ಅದೇ ಹೊತ್ತಿಗೆ ವಾಮನರಾಯರ ಕಂಪನಿಯ ‘ಬೇಗನೇ ಬರುವರು’ ಎಂಬ ವಾಲ್ ಪೋಸ್ಟರ್ ನೋಡಿದಾಗ ನನಗೂ ನಮ್ಮಣ್ಣನಿಗೂ ಖುಷಿಯೋ ಖುಷಿ. ನಮ್ಮ ಹಿರಿಯಣ್ಣ ಮದುವೆಯಾಗಿ ಗದುಗಿನಲ್ಲಿರುತ್ತಿದ್ದರಿಂದ ನಾವಿಬ್ಬರೂ ಅಣ್ಣತಮ್ಮಂದಿರು ಹುಬ್ಬಳ್ಳಿಯಲ್ಲಿಯೇ ಭಾವನಲ್ಲಿದ್ದು ಹೈಸ್ಕೂಲ್ ಗೆ (ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲ್ ಗೆ) ಹೋಗುತ್ತಿದ್ದೆವು. ಈ ಸಲ ವಾಮನರಾಯರ ಮುಕ್ಕಾಂ ಹುಬ್ಬಳ್ಳಿಯಲ್ಲಿ ದೀರ್ಘಕಾಲ ನಡೆಯಿತು. ನಮ್ಮ ಭಾವ ಮತ್ತು ವಾಮನರಾಯರು ಆಗಾಗ ವಾಯು ಸಂಚಾರಕ್ಕೆಂದು ಗದುಗಿನ ರಸ್ತೆಗೋ ಕೇಶವಾಪುರ ರಸ್ತೆಗೋ ದೂರದವರೆಗೂ ಅಡ್ಡಾಡಿ ನಮ್ಮ ಮನೆಗೆ ಬಂದು ಸ್ವಲ್ಪ ಹೊತ್ತು ಕೂಡುವರು. ‘ಇವೊತ್ತು ನೋಡು ಗುರು, (ನಮ್ಮ ಭಾವ) ಬೆವರು ಬಿಡುಹಾಂಗ ವಾಕಿಂಗ್ ಆತು. ಆರಾಮ ಆತು ನೋಡು’ ಎನ್ನುವರು. ನನಗೊ ವಾಮನರಾಯರನ್ನು ಬಣ್ಣದ ವೇಷದಲ್ಲಿ ನೋಡಿ ಈಗ ಸಾದಾ ವೇಷದಲ್ಲಿ ಅವರ ಆಕರ್ಷಕ ವ್ಯಕ್ತಿತ್ವ ನೋಡುತ್ತ ಅವರಿಬ್ಬರ ಮಾತು ಕಥೆ ಕೇಳುತ್ತ ಮರೆಯಲ್ಲಿ (ಮನೆಯ ಗೋಡೆಯ ವಿಂಗಿನಲ್ಲಿ) ನಿಲ್ಲುವುದೇ ಒಂದು ಎಲ್ಲಿಲ್ಲದ ಮನರಂಜನೆ.

ನನಗಂತೂ ವಾಮನರಾಯರ ವ್ಯಕ್ತಿತ್ವದ ಒಂದು ಆಕರ್ಷಣೆಯೇ ಆಕರ್ಷಣೆ. ಹಾಗೆ ನೋಡಿದರೆ ನಮ್ಮ ಭಾವನೆ ವಾಮನರಾಯರಿಗಿಂತ ಬೆಳ್ಳಗೆ. ಆದರೆ, ಅವರ ಎತ್ತರ ವ್ಯಕ್ತಿತ್ವದ ಆಕರ್ಷಣೆ ನಮ್ಮ ಭಾವನಿಗಿದ್ದಿರಲಿಲ್ಲವೇನೋ ಎನಿಸುತ್ತದೆ. ತಿಕೀಟಿನ ಮೇಲೆಲ್ಲಾ ಅವರದೇ ಚಿತ್ರ. ಹ್ಯಾಂಡ್ ಬಿಲ್ ಮೇಲೆ, ರಂಗಭೂಮಿಯ ಪ್ರೇಕ್ಷಕರ ಎಡಗಡೆ ರಾಘವೇಂದ್ರ ಸ್ವಾಮಿಗಳ ಫೋಟೋ, ಬಲಗಡೆಗೆ ವಾಮನರಾಯರ ಫೋಟೋ! ನನಗೆ ನಾಟಕ ಸುರುವಾಗುವ ತನಕ ವಾಮನರಾಯರ ಫೋಟೋವನ್ನೇ ನೋಡಬೇಕೆನಿಸುವುದು. ತೆರೆಯೇಳುತ್ತಲೇ ಬಣ್ಣದ ಪಾತ್ರದಲ್ಲಿ ಕಾಣಿಸಿಕೊಳ್ಳುವ ವಾಮನರಾಯರನ್ನು ನೋಡಿದಾಗ ಏನೋ ಒಂದು ಸೋಜಿಗದ ಮೋಜು.

ವಾಮನರಾಯರ ಕಂಪನಿ ಕಂಪಾದ ಇಂಪಾದ ಸಂಗೀತಕ್ಕಾಗಿ ಪ್ರಸಿದ್ಧ! ಗರೂಡರ ಕಂಪನಿ ಅಭಿನಯಕ್ಕಾಗಿ ಪ್ರಸಿದ್ಧ; ಶಿರಹಟ್ಟಿ ಕೊಣ್ಣೂರು ಕಂಪನಿಗಳು ಅದ್ಭುತಗಳಿಗಾಗಿ ಪ್ರಸಿದ್ಧ.

ವಾಮನರಾಯರ ಸಂಗೀತವೆಂದರೆ ಕೇವಲ ಅವರೊಬ್ಬರದೇ ಅಲ್ಲ – ಸಂಗೀತ ಪ್ರವೀಣರಾದ ನಟರನ್ನೇ ಅವರು ನೇಮಿಸಿಕೊಳ್ಳುತ್ತಿದ್ದರು. ‘ಸಂತಸಖೂಬಾಯಿ’ ನಾಟಕದಲ್ಲಿ ವಾಮನರಾಯರ ಮಾದವನ ಪಾತ್ರ, ‘ಬಾಜೀರಾವ್ ಪೇಸ್ವೆ’ದಲ್ಲಿ ಬಾಜೀರಾಯನ ಪಾತ್ರ, ವಾಮನರಾಯರಿಗೆ ಒಪ್ಪುವಂತಹದು. ಗುಳೇದಗುಡ್ಡ ಗಂಗೂಬಾಯಿ ಸಖೂ ಆಗಿ, ವಾಮನರಾಯ ಮಾಧವನಾಗಿ ನಡಿಸುವ ಒಂದೆರಡು ಶೃಂಗಾರ ದೃಶ್ಯಗಳಿಗಾಗಿ ಮೈಸೂರು-ಬೆಂಗಳೂರು ಹು‌ಚ್ಚಾಗಿ ಹೋಗಿದ್ದುವೆಂದು ‘ರಂಗಭೂಮಿ’ ಪತ್ರಿಕೆ ಶ್ಲಾಘಿಸಿ ಬರೆದಿತ್ತು. ಮಾಧವನು ಸಖೂಗೆ ತಲೆಯಲ್ಲಿ ಮಲ್ಲಿಗೆ ಮಾಲೆ ಮುಡಿದು ಶೃಂಗಾರ ಸಲ್ಲಾಪ ನಡೆಸುತ್ತ ಹಾಡುವ –

ಮನ ಸೌಭಾಗ್ಯವೋ, ಲಾವಣ್ಯವರಾಶಿಯೋ ಶ್ರೀಯೋ || ||
ಈ ಸತಿಯ ದಿವ್ಯ ರೂಪ
, ಭಾಸಿಸುದೋ ದೇವಿಯ ಸಮವೀಗ |
ಸೌಂದರ್ಯದ ಸಾಮ್ರಾಜ್ಯವೋ
| ಲಾವಣ್ಯರಾಶಿಯೋ  ||

ಪದದ ಧಾಟಿ-ಮಟ್ಟು ಮೋಹಕವಾದುದು.

ವಾಮನರಾಯರದು ಸುಂದರ ಶೈಲಿ. ಅವರ ರಂಗಗೀತಗಳಲ್ಲಿ ಧಾಟಿಯೊಂದಿಗೆ ರಾಗದ ನಡೆ, ಪದಲಾಲಿತ್ಯಗಳು ಮೋಹಕ. ಅದೂ ಯಾವುದೋ ಬಾಲಗಂಧರ್ವನ, ಬೇರೆ ಮರಾಠಾ ನಾಟಕಗಳ, ಕರ್ನಾಟಕಿ ಪದ್ಧತಿಯ ಮಟ್ಟಿನ ಚೌಕಟ್ಟಿನಲ್ಲಿಯೇ ಇವರು ಜೋಡಿಸಿದ ಹಾಡಿನ ಸೊಗಸು ತುಂಬ ರೋಚಕ. ಬಾಜೀರಾವ ಪೇಶ್ವೆದೊಳಗಿನ ‘ಬಾರೆ ಸುಮಬಾಣನ ಗಿಳಿಯೆ’ ಎಂದು ರಾಜಲಕ್ಷ್ಮೀಯನ್ನು ಬೆನ್ನಟ್ಟಿ ಹೋಗುವ ಶೃಂಗಾರ ಪದದ ‘ಸುಮಬಾಣನ ಗಿಳಿಯೆ’ ಎಂದರೆ ಮನ್ಮಥನ ಮುಂಗೈ ಮೇಲಿನ ಗಿಳೀಯೆ ಎಂಬ ಅಭಿವ್ಯಕ್ತಿ ಎಷ್ಟು ಆಕರ್ಷಕ! ಹಾಗೆಯೇ ‘ಮೋಹಿನಿಯೋ ಶೂರ ಶರನ ಪತಾಕೆಯೋ ಮನೋಹರೆ’ ಎಂಬ ಪದದ ಪರಸೌಷ್ಠವ ಮೆಚ್ಚುವಂಥಹುದು. ‘ಬಾಜೀರಾವ್ ಪೇಶ್ವೆ’ದಲ್ಲಿ ಠಾಕುರದಾಸನ – ‘ಕೊಟ್ಟ ಕಾಲಕೇ ದೇವರು ನಿನಗೆ | ಕೆಟ್ಟ ಕೃತಿಯ ಮಾಡಲು ಬೇಡಾ’ ಎಂಬ ಜಾನಪದ ಧಾಟಿಯಾಗಲಿ-

‘ನೆಲೆಯು ತಿಳಿಯದೈ | ಕಾಲವೆ ನಿನ್ನ || ಪ ||
ಬಳಲಿರೆ ನಾನು ಮಾನದಿ ಜಗದ || ಅ.ಪ ||
ಕ್ಷಣದೊಳ್ ನಗಿಸುವ ಕ್ಷಣದೊಳ್ ಅಳಿಸುವೆ
ಕ್ಷಣದಿ ತೃಣವ ಪರ್ವತವನ್ಗೈಯುವೆ
ಕಾಣೆನು ನಿನ್ನ ವಿಲಾಸದ ಪರಿಯಾ || ೧ ||

ಎಂಬ ತಾತ್ವಿಕ ಪದಕ್ಕೆ ದರ್ಬಾರಿ ಕಾನಡಾದ ‘ಚಾಲೀ’ ಜೋಡಿಸಿರುವುದು ಆ ಗಂಭೀರ ಭಾವಕ್ಕೆ ಅನುಗುಣವಾಗಿದೆ.

ಅವರು ಹುಬ್ಬಳ್ಳಿ ಮುಕ್ಕಾಮಿನಲ್ಲಿಯೆ ೧೯೨೯ರಲ್ಲಿ (ಮರಾಠಿ ಶುಕ್ಲಕವಿ ವಿರಚಿತ) ‘ಸಿಂಹಾಚಾ ಛಾವಾ’ ಎಂಬ ನಾಟಕವನ್ನು ‘ವೀರ ಅಭಿಮನ್ಯು’ ಎಂದು ಹೆಸರಿಸಿ, ಹುಬ್ಬಳ್ಳಿ ಗಣೇಶ ಪೇಟೆಯ ತುಂಬಿದ ನಾಟ್ಯಗೃಹದಲ್ಲಿ ಏಕಸತತವಾಗಿ ೮೪ ದಿನಗಳವರೆಗೆ ಪ್ರಯೋಗಗಳು ನಡೆದಾಗ ವಾಮನರಾಯರ ಮಂಡಳಿಯ ಭಾಗ್ಯ ತೆರೆಯಿತು. ಅದೇ ಕಾಲಕ್ಕೆ ಮಲ್ಲಿಕಾರ್ಜುನ ಥಿಯೇಟರ್‌ನಲ್ಲಿ ‘ಬಾಲಗಂಧರ್ವ ನಾಟಕ ಮಂಡಳಿ’ ಮುಕ್ಕಾಂ ಮಾಡಿ ತಮ್ಮ ‘ಹೌಸ್ ಫುಲ್’ ನಾಟಕಗಳನ್ನು ನಡೆಸಿದ್ದರು.

ಆದರೂ ವಾಮನರಾಯರ ‘ವೀರ ಅಭಿಮನ್ಯು’ ತನ್ನ ಪಾಡಿಗೆ ಅದೂ ಭರಪೂರ ಹೌಸ್ ಫುಲ್ ಆಗಿ ಸಾಗಿತ್ತು. ಬಾಲಗಂಧರ್ವರ ನಾಟಕಗಳು ಮರಾಠಿ ಆದುದರಿಂದ ಬಾಲಗಂಧರ್ವರ ಸ್ತ್ರೀ ಪಾತ್ರವನ್ನು ನೋಡುವ ಅವರ ಅತಿ ರೋಚಕವಾದ ರಂಗಗೀತಗಳನ್ನು ಕೇಳುವ ಕನ್ನಡ ರಸಿಕರಿಗೇನೋ ಕೊರತೆ ಇರಲಿಲ್ಲ. ಆದರೂ ‘ವೀರ ಅಭಿಮನ್ಯು’ ನಾಟಕದ ಆಕರ್ಷಣೆಗಳು ಹೆಚ್ಚು. ಮೊದಲಿಗೆ ಅದು ಕನ್ನಡ. ‘ವೀರ ಅಭಿಮನ್ಯು’ ಕನ್ನಡ ಅನುವಾದ ನಾಟಕವಾಗಿದ್ದರೂ ಅದರ ಆಕರ್ಷಣೆ, ಉತ್ತಮ. ನಟ-ನಟಿಯರ ಅಭಿನಯ ಮತ್ತು ಸಂಗೀತ, ಮುಖ್ಯವಾಗಿ ದ್ರೋಣಾಚಾರ್ಯರ ಗಮಗಮಿಸುವ ಗದ್ಯ ಮತ್ತು ಗೀತಗಳು, ಉತ್ತರೆ-ಅಭಿಮನ್ಯು ಇವರ ಪಾತ್ರ ಮತ್ತು ಗೀತ, ಮುಖ್ಯವಾಗಿ ಶ್ರೀಕೃಷ್ಣನ ಪಾತ್ರದಲ್ಲಿ ವಾಮನರಾಯರ ಸಂಗೀತ ಇವೆಲ್ಲವುಗಳಿಂದಾಗಿ ಹಳ್ಳಿ-ಹಳ್ಳಿಗಳಿಂದ ಜನ ಕಿತ್ತಿ ಬರಬೇಕು. ಒಮ್ಮೆ ಬಾಲಗಂಧರ್ವರೇ ವಾಮನರಾಯರ ಆಮಂತ್ರಣದ ಮೇರೆಗೆ – ವೀರ ಅಭಿಮನ್ಯು ನೋಡಿ ಖುಷಿಪಟ್ಟರಲ್ಲದೆ ವಾಮನರಾಯರನ್ನೇ ತಮ್ಮ ಕಂಪನಿ ಸೇರಲು ಆಮಂತ್ರಿಸಿದಾಗ ವಾಮನರಾಯರು ನಿರಾಕರಿಸಬೇಕಾಯಿತು. ಅಲ್ಲದೇ ಏನು?

ಬಾಲಗಂಧರ್ವರು ಕೇವಲ ಸ್ತ್ರೀ ಪಾತ್ರ ಧರಿಸುವುದಷ್ಟೇ ಅಲ್ಲ, ಅವರ ಕಂಠವೂ ಸ್ತ್ರೀ ಕಂಠದಂತೆ ಕಪ್ಪು ೪, ಬಿಳಿ ೪ರ ಪಟ್ಟಿಯ ಮಟ್ಟದಾಗಿತ್ತು. ತಲೆಗೆ ಟೋಪಣ್ ಹಾಕುತ್ತಿದ್ದರೂ ಆ ಸಡಿಲಾದ ಬೈತಲೆಯ ಹರಳು, ಮಾಲೆ ಧರಿಸಿದ ತುರುಬಿನಂತೆ ಅನೇಕ ಸ್ತ್ರೀಯರು ತಮ್ಮ ಹೇರ್ ಸ್ಟೈಲ್ ಮಾಡುತ್ತಿದ್ದುದುಂಟು. ಇವರ ನಾಟಕ ನೋಡಲು ಊರೂರಿಂದ ಬರುವ ಜನ ಮೊದಲೇ ಕುರ್ಚಿಯ ತಿಕೀಟುಗಳನ್ನು ರಿಜರ್ವ್ ಮಾಡಿಸುತ್ತಿದ್ದರು. ತಿಕೀಟು ಮಾರುವ ಕೋಣೆಯಲ್ಲಿ (ಬುಕ್ಕಿಂಗ್ ಆಫೀಸ್) ಒಂದು ಚಾರ್ಟ್ ಇರುತ್ತಿತ್ತು. ಅಲ್ಲಿ ಪ್ರೇಕ್ಷಾಗೃಹದಲ್ಲಿ ಸಾಲಾಗಿರಿಸಿದ ಕುರ್ಚಿಗಳ ಹಿಂದು ಮುಂದಿನ ಸಾಲುಗಳ ನಂಬರ ಎಲ್ಲಾ ಇರುತ್ತಿದ್ದವು. ಕಂಭಕ್ಕೆ ಮರೆಯಾಗಿರುವ ಕುರ್ಚಿಯ ನಂಬರೂ ಚಾರ್ಟಿನಲ್ಲಿರುತ್ತಿತ್ತು. ಆ ಪ್ರಕಾರ ನೋಡುವವರು ತಂತಮ್ಮ ತಿಕೀಟು ರಿಜರ್ವ್ ಮಾಡಿಸುವರು.

ಮುಖ್ಯವಾಗಿ ಬಾಲಗಂಧರ್ವರ ‘(ರುಕ್ಮಿಣಿ) ಸ್ವಯಂವರ’ ಮತ್ತು ‘ಏಕಚಪ್ಯಾಲಾ’ ನೋಡುವವರೆ ಬಹಳ. ಶನಿವಾರ ರಾತ್ರಿ ‘ಏಕಚಾಪ್ಯಾಲಾ’ ನೋಡಿ ರವಿವಾರದ ಮ್ಯಾಟಿನಿ (ಸಂಜೆ ೪ಕ್ಕೆ) ನೋಡಿಕೊಂಡು ಹೋಗುವವರೆ ಹೆಚ್ಚು. ಕೆಲವು ಸಂಗೀತ ರಸಿಕರಂತೂ ಆಯಾ ವಿಶಿಷ್ಟ ಗೀತದ ಹೊತ್ತಿಗೇ ಬಂದು ಆ ಹಾಡನ್ನು ಒನ್ಸ್ ಮೋರ್ ಹಾಕಿ ಮತ್ತೆ ಕೇಳಿ ಹಿಂತಿರುಗಿ ಹೋಗಿ  ಬಿಡುವವರೇ ಕೆಲವರು. ‘ಸ್ವಯಂವರ’ ನಾಟಕದಲ್ಲಿ ಪ್ರಥಮ ಪ್ರವೇಶವೇ ಯಮನ ರಾಗದ ‘ನಾಥಹಾ  ಮಾಝಾ ಮೋಹಿಖಲಾ! ಶಿಶುಪಾಲಾ’ ಗೀತದಿಂದ ಮೊದಲಾದರೆ ಅದನ್ನು ಕನಿಷ್ಠ ೪೫ ನಿಮಿಷಗಳ ಕಾಲ ಹಾಡುವರು. ಆದರೂ ಮತ್ತೆ ‘ಒನ್ಸ್ ಮೋರ್’ ಇದ್ದದ್ದೇ. ಅವರ ಜೊತೆಗೆ ಸ್ಪರ್ಧಿಸುವವರು ಮಾಸ್ತರ್ ಕೃಷ್ಣರಾವ್. ಅವರ ‘ಲಪವಿಲಾ ಲಾಲ್ಗಗನಮಣಿ’ ಹಾಗು ‘ಲಲನಾಮನಾ’ ಇವೂ ಹಿಟ್ ಹಾಡುಗಳೇ. ಹಾಗೆಯೇ ‘ಏಕಪ್ಯಾಲಾಚಾ’ ದಲ್ಲಿ ಬಾಲಗಂಧರ್ವರ ‘ಸತ್ಯವದೇ ವಚನಾಲಾ ನಾಥಾ’ ಮತ್ತು ಬಘನಕೋ ಮಾಝ್ಯಾ ಕಡೇ ರಾಜಸ ಬಾಲಾ’ ಎಂಬ ಕಾಲಿಂಗಡಾ ಶೋಕರಸದ ರಾಗದ ಗೀತಗಳ ‘ಒನ್ಸ್ ಮೋರ್’ ಗೀತಗಳು. ಅದರಂತೆ ‘ಪ್ರಭು ಮಾಝಾವರಿ ಕೋಪಲಾ’ ಹಾಗು ‘ಪ್ರಭು ಮಾಝಾ ಗಮಲಾಮನೀತೋಷಿಲಾ’ ಇವೂ ಅಷ್ಟೇ. ಬಾಲಗಂಧರ್ವರ ಭರ್ಜರಿ ಡ್ರೆಸ್, ಸೀನರಿಗಳೊಂದಿಗೆ ಅವರ ಮತ್ತು ಮಾಸ್ತರ್ ಕೃಷ್ಣರಾವ್ ಅವರ ಒನ್ಸ್ ಮೋರ್‌ ಗೀತಗಳಿಗಾಗಿ ‘ಸ್ವಯಂವರ’ ನೋಡುವವರೇ ಹೆಚ್ಚು.

ಒಮ್ಮೆ ಬಾಲಗಂಧರ್ವರು ಹುಬ್ಬಳ್ಳಿಗೆ ಬಂದು ಹೋದರೆಂದರೆ ಕರ್ನಾಟಕದ ಉದ್ದಗಲಕ್ಕೂ ಒಂದು ಮೋಹಕ ಮಾಯಾಜಾಲವನ್ನೇ ಬೀಸಿ ಬಲೆ ಹಾಕಿ ಹೋಗುತ್ತಿದ್ದರು. ಅವರ ಆ ಮಾಯಾ ಮೋಹನಾಸ್ತ್ರದ ಪರಿಣಾಮವಾಗಿ ರಸಿಕ ಜನ ಎಷ್ಟೋ ಕಾಲ ಹುಚ್ಚರಂತೆ ಬಾಲಗಂಧರ್ವರದೇ ಮಾತು, ಬಾಲಗಂಧರ್ವರ ಹಾಡುಗಳ ಗುಣು ಗುಣು ಮೆಲುಕು.

ನಿಜವಾಗಿಯೂ ಬಾಲಗಂಧರ್ವರು ಉದಾರ ಮನಸ್ಸಿನವರು,  ಮಾನವೀಯತೆಯಿಂದ ಕೂಡಿದವರು. ನಾಟಕ ಮಧ್ಯದಲ್ಲಿ ಮಗ್ಗುಲಾಗೇ ಇರುವ ನಾಟಕದ ಮನೆಯಲ್ಲಿ ಮಗುವಿಗೆ ಹಾಲು ಕೇಳಿದರೆ ಬಟ್ಟಲು ತುಂಬ ಹಾಲು ಕೊಡುವರು. ಎಷ್ಟೋ ಬಡವರು ರಸಿಕರು ನಾಟಕ ನೋಡಲು ಯಾಚನೆ ಮಾಡಿದರೆ ಉಚಿತ ಪ್ರವೇಶ. ಪ್ರೇಕ್ಷಕರನ್ನು ಅವರು ಯಾವಾಗಲೂ ‘ಅನ್ನದಾತಾ’ ಎಂದೇ ಸಂಭೊಧಿಸುವರು.

ವಾಮನರಾಯರು ನಿಷ್ಠಾವಂತ, ಪ್ರಾಮಾಣಿಕ, ಕುಶಲ ನಾಟಕ ನಿರ್ದೇಶಕರಾಗಿದ್ದಂತೆ, ಕಂಪನಿ ಮಾಲಕರಾಗಿ ನಟ-ನಟಿ ವರ್ಗವನ್ನು, ವಾದ್ಯಕಾರರನ್ನೂ ಪರದೆ ಎಳೆಯುವವರನ್ನೂ, ಪೇಂಟರರನ್ನೂ, ಡ್ರೇಸ್ ತಯಾರಕರನ್ನೂ, ಕೆಳಗಿನ ಕೆಲಸಗಾರರನ್ನೂ ದುಡಿಸಿಕೊಳ್ಳುವ ಹತೋಡಿಯನ್ನು ಬಲ್ಲವರಾಗಿದ್ದರು. ಕೈ ಕೆಳಗಿನವರನ್ನು ತಾವೇ ಎಂದೂ ಮಾತನಾಡಿಸಿ ಪಗಾರ ಗೊತ್ತುಪಡಿಸಿ, ತಿಂಗಳು ತಿಂಗಳಿಗೋ, ವಾರವಾರಕ್ಕೋ ತಾವೇ ಪಗಾರ ಕೊಡುತ್ತಿದ್ದಿಲ್ಲ. ಎಲ್ಲರೂ ಮನೇಜರರ ಮುಖಾಂತರವೇ ಇವರಿಗೆ ತಂತಮ್ಮ ಮನವಿ ಸಲ್ಲಿಸುವುದು, ತಮ್ಮ ಅಡಚಣೆಗಳನ್ನು ಹೇಳಿಕೊಳ್ಳವುದು ನಡೆಯಬೇಕು. ಇದರಿಂದಾಗಿ ತಮ್ಮ ಒಂದು ಮಾಲಕರ ‘ಇಜ್ಜತ್’ ಕಾಯ್ದುಕೊಂಡು ಬಂದಿದ್ದರು. ಮುಖ್ಯ ದೇಶಭಕ್ತರೂ, ಶೃದ್ಧಾವಂತರೂ ಆಗಿದ್ದುದರಿಂದ ಯಾರಿಗೂ ಅನ್ನದ ತೊಂದರೆ, ಪಗಾರ ವಿತರಣೆಯಲ್ಲಿ ಯಾವುದೇ ಅನ್ಯಾಯ ಪಕ್ಷಪಾತ ಮಾಡುತ್ತಿರಲಿಲ್ಲ. ಮುಖ್ಯವಾಗಿ ಹಿರೋಯಿನ್ ಜೊತೆ ಚಿಲ್ಲರೆತನದಿಂದಾಗಲಿ, ತಮ್ಮ ದೌರ್ಬಲ್ಯ ತೋರ್ಪಡಿಸುವ ಲಾಲೂ ಗಿರಿತನವನ್ನಾಗಲಿ ತೋರಗೊಡುತ್ತಿರಲಿಲ್ಲ. ಇದರಿಂದಾಗಿ ತಮ್ಮ ಬಿಗುಮಾನ ಕಾಯ್ದುಕೊಂಡು ಹಿರೋಯಿನ್, ಇತರ ನಟಿವರ್ಗ, ಹಿರೋ ಹಾಗೂ ಚಿಲ್ಲರೆ ಪಾತ್ರಧಾರಿಗಳೊಂದಿಗೆ ಅಂತರವನ್ನೂ ಕಾಯ್ದುಕೊಂಡಿದ್ದರು. ಯಾರಾದರೂ ಹೆಚ್ಚಿನ ಪಗಾರ ದೊರಕುತ್ತದೆಂದು ಈ ತಮ್ಮ ಕಂಪನಿಯನ್ನು ಬಿಡುವ ಮನಸ್ಸು ಮಾಡಿದರೆ ನಿಂತ ಕಾಲ ಮೇಲೆ ಅವರ ಪಗಾರ ಚುಕ್ತಾ ಮಾಡಿ ‘ನೀವು ಹೋಗಬಹುದು’ ಎಂದು ನಿಂತಕಾಲ ಮೇಲೆ  ಅಟ್ಟಿ ಬಿಡುತ್ತಿದ್ದರು. ಗುಳೇದಗುಡ್ಡ ಗಂಗೂಬಾಯಿ ಅಂತಹವರೂ ಕಂಪನಿ ಬಿಟ್ಟು ಅಧೈರ್ಯ ತಾಳಿ ಅವರ ಮರ್ಜಿ ಹಿಡಿಯುವುದಾಗಲಿ, ತಾವೂ ಪಗಾರ ಹೆಚ್ಚಿಸಿ ತಮ್ಮಲ್ಲೇ ಇಟ್ಟುಕೊಳ್ಳುವ ಸಡಿಲು ನೀತಿಯನ್ನು ತೋರುತ್ತಿರಲಿಲ್ಲ. ಹಿರೋ-ಹಿರೋಯಿನ್ ಬಿಟ್ಟರೂ ದರಕಾರ ಮಾಡದವರು ಉಳಿದವರನ್ನು ಸರಕು ಮಾಡುತ್ತಿದ್ದರೆ?

ಬೇರೆ ಯಾವುದೇ ಊರಿಗೆ ಕ್ಯಾಂಪ್ ಹಾಕಿದಾಗ ಮೊದಲನೆಯ ನಾಟಕದ ಕಲೆಕ್ಷನ್ ಮೊದಲು ಬ್ಯಾಂಕಿನಲ್ಲಿ ಠೇವಣಿ ಇಡುವುದು – ಅದು Emergencyಗಾಗಿ. ಇದು ಅವರ ವ್ಯಾವಹಾರಿಕ ದೂರದರ್ಶನವನ್ನು ತೋರಿಸುತ್ತದೆ.

ಒಮ್ಮೆ ನಮ್ಮ ಭಾವನ ಮುಂದೆ ತಮ್ಮ ಕಂಪನಿ ವಿಷಯ ಮಾತನಾಡುವಾಗ ‘ಪ್ರತಿ ಆಟಕ್ಕೂ ನೂರು ರೂಪಾಯಿ ನಿವ್ವಳ ಕಲೆಕ್ಷನ್ ಆದರ ಸಾಕು ಕಂಪನಿಗೆ ಎಣ್ಣೆಹಾಕಿ ದೀಪ ಬೆಳಗಿಸಬೇಕಾಗಿಲ್ಲ. ಊಫ್ ಎಂದು ಆರಿಸಿ ಕಂಪನಿ ಬಂದ ಮಾಡಬೇಕಾಗಿಲ್ಲ’ ಹೀಗೆ ನುಡಿದವರು ‘ವೀರ ಅಭಿಮನ್ಯು’, ಅವರಿಗೆ ಜೀವನದಲ್ಲೇ ಸರ್ವಕಾಲಕ್ಕೂ ಒಂದು ನಿಧಿಯಾಗಿ ಉಳಿದಾಗ ಬಹಳ ಜಾಗರೂಕತೆಯಿಂದ ಇದರ ಉತ್ಪನ್ನವನ್ನು ಕಾಯ್ದುಕೊಂಡು ಬಂದರು. ಅವರು ಎಂದಿಗೂ ತಮ್ಮ ಸಂಸಾರವನ್ನು ಒಂದು ಅಂತಸ್ತಿನಲ್ಲಿ ನಾಲ್ಕು ಜನ ಗೌರವದಿಂದ ಕಾಣುವಂತೆ ಸರ್ವ ಪ್ರಕಾರದಲ್ಲೂ ತುಂಬಿದ ಮನೆ, ಶ್ರೀಮಂತರ ಮನೆ ಎಂದು ಎಲ್ಲ ಕಾಲಕ್ಕೂ ಒಂದು ಅಂತಸ್ತು ಕಾಪಾಡಿಕೊಂಡು ಬಂದರು.

ಒಬ್ಬನೇ ಮಗ ವೆಂಕಟರಾಯ ಹೆಚ್ಚು ಕಲಿಯಲಿಲ್ಲ. ಕಂಪನಿ ನಡೆಸಿಕೊಂಡು ಹೋಗುವ ಚುರುಕು ಚಾಕಚಕ್ಯತೆಯೂ ಕಾಣಿಸಲಿಲ್ಲ. ವಾಮನರಾಯರು ಮಗನಿಗೆ ಇರುವಷ್ಟು ಕಾಲ ಸುಖದಿಂದ ಕೂತು ಉಂಡರೂ ಅನ್ನದ ಕೊರತೆ ಆಗದಂತೆ ಮುಂದಿನ ಪೀಳಿಗೆಗೆ ಅನ್ನ, ಸಂಪತ್ತು ಮಾಡಿಟ್ಟು ತಾವು ಪುಣ್ಯ ಕೀರ್ತಿ ಸಂಪತ್ತನ್ನು ಕಟ್ಟಿ ಕೊಂಡೊಯ್ದರು.

ವಾಮನರಾಯರಲ್ಲಿ ಸ್ವಂತ ನಾಟಕ ರಚನೆಯ ಸೃಜನಶೀಲ ಪ್ರತಿಭೆ ಇಲ್ಲದಿದ್ದರೂ (ಗಳಗನಾಥರು ಮರಾಠಿ ಕಾದಂಬರಿಗಳಿಂದ (ಹರಿನಾರಾಯಣ ಆಪ್ಟೆ ರಚಿತ) ಸುಲಲಿತ ಕನ್ನಡ ಅನುವಾದಗಳನ್ನು ಸವಿಕಟ್ಟಾಗಿ ರಚಿಸಿದಂತೆ. ಅವರ ಪ್ರಥಮ ಕಾದಂಬರಿ ‘ಕನ್ನಡಿಗರ ಕರ್ಮಕಥೆ’ ಹಾಗೂ ಕೊನೆಯ ‘ಮಾಧವಕರುಣಾವಿಲಾಸ’ ಎರಡೂ ಸ್ವಂತ ಕಥಾನಕಗಳು. ಸುಲಿದ ಬಾಳೆಯ ಹಣ್ಣಿನಂತೆ ಲಲಿತ ಕನ್ನಡಕ್ಕೆ ಅನುವಾದಿಸಿದಂತೆ. ‘ಲಲಿತ ರಮ್ಯ ರಸವಾಹಿನಿ’ಯ ಕನ್ನಡ ಶೈಲಿಯಲ್ಲಿ ಸಂಭಾಷಣೆಗಳನ್ನು, ಸವಿಗಾರಿಕೆಯ ಪದಗಳಿಂದ ಸಮಯೋಚಿತ ರಾಗ-ತಾಳಗಳಲ್ಲಿ (ಈ ಪದಗಳನ್ನೂ ಮರಾಠಿ ‘ಚಾಲೀ’ ಮೇಲೆ) ರಚಿಸಿದರು. ಮೂರನೆಯ ವರ್ಷ ಟ್ರೇನ್ಡ ಶಿಕ್ಷಕರಾಗಿ, ಶಾಲಾ ಮಾಸ್ತರರಾಗಿ ಕಲಿಸಿದ ಅನುಭವವುಳ್ಳವರೂ ಆದ್ದರಿಂದ ಗದ್ಯ ಪದ್ಯಗಳೆರಡೂ ಪ್ರಕಾರಗಳಲ್ಲಿ ಇವರ ಪಳಗಿದ ಸಂಗೀತ ಶೈಲಿಯಿಂದ ಇವರ ಅನುವಾದಿತ ಸಂಗೀತ ನಾಟಕಗಳು ಲೋಕಪ್ರಿಯವೆನಿಸಿದವು.

ಭಕ್ತಿ, ವೀರ, ಹಾಸ್ಯ ರಸಪ್ರಧಾನಗಳೆ ವಾಮನರಾಯರ ನಾಟಕಗಳು ಸ್ಥಾಯೀ ಭಾವವಾದುದರಿಂದ ಜನಸಾಮಾನ್ಯ ಪ್ರೇಕ್ಷಕರಿಗೆ ತುಂಬ ರೋಚಕವೆನಿಸಿದವು.

ಇವರ ಸಂತಸಖೂಬಾಯಿ, ಭಕ್ತ ಪುಂಡಲೀಕ ಮೊದಲಾದ ನಾಟಕಗಳು ಮಹಾರಾಷ್ಟ್ರದ ಸಂತಪಂಥ ದರ್ಶನವೆನಿಸಿದರೂ ಕರ್ನಾಟಕದ ಭಕ್ತಿಪಂಥಕ್ಕೆ ಸಂವಾದಿಯಾಗಿದ್ದವು. ‘ಸಂತಸಖೂಬಾಯಿ’ಯ ಪಂಢರೀನಾಥನ ಭಕ್ತಿ ಪಾರಮ್ಯವನ್ನು ಪವಾಡಾತ್ಮಕವಾಗಿ ರೂಪಿಸಿದ್ದು ಎಂತಹವರಿಗೂ ಮನಃಪ್ರಭಾವ, ಪರಿವರ್ತನೆಗಳನ್ನುಂಟು ಮಾಡುವಂತಹಹುದು. ಅತ್ತೆ ಚಂಡಿಕಾಬಾಯಿ ಮೊದಲೇ ಚಂಡಿಕೆ; ಸಖೂನ ಗಂಡ ಮಾಧವ ಮತ್ತೆ-ಸೊಸೆಯರ ನಡುವೆ ಅಡುಕೊತ್ತಿಗೆ ಸಿಕ್ಕ ಅಡಕಿಬೆಟ್ಟಡಂತೆ ಅಸಹಾಯಕನಾಗಿ ಒದ್ದಾಡುತ್ತಿದ್ದಾನೆ. ಇತ್ತ ಸಖೂನಬಾಯಿಗೆ ಪಂಢರಪೂರಕ್ಕೆ ಊರ ಭಕ್ತರೊಂದಿಗೆ ತಾನೂ ಯಾತ್ರೆ ಮಾಡಿ ದೇವರ ದರ್ಶನ ಪಡೆಯುವ ಪರಮಾನೆ. ಪಂಢರೀನಾಥನಿಗೆ ಮನಸ್ಸಿನಲ್ಲಿ ಮೊರೆಹೊಕ್ಕು ಆತನ ದರ್ಶನಕ್ಕಾಗಿ ಬೇಡಿಕೊಳ್ಳುತ್ತಾಳೆ. ಪಂಡರೀನಾಥ ಚಂಡಿಕಾದೇವಿಯ ಸೊಸೆ ಸಖೂ ಆಗಿಬಂದು ತಾನು ಚಂಡಿಕೆಯ ಹಿಂದೆಯನ್ನು ಸಹಿಸುತ್ತ ನಿಜವಾದ ಸಖೂದೇವಿಗೆ ಪಂಢರಪೂರಕ್ಕೆ ಯಾತ್ರೆ ಗೈಯ್ಯಲು ಅನುವು, ಅನುಕೂಲ ಮಾಡಿಕೊಡುತ್ತಾನೆ. ಕೊನೆಗೆ ಸಖೂಬಾಯಿಯ ನಿಜ ಭಕ್ತಿಯ ಸ್ವರೂಪವು ಅತ್ತೆಗೂ-ಪತಿಗೂ ಮನಗಾಣೆಯಾಗಿ ಅವರೂ ಪಂಢರೀನಾಥನ ಭಕ್ತರಾಗಿ ಪರಿವರ್ತಿತರಾಗುತ್ತಾರೆ. ಇದು ಕಥಾ ಹಂದರ. ಇದರ ಮೇಲೆ ಸುಂದರ ಸಂವಾದಾತ್ಮಕ ಕಥಾವಲ್ಲರೀ, ಪದ್ಯಪುಷ್ಪಗಳೊಂದಿಗೆ ವಿರಾಜಿಸುತ್ತವೆ.

‘ಬಾಜೀರಾವ್ ಪೇಶ್ವೆ’ ನಾಟಕದಲ್ಲಿ ಎರಡನೆಯ ಉಂಡೀ ಬಾಜೀರಾಯರ ಕಂಪನಿಯಲ್ಲಿ ಈ ಸಂಗೀತ ಗುಣಲಕ್ಷಣವು ಮುಖ್ಯವಾಗಿ ಅವರ ರಂಗಗೀತಗಳ ರಚನೆಯಲ್ಲಿ ರಚನೆಗಳ ಛಂದಸ್ಸ, ಪ್ರಾಸಾಲಂಕಾರ, ರಾಗ, ತಾಳ, ಧಾಟಿಗಳಿಲ್ಲದ ಆ ಗೀತ ರಚನೆಗಳ ಸಂಗೀತಮಯ ಪದ, ಪದಾವಳಿಗಳ ಆಯ್ಕೆಯಲ್ಲಿ ಅವುಗಳ ಸುಭಗತೆ, ಸುಮಧುರತೆಯಲ್ಲಿ ಕಂಡು ಬರುತ್ತಿತ್ತು. ಉದಾಹರಣಾರ್ಥವಾಗಿ ‘ಸಂತಸಖೂ’ ದೊಳಗಿನ ‘ವನಸೌಭಾಗ್ಯವೊ’ ಎಂಬ ಗೀತದ ಸಂಗೀತಮಯ ಬೆಡಗನ್ನೂ ಪದರಚನೆಯ ಬಿನ್ನಾಣವನ್ನೂ ‘ಬಾಜೀರಾವ ಪೇಶ್ವೆ’ದೊಳಗಿನ ಠಾಕುರದಾಸನ ಜಾನಪದದ ಸೊಗಡನ್ನೂ ನೋಡಿದೆವು.

ಮುಖ್ಯವಾಗಿ ವಾಮನರಾಯರ ಗೀತ-ಸಂಗೀತದ ಸಿರಿಯೆ ಸೂರೆಯಾದುದನ್ನು ಅವರ ‘ವೀರ ಅಭಿಮನ್ಯು’ ನಾಟಕದಲ್ಲಿ ಕಾಣುತ್ತೇವೆ. ಅವರ ಹುಬ್ಬಳ್ಳಿಯ ಕ್ಯಾಂಪಿನಲ್ಲಿ ಈ ವೀರ ಅಭಿಮನ್ಯು (ಮರಾಠಿಯಲ್ಲಿ ಶುಕ್ಲ ಅವರ ‘ಸಿಂಹಾ ಚಾ ಛಾವಾ’ದ ಕನ್ನಡ ರೂಪಾಂತರ) ನಾಟಕದ ಗೀತಗಳೆಲ್ಲವೂ ಅವರವೆ ಗೀತಗಳು ಅನುವಾದಿತವಾಗಿರಲಿಲ್ಲ. ಈ ನಾಟಕದೊಳಗಿನ ಎಲ್ಲ ೬೪ ಪದಗಳೂ ನನಗೆ ಇಂದಿಗೂ ಧಾಟಿ ಸಹಿತವಾಗಿ ಕಂಠೋಕ್ತವಾಗಿವೆ.

ಮೊದಲಿನ ನಾಂದಿಗೀತವನ್ನೆ ನೋಡಬಹುದು. ಅದು ಹಿಂಡೋಲ ರಾಗದಲ್ಲಿದೆ.

ವಾರಿನಿಧಿ ಶಯನಾ | ನೀರಜಾಸನ | ವಂದಿತಾ ಪವಮಾನವಿನುತಾ ||||
ಮಥಿಸಿ ಕಡಲನು ಅತಿವಿಲಾಸದಿ
| ರಿತಿಜರಿಗೆ ವರಸುಧೆಯನುಣಿಸಿದ ||||
ಬಲಿಯ ಯಜ್ಞದಿ ಬೇಡಿ ದಾನವ
| ಛಲದಿ ಬೆಳೆಸಿದೆ ಭಕ್ತ ಮಹಿಮೆಯ ||||
ಪರಮ ಹರುಷದಿ ನಾಟ್ಯ ಕುಸುಮವ
| ಚರಣಕರ್ಪಿಸಿ ಧನ್ಯವಾಗುವೆ ||||

ವೀರ ಅಭಿಮನ್ಯು ತನ್ನ ನವ ವಧುವಾದ ಉತ್ತರೆಯೊಡನೆ ಶೃಂಗಾರ ಮಗ್ನನಾಗಿರುವಾಗ ಅತ್ತ ಕೌರವರೊಡನೆ ಯುದ್ಧದ ಕರೆ ಬಂದಾಗ, ದೇಸ್ಕಾರ ರಾಗದಲ್ಲಿ ವಿರಾವೇಶದಿಂದ ಹೇಳುವ ಪದ :

ಕೊಡು ಯೆನಗಾಜ್ಞೆಯಾ | ಜನನಿತವ ||||
ಬಿಡುನೀ ಭಯವಾ
| ನೀನು ಅಭಯಾ |
ಬಾಲನೆಂಬ ಮೋಹಾ ಬಿಡು ಮಾತೆ
| ಬಾಲನಲ್ಲರಿಪು ಕಾಲಾಂತಕನೆ ||||

ತಾಯಿ ಸುಭದ್ರೆ ವೀರಮಾತೆಯಾಗಿ ಹರಸುವ ‘ಹರನಾಪುರ ಸುಪುರ ಸುಖದಾಂ |  ಜಗತಮೇ ಜೀವನದೋ ದಿನಕಾ ||’ ಎಂಬ ಹಿಂದೀ ಭಜನೆಯ ಚಾಲಿ ಮೇಲಿನ (ಚಾಲೀ ಕೊಟ್ಟವರು ಮಲ್ಲಿಕಾರ್ಜುನ ಮನ್ಸೂರ ಅವರು. ಆ ಚಾಲಿಯ ಮೇರೆಗೆ ಅಲ್ಲಿಂದಲ್ಲಿಗೆ ಮಾಸ್ತರರು ಗೀತ ರಚಿಸಿದರು)

ಪೋಗು ಪರಾಕ್ರಮಿಯೆ | ಸಮರಕೆ |||| ತೋರಿ ಶೌರ್ಯಾವೈರಿ ನಿಕರವ |
ನಾಶಗೊಳಿಸುತನಯಾ
| ಧರಾತಲದಾನೀ ಮಹಾ ಸುಯಶವ | ನೈದು ಕುಲೋದ್ಧಾರಾ ||ಸಮರಕೆ ||

ಶ್ರೀ ಕೃಷ್ಣನನಪಾತ್ರದಲ್ಲಿ ವಾಮನರಾಯ ಮಾಸ್ತರರ ‘ಮೀಯಾ ಮಲ್ಹಾರ’ ರಾಗದಲ್ಲಿ ತಾವೇ ರಚಿಸಿ ತಾವೇ ಹಾಡುವ ಈ ತಾತ್ವಿಕ ಭಗವದ್ಗೀತಾ ಸಾರವೆನುವಂತಹ ಗೀತವದು :

ಈ ಭವಸಾಗರದಿ | ಸಮಭಾವಾ ಮನಕೇ ಶಾಂತಿ ||||
ವಿಕಾರ ಮತಿಗೆ ವಶವಾಗಿರದೆ
| ಶೋಕ ತಾಪಕೆ ವ್ಯಸನಗೈಯದೆ
ಏಕಭಾವದಿ ಎನ್ನ ಭಜಿಸುವವ
| ಲವೋಕದೊಳುತ್ತಮನೇ ಪಾರ್ಥಾ ||||

ಉತ್ತರೆ ಹಾಡುವ ಈ ಭಕ್ತಿಯ ಪದ ಭೈರವಿಯಲ್ಲಿದೆ. ಕರ್ನಾಟಕಿ ಛಾಯೆ ಇದೆ

ಭಕ್ತ ಜೀವನಾ | ರಾಮಾ | ದುರಿತಭಂಜನಾ ||||
ಶಕ್ತನಾಗಿ ಸಕಲ ಜಗವ
| ನಿತ್ಯನಾಗಿ ಸಲಹುತಿದೆಯೊ || ಅ.ಪ. ||
ನಿನ್ನ ಮಧುರ ನಾಮ ಸುಜನರನ್ನು
| ಧನ್ಯಗೊಳಿಸಿ ಸದಾ |
ಮಾನ್ಯನಾದ ಮೋಕ್ಷಸದ್ಗತಿಯನ್ನು ಕೊಟ್ಟು
| ಸಲಹುತಿಹುದೋ  ||

ಕಿತ್ತೂರ ರಾಣಿ ಚೆನ್ನಮ್ಮನ ಕಥೆಯಂತೂ ‘ಬ್ರಿಟಿಷರೇ ಭಾರತದಿಂದ ತೊಲಗಿರಿ’ ಚಳವಳಿಗೆ ನಾದಿ ಹಾಡಿದ ನಾಟಕ. ಅಬ್ಬೀಗೇರಿ ಕಂಪನಿಯ ರತ್ನಮ್ಮ ಎಂಬ ಧೀರ ನಾಯಕ ನಟಿ ಪಾತ್ರ ವಹಿಸಿದ ‘ವೀರ ರಾಣಿ ಚೆನ್ನಮ್ಮ’ ತುಂಬ ರೋಮಾಂಚನಕಾರಿ. ನಾನು ಹೈಸ್ಕೂಲು ವಿದ್ಯಾರ್ಥಿಯಾಗಿ ೧೯೩೦ರಲ್ಲಿ ಈ ನಾಟಕ ನೋಡಿ ಸ್ಫೂರ್ತಿ ಪಡೆದುದನ್ನು ಮರೆಯುವಂತಿಲ್ಲ. ಒರೆಯಿಂದ ಖಡ್ಗವನ್ನು ಹಿರಿಯುತ್ತ ಒಂದರಷ್ಟಾದರೂ ಭೂಮಿಯನ್ನು ಈ ಬ್ರಿಟಿಷ್ ಬಿಳಿ ಸಾಹೇಬರಿಗೆ ಈ ಕಿತ್ತೂರ ಸಿಂಹಿಣಿ ಕೊಡಲಾರಳು.ಅವರ ಆಮಿಷಕ್ಕೆ ಈ ಖಡ್ಗವೇ ಉತ್ತರ’ ಎಂದು ಮೈ ಜುಮ್ಮೆನ್ನುವಂತೆ ಅರಳು ಹುರಿದಂತೆ ಮಾತಾಡಿದುದನ್ನು ಇಂದಿಗೂ ಮರೆತದು ಪ್ರೇಕ್ಷಕರ ದುರ್ದೈವ! ಈ ಕಿತ್ತೂರ ರಾಣಿಯನ್ನು  ಆಗಿನ ನಮ್ಮ ಶಾಸಕರಾಗಿದ್ದ ಅಂದಾನಪ್ಪಾ ದೊಡ್ಡಮೇಟಿ ಇವರು ಹಣ ಸುರುವಿ ತಮ್ಮ ಊರಾದ ರೋಣದ ರಾಣಿಯನ್ನಾಗಿ ಮಾಡಿಕೊಂಡರು. ಇದರಿಂದಾಗಿ ಈ ನಾಟಕಕ್ಕಾಗೇ  ಪ್ರಸಿದ್ಧವಾಗಿದ್ದ ಅಬ್ಬಿಗೇರಿ ನಾಟಕ ಕಂಪನಿ ಮುಚ್ಚಿ ಹೋಯಿತು.

ಹಲಗೇರಿ ನಾಟಕ ಕಂಪನಿ ೧೯೧೮ರ ಸುಮಾರಿಗೆ ದೊಡ್ಡ ಜಟ್ಟೆಪ್ಪನವರ ಮಾಲೀಕತ್ವದಲ್ಲಿ ತಲೆಯೆತ್ತಿದರೂ ಅದರ ಜನಪ್ರಿಯತೆ ಹೆಚ್ಚಿದುದು ಚಿಕ್ಕ ಜಟ್ಟೆಪ್ಪನವರು ಕಂಪನಿಯ ಧುರೀಣತ್ವ ವಹಿಸಿದ ಮೇಲೆಯೆ. ಆ ‘ಸ್ತ್ರೀ’ ಮತ್ತು ‘ಬಿ.ಎ.’ ನಾಟಕಗಳು ವಿದ್ಯಾರ್ಥಿಗಳಾದ ನನ್ನಂತಹ ಪ್ರೇಕ್ಷಕರನ್ನು ಹೊಟ್ಟೆತುಂಬ ನಗಿಸಿವೆ. ಒಬ್ಬ ಹಳ್ಳಿಯ ಹುಂಬ ತರುಣ, ಸುಶಿಕ್ಷಿತ ಸ್ತ್ರೀಯನ್ನು ವಧುವಾಗಿ ಪಡೆದು ಆಕೆಯು ಫ್ರೆಂಡ್ ಜೊತೆಗೆ ನಡೆಸುವ ಚೆಲ್ಲಾಟದ ಚಿತ್ರಣ ತುಂಬ ಮೋಜಿನ ವಿಡಂಬನೆ. ಈ ನಾಟಕದಲ್ಲಿ ದೊಡ್ಡಾಟ, ಬಯಲಾಟದ ಪದಗಳು, ಹಳ್ಳಿಯ ಮದುವೆಗಳ ಸಾಂಪ್ರದಾಯಿಕ ವಿಧಿಗಳು, ದಂಪತಿಗಳ ಸರಿ-ಬೆಸನಾಟ, ಒಡಪು-ಚೆಂಡಾಟ ಇವೆಲ್ಲಾ ಆಗಿನ ತರುಣ ಮನಸ್ಸಿಗೆ ವಿನೋದದೂಟ.

‘ಜೂಜಾಡಿದರೇ ದಂಪತಿಗಳು| ಸರಿಬೆಸವಾಡಿದರೆ’ ಎಂಬ ಮಜವೇ ಗಾಯ’ ‘ಇದು ಬಲು ದೊಡ್ಡ ಶಾರ ವ್ಯಾಪಾರಾ ಪೂರಾ | ಜಾಣ ಫಿರಂಗೇರ ಮೇಲಾಟ’ ಎಂಬ ಜಾನಪದ ಆಟದ ಧಾಟಿ, ಕೊನೆಗೆ ಹಳ್ಳಿಯ ಅಳಿಯನಿಗೆ ಬುದ್ಧಿ ಬಂದು –

ಬಡವನ ಕೆಡಿಸಿದಿ ಮಾವಾ | ನಿನ್ನ | ಕಡಿದರೂ ಮರುಗದು ಜೀವಾ ||
ಬೇಡ ಬೇಡೆಮದರು ಮದುವಿಯ ಮಾಡಿದಿ
| ಕಾಡಿದಳೋ ಆಕಿ ಓಡಿ ಹೋದಳೋ ||

ಮಾವ, ಮನೆತನದ ಅಳಿಯನಿಗೆ ಸುಶಿಕ್ಷಿತ ಕನ್ಯೆಯನ್ನು ಕೊಟ್ಟು ಮದುವೆ ಮಾಡಿದ ಪ್ರಸಂಗದ ಕೊನೆ ವಿನೋದಾಂತವೆನ್ನಬೇಕೋ ದುರಂತವೆನ್ನಬೇಕೋ?

ಹಲಗೇರಿ ಕಂಪನಿಯ ನಾಟಕ ಪ್ರಯೋಗಗಳ ಹಾಸ್ಯ, ಕಟಕಿ ವ್ಯಂಗ್ಯಗಳ ಮುಂದೆ ಹಿರಣ್ಯಯ್ಯನವರಿಗೂ ಮಾಸ್ಟರ್ ಹಿರಣಯ್ಯನವರಿಗೂ ಸ್ಫೂರ್ತಿ ನೀಡಿ ದಾರಿ ತೋರಿದವು. (ಡಾ. ರಂಗನಾಥರ ಕರ್ನಾಟಕ ರಂಗಭೂಮಿ, ಪು.೧೪೩). ದೊಡ್ಡ ಜಟ್ಟೆಪ್ಪನವರು ಅಭಿನಯಿಸುತ್ತಿದ್ದ ‘ಹೇಮರೆಡ್ಡಿ ಮಲ್ಲಮ್ಮ’, ಚಿತ್ರಾಗಂಧಾ’, ಟೀಪು ಸುಲ್ತಾನ’, ಮೊದಲಾದ ಭಕ್ತಿ ಶೃಂಗಾರ, ವೀರ, ನಾಟಕಗಳ ರೀತಿಯಿಂದ ಸಣ್ಣ ಜಟ್ಟೆಪ್ಪನವರು ‘ಹಾಸ್ಯರಸ’ ಹಂದರದ ಮೇಲೆ ತಮ್ಮ ನಾಟಕ ಪುಷ್ಪಗಳನ್ನು ಅರಳಿಸಿದರು.

ಸದಾಶಿವರಾವ ಗರೂಡರು ಸ್ವತಃ ಪ್ರತಿಭಾವಂತ ನಾಟಕಕಾರರಾಗಿದ್ದು, ತಮ್ಮ ಆಪ್ತರು, ಮನೆಯ ಹೆಣ್ಣುಮಕ್ಕಳನ್ನೂ ಸಹ ಅಭಿನಯ ಕಲೆಯಲ್ಲಿ ತರಬೇತುಗೊಳಿಸಿದರು. ಇವರ ಕಿರಿಯ ಮಗಳು ಕು. ವತ್ಸಲಾ ಭರತನ ಪಾತ್ರವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದರು. ಅವರ ಹಿರಿಯಕ್ಕ ಸೌ. ಶಕುಂತಲಾಬಾಯಿ ಅವರೂ ಬಣ್ಣ ಬಳಿದುಕೊಂಡು ಪಾತ್ರಧಾರಿಯಾಗಿ ರಂಗ ಪ್ರವೇಶ ಮಾಡುತ್ತಿದ್ದರು. ೧೯೪೨ರ ‘ಚಲೇಜಾವ’ ಚಳವಳಿಯ ಬಗ್ಗೆ ಕೃಷ್ಣಕುಮಾರ ಕಲ್ಲೂರ ಅವರು ಬರೆದ ‘ಜಾಗೃತ ರಾಷ್ಟ್ರ, ನಾಟಕದಲ್ಲಿ ಸೌ||ವತಿಯರಾದ ವತ್ಸಲಾ, ಶಕುಂತಲಾ ಹಾಗೂ ಅವರ ಸೋದರ ಶ್ರಿಪಾದ ಗರೂಡ ಅವರು ಯಶಸ್ವಿಯಾಗಿ ಭಾಗವಹಿಸಿ ಪ್ರೇಕ್ಷಕ ವರ್ಗದಿಂದ ಶ್ಲಾಘನೆ ಪಡೆದರು. ಗರೂಡ ಸದಾಶಿವರಾಯ ಪ್ರದರ್ಶಿಸುತ್ತಿದ್ದ ‘ಪಾದುಕಾಪಟ್ಟಾಭಿಷೇಕ’ ನಾಟಕವಂತೂ ಕಳೆದ (೨೦ನೆಯ) ಶತಮಾನದ ೨೦ ದಶಕದಲ್ಲಿ ಕರ್ನಾಟಕದ ಊರೂರಿಗೆ ಜಯಭೇರಿಯನ್ನು ಹೊಡೆಯಿತು. ೧೯೨೬ರಲ್ಲಿ ನಾನು ‘ಪಾದುಕಾಪಟ್ಟಾಭಿಷೇಕ’ ನೋಡಲಿಕ್ಕೆ ಹೋಗಿ ತಿಕೀಟು ಸಿಗದೆ ಎರಡು ಸಲ ಹಿಂದಿರುಗಿ ಬರಬೇಕಾಯಿತು. ತಿಕೀಟು ಸಿಗದಿದ್ದಾಗ ಬಾಗಿಲೊಳಗಿಂದ ಇಣುಕಿ ನೋಡುವ ಚಪಲ! ಭರತ-ಕೈಕೇಯಿಯರ ಸಂಭಾಷಣೆಯಲ್ಲಿ ಅರಳು ಹುರಿದಂತೆ ಭರತನ ಮಾತುಗಳು ಹೊರಗೆ ಕೇಳುತ್ತಿದ್ದವು. ಭರತನ ಮಾತು ನಡೆದಾಗ ಗೇಟಿನ ಹೊರಗೆ ಸೋಡಾ ಬಾಟಲಿಯ ಹುಡುಗ ಬಾಟಲಿಯ ಮೇಲೆ ಬೂಚ ಇಟ್ಟುಕೊಂಡು ಹಾಗೇ ಭರತನ ಮಾತುಗಳನ್ನು ಕೇಳುತ್ತಾ ಬಾಟಲಿಯ ಕಾಜಿನ ಗುಂಡು ಒಡೆಯದೆ ನಿಂತಿದ್ದ. ನಾಟಕವನ್ನು ನೋಡುವ ಚಪಲ ಇನ್ನೂ ಹೆಚ್ಚಾಯಿತು. ಮುಂದಿನ ಆಟಕ್ಕೆ ಹೇಗೋ ತಿಕೀಟು ದೊರೆತು ನಾಟಕ ನೋಡಲು ಸಿಕ್ಕಿತು. ಶ್ರೀರಾಮನ ರಾಜ್ಯಾಭಿಷೇಕದ ದಶರಥನ ಹುಮ್ಮಸ್ಸು ಕೈಕೇಯಿಯ ವಚನ ಜಾಲದಲ್ಲಿ ಸಿಕ್ಕು ಬಿದ್ದುದರಿಂದ ಆತನ ಹುಮ್ಮಸ್ಸು ಕೈಕೆ ತನಗೆ ದಶರಥನು ಕೊಟ್ಟಿದ್ದ ಎರಡು ವರಗಳ ಮೇರೆಗೆ ಶ್ರೀರಾಮನು ಲಕ್ಷ್ಮಣ ಸೀತೆಯೊಮದಿಗೆ ವನವಾಸ ಹೊರಡುತ್ತಾನೆ. ಇದನ್ನರಿತ ಭರತ ತಾಯಿಯನ್ನು ವೈರಿಯೆಂದು ಜರಿದು ಮಾತನಾಡುವಾಗ ಆತನ ಆ ವಾಗ್ಬಾಣಗಳ ಪುಂಖಾನುಪುಂಖತೆ ನನ್ನಂತಹ ವಿದ್ಯಾರ್ಥಿಯ ಮೈಯಲ್ಲಿ ಮಿಂಚಿನ ರೋಮಾಂಚನ. ಶ್ರೀರಾಮನು ಸೀತಾ ಲಕ್ಷ್ಮಣರೊಡನೆ ವನವಾಸ ಹೊರಟಾಗ ಅಯೋಧ್ಯೆಯ ಅರಸನಾಗಬೇಕಾದ ಶ್ರೀರಾಮಚಂದ್ರನು ನಾರುಮುಡಿ ಕಟ್ಟಿಕೊಂಡು ವನವಾಸ ಹೋದ ಸುದ್ದಿಯನ್ನು ಕೇಳಿ ದಶರಥನು ‘ಶ್ರೀರಾಮ, ರಾಮಭದ್ರಾ, ರಾಮಚಂದ್ರಾ’ ಎಂದು ನಯನಾಭಿರಾಮನ ಅಗಲಿಕೆಯ ನೋವು ತಾಳದೆ ಕೊನೆಯುಸಿರೆಳೆಯುವ ದೃಶ್ಯ ಎಂಥವರ ಕಣ್ಣಲ್ಲೂ ನೀರೂರಿಸುವುದು.

ಇತ್ತ ವನವಾಸ ಹೊರಟ ಶ್ರೀರಾಮ ಸೀತಾ ಲಕ್ಷ್ಮಣರು ಶರಯೂ ನದಿಯನ್ನು ದಾಟಲು ನಾವಿಕನಾದ ಗುಹನ ಸಹಾಯ ಕೇಳಲು ಅಯೋಧ್ಯೆಯ ಅರಸನಾಗಬೇಕಾದವನು ಅರಣ್ಯ ವಾಸಕ್ಕೆ ಹೊರಟ ವಾರ್ತೆಯನ್ನು ಕೇಳಿ ಶ್ರೀರಾಮನ ಚರಣಗಳನ್ನು ಭಕ್ತಿಯ ಕಣ್ಣಿರಿನಿಂದ ತೊಳೆಯುತ್ತಾನೆ. ಆ ಹೊತ್ತಿನಲ್ಲಿ ಗಹನ ಗೀತೆಯೊಂದು ‘ಧನ್ಯವಾದೆ ರಾಮಾ’… ತುಂಬ ಮನ ಕರಗಿಸುವಂತಹದು. ಶ್ರೀರಾಮ ಸೀತಾ ಲಕ್ಷ್ಮಣರನ್ನು ನೌಕೆ ದಾಟಿಸುತ್ತ ‘ಸಾಗರಶಾಯಿ ರಾಮಯ್ಯ ವರ ಭೋಗಿಶತಲ್ಪ ರಮಯ್ಯ’ ಎಂಬ ಭಕ್ತಿ ಗೀತಕ್ಕೆ ಗುಹನ ಭಕ್ತಿಗೆ ಸ್ವತಃ ಶ್ರೀರಾಮಾದಿಗಳೇ ಕರಗಿ ಹೋಗುವಾಗ ನಮ್ಮಂಥಹವರ ಪಾಡೇನು?

ನದೀ ದಾಟಿದ ಮೇಲೆ ಶ್ರೀರಾಮನು ‘ವನವಾಸವೋ ಪುರವಾಸವೋ’ ಎಂದು ಉದಾಸೀನ ಭಾವದಿಂದ ಸೀತಾ ಲಕ್ಷ್ಮಣರೊಡನೆ ಚಿತ್ರಕೂಟದತ್ತ ನಡೆದಾಗ ಭರತನು ರಾಜ್ಯ ಪದವಿಯನ್ನು ತ್ಯಜಿಸಿ ಶ್ರೀರಾಮನನ್ನು ಕಾಣಲೆಂದು ಬಂದಾಗ ದಶರಥನು ರಾಮ ವಿಯೋಗನಾಥದಿಂದ ಕೊನೆಯುಸಿರೆಳೆಯುವ ಸುದ್ದಿಯನ್ನು ರಾಮಲಕ್ಷ್ಮಣರೊಡನೆ ಕೇಳಿದ ಸೀತೆ – ಆ ಸನ್ನಿವೇಶದಲ್ಲಿ ಹೇಳುವ ಹಾಡು ನಮ್ಮ ಅಂತಃಕರಣವನ್ನು ಸ್ಪರ್ಶಿಸುತ್ತದೆ. ಅದೇ ರೀತಿ ‘ಹಿತಕರವಾಗಿಹುದೆನಗೆ ವನವಿದು! ಪತಿಯ ಸಮಾಗಮವಿರುವುದರಿಂದಲೆ’ ಎಂಬ ಗೀತವಂತೂ ತುಂಬ ಹಿತಕರ.

ಇದೇ ರೀತಿ ‘ಚವತಿಯ ಚಂದ್ರ’ದಲ್ಲಿ ಗರುಡರೇ ಜಾಂಬುವಂತನ ಪಾತ್ರದಲ್ಲಿ ಜಾಂಬುವತಿಯ ತೊಟ್ಟಿಗೆ ಸ್ಯಮಂತಕ ಮಣಿಯನ್ನು ಕಟ್ಟಿ ಆಕೆಯನ್ನು ತೂಗುವ ಹಾಡು ಹಿನ್ನೆಲೆಯ ಪರಿಸರದಲ್ಲಿ ಅಂತರಂಗಕ್ಕೆ ತುಂಬ ಅಪ್ಯಾಯನಕರವೆನಿಸುವುದು. ಅಲ್ಲಿಗೆ ಶ್ರಿಕೃಷ್ಣನು ಆಗಮಿಸಿದಾಗ ಜಾಂಬುವಂತನಿಗೂ ಶ್ರೀಕೃಷ್ಣನಿಗೂ ನಡೆದ ಸಂಭಾಷಣೆಯಲ್ಲಿ ಯಾವುದೋ ಟೊಂಕಕ್ಕೆ ಸುತ್ತುವ ಪಟ್ಟಿಯನ್ನು ಅರ್ಥೈಸುತ್ತ ಶ್ರೀಕೃಷ್ಣ ‘ಷಷ್ಠಿ ತತ್ಪುರುಷ’ ಎಂದು ವಿವರಿಸಲು ಜಾಂಬುವಂತ ‘ಆ ಷಷ್ಠಿ ತತ್ಪುರುಷದಿಂದಲೆ ಕಾದಾಟತೊಡಗಿದನು’ ಎಂದು ಜಾಂಬುವಂತ ಹೇಳುವ ಮಾತು ಉತ್ತಮ ಬೌದ್ಧಿಕ ಹಾಸ್ಯಕ್ಕೊಂದು ಉದಾಹರಣೆ.