ ಶತಮಾನದಲ್ಲಿ ದಾಸ ಸಂಪ್ರದಾಯದ ಪ್ರಚಾರಕರು ಮಲೆನಾಡು ಹೊಕ್ಕು, ಇವರನ್ನು ತಮ್ಮ ಅನುಯಾಯಿಗಳನ್ನಾಗಿ ಮಾಡಿಕೊಂಡಂತೆ ಕಾಣುತ್ತದೆ. ಹೀಗಾಗಿ ಗೊಂಡರಲ್ಲಿಯೂ ಪ್ರತಿ ವರ್ಷ ತಿರುಪತಿ ಯಾತ್ರೆ ಕೈಗೊಳ್ಳುವ ಸಾಹಸಿಗರೂ ಉಂಟು. ಯಾತ್ರೆ ಮುಗಿಸಿ ಬಂದ ನಂತರ ಅಥವಾ ಹರಕೆ ಮಾಡಿಕೊಂಡ ಸಂದರ್ಭಕ್ಕೆ ಆಚರಿಸುವ ‘ಹರಿಸೇವೆ’ ತುಂಬಾ ಸಂಕೀರ್ಣವಾದದ್ದು. ಆ ಪ್ರದೇಶದವರಲ್ಲದೆ, ನೆಂಟರು ಇಷ್ಟರು ಸೇರಿದಂತೆ ನೂರಾರು ಜನರನ್ನು ಆಹ್ವಾನಿಸುವ ಈ ಆಚರಣೆಗೆ ನಲವತ್ತರಿಂದ ಐವತ್ತು ಸಾವಿರ ರೂಪಾಯಿಗಳು ಖರ್ಚು ತಗಲುತ್ತದೆಂಬುದನ್ನು ಕೇಳಿ ತುಂಬಾ ವ್ಯಸನವೂ, ಆಶ್ಚರ್ಯವೂ ಆಯಿತು. ಅನೇಕರು ಈ ಕಾರಣಕ್ಕಾಗಿ ಸಾಲಗಾರರಾಗಿ ಪರಿತಪಿಸುತ್ತಿರುವುದೂ ಉಂಟು. ಆದರೂ ಜೀವಮಾನದಲ್ಲಿ ಒಮ್ಮೆಯಾದರೂ ಹರಿಸೇವೆ ಮಾಡಬೇಕೆಂಬುದು ಪ್ರತಿಯೊಬ್ಬರ ಹಂಬಲವಂತೆ. ಈ ಹರಿಸೇವೆಯ ಸಂದರ್ಭದಲ್ಲಿ ಹಾಡು, ಕುಣಿತಗಳ ಸಂಭ್ರಮವೋ ಸಂಭ್ರಮ. ‘ಹೌದೇರಣ್ಣಾ ಗೋವಿಂದಾ’ ಎನ್ನುವ ಪ್ರಾಸ ಉಚ್ಛರಿಸುತ್ತಾ ತುಳಸೀಕಟ್ಟೆಯ ಸುತ್ತ ಕುಣಿಯುವ ಹರಿಸೇವೆ ಕುಣಿತ ತುಂಬಾ ಚೆನ್ನಾಗಿರುತ್ತದೆ.

ಗೊಂಡರ ಜಟ್ಟಿಗನ ಬನ ತುಂಬಾ ವಿಶೇಷವಾದದ್ದು. ವಿವಿಧ ಗಿಡ ಮರಬಳ್ಳಿಗಳ ಸೊಂಪಾದ ವನ ಅದು. ಆ ವನದ ಮಧ್ಯೆ ಪವಿತ್ರ ಗಿಡಮರಗಳ ನೆರಳಿನಲ್ಲಿ ವಿವಿಧ ಆಕೃತಿಯ ಮರದ ಸ್ತಂಭಗಳ ಮತ್ತು ಪ್ರಾಣಿಗಳ ಚಿತ್ರ ಇರುತ್ತವೆ. ಇವುಗಳಿಗೆ “ಹುಲಿಗಿರ್ತಿ, ಹಂದಿಗಿರ್ತಿ, ವೀರರ ಕೊಂಬು, ಜಟ್ಟಿಗರ ಕೊಂಬು” ಎಂದು ಕರೆಯುತ್ತಾರೆ. ‘ಹುಲಿಗಿರ್ತಿ’ ಅಂದರೆ ಒಂದು ಮರದ ದಪ್ಪ ತುಂಡಿನ ಹುಲಿಯ ರೂಪ ಕೆತ್ತಿದ ಸಾಮಾನ್ಯ ಕೆತ್ತನೆಯ ಚಿತ್ರ. ಹಂದಿಗಿರ್ತಿ ಎಂದರೆ ಹಂದಿಯ ರೂಪದ ಮರದ ತುಂಡು. ಇದಕ್ಕೆ ಒಂದು ವಿಶೇಷ ಅರ್ಥವುಂಟು. ದಟ್ಟಾರಣ್ಯದಲ್ಲಿ ವಾಸಮಾಡುವ ಗೊಂಡರು ವರ್ಷವಿಡೀ ಬೆಳೆಯುವ ಬೆಳೆಯನ್ನು ಒಂದೇ ರಾತ್ರಿಗೆ ಹಂದಿಗಳು ಮುಗಿಸುತ್ತಿದ್ದವು. ದನಕರುಗಳನ್ನು ಹುಲಿ ಹಿಡಿಯುತ್ತಿದ್ದವು. ಪ್ರಧಾನವಾಗಿ ಕೃಷಿಕರೇ ಆದ ಗೊಂಡರಿಗೆ ಜಾನುವಾರುಗಳು ಇಲ್ಲದಿದ್ದರೆ ಹೇಗೆ? ಅದಕ್ಕಾಗಿ ಅವರು ದೇವರಲ್ಲಿ ಬೇಡಿಕೊಂಡರು; ನಿನಗೆ ಹಂದಿಗಿರ್ತಿ, ಹುಲಿಗಿರ್ತಿ ಮಾಡಿಸಿ ಕೊಡುತ್ತೇನೆ. ನನ್ನ ಬೆಳೆ ಮತ್ತು ಜಾನುವಾರುಗಳನ್ನು ರಕ್ಷಿಸು ಎಂದು, ಹಿಂದೆ ಗೊಂಡರ ಪ್ರಾಣ ರಕ್ಷಣೆ ಮಾಡಿದ, ಗೊಂಡರ ಮಹಿಳೆಯರ ಮಾನ ಕಾಪಾಡಿದ ಪ್ರತೀಕವಾಗಿರುವ ಅವರ ಸಾಂಸ್ಕೃತಿಕ ವೀರರಾದ ಜಟ್ಟಿಗ ಮತ್ತು ಬೀರರನ್ನು ಪೂಜಿಸುವ ಕಾರಣಕ್ಕಾಗಿ ಜಟ್ಟಿಗನ ಕೊಂಬು ಮತ್ತು ಬೀರನ ಕೊಂಬನ್ನು ಮಾಡಿಸಿಕೊಡುವುದಾಗಿ ಹರಕೆ ಹೊರುವುದುಂಟು. ಹೀಗೆ ಆ ಬನದಲ್ಲಿ ಜಟ್ಟಿಗರ ಅರ್ಥಾತ್ ಸಾಂಸ್ಕೃತಿಕ ವೀರರ ಕೊಂಬುಗಳ ಸಾಲು ಸಾಲು ಕಾಣಸಿಗುತ್ತವೆ.

ಭಟ್ಕಳ ಈಗೊಂದು ‘ಮಿನಿದುಬಾಯ್’ ಎಂದೇ ಹೆಸರು ಪಡೆದಿದೆ. ದಿನದಿನಕ್ಕೂ ಪಾಶ್ಚಾತ್ಯ ನಾಗರೀಕತೆಯನ್ನು ರೂಢಿಸಿಕೊಂಡು ಬೆಳೆಯುತ್ತಿರುವ ಈ ಚಿಕ್ಕಪಟ್ಟಣ ಅತ್ಯಾಧುನಿಕ ಕಟ್ಟಡಗಳನ್ನು ಹೊಂದಿದೆ. ಇಂಥ ಆಧುನಿಕ ಭಟ್ಕಳದಲ್ಲಿ ಗೊಂಡರ ಕೋಗ್ತಿ ದೇವಸ್ಥಾನ ಉಂಟು. ಹಿಂದೆ ಭಟ್ಕಳದ ಅಂಚಿನವರೆಗೂ ದಟ್ಟವಾದ ಕಾಡಿತ್ತು ಎಂದು ಹೇಳಬಹುದಾದ ಎಲ್ಲ ಕುರುಹುಗಳೂ ಇವೆ. ಬೆಟ್ಟಗುಡ್ಡಗಳಿಂದ ಆವೃತ್ತವಾದ ಭಟ್ಕಳದ ಸಮುದ್ರ ತೀರ ಅತ್ಯಂತ ನೈಸರ್ಗಿಕ. ಕಾಡಿನ ವಾಸಿಗಳಾದ ಗೊಂಡರು ಸಮುದ್ರದ ಅಂಚಿನವರೆಗೂ ವಾಸವಾಗಿದ್ದರು. ಅರಣ್ಯಕ್ಕೂ, ಸಮುದ್ರಕ್ಕೂ ಇಲ್ಲಿ ನೆಂಟಸ್ತನ ಇತ್ತು. ಇದರ ಕುರುಹಾಗಿ ಭಟ್ಕಳದಿಂದ ಹತ್ತಾರು ಕಿ.ಮೀ.ದೂರದಲ್ಲಿ ಸಮುದ್ರದ ಮಧ್ಯೆ ಇರುವ ನೇತ್ರಾಣಿ ಗುಡ್ಡದಲ್ಲಿಯೂ ಗೊಂಡರ ಜಟ್ಟಿಗನ ಕೊಂಬುಗಳಿವೆಯಂತೆ. ಈಗಲೂ ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಆ ಭೋರ್ಗರೆಯುವ ಸಮುದ್ರವನ್ನು ಹಾಯ್ದು “ನೇತ್ರಾಣಿ ಗುಡ್ಡ”ದಲ್ಲಿ ಪೂಜೆ ಸಲ್ಲಿಸಿ ಬರುವ ಗೊಂಡರೂ ಉಂಟು. ದೂರಕ್ಕೆ ನಿಗೂಢ ಪರ್ವತದಂತೆ ಕಂಡುಬರುವ ಆ ಸಾಗರದೊಳಗಿನ ಗುಡ್ಡ ಒಂದು ಕಾಲಕ್ಕೆ ಗೊಂಡರ ಪವಿತ್ರ ಸ್ಥಳವಾಗಿತ್ತೆಂದು ಹೇಳುತ್ತಾರೆ.

ಭಟ್ಕಳದ ಕೋಗ್ತಿ ದೇವಸ್ಥಾನ ನೋಡಲು ಚಿಕ್ಕದಾದರೂ ಅದರ ಸುತ್ತಲ ಬಯಲು ತುಂಬಾ ದೊಡ್ಡದು. ದೇವಸ್ಥಾನದ ಮುಂದೆ ಸುಂದರವಾದೊಂದು ಕೆರೆ. ಕರ್ನಾಟಕದ ಇತರೆಡೆಗಳಲ್ಲಿನ ಗ್ರಾಮದೇವತೆಗಳ ಪರಿಸರದಂತೆಯೇ ಇರುವ ಈ ದೇವಸ್ಥಾನದ ಪರಿಸರ ಕೂಡ ಜಾತ್ರೆ ಮತ್ತು ಪರಿಷೆಗೆ ಹೇಳಿ ಮಾಡಿಸಿದ ಜಾಗ. ಸಂಕ್ರಾಂತಿಯ ಮಾರನೆ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಆ ಸಂದರ್ಭದಲ್ಲಿ ನೂರಾರು ಗೊಂಡ ಗೊಂಡತಿಯರ ಸಡಗರದ ಓಡಾಟ ಇರುತ್ತದೆ. ಅದಾಗ ತಾನೆ ಮದುವೆಯಾದ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾದ ಉಡುಪು ಧರಿಸಿ, ತಲೆ ತುಂಬಾ ಹೂ ಮುಡಿದು, ಕೈಯಲ್ಲಿ ಅಕ್ಕಿಹಿಟ್ಟಿನ ಉಂಡೆ ಮಾಡಿ ಅದರ ಮೇಲೆ ದೀಪ ಹೊತ್ತಿಸಿಕೊಂಡು ಕೋಗ್ತಿಗೆ ಆರತಿ ಬೆಳಗುತ್ತಾರೆ.

ದೇವಸ್ಥಾನದ ಒಳಗೆ ಕೋಗ್ತಿಯ ಪ್ರತೀಕದ ಜೊತೆಗೆ ಜಟ್ಟಿಗನ ಕೊಂಬುಗಳಿವೆ. ಮಹಾಸತಿಯರಾದ ಹಲವು ಮಹಿಳೆಯರ ಕುರುಹಾಗಿ “ಮಾಸ್ತಿ” ಮೂರ್ತಿಗಳೂ ಇವೆ.

ಹಬ್ಬದ ರಾತ್ರಿಗೆ ದೇವಸ್ಥಾನದ ಮುಂದೆ ಸುಂದರ ಹಾಗೂ ಸಾಂಪ್ರದಾಯಿಕವಾದ ಮಂಡಲ ಬರೆದು ಅದರ ಸುತ್ತಲೂ ಮಂಡಲದ ಕುಣಿತವನ್ನು ನಡೆಸಲಾಗುತ್ತದೆ. ನಿಯತವಾದ ಢಕ್ಕೆಯ ಶಬ್ದಕ್ಕೆ ಮಂಡಲ ಕುಣಿಯುವವರ ಹೆಜ್ಜೆಗಾರಿಕೆ ಶಿಸ್ತು ಬದ್ಧವಾಗಿರುತ್ತದೆ. ಸುತ್ತಲ ಬಯಲಲ್ಲಿ ಕುಳಿತ ನೂರಾರು ಜನ ತದೇಕಚಿತ್ತರಾಗಿ ಢಕ್ಕೆಯ ಶಬ್ದಕ್ಕೆ ಕಿವಿಯೊಡ್ಡುತ್ತಾರೆ. ಇಡೀ ರಾತ್ರಿ ಹಲವು ಆಚರಣೆಗಳ ನಂತರ ಜಾತ್ರೆ ಮುಗಿಯುತ್ತದೆ. ಗೊಂಡರ ಗಂಡಸರು, ಹೆಂಗಸರು ಕೋಗ್ತಿ ಬಯಲಿನಲ್ಲಿ ಹಾಡುವ ದೃಶ್ಯವಂತೂ ಮನಮೋಹಕ. ಆರ್ಥಿಕವಾಗಿ ಬಡವರಾದರೂ, ಸಾಂಸ್ಕೃತಿಕವಾಗಿ ಸಿರಿವಂತರಾದ ಗೊಂಡರ ಜೀವನಶೈಲಿ, ಸರಳತೆ ಎಂದಿಗೂ ಅನುಕರಣೀಯ ವಾದುದು.