“೧೯೨೦ರಿಂದ ೪೫ರ ಅವಧಿಯಲ್ಲಿ ಗರುಡರ ಗರುಡಿಯಲ್ಲಿ ಪಳಗಿದ ಹುಲಿಮನೆ ಸೀತಾರಾಮಶಾಸ್ತ್ರಿಯವರು ನಡೆಸಿದ ‘ಜಯಕರ್ನಾಟಕ ನಾಟಕ ಮಂಡಳಿ’ಯೂ ಸುಪ್ರಸಿದ್ಧ ಅಭಿನಯಪಟುಗಳಾದ ಹಂದಿಗನೂರು ಸಿದ್ಧರಾಮಪ್ಪನವರ ‘ವಿಶ್ವರಂಜನ ನಾಟಕ ಮಂಡಳಿ’ಯೂ ವಾಮನರಾವ್ ಮಾಸ್ತರರಿಂದ ಪ್ರಭಾವಿತರಾದ ರಂಗನಾಯಕಿ ಗಂಗುಬಾಯಿ ಗುಳೇದಗುಡ್ಡ ಅವರ ಶ್ರೀಕೃಷ್ಣ ನಾಟಕ ಮಂಡಳಿ’ಯೂ ಮುದ್ದು ವೀರಾಚಾರ್ಯರ ಶ್ರಿರಾಮ ಸೇವಾ ನಾಟ್ಯ ಸಂಸ್ಥೆ’ಯೂ ಬಸವರಾಜ ಮನಸೂರ ಹಾಗೂ ಗೋಹರ್ ಕರ್ನಾಟಕೀ ಅವರು ನಡೆಸಿದ ‘ವಾನಿವಿಲಾಸ ನಾಟಕ ಮಂಡಳಿ’ಯೂ ಉಲ್ಲೇಖಾರ್ಹವಾದಂಥವುಗಳು.’ (ಡಾ. ಎಚ್. ಆರ್. ಕೆ. ಅವರ ‘ಕರ್ನಾಟಕ ರಂಗಭೂಮಿ, ಪು.೧೪೮)

ಗರೂಡರ ಪ್ರೌಢವಾದ ಗದ್ಯ ಸಂಭಾಷಣಾ ಶೈಲಿ, ಅದಕ್ಕೆ ತಕ್ಕ ಅಭಿನಯ ಎಂದರೆ ವಾಚಿಕ ಅಂಗಿಕ ಎರಡೂ ಸಮರಸವಾಗಿ ಬೆರೆತು ನಾಟಕದ ವಿಶಿಷ್ಟ ರಸಾನುಭೂತಿಗೆ ಸಹಾಯಕವಾದುದು. ಹೀಗಾಗಿ ಗರೂಡರ ಅಭಿನಯದ ಮೇಲ್ಮೆ ಅವರ ನಾಟಕ ಪ್ರಯೋಗಗಳ ಲಾಂಛನವೆನಿಸಿತು. “ನಾಟಕದ ಕಥಾವಸ್ತು ಹಾಗೂ ಪ್ರಭಾವಶಾಲಿಯಾದ ಅಭಿನಯ ಇವೆರಡರಿಂದ ರಂಗಭೂಮಿಯು ನಿಗಿನಿಗಿಸುವಂತೆ ಮಾಡಬಹುದೆಂದು ಸ್ವತಃ ತೋರಿಸಬೇಕೆಂಬ ಹಟದಿಂದ, ರಂಗ ಸಂಗೀತ, ಹಾಸ್ಯ, ದೃಶ್ಯ ಜೋಡಣೆ ಕಡೆಗೆ ಪ್ರಚಾರವನ್ನು ಕೂಡ ಕಡೆಗಣಿಸಿದರು. ಅಭಿನಯ ಕಲೆಯನ್ನು ಅವಲಂಬಿಸಿ ನಿಂತ ಅವರ ಮಂಡಳಿ ಕನ್ನಡ ರಂಗಭೂಮಿಯನ್ನು ಹೊಸ ಹೆಜ್ಜೆಯಲ್ಲಿ ನಡೆಸಿತು. ಎಂಬ ಡಾ. ಎಚ್. ಕೆ.ರಂಗನಾಥರ ಈ ವಿಮರ್ಶಾ ನುಡಿಗಳು ಗಮನಾರ್ಹ. (ಕರ್ನಾಟಕ ರಂಗಭೂಮಿ’, ಪು.೧೪೫)

ಗರೂಡರು ೧೯೩೪ರ ಸುಮಾರಿಗೆ ‘ಶಕ್ತಿ ಮಹಿಮೆ’ ಎಂಬ ನಾಟಕದ ಸಲುವಾಗಿ ಸುಮಾರು ಆರು ಸಾವಿರ ರುಪಾಯಿ ವೆಚ್ಚದಿಂದ ರಮಗಸಜ್ಜಿಕೆಯನ್ನು ಹೊಸದಾಗಿ ನಿರ್ಮಿಸಿ ವೇಷಭೂಷಣಗಳನ್ನು ಮಾಡಿಸಿದರು. ಇದರಿಂದ ಪ್ರೇಕ್ಷಕರಿಗೆ ಇದೊಂದು ಹೆಚ್ಚಿನ ಆಕರ್ಷಣೆಯಾಯಿತು. ಹೌದು. ಸಾಮಾನ್ಯ ಪ್ರೇಕ್ಷಕನಿಗೆ ಬೇಕಾದುದು ಇದೇ ಕಣ್ಣಿಗೆ ಹೊಡೆಯುವಂತಹ ಭರ್ಜರೀ ಸೀನಸೀನರಿ, ಡ್ರೆಸ್ಸು, ಮತ್ತು ರಂಗವಸ್ತುಗಳು’ ವೇಷಭೂಷಣಗಳು, ‘ಹೊಸ ಡ್ರೇಸ್, ಝಗಝಗಿಸುವ ಸೀನರಿ, ಬಂಗಾರದ ಸಿಂಹಾಸನ’ ಎಂಬ ಪ್ರತೀತಿ ಪ್ರೇಕ್ಷಕರಲ್ಲಿ ಹಬ್ಬಿದರೆ ಜನರು ಧಾವಿಸಿ ಬರುತ್ತಾರೆ. ‘ಕೃಷ್ಣ ಲೀಲಾ’ ನಾಟಕದ ಗೋಪಿಯರಿಗಾಗಿ ಬೆಳ್ಳಿಯದೆ ಆರು ಕೊಡಗಳನ್ನು ಮಾಡಿಸಿದ್ದರಂತೆ.

ರಂಗದ ಮೇಲೆ ಗರೂಡರ ಹಿರೋಯಿನ್ ಎಂದರೆ ಹಮ್ಮಿಗೆ ನೀಲಕಂಠಪ್ಪ, ಸ್ತ್ರೀ ಪಾತ್ರದಲ್ಲಿ ರಂಗದ ಮೇಲೆ ಒಪ್ಪುವ ವ್ಯಕ್ತಿತ್ವ. ಗರೂಡರು ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವಲ್ಲೆಲ್ಲಾ ಹಮ್ಮಿಗೆ ನೀಲಕಂಠಪ್ಪನೇ ಹಿರೋಯಿನ್ ಆಗಿ ಶೋಭಿಸಬೇಕು. ಒಮ್ಮೆ ಗರೂಡರು ತಮ್ಮ ಪತ್ನಿಗಾಗಿ ಬೆಲೆಬಾಳುವ ಒಂದು ರೇಷ್ಮೆಯ ಜರಿ ಸೀರೆಯನ್ನು ತಂದಿದ್ದರಂತೆ. ಇದನ್ನು ನೋಡಿ ನೀಲಕಂಠಪ್ಪ ‘ಇವೊತ್ತು ನಾಟಕದಲ್ಲಿ ನಾನು ಇದೇ ಸೀರೆ ಉಡುವುದು. ಇದು ಇಂದಿನ ನಾಟಕಕ್ಕೆ ಬೇಕೆ ಬೇಕು ಎಂದು ಹಠ ಹಿಡಿದಾಗ ಗರುಡರು ತಮ್ಮ ಪತ್ನಿಯಿಂದ ಆ ಸೀರೆಯನ್ನು ಇಸಿದುಕೊಟ್ಟಾಗ ಗರೂಡರ ಪತ್ನಿ ಸಿಡುಕಿನಿಂದ ‘ಇದೊಂದು ನನ್ನ ಪಾಲಿನ ಸವತಿ’ ಎಂದು ಛೇಡಿಸುತ್ತ ಆ ಸೀರೆಯನ್ನು ತೆಗೆದುಕೊಟ್ಟರಂತೆ. ಈ ಮೋಜಿನ ಸಂಗತಿಯನ್ನು ಗರೂಡರ ಚಿರಂಜೀವರಾದ ಶ್ರೀಪಾದರಾಯರು ನನ್ನ ಮುಂದೆ ಹೇಳಿದ್ದರು.

‘ಎಚ್ಚೆಮನಾಯಕ’ ನಾಟಕವಂತೂ ಗರೂಡರ ಒಂದು ಟ್ರಂಪ್‌ಕಾರ್ಡ್ ಆಗಿತ್ತು. ಲಕ್ಷ್ಮಣ ನಾಯಕನಾಗಿ ಗರೂಡರು ‘ಇದೇ ಖಡ್ಗ’ ಎಂದು ಪ್ರವೇಶಿಸುತ್ತ ಜನ ದಂಗಾಗಿ ನೋಡುತ್ತಿದ್ದರಂತೆ. ಬಾಯಮ್ಮನ ಪಾತ್ರದಲ್ಲಿ ನೀಲಕಂಠಬುವಾ ಗಾಡಗೋಳಿ ಇವರು ತಮ್ಮ ಹಾಡುಗಾರಿಕೆಯಿಂದ ಜನರನ್ನು ಮುಗ್ಧಗೊಳಿಸಿ ಒನ್ಸ್ ಮೋರ್‌ ಗಿಟ್ಟಿಸುವರು.

ನೀಲಕಂಠ ಬುವಾ ಅವರು ಸವಾಯಿಗಂಧರ್ವರ ಹಿರಿಯ ಶಿಷ್ಯರಾಗಿದ್ದರೂ ಅವರಿಗೆ ಸಿಗಬೇಕಾದಷ್ಟು ಹಣ-ಹೆಸರು ಎರಡೂ ಪ್ರಾಪ್ತವಾಗದಿರಲು ಅವರು ರೋಸಿ ಹೋಗಿ ತಮ್ಮ ಒಂದು ಧ್ವನಿಮುದ್ರಿಕೆ ಕೂಡ ತಮ್ಮ ಹಿಂದೆ ಉಳಿಯಬಾರದೆಂದು ತಮ್ಮಲ್ಲಿದ್ದ ಎಲ್ಲ ಧ್ವನಿಮುದ್ರಿಕೆಗಳನ್ನು ನಾಶಪಡಿಸಿಬಿಟ್ಟರೆಂದು ಅವರ ತಮ್ಮ ವಿರೂಪಾಕ್ಷ ಗಾಡಗೋಳಿ ನನ್ನ ಮುಂದೆ ಹೇಳುತ್ತಿದ್ದರು. ನೀಲಕಂಠಬುವಾ ನಮ್ಮ ಬಾಲ್ಯದ ನೆರೆಹೊರೆಯ ಮಿತ್ರರಾಗಿದ್ದರು. ನಮ್ಮ ಗದುಗಿನ ಕಿಲ್ಲೇದ ತ್ರಿಕೂಟೇಶ್ವರ ಗುಡಿಯಲ್ಲಿ ನಾವೆಲ್ಲಾ ಸೋದರರು ಆಟವಾಡಿದವರು.

೧೯೩೦ರ ಸುಮಾರಿಗೆ ಬಸವರಾಜ ಮನ್ಸೂರ್ ಅವರು ಗೋಹರ್ ಕರ್ನಾಟಕೀ ಅವರೊಂದಿಗೆ ‘ವಾಣಿ ವಿಲಾಸ ನಾಟಕ ಕಂಪನಿ’ಯನ್ನು ಅದ್ದೂರಿಯಿಂದಲೇ ಆರಂಭಿಸಿದರು. ಇದರಲ್ಲಿ ಬಸವರಾಜರು ತಮ್ಮ ಮಲ್ಲಿಕಾರ್ಜುನ ಮನಸೂರ ಅವರನ್ನೂ ಸೇರಿಸಿಕೊಂಡರು. ಕೇಳುವುದೇನು? ಭರ್ಜರಿ ಬಾಲಗಂಧರ್ವರ ಕಂಪನಿಯೇ ಕನ್ನಡ ರೂಪ ತಾಳಿತೋ ಎಂಬಂತಿತ್ತು. ಅದೇ ಮಖಮಲ್ ಅಂಕ ಪಡದೆ, ಸಾಥಿ ಮಾಡಲು ಪೇಟಿ-ಪಿಟಿಲುಗಳೊಂದಿಗೆ ಸಾರಂಗೀವಾದಕರು. ಇನ್ನು ಗೋಹರ ಕರ್ನಾಟಕೀ ಅವರ ಹಾಡುಗಾರಿಕೆಯೆಂದರೆ ತದ್ರೂಪ ಬಾಲಗಂಧರ್ವರಂತೆಯೇ ಅದೇ ಶೃತಿ, ಅದೇ ರಾಗದಾರಿತನ, ಅದೇ ತಾನ್‌ಬಾಜಿ. ಅದಕ್ಕೆಂದೇ ಸ್ವತಃ ಬಾಲಗಂಧರ್ವರೇ ಗೋಹರಬಾಯಿಯ ಹಾಡುಗಾರಿಕೆಗೆ ಮೆಚ್ಚಿ ಮುಗ್ಧರಾಗಿ ಆಕೆಯನ್ನು ತಮ್ಮ ಅರ್ಧಾಂಗಿಯಾಗಿ ಸ್ವೀಕರಿಸಿದರು.

ವಾಣೀವಿಲಾಸ ಕಂಪನಿಯವರು ಹೆಚ್ಚಾಗಿ ಕಂದಗಲ್ ಹನುಮಂತರಾಯರ ನಾಟಕಗಳನ್ನೇ ಆಡುತ್ತಿದ್ದರು. ಅದರಲ್ಲಿಯೂ ‘ವರಪ್ರಧಾನ’ ಇಲ್ಲವೆ ‘ವಿಜಯನಗರ ಸಾಮ್ರಾಜ್ಯ ಸ್ಥಾಪನೆ’ ಕಂಪನಿಯ ಹುಕುಮೀ ಎಕ್ಕಾ ಆಗಿತ್ತು. ಒಳ್ಳೇ ನಟನಟಿಯರು, ಒಳ್ಳೇ ಹಾಡುಗಾರಿಕೆ, ಭರ್ಜರಿ ಪರದೆ, ಸೀನಸೀನರಿ ಎಂದ ಮೇಲೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಎಂದು ಕರೆಯುವ ಕೊರತೆಯೇ ಇಲ್ಲ.

ಪ್ರಾರಂಭದಲ್ಲಿಯೇ ಕರ್ನಾಟಕ ಭುವನೇಶ್ವರಿಯನ್ನು ವಿದ್ಯಾರಣ್ಯರು ಪ್ರಾರ್ಥಿಸುವ ಗೀತೆ. ಮಲ್ಲಿಕಾರ್ಜುನ ಮನಸೂರ ಅವರು ವಿದ್ಯಾರಣ್ಯ ಇಲ್ಲವೇ ಮಾಧವಾಚಾರ್ಯರಾಗಿ ತಮ್ಮ ಭಕ್ತಿಪರ ಸಂಗೀತದಿಂದಲೇ ನಾಟಕಕ್ಕೆ ನಾಂದಿ ಹಾಡಿ ಅದರ ನಂದಾದೀಪ ಬೆಳಗುವರು.

ಬಸವರಾಜ ಮನಸೂರ ಮತ್ತು ಪಾಶಾಸಾಬ (ವಾಮನರಾವ್ ಕಂಪನಿಯಲ್ಲಿದ್ದು ‘ವೀರ ಅಭಿಮನ್ಯು’ದಲ್ಲಿ ಅರ್ಜುನನ ಪಾತ್ರ ವಹಿಸುವ ಸುಂದರ ನಟ) ಹುಕ್ಕ೦-ಬುಕ್ಕರಾಗಿ ಕುಂಭಾರೆ ಎಂಬ ದಗ್ಯಾಶಾರ್ದೂಲ, ಇವರೆಲ್ಲರಿಂದ ನಾಟಕ ಕಥಾನಕವು ಕಳೆಯೇರುತ್ತ ಪ್ರಗತಿಸುವುದು.

ಆ ಒಂದು ದೃಶ್ಯವಂತೂ ಮರೆಯಲಾರದಂತಹದು. ನೆನೆದರೆ ಇನ್ನೂ ನನಗೆ ರೋಮಾಂಚನವಾಗುತ್ತದೆ. ಮುಸಲ್ಮಾನ ವೈರಿಗಳು ಕಾರಸ್ಥಾನ ಮಾಡಿ ಹುಕ್ಕ-ಬುಕ್ಕರ ಮೇಲೆ ಎರಗುವ ಹೊಂಚು ಹಾಕುವಾಗ ವಿದ್ಯಾರಣ್ಯರ ಪ್ರವೇಶ. ಮಧ್ಯರಾತ್ರಿಗೆ ರಂಗಾಯಿಸುವ ಮಾಲಕಂಸ ರಾಗದಲ್ಲಿ ಹಾಡುತ್ತ ಕಾಲಲ್ಲಿ ಪಾದುಕೆ, ಕೈಯಲ್ಲಿ ಕಮಂಡಲು, ಬಗಲಲ್ಲಿ ಕೃಷ್ಣಾಜಿನ ಸುರುಳಿ. ಪ್ರವೇಶೀಸುತ್ತಲೇ –

ಕಾಲ ಬೆದರಿ ಗಮಿಸುವಾ ಪಾಪಿಯೇ | ಹರನ ಭಕುತಗೇ ||”

ಎಂದು ಆರ್ಭಟಿಸುತ್ತಲೇ ‘ಈ ಹರನ ಭಕ್ತನಿಗೆ ಕಾಲ(ಯಮ)ನೇ ಬೆದರಿ ಓಡಿ ಹೋಗುವಾಗ ‘ನೀವೆಷ್ಟರವನು?’ ಎಂಬ ಅರ್ಥ ಗೀತ, ಅದಕ್ಕನುಸರಿಸಿ ಖಡಖಡಾಯಿಸಿ ಮಾತು! ಇಡೀ ನಾಟ್ಯಗ್ರಹವೇ ರೋಮಾಂಚಿತಗೊಂಡು ಸೂಜಿ ಬಿದ್ದರೆ ಶಬ್ದವಾಗುವ ಮೌನ!

ಲಲಿತೆಯ ಪಾತ್ರದಲ್ಲಿ ಗೋಹರ್ ಹಾಡುವ ಗೀತೆಗಳೆಲ್ಲಾ her Master’s Voice ಎಂಬಂತೆ ಬಾಲಗಂಧರ್ವರ ಕಂಠದಲ್ಲಿ ಜಾಡಿನಲ್ಲಿ ಹೊರ ಹೊಮ್ಮುವುದು. ತಂದೆ ವೈರಿಗಳ ಕೈಯಲ್ಲಿ ವೀರ ಮರಣವನ್ನಪ್ಪಿದಾಗ ಹಾಡುವ ಗೀತೆ ಇದು ಕಾಲಿಂಗಡಾ ರಾಗದಲ್ಲಿ:

ಧರೆಯೊಳು ಶುಭಲತೆ ಬಾಡಿತೇ ತಾತಾ ||

ಎಂದು ಮೊದಲಾಗುತ್ತಾ ಬಾಲಗಂಧರ್ವರ ‘ಬಘಾನಕೋ ಮಾಝ ಕಡೆ ರಾಜಸಾ ಬಾಲಾ’ ಎಂಬ ಧಾಟಿಯಲ್ಲಿ ಮುಂದುವರೆಯುತ್ತಾ – ‘ಹೇ ಕಾಲಾ ನಿದಯಾ ಹೃದಯಾ’… ಎಂದು ಮುಂದುವರೆಯುತ್ತದೆ. ಮುಂದೆ ದುರ್ದೈವದಿಂದ ಕಂಪನಿ ಬೇರೊಂದು ಊರಿಗೆ ಸ್ಥಳಾಂತರಿಸಿದಾಗ ಅಂಕಪಡದೆ ಬೆಂಕಿ ಹತ್ತಿ ಬೆಲೆಯುಳ್ಳ ಸಾಮಾನುಗಳೂ ಡ್ರೇಸ್ಸುಗಳೂ ಅಗ್ನಿಗಾಹುತಿಯಾಗಿ ಕಂಪನಿ ಇತಿಶ್ರೀ ಹೇಳಿತು.

ಕೆ.ಬಿ.ಆರ್. ನಾಟಕ ಮಂಡಳಿಯ ಪ್ರದರ್ಶನಗಳಲ್ಲಿಯ ಸಹಜತೆ ಹಾಗೂ ಹಾಸ್ಯದ ಮೊನಚು ಜನತೆಯನ್ನು ಆಕರ್ಷಿಸಿದೆ.” ಎಂದು ಡಾ. ರಂಗನಾಥ ಹೇಳಿದ್ದಾರಷ್ಟೆ. (ಕರ್ನಾಟಕ ರಂಗಭೂಮಿ, ಪು-೧೪೮) ಆದರೆ ಈ ಕಂಪನಿ ಹುಬ್ಬಳ್ಳಿಯ ಸುದೀರ್ಘ ಮುಕ್ಕಾಂನಲ್ಲಿ ಪ್ರದರ್ಶಿಸುತ್ತ ಬಂದಿರುವ ‘ಹಳ್ಳಿಯ ಹುಡುಗಿ’ (ಇದರಲ್ಲಿ ಚಿಂದೋಡಿ ಲೀಲಾ ಇವರು ‘ಹಳ್ಳಿಯ ಹುಡುಗಿ’ ಪಾತ್ರದಲ್ಲಿ) ನಾಟಕವು ಹಲಗೇರಿ ಕಂಪನಿಯ ಸಣ್ಣ ಜಟ್ಟೆಪ್ಪನವರು ಅಭಿನಯಿಸುತ್ತಿದ್ದ ‘ಸ್ತ್ರೀ’  ನಾಟಕದ ಇನ್ನೊಂದು ರೀತಿಯ ಅನುಕರಣೆ ಆಗಿತ್ತು. ಸ್ತ್ರೀ ನಾಟಕದಲ್ಲಿ ಹೀರೋ ಹಳ್ಳಿಯವನಾದರೆ ‘ಹಳ್ಳಿಯ ಹುಡುಗಿ’ಯಲ್ಲಿ ಹಿರೋಯಿನ್ ಹಳ್ಳಿಯವಳಿರುವಳು.

ಒಂದು ಲಕ್ಷ ಮೊತ್ತದ ಗುಬ್ಬಿ ಪ್ರಶಸ್ತಿಯಿಂದ ಸನ್ಮಾನಿಸಲ್ಪಟ್ಟ ತಮ್ಮ ಸಮಗ್ರ ಜೀವನವನ್ನೇ ನಾಟಕ ಜೀವನವನ್ನಾಗಿಸಿಕೊಂಡು ಈಗ ಮಕ್ಕಳಿಗೆ ತಮ್ಮ ಕ್ಷೇತ್ರವನ್ನು ವಹಿಸಿಕೊಟ್ಟು ತಾವು ನಿವೃತ್ತಿಯ ಶಾಂತ ಜೀವನವನ್ನು ನಡೆಸುತ್ತಿರುವ ಕನ್ನಡಿಗರ ಅಭಿಮಾನಧನವರೆಸಿದ ಶ್ರೀ ಏಣಗಿ ಬಾಳಪ್ಪನವರು ಇಂದಿಗೂ ಸಾರ್ವಜನಿಕ ವೇದಿಕೆಗಳಿಂದ ತಮ್ಮ ರಂಗಭೂಮಿಯ ಅನುಭವಗಳನ್ನು ಕುರಿತು ಹೃದಯಂಗಮವಾಗಿ ಮಾತನಾಡುತ್ತಿರುವುದನ್ನು ಅದೇ ವೇದಿಕೆಯನ್ನು ಹಂಚಿಕೊಂಡ ನಾನು ಕೇಳಿ ಭಾವನಾವಶನಾಗಿದ್ದೇನೆ. ಶ್ರೀ ಏಣಗಿ ಬಾಳಪ್ಪನವರು ಮೊದಲು ಗರೂಡರ ಗರುಡಿಯಲ್ಲೇ ಪಳಗಿ ಬಂದವರು. ಅವರು ತಮ್ಮ ‘ಕಲಾ ವೈಭವ ನಾಟಕ ಸಂಘ’ದ ಮೂಲಕ ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ಹುಬ್ಬಳ್ಳಿ ಮುಕ್ಕಾಂನಲ್ಲಿ ಸತತವಾಗಿ ಎರಡನೂರೈವತ್ತು ಪ್ರಯೋಗಗಳನ್ನು ನೀಡಿರುವುದು ಕರ್ನಾಟಕ ಚಲನಚಿತ್ರ ಯುಗಾರಂಭವಾಗಿ ಅದರದೇ ಮೈಲುಗೈ ಆಗಿದ್ದರೂ ಏಣಗಿ ಬಾಳಪ್ಪನವರ ‘ಜಗಜ್ಯೋತಿ ಬಸವೇಶ್ವರ’ ಇಂತಹ ಒಂದು ಅಪೂರ್ವ ದಾಖಲೆ ಸ್ಥಾಪಿಸಬೇಕಾದರೆ ‘ನಾಟ್ಯಂ ಭಿನ್ನರುಚೇರ್ಜನಸ್ಯ ಬಹುಧಾಪೇಕಂ ಸಮಾರಾಧನಂ’ ಎಂದು ಇಂದಿಗೂ ಹೇಳಬೇಕಾಗುತ್ತದೆ.

ಬಸವೇಶ್ವರರಾಗಿ ಇಷ್ಟೊಂದು ಭಕ್ತಿ-ಗಾಂಭೀರ್ಯಗಳ ಅಭಿನಯ ನೀಡಿದ ಏಣಗಿ ಬಾಳಪ್ಪನವರು ‘ಮಾವ ಬಂದಾನಪ್ಪೋ ಮಾವ’ ಎಂಬ ಹಾಸ್ಯಭರಿತ ಸಾಮಾಜಿಕ ವಿಡಂಬಣೆಯ ನಾಟಕದಲ್ಲಿ ಅದೆಂತಹ ಹಾಸ್ಯಭರಿತ ಸಂಭಾಷಣೆ, ಅದೆಂತಹ ಸರಸ ಹಾಸ್ಯ ಯಾವಾಗಲೂ ತನ್ನ ಗೌರವ ಕಾಪಾಡಿಕೊಳ್ಳಲೆಂದು ತನ್ನ ಜೊತೆಗೆ ಒಂದು ಕಿರ್ಲೋಸ್ಕರ ಕುರ್ಚಿಯನ್ನ ಅಂಟಿಸಿಕೊಂಡು ತಿರುಗಾಡುತ್ತಿರುವ ಈ ಮಾವನ ಪಾತ್ರದಲ್ಲಿ ಪಾಟೀಲ ಅವರು ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆಯನ್ನೇ ಗಿಟ್ಟಿಸುತ್ತಿದ್ದರು. ಈ ಪಾಟೀಲರ ಪುತ್ರ ಚಿ. ಶಿವಾನಂದ ಪಾಟೀಲರು ಈಗ ಖ್ಯಾತ ಖ್ಯಾಲ ಗಾಯಕರು. ಅಲ್ಲದೆ ಕನ್ನಡ ಮರಾಠೀ ರಂಗಗೀತಗಳ ಅನೇಕ ಕ್ಯಾಸೆಟ್ ಗಳನ್ನು ತಮ್ಮ ಸೌ. ಯೋಜನಾ ಪಾಟೀಲ ಅವರ ಸಹಯೋಗದೊಂದಿಗೆ ಹೊರ ತಂದಿದ್ದಾರೆ. ಸೌ. ಯೋಜನಾ ಶಿವಾನಂದ ಅವರು ಬಾಲ ಗಂಧರ್ವರ ರಂಗಗೀತಗಳನ್ನು ತದ್ರೂಪ ಬಾಲಗಂಧರ್ವರ ತಾನಬಾಜಿಯನ್ನು ಪ್ರದರ್ಶಿಸುತ್ತ ಹೃದಯ ತುಂಬಿ ಹಾಡಿದ್ದಾರೆ. ಶಿವಾನಂದ ಪಾಟೀಲರು ಶ್ರೀ ಏಣಗಿ ಅವರ ಬಗ್ಗೆ ತುಂಬ ಗೌರವದಿಂದ ಮಾತನಾಡುತ್ತಾರೆ. ರಂಗಭೂಮಿಯ ಗುರು-ಶಿಷ್ಯ ಪರಂಪರೆ ಸಂಗೀತದ ಗುರು-ಶಿಷ್ಯ ಪರಂಪರೆಯಂತೆಯೇ ಗುರುರ್ದೇವಃ ಎಂಬ ಗೌರವ ಮಾತು ಮಾತಿಗೆ ಪ್ರಕಟವಾಗುತ್ತದೆ.

ಐವತ್ತರ ದಶಕದಲ್ಲಿ ರಂಗಭೂಮಿಗೇ ತಮ್ಮ ಕಾಮಿಕ್ ಮಕಮಲ್ ಟೋಪಿ ತೊಡಿಸಿದ ಹಿರಣಯ್ಯನವರು ರಂಗಭೂಮಿಯ ಮೇಲೆ ತಮ್ಮ ತಾತ್ವಿಕವಾದ ಅರ್ಥಗರ್ಭಿತ ವಚನಗಳ ಅಶುಕವಿತ್ವವನ್ನು ಮೆರೆಯುತ್ತ ಹಿರಣಯ್ಯನವರ ಒಂದು ಕ್ರಿಯಾತ್ಮಕ ಮುಂದಿನ ದಶಕದಲ್ಲಿ ರಂಗಭೂಮಿಯ ಮೇಲೆ ತಂದೆಯ ಪಟ್ಟಕ್ಕೆ ಬಂದ ಮಾಸ್ಟರ್ ಹಿರಣಯ್ಯನವರಂತೂ ತಮ್ಮ ‘ಲಂಚಾವತಾರ’ದ ಹನ್ನೊಂದನೆಯ ಅವತಾರದಿಂದ ವಿಧಾನಸೌಧದ ಮಂತ್ರಿ, ಮುಖ್ಯಮಂತ್ರಿ, ಶಾಸಕರ ಕುರ್ಚಿಗಳನ್ನೆಲ್ಲಾ ತಮ್ಮ ಹರಿತವಾದ ವಾಸ್ತವಾದ ವಿಡಂಬನಾತ್ಮಕ ಹಾಸ್ಯದ ಮಹಾಪೂರದಲ್ಲಿ ಕೊಚ್ಚಿ ಹಾಕಿಬಿಟ್ಟರು. ಮಾಸ್ಟರ್ ಹಿರಣಯ್ಯನವರ ‘ಮಿತ್ರ ಮಂಡಳಿ’ ಯಾವಾಗೆಂದರೆ ಆಗ ಒಂದು ಬ್ಯಾಕ್‌ಡ್ರಾಪ್ ಮಾತ್ರ ಸಾಕಾಗಿದ್ದ ರಂಗಭೂಮಿಯ ಮೇಲೆ ತಮ್ಮ ದತ್ತೂನ ಪಾತ್ರದಲ್ಲಿ ಕಾಣಿಸಿಕೊಂಡರಾಯ್ತು, ಆಧುನಿಕ ಕೈಲಾಸಂ! ತಮ್ಮ ಬಾಯಿ ಚಪಲವನ್ನು ಸಮಾಜದಲ್ಲಿ ಕಾಣುವ ಡಾಂಭಿಕತೆಯ ಹಲವಾರು ಹತ್ತು-ಹನ್ನೊಂದು ಮುಖವಾಡಗಳನ್ನು ಕಿತ್ತು ಅವುಗಳ ಹಿಂದಿನ ನನ್ನ ಸತ್ಯಕ್ಕೆ ಕನ್ನಡಿ ಹಿಡಿಯುವರು. ಇವರ ನಿರ್ಭಯ, ನಿರ್ಭಿಡೆಯ ಧೈರ್ಯದ ವಿಡಂಬನೆಯ ಸುರಿಮಳೆಗೆ ಪ್ರೇಕ್ಷಾಗ್ರಹದಲ್ಲಿ ತಮ್ಮ ಗೌರವದ ಛತ್ರಿಗಳಲ್ಲಿ ತಲೆಮರೆಸಿಕೊಂಡು ಕುಳಿತಿದ್ದ ಅಧಿಕಾರಿಗಳು ನಾಚಿ ಮುಖ ಮರೆಮಾಚಿಕೊಳ್ಳಬೇಕು. ‘ಲಂಚಾವತಾರ’ ನಾಟಕವೆಂದರೆ ಒಂದು ಚೌಕಟ್ಟು ಮಾತ್ರ. ಅದರಲ್ಲಿ ದತ್ತು ಒಬ್ಬನೇ ತನ್ನ ಮಾತುಗಾರಿಕೆಯ ಬಾಣಗಳನ್ನು ಗುರಿಗಳು ಬದಲಾದಂತೆ ಬತ್ತಳಿಕೆಯಿಂದ ಬದಲಾಯಿಸುತ್ತ ಹೋಗುವನು.

ಎಚ್.ಎಲ್.ಎನ್. ಸಿಂಹ ಅವರು ‘ಸಂಸಾರನೌಕೆ’ ಬರೆಯಬೇಕು ಪೀರರಂತಹ ನಟ ಶಾರ್ದೂಲರು ಅಭಿನಯಿಸಬೇಕು. ಪೀರರು ‘ಸಂಸಾರನೌಕೆ’ಯ ಹೀರೋ ಆಗಿ ಮೋಸದ ಮೈತ್ರಿ ಜಾಲದಲ್ಲಿ ಸಿಕ್ಕು ತಿರುಪೆಯವನ ಅವಸ್ಥೆ ಪಡುವಾಗ ಒಳಗಿನ ರೋಷದಿಂದ ಒಂದು ಇಂಗ್ಲಿಷ್ Soliloquy’ (ಏಕಪಾತ್ರವಾಣಿ) ಹೇಳುತ್ತಾನೆ – ಏನು ಪರಿಣಾಮಕಾರಿ! ಅದರ ಜುಮ್ಮ ತಟ್ಟಿಸುವ ಪರಿಣಾಮಕ್ಕಾಯೆ  ಜನ  (ಅರ್ಥಾತ್ ಇಂಗ್ಲಿಷ್ ಭಾಷೆ ಬಲ್ಲವರು) ಮತ್ತೆ ಮತ್ತೆ ಬರುವರು. `Yee set of money moneyers, who wear the masks of friendship…’ ಎಂದೇನೋ ಈ ಪ್ರಕಾರವಾಗಿ ಆ  ಆತ್ಮಗತವು ಆರಂಭವಾಗುತ್ತಿತ್ತು. ಕರ್ನಾಟಕ ರಂಗಭೂಮಿಯ ಇತಿಹಾಸದಲ್ಲೇ ನಾಲ್ವತ್ತರ ದಶಕದಲ್ಲಿ ಸಂಸಾರ ನೌಕೆ ಒಂದು ಮೈಲುಗಲ್ಲಾಗಿ ಮೆರೆಯಿತು. ಪೀರರು ಹೆಚ್ಚಾಗಿ ಉತ್ತರ ಕರ್ನಾಟಕವನ್ನು ಸುತ್ತಿ ಸಂಚರಿಸಿ ಕೊನೆಗೆ ಉತ್ತರ ಕರ್ನಾಟಕದಲ್ಲಿಯೆ ತಮ್ಮ ಕಂಪನಿಗಳ ಪರರದೆಯನ್ನು ಒತ್ತೆ ಇಟ್ಟು, ನಾಟಕದ ಬಣ್ಣ ಅಳಿಸಿಕೊಂಡು ಹೋದರು. ನಿಜವಾದ ಬುದ್ಧನಂತೆ! (ಅವರು ಪ್ರದರ್ಶಿಸುತ್ತಿದ್ದ ಕೊನೆಯ ನಾಟಕವೆ ಅದು).

ಗದುಗಿನ ಹುಯಿಲಗೋಳ ನಾರಾಯಣರಾಯರು ‘ಯಂಗ್ ಮೆನ್ಸ್ ಫುಟ್ಬಾಲ್ ಕ್ಲಬ್’ ಎಂಬ ಸಂಘವನ್ನು ಸ್ಥಾಪಿಸಿ ಸ್ಥಳೀಯ ಕಲಾವಿದ ಮಿತ್ರರನ್ನು ಕೂಡಿಹಾಕಿ ‘ಸ್ತ್ರೀ ಧರ್ಮ ರಹಸ್ಯ’ ಮತ್ತು ‘ಶಿಕ್ಷಣ ಸಂಭ್ರಮ’ಗಳೆಂಬ ನಾಟಕಗಳನ್ನು ರಚಿಸಿ ನಾಟಕಗಳನ್ನಾಡಿಸುತ್ತಿದ್ದರು. ಅವರ ಕ್ಲಬ್ ಅಮೇಚ್ಯೂರ್ ಸಂಘದ ಮಾಲಿಕೆಯಲ್ಲಿ ಬಂದರೂ ಅವರು ಊರೂರು ಸುತ್ತಾಡಿದ್ದೂ ಉಂಟು. ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯಸಂಘದಂತೆ, ‘ನಳದಮಯಂತಿ’ ನಾಟಕದಲ್ಲಿ ಗದುಗಿನ ಇಂದಿನ ಹಿರಿಯ ಪ್ರಖ್ಯಾತ, ಅಖಂಡ ಭಾರತದ ಖ್ಯಾತಿಯ ಭೀಮಸೇನ ಜೋಶಿಯವರು ಪಾತ್ರವಹಿಸುತ್ತಿದ್ದರು.

ಭೀಮಸೇನ ಜೋಶಿ ಅವರ ಕಕ್ಕ, ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರು ಆಗಿನ್ನೂ ಅಷ್ಟು ಪ್ರಸಿದ್ಧಿ ಪ್ರೌಢಿಮೆ ಪಡೆಯದಿದ್ದ ಕಾಲದಲ್ಲಿ ಭೀಮಸೇನನಿಗಾಗಿಯೇ ‘ಕಲೋಪಾಸಕ ಮಂಡಳಿ’ ಸ್ಥಾಪಿಸಿ ಬೇಂದ್ರೆ ಲಕ್ಷ್ಮಣರಾಯರು ಬರೆದ ‘ಪರಿವರ್ತನೆ’ ಮತ್ತು ‘ಭಾಗ್ಯಶ್ರೀ’ ಹಾಗೂ ಹುಯಿಲಗೋಳ ನಾರಾಯಣರಾಯರ ‘ಪತಿತೋದ್ಧಾರ’ (ನಳದಮಯಂತಿಯಂತೂ ಸರಿಯೆ) ಇವುಗಳನ್ನೆಲ್ಲಾ ಪ್ರಯೋಗಿಸುತ್ತಾ ಸಂಚಾರ ಮಾಡಿದರು. ಅದರ ಮುಂದೆ ಭೀಮಸೇನ ಜೋಶಿ ಅವರು ಗದಗ ಬಿಟ್ಟ ಮೇಲೆ ಕಲೋಪಾಸಕ ಮಂಡಳಿಯೂ ನಿಂತಿತು. ಈ ನಾಟಕ ಪ್ರಯೋಗಗಳಲ್ಲಿ ಭೀಮಸೇನರ ಜೊತೆ ಪಾತ್ರವಹಿಸುತ್ತಿದ್ದ ಕು.ವತ್ಸಲಾ ಮುಧೋಳಕರರು ಮುಂದೆ ವತ್ಸಲಾ ಜೋಶಿ ಆದರು. ಮಂಗಳಂ.

ಗಜಾನನ ನಾಟಕ ಮಂಡಳಿ

ಜಮಖಂಡಿ ಗಜಾನನ ನಾಟಕ ಮಂಡಳಿಯಷ್ಟು ದೀರ್ಘ ಆಯುಷ್ಯ ಪಡೆದ ಕನ್ನಡ ನಾಟಕ ಕಂಪನಿಗಳೆ ಇಲ್ಲವೆನ್ನಬೇಕು. ಅಖಂಡ ೬೫ ವರ್ಷ ದೀರ್ಘಕಾಲದ ರಂಗಸೇವೆ ಈ ಕಂಪನಿಯ ಮಾಲಕರಾದ ಶ್ರೀ ದತ್ತಂಭಟ್ಟ ಜೋಶಿ ಅವರದು. ಅವರು ತಮ್ಮ ನಾಲ್ಕು ಜನ ಚಿಕ್ಕ ಸೋದರರೊಂದಿಗೆ ನಾಟಕ ಮಂಡಳಿಯನ್ನು ೧೯೩೫ರಲ್ಲಿ ಜಮಖಂಡಿಯಲ್ಲಿ ಸ್ಥಾಪಿಸಿದ್ದರು. ಪ್ರತಿವರುಷ ಆನವಟ್ಟಿಯ ಜಾತ್ರೆಯಲ್ಲಿ ಇವರ ನಾಟಕಕ್ಕೆ ತೇಜಿ ಬರುತ್ತಿತ್ತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮಾನ್ಯಶ್ರೀ ಬಂಗಾರಪ್ಪನವರು ವಿದ್ಯಾರ್ಥಿಯಾಗಿ ಆನವಟ್ಟಿಯ ಜಾತ್ರೆಗೆ ಸೊರಬದಿಂದ ಸೈಕಲ್ ಮೇಲೆ ಬಂದು ನಾಟಕ ನೋಡಿ ಹೋಗುತ್ತಿದ್ದರಂತೆ.

ಜಮಖಂಡಿ ಗಜಾನನ ನಾಟಕ ಮಂಡಳಿ ‘ಸತ್ಯನಾರಾಯಣ ವ್ರತಮಹಾತ್ಮೆ’ಯನ್ನು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಸುಮಾರು ೩,೦೦೦ ಪ್ರದರ್ಶನಗಳನ್ನು ಮಾಡಿದ ದಾಖಲೆ ಈ ಕಂಪನಿಯವರದು.

ವಾಮನರಾವ್ ಮಾಸ್ತರರ ಕಂಪನಿ ಮುಚ್ಚಿದ ಮೇಲೆ ಅವರ ನಾಟಕದ ಪರದೆ, ಡ್ರೆಸ್, ಇನ್ನೆಲ್ಲ ಸಾಮಾನುಗಳನ್ನು ಅವನ ಚಿರಂಜೀವಿ ವೆಂಕಟರಾವ್ ಸವಣೂರ ಇವರಿಂದ ಖರೀದಿಸಿ, ೧೯೩೫ರಲ್ಲಿ ಗುಳೇದಗುಡ್ಡ ಮುಕ್ಕಾಂನಲ್ಲಿ ನಾಗರಪಂಚಮಿಯೆಂದು ಪ್ರಾರಂಭವಾಯಿತು. ದತ್ತೋಭಟ್ಟರ ಚಿಕ್ಕ ತಮ್ಮ ಬಾಲಕ ಅನಂತಭಟ್ಟರ ಸ್ತ್ರೀ ಪಾತ್ರ ವಹಿಸುತ್ತಿದ್ದರು. ನಟನಿಪುಣರಾದ ಇವರು ಮುಂದೆ ಹುಚ್ಚನ ಪಾತ್ರ ವಹಿಸುತ್ತಿದ್ದರು.

‘ಸತ್ಯನಾರಾಯಣ ವ್ರತ ಮಹಿಮೆ’ ಕಂಪನಿಗೆ ನಿಜವಾಗಿಯೂ ಸರ್ವತೋಮುಖ ಕಲ್ಯಾಣ ಮಾಡಿತು. ನಾಟಕ ಮುಗಿದ ಮೇಲೆ ಬಂದ ಪ್ರೇಕ್ಷಕರಿಗೆಲ್ಲಾ ಮಾಲ ದತ್ತಂಭಟ್ಟರು ಸತ್ಯನಾರಾಯಣ ಪ್ರಸಾದ ಹಂಚುತ್ತಿದ್ದರು.

‘ಹುತಾತ್ಮ ಮೈಲಾರಮಹದೇವಪ್ಪ’ ನಾಟಕವಂತೂ ಚಲೇಜಾವ್ ಚಳವಳಿಯ ಸ್ಫೋಟಕ ದ್ರವ್ಯವನ್ನು ಒಳಗೊಂಡುದುದರಿಂದ ಜನರು ಈ ನಾಟಕ ನೋಡಲು ಹುಚ್ಚೆದ್ದು ಊರೂರಿಂದ ಬರುತ್ತಿದ್ದರು. ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆ. ಎಫ್. ಪಾಟೀಲರು ನೋಡಿ ಕಣ್ಣೀರು ಹಾಕಿದ್ದರಂತೆ. ಅವರ ಶ್ರೀಮತಿಯವರಂತೂ ಬಿಕ್ಕಿ ಬಿಕ್ಕಿ ಅಳತೊಡಗಿದರೆಂದು ಶ್ರೀ ಅನಂತಭಟ್ಟರು ಹೇಳುತ್ತಾರೆ.

ಗಜಾನನ ನಾಟಕ ಮಂಡಳಿಯವರು ನಲವಡಿ ಶ್ರೀಕಂಠಶಾಸ್ತ್ರಿಗಳ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನೂ ಆಡುತ್ತಿದ್ದರೆಂದು ತಿಳಿಯುತ್ತದೆ.

‘ಸತ್ಯನಾರಾಯಣ ವ್ರತ ಮಹಿಮೆ’ಯ ಐದೂ ಅಧ್ಯಾಯಗಳನ್ನು ಐದು ಅಂಕಗಳಾಗಿ ತಿರುಗುವ ರಂಗಭೂಮಿಯ ಸಹಾಯದಿಂದ ಪ್ರದರ್ಶಿಸುತ್ತಿದ್ದುದರಿಂದ ಒಂದೊಂದು ಅಧ್ಯಾಯಕ್ಕೂ ರಂಗಭೂಮಿ ತಿರುಗುತ್ತ ಮುಂದಿನ ಅಧ್ಯಾಯಕ್ಕೆ ಮುಂದುವರೆಯುತ್ತಿದ್ದುದು ಪ್ರೇಕ್ಷಕರಿಗೆ ಚಮತ್ಕಾರವೆನಿಸಿತು.

ಈ ಸತ್ಯ ನಾರಾಯಣ ವ್ರತ ಮಹಿಮೆ’ ನಾಟಕವನ್ನು ಬರೆದವರು ಶ್ರೀ ಎಚ್. ಎಲ್. ನಾರಾಯಣರಾವ್, ಖ್ಯಾತ ಚಿತ್ರನಟ ವಿಷ್ಣುವರ್ಧನರ ತಂದೆ. ನಾರಾಯಣರಾವ್ ಅವರು ನಾನು ಬೆಂಗಳೂರು ಆಕಾಶವಾಣಿಯಲ್ಲಿದ್ದಾಗ ರೇಡಿಯೋ ನಾಟಕಗಳನ್ನೂ ಬರೆದಿದ್ದರು.

ದತ್ತಂಭಟ್ಟರು ೧೯೮೧ರ ವರೆಗೂ ಎಂದರೆ ತಮ್ಮ ಕೊನೆಯುಸಿರಿರುವವರೆಗೂ ಕಂಪನಿಯನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದರು. ಈಗ ೭೬ ವರ್ಷದ ವಯೋವೃದ್ಧರಾದ ಶ್ರೀ ಅನಂತಭಟ್ಟರು ನನ್ನ ಆತ್ಮೀಯ ಮಿತ್ರರು. ಇಂದಿಗೂ ರಂಗಗೀತಗಳನ್ನು ಹಾಡುತ್ತಾರೆ. ತಮ್ಮ ನಾಟ್ಯ ಜೀವನದ ಅನುಭವಪೂರ್ಣವಾದ ಕಥೆಯನ್ನು ಹೇಳುತ್ತಾರೆ. ೭೫ ವರ್ಷ ಒಂದು ನಾಟಕ ಕಂಪನಿಯ ಜೀವಂತ ಸ್ಮಾರಕವಾಗಿದ್ದಾರೆ. ಈಗ ಸೋದರವರ್ಗದಲ್ಲಿ ಏಕಾಂಗಿಯಾಗಿ ಉಳಿದಿರುವ ಶ್ರೀ ಅನಂತಭಟ್ಟ ಜೋಶಿ ಅವರು.

ಗ್ರಂಥ ಋಣ :

ಕೇವಲ ಡಾ. ಎಚ್. ಕೆ. ಆರ್. ಅವರ The Karnataka Theatre’ ಮತ್ತು ‘ಕರ್ನಾಟಕ ರಂಗಭೂಮಿ’.