“ಕರ್ನಾಟಕದ ಕಾಶ್ಮೀರ” ಭಾರತದ ಸ್ವಿಟ್ಜರ‍್ಲೆಂಡ್” ಎಂದು ಮುಂತಾಗಿ ಪ್ರಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯು ನೈಸರ್ಗಿಕವಾಗಿ ಸೌಂದರ್ಯಾತಿಶಯದಿಂದ ಕೂಡಿದೆ. ಕಣ್ಮನ ತುಂಬುವ ಕಾರವಾರದ ಕಡಲು, ನೋಡುಗರ ಮೈ ಮರೆಸುವ ಸಹ್ಯಾದ್ರಿ ಶ್ರೇಣಿ, ಮನದಾನಂದಕರ ಮಾಗೋಡು ಜಲಪಾತ ಮೊದಲಾದವುಗಳು ಈ ಜಿಲ್ಲೆಯ ಸೊಬಗಿನ ಸೆರೆಮನೆಗಳು. ಆದರೂ ಆಂಗ್ಲ ಕಥೆಯೊಳಗಿನ ಸಿಂಡ್ರೆಲ್ಲಾಳಂತೆ ಅನೇಕ ವರ್ಷಗಳಿಂದ ಉಪೇಕ್ಷಿತವಾಗಿದ್ದ ಜಿಲ್ಲೆ ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸೋದ್ಯಮದಿಂದ ಪ್ರಸಿದ್ಧಿಹೊಂದುತ್ತಿದೆ.

ಪೌರಾಣಿಕ ಹಿನ್ನೆಲೆ :

ಸ್ಕಂದ ಪುರಾಣದಲ್ಲಿ ಬರುವ “ಭಾರ್ಗವಸೃಷ್ಟಿ” ಕಥೆಯು ಈ ಜಿಲ್ಲೆಯ ಕರಾವಳಿ ಪ್ರದೇಶದ ಹುಟ್ಟನ್ನು ಹೇಳುತ್ತದೆ. ಕ್ಷತ್ರಿಯರನ್ನೆಲ್ಲ ಗೆದ್ದು ಬ್ರಾಹ್ಮಣರಿಗೆ ದಾನವಾಗಿ ನೀಡಿದ ಪರಶುರಾಮನು ತನ್ನ ವಾಸಕ್ಕಾಗಿ ಪರಶು (ಕೊಡಲಿ)ವನ್ನೆಸೆದು ಸಮುದ್ರವನ್ನು ಹಿಂದೆ ಸರಿಸಿ ಕರಾವಳಿಯನ್ನು ಪಡೆದನು ಎಂಬುದು ಕಥೆ.

ಐತಿಹಾಸಿಕ ಹಿನ್ನೆಲೆ :

ದಕ್ಷಿಣಭಾರತವು ಮೌರ‍್ಯಸಾಮ್ರಾಜ್ಯಕ್ಕೊಳಪಟ್ಟ ಸಮಯದಲ್ಲಿ ಈ ಜಿಲ್ಲೆಯೂ ಅದರಲ್ಲಿ ಸೇರ್ಪಡೆಯಾಗಿತ್ತು. ಶಾತವಾಹನರು ಹಾಗೂ ಪಲ್ಲವರು ಈ ಭೂಪ್ರದೇಶವನ್ನು ಆಗ ಆಳುತ್ತಿದ್ದರು. ಬನವಾಸಿಯಲ್ಲಿ ಕಂಡುಬಂದ ಶಾತವಾಹನರ ಕಾಲದ ಪುರಾತನ ಅವಶೇಷಗಳು ಈ ಅಂಶವನ್ನು ತಿಳಿಸಿದೆ. ಕ್ರಿ.ಶ.ಸುಮಾರು ೭೮ನೇ ಇಸ್ವಿಯಲ್ಲಿ ಭೂತಾಳಪಾಂಡ್ಯನು ಗೋಕರ್ಣಮಂಡಲಾಧೀಶ್ವರ ಎಂಬ ಬಿರುದು ಧರಿಸಿ ಈಜಿಲ್ಲೆಯ ಕೆಲವು ಭೂಪ್ರದೇಶವನ್ನು ಆಳಿದನು.ಪಾಂಡ್ಯರು ಕದಂಬ ಹಾಗೂ ಶಾತವಾಹನರ ಸಾಮಂತ ಅರಸರಾಗಿ ಕ್ರಿ.ಶ.೩೯೩ ರವರೆಗೆ ಆಳಿದವರಾಗಿದ್ದಾರೆ. ಕರ್ನಾಟಕದಲ್ಲಿಯಂತೆ ಈ ಜಿಲ್ಲೆಯಲ್ಲಿ ಕದಂಬರ ಆಳ್ವಿಕೆ ಆರಂಭವಾದುದು ಕ್ರಿ.ಶ.ಸುಮಾರು ೨೮೦ ರಿಂದ. ಹೀಗೆ ಬೇರೆಬೇರೆ ಅರಸರ ಆಳ್ವಿಕೆಯಿಂದ ಮುಂದುವರಿದು ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಈ ಜಿಲ್ಲೆಯ ಘಟ್ಟದ ಸೀಮೆಯನ್ನು ಸ್ವಾದಿ ಅರಸರು ಹಾಗೂ ಕರಾವಳಿ ಪ್ರದೇಶವನ್ನು ಬೀದನೂರಿನ ನಾಯಕರು ಆಳಿದರು ಎಂದು ದಾಖಲೆಗಳು ತಿಳಿಸುತ್ತವೆ. ಈ ಜಿಲ್ಲೆಯ ಪ್ರಥಮ ಸ್ವಾತಂತ್ರ್ಯ ವೀರನಾದ ಬೀದನೂರಿನ ಶಿವಪ್ಪ ನಾಯಕನು  ಕ್ರಿ. ಶ. ೧೬೪೫  ರಿಂದ ಕ್ರಿ.ಶ.೧೬೬೦ ರ ವರೆಗೆ ಆಳಿದನು.

ಮುಂದೆ ಸ್ವಾದಿ ಹಾಗೂ ಬೀದನೂರು ಕ್ರಿ.ಶ.೧೭೬೨ ರಲ್ಲಿ ಹೈದರಾಲಿಯ ವಶವಾಯಿತು.ಹೈದರನ ಮಗ ಟಿಪ್ಪುಸುಲ್ತಾನನನ್ನು ಕ್ರಿ.ಶ.೧೭೯೯ ರಲ್ಲಿ ಆಂಗ್ಲರು ಸೋಲಿಸಿ ಮದ್ರಾಸ್ ಇಲಾಖಾ ಆಡಳಿತಕ್ಕೆ ಒಪ್ಪಿಸಿದರು. ಕ್ರಿ.ಶ.೧೮೬೨ ರಲ್ಲಿ ಬಾಂಬೆ ಸರಕಾರದ ಆಳ್ವಿಕೆಗೆ ಒಳಪಟ್ಟು ಸ್ವತಂತ್ರಭಾರತದ ಮೈಸೂರುರಾಜ್ಯದ ವ್ಯಾಪ್ತಿಗೆ ಕ್ರಿ.ಶ.೧೯೪೭ ರಲ್ಲಿ ಒಳಪಟ್ಟಿತು.  ಬ್ರಿಟಿಷರಿಂದ  ಆಗಿದ್ದ  ಈ ಜಿಲ್ಲೆಯನ್ನು ರಾಜ್ಯಸರಕಾರವು ಕ್ರಿ.ಶ. ೧೯೭೭ ರಲ್ಲಿ ಉತ್ತರಕನ್ನಡ ಎಂದು ಹೆಸರಿಸಿತು. ಕ್ರಿ.ಶ.೧೮೦೦ ರವರೆಗೆ ಕುಂದಾಪುರವು ಈ ಜಿಲ್ಲೆಗೆ ಸೇರಿತ್ತು. ಈಗ ಅದು ಉಡುಪಿ ಜಿಲ್ಲೆಗೆ ಸೇರಿದೆ. ಹೀಗೆ ಈ ಜಿಲ್ಲೆಯು ಕಾಲಕಾಲಕ್ಕೆ ರಾಜಕೀಯ ನಕ್ಷೆಯಿಂದ ಬದಲಾಗುತ್ತ ಸಾಗಿದೆ. ಈಗ ಈ ಜಿಲ್ಲೆಯು ೧೦.೩೨೭ ಚ.ಕಿ.ಮೀ.ಕ್ಷೇತ್ರವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ. ಕರಾವಳಿ, ಮಲೆನಾಡು ಹಾಗೂ ಅರೇಮಲೆನಾಡು (ಬಯಲುಸೀಮೆ) ಪ್ರದೇಶಗಳನ್ನು ಒಳಗೊಂಡ ರಾಜ್ಯದ ಏಕೈಕ ಜಿಲ್ಲೆ ಇದು.

ಜಿಲ್ಲೆಯ ತಾಲೂಕುಗಳು :

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಹಾಗೂ ಜೊಯಿಡಾ.

ಜನಾಂಗ, ಕಲೆ, ಸಂಸ್ಕೃತಿ:

ಉತ್ತರಕನ್ನಡ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ ಮೊದಲಾದ ಧರ್ಮೀಯರು ಇದ್ದಾರೆ. ಹಿಂದುಗಳಲ್ಲೇ ಹವ್ಯಕ, ಕೊಮಾರ, ಅಂಬಿಗ, ನಾಡವರು, ನಾಮಧಾರಿ, ಕುಂಬಾರ, ಹರಕಂತರು, ಕರೇಒಕ್ಕಲಿಗ, ಪಟಗಾರ,ಹಾಲಕ್ಕಿಒಕ್ಕಲಿಗ ಆಗೇರ, ಹಳ್ಳೇರ ಹೀಗೆ ಸುಮಾರು ಐವತ್ತಕ್ಕೂ ಹೆಚ್ಚು ಜಾತಿಗಳಿವೆ. ಹಾಗಾಗಿ ಇದೊಂದು ಭಾರತದ ಭಾಗವಾದರೂ ಪುಟ್ಟ ಭಾರತವೇ ಆಗಿದೆ. ಜಾತಿಗಳು ಇರುವಂತೆ ಅವುಗಳದ್ದೇ ಆದ ವಿಭಿನ್ನ ಕಲೆ ಹಾಗೂ ಸಂಸ್ಕೃತಿಗಳೂ ಇವೆ ಎನ್ನುವುದು ಗಮನಾರ್ಹ. ಯಕ್ಷಗಾನವು ಇಲ್ಲಿನ ಪ್ರಸಿದ್ಧ ಜನಪರ ಜನಪದ ಕಲೆಯಾಗಿದೆ. ಕೋಲಾಟ, ಸುಗ್ಗಿಕುಣಿತ ಗುಮಟೆಪಾಂಗ್, ಜೋಗೀಪದ, ಸೋಬಾನೆ ಹಾಡುಗಳು ಮೊದಲಾದವುಗಳು ಈ ಜಿಲ್ಲೆಯ ಜೀವನಾಡಿಯಾಗಿವೆ.

ಬುಡಕಟ್ಟು ಜನಾಂಗಗಳು :

ಸಿದ್ಧಿ, ಕುಣಬಿ, ಗೊಂಡ, ಗೌಳಿ, ಹಾಗೂ ಹಾಲಕ್ಕಿಗರು

ಜನಸಂಖ್ಯೆ :

೨೦೦೧ ರ ಜನಗಣತಿಯಂತೆ ಜಿಲ್ಲೆಯ ಒಟ್ಟೂ ಜನಸಂಖ್ಯೆ ೧೩೫೩೬೪೪. ಇದರಲ್ಲಿ ಪುರುಷರು ೬೮೬೮೭೬ ಹಾಗೂ ಮಹಿಳೆಯರು ೬೬೬೭೬೮

ಮಳೆ :

ಸರಾಸರಿ ೨೮೩೫ ಮಿ.ಮೀ. ಗರಿಷ್ಟ ಮಳೆ ೪೦೧೫ ಮಿ.ಮೀ.( ಭಟ್ಕಳ ತಾಲೂಕು) ಹಾಗೂ ಕನಿಷ್ಟ ಮಳೆ ೧೨೯೬
( ಮುಂಡಗೋಡು ತಾಲೂಕು)

ಹವಾಮಾನ:

ಬೇಸಿಗೆಯಲ್ಲಿ ಗರಿಷ್ಟ ಉಷ್ಣಾಂಶ ೩೩ ಡಿಗ್ರಿ. ಹಾಗೂ ಚಳಿಗಾಲದಲ್ಲಿ ಕನಿಷ್ಟ ಉಷ್ಣಾಂಶ ೨೦ ಡಿಗ್ರಿ.

 

ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿಗಳು :

* ಕಾರವಾರ ಹಾಗೂ ಜೋಯಿಡಾ    –          ಕಾಳಿ ನದಿ

* ಅಂಕೋಲಾ, ಯಲ್ಲಾಪುರ   –         ಗಂಗಾವಳಿ ನದಿ (ಬೇಡ್ತಿ)

* ಕುಮಟಾ, ಸಿದ್ಧಾಪುರ      –           ಅಘನಾಶಿನಿ ನದಿ

* ಹೊನ್ನಾವರ         –       ಶರಾವತಿ ನದಿ

* ಭಟ್ಕಳ             –          ವೆಂಕಟಾಪುರ ನದಿ

* ಶಿರಸಿ              –           ವರದಾ ನದಿ

ಕಾರವಾರ

ದೂರ ಎಷ್ಟು ?
ತಾಲೂಕು           : ಕಾರವಾರ
ತಾಲೂಕಿನಿಂದ :  ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೦ ಕಿ.ಮೀ

ಮಿನಿ ವಿಧಾನಸೌಧ

ಕುಲುಕುಲು ಎಂಬ ಅನುರಣಿತ ಸ್ವರದಲ್ಲಿ ಭೋರ್ಗರೆಯುವ ಬೆಳ್ನೊರೆಯ ತೆರೆಗಳು ಮುತ್ತಿಕ್ಕುವ ಕಾರವಾರದ ಕಡಲತೀರಕ್ಕೆ ‘ಕರ್ನಾಟಕದ ಕಾಶ್ಮೀರ’ ಎಂಬ ಹೆಗ್ಗಳಿಕೆ ಇದೆ.  ವಿಶ್ವಕವಿ ರವೀಂದ್ರನಾಥ ಠಾಗೋರರು ಇಲ್ಲಿನ ಸೌಂದರ್ಯವನ್ನು ಕುರಿತು “ಕಾರವಾರದ ಚೆಲುವು ಸೌಂದರ್ಯದ ಕುರುಹು” ಎಂದು ಉದ್ಘಾರ ತೆಗೆದಿದ್ದಾರೆ. ಅವರು ತಮ್ಮ “ಗೀತಾಂಜಲಿ” ಕೃತಿ ರಚಿಸಲು ಕಾರವಾರ ಸ್ಫೂರ್ತಿಯಾಯಿತೆಂದು ಒಂದು ಕಡೆ ಉಲ್ಲೇಖಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿ  ಮಿನಿವಿಧಾನಸೌಧ ಇದೆ. ಜಿಲ್ಲಾ ಕೇಂದ್ರ ಸ್ಥಳವಾದ ಇಲ್ಲಿ ರಾಜ್ಯಸರಕಾರದ ವಿವಿಧ ಕಚೇರಿಗಳು ಸಾಲುಗಳಲ್ಲಿ ಭವ್ಯವಾಗಿ ನಿಂತಿವೆ.

 

ಕಾರವಾರ ಬಂದರು

ದೂರ ಎಷ್ಟು ?
ತಾಲೂಕು  : ಕಾರವಾರ
ತಾಲೂಕಿನಿಂದ : ೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨ ಕಿ.ಮೀ.

ಕಾರವಾರ ಬಂದರು ಒಂದು ಪ್ರಮುಖ ನೈಸರ್ಗಿಕ  ಬಂದರು.  ಇದು ಕಾರವಾರದ ಬೈತಕೋಲ್‌ನಲ್ಲಿದೆ. ದೊಡ್ಡ ದೊಡ್ಡ ಹಡಗುಗಳಲ್ಲಿ ಸರಕು ಸಾಮಗ್ರಿಗಳ ಆಮದು ಹಾಗೂ ರಪ್ತು ಈ ಬಂದರಿನಿಂದ ನಡೆಯುತ್ತದೆ.

 

.ಎನ್.ಎಸ್.ಕದಂಬ (ಸೀ ಬರ್ಡ) ನೌಕಾನೆಲೆ :

ದೂರ ಎಷ್ಟು ?
ತಾಲೂಕು  : ಕಾರವಾರ
ತಾಲೂಕಿನಿಂದ : ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦ ಕಿ.ಮೀ.

 

ಐ.ಎನ್.ಎಸ್. ಕದಂಬ

ಕಾರವಾರದ ಕಡಲ ತೀರದಲ್ಲಿ ಕಾರವಾರದಿಂದ ೧೦ ಕಿ.ಮೀ ದೂರದಲ್ಲಿ ಭಾರತದ ರಕ್ಷಣೆಗಾಗಿ ನೌಕಾ ಪಡೆಯ ನೆಲೆ ಆಯ್ ಎನ್ ಎಸ್ ಕದಂಬ (ಸೀಬರ್ಡ) ಇದೆ. ಒಳಚಿತ್ರದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಐ.ಎನ್.ಎಸ್. ಚಾಪೆಲ್ ನೌಕೆಯನ್ನು ಕಾಣಬಹುದು.

 

ಸಾಗರ ಮತ್ಸ್ಯಾಲಯ

ದೂರ ಎಷ್ಟು ?
ತಾಲೂಕು : ಕಾರವಾರ
ತಾಲೂಕಿನಿಂದ :  ೧ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧ ಕಿ.ಮೀ

ಕಾರವಾರ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮುದ್ರ ಮೀನುಗಳ ಪ್ರದರ್ಶನ ಕೇಂದ್ರವಿದೆ. ಇದರ ಸಮೀಪ ನೃತ್ಯ ಕಾರಂಜಿಯ ಅದ್ಭುತ ಪ್ರದರ್ಶನವನ್ನೂ ನೋಡಬಹುದು. ಜಿಲ್ಲಾ ವಿಜ್ಞಾನ ಕೇಂದ್ರವೂ ಇಲ್ಲಿಯೇ ಹತ್ತಿರದಲ್ಲಿದೆ.

 

ಹೈಚರ್ಚ್ :

ದೂರ ಎಷ್ಟು ?
ತಾಲೂಕು : ಕಾರವಾರ
ತಾಲೂಕಿನಿಂದ : ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೦ ಕಿ.ಮೀ

ಕಾರವಾರದ ಹೃದಯಭಾಗದಲ್ಲಿ ಹಳೆಯದಾದ ಒಂದು ಚರ್ಚ್ ಇದೆ. ಅನೇಕ ಮೆಟ್ಟಿಲೇರಿದ ನಂತರ ಕಾಣಸಿಗುವ ಈ ಪ್ರಾರ್ಥನಾ ಮಂದಿರವು ಕ್ರೈಸ್ತರ ಪ್ರಮುಖ ಆರಾಧನಾ ಕೇಂದ್ರವಾಗಿದೆ.

 

ಕಾಳಿ ಸೇತುವೆ  

ದೂರ ಎಷ್ಟು ?
ತಾಲೂಕು : ಕಾರವಾರ
ತಾಲೂಕಿನಿಂದ :  ೫ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫ ಕಿ.ಮೀ

ಕಾಳಿ ನದಿಯ ಮೂಲಕ ಕಾರವಾರ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸಲು ೧೯೮೦ ರಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ೨ ಕಿ.ಮೀ. ದೂರದಲ್ಲಿ ದೇವಭಾಗ ದ್ವೀಪವಿದೆ. ಇಲ್ಲಿಯೇ ಅರಣ್ಯ ಇಲಾಖೆಯ ಪ್ರವಾಸಿ ಮಂದಿರವೂ ಇದೆ.

 

ಸದಾಶಿವಗಡ ಕೋಟೆ:

ದೂರ ಎಷ್ಟು ?
ತಾಲೂಕು : ಕಾರವಾರ
ತಾಲೂಕಿನಿಂದ :  ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೬ ಕಿ.ಮೀ

ಕಾರವಾರದಿಂದ ಕಾಳಿ ಸೇತುವೆಯ ಮೂಲಕ ಪ್ರಯಾಣಿಸುವಾಗ ಗುಡ್ಡವನ್ನು ಇಭ್ಬಾಗ ಮಾಡಿದ ಚಿತ್ರಣ ಕಾಣುತ್ತದೆ. ಗುಡ್ಡದ ಮೇಲೆ ಪುರಾತನ ಕೋಟೆ ಇದೆ. ಇಲ್ಲಿಗೆ ಶಿವಾಜಿ ಮಹಾರಾಜರು  ೧೬೬೫ ರಲ್ಲಿ ಭಟಿ ನೀಡಿದ ಬಗ್ಗೆ ಐತಿಹ್ಯವಿದೆ. ಇದನ್ನು ಸೋದೆಯ ಸದಾಶಿವರಾಯರು ಕಟ್ಟಿಸಿದರು ಎನ್ನಲಾಗುತ್ತದೆ.

 

ಸದಾಶಿವಗಡ ದರ್ಗಾ:

ದೂರ ಎಷ್ಟು?
ತಾಲೂಕು : ಕಾರವಾರ
ತಾಲೂಕಿನಿಂದ :  ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೬ ಕಿ.ಮೀ

ಸದಾಶಿವಗಡ ಕೋಟೆಯ ಎದುರುಗಡೆ ಷಹಾ ಕರಿಬುದ್ದೀನ್ ದರ್ಗಾ ಇದೆ. ಇದು ಮುಸಲ್ಮಾನ ಬಾಂಧವರ ಪುಣ್ಯ ಕ್ಷೇತ್ರಗಳಲ್ಲೊಂದು.  ಹಿಂದೂ ಮತ್ತು ಮುಸಲ್ಮಾನ್ ಬಾಂಧವರು ಸೇರುವ ಭಾವೈಕ್ಯತೆಯ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ.