ಶೃಂಗೇರಿ ಶಂಕರ ಮಠ

ದೂರ ಎಷ್ಟು?
ತಾಲೂಕು : ಸಿದ್ದಾಪುರ
ತಾಲೂಕಿನಿಂದ : ೨ ಕಿ.ಮೀ
ಜಿಲ್ಲಾ ಕೇಂದ್ರದಿಂದ :೧೪೮ ಕಿ.ಮೀ

ಶೃಂಗೇರಿ ಶಂಕರ ಮಠ

ಸಿದ್ದಾಪುರ-ಕುಮಟಾ ಮಾರ್ಗದಲ್ಲಿರುವ ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡ ಈ ಶೃಂಗೇರಿ ಶಾಖಾ ಮಠ ಬಹಳ ಸುಂದರವಾಗಿದೆ. ಶಾರದೆ, ವಿನಾಯಕ, ಈಶ್ವರ ಮುಂತಾದ ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಿ ಆಸ್ತಿಕರಿಗೆ ದೈವೀ ಕಾರ್ಯಗಳನ್ನು ನಡೆಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಧ್ಯಾನಕ್ಕೆಂದೇ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನಿಟ್ಟು ವಿಶಾಲ ಮಂದಿರವನ್ನು ನಿರ್ಮಿಸಿದ್ದಾರೆ.  ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸುಂದರವಾದ ಭವ್ಯ, ದಿವ್ಯ ವೇದಿಕೆಯಿದೆ.  ಇದು ಭುವನಗಿರಿ ಹಾಗೂ ಬಿಳಗಿಗೆ ತೆರಳುವ ಮಾರ್ಗದಲ್ಲಿಯೇ ಇದೆ.

 

ಉಂಚಳ್ಳಿ ಜಲಪಾತ

ದೂರ ಎಷ್ಟು?
ತಾಲೂಕು : ಸಿದ್ದಾಪುರ
ತಾಲೂಕಿನಿಂದ : ೨ ಕಿ.ಮೀ
ಜಿಲ್ಲಾ ಕೇಂದ್ರದಿಂದ :೧೪೮ ಕಿ.ಮೀ

 

ಉಂಚಳ್ಳಿ ಜಲಪಾತ

ಸಿದ್ದಾಪುರದಿಂದ ಶಿರಶಿ ಮಾರ್ಗದಲ್ಲಿ ೪.ಕಿ.ಮೀ. ಸಾಗಿ ನಂತರ ಎಡಕ್ಕೆ ತಿರುಗಿ ೩೨ ಕಿ.ಮೀ. ನಷ್ಟು ದೂರದಲ್ಲಿ  ಕೋಲಸಿರ್ಸಿ-ಹಾರ್ಸಿಕಟ್ಟ-ಹೆಗ್ಗರಣಿ ಮಾರ್ಗದಲ್ಲಿ ಹೊರಟಾಗ ನಮಗೆ ಈ ಜಲಪಾತದ ದೃಶ್ಯವನ್ನು ನೋಡುವ ಅವಕಾಶ ದೊರಕುತ್ತದೆ.  ಅಂತೆಯೇ ಕುಮಟಾ-ಶಿರಸಿ ಮಾರ್ಗದಿಂದ ಬಂದಾಗಲೂ (ಸುಮಾರು ೧೫ ಕಿ.ಮೀ.) ನಮಗೆ ಈ ಜಲಪಾತದ ಸನಿಹ ತಲುಪಲು ಅವಕಾಶವಿದೆ.  ಈ ಜಲಪಾತದೆಡೆಗೆ ಸಾಗಿದಾಗ ಅಲ್ಲಲ್ಲಿ ನಿಬಿಡವಾದ ಅರಣ್ಯ, ಹೊಳೆ-ಹಳ್ಳ, ಕೊಳ್ಳ-ಕಂದಕ, ದಿನ್ನೆ-ಗುಡ್ಡಗಳು ಕಾಣಸಿಗುತ್ತವೆ.  ಇವೆಲ್ಲವನ್ನು ದಾಟಿ ಜಲಪಾತದ ಸಮೀಪ ಸಾಗಿದಾಗ ಮೈನವಿರೇಳುವ ಅನುಭವ ನಮ್ಮದಾಗುತ್ತದೆ. ಸುಮಾರು ೩೫೦ ಅಡಿಗಳಷ್ಟು ಎತ್ತರದಿಂದ ಭೋರ್ಗರೆವ ನಿನಾದದೊಂದಿಗೆ ಧುಮ್ಮಿಕ್ಕಿ ಹರಿಯುವ ಜಲಧಾರೆಯ ನಯನಮನೋಹರ ದೃಶ್ಯ ಅಧ್ಬುತವಾದುದು.

ಅಘನಾಶಿನಿ ನದಿಯು ಇಲ್ಲಿಂದ ಘಟ್ಟದ ಕೆಳಗಿಳಿದು ಸಾಗರದತ್ತ ಪಯಣವನ್ನು ಬೆಳೆಸುತ್ತದೆ.  ಈ ಜಲಪಾತಕ್ಕೆ ‘ಕೆಪ್ಪ ಜೋಗ’ ಎಂಬ ಹೆಸರೂ ರೂಢಿಯಲ್ಲಿದೆ.  ಕಟ್ಟಡವಿಯ ಮಧ್ಯದಲ್ಲಿ ನೀರು ಬೀಳುವ ಸ್ಥಳದತ್ತ ಇಳಿದಿಳಿದು ಸಾಗಿದರೆ ಪರಸ್ಪರ ಸಮೀಪ ನಿಂತು ಮಾತನಾಡಿದರೂ ಏನೂ ಕೇಳದ ಅನುಭವ ಇಲ್ಲಿ ಆಗುತ್ತದೆ.  ಬ್ರಿಟೀಷ್ ಸಾರ್ಜಂಟ್ ಸರ್ ವೆಲ್ಲಿಂಗ್ಟನ್ ಇಲ್ಲಿಗೆ ಭೇಟಿ ನೀಡಿದ್ದರಿಂದ ಇದಕ್ಕೆ ‘ವೆಲ್ಲ್ಲಿಂಗ್ಟನ್ ಫಾಲ್ಸ್’ ಎಂದೂ ಕರೆಯುತ್ತಾರೆ.

 

ಭುವನಗಿರಿ ದೇವಾಲಯ

ದೂರ ಎಷ್ಟು?
ತಾಲೂಕು : ಸಿದ್ದಾಪುರ
ತಾಲೂಕಿನಿಂದ : ೭ ಕಿ.ಮೀ
ಜಿಲ್ಲಾ ಕೇಂದ್ರದಿಂದ :೧೩೩ ಕಿ.ಮೀ

 

ಭುವನಗಿರಿ ದೇವಾಲಯದ ಎದುರಿನ ಸಸ್ಯಶ್ಯಾಮಲೆ

ಇದು ಕರ್ನಾಟಕದ ನಾಡದೇವಿ ಎಂದು ಪ್ರಖ್ಯಾತಿಯನ್ನು ಪಡೆದಿದೆ.

ಸಿಚ್ಧಾಪುರದಿಂದ ಕುಮಟಾಕ್ಕೆ ತೆರಳುವ ಮಾರ್ಗದಲ್ಲಿ ಸಾಗುವ ಮಾರ್ಗದಿಂದ ೧೦೦೦ ಅಡಿಗಳಿಗೂ ಎತ್ತರದ ಗುಡ್ಡವೊಂದರ ಮೇಲೆ ಈ ದೇವಾಲಯ ಇದೆ.  ಕನ್ನಡ ನಾಡಿನ ಏಕೈಕ ಭುವನೇಶ್ವರಿ ದೇವಾಲಯವಿದು.  ಕನ್ನಡ ತಾಯಿ ಸದಾ ಉನ್ನತ ಸ್ಥಾನದಲ್ಲಿ ನಿಂತಿರುತ್ತಾಳೆ ಎಂಬುದು ಗಣನೀಯ ಅಂಶವಾಗಿದೆ. ದೇವಾಲಯದ ಪ್ರಾಂಗಣದಲ್ಲಿ ನಿಂತು ನೋಡಿದಾಗ ನೂರಾರು ಎಕರೆ ಗದ್ದೆ, ತೋಟ, ದಟ್ಟ ಹಸಿರು ಕಾನನಗಳು ಕಾಣಸಿಗುತ್ತವೆ.

ಇವುಗಳೊಂದಿಗೆ ಈ ತಾಲೂಕಿನಲ್ಲಿ ನೋಡಬಹುದಾದ ಇನ್ನಿತರ ಸ್ಥಳಗಳೆಂದರೆ ಕುಮಟಾ ಮಾರ್ಗದಲ್ಲಿರುವ ಬೇಡ್ಕಣಿಯ ಶನಿದೇವಾಲಯ, ಶಿರಸಿ ಮಾರ್ಗದಲ್ಲಿರುವ ಶಿಡ್ಲಗದ್ದೆ ಜಲಾಶಯ , ಸಿದ್ದಾಪುರ-ಜೋಗ್ ಮಾರ್ಗದಲ್ಲಿರುವ ಹಲಗೇರಿ ಗ್ರಾಮದ ಹೊಸೂರ್ ಡ್ಯಾಮ್ ಇತ್ಯಾದಿಗಳು.

 

ಯಲ್ಲಾಪುರ

ದೂರ ಎಷ್ಟು?
ತಾಲೂಕು : ಯಲ್ಲಾಪುರ
ತಾಲೂಕಿನಿಂದ :  ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೨೮ ಕಿ.ಮೀ

 

ಸಾತೋಡಿ ಫಾಲ್ಸ್ ೨೮ ಕಿ.ಮೀ.

ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಣ್ಣ ಪಟ್ಟಣ. ತಾಲೂಕು ಕೇಂದ್ರವಾಗಿರುವ ಯಲ್ಲಾಪುರ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿರುವ ಪ್ರದೇಶ. ಯಲ್ಲಾಪುರವು ಪ್ರವಾಸಿ ತಾಣವಾಗಿದ್ದು ಸುಂದರವಾದ ಜಲಪಾತಗಳು ಹಾಗೂ ಬೆಟ್ಟ ಕಾಡುಗಳಿಂದ ಪ್ರವಾಸಿಗರ ಮನ ತಣಿಸುತ್ತದೆ.

ಸಾತೋಡಿ ಫಾಲ್ಸ್ ಇದು ಅಮೇರಿಕಾದ ಪ್ರಸಿದ್ಧ ನಯಾಗಾರ ಜಲಪಾತದಂತಿದ್ದು ಹಲವಾರು ಝರಿಗಳಿಂದ ನೀರು ಕ್ರೋಢೀಕೃತವಾಗಿ ೧೫ ಮೀ ಎತ್ತರದಿಂದ ಧುಮಕುವದು ನೋಡುವವರನ್ನು ಮಂತ್ರ ಮುಗ್ದವಾಗಿಸುತ್ತದೆ, ಮುಂದೆ ಇದು ಕಾಳಿನದಿಯ ಹಿನ್ನೀರನ್ನು ಸೇರಿಕೊಳ್ಳುತ್ತದೆ.  ಇದು ವರ್ಷವೀಡೀ ನೀರಿರುವ ಜಲಪಾತವಾಗಿದೆ.  ಸೆಪ್ಟೆಂಬರದಿಂದ ಮಳೆಗಾಲ ಆರಂಭವಾಗುವವರೆಗೆ ಯಾವಾಗ ಬೇಕಾದರೂ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.  ಇಲ್ಲಿಗೆ ಸಮೀಪದ ಜೋಯಿಡಾ ಮತ್ತು ಯಲ್ಲಾಪುರದ ಮಧ್ಯೆಯಿರುವ ಕಾಳಿ ಹಿನ್ನೀರಿನ ಪ್ರದೇಶವು ತೆಪ್ಪ ವಿಹಾರಕ್ಕೆ ಹೆಸರುವಾಸಿಯಾಗಿದೆ.

 

ಜೇನುಕಲ್ಲುಗುಡ್ಡ 

ದೂರ ಎಷ್ಟು ?
ತಾಲೂಕು : ಯಲ್ಲಾಪುರ
ತಾಲೂಕಿನಿಂದ :  ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೨೫ ಕಿ.ಮೀ

ಯಲ್ಲಾಪುರದಿಂದ ೨೦ ಕಿ.ಮಿ ದೂರದಲ್ಲಿ ಇರುವ ಜೇನುಕಲ್ಲು ಗುಡ್ಡ ಪೃಕೃತಿ ಸೊಬಗಿಗೆ ಹೆಸರುವಾಸಿ.

ಅತ್ಯಂತ ಎತ್ತರ ಪ್ರದೇಶದಲ್ಲಿರುವ ಸ್ಥಳವು ಸೂರ್ಯಾಸ್ತ ವೀಕ್ಷಣೆಯನ್ನು ಆಹ್ಲಾದಕರವಾಗಿಸುತ್ತದೆ. ಇವಲ್ಲದೆ ಯಲ್ಲಾಪುರದಲ್ಲಿ ಅನೇಕ ನೈಸರ್ಗಿಕ ಸೌಂದರ್ಯದ ಸೊಬಗಿದೆ. ತಾಲೂಕಿನಿಂದ ೩೦ ಕಿ.ಮೀ.ದೂರದಲ್ಲಿರುವ ಕಳಚೆಯು ಸುಂದರ ಬೆಟ್ಟ ಗುಡ್ಡಗಳಿಂದ ಆವೃತವಾಗಿದೆ. ಕಳಚೆಯಲ್ಲಿರುವ ೮೦ ಅಡಿಯ ಕಲ್ಲುಬಂಡೆ ಮನ ಸೆಳೆಯುತ್ತದೆ. ಊರ ಜನರು ಇದನ್ನು ದೇವಿ ಕಲ್ಲು ಎಂದು ಕರೆಯುವರು.

 

ಮಾಗೋಡ ಜಲಪಾತ :

ದೂರ ಎಷ್ಟು ?
ತಾಲೂಕು : ಯಲ್ಲಾಪುರ
ತಾಲೂಕಿನಿಂದ : ೧೯ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೧೯ ಕಿ.ಮೀ

ಮಾಗೋಡು ಫಾಲ್ಸ್, ೧೯ ಕಿ.ಮೀ.

ಯಲ್ಲಾಪುರ ಕೇಂದ್ರದಿಂದ ೧೯ ಕಿ.ಮೀ ದೂರದಲ್ಲಿದೆ. ಬೇಡ್ತಿ ನದಿಯು ೬೫ ಅಡಿ ಎತ್ತರದಿಂದ  ಮೂರು ಹಂತಗಳಲ್ಲಿ ಧುಮುಕುತ್ತದೆ.

 

ಬ್ರಹ್ಮಕುಮಾರಿ ತಪೋವನ

ದೂರ ಎಷ್ಟು?
ತಾಲೂಕು : ಯಲ್ಲಾಪುರ
ತಾಲೂಕಿನಿಂದ :  ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦೮ ಕಿ.ಮೀ

ಬ್ರಹ್ಮ ಕುಮಾರಿ ತಪೋವನವು ಮೌಂಟ್ ಅಬುವನ್ನು ಹೊರತುಪಡಿಸಿದರೆ, ಎರಡನೆಯ ದೊಡ್ಡ ಆಧ್ಯಾತ್ಮಿಕ ಕೇಂದ್ರವಾಗಿದೆ. ಇದು ಸುಂದರವಾದ ಹೂದೋಟಗಳಿಂದ ಕಂಗೊಳಿಸುತ್ತದೆ.

ಇಲ್ಲಿನ ಪ್ರಶಾಂತ ವಾತಾವರಣವು ಮನ:ಶಾಂತಿ ಹೊಂದಲು ಪೂರಕವಾಗಿದೆ. ಧ್ಯಾನ, ಯೋಗ ಆಧ್ಯಾತ್ಮಿಕ ಚಟುವಟಿಕೆಗಳ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

 

ಕವಡಿಕೆರೆ :

ಸುಮಾರು ೬೦ ಎಕರೆ ವಿಸ್ತೀರ್ಣವನ್ನು ಹೊಂದಿದ ಈ ಕೆರೆ ಅನೇಕ ಪ್ರವಾಸಿಗರನ್ನು ಆಕರ್ಷಿಸಿದೆ.  ಸದಾ ಕಾಲವು ಮನವನರಳಿಸುವ ತಾವರೆಯ ಆಗರ ಈ ತಾಣ.  ಈ ಪ್ರದೇಶವನ್ನೊಂದು ಪಕ್ಷಿಧಾಮವನ್ನಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ.

 

ಮುಂಡಗೋಡು

ದೂರ ಎಷ್ಟು?
ತಾಲೂಕು : ಮುಂಡಗೋಡು
ತಾಲೂಕಿನಿಂದ : ೧೩ ಕಿ.ಮೀ
ಜಿಲ್ಲಾ ಕೇಂದ್ರದಿಂದ :೧೮೭ ಕಿ.ಮೀ

ಅತ್ತಿವೇರಿ ಪಕ್ಷಿಧಾಮವು ವಲಸೆ ಹಕ್ಕಿಗಳಿಗೆ ಆಶ್ರಯ ನೀಡುವ ಜಿಲ್ಲೆಯ ಮಹತ್ವದ ಪಕ್ಷಿಧಾಮವಾಗಿದೆ.  ಪಕ್ಷಿಸಂಕುಲಕ್ಕೆ ಅಗತ್ಯವಿರುವ ವಾತಾವರಣವು ಇಲ್ಲಿರುವುದರಿಂದ ವಿದೇಶದ ಪಕ್ಷಿಗಳು ಸಹ ವಲಸೆಗಾಗಿ,ವಿಹಾರಕ್ಕಾಗಿ ಇಲ್ಲಿ ಬರುತ್ತಿವೆ. ಪಕ್ಷಿಗಳ ಬಗೆ ಬಗೆ ಬಣ್ಣ,  ವಿಧ ವಿಧ ವಿನ್ಯಾಸಗಳನ್ನು ಇಲ್ಲಿ ನೋಡಿಯೇ ಆನಂದಿಸಬೇಕು. ವಿದೇಶದ ಪಕ್ಷಿಗಳಿಗೆ ಇಲ್ಲಿ ಆಕರ್ಷಣೆ ಇರುವಾಗ ಈ ದೇಶೀಯರು ಆಕರ್ಷಿತರಾಗದಿದ್ದರೆ ಆಶ್ಚರ್ಯವೇ  ಸರಿ.