ನಮ್ಮ ವೃತ್ತಿರಂಗಭೂಮಿ ಮತ್ತು ರಂಗನಾಟಕಗಳನ್ನು ಕುರಿತು ಚರ್ಚಿಸುವ ಮೊದಲು ನಮ್ಮ ಜಾನಪದ ರಂಗಭೂಮಿ, ಅದರ ಪ್ರಕಾರಗಳನ್ನು ಕುರಿತು ವಿಚಾರಿಸುವುದು ಹೆಚ್ಚು ಪ್ರಸ್ತುತ. ಏಕೆಂದರೆ ನಮ್ಮ ವೃತ್ತಿರಂಗಭೂಮಿ ಅಂಕುರಿಸಿದುದೇ ಜಾನಪದ ತಾಯಿಬೇರಿನಿಂದ.

ನನ್ನ ಬಾಲ್ಯದಲ್ಲಿ ನಾನು ನೋಡಿದ ದಾಸರಾಟ, ಚಿಮಣಾನಾಟ, ರಾಧಾನಾಟ, ‘ಸಂಗ್ಯಾಬಾಳ್ಯಾ’ ನಾಟಕಗಳ ಪ್ರಯೋಗಗಳು ಇನ್ನೂ ಕಣ್ಮುಂದೆ ಕಟ್ಟಿದಂತಿದೆ. ನಾನು ಹುಟ್ಟಿದುದು ಗದುಗ. ತ್ರಿಕೂಟೇಶ್ವರ ದೇವಸ್ಥಾನದ ಕಿಲ್ಲೇದಲ್ಲೇ ನಮ್ಮ ಮನೆ. ನಮ್ಮ ಮನೆಯ ನೆರೆಹೊರೆಯ ದೊಡ್ಡ ಬೀದಿ, ಅದರ ಒಂದು ತುದಿಗೆ ದೊಡ್ಡ ಬೇವಿನ ಮರ. ಈ ಬೀದಿಯ ಉದ್ದಗಲಗಳ ಹರಹು ಒಂದು ‘ಓಪನ್ ಏರ್’ ರಂಗಭೂಮಿಯೇ ಆಗಿತ್ತು. ಬೇವಿನಮರದ ಇನ್ನೊಂದು ತುದಿಗೆ ಹೊರಳಿದರೆ ದಾಸರೋಣಿ.

ನಮ್ಮ ಓಣಿಯ ಜನರೆಲ್ಲ ಮನೆಮನೆಗೆ ಪಟ್ಟಿ ಕೂಡಿಸಿ ಆಗಾಗ ಈ ಜಾನಪದ ಆಟಗಳನ್ನು ಅಟ್ಟ ಹಾಕಿ ಬೆಳತನಕ ಆಡುವರು. ನಮಗೊ ಈ ಆಟಗಳನ್ನು ಬೆಳತನಕ ನೋಡುವುದೇ ಒಂದು ಹುರುಪು. ಬೆಳತನಕ ನಿದ್ದೆಗೆಟ್ಟು ಮನೆಯಲ್ಲಿ ತಾಯಿಯಿಂದ ಬೈಸಿಕೊಳ್ಳುವುದು ಎಂದರೆ ಭರತವಾಕ್ಯವಿದ್ದಂತೆ.

ಈ ದಾಸರಾಟವೆಂದರೆ ಅದಕ್ಕೊಂದು ಕಥೆಯ ಹಂದರವೆಂಬುದೆ ಇರುತ್ತಿರಲಿಲ್ಲ. ಗೊಡ್ಡಿ ಭೀಮಣ್ಣ, ಚಿಮಣಾ, ಜವಾರಿ, ಇವರು ಪ್ರಣಯದ ಸುತ್ತಲೂ ನಡೆಸುವ ಅಶ್ಲೀಲ ಬೆರೆತ ಹಾಸ್ಯ ಸಂಭಾಷಣೆ, ಹಾಡುಗಳಿಂದಲೂ, ವಾದ್ಯಗಳಿಂದ ನಡೆಯುವ ಕುಣಿತದೊಂದಿಗೆ ಮನರಂಜನೆ ಭರಪೂರಾಗಿ ಸೂಸಿ ಬರುತ್ತಿತ್ತು. ಈ ದಾಸರಾಟಕ್ಕೆ ಕಥಾವಸ್ತು ಎಂಬುದೇ ಇರುತ್ತಿರಲಿಲ್ಲ. ಅಂತೆಯೇ ‘ದಾಸರಾಟ ಆಟವಲ್ಲ, ದೋಸೆಯೂಟ ಊಟವಲ್ಲ’ ಎಂಬ ಗಾದೆಯೂ ಉದ್ಭವಿಸಿತ್ತು. ಮುಖ್ಯವಾಗಿ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬುದೇ ಈ ಪ್ರಣಯ ವಿಷಯವಾಗಿರುತ್ತಿತ್ತು.

ಈ ದಾಸರಾಟವೆ ಮಹಾರಾಷ್ಟ್ರದ ಜಾನಪದದ ಅಷ್ಟೇ ಅಶ್ಲೀಲವಾದ ‘ತಮಾಶಾ’ ಪ್ರಯೋಗಕ್ಕೆ ಸ್ಫೂರ್ತಿ ಕೊಟ್ಟಿತು. ಈ ತಮಾಶಾದಲ್ಲಿ ಗೊಡ್ಡಿ ಭಿಮಣ್ಣನಂತೆ ಗಲ್ವೋಜಿ, ಜವಾರಿ, ಬದಲು ಸುಖಾರಾಂ ತಾತ್ಯಾ ಹಾಗೂ ಚಿಮಣಾರ ಬದಲು ರಾಧಾ ಎಂಬ ಪಾತ್ರಗಳು ಬಂದವು.

ತಮಾಶಾದ ರಾಧಾನನ್ನು ಅನುಕರಿಸಿ ಚಿಮಣಾದ ದಾಸರಾಟವೆ ಮತ್ತೆ ರಾಧಾನಾಟವಾಗಿ ಪರಿವರ್ತಿತವಾಯಿತು. ಇದರ ಕಥಾವಸ್ತುವೂ ಪ್ರಣಯವೇ ಮತ್ತು ಹೆಣ್ಣು-ಗಂಡುಗಳ ಮೇಲ್ಮೆಯ ಚರ್ಚೆ. ನಮ್ಮ ಕನ್ನಡಿಗರು ತಾವೇ ಮೂಲ ಕಲ್ಪಕರಾದರೂ ಅದು ಮರಾಠಿಗೆ ರೂಪಾಂತರಗೊಂಡಾಗ ಅದರಲ್ಲಿಯ ಸೊಗಸು ಗಾರಿಕೆಯೇ ಇವರಿಗೆ ಹೆಚ್ಚುಗಾರಿಕೆಯೆನಿಸಿ ಮತ್ತೆ ಮರಾಠಿಯ ಅನುಕರಣೆ ಮಾಡುವುದೊಂದು ಸ್ವಭಾವ.

ಮುಂದೆ ಬಂತು ಇನ್ನೂ ಹೆಚ್ಚಾಗಿ ನಮ್ಮ ಬಗ್ಗೆ ಸೆರೆಹಿಡಿಯುವ ‘ಸಂಗ್ಯಾ-ಬಾಳ್ಯಾ’ ಆಟ. ಬೈಲಹೊಂಗಲದ ಬಳಿ  ನಡೆದ ಒಂದು ಪ್ರತ್ಯಕ್ಷ ಕಾಮ ವಿಷಯವೇ. ಇನ್ನೊಬ್ಬರ ಹೆಂಡತಿಯ ಮೇಲೆ ಮನಸ್ಸಿಟ್ಟು ಜಾರಿದ ಸಂಗ್ಯಾ ಕೊನೆಗೆ ಕೊಲೆಯಾಗುವ ಮರ್ಮಭೇದಕ ಕತೆಯೇ ‘ಸಂಗ್ಯಾ-ಬಾಳ್ಯಾ’ ಆಟದ ಮೂಲವಸ್ತು. ಈ ‘ಸಂಗ್ಯಾಬಾಳ್ಯಾ’ ಕರ್ತೃ ಯಾರೆಂಬುದರ ಬಗ್ಗೆ ಬಹಳ ದಿವಸ ಗೊತ್ತಿರಲಿಲ್ಲ. ಅದನ್ನು ಪತ್ತಾರ ಎಂಬ ಕನ್ನಡ ಶಾಲಾ ಮಾಸ್ತರರೊಬ್ಬರು ಬರೆದುದೆಂದು ಆಮೇಲೆ ತಿಳಿದುಬಂತು. ಮನೋಹರ ಗ್ರಂಥಮಾಲೆಯ ಒಂದು ಪುಷ್ಪವಾಗಿ ಪ್ರಕಟಗೊಂಡ ಗ್ರಂಥದಲ್ಲಿ ಶ್ರೀ ಕೀರ್ತಿನಾಥ ಕುರ್ತಕೋಟಿ ಅವರು ತಮ್ಮ ಮುನ್ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸಂಗ್ಯಾ-ಬಾಳ್ಯಾ ತನ್ನ ಮರ್ಮಿಕತೆಯಿಂದಾಗಿ ಮರಾಠಿ ಭಾಷೆಗೂ ಅನುವಾದಗೊಂಡಾಗ ಅದು ಹೇಗೋ ಅದರ ಕರ್ತೃ ಚಂದ್ರಶೇಕರ ಕಂಬಾರ ಎಂದು ಪ್ರಕಟಗೊಂಡಿತು. ಆದರೆ ಮುಂದೆ ಕಂಬಾರರು ತಾನು ‘ಸಂಗ್ಯಾಬಾಳ್ಯಾ’ ಆಟದ ಕರ್ತೃವಲ್ಲ ಎಂದು ಸ್ಪಷ್ಟಪಡಿಸಿದರೆಂದು ತಿಳಿಯುತ್ತದೆ.

ನಾನು ನನ್ನ ಬಾಲ್ಯದಲ್ಲಿ ಅನೇಕ ಸಲ ನಮ್ಮ ಗದುಗಿನ ಕಿಲ್ಲೇದ ಬಯಲಿನಲ್ಲಿ ಅಟ್ಟ ಹಾಕಿ, ಪ್ರಯೋಗಿಸಲ್ಪಟ್ಟ ಈ ಆಟವನ್ನು ನೋಡಿ ನೋಡಿ ಅದರ ಪದಗಳೆಲ್ಲಾ ಬಾಯಿಪಾಠವಾಗಿಬಿಟ್ಟವು. ಅವು ಈ ವೃದ್ಧಾಪ್ಯದಲ್ಲಿ ಇನ್ನೂ ಸ್ಮರಣೆಯಲ್ಲಿವೆ. ನಾನು ಆಟ ನೋಡಿ ಬಂದು ನಮ್ಮ ತಾಯಿಯ ಮುಂದೆ ‘ಹುಲಿ ಹಾಂಗs, ಹುಲಿ ಹಾಂಗ ಮೂವರು ಅಣ್ಣತಮ್ಮರು ಜೀಜೀ ಜೀರೇ’ ಎಂದು ಹಾಡುತ್ತಿದ್ದೆ, ನಾವೂ ನಮ್ಮ ತಾಯಿಗೆ ಮೂವರು ಮಕ್ಕಳಿದ್ದುದರಿಂದ ಇದನ್ನು ಕೇಳಿದ ನಮ್ಮ ತಾಯಿ ಪ್ರೀತಿಯಿಂದ ‘ಹುಚ್ಚ ಖೋಡಿ’ ಎಂದು ಬೈದು ಬೆನ್ನಿಗೆ ಎರಡು ಮೆತ್ತನೆಯ ಏಟು ಕೊಟ್ಟಾಗ ಅದು ನನಗೆ ಒಂದು ಬಹುಮಾನವಾಗಿರುತ್ತಿತ್ತು.

‘ಸಂಗ್ಯಾ-ಬಾಳ್ಯಾ’ ಒಂದು ಲೋಕನಾಟಕವಾಗಿ ಜನತೆಯ ಚಿತ್ತ ಸೂರೆಗೊಂಡುದಕ್ಕೆ ಕಾರಣ ಅದರ ಮನುಷ್ಯ ಸಹಜ ಪ್ರೇಮ-ಕಾಮಗಳ ಕಲ್ಲೋಲ, ಸಂಗ್ಯಾ ಬೈಲಹೊಂಗಲದ ಸಾವುಕಾರ ತರುಣ. ತುಂಬಿದ ಹರೆಯ. ಬಾಳ್ಯಾ ಬಡವನಾದರೂ ಅವನ ಜೀವನದ ಗೆಳೆಯ. ಅದೇ ಊರಿನ ರೈತನ ಮಕ್ಕಳಾದ ಪ್ರಾಯಕ್ಕೆ ಬಂದ ಈರಪ್ಪ, ವಿರುಪಾಕ್ಷಿ, ಬಸವಂತ ಸಾಕಷ್ಟು ಭೂಮಿಕಾನಿ ಯುಳ್ಳವರು. ಊರಿಗೇ ಪ್ರಸಿದ್ಧ ವ್ಯಾಪಾರಿಗಳೂ ಕೂಡ. ಹಿರಿಯಣ್ಣ ಈರಪ್ಪನ ಹೆಂಡತಿ ಗಂಗಾ ತುಂಬಿದ ತರುಣಿ; ತುಂಬು ಚೆಲುವೆ. ಸಂಗ್ಯಾ ಪರಮ್ಮ ಎಂಬ ಕುಂಟಲಗಿತ್ತಿಯ ಸಹಾಯದಿಂದ ಗಂಗಾ ಜಾತ್ರೆಗೆ ಹೋದಾಗ ಅವಳ ಕೊರಳ ಆಭರಣವನ್ನು ಅಪಹರಿಸಿ ಮತ್ತೆ ಅವಳಿಗೆ ತಿರುಗಿ ಕೊಡುವ ನೆಪದಲ್ಲಿ ಹೇಗೋ ಗಂಗಿಯನ್ನು ವಶಪಡಿಸಿಕೊಂಡು ಬಿಟ್ಟು ಆಕೆಯ ಮಂಚದ ಅರ್ಧಭಾಗ ವಹಿಸಿಕೊಳ್ಳುತ್ತಾನೆ. ಈಗ ಈರಪ್ಪ ಬರುತ್ತಾನೆ.

“ಏನ್ ಮಾಡತಿದ್ದಾಳಪ್ಪ ಗಂಗಿ ಒಳಗ! ಕದಾ ತಗಿವಳ್ಳೊ ನನಗ’
ಮಾಳಗಿ ಹತ್ತಿ ನೋಡಲೇನೋ ಕಿಡಿಕ್ಯಾಗ! ಸಂಶೆ ಬಂದಿತೊ ನನಗ’

ಆಗಿನ ಈ ಈರಪ್ಪನ ಹಾಡು ನೆನಪಾದಾಗ ಆ ಬಾಲ್ಯದ ನೆನಪಿನ ಚಿತ್ರ ಕಣ್ಕಟ್ಟುತ್ತದೆ. ಆಗ ಗಂಗಿ ಹಾಡುತ್ತಾಳೆ. :

“ಅಯ್ಯೋ ಸಂಗ್ಯಾ ಮಾಡಲಿನ್ಹ್ಯಾಂಗ | ಈಶ ಬಂದಾನೊ ಹೊರಗ ||
ಕೂಡಿದ ಗೆಣೆತನ ಬಾಳಲಿಲ್ಲೊ ಬಾಳದಿನಾ ||”

ಎಂದು ಆತಂಕದ ಸ್ವರದಲ್ಲಿ ಗಂಗಿ ಹಾಡಿದ ಈ ಹಾಡು ನೆನೆದರೆ ಮೈ ಜುಂ ಎನ್ನುತ್ತದೆ.

ಕೊನೆಗೆ ಗಂಗಿಯ ಮನೆಯಿಂದ ಪಾರಾಗಿ ಓಡಿ ಹೋಗುತ್ತಾನೆ ಸಂಗ್ಯಾ. ಗಂಗಿಯನ್ನು ಕುರಿತು ಈಶ ಹೇಳುವ ಹಾಡು ತುಸು ತುಸು ನೆನಪು.

“ಏನಿದು ಈಚಾರ | ಮಾಡಿದೆ ಕಾರಭಾರ
ಛಿ ಕೆಟ್ಟ ರಂಡೆ ಕಳೆದೆಲ್ಲ ಅಬರಾ”

ಎಂದು ರೋಷಭರಿತನಾಗಿ ಈರಪ್ಪ ಮೊದಲು ಸಂಗ್ಯಾನನ್ನು ಬಾಳ್ಯಾನ ಸಹಾಯದಿಂದಲೇ ಊರ ಹೊರಗಿನ ಹಳ್ಳದ ಬಳಿ, ತನ್ನ ತಮ್ಮಂದಿರೊಡನೆ ಕೂಡಿಕೊಂಡು ಸಂಗ್ಯಾನನ್ನು ಇರಿದು ಕೊಲ್ಲುತ್ತಾನೆ. ಗಂಗಿಯನ್ನು ಅವಮಾನಗೊಳಿಸಿ ತವರುಮನೆಗೆ ಅಟ್ಟಿ ಬಿಡುತ್ತಾನೆ.

ಮುಂದೆ ನಿಜ ಜೀವನ ಸಂಗತಿಯಲ್ಲಿ ಈರನಿಗೂ ಅವನ ತಮ್ಮಂದಿರಿಗೂ ನ್ಯಾಯ ವಿಚಾರಣೆ ನಡೆದು ಅವರನ್ನು  ಬೈಲಹೊಂಗಲದ ಜೇಲಿನಲ್ಲಿ ಆಮರಣ ಶಿಕ್ಷೆ ಅನುಭವಿಸುತ್ತಿರುವಾಗ ಅವರು ಮತಾಂತರ ಹೊಂದಿ ಕ್ರಿಶ್ಚನ್ನ್ ಧರ್ಮವನ್ನು ಸ್ವೀಕರಿಸಲು ಒಪ್ಪಿದಾಗ ಅವರ ಬಿಡುಗಡೆ ಆಯಿತೆಂದು ಕಥೆ ಹೇಳುತ್ತಾರೆ.

ಹೀಗೆ ಸಂಗ್ಯಾ-ಬಾಳ್ಯಾ ಮೊದಲ ಸಾಮಾಜಿಕ ಕಥೆ. ಒಮದು ನೈಜ ಜೀವನ ಘಟನೆಯನ್ನೇ ಬಳಸಿಕೊಂಡು ಇದನ್ನು ರಚಿಸಿದ ಪತ್ತಾರ ಮಾಸ್ತರರು ಗದುಗಿಗೆ ವರ್ಗವಾಗಿ ಅಲ್ಲಿಯ ಶಹಪೂರಪೇಟೆಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆಂದೂ ಗದುಗಿನವರು ಹೇಳುತ್ತಾರೆ.

ಸಂಗ್ಯಾ-ಬಾಳ್ಯಾ ಚಿತ್ರೀಕರಣವೂ ಆಗಿದೆ. ಅದರಲ್ಲಿ ‘ಏನು ಮಾಡತಿದ್ದಾಳಪ್ಪಾ’ ಏನಿದು ಸಮಾಚಾರ – ಈ ಮೊದಲಾದ ಹಾಡುಗಳು ಸೇರಿಲ್ಲ. ಮೂಲಕಥೆಯಿಂದ ಚಿತ್ರೀಕರಣದಲ್ಲಿ ಸ್ವಲ್ಪ ವ್ಯತ್ಯಾಸಗಳು ಕಂಡು ಬರುತ್ತವೆ.

ವೃತ್ತಿ ರಂಗಭೂಮಿ

ಉತ್ತರ ಕರ್ನಾಟಕ ರಂಗಭೂಮಿಗೆ ಮರಾಠಿ ರಂಗಭೂಮಿಯೆ ಸ್ಫೂರ್ತಿ ಪ್ರೇರಣೆ ಎಂದರೆ ವಿರೋಧಾಭಾಸವೆನಿಸುವಂತಿದೆ. ಏಕೆಂದರೆ ಕ್ರಿ.ಶ. ೧೮೪೬ರ ಸುಮಾರಿಗೆ ನಮ್ಮ ಉತ್ತರಕನ್ನಡ ಜಿಲ್ಲೆಯ ಕರ್ಕಿಯ ಒಂದು ಯಕ್ಷಗಾನ ಮೇಳವು ಸಾಂಗ್ಲಿಗೆ ಭೇಟ್ಟಿ ಕೊಟ್ಟು ಅಲ್ಲಿ ತನ್ನ ಪ್ರಯೋಗ ನಡೆಸಿದಾಗ ಸಾಂಗ್ಲಿಯ ಮಹಾರಾಜನು ಅದನ್ನು ನೋಡಿ ತನ್ನ ಸಂಸ್ಥಾನದ ಗುಮಾಸ್ತನಾದ ವಿಷ್ಣುಪಂತ ಭಾವೆ ಎಂಬುವವನಿಗೆ ನಾಟಕ ರಚನೆಯ ಶಕ್ತಿ ಇದ್ದುದರಿಂದ ಅವನಿಗೆ ಈ ಕರ್ಕಿ ಮೇಳದ ಮಾದರಿಯಲ್ಲಿ ಒಂದು ಕಥಾ ಪ್ರಸಂಗವನ್ನು ರಚಿಸಲು ಹೇಳಿದಾಗ ಆತ ‘ಸೀತಾ ಸ್ವಯಂವರ’ ಎಂಬ ಒಂದು ನಾಟಕವನ್ನು ರಚಿಸಿಬಿಟ್ಟ. ಎಂದರೆ ಇಲ್ಲಿ ಭಾಗವತನು ಗೀತ ಹೇಳಿ ಕಥಾ ನಿರೂಪಣೆ ಮಾಡುವ ಬದಲು ಇಲ್ಲಿ ರಂಗದ ಮೇಲೆ ಬರುವ ಪಾತ್ರಗಳ ತಂತಮ್ಮ ಮಾತು ಹೇಳಿ ಗೀತೆಗಳನ್ನು ಹಾಡತೊಡಗಿದವು.

ಹೀಗೆ ಮರಾಠಿ ರಂಗಭೂಮಿಯ ನಾಂದಿಯಾಗಿ ಅದರ ನಂದಾದೀಪ ಬೆಳಗತೊಡಗಿತು. ವಿಷ್ಣುಪಂತ ಭಾವೆ ಅವರ ಸ್ಫುರ್ತಿಯಿಂದ ಮುಂದೆ ಅಲ್ಲಲ್ಲಿ ಮರಾಠಿ ನಾಟಕ ಮಂಡಳಿಗಳು ಉದಯವಾಗತೊಡಗಿದವು. ಅವು ಉತ್ತರ ಕರ್ನಾಟಕದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸಿ, ಸಾಂಗ್ಲಿ, ಕೊಲ್ಲಾಪೂರ, ಈಚಲಕರಂಜಿ ಕಡೆಗಳಿಂದ ನಾಟಕ ಮಂಡಳಿಗಳು ಸಂಚರಿಸುತ್ತ ಉತ್ತರ ಕರ್ನಾಟಕದ ಊರೂರಿಗೆ ಮುಕ್ಕಾಂ ಮಾಡುತ್ತ ಉತ್ತರ ಕರ್ನಾಟಕದ ರಸಿಕ ಜನತೆಯನ್ನು ಮಾರುಗೊಂಡವು.

ಇದನ್ನೆಲ್ಲ ನೋಡುತ್ತಿದ್ದ ಧಾರವಾಡದ ಶಾಂತಕವಿಗಳು (ಸಕ್ರಿ ಬಾಳಾಚಾರ್ಯರು, ಸಾತೇನಹಳ್ಳಿಯ ಶಾಂತೇಶ (ಹನುಮಂತ)ನ ಭಕ್ತರು) ಪ್ರಾಥಮಿಕ ಶಾಲಾ ಮಾಸ್ತರರು. ಈ ಮರಾಠಿ ನಾಟಕಗಳ ಹಾವಳಿ ಉತ್ತರ ಕರ್ನಾಟಕದಲ್ಲಿ ತನ್ನ ತಾಂಡವವನ್ನು ನಡೆಸಿರುವುದನ್ನು ನೋಡಿ ಹೀಗೆ ಉದ್ಗಾರ ತೆಗೆದರು :

“ಎಲ್ಲಿ ನೋಡಲು ಮರಾಠಿಯರ ನಾಟಕ ಕೀರ್ತೀ
ಎಲ್ಲಿ ನೋಡಲು ಮರಾಠಿಯರ ನಾಟಕದರ್ತಿ
ಎಲ್ಲಿ ನೋಡಲು ಮರಾಠಿಯರ ನಾಟಕ ನಟರ ಮೂರ್ತಿಗಳ ಸಂಚಾರವು |
ಎಲ್ಲಿ ನೋಡಲು ಮರಾಠಿಯರ ನಾಟಕದಾಟ
ಎಲ್ಲಿ ನೋಡಲು ಮರಾಠಿಯರ ನಾಟಕಮಯಂ ತಾನಾಯ್ತು ಕರ್ನಾಟಕಂ! ||”

ಹೀಗೆ ಉದ್ಗಾರ ತೆಗೆದದ್ದಲ್ಲದೆ, ಉದ್ವೇಗಗೊಂಡ ಅವರ ಮನಸ್ಸು ಒಂದು ಕನ್ನಡ ನಾಟಕ ಮಂಡಳಿಯನ್ನು ಸ್ಥಾಪಿಸಿ ಕನ್ನಡ ನಾಟಕಗಳನ್ನು ರಚಿಸಿ, ಕನ್ನಡಿಗರ ಮನಸ್ಸನ್ನು ಗೆದ್ದು ಕನ್ನಡ ನಾಟಕಗಳನ್ನೇ ನೋಡುವಂತೆ ಒಲಿಸಬೇಕೆಂದು ಬಯಸಿ ತಾವು ಗದುಗಿನಲ್ಲಿ ಶಾಲಾ ಮಾಸ್ತರರಾಗಿದ್ದಾಗ “ಶ್ರೀ ನಾರಾಯಣ ಪ್ರಾಸಾದಿಕ ಕೃತಪುರ (ಗದುಗಿನ ಹಳೆಯ ಹೆಸರು) ನಾಟಕ ಮಂಡಳಿ” ಎಂಬ ಹೆಸರಿನಲ್ಲಿ ಗದುಗಿನ ಕೆಲವು ಮಿತ್ರ ನಟರನ್ನು ಕಲೆಹಾಕಿ ಸ್ವತಃ ‘ಉಷಾ ಸ್ವಯಂವರ’ ವೆಂಬ ನಾಟಕ ರಚಿಸಿ ಪ್ರಯೋಗಿಸಿದ್ದಲ್ಲದೆ ಒಟ್ಟು ೨೨ ಪೌರಾಣಿಕ ನಾಟಕಗಳನ್ನು ರಚಿಸಿ ಪ್ರಯೋಗಿಸತೊಡಗಿದರು. ಅವರ ಈ ನಾಟಕ ಚಟುವಟಿಕೆಗಳನ್ನು ಗಮನಿಸಿದ ಸರಕಾರಿ ವಿದ್ಯಾಧಿಕಾರಿಗಳು ಆದರೇನು? ಶಾಲೆ ಬಿಟ್ಟ ಕೂಡಲೆ ಗದುಗಿಗೆ ಬಂದು ಮತ್ತೆ ತಮ್ಮ ನಾಟಕ ಚಟುವಟಿಕೆಗೆ ತೊಡಗುವರು. ಒಮ್ಮೆಯಂತೂ ಯಾವ ವಾಹನವೂ ಸಿಗದೆ ಬೆಳಿಗ್ಗೆ ಶಾಲೆಯ ಹೊತ್ತಿಗೆ ಎಮ್ಮೆಯ ಮೇಲೆ ಹೋಗಿ ತಲುಪಿದರಂತೆ! ಹೀಗೆ ಕನ್ನಡ ನಾಟಕಗಳ ಹೊಸ ರಂಗವನ್ನೇ ತೆರೆದ ಶಾಂತಕವಿಗಳು ‘ಕರ್ನಾಟಕ ನಾಟಕ ಪಿತಾಮಹ’ರೆನಿಸಿದರು.

ಶಾಂತಕವಿಗಳು ಸಿಪಾಯಿ ಬಂಡಾಯದ ಶಿಶುವಾದರೆ, ಚುರುಮುರಿ ಶೇಷಗಿರಿ ರಾಯರು ರಚಿಸಿದ ‘ಕನ್ನಡ ಶಾಕುಂತಲ’ವು ಗಾಂಧೀಜಿ ಜನಿಸಿದ, ವರುಷದಲ್ಲಿಯೆ ಎಂದರೆ ೧೮೬೯ರಲ್ಲಿ ಅವತರಿಸಿತು. ಮೂಲ ಕಾಳಿದಾಸನ ಸಂಸ್ಕೃತ ‘ಅಭಿಜ್ಞಾನ ಶಾಕುಂತಲಮ್’ದ ಅನುವಾದವಾಗಿರದೆ ‘ಕನ್ನಡ ಶಾಕುಂತಲ’ವಾಗಿ ರಚಿಸಲ್ಪಟ್ಟಿತು.

ಮುಖ್ಯವಾಗಿ ಇದರಲ್ಲಿ ಬರುವ ಗೀತೆಗಳು ಅವುಗಳ ಮಟ್ಟುಗಳು (ಮಟ್ಟಗಳೂ ಎತ್ತರದವಾಗಿ) ತಮ್ಮ ದೇಸಿಯ, ಜಾನಪದ ಜಾಡಿನ ಸೊಗಸುಗಾರಿಕೆಯಿಂದ ತುಂಬ ಆಕರ್ಷಕವೆನಿಸಿದವು. ಖ್ಯಾತ ಗಾಯಕ ದೇಶಪಾಂಡೆ ಗುರುರಾಯರು ಚುರುಮುರಿಯವರ ಈ ಗೀತಗಳನ್ನು ಅಚ್ಚಳಿಯದ ಮೂಲಧಾಟಿಯಲ್ಲೇ ಮನಂಬುಗುವಂತೆ ಹಾಡುತ್ತಿದ್ದುದನ್ನು ನಾನು ಕೇಳಿದ್ದೇನೆ. ಮಾತ್ರವಲ್ಲ ಈ ‘ಕನ್ನಡ ಶಾಕುಂತಲವನ್ನು ಧಾರವಾಡ ಆಕಾಶವಾಣಿಯ ಸಂಗೀತ ನಿರ್ದೇಶಕರಾಗಿ ಅದನ್ನು ‘ಪ್ರೊಡ್ಯೂಸ್’ ಮಾಡಿದರು. ಶಕುಂತಲೆಯ ಸುಕೃದ್ದರ್ಶ್ಶಕ್ಕೆ ದುಷ್ಯಂತನು –

“ಸವಿಗಾರ ಭ್ರಮರನಹುದೆಲೊ ನೀ | ದೈವವಂತನೊ ||
ನೀ ಹಾರಿದತ್ತ ಯುವತಿ ನೋಡುತಿಹಳು | ಧನ್ಯನೊ…..

ಎಂದು ಗೀತಿಸುವ, ಇಲ್ಲವೆ, ‘ನೀರು ಚಿಮ್ಮಡಿಸುವ ಬನ್ನಿರೆ ಬಲದೊಳು’ ಎಂದು ಶಕುಂತಲೆ ತನ್ನ ಸಖಿಯರನ್ನು ಬಲಕ್ಕೆ ಕರೆಯುವಾಗಿನ ಗೀತವಾಗಲಿ ಇನ್ನೂ ಸ್ಮೃತಿಯಲ್ಲಿ ಉಳಿದಿವೆ.

ಚುರಮುರಿಯವರು ಬಳಕೆಯ ಬೆಡಗಿನ ಕನ್ನಡದಲ್ಲಿ ತಮ್ಮ ಸಂಭಾಷಣೆಗಳನ್ನು ಕುಸುರಿಸಿ ಪಾತ್ರಗಳ ಮುಖಾಂತರ ಉಸಿರಿಸಿದ್ದಾರೆ. ಧಾರವಾಡದ ಹಿರಿಯ ಹುಲಿ ಮುದವೀಡು ಕೃಷ್ಣರಾಯರು ಈ ಚುರಮುರಿ ಶಾಕುಂತಲವನ್ನೋದಿವೋದಿ ಎಷ್ಟು ಮುಗ್ದರಾಗಿದ್ದರೆಂದರೆ ಕೇವಲ ಚುರಮುರಿ ಶಾಕುಂತಲವನ್ನು ಪ್ರಯೋಗಿಸಲೆಂದೇ ‘ಭಾರತ ಕಲೋತ್ತೇಜಕ ಸಂಗೀತ ಸಮಾಜ’ವನ್ನು ಧಾರವಾಡ ಮದಿಹಾಳದಲ್ಲಿ ಸ್ಥಾಪಿಸಿದರು (೧೯೦೫).

೧೮೯೫ ಹೊತ್ತಿಗೆ ಹುಬ್ಬಳ್ಳಿ, ಧಾರವಾಡಕ್ಕೆ ರೈಲುಗಾಡಿ ಓಡಾಡತೊಡಗಿ, ಮಹಾರಾಷ್ಟ್ರದಿಂದ ಒಂದರ ಮೇಲೊಂದು ನಾಟಕ ಕಂಪನಿಗಳು ದಾಳಿ ಇಡಲಾರಂಭಿಸಿದವು. ಅವೊಳಗಾಗಿ ೧೮೭೮ರಲ್ಲಿ ಹಲಸಗಿ ನಾಟಕ ಮಂಡಳಿ, ತಂತುಪುರ ನಾಟಕ ಮಂಡಳಿ, ಲಕ್ಷ್ಮೇಶ್ವರ ಸ್ತ್ರೀ ಸಂಗೀತ ನಾಟಕ ಮಮಡಳಿ ಮೊದಲಾದ ರಂಗಭೂಮಿಯ ಕಲೋಪಾಸಕರು ಆಗಿ ಹೋದರು.

ಕರ್ನಾಟಕಕ್ಕೆ ನಿಜವಾದ ಲೋಕಪ್ರಿಯವಾದ ಪ್ರಥಮ ವೃತ್ತಿ ನಾಟಕ ಮಂಡಳಿ ಉದಯವಾದುದು ೧೯೦೧ರಲ್ಲಿ. ಕೊಣ್ಣುರಕರ ಶಿವಮೂರ್ತಿ ಸ್ವಾಮಿ ಕಣಬರ್ಗಿಮಠ ಅವರು ಉತ್ತರ ಕರ್ನಾಟಕದ ಪ್ರಥಮ ಪರಿಪೂರ್ಣ, ಸ್ವಯಂ ಪೂರ್ಣ ನಾಟಕ ಮಂಡಳಿಯೊಂದನ್ನು ಅದ್ಭುತವೆನಿಸುವ ಅಪೂರ್ವವೆನಿಸುವ ರೀತಿಯಲ್ಲಿ ಸ್ಥಾಪಿಸಿದರು, ಡೈನವೊದಿಂದ ಉತ್ಪನ್ನವಾಗುವ ಉಜ್ವಲ ವಿದ್ಯುದ್ದೀಪಗಳು, ತಿರುಗುವ ರಂಗಭೂಮಿ ಸ್ತ್ರೀ ಪಾತ್ರಗಳಿಗೆ ಸ್ತ್ರೀ ಕಲಾವಿದರ ಆಯ್ಕೆ ಮೊದಲಾದವು ಕೊಣ್ಣುರಕರರ ‘ಕೊಣ್ಣುರಕರ ಕಾಡಸಿದ್ಧೇಶ್ವರ ನಾಟಕ ಮಂಡಳಿ’ಯ ದಾಖಲೆಯನ್ನು ಸ್ಥಾಪಿಸಿದ ಸಾದನೆಗಳು. ಇವರ ‘ಮನೋ ವಿಜಯ’ ನಾಟಕ, ‘ಸಂತ ತುಕಾರಾಮ’ ಮತ್ತು ‘ಶನಿ ಪ್ರಭಾವ’ಗಳು ಗಲ್ಲೆ ಭರ್ತಿ ನಾಟಕಗಳು.

ನನ್ನ ತೀರ ಬಾಲ್ಯದಲ್ಲಿ ಶನಿಪ್ರಭಾವ ನೋಡಿದ ನೆನಹು. ಕೊಣ್ಣುರು ಕಂಪನಿಯಾದರೂ ಅವರ ತರುವಾಯ ೧೯೦೩ರಲ್ಲಿ ಪ್ರಾರಂಭವಾದ ಶಿರಹಟ್ಟಿ ವೆಂಕೊಬರಾಯರ ಶ್ರಿ ಮಹಾಲಕ್ಷ್ಮಿ ಪ್ರಾಸಾದಿಕ ನಾಟಕ ಮಂಡಳಿಯವರು ಅದೇ ‘ಶನಿ ಪ್ರಭಾವ’ ವನ್ನು ಅಭಿನಯಿಸುತ್ತಿದ್ದರು. ಮನಾನು ಗದಗ ಮಹಾಲಕ್ಷ್ಮಿ  ಥಿಯೇಟರದಲ್ಲಿ ಶಿರಹಟ್ಟಿ ಕಂಪನಿಯವರ ‘ಶನಿ ಪ್ರಭಾವ’ ನೋಡಿದ ನೆನಹು. :

ಶನಿ ಕಾಟಕ್ಕೀಡಾದ ರಾಜಾ ವಿಕ್ರಮನು ರಾಜ್ಯಭ್ರಷ್ಟನಾಗಿ ಕೈ ಕತ್ತರಿಸಿಕೊಂಡು ಅಡವೀ ಪಾಲಾಗಿ ಕೊನೆಗೆ ಒಬ್ಬ ಗಾಣಿಗನಲ್ಲಿ ಗಾನ ಹೂಡೆಯುವ ದೃಶ್ಯ ಕಣ್ಣೆದುರು ಕಟ್ಟಿದಂತಿದೆ. ಗಾಣಿಗನು ಹಾಡುತ್ತಿದ್ದ ಹಾಡು, ಹೆಗಲಮೇಲೆ ಬಾಲಕೋಲ ಹಾಕಿಕೊಂಡು –

ರಾಗೀ ಬೀಸೊ ರಾಜ್ಯದೊಳಗ
ರಂಗ ನೋಡಣ್ಣ ಬಲು ಕಪ್ಪೋ ||

ಎಂದು ಹಾಡುತ್ತ ಈ ‘ರಂಗ್ಯಾ ನೋಡ್ರಿ ಅಮಾಸಿ ದಿವಸ ಹುಟ್ಯಾನ’ ಎಂದು ಚೇಷ್ಟೆ ಮಾಡುತ್ತ ‘ಶಿದ್ಲಿಂಗಾ ಡಬ್ಬೀ’ ಎಂದು ಗಾಣದ ಎಣ್ಣೆ ತುಂಬಿದ ಡಬ್ಬೆ ಭರತಿ ಆದಾಗ, ಹೀಗೆ ಸರತಿಗೊಮ್ಮೆ ಕೂಗುವ. ಇವೆಲ್ಲಾ ಆಗಿನ ಹಾಸ್ಯಕ್ಕೆ ಉದಾಹರಣೆಗಳು.

ಕೊಣ್ಣುರು ಕಂಪನಿಯ ಮಾಲಕರಾದ ಕೊಣ್ಣುರಕರ ಶಿವಮೂರ್ತಿ ಸ್ವಾಮಿಯವರು ತಮ್ಮ ಕಂಪನಿ ಮುಚ್ಚುವವರೆಗೂ (ಎಂದರೆ ಸುಮಾರು ೧೯೨೦) ಡೈರಿಯ ಟಿಪ್ಪಣಿಗಳನ್ನಿಟ್ಟಿದ್ದರು. ಶಿವಮೂರ್ತಿ ಸ್ವಾಮಿಗಳ ಚೀರಂಜೀವರಾದ ಎಸ್. ಎಸ್. ಕಣಬರ್ಗಿ ಮಠ ಅವರು ಕರ್ನಾಟಕ ಕಾಲೇಜಿನ ವಿದ್ಯಾರ್ಥಿ ದೆಸೆಯಿಂದಲೇ ನನ್ನ ಮಿತ್ರರು. ಶ್ರೀರಂಗರ ನಾಟಕಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರಲ್ಲದೆ ಅವರ ಯಾವ ನಾಟಕಕ್ಕೂ ಕಣಬರ್ಗಿ ಮಠ, ಜಿ.ಆರ್. ಕಡಪಾ ಅವರು must. ಮುಂದೆ ಕಣಬರ್ಗಿ ಮಠ ಅವರು ಮಿಲಿಟರಿ ಇಲಾಖೆ ಸೇರಿ ಕರ್ನಲ್ ಆಗಿ ನಿವೃತ್ತರಾದರು. ಆಗ ನಾವಿಬ್ಬರೂ ಅವರ ತಂದೆಯವರು ಇಪ್ಪತ್ತು ವರ್ಷಗಟ್ಟಲೇ ಇಟ್ಟಿದ್ದ ಡೈರಿಗಳನ್ನು ಎಲ್ಲಾ ಕ್ರಮವಾಗಿ ಓದುತ್ತಲಿದ್ದೆವು. ನಾನು ಅವರು ಓದುತ್ತಿದ್ದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆನು. ಡೈರಿಗಳ ಸಮಾಚಾರ ತುಂಬ revealing (ಹೊಸ ಹೊಸ ವಿಷಯಗಳ ಪ್ರಸ್ತಾಪವುಳ್ಳದ್ದು) ಆಗಿತ್ತು. ‘ಗಲ್ಲೇ ಭರ್ತಿ ಆದಾಗ ಹಬ್ಬದ ದಿನದಂದು ಎಲ್ಲ ನಟ-ನಟಿಯರು, ಚಿಲ್ಲರೆ ಕೆಲಸ ಮಾಡುವವರಿಗೂ ಹೋಳಿಗೆ ಊಟ ಹಾಕಿಸಿದೆ’. ಎಂಬ ಉಲ್ಲೇಕವಿದ್ದರೆ, ‘ಇಂದಿನ ಕಲೆಕ್ಶನ್ ಕೇವಲ ರೂ.೨೦!’ ಎಂಬ ವಿಷಾದದ ಉದ್ಗಾರವೂ ಇರುತ್ತಿತ್ತು. ಹೀಗೆ ಮಿತ್ರ ಕರ್ನಲ್ ಎಸ್. ಎಸ್. ಕಣಬರ್ಗಿ ಮಠ ಅವರ ಸಹಾಯದಿಂದ ಅವರ ಕಂಪನಿಯ ದೊಡ್ಡ ಪೆಟ್ಟಿಗೆಯೊಂದರಲ್ಲಿಟ್ಟಿದ್ದ ಈ ಡೈರಿಗಳನ್ನೆಲ್ಲಾ ನೋಡಿ ಟಿಪ್ಪಣಿಸಿಕೊಳ್ಳುವ ಸದವಕಾಶ! ಇದೂ ಅಲ್ಲದೆ ಅವರ ರಂಗಭೂಮಿ ಭಾರೀ ಅಂಕ ಪಡದೆಯನ್ನು ಛಾಯಾಚಿತ್ರೀಕರಿಸಿದ ಫೋಟೋ ಸಹ ನೋಡಲು ದೊರಕಿತು. ಬಹುಶಃ ತರುವಾಯದ ಯಾವುದೇ ಕಂಪನಿಗೆ ಇಂತಹ ಭಾರೀ ಅಂಕ ಪರದೆ ಇದ್ದಿರಲಿಲ್ಲ. ಅಂಕ ಪರದೆಯ ಮೇಲಿನ ಚಿತ್ರ ಯಾವುದೋ ಒಂದು ಪೌರಾಣಿಕ ಸಂದರ್ಭಕ್ಕೆ ಸಂಬಂಧಿಸಿದುದಾಗಿತ್ತು. ಬಹುಶಃ ರಾಜಾ ರವಿವರ್ಮನ ಚಿತ್ರದಿಂದ ಆಯ್ದುಕೊಂಡುದೇ ಇರಬೇಕು. ಮುಂದಿನ ಶಿರಹಟ್ಟಿ, ವಾಮನರಾವ್ ಮಾಸ್ತರ್, ಗರೂಡರ ಕಂಪನಿಗಳಲ್ಲೂ ಇದೇ ತರಹದ ಪೌರಾನಿಕ ಸಂದರ್ಭಗಳು!

ಈ ಕೊಣ್ಣೂರರಕರ ಕಂಪನಿಯ ಕನ್ನಡ ರಂಗಭೂಮಿಗೆ ಪ್ರಥಮ ಮಹಿಳೆಯ ಪ್ರವೇಶದ ಶ್ರೇಯಸ್ಸಿನ ಗುಳೇದಗುಡ್ಡದ ಎಲ್ಲವ್ವ ಶತಾಯುಷಿಯಾಗಿ ತನ್ನ ಜೀವನ ರಂಗದಿಂದ ನಿಷ್ಕ್ರಮಿಸಿದಳು. ಆ ಮಹಾ ನಟಿಯನ್ನು ಸಂದರ್ಶಿಸಿ ಪತ್ರಿಕೆಗೆ ಪರಿಚಯಿಸುವ ಅವಕಾಶ ನನ್ನದಾಗಿತ್ತು. ಖ್ಯಾತ ಮೋಹಕ ನಟಿ ಗಂಗುಬಾಯಿ ಗುಳೇದಗುಡ್ಡ ಅವರು ಎಲ್ಲವ್ವನ ಸಾಕು ಮಗಳಾಗಿದ್ದಳು. ಒಂದು ತಿಂಗಳಿಗಿಂತಲೂ ಚಿಕ್ಕ ಮಗುವಾಗಿದ್ದ ಗಂಗೂಬಾಯಿಯನ್ನು ಎಲ್ಲಮ್ಮನೇ ಬಾಗಲಕೋಟೆಯ ಸ್ಟೇಶನ್ ರಸ್ತೆಯ ಒಂದು ಮೂಲೆಗೆ ಯಾರೋ ಬಿಟ್ಟು ಹೋಗಿದ್ದ ಈ ಮಗುವನ್ನು ಸಲಹಿ ಜೋಪಾನ ಮಾಡಿ ಬೆಳೆಸಿ ಕನ್ನಡ ರಂಗಭೂಮಿಗೆ ಒಂದು ದೊಡ್ಡ ಮೌಲಿಕ ಕಾಣಿಕೆಯಾಗಿ ನೀಡಿದವರು. (ಕೊಣ್ಣುರ ಕಂಪನಿಯ ಬಗ್ಗೆ ನಾನು ಬಹಳ ಹಿಂದೆ – ಸುಮಾರು ಎಪ್ಪತ್ತರ ದಶಕದಲ್ಲಿ ಒಂದು ಲೇಖನಮಾಲೆಯನ್ನೇ ಬರೆದು ಪ್ರಕಟಿಸಿದ್ದೇನೆ).

ಶಿರಹಟ್ಟಿ ವೆಂಕೋಬರಾಯರ ಶ್ರೀ ಮಹಾಲಕ್ಷ್ಮಿ ಪ್ರಾಸಾದಿಕ ನಾಟಕ ಮಂಡಳಿ

ವೆಂಕೋಬರಾಯರು ಹುಟ್ಟಿದ್ದು (ಬಹುಶಃ ಅವರ ತಾಯಿಯ ತವರ್ಮನೆಯಾಗಿರಬೇಕು) ಕೊಪ್ಪಳವಾದರೂ, ಬೆಳೆದದ್ದು ಶಿರಹಟ್ಟಿಯಲ್ಲಿ. ವರಕವಿ ಬೇಂದ್ರೆ ಅವರ ಹಿರಿಯರ ಊರು ಶಿರಹಟ್ಟಿ. ಹೀಗಾಗಿ ಬೇಂದ್ರೆ ಅವರಿಗೆ ವೆಂಕೋಬರಾಯರ ವಿಶೇಷ ಪರಿಚಯವಿತ್ತೆಂದು ನನ್ನ ಮುಂದೆ ಹೇಳುತ್ತಿದ್ದರು. (ಆದರೆ ಬೇಂದ್ರೆ ಅವರ ಜನ್ಮಸ್ಥಳ ಧಾರವಾಡ)

ವೆಂಕೋಬರಾಯರು ಕೇವಲ ಹದಿನೆಂಟು ವರ್ಷದವರಾಗಿದ್ದಾಗಲೇ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದು (೧೯೦೩) ಅವರ ಕರ್ತೃತ್ವಶಕ್ತಿಯ ಜೀವಂತ ನಿದರ್ಶನ. ಮೊದಲಿನಿಂದಲೂ ಅವರಿಗೆ ಈ ಬಣ್ಣದ ಬದುಕಿನ ಆಕರ್ಷಣೆ. ತಮ್ಮ ನಾಟಕ ಮಂಡಳಿಯನ್ನು ಸ್ಥಾಪಿಸಿದಾಗ ಅವರೇ ಮುಖ್ಯ ಪಾತ್ರವಹಿಸುತ್ತಿದ್ದರು. ಅವರ ಗದ್ಯ ಮಾತುಗಾರಿಕೆ ಪ್ರೌಢಿಮೆಯಿಂದ ಪರಿಣಾಮಕಾರಿಯಾಗಿತ್ತು. ಆದರೆ ಬಹುಶಃ ಸಂಗೀತದ ಕೊರತೆ ಅವರದ್ದಾಗಿದ್ದುದರಿಂದಲೋ ಏನೋ ಮುಂದೆ ಅವರು ಪಾತ್ರವಹಿಸುವುದನ್ನು ಬಿಟ್ಟುಬಿಟ್ಟರು. ಅವರಲ್ಲಿ ವಾಮನ್ ರಾವ್ ಮಾಸ್ತರರು (ಮೊದಲು ರಬಕವಿಯಲ್ಲಿ ಶಾಲಾ ಮಾಸ್ತರರಾಗಿದ್ದವರು) ಸಂಗೀತ ಮಾಸ್ತರರಾಗಿ ಕೆಲಸ ಮಾಡುತ್ತಿದ್ದರಲ್ಲದೆ, ‘ಭೋಜಪ್ರಬಂಧ’, ‘ಯುವತಿ ವಿಜಯ’ಗಳಲ್ಲಿ ಮುಖ್ಯ ಪಾತ್ರವನ್ನೂ ವಹಿಸುತ್ತ ಮುಂದೆ ತಮ್ಮದೇ ಆದ ‘ವಿಶ್ವಗುಣಾದರ್ಶ ನಾಟಕ ಮಂಡಳಿ’ಯನ್ನು ಸ್ಥಾಪಿಸಿದರು.

ಶಿರಹಟ್ಟಿ ಕಂಪನಿ ಗದುಗಿಗೆ ಬಂದಾಗ ವೆಂಕೋಬರಾಯರು ಸ್ವತಃ ಬಣ್ಣ ಹಚ್ಚುವುದನ್ನು ಬಿಟ್ಟು ಬಿಟ್ಟಿದ್ದರು. ಅವರ ‘ಕೃಷ್ಣಲೀಲಾ’ ನಾಟಕ ಜನಪ್ರಿಯವಾಗಿತ್ತು. ಶಾಲಾ ಮಕ್ಕಳ ಸಲುವಾಗಿ ಅವರು ಅರ್ಧ ಬೆಲೆ ಟಿಕಿಟು ಇಟ್ಟು ಶಾಲೆಗಳಿಗೆಲ್ಲಾ ವಿದ್ಯಾರ್ಥಿಗಳಿಗೆಂದು ರಿಯಾಯ್ತಿ ಪಾಸು ಕೊಟ್ಟಿದ್ದರು. ನಾನೂ ಮನೆಯಲ್ಲಿ ಎರಡಾಣೆ ಇಸಿದುಕೊಂಡು ನಾಟಕ ನೋಡಿ ಬಂದೆ. ಕೊನೆಯ ದೃಶ್ಯವಾದ ‘ಕಾಳಿಯಾಮರ್ದನ’ ದಿಂದ ನಾಟಕ ಮುಕ್ತಾಯ. ಸೊಳ್ಳೆ ಪರದೆಯಂತಹ ತೆಳ್ಳನೆಯ ಪರದೆಯ ಹಿಂದೆ ಈ ದೃಶ್ಯ ಏನೋ ಮಾಯಾಲೋಕದಂತೆ ಪರಿಣಾಮ ಬೀರಿತ್ತು. ಅಲ್ಲಿ ನಮ್ಮ (ಗದುಗಿನ) ಓಣಿಯ ಹುಡುಗ, ತುಳಜಾ ಎಂಬ ನನ್ನ ಗೆಳೆಯನೂ ಬಣ್ಣ ಹಚ್ಚಿಕೊಂಡು ನಿಂತಿದ್ದನ್ನು ನೋಡಿ ಏನೋ ವಿಚಿತ್ರ ಪರಿಣಾಮ ನನ್ನ ಮನಸ್ಸಿನ ಮೇಲೆ. ಮನೆಗೆ ಬಂದವನೆ ನನ್ನ ತಾಯಿಯ ಮುಂದೆ ‘ನಾನು ನಾಟಕ ಕಂಪನಿ ಸೇರುತ್ತೇನೆಂದು’ ಕೇಳಿದಾಗ ನಮ್ಮ ತಾಯಿ ಸಿಟ್ಟಿಗೆದ್ದು ನನ್ನ ಸೋಟೆ ಹಿಂಡಿ, ‘ಹುಚ್ಚ ರಂಡೇಗಂಡಾ, ಸಾಲಿ ಕಲ್ತು ವಿದ್ಯಾಬುದ್ಧಿ ಗಳಿಸೋದು ಬಿಟ್ಟು ನಾಟಕ ಕಂಪನಿ ಸೇರ‍್ತಾನಂತ ಅಡಾಣಿ ಜನ್ರ ಹಂಗ” ಎಂದು ಬೈಸಿಕೊಂಡದ್ದದನ್ನು ಇಂದಿಗೂ ನಾನು ಮರೆಯಲಾರೆ. ಇಲ್ಲದಿದ್ದರೆ ಇಂದಿಗೆ ನಾನೇನಾಗಿದ್ದೇನೋ ಅದಾಗಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಇಂದಿಗೂ ನನ್ನ ತಾಯಿಯನ್ನು ಈ ಮಹನ ಮಾರ್ಗದರ್ಶಿನಿ ಎಂದು ನೆನೆಯುತ್ತೇನೆ.

‘ಕೃಷ್ಣಲೀಲಾ’ದಂತೆ ‘ಭಕ್ತಪ್ರಹ್ಲಾದ’ ನಾಟಕವೂ ತುಂಬ ರೋಮಾಂಚಕಾರಿ ಕೊನೆಯ ದೃಶ್ಯದಲ್ಲಿ ನಾರಸಿಂಹನು ಕಂಭದಿಂದ ಪ್ರಕಟವಾಗುವ ದೃಶ್ಯವಂತೂ ಚಿಕ್ಕವರಿಗೆ ಅಚ್ಚರಿಗಿಂತ ಭಯವನ್ನುಂಟುಮಾಡುವಂತಹದಿತ್ತು.

ಅವರ ‘ಮಹಾನಂದಾ’ ನಾಟಕವು ವಾಮನ್ ರಾವ್ ಮಾಸ್ತರರು ಅಭಿನಯಿಸುತ್ತಿದ್ದ ‘ಪಾರ್ವತೀ ಸತ್ವಪರೀಕ್ಷೆ’ ಗಿಂತ ಸ್ವಲ್ಪ ಭಿನ್ನವಾದುದಾಗಿತ್ತು. ಶಿರಹಟ್ಟಿ ಕಂಪನಿಯವರ ‘ಮಹಾನಂದಾ’ದಲ್ಲಿ ಮೊದಲಿಗೆ ಶಿವನು ಕೈಲಾಸದಲ್ಲಿ ಪಾರ್ವತಿ ಮತ್ತು ಗಂಗೆಯ ಜೊತೆಗೆ ಪಗಡಿಯಾಟ ಆಡುತ್ತಿರುವಾಗ ಅವರವರ ಸೋಲು-ಗೆಲುವಿನಲ್ಲಿ ಏನೋ ಜಗಳ ಹುಟ್ಟಿ ಕೊನೆಗೆ ಶಿವನು ತನ್ನ ಕೋಪದಲ್ಲಿ ಆ ಇಬ್ಬರಿಗೂ ಭೂಮಿಯ ಮೇಲೆ ಮಹಾನಂದಾ-ಸದಾನಂದಾ ಎಂಬ ವೇಶ್ಯೆಯರಾಗಿ ಹುಟ್ಟಿರಿ ಎಂದು ಶಾಲ ಕೊಡುತ್ತಾನೆ. ಶಿರಹಟ್ಟಿ ನಾಟಕ ಮಂಡಳಿಯ ‘ಮಹಾನಂದಾ’ ರಚಿಸಿದವನು ಸುಬ್ಬರಾವ ಅಡಬಡ್ಡಿ ಎಂದು ಹೇಳುತ್ತಾರೆ. ವಾಮನ್ ರಾವ್ ಮಾಸ್ತರರು ಅದನ್ನು ಅಲ್ಲಲ್ಲಿ ಮಾರ್ಪಡಿಸಿಕೊಂಡು ‘ಪಾರ್ವತೀ ಸತ್ವಪರೀಕ್ಷೆ’ ಎಂದು ಮರು ನಾಮಾಂತರಕರಣ ಮಾಡಿದರೆಂದು ನನಗೆ ಹೇಳಿದವರು ಸುಬ್ಬರಾವ್ ಅಡಬಡ್ಡಿ ಮಾಸ್ತರರ ಪುತ್ರ ವಾಸು ಅಡಬಡ್ಡಿ ನನ್ನ ಕಾಲೇಜ್ ಮಿತ್ರ.

ಆದರೆ ಇದೇನೇ ಇರಲಿ ಈ ‘ಮಹಾನಂದಾ’ ನಾಟಕದ ಮೂಲ ಮರಾಠಿ ಲೇಖಕರು ಅಗಟೆ ಎಂಬವರು. ಅವರು ಈ ಪೌರಾಣಿಕ ನಾಟಕದಲ್ಲಿಯೇ ಒಂದು ಸಾಮಾಜಿಕ ನೀತಿ ಪ್ರಜ್ಞೆಯನ್ನು ಧ್ವನಿಸಿದರು ಎಂದರೆ ಸಮಕಾಲೀನ ಸಾಮಾಜಿಕ ಜೀವನದಲ್ಲಿ ವೇಶ್ಯಾ ಜೀವನವೆಂಬುದು ಒಂದು ಶಾಪ.

ಈ ವೇಶ್ಯಾಂಗನೇಯಾ ಜನ್ಮವಿದು ಬಹು ವ್ಯರ್ಥವೇ |
ಇದೇನೇ ಸಖಿಯೇ ಸಂಕಟದಿಂ ಕಾಲ ಕಳೆಯುವ  
||

ಎಂಬ ಗೀತದಲ್ಲಿಯೇ ವಾಮನ್ ರಾವ್ ಮಾಸ್ತರರು ತಮ್ಮ ‘ಪಾರ್ವತೀ ಸತ್ವಪರೀಕ್ಷೆ’ ನಾಟಕದಲ್ಲಿ ಸೂಚಿಸಿದ್ದಾರೆ.

ಮೂಲ ಆಗಟೆ ಅವರ ಉದ್ದೇಶ – ಈ ವೇಶ್ಯೆಯು ಒಬ್ಬ ಯಜಮಾನನ್ನೇ ನಚ್ಚಿಕೊಂಡು ಬದುಕು ಮಾಡಬೇಕು ಎಂಬ ತತ್ವವನ್ನು ಮಾರ್ಮಿಕವಾಗಿ ಸೂಚಿಸಿದ್ದಾರೆ. ಮಹಾನಂದಾ ಸದಾನಂದಾ ಎಂಬ ಜನ್ಮ ತಾಳಿ ಶಿವನ ಶಾಪದಿಂದ ಭೂಮಿಯಲ್ಲಿ ಜನಿಸಿದ ಶಿವನ ಪತ್ನಿಯರು (ಪಾರ್ವತಿ, ಗಂಗಾ) ಹೀಗೆ ಆದರ್ಶ ವೇಶ್ಯೆಯರಾಗಿ ಸದ್ವೃತ್ತಿ ಉಪಜೀವನ ಮಾಡಿಕೊಂಡಿರುವಾಗ ಇಂದ್ರನು ಮಹಾನಂದೆಯನ್ನು ಪರೀಕ್ಷಿಸಬೇಕೆಂದು ವಿಟನ ವೇಷ ತಾಳಿ ಬಂದಾಗ ಮಹಾನಂದೆ ತನ್ನ ಪಾತಿವ್ರತ್ಯ ಪ್ರಭಾವದಿಂದ ಆತನ ಮುಖವನ್ನೇ ಸುಟ್ಟು ಅಂಧನನ್ನಾಗಿ ಮಾಡಿಬಿಡುತ್ತಾಳೆ. ಈ ಸುದ್ದಿ ಶಂಕರನಿಗೆ ತಿಳಿಯುತ್ತದೆ. ತಾನು ಸ್ವತಃ ಮಹಾನಂದೆಯನ್ನು ಪರೀಕ್ಷಿಸುವುದಾಗಿ ಭಿಕ್ಷುಕನ ಪಾತ್ರದಲ್ಲಿ ಬಂದು ಮಹಾನಂದೆಯನ್ನು ಯಾಚಿಸಿದಾಗ ಆಕೆ –

“ಇವನೇ ಗಿರಿಜಾರಮಣನೇ ಇವನೇ ಫಾಲಾಕ್ಷ ಶಿವನೇ” (ವಾಮನರಾವಕೃತ) ಎಂದು ಗುರುತಿಸಿ ಆತ ಭಿಕ್ಷುಕನಾದರೂ ಅವನನ್ನೇ ವರಿಸುತ್ತಾಳೆ. ಭಿಕ್ಷುರೂಪಿ ಶಿವನು ಮಹಾನಂದೆಗೆ ತನ್ನ ಪ್ರಾಣಲಿಂಗವನ್ನು ಸುರಕ್ಷಿತವಾಗಿ ಕಾಪಾಡಬೇಕೆಂದೂ ಪೂಜಾ ಲಿಂಗವನ್ನು ಕೊಡುತ್ತಾನೆ. ಮಹಾನಂದೆ ಅದನ್ನು ತನ್ನ ಪುಜಾಗೃಹದಲ್ಲಿಟ್ಟಿರುತ್ತಾಳೆ. ಶಿವನು ತನ್ನ ಶಿಷ್ಯರಿಂದ ಆ ಪ್ರಾಣಲಿಂಗ ದಹಿಸುವಂತೆ ಹೇಳುತ್ತಾನೆ. ಆಮೇಲೆ ತನ್ನ ಪ್ರಾಣಲಿಂಗಗಳನ್ನು ಮಹಾನಂದೆಯು ದಹಿಸಿದಳೆಂದು ಆರೋಪಿಸಿ ಆಕೆಯನ್ನು ತ್ಯಜಿಸಿ ಮತ್ತೆ ಕೈಲಾಸಕ್ಕೆ ಹೊರಟು ಬಿಡಲು ಮಹಾನಂದೆಯೂ ಸತಿ ಹೋಗಿ, ಕೈಲಾಸ ಸೇರಿ ತನ್ನ ಪ್ರಾಣ ಪತಿಯನ್ನು ಸೇರುತ್ತಾಳೆ.

ಹೀಗೆ ಒಂದು ಪೌರಾಣಿಕ ಕಥೆಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಸಮಾಜ ಕಲ್ಯಾಣೋದ್ದೇಶದಿಂದ ಧ್ವನಿಸಿ ಇಂಥ ಸುಂದರ ರಂಜಕ ಬೋಧಕ ನಾಟಕವನ್ನು ಬರೆದ ಮರಾಠಿ ಲೇಖಕ ಆಗಟೆ ಅವರಿಗೆ ಕನ್ನಡದ ‘ಮಹಾನಂದಾ’ ಇಲ್ಲವೆ ‘ಪಾರ್ವತೀ ಸತ್ವಪರೀಕ್ಷೆ’ ಋಣಿಯಾಗಿರಬೇಕು.

ಶಿರಹಟ್ಟಿ ನಾಟಕ ಮಂಡಳಿಯೂ ‘ವಿಶ್ವಗುಣಾದರ್ಶ’ ನಾಟಕ ಮಂಡಳಿಯೂ ಸಮಸಮವಾಗಿ ರಂಗಭೂಮಿಯ ವೃತ್ತಿಯನ್ನು ನಡೆಸುತ್ತಲೇ ಬಂದವು. ಶಿರಹಟ್ಟಿ ನಾಟಕ ಮಂಡಳಿ ೧೯೩೬ರಲ್ಲಿ ನಿಂತು ಹೋದರೆ, ವಾಮನ ರಾಯರು ಕಂಪನಿಯನ್ನು ತಮ್ಮ ಅನಾರೋಗ್ಯದ ಮೂಲಕ ೧೯೩೪ರಲ್ಲಿಯೇ ನಿಲ್ಲಿಸಿ, ೧೯೩೫ರಲ್ಲಿ ತಾವು ಮಧುಮೇಹ ರೋಗಕ್ಕೆ(ಡಯಾಬಿಟಿಸ್) ಬಲಿಯಾದರು.

ವಾಮನ ರಾವ್ ಮಾಸ್ತರರ ವಿಶ್ವಗುಣಾದರ್ಶ ಸಂಗೀತ ನಾಟಕ ಮಂಡಳಿ

ನಾನು ಹುಟ್ಟಿದ ವರುಷವೇ (೧೯೧೩) ವಿಶ್ವಗುಣಾದರ್ಶ ಸಂಗೀತ ನಾಟಕ ಮಂಡಳಿ ಉದಯವಾಯಿತೆಂದೂ ಏನೋ ಇಂದಿಗೂ ನನಗೆ ವೃತ್ತಿ ರಂಗದ ಬಗ್ಗೆ ಒಂದು ಹುಚ್ಚು ಹಿಡಿಯದಿದ್ದರೆ ನಿಜವಾಗಿಯೂ ಅದು ವಾಮನ್ ರಾವ್ ಮಾಸ್ತರರ ನಾಟಕ ಮಂಡಳಿಯಿಂದ. ವಾಮನರಾವರ ನಾಟಕ ಕಂಪನಿ ಎಂದರೆ ನನಗೆ ಒಂದು ರೀತಿ ಮನೆಯ ನಾಟಕದಂತೆಯೇ ಅನಿಸಿತ್ತು. ಇದಕ್ಕೆ ಮುಖ್ಯ ಕಾರಣ ನನ್ನ ಭಾವ (ಅಕ್ಕನ ಗಂಡ) ಮತ್ತು ವಾಮನ್ ರಾವ್ ಮಾಸ್ತರರು ಧಾರವಾಡದ ಬಾಲ್ಯ ಸ್ನೇಹಿತರು. ನಮ್ಮ ಭಾವನಿಗೂ ಸಂಗೀತ ನಾಟಕ ಎಂದರೆ ತುಂಬ ವ್ಯಸನ. ತುಂಬ ರಸಿಕ ಸ್ವಭಾವ ಆತನದು. ನಮ್ಮ ಭಾವ ಕೋರ್ಟ್ ಗುಮಾಸ್ತನಾಗದಿದ್ದರೆ ವಾಮನರಾಯರ ಕಂಪನಿಯನ್ನೇ ಸೇರುತ್ತಿದ್ದನೋ ಏನೋ! ಹಾಗೇ ನೋಡಿದರೆ ಒಮ್ಮೆ ಬಣ್ಣ ಹಚ್ಚಿ ವಾಮನರಾಯರ ಜೊತೆಗೆ ರಂಗಮಂಚದ ಮೇಲೆ ಕಾಣಿಸಿಕೊಂಡು, ಹಾಡು ಹೇಳುವ ಹೊತ್ತಿಗೆ ನರ್ವಸ್ ಆಗಿ ವಿಂಗಿನೊಳಗೆ ಓಡಿ ಬಂದವನು ಮತ್ತೆ ಬಣ್ಣ ಹಚ್ಚಲಿಲ್ಲ. ಆದರೆ ನಮ್ಮ ಭಾವ ಕೋರ್ಟಿನ ಕೆಲಸ ಮಾಡುತ್ತ ವರ್ಗಾವಣೆಯ ಮೇಲೆ ಹುಬ್ಬಳ್ಳಿ, ಧಾರವಾಡ, ಗದಗ ಮೊದಲಾದ ಊರುಗಳಲ್ಲಿದ್ದಾಗಲೆಲ್ಲಾ ವಾಮನರಾಯರ ಕಂಪನಿ ಬಂತೆಂದರೆ ನಿತ್ಯವೂ ನಾಟಕ ನೋಡಲಿಕ್ಕೆ ಹೋಗುವುದೊಂದು ಚಟ. ನಿತ್ಯ ನಿದ್ರೆ ಕಟ್ಟುವುದು ಸಾಧ್ಯವಾಗದೇ ಸ್ವಲ್ಪ ಹೊತ್ತು ನಾಟಕ ನೋಡಿ ನೇಪಥ್ಯದೊಳಗೆ ಹೋಗಿ ವಾಮನ ರಾಯರ ಜೊತೆಗೆ ತಂಬಾಕು ಹಾಕಿಕೊಂಡು ಮನೆಗೆ ಬಂದು ಬಿಡುವರು.

ನಾನು ನನ್ನ ಸೋದರರು ಚಿಕ್ಕಂದಿನಲ್ಲಿಯೆ ನಮ್ಮ ತಂದೆಯನ್ನು ಕಳೆದುಕೊಂಡು ನಮ್ಮ ತಾಯಿ ಸಹಿತ, ಅಕ್ಕನ ಮನೆಯಲ್ಲಿಯೇ ಉಳಿದುಕೊಂಡಿದ್ದೆವು. ನಮ್ಮ ವಿದ್ಯಾರ್ಥಿ ಜೀವನ ಮುಗಿಯುವವರೆಗೆ ನಮ್ಮನ್ನು ಹಿಡಿದವರು ನಮ್ಮ ಅಕ್ಕ-ಭಾವ. ನಮ್ಮ ಸಂಬಂಧ ಭಾವನೊಡನೆ ಎಷ್ಟು ಸ್ನಿಗ್ಧವಾಗಿ ಬೆಳೆಯಿತೆಂದರೆ ನಮ್ಮಕ್ಕ ತೀರಿದ ಮೇಲೆ ಸಹ ಭಾವ ಎರಡನೆಯ ಸಂಬಂಧ ಕಟ್ಟಿಕೊಂಡರೂ ನಾವು ಇದ್ದು ವಿದ್ಯಾರ್ಜನೆಯೊಂದಿಗೆ ಬೆಳೆದದ್ದು ಭಾವನ ಮನೆಯಿಂದಲೇ. ಹೀಗಾಗಿ ನಾನು ಚಿಕ್ಕವನಿದ್ದಾಗಲೇ ಗದುಗಿನಲ್ಲಿ ವಾಮನರಾಯರು ಕಂಪನಿಯೊಂದಿಗೆ ಕ್ಯಾಂಪ್ ಹಾಕಿದಾಗ ಅವರು ಆಡುತ್ತಿದ್ದ ಆಗಿನ ಬಹುಶಃ ಎಲ್ಲ ನಾಟಕಗಳನ್ನು ನೋಡಿದ್ದೆ. ನಾನು ಹೈಸ್ಕೂಲ್ ಎರಡನೆಯ ಇಯತ್ತೆ (ಈಗಿನ ಆರನೆಯ ವರ್ಗ)ಯಲ್ಲಿದ್ದಾಗ ನಮ್ಮ ಭಾವನಿಗೆ ಹುಬ್ಬಳ್ಳಿಗೆ ವರ್ಗವಾಯಿತು-೧೯೭೨ರಲ್ಲಿ.