ಕರ್ನಲ್ ಹಿಲ್

ದೂರ ಎಷ್ಟು?
ತಾಲೂಕು              : ಹೊನ್ನಾವರ
ತಾಲೂಕಿನಿಂದ       : ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೯೦ ಕಿ.ಮೀ

 

ಯಕ್ಷಗಾನ ಕಲೆ, ಉತ್ತರ ಕನ್ನಡ

ಹೊನ್ನಾವರದಿಂದ ಕುಮಟಾಕ್ಕೆ ಹೋಗುವ ಹೆದ್ದಾರಿಯಲ್ಲಿ ಬಲಭಾಗದ ಗುಡ್ಡದತ್ತ ಕಣ್ಣು ಹಾಯಿಸಿದರೆ, ಮುಗಿಲೆತ್ತರಕ್ಕೆ ನಿಂತ ಕಲ್ಲು ಕಂಬವೊಂದು ಗಮನ ಸೆಳೆಯುತ್ತದೆ. ಇದೇ ಕರ್ನಲ್ ಹಿಲ್.

ಬ್ರಿಟೀಷ ಸೈನ್ಯಾಧಿಕಾರಿ ಕ್ಲೆಮೆಂಟ್ ಡಬ್ರೆಸ್ ಹಿಲ್ ಎಂಬಾತನ ಸ್ಮರಣಾರ್ಥ ನಿಲ್ಲಿಸಿದ ಈ ವೀರ ಕಂಬವು, ಆತನ ಹೋರಾಟವನ್ನಷ್ಟೆ ಅಲ್ಲ, ಅವನ ಮುದ್ದಿನ ನಾಯಿಯೊಂದರ ಸಾವಿನ ಕಥೆಯನ್ನು ಹೇಳುತ್ತದೆ. ಸಮುದ್ರ ತೀರದಿಂದ ಎತ್ತರದಲ್ಲಿರುವ ಇದು ಸೂರ್ಯಾಸ್ತದ ಸುಂದರ ದೃಶ್ಯವನ್ನು ಸವಿಯುವ ತಾಣವಾಗಿದೆ.

ಇವೇ ಅಲ್ಲದೇ ತಾಲೂಕಿನ ಸಮೀಪದ ಬಸವರಾಜ ದುರ್ಗ, ಗುಂಡಬಾಳದ ಪ್ರಸಿದ್ಧ ಮುಖ್ಯ ಪ್ರಾಣ ಶ್ರೀ ಲಕ್ಷ್ಮೀ ವೆಂಕಟೇಶ ದೇವಾಲಯ  ಮೊದಲಾದವು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. ಹೊನ್ನಾವರದಿಂದ ೧೬ ಕಿ.ಮೀ. ದೂರವಿರುವ ವಲ್ಕಿಯಲ್ಲಿ ಐತಿಹಾಸಿಕ ಪ್ರಸಿದ್ಧವಾದ ದರ್ಗಾವೂ  ಇದೆ.

 

ಸೇಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್, ಚಂದಾವರ :

ದೂರ ಎಷ್ಟು ?
ತಾಲೂಕು : ಹೊನ್ನಾವರ
ತಾಲೂಕಿನಿಂದ : ೧೭  ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦೨ಕಿ.ಮೀ

೧೬೭೮ರಲ್ಲಿ ಕಟ್ಟಿದ ಸೇಂಟ್‌ಫ್ರಾನ್ಸಿಸ್ ಝೇವಿಯರ್ ಚರ್ಚ್ ಚಂದಾವರದಲ್ಲಿದೆ.  ಸೀಮೆಯ ಕ್ರೈಸ್ತರೆಲ್ಲ ಹರಕೆ ಹೊತ್ತುಕೊಳ್ಳುವ ಪ್ರಸಿದ್ಧ ಚರ್ಚ್ ಇದು. ಪ್ರತಿ ವರ್ಷ ಡಿಸೆಂಬರ ೩ ರಂದು ಇಲ್ಲಿ ವಾರ್ಷಿಕ ಹಬ್ಬ ನಡೆಯುತ್ತದೆ.

ಇಕ್ಕೇರಿ ನಾಯಕರ ಕಾಲದಲ್ಲಿ ಘಟ್ಟದ ಕೆಳಗಿನ ಐದು ಸೀಮೆಗಳಲ್ಲಿ ಚಂದಾವರವೂ ಒಂದು ಸೀಮೆಯಾಗಿತ್ತು.  ಹಳೆಯ ಕೋಟೆಯೊಂದು ಇಲ್ಲಿದೆ.

 

ತೂಗು ಸೇತುವೆ ಕರ್ಕಿ

ದೂರ ಎಷ್ಟು ?
ತಾಲೂಕು : ಹೊನ್ನಾವರ
ತಾಲೂಕಿನಿಂದ : ೪  ಕಿ.ಮೀ
ಜಿಲ್ಲಾ ಕೇಂದ್ರದಿಂದ :೮೭ ಕಿ.ಮೀ

ಕರ್ಕಿಯಲ್ಲಿ ಆಕರ್ಷಕವಾದ ತೂಗುಸೇತುವೆಯೊಂದು ಇದೆ. ಪಾವಿನಕುರ್ವಾ ನಡುಗಡ್ಡೆ ಹಾಗೂ ಕರ್ಕಿಯ ನಡುವೆ ಇದು ಸಂಪರ್ಕವನ್ನು ಕಲ್ಪಿಸುತ್ತದೆ.

 

ಭಟ್ಕಳ

ದೂರ ಎಷ್ಟು?
ತಾಲೂಕು : ಭಟ್ಕಳ
ತಾಲೂಕಿನಿಂದ : ೧೮ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೧೪ ಕಿ.ಮೀ

 

ಮುರ್ಡೇಶ್ವರ

 

ಭಟ್ಕಳ ಬಂದರಿನಲ್ಲಿ ಮೀನು ಮಾರುತ್ತಿರುವ ದೃಶ್ಯ.

ಹೊನ್ನಾವರದಿಂದ ಭಟ್ಕಳ ಕಡೆಗೆ ಸಾಗುವಾಗ ಮಾರ್ಗ ಮಧ್ಯೆ ಹೆಬ್ಬಾಗಿಲೊಂದು ಪ್ರವಾಸಿಗರನ್ನು ಮುರ್ಡೇಶ್ವರಕ್ಕೆ ಸ್ವಾಗತಿಸುತ್ತದೆ. ಇಲ್ಲಿ ಏಷ್ಯಾದಲ್ಲಿಯೇ ಎರಡನೇಯದು ಎನ್ನಲಾಗುವ ಅತೀ ಎತ್ತರದ ಶಿವನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ನಮ್ಮೊಳಗಿನ ಏಕಾಂತದ ದಿವ್ಯಾನುಭೂತಿಯನ್ನು ಜಾಗೃತಗೊಳಿಸಿ ಮನೋಲ್ಲಾಸಹೊಂದಲು ಮುರ್ಡೇಶ್ವರ ಉತ್ತಮ ತಾಣ. ಸಮುದ್ರದ ಅಲೆಗಳಿಗೆ ಮೈ ಚಾಚಿ ನಿಂತಿರುವ ಗುಡ್ಡದ ಮೇಲೆ ಬೃಹತ್ತಾದ ಶಿವನ ಮೂರ್ತಿ ಇದೆ. ವಿರಾಮವೇ ಇಲ್ಲದಂತೆ ಬಂಡೆಗಳಿಗೆ ಬಡಿದು ಮರಳುವ ಅಲೆಗಳ ಸುಂದರ ತೀರ , ಪುರಾಣದ ಕಥೆ ಹೇಳುವ ಸುಂದರ ಮೂರ್ತಿಗಳು ಇಲ್ಲಿನ ಆಕರ್ಷಣೆಯಾಗಿವೆ. ಪೌರಾಣಿಕ ಹಿನ್ನೆಲೆಯಿರುವ ಶಿವ ದೇವಾಲಯ ಇಲ್ಲಿನ ವಿಶೇಷ.

 

ಹಾಡುವಳ್ಳಿಜೈನ ತೀರ್ಥಂಕರರ ಮೂರ್ತಿಗಳು

ದೂರ ಎಷ್ಟು?
ತಾಲೂಕು           : ಭಟ್ಕಳ
ತಾಲೂಕಿನಿಂದ    : ೨೧ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೩೬ ಕಿ.ಮೀ

 

ಜುಮ್ಮಾ ಮಸೀದಿ ಭಟ್ಕಳ

ಹಾಡುವಳ್ಳಿ ಸಾಳುವ ರಾಜವಂಶದವರ ರಾಜಧಾನಿಯಾಗಿತ್ತು. ಇಲ್ಲಿ ಸುಮಾರು ಅರ್ಧ ಮೀಟರ್ ಎತ್ತರದ ೨೪ ಜೈನ ತೀರ್ಥಂಕರರ ಸಾಲು ಮೂರ್ತಿಗಳಿವೆ. ಯಕ್ಷಿ, ಪದ್ಮಾವತಿ ,ಜೈನ ಸರಸ್ವತಿ ಹಾಗೂ ಕುದುರೆ ಮೇಲೆ ಕುಳಿತಿರುವ ಬ್ರಹ್ಮನ ಕಂಚಿನ ವಿಗ್ರಹ ಈ ಬಸದಿಯಲ್ಲಿವೆ.ಇಲ್ಲಿ ಚಂದ್ರಗಿರಿ ಹಾಗೂ ಇಂದ್ರಗಿರಿ ಎಂಬ ಎರಡು ಗುಡ್ಡಗಳಿದ್ದು, ಚಂದ್ರಗಿರಿಯ vಡಿಯಲ್ಲಿ ವಿಜಯನಗರ ಕಾಲದ ಚಂದ್ರನಾಥ ಬಸದಿ ಇದೆ.

ಇವೇ ಅಲ್ಲದೆ ಭಟ್ಕಳದಲ್ಲಿರುವ ಜೈನ ಬಸದಿಗಳಲ್ಲಿ ನಗರದ ಮಧ್ಯದಲ್ಲಿರುವ ಪಾರ್ಶ್ವನಾಥ ಬಸದಿ ಗಮನಾರ್ಹವಾದುದು. ಇದು ರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ ನಿರ್ಮಾಣವಾಯಿತು ಎನ್ನಲಾಗುತ್ತದೆ. ಕಾಯ್ಕಿಣಿಯಲ್ಲಿರುವ ಪಾರ್ಶ್ವನಾಥ ಬಸದಿ, ಸೋಡಿಗದ್ದೆ ಮಹಾಸತಿ ದೇವಾಲಯ, ಕಡವಿನಕಟ್ಟಾ ದೇವಾಲಯ, ಮಾರುತಿ ಗುಡಿ, ಅಮರಲಿಂಗ ದೇವಾಲಯ ಇವೆಲ್ಲವೂ ಆಸ್ತಿಕರ ಶೃದ್ಧಾ ಕೇಂದ್ರಗಳಾಗಿವೆ.

ಅಂತೆಯೇ ಭಟ್ಕಳ ಪಟ್ಟಣದಲ್ಲಿರುವ ಜುಮ್ಮಾ ಮಸೀದಿ ಮುಸ್ಲೀಮರ ಮುಖ್ಯ ಮಸೀದಿಗಳಲ್ಲಿ ಒಂದಾಗಿದೆ. ತಾಲೂಕಿನ ಚಿತ್ರಾಪುರದಲ್ಲಿರುವ ಮಠ ಹಾಗೂ ವೆಂಕಟಾಪುರ ನದಿ ತೀರವೂ ಕೂಡ ಪ್ರವಾಸಿಗರ ಮನ ತಣಿಸುವ ಸುಂದರ ತಾಣಗಳಾಗಿವೆ.

 

ಶಿರಸಿ

ಬನವಾಸಿ

ದೂರ ಎಷ್ಟು

ತಾಲೂಕು: ಶಿರಸಿ
ತಾಲೂಕಿನಿಂದ :  ೨೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೪೧ ಕಿ.ಮೀ

ವರದಾ ನದಿ ತಟದ ಬನವಾಸಿ ಕನ್ನಡದ ಮೊದಲ ರಾಜಧಾನಿ. ಇದು ಕದಂಬ ರಾಜ ಮಯೂರವರ್ಮ ಆಳಿದ ನೆಲ. ಮಧು (ಜೇನುತುಪ್ಪ) ಬಣ್ಣದ ಶಿವಲಿಂಗ ಇಲ್ಲಿರುವುದರಿಂದ ಮಧುಕೇಶ್ವರ ದೇವಸ್ಥಾನ ಎಂಬ ಹೆಸರು ಬಂದಿದೆ.  ಈ ದೇವಸ್ಥಾನದಲ್ಲಿನ ನಂದಿ ವಿಗ್ರಹ ಬಹು ಪ್ರಸಿದ್ಧ.  ಪಕ್ಕದಲ್ಲಿ ಪಾರ್ವತಿ ಮಂದಿರ ಕೂಡ ಇದೆ. ಕರಿಕಲ್ಲಿನಿಂದ ನಯವಾಗಿ ಕೆತ್ತಲಾದ ಕಲ್ಲು ಮಂಚ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿ. ಸೋದೆ ಅರಸ ರಘುನಾಥ ನಾಯಕನು ದೇವರ ವಸಂತೋತ್ಸವದ ನೆನಪಿಗೆ ಅರ್ಪಿಸಿದನೆಂಬುದು ಇತಿಹಾಸ.  ಸೋದೆಯ ಇನ್ನೋರ್ವ ರಾಜ ರಾಮಚಂದ್ರ ನಾಯಕನು ದಕ್ಷಿಣ ಭಾರತದಲ್ಲ್ಲೇ ಅತೀ ಎತ್ತರದ ಮಹಾ ರಥ ಮಾಡಿಸಿಕೊಟ್ಟಿದ್ದು ಇಂದಿಗೂ ಇಲ್ಲಿ ಕಾಣಬಹುದು. ಬನವಾಸಿ ದೇಗುಲದ ಪಕ್ಕವೇ ಕಲಾವಿದ ಶ್ರೀಪಾದ ಪುರೋಹಿತರ ‘ಆರ್ಟ ಗ್ಯಾಲರಿ’ ಇದೆ. ಪ್ರತಿ ವರ್ಷವೂ ರಾಜ್ಯ ಸರ್ಕಾರ ಕದಂಬರ ರಾಜ್ಯದ ನೆನಪಿಗಾಗಿ ಕದಂಬೋತ್ಸವವನ್ನು ಇಲ್ಲಿ ಆಚರಿಸುತ್ತಿದೆ.  ಅಂದು ನಾಡಿನ ಪ್ರಸಿದ್ಧ ಲೇಖಕರಿಗೆ ಅಲ್ಲಿಯೇ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

“ಮರಿ ದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” – ಪಂಪ

 

ಸೋಂದಾ ಮಠ :

ದೂರ ಎಷ್ಟು?
ತಾಲೂಕು : ಶಿರಸಿ
ತಾಲೂಕಿನಿಂದ :  ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೩೯ ಕಿ.ಮೀ.

ಇದು ಒಂದು ಐತಿಹಾಸಿಕ ಸ್ಥಳ ಹಾಗೂ ಯಾತ್ರಾ ಸ್ಥಳವೂ ಹೌದು. ಸೋಂದಾ ಅಥವಾ ಸುಧಾಪುರ ಸೋದೆಯ ಅರಸರ ರಾಜಧಾನಿಯಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಕ್ರಿ.ಶ ೧೫೫೫ ರಿಂದ ೧೭೬೩ ರವರೆಗೆ ಸೋಂದಾ ಅರಸರ ಆಳ್ವಿಕೆ ನಡೆದು ತನ್ನ ವೈಭವವನ್ನು ದೇಶ-ವಿದೇಶಗಳಲ್ಲಿ ಮೆರೆದಂತಹ ಸ್ಥಳ. ಇಲ್ಲಿಗೆ ಶಿರಸಿ-ಯಲ್ಲಾಪುರ ಮಾರ್ಗ ಹಾಗೂ ಶಿರಸಿ-ಹುಲೇಕಲ್ ಮಾರ್ಗದಲ್ಲಿ ಕೂಡ ಹೋಗಬಹುದಾಗಿದೆ.  ಇಲ್ಲಿಯ ಕೆರೆಗಳ ಸಂಪರ್ಕ ಜಾಲ ಅಧ್ಯಯನಕ್ಕೆ ಕೂಡ ಬಹಳ ಅನುಕೂಲವನ್ನು ಒದಗಿಸುತ್ತದೆ. ಹುಲೇಕಲ್ ಲಕ್ಷ್ಮೀನಾರಾಯಣ ದೇವಾಲಯ, ಸೋದೆ ಕೋಟೆ, ಮುತ್ತಿನ ಕೆರೆ, ಹಳೆಯೂರು ಶಂಕರ ನಾರಾಯಣ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಬಹಳ ಕಲಾತ್ಮಕವಾಗಿದೆ. ಇಲ್ಲಿರುವ ಜೈನ ಮಠಗಳು ಸೋದೆ ಅರಸರ ಐತಿಹಾಸಿಕ ಪಳೆಯುಳಿಕೆಗಳು. ಸೋಂದಾ ಸ್ವಾದಿ ಜೈನ ಮಠ, ಸೋದೆ ವಾದಿರಾಜ ಮಠ, ಸೋಂದಾ ಸ್ವರ್ಣವಲ್ಲಿ ಮಠ, ಗದ್ದಿಗೆಯ ಮಠ ಹಾಗೂ ಮಹಾಂತೀರ ಮಠಗಳೆಂಬ ಪಂಚ ಮಠಗಳು ಈ ಕ್ಷೇತ್ರದಲ್ಲಿ ದರ್ಶನೀಯವಾಗಿದೆ.

 

ಬೆಣ್ಣೆಹೊಳೆ ಜಲಪಾತ

ದೂರ ಎಷ್ಟು?
ತಾಲೂಕು : ಶಿರಸಿ
ತಾಲೂಕಿನಿಂದ :  ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೮೯ ಕಿ.ಮೀ

ಶಿರಸಿ ಕುಮಟಾ ಮುಖ್ಯ ರಸ್ತೆಯಿಂದ ೬ ಕಿ.ಮೀ ದೂರದಲ್ಲಿ ಬೆಣ್ಣೆಹೊಳೆ ಜಲಪಾತ ಇದೆ. ಜಲಗದ್ದೆಯಿಂದ ೧ ಕಿ.ಮೀ ಒಳಗಡೆ ಈ ಬೆಣ್ಣೆಹೊಳೆಯ ಮೂಲವಿದ್ದು, ಕುಮಟಾ ತಾಲೂಕಿನ ಕಳವೆ ಎಂಬಲ್ಲಿ ಅಘನಾಶಿನಿ ನದಿಗೆ ಕೂಡುತ್ತದೆ. ಈ ಜಲಪಾತವು ಸುಮಾರು ೨೦೦ ಅಡಿ ಎತ್ತರದಿಂದ ಧುಮುಕುತ್ತಿದ್ದು ನೋಡಲು ಮನೋಹರವಾಗಿದೆ. ಹಸಿರು ಗಿಡಗಳ ಮಧ್ಯೆ ಸುಮಾರು ೬ ಕಿ,.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿ ಈ ಜಲಪಾತವನ್ನು ತಲುಪಬೇಕು. ಅಪಾರ ಸಸ್ಯ ಸಂಪತ್ತನ್ನು ಹೊಂದಿರುವ ಈ ಪ್ರದೇಶದಲ್ಲಿ ೧ ಕಿ.ಮೀ ಅಂತರದಲ್ಲಿ ಜನವಸತಿ ಪ್ರದೇಶವಿದೆ. ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಜನವರಿ ತಿಂಗಳಲ್ಲಿ ಈ ಜಲಪಾತಕ್ಕೆ ಭೇಟಿ ನೀಡಿದರೆ ನಾವು ಜಲಪಾತದ ನಿಸರ್ಗ ಸೌಂದರ್ಯವನ್ನು ಸವಿಯಬಹುದು.

 

ಸಹಸ್ರಲಿಂಗ :

ದೂರ ಎಷ್ಟು?
ತಾಲೂಕು : ಶಿರಸಿ
ತಾಲೂಕಿನಿಂದ :  ೧೭ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೩೫ ಕಿ.ಮೀ.

ಶಿರಸಿಯಲ್ಲಿ ಶಾಲ್ಮಲಾ ನದಿ ಹರಿದಿದ್ದು, ಈ ನದಿಯ ನಡುವೆ ಸಹಸ್ರಲಿಂಗಗಳಿವೆ. ದಟ್ಟ ಕಾನನಗಳ ಮಧ್ಯೆ ನದಿಯ ನೀರಿನ ನಡುವೆ ಸಾವಿರಾರು ಲಿಂಗಗಳಿದ್ದುದರಿಂದ ಸಹಸ್ರಲಿಂಗ ಎಂದೇ ಹೆಸರಾಗಿದೆ.

ವಿವಿಧ ಗಾತ್ರದ, ವಿವಿಧ ವಿನ್ಯಾಸದ, ಲಿಂಗಗಳನ್ನು ಇಲ್ಲಿ ಕಾಣಬಹುದು. ಇದು ಪುಣ್ಯ ಕ್ಷೇತ್ರವೂ ಆಗಿದ್ದು ಶಿವರಾತ್ರಿಯ ದಿನ ಸಹಸ್ರಾರು ಭಕ್ತರು ಆಗಮಿಸಿ ಈ ಲಿಂಗಗಳ ದರ್ಶನವನ್ನು ಪಡೆದು ಪುನೀತರಾಗುತ್ತಿದ್ದಾರೆ. ಸೋದೆಯಿಂದ ಕೇವಲ ೫ ಕಿ.ಮೀ ದೂರದಲ್ಲಿ ಇದ್ದು ಪ್ರವಾಸೀ ಕ್ಷೇತ್ರವೂ ಆಗಿದೆ.

 

ಶಿವಗಂಗೆ ಜಲಪಾತ

ದೂರ ಎಷ್ಟು?
ತಾಲೂಕು : ಶಿರಸಿ
ತಾಲೂಕಿನಿಂದ :  ೨೪ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೪೩ ಕಿ.ಮೀ

ಈ ಜಲಪಾತವು ಗಣೇಶ ಫಾಲ್ ಹೊಳೆಯಿಂದ ಆಗಿದೆ.  ಗುಡ್ಡದ ಕರಿಬಂಡೆಗಳ ಸಂಧಿಯಿಂದ ನೀರು ಜಲಪಾತವಾಗಿ ಧುಮುಕುತ್ತದೆ. ಶಿವನ ಜಟೆಯಿಂದ ಇಳಿಯುವ ಗಂಗೆಯಂತೆ ಕಾಣುವುದುರಿಂದ ‘ಶಿವಗಂಗೆ ಜಲಪಾತ’ ಎಂದು ಕರೆಯಲಾಗಿದೆ.

 

ಮಾರಿಕಾಂಬಾ ದೇವಾಲಯ

ದೂರ ಎಷ್ಟು?
ತಾಲೂಕು : ಶಿರಸಿ
ತಾಲೂಕಿನಿಂದ :  ೨೪ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೪೩ ಕಿ.ಮೀ

ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಪ್ರಥಮತಃ ಕ್ರಿ.ಶ ೬೮೯ ರಲ್ಲಿ ಜರುಗಿತು. ಆಗ ಶಿರಸಿಯು ಒಂದು ಕುಗ್ರಾಮವಾಗಿತ್ತು. ಇಲ್ಲಿಯ ಒಂದು ಕೆರೆಯಲ್ಲಿ ಸಿಕ್ಕಿತೆಂದು ಹೇಳಲಾಗುವ ಶ್ರೀದೇವಿಯ ಕಟ್ಟಿಗೆಯ ವಿಗ್ರಹವನ್ನು ಸ್ಥಾಪಿಸಲು ಭಕ್ತರು ಆಗ ವಿಜಯ ನಗರದ ಸಾಮ್ರಾಜ್ಯದ ಸಾಮಂತರಾಗಿದ್ದ ಸೋಂದಾ ರಾಜ್ಯದ ಮಹಾ ಪ್ರಭುಗಳಲ್ಲಿ ವಿನಂತಿಸಿದಾಗ ಅರಸರಾದ ಶ್ರೀ ಇಮ್ಮಡಿ ಸದಾಶಿವರಾಯರು ಶಿರಸಿಯಲ್ಲಿ ಗ್ರಾಮ ದೇವತೆಯಾಗಿ ಶ್ರೀ ದೇವತೆಯನ್ನು ಪ್ರತಿಷ್ಠೆ ಮಾಡಲು ಅನುಮತಿ ನೀಡಿದರು. ನೂರಾರು ವರ್ಷಗಳವರೆಗೆ ಊರಿನ ಹಿರಿಯರೇ ಮುಂದಾಳುಗಳಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ಶಿರಸಿಯಲ್ಲಿ ಪ್ರತಿ ೨ ವರ್ಷಕ್ಕೊಮ್ಮೆ ಕರ್ನಾಟಕದಲ್ಲಿಯೇ ಅತೀ ದೊಡ್ಡ ಜಾತ್ರೆಯಾದ ಶ್ರೀ ಮಾರಿಕಾಂಬಾ ಜಾತ್ರೆಯು ೯ ದಿನಗಳ ವರೆಗೆ ಜರುಗುತ್ತದೆ. ಲಕ್ಷಾಂತರ ಜನರು ಈ ಜಾತ್ರೆಯಲ್ಲಿ ದೇವಿಯ ದರ್ಶನವನ್ನು ಪಡೆಯುತ್ತಾರೆ. ಈ ದೇವಸ್ಥಾನದಲ್ಲಿ ನಿತ್ಯ ಸಾವಿರಾರು ಭಕ್ತರು ದೇವಿಯ ಅನ್ನ ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ.

 

ಶ್ರೀ ಕ್ಷೇತ್ರ ಮಂಜುಗುಣಿ

ದೂರ ಎಷ್ಟು?
ತಾಲೂಕು : ಶಿರಸಿ
ತಾಲೂಕಿನಿಂದ :  ೨೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೯೩ ಕಿ.ಮೀ

ಶಿರಸಿಯಿಂದ ಕುಮಟಾ ಮಾರ್ಗದಲ್ಲಿರುವ ಶ್ರೀ ಕ್ಷೇತ್ರ ಮಂಜುಗುಣಿ ಉತ್ತರ ಕನ್ನಡ ಜಿಲ್ಲೆಯ ಒಂದು ಪುರಾತನ ಹಾಗೂ ಒಂದು ಪವಿತ್ರ ಯಾತ್ರಾ ಸ್ಥಳ.

ಸಹ್ಯಾದ್ರಿಯ ಮಡಿಲಲ್ಲಿಯ ರಮಣೀಯ ತಾಣ. ಉಡುಪಿಯ ಶ್ರೀ ವಾದಿರಾಜ ಸ್ವಾಮಿಗಳು ರಚಿಸಿದ ತೀರ್ಥಪ್ರಬಂಧದದಲ್ಲಿ ಶ್ರೀ ಕ್ಷೇತ್ರದ ವರ್ಣನೆ ಇದೆ.

ವಿಜಯನಗರ ಕಾಲಕ್ಕಿಂತಲೂ ಪೂರ್ವದ್ದಾಗಿರಬಹುದಾದ ಶೈಲಿಯುಳ್ಳ ಶ್ರೀ ವೆಂಕಟರಮಣ ದೇವಾಲಯವು ಅನೇಕ ಸುಂದರ ಕೆತ್ತನೆಗಳನ್ನೊಳಗೊಂಡಿದೆ. ಮುಖ ಮಂಟಪ, ನವರಂಗ, ಅರ್ಧಮಂಟಪ ಮತ್ತು ಗರ್ಭಗ್ರಹಗಳನ್ನು ಹೊಂದಿದೆ. ಅಧ್ಯಯನಕ್ಕೆ ವಿಷಯವಾದ ಶೇಷಶಯನ, ಬಲದಂತ ಮುರಿದ ಗಣಪತಿ ವಿಗ್ರಹಗಳು ಸಂಶೋಧಕರ ಆಸಕ್ತಿಯನ್ನು ಕೆರಳಿಸುವಂತಹದು. ನವರಂಗದ ಮೊಗಸಾಲೆಯ ಹೊರ ಪ್ರಾಕಾರಾಗಳ ಮೇಲೆ ರಾಮಾಯಣದ ಕೆತ್ತನೆ, ಕಂಬಗಳ ಮೇಲಿನ ವಟಪತ್ರಶಾಹಿ ಕೃಷ್ಣ, ಗೋಪಾಲಕೃಷ್ಣ, ತ್ರಿ-ಭಂಗಿಕೃಷ್ಣ, ಅನ್ನ ಲಕ್ಷ್ಮೀ, ಧಾನ್ಯಲಕ್ಷ್ಮೀ ಅಲ್ಲದೇ ವಿವಿದ ಮಾಟದ ಮುಖ ಮಂಟಪಗಳ ಕೆತ್ತನೆಯು ಸೊಗಸಾಗಿ ಮೂಡಿರುತ್ತದೆ. ಧಾರ್ಮಿಕ ಹಾಗು  ವೈಜ್ಞಾನಿಕ  ಭದ್ರಬುನಾದಿಯ ಮೇಲೆ ಶ್ರೀ ವೆಂಕಟರಮಣ ದೇವಾಲಯನ್ನು ರಚಿಸಲಾಗಿದೆ. ಚೈತ್ರ ಶುದ್ಧ ಚತುರ್ದಶಿ ಸ್ಥಿರವಾರ ಮಧ್ಯಾಹ್ನ ಶ್ರೀ ದೇವರ ಪ್ರತಿಷ್ಠೆಯಾಗಿದ್ದು, ಆ ದಿನ ಶ್ರೀ ವರ್ಧಂತಿ ಉತ್ಸವವು ನಡೆಯುತ್ತದೆ. ಮಾರನೇ ದಿನ ಮಹಾ ರಥೋತ್ಸವ ನಡೆಯುವುದು

 

ಸಿದ್ದಾಪುರ

ದೂರ ಎಷ್ಟು?
ತಾಲೂಕು : ಸಿದ್ದಾಪುರ
ತಾಲೂಕಿನಿಂದ :  ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ :೧೩೮ ಕಿ.ಮೀ

ವಿಜಯನಗರದ ಅರಸರ ಸಾಮಂತರಾದ ಬಿಳಗಿ ಅರಸರು ಕ್ರಿ.ಶ. ೧೭೬೩ರ ವರೆಗೂ ಸಿದ್ಧಾಪುರವನ್ನು ಆಳಿದ್ದು ಇತಿಹಾಸದಲ್ಲಿ ಉಲ್ಲೇಖವಾಗಿದೆ.  ಈ ರಾಜ ಮನೆತನದ ಮೂಲ ಪುರುಷ ‘ಅಂಡಣ’ನೆಂದು ಹೇಳಲಾಗುತ್ತದೆ.  ಇವರು ಮೂಲತಃ ಜೈನ ಧರ್ಮೀಯರು.

ಇವರು ಅಂದು ನಿರ್ಮಿಸಿದ ಜೈನ ಬಸದಿ ಹಾಗೂ ಅಗತ್ಯ ಬಿದ್ದಾಗ ವೈರಿಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿಕೊಂಡ ‘ಗೋಲ ಬಾವಿ’ ನೋಡುವುದಕ್ಕೆ ಅದ್ಭುತವಾಗಿದೆ.  ಆಗಾಗ್ಗೆ ಪುರಾತತ್ವ ಇಲಾಖೆಯಿಂದ ಜೀರ್ಣೋದ್ಧಾರ ಕಾರ್ಯ ನಡೆಯುವುದರಿಂದ ಇನ್ನೂ ಅಂದಿನ ಹೊಳಪನ್ನೇ ಹೊಂದಿದೆ.