ಸಂಪ್ರದಾಯವೆಂಬುದು ರಾಜಕೀಯ, ಸಾಮಾಜಿಕ ಎಂದು ಟಿಸಿಲೊಡೆಯುತ್ತದೆ. ರಾಜಕೀಯ ಸಂಪ್ರದಾಯಗಳನ್ನು ಕಾನೂನು ನಿಯಂತ್ರಿಸಿದರೆ ಸಾಮಾಜಿಕ ಸಂಪ್ರದಾಯಗಳನ್ನು ಧರ್ಮಭಾವನೆ ನಿಯಂತ್ರಿಸುತ್ತದೆ. ಸಾಮಾಜಿಕ ಸಂಪ್ರದಾಯಗಳು ಜನಸಮೂಹದ ಮಧ್ಯದಲ್ಲಿಯೇ ಹುಟ್ಟಿಕೊಳ್ಳುವುದರಿಂದ ಜಾನಪದ ಸಾಹಿತ್ಯಾಭ್ಯಾಸಿ ಗಳಿಗೆ ಸಮಷ್ಟಿರೂಪದ ಸಾಮಾಜಿಕ ಸಂಪ್ರದಾಯಗಳು ಮುಖ್ಯವೆನಿಸುತ್ತವೆ. ಎಲ್ಲೋ ಒಬ್ಬ ರಾಜ ಅಥವಾ ಅಧಿಕಾರಿ ಸಮಾಜದ ವಿರುದ್ಧ ಸಂಪ್ರದಾಯಗಳ ವಿರುದ್ಧ ಈಜಬಹುದು; ಭಯಮೂಲವಾದ ಅವನ ಶಾಸನಗಳನ್ನು ಜನ ತಾತ್ಕಾಲಿಕವಾಗಿ ಒಪ್ಪಿಕೊಳ್ಳಲೂಬಹುದು. ಆದರೆ ಅವು ಬಹಳ ದಿನಗಳ ಕಾಲ ನಿಲ್ಲಲಾರವು. ರಾಜನೇ ಇರಲಿ ಸಮಾಜದ ಒಬ್ಬ ಪ್ರತಿಷ್ಠಿತ ವ್ಯಕ್ತಿಯೇ ಇರಲಿ ಜನರ ಸಂವೇದನೆಗಳಿಗನುಗುಣವಾಗಿ ಪ್ರಾರಂಭಿಸುವ ಒಂದು ಸಾಮಾಜಿಕ ಕ್ರಿಯೆ ರೂಢಿಯಾಗುತ್ತ ಆ ರೂಢಿಯೇ ಕಾಲಕ್ರಮೇಣ ಸಂಪ್ರದಾಯವಾಗುತ್ತದೆ.

ಧಾರ್ಮಿಕ ಪರಿಭಾವನೆಯ ಹಿನ್ನೆಲೆಯಲ್ಲಿ ಬರುವ ಸಂಪ್ರದಾಯಗಳು ತುಂಬ ಪ್ರಭಾವಶಾಲಿಯಾಗಿರುತ್ತವೆ. ಧಾರ್ಮಿಕ ಆವರಣದ ಸಂಪ್ರದಾಯಕ್ಕೆ ಅಪ್ರಜ್ಞಾಪೂರ್ವಕ ಮುನ್ನಡೆ ಮುಖ್ಯ, ಅದು ಸದಾಕಾಲ ಇತಿಹಾಸದ ಮುಖಾವಲೋಕನ ಮಾಡಿ ಮುಂದುವರಿಯುವುದಿಲ್ಲ. ಧರ್ಮ ಭಾವನೆ ಆವೇಶವಾಗುತ್ತ ಪರಿಸರದ ಕೆಲವು ಅನಿವಾರ್ಯತೆಗಳು ಕೆಲವು ಕುತೂಹಲತೆಗಳು ಬೆಸೆದುಕೊಳ್ಳುತ್ತ ತನ್ನಷ್ಟಕ್ಕೆ ತಾನೇ ವೈಭವೀಕರಣ ವಿಜೃಂಭಿಸುತ್ತದೆ. ಇಂಥಲ್ಲಿ ಜಾನಪದ ಬಲ್ಲಿದರು ಹಡು ಕಟ್ಟುತ್ತಾರೆ, ಕಥೆ ಹೆಣೆಯುತ್ತರೆ. ಕಲ್ಪನೆಗೆ ರೆಕ್ಕೆ ಮೂಡುತ್ತವೆ. ಇಲ್ಲಿಯೇ ಇತಿಹಾಸ ಮೊದಮೊದಲು ಐತಿಹ್ಯವಾಗುತ್ತ, ತರುವಾಯ ಪುರಾಣವಾಗುತ್ತ ಒಮ್ಮೊಮ್ಮೆ ಎರಡೂ ಏಕಕಾಲದಲ್ಲಿ ಘಟಿಸುತ್ತ ಇತಿಹಾಸದ ಸತ್ಯಾಂಶಗಳು ನುಣುಚಿಕೊಂಡು ಆಗ ಸಂಪ್ರದಾಯದ ಮೂಲ ಅಸ್ಪಷ್ಟವಾಗುತ್ತ ಕಾಲಾಂತರದಲ್ಲಿ ಸಂಶೋಧಕರು ಪರದಾಡುವಂತಾಗುತ್ತದೆ.

ಮೊದಮೊದಲು ವೈಯುಕ್ತಿಕ ಮಿತಿಯಲ್ಲಿದ್ದ ಧಾರ್ಮಿಕ ಸಂಪ್ರದಾಯ ಸಮಷ್ಟಿರೂಪಕ್ಕೆ ತಿರುಗಿದ ಮೇಲೆ ಅದು ಕಾಲಾಂತರದಲ್ಲಿ ಮುಂದುವರೆಯುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಬಹುದು.

೧. ಅದು ಸಾಮಾಜಿಕರಿಂದ ಧಾರ್ಮಿಕ ಭಾವೈಕತೆಯಾಗಿ ಸ್ವೀಕರಿಸಲ್ಪಟ್ಟಿದ್ದು.

೨. ಈ ಸಂಪ್ರದಾಯವನ್ನು ಕೆಲವರಾದರೂ ಉಪಜೀವನಕ್ಕೆ ಮಾರ್ಗವನ್ನಾಗಿ ಮಾಡಿಕೊಂಡದ್ದು.

ಮೊದಲನೆಯದು ಸಮಷ್ಟಿಪ್ರಜ್ಞೆಯ ಸ್ತರದಲ್ಲಿದ್ದು ನಂಬಿಕೆಯನ್ನು ಆಧಾರಮಾಡಿಕೊಂಡು ಹೊರಟರೆ ಎರಡನೆಯದು ವಿಧಿ-ವಿಧಾನ – ನಿಷೇಧಗಳನ್ನು ರೂಪಿಸುತ್ತದೆ. ಈ ವಿಧಿ ವಿಧಾನಗಳು ಮತ್ತೆ ಎರಡು ಕವಲಾಗುತ್ತವೆ. ಒಂದು ಧಾರ್ಮಿಕ ಆಚರಣೆಗಳು (Rituals), ಎರಡು ಸಾಮಾಜಿಕ ನಡವಳಿಕೆಗಳು. ಧಾರ್ಮಿಕ ನಂಬಿಕೆಯ ಸ್ತರದಲ್ಲಿದ್ದ ಸಾಮಾಜಿಕರನ್ನು ಈ ಎರಡನೆಯ ಗುಂಪು ನಿಯಂತ್ರಿಸುತ್ತದೆ. ಈ ನಿಯಂತ್ರಣ ಧಾರ್ಮಿಕ ಶ್ರದ್ಧೆಯ ಹಿನ್ನೆಲೆಯಲ್ಲೇ ಇರುವುದರಿಂದ ಸಾಮಾಜಿಕರಿಗೆ ಆತ್ಮೀಯವೆನಿಸುತ್ತದೆ. ಹೀಗಾಗಿ ಎರಡನೆಯ ಗುಂಪಿನವರು ನಿಯಂತ್ರಕರೆನಿಸುವುದಿಲ್ಲ ಮಾರ್ಗದರ್ಶಕರಾಗುತ್ತಾರೆ ಉದ್ದಾರಕರೆನಿಸುತ್ತಾರೆ. ಸಾಮಾಜಿಕರ ನಂಬಿಕೆ ಶ್ರದ್ಧೆಗಳಿಗೆ ಇವರು ಪೂರಕ ಶಕ್ತಿಯಾಗಿ ನಿಲ್ಲುವುದರಿಂದ ಇವರಿಬ್ಬರ ಮಧ್ಯದಲ್ಲಿ ಹುಟ್ಟಿಬೆಳೆಯುವ ಸಂಪ್ರದಾಯಗಳು ಗಟ್ಟಿಯಾಗಿ ಮುಂದುವರಿಯುತ್ತವೆ. ಪ್ರಬಲವಾದ ಇನ್ನೊಂದು ಸಂಪ್ರದಾಯ ಮುಂಚಿನ ಸಂಪ್ರದಾಯದ ಮೇಲೆ ಅಪ್ಪಳಿಸಿದಾಗ ಅದು ಆಮೂಲಾಗ್ರವಾಗಿ ಬದಲಾಗಬಹುದು. ಧಾರ್ಮಿಕ ಕ್ರಾಂತಿ ರಾಜಕೀಯ ವಿಪ್ಲವಗಳು ಇಂಥ ಬದಲಾವಣೆಗೆ ಕಾರಣವಾಗಬಹುದು. ಆಗ ಒಂದು ಸಂಪ್ರದಾಯದ ಸ್ಥಾನವನ್ನು ಇನ್ನೊಂದು ಸಂಪ್ರದಾಯ ಆಕ್ರಮಿಸಿಕೊಳ್ಳುವುದು ಅಸಂಭಾವ್ಯವಲ್ಲ. ಪ್ರಕೃತಿಯ ವಿಕೋಪಕ್ಕೋ ಮತ್ತಾವ ಕಾರಣಕ್ಕೋ ಸಂಪ್ರದಾಯಗಳು ಸ್ವರೂಪದಲ್ಲಿ ಬದಲಾವಣೆ ಹೊಂದಿರಬಹುದು; ಸರ್ವನಾಶವಾಗುವದೇನೂ ಅಸಂಭವದ ಮಾತಲ್ಲ. ವೈಚಾರಿಕ ದೃಷ್ಟಿಗೆ ಪಕ್ಕಾಗಿ ಇಂದು ಅನೇಕ ಸಂಪ್ರದಾಯಗಳು ವಿಧಿ ವಿಧಾನಗಳನ್ನು ಸಡಿಲಿಸಿಕೊಳ್ಳುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ.

ಸಂಪ್ರದಾಯಗಳ ಮೂಲವನ್ನು ಶೋಧಿಸುವುದು ತುಂಬ ಕಷ್ಟದ ಕೆಲಸ. ಒಂದು ಪ್ರದೇಶದ ಪಂಗಡ ಅಥವಾ ಜನಾಂಗ ಎಂದೋ ಒಂದು ದಿನ ಒಪ್ಪಿಕೊಂಡಿರುವ ಒಂದು ಸಂಪ್ರದಾಯದ ಮೂಲವನ್ನು ನಿಖರವಾಗಿ ಗುರುತಿಸುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಶಾಸನಾಧಾರಗಳು, ಕಾವ್ಯಾಧಾರಗಳು ಖಚಿತವಾಗಿ ದೊರೆತರೆ ಮೈಲಾರ ಮಾಳಮ್ಮರನ್ನು ಐತಿಹಾಸಿಕವಾಗಿ ಗುರುತಿಸಬಹುದು. ಖಚಿತ ಆಧಾರಗಳು ದೊರೆತರೆ ಅವರು ಹುಟ್ಟಿದ ದಿನವನ್ನು ಮೊದಲು ಮಾಡಿಕೊಂಡು ಅವರ ಇಡೀ ಜೀವನವನ್ನು ಇತಿಹಾಸವಾಗಿಸಬಹುದು. ಆದರೆ ಮಲ್ಲಯ್ಯನ ಭಕ್ತರಾದ ವಗ್ಗಯ್ಯಗಳು ನಾಯಿಯಂತೆ ಬೊಗಳುವ ಸಂಪ್ರದಾಯ, ಮಲ್ಲಯ್ಯನ ಭಕ್ತರು ‘ಏಳುಕೋಟಿ ಏಳುಕೋಟಿ’ ಎನ್ನುವ ಸಂಪ್ರದಾಯ ಇಂಥ ದಿನವೇ ಪ್ರಾರಂಭವಾದುವೆಂದು ಬೆರಳಿಟ್ಟು ತೋರಿಸುವುದು ಬಹುಶಃ ಸಾಧ್ಯವಾಗುವುದಿಲ್ಲ. ಕಾಲಪ್ರವಾಹದಲ್ಲಿ ಎಲ್ಲಿಯೋ ಒಂದು ಕಡೆ ಹುಟ್ಟಿಕೊಳ್ಳುವ ಜಾನಪದ ನಂಬಿಕೆಗಳು ಸಂಪ್ರದಾಯವಾಗುವಾಗ ಆ ಸಂಪ್ರದಾಯ ಕಾಲ ದೇಶಗಳಿಗೆ ಪಕ್ಕಾಗಿ ಪರಿವರ್ತನಶೀಲವಾಗಿರುವಾಗ ಐತಿಹಾಸಿಕ ನಿರ್ಣಯ ತೊಡಕಿನದೆನ್ನಿಸುತ್ತದೆ.

ಕಾಲ, ದೇಶ ಎರಡೂ ದೃಷ್ಟಿಯಿಂದ ಮೈಲಾರಲಿಂಗ ಸಂಪ್ರದಾಯಕ್ಕೆ ದೊಡ್ಡ ವ್ಯಾಪ್ತಿಯಿದೆ. ಮೈಲಾರ ಮಾಳಚಿಯರ ಚರಿತ್ರೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆದಿವೆ. ಸುಮಾರು ಸಾವಿರ ವರ್ಷದ ಪರಂಪರೆ ಈ ಸಂಪ್ರದಾಯದ್ದು. ಪ್ರಾದೇಶಿಕವಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದವರೆಗೆ ಈ ಸಂಪ್ರದಾಯ ಹರಡಿದೆ. ಪ್ರಸ್ತುತ ಪ್ರಬಂಧ ಉತ್ತರ ಕರ್ನಾಟಕದ ಮೈಲಾರಲಿಂಗ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿದೆ.

ಉತ್ತರ ಕರ್ನಾಟಕದಲ್ಲಿ ಈ ಸಂಪ್ರದಾಯದ ದೇವರನ್ನು ಮಲ್ಲಯ್ಯ ಎಂದು ಕರೆಯುವ ರೂಢಿಯೇ ಹೆಚ್ಚು. ಮೈಲಾರ, ದೇವರಗುಡ್ಡ, ಮಂಗಸೂಳಿ, ದೇವರ ಹಿಪ್ಪರಗಿ – ಇವು ಈ ಭಾಗದಲ್ಲಿ ಮುಖ್ಯವಾಗಿರುವ ಮಲ್ಲಯ್ಯನ ಕ್ಷೇತ್ರಗಳು. ಮಲ್ಲಯ್ಯನ ಭಕ್ತರನ್ನು ನಾವು ಎರಡು ಪಂಗಡವಾಗಿ ವಿಂಗಡಿಸಬೇಕಾಗುತ್ತದೆ. ಒಂದು, ಒಂದೊಂದು ಕ್ಷೇತ್ರದ ಮಲ್ಲಯ್ಯನನ್ನು ಮನೆದೇವರಾಗಿ ಮಾಡಿಕೊಂಡು ಆರಾಧಿಸುವ ಭಕ್ತರದು. ಇನ್ನೊಂದು ಗುಂಪು ಈ ದೇವರ ಹೆಸರಿನ ಮೇಲೆ ದೀಕ್ಷೆ ತೊಟ್ಟ (ಇದಕ್ಕೆ ‘ಪಟ್ಟಗಟ್ಟಿಸಿಕೊಳ್ಳುವುದು’ ಎಂಬ ಪರ್ಯಾಯ ಹೆಸರುಂಟು.) ವಗ್ಗಯ್ಯಗಳದು. ಮಲ್ಲಯ್ಯನನ್ನು ಆರಾಧಿಸುವ ಭಕ್ತರು ಎಲ್ಲ ಜಾತಿ ಅಂತಸ್ತಿನವರೂ ಇರಬಹುದು. ಆದರೆ ವಗ್ಗಯ್ಯಗಳಾಗುವವರು ಕುರುಬ, ಕಬ್ಬಲಿಗ (ಬೇಡ), ಹರಿಜನರು ಮುಂತಾಗಿ ಹಿಂದುಳಿದ ಪಂಗಡಕ್ಕೆ ಸೇರಿದವರು. ಅದರಲ್ಲಿಯೂ ವಿಶೇಷವಾಗಿ ಕುರುಬ ಮತ್ತು ಹರಿಜನ ಮತಸ್ಥರು ವಗ್ಗಯ್ಯಗಳಾಗುವುದು ಹೆಚ್ಚು. ಮಲ್ಲಯ್ಯನ ಭಕ್ತರದು ದೇವಭಾವದ ನಂಬುಗೆಯಾದರೆ ವಗ್ಗಯ್ಯಗಳು ಈ ಸಂಪ್ರದಾಯದ ಕಾರ್ಯಕಲಾಪಗಳಿಗೆ ಮುಂಚೂಣಿಯಲ್ಲಿ ನಿಂತವರು.

ವಗ್ಗಯ್ಯನಾಗಲು ಜಾತಿ ಬಂಧನವಿಲ್ಲ. ವಗ್ಗಯ್ಯನ ಹಿರಯ ಮಗನೇ ಸಾಮಾನ್ಯವಾಗಿ ತಂದೆಯ ಉತ್ತರಾಧಿಕಾರಿಯಾಗಲು ಅರ್ಹ. ಹಿರಿಯ ವಗ್ಗಯ್ಯಗಳೇ ಬಂದು ದೀಕ್ಷೆಕೊಡುವುದುಂಟು. ಇದಕ್ಕೆ ಹೊರತಾಗಿ ‘ಮಹಾರಾಜ ಪಂಥ’ದವರೂ ದೀಕ್ಷೆಕೊಟ್ಟ ಉದಾಹರಣೆ ಉಂಟು. ಸಿಂದಗಿ ತಾಲೂಕಿನ ಚಿಕ್ಕರೂಗಿಯ ಮಾಯಪ್ಪ ಮಲ್ಲಯ್ಯ ಕುರುಬರ ಎಂಬುವರಿಗೆ ಲಚ್ಯಾಣದ ಸಿದ್ದಪ್ಪ ಮಹಾರಾಜ ದೀಕ್ಷೆ ಕೊಟ್ಟಿದ್ದಾರಂತೆ. ಕಂಬಳಿಯ ಮೇಲೆ ಶಾಸಕ್ಕೆ ಹೊಯ್ದು ಅದರ ಮೇಲೆ ದೀಕ್ಷೆ ತೊಡಲಿರುವ ವ್ಯಕ್ತಿಯನ್ನು ಕೂಡ್ರಿಸಲಾಗುತ್ತದೆ. ಕಂಬಳಿ ರಂಗದಲ್ಲಿ ನಡುವೆ ಮತ್ತು ನಾಲ್ಕು ಮೂಲೆಗೆ ಅರಿಷಿಣ, ಬಾಳೆಹಣ್ಣು, ಕಾರಿಕ, ಕೊಬ್ಬರಿ, ಲಿಂಬೆಹಣ್ಣು ಇಟ್ಟಿರುತ್ತಾರೆ. ದೀಕ್ಷೆ ತೊಡುವ ವ್ಯಕ್ತಿ ಕೈಗೆ ಅರಿಷಣದ ಕಂಕಣಕಟ್ಟಿ ಬಂಢಾರವನ್ನು ಹಣೆಗೆ ಹಚ್ಚಿರುತ್ತಾನೆ. ಕೂಡಿದವರು ಕಣಕದಾರತಿ ಮಾಡಿ ‘ಏಳುಕೋಟಿ’ ‘ಏಳುಕೋಟಿ’ ಎನ್ನುತ್ತ ವಗ್ಗಯ್ಯನಾಗಲಿರುವವನ ತಲೆಯ ಮೇಲೆ ಐದು ಸಲ ಇಟ್ಟಿಟ್ಟು ಇಳಿಸುತ್ತಾರೆ. ಆಮೇಲೆ ಅವನಿಗೆ ಕೂಡಿದ ಜನ ಅಕ್ಷತೆ ಒಗೆಯುತ್ತಾರೆ. ದುರ್ಗಣಗಳನ್ನು ಬಿಡಲು ಸೂಚನೆಕೊಡುತ್ತ ಆರುಗುಣ ಅಳಿಯಬೇಕು, ಮೂರು ಗುಣ ತಿಳಿಯಬೇಕು, ಒಂಭತ್ತು ಗುಣ ತುಂಬಿತುಳಿಕ್ಯಾಡಬೇಕು ಎಂದು ಉಪದೇಶ ಮಾಡಲಾಗುತ್ತದೆ. ಇದೇ ಮಾತನ್ನು ತೀರಸಾಮಾನ್ಯ ಮಟ್ಟದಲ್ಲಿಯೂ ಹೇಳಲಾಗುತ್ತದೆ. ಅನ್ಯಾಯದ ಕೆಲಸಮಾಡಬೇಕು. ಬಿಸಿಲಿಗಿದ್ದವರನ್ನು ನೆರಳಿಗೆ ಕರೆ, ಉಪವಾಸವಿದ್ದವರಿಗೆ ತುತ್ತು ಪ್ರಸಾದ ಕೊಡು, ನೀರಡಿಸಿದವರಿಗೆ ನೀರು ಕೊಡಬೇಕು, ಯಾವ ಅನ್ಯಾಯ ಅತ್ಯಾಚಾರ ಮಾಡಬಾರದು, ಮಲ್ಲಯ್ಯನ ಭಕ್ತ ನೀನು ಅವನಿಂದ ‘ನಾನು ಹಾಗೆಲ್ಲ ಮಾಡುವುದಿಲ್ಲ’ ಅನ್ನಿಸಿಕೊಳ್ಳಲಾಗುತ್ತದೆ. ಈ ದೀಕ್ಷೆಯ ಖರ್ಚನ್ನು ವಗ್ಗಯ್ಯನಾಗಲಿರುವವ ತಾನೇ ಭರಿಸಬೇಕಾಗುತ್ತದೆ.

ಪುರುಷನು ವಗ್ಗಯ್ಯ ಎನ್ನಿಸಿಕೊಂಡರೆ ಮಲ್ಲಯ್ಯನ ಭಕ್ತಳಾಗಿ ದೀಕ್ಷೆ ತೊಟ್ಟವಳು ‘ಮುರಳಿ’ ಎನ್ನಿಸಿಕೊಳ್ಳುತ್ತಾಳೆ, ದೇವರಹಿಪ್ಪರಗಿಯ ಭಾಗದಲ್ಲಿ ಮುರಳಿಯರಿಗೆ ‘ಚಾಮಾಲಗಿತ್ತಿಯರು’ ಎನ್ನುವ ಹೆಸರುಂಟು. ಬಹುಶಃ ಚಾಮರಗಿತ್ತಿಯರೇ ಚಾಮಾಲಗಿತ್ತಿಯರಾಗಿರಬಹುದು. ದೀಕ್ಷಾಕ್ರಮದಲ್ಲಿ ಗಂಡು-ಹೆಣ್ಣೆಂಬ ಅಂತರವಿಲ್ಲ. ಚಾಮಾಲಗಿತ್ತಿ ದೀಕ್ಷೆ ತೊಟ್ಟಮೇಲೆ ಮದುವೆಯಾಗಬಹುದು ಆಗಲಿಕ್ಕಿಲ್ಲ. ಮದುವೆಯಾದ ಚಾಮಾಲಗಿತ್ತಿಯರೂ ವಗ್ಗಯ್ಯಗಳ ಸಂಗಡ ಭಿಕ್ಷೆಗೆ ಹೋಗುತ್ತಾರೆ. ಆಡುತ್ತಾರೆ. ಮದುವೆಯಾಗದವಳು ದೇವದಾಸಿ ಪದ್ದತಿಗೇ ಹೊಂದಿಕೊಂಡು ಬಿಡುತ್ತಾಳೆ. ಮುರಳಿಯರು ಸಾಮಾನ್ಯವಾಗಿ ಜಾತಿಯಿಂದ ಕೆಳ ಅಂತಸ್ತಿನವರೇ ಇರುವುದು ಹೆಚ್ಚು. ಮುರಳಿಗೆ ಗಂಡು ಮಕ್ಕಳಿದ್ದರೆ ಅವಳ ತರುವಾಯ ಅವಳ ಗಂಡು ಮಗನಿಗೇ ಪಟ್ಟ. ಆಕಸ್ಮಿಕ ಗಂಡು ಮಗನಿರದಿದ್ದರೆ ಮಗಳಿಗೇ ಆ ಪಟ್ಟ ಹೋಗುತ್ತದೆ. ಮಗಳು ಆ ಪಟ್ಟವನ್ನು ಸ್ವೀಕರಿಸದಿದ್ದರೆ ತಾಯಿಯೊಂದಿಗೇ ಆ ಮನೆತನದ ಮುರಳಿ ಸಂಪ್ರದಾಯ ಮುಳುಗಿ ಹೋಗುತ್ತದೆ.

ವಗ್ಗಯ್ಯಗಳು ಕಂಬಳಿಯ ನಿಲುವಂಗಿ ತೊಟ್ಟು ಕೆಂಪು ಮುಂಡಾಸು ಸುತ್ತಿರುತ್ತಾರೆ. ದೇವರಹಿಪ್ಪರಗಿ ಭಾಗದಲ್ಲಿ ಮಾತ್ರ ಕುಂಕುಮವಇದ ಬಟ್ಟೆಯ ನಿಲುವಂಗಿ ಇರುತ್ತದೆ. ಕೈಯಲ್ಲಿ ವಿಭೂತಿ ಕುಂಕುಮ ಲೇಪಿತ ಕಬ್ಬಿಣದ ತ್ರಿಶೂಲ. ಕೊರಳಿಂದ ಎರಡೂ ಬದಿಗೆ ಸಣ್ಣ ಸಣ್ಣ ಘಂಟೆಗಳು ಜೋತುಬಿದ್ದಿರುತ್ತವೆ. ಉಣ್ಣೆಯನ್ನು ಹೊಸೆದು ಒಂದು ಸರಮಾಡಿ ಹೆಗಲಿಗೆ ಹಾಕಿಕೊಂಡಿರುವುದೂ ಉಂಟು. ಇವರ ವೇಷದಲ್ಲಿ ಬಹಳ ಮುಖ್ಯವಾದದ್ದು ಕೊಟಮಗಿ (ಕುಟುಂಬಿ). ಇದು ಕಟ್ಟಿಗೆಯದು ಅಥವಾ ಕಂಚಿನದಿದ್ದು ಚೌಕಾಕಾರದ ಬಟ್ಟಲನ್ನು ಹೋಲುತ್ತದೆ. ಹೆಗಲಿಗೆ ಡಮರುಗ ಒಂದು ಜೋತು ಬಿದ್ದಿರುತ್ತದೆ. ಬಗಲಿಗೆ ಒಂದು ಚಿಗರೆ ಅಥವಾ ಸಾರಂಗ ಚರ್ಮದ ಚೀಲವಿದ್ದು ಅದರಲ್ಲಿ ಬಂಡಾರ ಹಾಕಿರುತ್ತಾನೆ. ತಾನು ಹಣೆಗೆ ಕುಂಕುಮ ವಿಭೂತಿ, ಭಂಡಾರ ಹಚ್ಚಿಕೊಂಡಿರುತ್ತಾನೆ. ಮುರಳಿಯರು ಬಿಳಿಯ ನಿಲುವಂಗಿಯನ್ನು ಧರಿಸಿ ಕೊರಳಲ್ಲಿ ಕವಡಿಸರ ಹಾಕಿಕೊಂಡು ಕಾಲಲ್ಲಿ ಗೆಜ್ಜೆ ಕಟ್ಟಿರುತ್ತಾರೆ. ಮಂಗಸೂಳಿಯ ಮುರುಳಿಯರು ನಸುಹಳದಿ ಬಣ್ಣದ ಸೀರೆ ಉಡುತ್ತಾರೆ. ಕೆಲವರು ವಗ್ಗಯ್ಯಗಳಂತೆ ಹೆಗಲಮೇಲೆ ಕಂಬಳಿ ಹಾಕಿಕೊಳ್ಳುವುದೂ ಉಂಟು. ಈ ಮುರಳಿಯರು ವಗ್ಗಯ್ಯಗಳಿಗೆ ತಂಗಿಯರಾಗಬೇಕು ಎಂಬ ಭಾವವಿದೆ.

ಅನೇಕ ಜನ ವಗ್ಗಯ್ಯಗಳು ಮುರಳಿಯರು ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ವೃತ್ತಿಯನ್ನವಲಂಬಿಸಿದವರು ಬೇರೆ ಉದ್ಯೋಗ ಮಾಡಿಕೊಂಡಿದ್ದು ಮಲ್ಲಯ್ಯನ ಸೇವೆ-ಭಕ್ತಿಗೆಂದು ರವಿವಾರ ದಿವಸ ತಮ್ಮ ಗ್ರಾಮದಲ್ಲೋ ನೆರೆಯ ಗ್ರಾಮದಲ್ಲೋ ಭಿಕ್ಷಾಟನೆಗೆ ಹೋಗುತ್ತಾರೆ. ಆಕಸ್ಮಿಕ ಭಿಕ್ಷೆಗೆ ಹೊರಗೆ ಹೋಗುವುದಿಲ್ಲವಾದರೆ ಮನೆಯ ಜಗುಲಿಯ ಮೇಲೆಯೇ ಭಕ್ತಿಯನ್ನು ಸಮರ್ಪಿಸುತ್ತಾರೆ. ವಗ್ಗಯ್ಯಗಳು ಭಿಕ್ಷೆ ಹಾಕಿಸಿಕೊಳ್ಳುವುದು ಕೊಟಮಿಗಿಯಲ್ಲಿ ಭಿಕ್ಷೆ ಹಾಕಿಸಿಕೊಳ್ಳುವಾಗ ‘ಏಳುಕೋಟಿ ಏಳುಕೋಟಿ’ ಎನ್ನುತ್ತಾರೆ. ಭಿಕ್ಷೆಗೆ ಹೋಗುವ ಮನೆಗಳ ಜಾತಿ ಅಂತರವನ್ನು ಎಣಿಸುವುದಿಲ್ಲವಾದರೂ ಕೆಲವು ನಿಶ್ಚಿತ ಮನೆಗಳಿಗೆ ಮಾತ್ರ ಭಿಕ್ಷೆಗೆ ಹೋಗುತ್ತಾರೆ. ದೇವರಹಿಪ್ಪರಗಿಯ ಕಡೆಯ ವಗ್ಗಯ್ಯಗಳಿಗೆ ಮಾಂಸಾಹಾರ ನಡೆಯುತ್ತದೆ. ಮೈಲಾರದವರು ಶಾಖಾಹಾರಿಗಳಂತೆ. ಆದ್ದರಿಂದ ಮೈಲಾರದವರು ಬೇರೆ ಕಡೆಯ ಮಲ್ಲಯ್ಯನ ಮಾಂಸಾಹಾರಿ ಭಕ್ತರ ಮನೆಗೆ ಹೋದರೆ ರೊಕ್ಕ ಕಾಳು ಮುಂತಾಗಿ ಒಣಭಿಕ್ಷೆ ಎತ್ತುತ್ತಾರೆ; ಕೊಟಮಿಗಿಯನ್ನು ತುಂಬಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಎಲ್ಲ ಭಾಗದ ವಗ್ಗಯ್ಯಗಳೂ ರವಿವಾರ ಉಪವಾಸವಿದ್ದು ಬಾಳೆಹಣ್ಣು, ಹಾಲು ಮಾತ್ರ ಸೇವಿಸುತ್ತಾರೆ.

ಮನೆದೇವರಾಗಿದ್ದ ಕೆಲವು ಮಲ್ಲಯ್ಯನ ಭಕ್ತರು ಹರಕೆಹೊತ್ತು ಮದುವೆಯಲ್ಲಿ ವಗ್ಗಯ್ಯಗಳನ್ನು ಕರೆಸುತ್ತಾರೆ. ಇಂಥ ಸಂದರ್ಭಗಳಲ್ಲಿ ವಗ್ಗಯ್ಯಗಳ ಪಾತ್ರ ಹಿರಿದು. “ಮದುವೆ ಇಂಥ ದಿನ ನಡೆಯುತ್ತದೆ ನೀವು ಬರಬೇಕು ಎಂದು” ಮದುವೆ ಮಡುವ ಮನೆಯವರು ಬಂಡಾರ ಕೊಟ್ಟು ಹೋಗುತ್ತಾರೆ. ಹೇಳಿದ ದಿನ ಇವರು ಏಳೆಂಟು ಜನ ಹೋಗುತ್ತಾರೆ. ಮೊದಲು ಇವರ ಸಂಪ್ರದಾಯದ ಪೂಜ್ಯ ವಸ್ತುಗಳಾದ ತ್ರಿಶೂಲ, ಕೊಟಮಿಗಿ ಮುಂತಾದವುಗಳಿಗೆ ಪೂಜೆಯಾಗಬೇಕು. ಹಾಸಿದ ಕಂಬಳಿಯ ಮೇಲೆ ಗೋಡೆಗಾನಿಸಿ ತ್ರಿಶೂಲವನ್ನು ನಿಲ್ಲಿಸುತ್ತಾರೆ. ಅದಕ್ಕೆ ಡಮರುಗ, ಗಂಟೆ, ಉಣ್ಣೆಯಸರ ಮುಂತಾಗಿ ಕೊರಳಲ್ಲಿರುವ ವಸ್ತುಗಳನ್ನೆಲ್ಲ ತೂಗು ಹಾಕುತ್ತಾರೆ. ಕೊಟಮಗಿಯನ್ನು ತ್ರಿಶೂಲದ ಮಗ್ಗಲು ಕಂಬಳಿಯ ಮೇಲೆ ಇಡಲಾಗುತ್ತದೆ. ಈ ಎಲ್ಲ ವಸ್ತುಗಳಿಗೆ ಪೂಜೆ ನಡೆದು ಈ ಪೂಜೆಯ ಅಂಗವಾಗಿ, ಮಾಡಿದ ಪದಾರ್ಥಗಳನ್ನು ನೈವೇದ್ಯವೆಂಬಂತೆ ಕೊಟಮಗಿಗೆ ತುಂಬುತ್ತಾರೆ. ಆಮೇಲೆ ವಗ್ಗಯ್ಯಗಳನ್ನು ‘ಆಡಿಸು’ತ್ತಾರೆ. ಆಡುವುದೆಂದರೆ ಮನೆಯ ಅಂಗಳದಲ್ಲಿ ವೃತ್ತಾಕಾರದಲ್ಲಿ ಜನನಿಲ್ಲುತ್ತಾರೆ. ನಿಂತಿರುವವರು ನಾಣ್ಯವನ್ನು ನೆಲದ ಮೇಲೆ ಒಗೆಯುತ್ತ ಹೋದಂತೆ ವಗ್ಗಯ್ಯಗಳು ಒಬ್ಬೊಬ್ಬರಾಗಿ ನಾಯಿಯಂತೆ ಬೊಗಳುತ್ತ ಬಾಯಿಂದ ಮಣ್ಣಲ್ಲಿ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುತ್ತಾರೆ. ಮುರಳಿಯರೂ ಈ ಆಟದಲ್ಲಿ ಭಾಗವಹಿಸುವುದುಂಟು. ಮಂಗಸೂಳಿಯ ಕಡೆಗೆ ಮುರಳಿ ಹಣೆ ಮತ್ತು ಗಲ್ಲಗಳಿಗೆ ತಗುಲಿಸಿಕೊಂಡು ನಾಣ್ಯವನ್ನು ಎತ್ತಿಕೊಳ್ಳಲು ಯತ್ನಿಸಿದಾಗ ಇನ್ನೊಬ್ಬ ವಗ್ಗಯ್ಯ ನಾಯಿಯಂತೆ ಬೊಗಳುತ್ತ ಅವಳಿಗೆ ತೊಂದರೆ ಕೊಡುವಂತೆ ನಟಿಸುತ್ತಾನೆ. ಆಗ ಅವಳು ‘ಹಚಾ ಹಚಾ’ ಎಂದು ಅವನನ್ನು ದೂರವಿರಿಸುತ್ತ ಹಣವನ್ನು ಹಣೆಯಿಂದ ಅಥವಾ ಗಲ್ಲದಿಂದ ತೆಗೆಯುತ್ತಾಳೆ. ಈ ಆಟವಾದ ಮೇಲೆ ಇವರೆಲ್ಲ ಕೈ ಬಾಯಿ ತೊಳೆದುಕೊಂಡು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಇವರದು ಮುಗಿದ ತರುವಾಯ ಉಳಿದೆಲ್ಲರ ಊಟ-ಉಪಚಾರ ಪ್ರಾರಂಭವಾಗುತ್ತವೆ.

ರಾತ್ರಿ ಜಾಗರಣೆ ನಡೆಯುತ್ತದೆ. ಈ ಜಾಗರಣೆಯನ್ನು ಚಾಜಕೊಟ್ಟರೆ ಮಾತ್ರ ನಿರ್ವಹಿಸುತ್ತಾರಂತೆ. ಒಂದು ಟೆಂಗಿನಕಾಯಿ, ಐದು ಬಾಳೆಯ ಹಣ್ಣು, ಐದು ಉತ್ತತ್ತಿ, ಐದು ಎಲೆ, ಹದಿನೈದು ರೂಪಾಯಿ ಕೊಡಬೇಕು. ರಾತ್ರಿಯೆಲ್ಲ ಮಲ್ಲಯ್ಯನ ಮಹಿಮೆಗಳನ್ನು ಕುರಿತಾಗಿ ಹಾಡುತ್ತಾರೆ. ಮೈಲಾರ, ದೇವರಗುಡ್ಡ, ದೇವರಹಿಪ್ಪರಗಿಗಳ ಕಡೆಗೆ ಹಾಡುವ ಸಮಯದಲ್ಲಿ ವಾದ್ಯವಾಗಿ ಡಮರುಗವಿದ್ದರೆ ಮಂಗಸೂಳಿಯ ಕಡೆಗೆ ತಿಂತಿಣಿ ಹಿಡಿಯುತ್ತಾರೆ. ಬೆಳಿಗ್ಗೆ ನಾಲ್ಕು ಐದರ ಸುಮಾರಿಗೆ ಕೆಲವು ವಗ್ಗಯ್ಯಗಳು ಕಲ್ಲಿನ ಗೂಟಕ್ಕೆ ಸರಪಳಿಕಟ್ಟಿ ಜಾಟ್ನಿ ಹೊಡೆದು ಸರಪಳಿ ಹರಿಯುತ್ತಾರೆ. ಜಾಟ್ನಿ ಹೊಡೆಯುವ ಸಮಯದಲ್ಲಿ ಸುತ್ತಲಿರುವ ಜನರೆಲ್ಲ ಏಳಕೋಟಿಗೆ ಏಳುಕೋಟಿಗೆ ಎನ್ನುತ್ತಾರೆ. ಇಲ್ಲಿಗೆ ಜಾಗರಣೆ ಮುಕ್ತಾಯವಾಗುತ್ತದೆ. ತಿರುಗಿ ಊರಿಗೆ ಬರುವಾಗ ಇವರಿಗೆ ಗಾಡಿಖರ್ಚು ಮೇಲೆ ಎಂಟ್ಹತ್ತು ರೂಪಾಯಿ ಕೊಡಲಾಗುತ್ತದೆ.

ವಗ್ಗಯ್ಯನ ಮನೆಯಲ್ಲಿಯೇ ಮದುವೆಯಾದರೆ ಬೇರೆ ವಗ್ಗಯ್ಯಗಳನ್ನು ಅವನು ಕರೆಯಿಸಬಹುದು ಅಥವಾ ಬಿಡಬಹುದು. ಅದು ಅವನ ಭಕ್ತಿ. ವಗ್ಗಯ್ಯನ ಕಾರ್ಯಾಚರಣೆಗಳೆಲ್ಲ ದೀಕ್ಷೆ ತೊಟ್ಟಿರುವವನೊಬ್ಬನಿಗೇ ಸಂಬಂಧ. ಉಳಿದಂತೆ ಅವನ ಮನೆತನದವರೆಲ್ಲ ಸಾಮಾಜಿಕರೊಂದಿಗೆ ಆಯಾ ನಿಯಮ ಪಾಲನೆಯಂತೆಯೇ ನಡೆಯುತ್ತಾರೆ. ಬೀಗತನ ಸಂಬಂಧಗಳು ಆಯಾಸಮಾಜದ ಕಟ್ಟುಪಾಡಿನಲ್ಲೇ ನಡೆಯುತ್ತವೆ. ಸಾಮಾಜಿಕ ಕಟ್ಟು ಪಾಡುಗಳ ಚೌಕಟ್ಟಿನಲ್ಲಿಯೇ ವಗ್ಗಯ್ಯನ ಮನೆಯವರೆಲ್ಲ ನಡೆದುಕೊಳ್ಳುತ್ತಾರೆ.

ವಗ್ಗಯ್ಯಗಳ ಶವಸಂಸ್ಕಾರದ ಬಗೆಗೆ: ಒಬ್ಬ ವಗ್ಗಯ್ಯ ತೀರಿಕೊಂಡಾಗ ಶವ ಮನೆಯಲ್ಲಿರುವಾಗಲೇ ಕೆಲವು ಹಿರಿಯರು ಮಾಡುವ ಸನ್ನಾಹವೆಂದರೆ ತೀರಕೊಂಡವನ ಉತ್ತರಾಧಿಕಾರಿಯನ್ನು ನೇಮಿಸುವುದು. ವಗ್ಗಯ್ಯ ತೀರಿಕೊಂಡಾಗ ಅವನ ‘ಕಿಚ್ಚು’ ಅವನ ಹಿರಿಯಮಗನಿಗೆ ಬರುತ್ತದೆ. ಅಂದರೆ ಹೆಣವನ್ನು ಪೂಜೆಮಾಡಿ ಕಳಸ ತುಂಬುತ್ತಾರೆ. ಕಣಕದಾರತಿಯೇ ಇಲ್ಲಿ ಕಳಸ. ಮೊದಲು ಅದನ್ನು ಶವದ ತಲೆಯಮೇಲೆ ಇಟ್ಟು ತರುವಾಯ ಅದನ್ನೇ ತೆಗೆದು ಪಟ್ಟಕಟ್ಟಿಕೊಳ್ಳುವ ಮಗನ ತಲೆಯಮೇಲೆ ಇಡುತ್ತಾರೆ. ತೀರಿಕೊಂಡ ವಗ್ಗಯ್ಯನ ರುಮಾಲು ಉತ್ತರಾಧಿಕಾರಿಗೆ ಬರುತ್ತದೆ. ಮುಂದೆ ಒಳ್ಳೆಯ ದಿನದಲ್ಲಿ ಹಿರಿಯ ವಗ್ಗಯ್ಯಗಳನ್ನು ಕರೆಸಿಕೊಂಡು ವಿಧಿವತ್ತಾಗಿ ಪಟ್ಟಕ್ಕೆ ಬರುತ್ತಾನೆ. ಸ್ಮಶಾನದಲ್ಲಿ ಶವಸಂಸ್ಕಾರದ ಸಮಯದಲ್ಲಿ ಗೋರಿಯಮೇಲೆ ಹಂದರ ಹಾಕಲಾಗುವುದು. ಮುರಳಿ ತೀರಿಕೊಂಡಾಗ ಅವಳ ಉತ್ತರಾಧಿಕಾರಿಯೆಂದು ಮಗನಿಗೋ ಮಗಳಿಗೋ ಇದೇ ಕ್ರಮದಲ್ಲಿ ಪಟ್ಟ ಬರುವುದುಂಟು. ಆದರೆ ಯಾರೂ ಆ ಪಟ್ಟವನ್ನು ಸ್ವೀಕರಿಸಲು ಸಿದ್ದರಾಗದಿದ್ದರೆ ಆ ಕಿಚ್ಚನ್ನು ತೀರಿಕೊಂಡವಳ ಉಡಿಯಲ್ಲಿಯೇ ಹಾಕುವುದು ಅರ್ಥಪೂರ್ಣವೆನಿಸುತ್ತದೆ.

ಯಾವುದೇ ಸಂಪ್ರದಾಯದಲ್ಲಿ ವಿಧಿಗಳು ಸೇರಿಕೊಂಡಿರುವಂತೆ ನಿಷೇಧಗಳೂ ದೊಡ್ಡ ಪಾತ್ರವಾಡುತ್ತವೆ. ಈ ನಿಷೇಧಗಳಿಗೆ ಪರಿಹಾರಗಳೂ ಉಂಟು. ಮೈಲಾರಲಿಂಗನ ಸಂಪ್ರದಾಯದಲ್ಲಿ ವಗ್ಗಯ್ಯನ ಸುತ್ತ ಹೆಣೆದುಕೊಳ್ಳುವ ಇಂಥ ನಿಷೇಧಗಳೂ, ಆ ನಿಷೇಧಗಳಿಗೆ ಪರಿಹಾರಗಳೂ ಕೆಳಗಿನಂತಿವೆ.

೧. ಊರಲ್ಲಿ ಯಾರಾದರೂ ತೀರಿಕೊಂಡರೆ ಶವಸಂಸ್ಕಾರ ಮುಗಿಯುವ ವರೆಗೆ ವಗ್ಗಯ್ಯ ಊಟ ಮಾಡುವಂತಿಲ್ಲ. ತರುವಾಯವೇ ಸ್ನಾನ ಮಾಡಿ ಪೂಜೆ ಮುಗಿಸಿಕೊಂಡು ಊಟ.

೨. ಪಟ್ಟಕಟ್ಟಿಸಿಕೊಂಡ ವಗ್ಗಯ್ಯನಿಗೆ ಆಕಸ್ಮಕವಾಗಿ ನಾಯಿಯೊಂದು ಕಚ್ಚಿದರೆ ಅವನಿಗೆ ದೋಷತಟ್ಟಿ ವಗ್ದಯ್ಯನಾಗಿ ಮುಂದುವರಿಯಲು ಅನರ್ಹನಾಗುತ್ತಾನೆ. ಮತ್ತೆ ಅವನು ಮುಂಚಿನ ಸ್ಥಾನಕ್ಕೆ ಬರಬೇಕಾದರೆ ಹಿರಿಯರನ್ನು ಕೂಡಿಸಿ ಮತ್ತೆ ಪಟ್ಟಕಟ್ಟಿಸಿಕೊಳ್ಳಬೇಕು.

೩. ವೈಯಕ್ತಿಕವಾಗಿ ವಗ್ಗಯ್ಯ ಯಾರೊಂದಿಗಾದರೂ ಜಗಳಾಡುವಾಗಲೋ ಮತ್ತೆ ಬೇರೆಯಾರಿಗಾರೋ ಹೊಡೆದಾಡುವಾಗಲೋ ಉದ್ದೇಶಪೂರ್ವಕವೇ ಇರಲಿ. ಆಕಸ್ಮಿಕವೇ ಇರಲಿ ಚಪ್ಪಲ ತಟ್ಟಿದರೆ ಆಗಲೂ ಅವನಿಗೆ ದೋಷತಟ್ಟಿ ಮತ್ತೆ ಪಟ್ಟಗಟ್ಟಿಸಿಕೊಂಡೇ ಶುದ್ಧವಾಗಬೇಕಾಗುತ್ತದೆ.

೪. ಊಟಮಾಡುವಾಗ ಯಾವನಾದರೂ ವಗ್ಗಯ್ಯನಿಗೆ ಆಣಿ ಹಾಕಿದರೆ ಅವನು ಒಳಿತು ಎನ್ನುವವರೆಗೆ ವಗ್ಗಯ್ಯನು ಬಾಯಲ್ಲಿ ತುತ್ತು ಹಾಕುವುದಿಲ್ಲ.

೫. ಊಟ ಮಾಡುವಾಗ ಆಕಸ್ಮಕವಾಗಿ ದೀಪವಾದರೆ ತಾಟಿನಲ್ಲಿ ಎಷ್ಟು ಇರುತ್ತದೆಯೋ ಅಷ್ಟನ್ನು ಉಂಡು ಮುಗಿಸುವುದು. ಮತ್ತೆ ಮರುದಿನ ಸ್ನಾನಮಾಡಿ ಪೂಜೆಯಾದ ಬಳಿಕವೇ ಊಟ.

ಮತದ ಪರಿಭಾವನೆ, ಪ್ರಾದೇಶಿಕವಾಗಿ ಭಿನ್ನವಾಗುವ ಸಾಮಾಜಿಕ ಸ್ಥಾನಮಾನಗಳನ್ನುನುಸರಿಸಿ ಸಂಪ್ರದಾಯದಲ್ಲಿ ಕೆಲವು ವ್ಯತ್ಯಾಸಗಳಾಗುವುದೂ ಉಂಟು. ಇದುವರೆಗೆ ವಿವೇಚಿಸಲಾದ ವೇಷದ ರೀತಿ, ಭಿಕ್ಷಾಟನೆಯ ಸ್ವರೂಪ ಮುಂತಾದ ವಿವಿಧ ಹಂತಗಳಲ್ಲಿ ಅಷ್ಟಿಷ್ಟು ಪ್ರಾದೇಶಿಕ ಬದಲಾವಣೆ ಕಂಡು ಬಂದರೂ ಮೈಲಾರಲಿಂಗನ ಸಂಪ್ರದಾಯ ಎನ್ನುವುದು. ಒಟ್ಟಂದದಲ್ಲಿ ಕಣ್ಣಿಗೆ ಹೊಡೆಯುವಷ್ಟು ಸ್ಪಷ್ಟವಾಗಿದೆ. ಡಮರುಗ ವಗ್ಗಯ್ಯಗಳ ಬಹುಮುಖ್ಯ ವಾದ್ಯವಾದರೂ ಮಂಗಸೂಳಿಯ ವಗ್ಗಯ್ಯಗಳ ಹಾಡಿಕೆಯಲ್ಲಿ ತಿಂತಿಣಿ ಸೇರಿಕೊಂಡಿರುವುದಕ್ಕೆ ಮಹಾರಾಷ್ಟ್ರದಲ್ಲಿ ತುಂಬ ಪ್ರಚಾರದಲ್ಲಿರುವ ಶಾವಿರಕಿ ಸಂಪ್ರದಾಯದ ಪ್ರಭಾವ ಕಾರಣವಾಗಿರಬೇಕು. ಮಂಗಸೂಳಿ ಮಹಾರಾಷ್ಟ್ರದ ಗಡಿಯಂಚಿನಲ್ಲಿರುವುದರಿಂದ ಈ ಪ್ರಭಾವಕ್ಕೆ ತುತ್ತಾಗಿರುವುದು ಸಹಜವೇ ಆಗಿದೆ. ಇಂಥ ಬದಲಾವಣೆಗಳೇನಿದ್ದರೂ ಒಟ್ಟು ಸಂಪ್ರದಾಯದ ಸಮಗ್ರ ಸ್ವರೂಪಕ್ಕೆ ಯಾವ ಬಾಧೆಯೂ ತಟ್ಟಿಲ್ಲ.

೨. ಮೈಲಾರಲಿಂಗನ ಸಾಂಪ್ರದಾಯಿಕ ಆಚರಣೆಗಳಲ್ಲಿ ಸಾಮ್ಯತೆಯ ಮೊತ್ತವೇ ದೊಡ್ಡದಾಗಿದ್ದರೂ ಕೆಲವು ಆಚರಣೆಗಳಿಗೆ ಪೂರಕವಾಗಿ ಅನೇಕ ದಂತಕಥೆಗಳು ಹುಟ್ಟಿಕೊಂಡಿವೆ. ಈ ಕೆಲವಕ್ಕೆ ಅಲ್ಲಲ್ಲಿ ಓದಿದ ಕೇಳಿದ ಕಾವ್ಯ ಪುರಾಣಗಳು ಕಾರಣವಾಗಿರಬಹುದು. ಹಲವಾರು ಕ್ಷೇತ್ರಗಳಲ್ಲಿ ಹುಟ್ಟಿಕೊಂಡಿರುವಂತೆ ಮೈಲಾರ ಲಿಂಗನ ಕ್ಷೇತ್ರಗಳಲ್ಲಿಯೂ ಸ್ಥಳೈತಿಹ್ಯಗಳು ಹುಟ್ಟಿಕೊಂಡಿವೆ. ಕ್ಷೇತ್ರದೇವತೆಯ ಬಗ್ಗೆ ಗೌರವಭಾವನೆಯನ್ನು ತಾಳುವಂತೆ ಮಾಡುವ ಇಂಥ ಐತಿಹ್ಯಗಳಿಗೆ, ಸಂಪ್ರದಾಯ ಆಚರಣೆಗಳ ಹಿನ್ನೆಲೆಗೆ ಕೆಲವು ಸಲ ಐತಿಹಾಸಿಕ ಘಟನಾವಳಿಯೇ ಮೂಲಮಾತ್ರಿಕೆಯಾಗಿರ ಬಹುದಾದ ಮಾತನ್ನು ಅಲ್ಲಗಳೆಯುವಂತಿಲ್ಲ.

ದೇವರಹಿಪ್ಪರಗಿಯ ಭಾಗದಲ್ಲಿ ಮಲ್ಲಯ್ಯನ ವಿಷಯವಾಗಿ ಪುರಾಣಕಥೆಗಳ ಹೇಳಿಕೆಗಳೂ ಇವೆ. ಚಾರಿತ್ರಿಕ ಸ್ಪರ್ಶವನ್ನು ಪಡೆದ ಬೇರೊಂದು ಹೇಳಿಕೆಯೂ ಇದೆ.

ಮಲ್ಲಯ್ಯನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದ ದೈತ್ಯ ಮತ್ತು ಅವನ ಪರಿವಾರವನ್ನು ಸಂಹರಿಸಿದ. ಆದರೆ ದೈತ್ಯರಕ್ತ ನೆಲಕ್ಕೆ ಬೀಳುತ್ತಿರುವಂತೆಯೇ ಅವರು ಮತ್ತೆ ಜೀವಂತವಾಗುತ್ತಿದ್ದರು. ಇದನ್ನು ಗಮನಿಸಿದ ಮಲ್ಲಯ್ಯನು ದೇವರ ಸಲಹೆಯಂತೆ ರಾಕ್ಷಸರ ರಕ್ತ ನೆಲಕ್ಕೆ ಬೀಳುವ ಮೊದಲು ನಾಯಿಗಳು ನೆಕ್ಕುವಂತೆ ಮಾಡಿದ. ಅಲ್ಲಿಗೆ ರಾಕ್ಷಸ ಸಂಹಾರವಾಗಿ ದೇವತೆಗಳು ನಿರ್ವಿಘ್ನರಾದರು. ನಾಯಿಗಳ ಈ ವಿಷಯ ನರಸಿಂಹ ಕವಿಯ ಅನುಭವ ಶಿಖಾಮಣಿಯಲ್ಲಿಯೂ ಬಂದಿದೆ. ಆದರೆ ಕಥಾ ರೀತಿಯೇ ಬೇರೆ ತೆರನಾಗಿದೆ. ಜಾನಪದರ ಬಾಯಿಯಲ್ಲಿ ಮುಂದೆಯೂ ತನ್ನದೇ ಆದ ರೀತಿಯಲ್ಲಿ ಮುಂದುವರಿಯುತ್ತದೆ. ಮಲ್ಲಯ್ಯ ಯುದ್ಧ ಮುಗಿಸಿಕೊಂಡು ಮನೆಗೆ ಬಂದರೆ ಅವನ ಹೆಂಡತಿ ಗಂಗಮಾಳಮ್ಮ ಪತಿಯ ಗುರುತು ಹಿಡಿಯಲಿಲ್ಲ. ಆಕೆ ಒಂದು ಶರತ್ತನ್ನು ಮಲ್ಲಯ್ಯನಿಗೆ ಹಾಕಿದಳು. ಏಳುಕೋಟಿ ಜನ ಕೂಡಿ ಅವರೆಲ್ಲ ಒಪ್ಪಿಕೊಂಡು ಮತ್ತೊಮ್ಮೆ ಅಕ್ಕಿಕಾಳು ಬಿದ್ದರೆ ನಾನು ನಿನ್ನನ್ನು ಪತಿಯನ್ನಾಗಿ ಸ್ವೀಕರಿಸುತ್ತೇನೆ ಎಂದು. ಇದೇ ಏಳುಕೋಟಿ ಏಳುಕೋಟಿ ಎನ್ನುವ ಸಂಪ್ರದಾಯಕ್ಕೆ ಕಾರಣವಾಯಿತಂತೆ. ರಾವುತರಾಯ ದೇವರಾಗಿ ಪರರ ಹೆಂಡತಿಯನ್ನು ಹೇಗೆ ಬಯಸುತ್ತಾನೆ ಎಂಬ ಹಿನ್ನೆಲೆಯಲ್ಲಿ ಈ ಕಥೆ ಮಲ್ಲಯ್ಯನಿಗೆ ಆರೋಪಿತವಾಗಿದೆ.

ಚಿಕ್ಕರೊಗಿಯ ಶ್ರೀ ಮಾಯಪ್ಪ ಮಲ್ಲಯ್ಯ ಕುರುಬರ ಎನ್ನುವವರು ವಗ್ಗಯ್ಯನ ಸಂಪ್ರದಾಯಕ್ಕೇ ಹಿನ್ನೆಲೆಯಾಗಿ ಹೇಳುವ ಕತೆಗೆ ಯಾವ ಕಾವ್ಯಾಧಾರವಾಗಲೀ, ಪುರಾಣಾಧಾರವಾಗಲೀ ಇದ್ದಂತೆ ತೋರುವುದಿಲ್ಲ. ನವಕೋಟಿ ನಾರಾಯಣ ಮೂಲತಃ ಬಡವನಾಗಿದ್ದವ. ಮಲ್ಲಯ್ಯನಿಂದ ಒಂಭತ್ತು ಕೋಟಿ ಹಣವನ್ನು ಸಾಲಪಡೆದು ಶ್ರೀಮಂತನಾದ. ಮಲ್ಲಯ್ಯನಿಗೆ ಹಿಂದಿರುಗಿಸಿದ್ದು ಕೇವಲ ಎರಡುಕೋಟಿ ಮಾತ್ರ. ಎಷ್ಟು ಬೇಡಿದರೂ ಅವನು ಉಳಿದ ೨ ಕೋಟಿ ಹಣವನ್ನು ಕೊಡದೇ ಹೋದಾಗ ಮಲ್ಲಯ್ಯನಿಗೆ ಭ್ರಮೆಯಾಯಿತು. ಮಲ್ಲಯ್ಯನ ಹೆಂಡತಿ ಗಂಗಿಮಾಳಮ್ಮ ಬಡಿಗನೊಬ್ಬನನ್ನು ತಿಳಿಹೇಳಲು ಕರೆಸಿದಳು. ಬಡಿಗನು ಕೊಟಮಿಗಿ ತಯಾರು ಮಾಡಿದ. ಹಾಲು ಬೆಲ್ಲ ಅದರಲ್ಲಿ ಹಾಕಿಕೊಂಡು ಊದಿನಕಡ್ಡಿ ಹಿಡಿದುಕೊಂಡು ಕಂಬಳಿಕೋರಿ ತೆಗೆದುಕೊಂಡು ಬಂದ. ಅವನ ಆ ವಸ್ತುವನ್ನು ಕಸಿದುಕೊಂಡು ಭ್ರಮೆಗೊಂಡ ಮಲ್ಲಯ್ಯ ಹಿಂದಿರುಗದ ಹಣವನ್ನು ಕುರಿತು ಏಳುಕೋಟಿ ಏಳುಕೋಟಿ ಎನ್ನುತ್ತ ಹೊರಟುಬಿಟ್ಟ. ಹೀಗೇ ಅವನು ತಿರುಗುತ್ತ ಹೊರಟಂತೆ ಅವನ ಹಿಂದೆ ಶಿಷ್ಯರು ಬೆಳೆದರು. ಕಾಲಕ್ರಮೇಣ ಆ ಶಿಷ್ಯರು ನಮ್ಮ ಗತಿಯೇನು ಎಂದರು. ಹೆಗಲಿಗೆ ಕೊಟಮಿಗಿ ಹಾಕಿಕೊಂಡು ಅಂಬಲಿ ಕುಡಿಯುತ್ತ ಹೋಗಿರಿ ಎಂದು ಹೇಳಿದ. ಆ ಮಲ್ಲಯ್ಯನ ಶಿಷ್ಯಪರಂಪರೆಯೇ ಇಂದಿನ ವಗ್ಗಯ್ಯಗಳು.

ದೇವರಹಿಪ್ಪರಗಿಯಲ್ಲಿ ಜಾನಪದರು ಹೇಳುವ ಇನ್ನೊಂದು ಕಥೆ ಸ್ವಾರಸ್ಯಕರವಾಗಿದ್ದು ಅನೇಕ ಐತಿಹಾಸಿಕ ಅಂಶಗಳ ಮೇಲೆ ಬೆಳಕು ಚೆಲ್ಲುವಂತಿದೆ. ಈ  ಕಥೆಕೇಳಿದ ಮೇಲೆ ಇಂದಿಗೂ ದೇವರಹಿಪ್ಪರಗಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಾಚರಣೆಗಳಲ್ಲಿ ಇತಿಹಾಸ ಹುದುಗಿಕೊಂಡಿರುವ ಅನಿಸಿಕೆ ಗಟ್ಟಿಯಾಗುತ್ತದೆ. ದೇವರ ಹಿಪ್ಪರಗಿಯಲ್ಲಿ ರಾವುತರಾಯ ಮತ್ತು ಮಲ್ಲಯ್ಯನ ಎರಡು ದೇವಾಲಯಗಳು ಮುಖ್ಯವಾಗಿವೆ. ರಾವುತರಾಯ ಮೂಲತಃ ಅಲ್ಲಿಯವನಲ್ಲ. ಅವನು ಅದೇ ಸಿಂದಗಿ ತಾಲೂಕಿನ ಚಟ್ಟರಕಿ ಊರಿನ ಪಠಾಣನಂತೆ. ಮಲ್ಲಯ್ಯನನ್ನು ಧರಯ್ಯನೆಂಬ ದೈತ್ಯ ಕಾಡತೊಡಗಿದ. ಈ ಕಾಟದಿಂದ ತನ್ನನ್ನು ಮುಕ್ತಗೊಳಿಸಬೇಕೆಂದು ರಾವುತರಾಯನನ್ನು ಮಲ್ಲಯ್ಯ ಬೇಡಿಕೊಂಡ. ಧರಯ್ಯನ ಕಾಡದಿಂದ ತನ್ನನ್ನು ಮುಕ್ತ ಮಾಡಿದ್ದಾದರೆ ಬೇಡಿದ್ದು ಕೊಡುವುದಾಗಿ ಮಲ್ಲಯ್ಯ ವಚನಕೊಟ್ಟ. ರಾವುತರಾಯ ಧರಯ್ಯನೊಂದಿಗೆ ಯುದ್ಧ ಮಾಡಿದ, ಧರಯ್ಯ ಅವನಿಗೆ ಸೋತು ಓಡತೊಡಗಿದ. ರಾವುತರಾಯ ಬೆನ್ನು ಬಿಡದೆ ಈಗಿನ ಜತ್ತ ತಾಲೂಕಿನ ಗುಡ್ಡವೊಂದನ್ನು ಹೊಕ್ಕ. ಅಕ್ಷರಶಃ ಗುಡ್ಡವನ್ನೇ ಪ್ರವೇಶಿಸಬೇಕೆಂದಿರುವಾಗ ಮುಖಗುಡ್ಡದ ಒಳಗಾಯಿತು. ಹಿಂದಿನ ಭಾಗ ಒಳಸೇರದೇ ಹಾಗೆಯೇ ಉಳಿಯಿತು. ಇಂದಿಗೂ ಆ ಗುಡ್ಡಕ್ಕೆಧರಯ್ಯನ ಗುಡ್ಡವೆಂತಲೂ ಹೆಸರಿದ್ದು ಧರಯ್ಯನ ಹಿಂಭಾಗಕ್ಕೆ ಪೂಜೆ ಸಲ್ಲುತ್ತದಂತೆ.

ರಾವುತರಾಯ ತಿರುಗಿ ಬಂದು “ನಿನ್ನ ಕಷ್ಟ ಪರಿಹರಿಸಿದ್ದೇನೆ. ಮುಂಚೆ ವಚನ ಕೊಟ್ಟಂತೆ ನಾನು ಬೇಡಿದ್ದು ಕೊಡು” ಎಂದ. ಮಲ್ಲಯ್ಯ ಬೇಡು ಎಂಡ. ರಾವುತ ರಾಯ ಮಲ್ಲಯ್ಯನ ಹೆಂಡತಿ ಗಂಗಮಾಳಮ್ಮನನ್ನೇ ಬೇಡಿದ. ಇದು ಗಂಗಮಾಳಮ್ಮನಿಗೆ ಧರ್ಮಸಂಕಟವಾಯಿತು. ರಾವುತರಾಯನ ಸಂಗಡ ಹೋಗದಿದ್ದರೆ ಗಂಡನ ವಚನವನ್ನು ಮುರಿದಂತಾಗುತ್ತದೆ. ಹೋದರೆ ಪತಿಧರ್ಮಕ್ಕೆ ಭಂಗಬರುತ್ತದೆ. ಇಕ್ಕಟ್ಟಿನಲ್ಲಿ ಸಿಲುಕಿದ ಆಕೆ ಯೋಚನೆಮಾಡಿ ರಾವುತರಾಯನಿಗೆ ಒಂದು ಮಾತು ಹೇಳಿದಳು. ಏಳುಕೋಟಿ ಜನ ಕೂಡಲ್ಲಿ. ನನ್ನ ನಿನ್ನ ಲಗ್ನವಾಗಲಿ. ಇಂದಿಗೂ ಏಳುಕೋಟಿ ಜನ ಕೂಡಲಿ. ಆ ಲಗ್ನ ನೆರವೇರಿಲ್ಲ ಎಂಬುದು ಜಾನಪದ ನಂಬಿಕೆ. ಪ್ರತಿ ವರ್ಷ ವಿಜಯದಶಮಿಯಂದು ರಾವುತರಾಯನ ಮೂರ್ತಿಯನ್ನು ಮಲ್ಲಯ್ಯನ ಗುಡಿಗೆ ತಂದು ಆ ಗುಡಿಯ ಆವರಣದಲ್ಲಿರುವ ‘ಹಸೆಕಟ್ಟಿ’ಯ ಮೇಲೆ ಇಡುತ್ತಾರೆ. ಹುಣ್ಣಿಮೆಯದಿನ ಸೂಳೆಭಾವಿಯಿಂದ ತಂದ ಗಂಗಮಾಳಮ್ಮನ ಮೂರ್ತಿಯನ್ನು ಹಸಿಕಟ್ಟೆಯ ಮೇಲಿರುವ ರಾವುತರಾಯನ ಮಗ್ಗಲು ಕೂಡ್ರಿಸುತ್ತಾರೆ. ಮದುಮಗಳಿಗೆ ಮಾಡುವಂತೆ ಅರಿಷಿಣ ಹಚ್ಚುವುದು, ನೀರು ಹಾಕುವುದು ಎಲ್ಲ ಅನುಕರಣೆಗಳೂ ಗಂಗಮಾಳಮ್ಮನೊಂದಿಗೆ ಜರುಗುತ್ತವೆ. ಅಕ್ಷತಾರೋಪಣ ಮಾಡದೇ ಒಮ್ಮೆಲೇ ಮೂರ್ತಿಯನ್ನು ತೆಗೆದುಕೊಂಡು ಒಯ್ದು ಬಿಡುತ್ತಾರೆ. ಅಕ್ಷತಾರೋಪಣ ರಾವುತರಾಯನೊಬ್ಬನಿಗೇ ನಡೆಯುತ್ತದೆ. ಪ್ರತಿವರ್ಷವೂ ಹೀಗೇ ಏಳುಕೋಟಿ ಜನ ಕೂಡಲಾರದೇ ಲಗ್ನ ಪೂರ್ಣಗೊಳ್ಳುವುದೇ ಇಲ್ಲ. ಈ ಅರ್ಥದಲ್ಲಿ ರಾವುತರಾಯ ಪ್ರತಿವರ್ಷವೂ ಮದುಮಗ. ಇದು ತ್ರಿಪದಿಯಾಗಿಯೂ ಜನಮನದಲ್ಲಿ ಅಚ್ಚೊತ್ತಿದೆ.

ವರುಸಕ ಬರುವದು ಹರಸುಳ್ಳ ಮಾನಮ್ಮಿ
ವರಸುಕ ಒಮ್ಮಿ ಮದುಮಗ ರಾವುತರಾಯ
ಬನ್ನಿಯ ಮುಡದ ಬರತಾನ.

ಈ ಬಿನ್ನೆಲೆಯಲ್ಲಿ ಏಳುಕೋಟಿ ಏಳುಕೋಟಿ ಎನ್ನುವುದು ರಾವುತರಾಯನ ನಿರಾಸೆಯ ದನಿಯಾಗಿರಬಹುದು. ಕೂಡಿದರೆ ಹೇಗೆ ಎಂಬ ಕಳವಳ ಅದೇ ವೇಳೆಯಲ್ಲಿ ಮಲ್ಲಯ್ಯನಿಗೂ ಇರಬಹುದು.

ಏಳುಕೋಟಿ ಎನ್ನುವುದು ಒಂದು ಕ್ಷೇತ್ರ. ಆ ಕ್ಷೇತ್ರದ ಸ್ಮರಣೆಯೇ ಏಳುಕೋಟಿ ಏಳುಕೋಟಿ ಎಂಬುದನ್ನು ಸಾಕ್ಷ್ಯಾಧಾರವಾಗಿ ಡಾ. ಎಂ. ಬಿ. ನೇಗಿನಹಾಳ ಸ್ಪಷ್ಟ ಪಡಿಸಿದ್ದಾರೆ. ಆದರೆ ಜಾನಪದ ಸಂಪ್ರದಾಯ ಕಾಲಮಾನದಲ್ಲಿ ತನ್ನದೇ ಆದ ಕಥೆಕಟ್ಟುತ್ತದೆ. ಸಂಪ್ರದಾಯಕ್ಕೆ ಕಲ್ಪನೆಯ ಕುಡಿಯೊಡೆಯುತ್ತದೆ. ಮುಂಚೆ ಹೇಳಿದಂತೆ ಇಂಥ ನಂಬಿಕೆಗೆ ಮೂಲ ಆಧಾರ ಪುರಾಣವಾಗಿರಬಹುದು ಅಥವಾ ಇತಿಹಾಸವಾಗಿರಬಹುದು. ಹದಿನಾಲ್ಕನೇ ಶತಮಾನದ ಆನಂದಗಿರಿಯ ಶಂಕರ ವಿಜಯದಲ್ಲಿ ಮಲ್ಲಾರಿಯ ವಾಹನ ಶ್ವಾನವೆಂದೂ ಆ ಶ್ವಾನವೇ ತಾವೆಂದೂ ಮಲ್ಲಾರಿಯ ಭಕ್ತರು ನಾಯಿಯಂತೆ ಬೊಗಳುತ್ತಾರೆಂಬ ಹೇಳಿಕೆಯಿದೆ. ಇಂಥ ಅನೇಕ ವಿಷಯಗಳು ಜಾನಪದ ಸಂಪ್ರದಾಯದ ನಂಬಿಕೆಗಳನ್ನು ಬಲಪಡಿಸುತ್ತವೆ.

ಸಂಪ್ರದಾಯಗಳು ಒಂದೊಂದು ಜನಾಂಗದ ಪರಂಪರಾಗತ ನಂಬಿಕೆಗಳ ಆಚರಣೆಗಳ ಪಳಿಯುಳಿಕೆಗಳು. ನಾಡಿನ ಸಾಂಸ್ಕೃತಿಕ ಬದುಕನ್ನು ಅಭ್ಯಾಸಮಾಡಲು ಹೊರಟಾಗ ಒಂದೊಂದು ಜನಾಂಗದವರು ಬೆಳೆಯಿಸಿಕೊಂಡು ಬಂದ ಸಂಪ್ರದಾಯಗಳು ಇಂಥ ಅಭ್ಯಾಸಕ್ಕೆ ಬೆನ್ನೆಲಬಾಗಿ ನಿಲ್ಲುತ್ತವೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಹುಟ್ಟುವ ಹಾಡು ಕಥೆಗಳು ಕೇವಲ ಕಲ್ಪಕಥೆಗಳು ಕಗ್ಗಗಳು ಎಂದು ಮೂಗು ಮುರಿಯುವುದಕ್ಕಿಂತ ಅವುಗಳ ಮಧ್ಯದಲ್ಲಿಯೇ ಮಿಂಚುವ ಐತಿಹಾಸಿಕ ಘಟನೆಗಳೋ ಜಾನಪದರ ಮೌಲ್ಯಗಳೋ ಮುಖ್ಯವಾಗಬೇಕು. ಪ್ರಸ್ತುತ ಮೈಲಾರಲಿಂಗ ಸಂಪ್ರದಾಯದಲ್ಲಿ ಚಟ್ಟರಕಿಯ ಪಠಾಣ ಸಂಶೋಧಕರಿಗೆ ನೀಡುವ ಆಹ್ವಾನ, ವಗ್ಗಯ್ಯ ಯಾವ ಜಾತಿಯವನಿದ್ದರೂ ಅವನನ್ನು ಮೇಲ್ಜಾತಿಯವರೂ ಆರಾಧಿಸಬೇಕೆನ್ನುವ ವಿಶಾಲಭಾವನೆಯಂಥ ಅಂಶಗಳು ಈ ದಿಸೆಯ ಅಭ್ಯಾಸದ ಅಗತ್ಯವನ್ನು ಎತ್ತಿ ಹೇಳುತ್ತವೆ. ಈ ದೃಷ್ಟಿಯಿಂದ ಕನ್ನಡನಾಡಿನತುಂಬ ಹರಡಿರುವ ಜಾನಪದರ ಒಂದೊಂದು ಸಂಪ್ರದಾಯದ ತಳಬುಡ ಜಾಲಾಹಿಸಿದರೆ ಮತೀಯ ಭಾವನೆಯ ಹಿನ್ನೆಲೆಯಲ್ಲಿಯೇ ಹುಟ್ಟಿರುವ ನಮ್ಮ ಅನೇಕ ಕಾವ್ಯ, ಪುರಾಣಕ್ಕಿಂತ ಹೆಚ್ಚಿನ ಸತ್ಯವನ್ನು ಜಾನಪದ ಸಂಪ್ರದಾಯಗಳು ನೀಡಬಲ್ಲವು.

 

ಗ್ರಂಥ ಋಣ

೧. ಜಾನಪದ ಅಧ್ಯಯನ -ಡಾ. ದೇ. ಜವರೇಗೌಡ.

೨. ಜಾನಪದ ಸಂಗಮ -ಡಾ. ಜೀ. ಶಂ. ಪರಮಶಿವಯ್ಯ.

೩. ಉತ್ತರ ಕರ್ನಾಟಕದ ಜನಪದ ಪದ್ಯ ಸಾಹಿತ್ಯ – ಡಾ. ಎಂ. ಎಂ. ಕಲಬುರ್ಗಿ.

೪. ಮೈಲಾರಲಿಂಗನ ಪದಗಳು – ಸಂ. ಡಾ. ಎಂ. ಬಿ. ನೇಗಿನಹಾಳ.

 

ಕ್ಷೇತ್ರಕಾರ್ಯಸಂದರ್ಶಿಸಿದ ವ್ಯಕ್ತಿಗಳು

೧. ದೇವರಹಿಪ್ಪರಗಿ – ಶ್ರೀ ಭಾಸ್ಕರ ಮ್ಯಾಗೇರಿ

ಶ್ರೀ ಭೀಮಪ್ಪ ಗುಡಮನಿ.

೨. ಚಿಕ್ಕರೂಗಿ – ಶ್ರೀ ಮಾಯಪ್ಪ ಮಲ್ಲಯ್ಯ ಕುರುಬರ

೩. ಮಂಗಸೂಳಿ – ಶ್ರೀ ಕಾಂಬಳೆ.