ಮುಂಗಾರು ಬರದಿದ್ದರೇನಾಯ್ತು. ಕಬರ ಬಂದರೂ, ಕ್ಷಾಮ ಬಾರದಂತೆ ಕಾಯ್ದುಕೊಳ್ಳುವ ಶಕ್ತಿ ಭಾರತಕ್ಕಿದೆಕಿ ಎಂದು ಮೊನ್ನೆಯಷ್ಟೆ ಮಾನ್ಯ ಪ್ರಧಾನಮಂತ್ರಿಗಳು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಭರವಸೆ ನೀಡಿದ್ದು ನೆನಪಿದೆಯಷ್ಟೆ. ಭಾರತದಲ್ಲಿ ಈ ಮುಂಗಾರು ಶೇಕಡ 60ರಷ್ಟು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಿದೆ ಎನ್ನುವ ವರದಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಈ ಭರವಸೆ ನೀಡಿದ್ದಾರೆ. ನಿಜ. ಮೂರು ತಿಂಗಳ ಕಾಲ ಭಾರತದ ಎಲ್ಲ ಜನತೆಗೂ ಆಹಾರ ಒದಗಿಸುವಷ್ಟು ಕಾಳಿನ ಸಂಗ್ರಹ ಭಾರತದಲ್ಲಿದೆ. ಆದರೆ ಇದಕ್ಕಾಗಿ ನಾವು ತೆರುತ್ತಿರುವ ಬೆಲೆ ಎಷ್ಟು ಎನ್ನುವುದನ್ನು ಇತ್ತೀಚೆಗೆ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯೊಂದು ಬಯಲಾಗಿಸಿದೆ. ಕೃಷಿ ಹಾಗೂ ಇನ್ನೂ ಹೆಚ್ಚಿನ ಕೃಷಿಗಾಗಿ ನಾವು ಹೆಚ್ಚೆಚ್ಚು ಅಂತರ್ಜಲವನ್ನು ಬಸಿಯುತ್ತಿದ್ದೇವೆಯಂತೆ.  ಎಷ್ಟೆಂದರೆ, ಉತ್ತರಭಾರತದಲ್ಲಿನ ಅಂತರ್ಜಲ ಮಟ್ಟ ಪ್ರತಿ ವರ್ಷವೂ ನಾಲ್ಕು ಸೆಂಟಿಮೀಟರಿನಷ್ಟು ಕುಸಿಯುತ್ತಿದೆ ಎಂದು ಅಮೆರಿಕೆಯ ನಾಸಾದ ವಿಜ್ಞಾನಿಗಳು ನೇಚರ್ನಲ್ಲಿ ವರದಿ ಮಾಡಿದ್ದಾರೆ. ನಾವು ಇದುವರೆವಿಗೂ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಜಲವನ್ನು ಬರಿದಾಗಿಸುತ್ತಿದ್ದೇವೆ ಎನ್ನುತ್ತದೆ ನಾಸಾದ ಮ್ಯಾಥ್ಯೂ ರಾಡೆಲ್ ಮತ್ತು ಸಂಗಡಿಗರು ಪ್ರಕಟಿಸಿರುವ ಈ ವರದಿ.

ಇಷ್ಟೇ ವಿಸ್ತಾರದ ಪ್ರಪಂಚದ ಇನ್ಯಾವ ಪ್ರದೇಶದಲ್ಲೂ ಆಗದಷ್ಟು – ಸರಾಸರಿ 120 ಸೆಂಟಿಮೀಟರಿನಷ್ಟು ಗ ಮಳೆ ಭಾರತದಲ್ಲಿ ಆಗುತ್ತದೆ. ಆದರೆ ಎಲ್ಲೆಡೆಯೂ ಇದು ಒಂದೇ ಸಮನಾಗಿರುವುದಿಲ್ಲವಾದ್ದರಿಂದ ಎಷ್ಟೋ ಸ್ಥಳದಲ್ಲಿ ಅಂತರ್ಜಲವೇ ನೀರಿನ ಮೂಲ.  ಕೃಷಿಗಾಗಿ ರಾಷ್ಟ್ರದಲ್ಲಿ ಬಳಕೆಯಾಗುವ ನೀರಿನಲ್ಲಿ ಅರ್ಧಕ್ಕರ್ಧದಷ್ಟು ಅಂತರ್ಜಲ. ಕುಡಿಯುವ ನೀರಿನಲ್ಲಿ ಅಂತರ್ಜಲದ ಪ್ರಮಾಣ ಇನ್ನೂ ಹೆಚ್ಚು – ಶೇಕಡ 80ರಷ್ಟು.  ಈ ರೀತಿ ಭಾರಿ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸುವುದು ಒಳ್ಳೆಯದಲ್ಲ. ಇದರಿಂದಾಗಿ ಭಾರತ ತೀವ್ರ ಜಲಕ್ಷಾಮವನ್ನು ಎದುರಿಸಬೇಕಾಗಬಹುದು ಎಂದು ವಿಶ್ವಬ್ಯಾಂಕ್ನ ಒಂದು ವರದಿ ಕೆಲವು ವರ್ಷಗಳ ಹಿಂದೆಯೇ ಎಚ್ಚರಿಸಿತ್ತು. ಈ ಎಚ್ಚರಿಕೆ ಬಹಳಷ್ಟು ಮಟ್ಟಿಗೆ ನಿಜವಾಗಿದೆ. ಹಲವಾರು ರಾಜ್ಯಗಳು ಈಗಾಗಲೇ ಜಲಕ್ಷಾಮವನ್ನು ಎದುರಿಸುತ್ತಿವೆ. ಮರುಭೂಮಿಯ ಅಂಗವಾದ ರಾಜಸ್ಥಾನದಲ್ಲಿ ಇದು ಸಹಜವೇ ಸರಿ. ಆದರೆ ಬತ್ತದ ನದಿಗಳೆಂದು ಹೆಸರಾದ ಗಂಗೆ, ಜಮುನೆ, ನರ್ಮದಾ, ಮಹಾನದಿಗಳು ಹರಿವ ಉತ್ತರಭಾರತದ ಹಲವು ರಾಜ್ಯಗಳೂ ನೀರಿನ ಕೊರತೆ ಎದುರಿಸಬೇಕಾಗಿದೆ. ರಾಡೆಲ್ರವರ ಅಧ್ಯಯನಗಳ ಪ್ರಕಾರ ಸ್ವಸ್ಥಿತಿಗೆ ಮರಳದಷ್ಟು ಶೀ್ರಗತಿಯಲ್ಲಿ ಉತ್ತರಭಾರತದ ಅಂತರ್ಜಲದ ಮಟ್ಟ ಕುಸಿಯುತ್ತಿದೆ.

ಎಲ್ಲರಿಗೂ ತಿಳಿದ ಸತ್ಯದ ಬಗ್ಗೆ ಸಂಶೋಧನೆಯೇ ಎಂದಿರಾ? ನಿಜವೇ. ದೇಶಾದ್ಯಂತ ಅಂತರ್ಜಲದ ಮಟ್ಟ ಕುಸಿಯುತ್ತಿರುವ ಬಗ್ಗೆ ಅನುಮಾನವಿಲ್ಲ. ಸರಕಾರವೂ ಈ ಬಗ್ಗೆ ಕಾಳಜಿ ವಹಿಸಿ ಅಂತರ್ಜಲದ ಮಟ್ಟದ ನಿರ್ವಹಣೆಗಾಗಿ ರಾಷ್ಟ್ರಮಟ್ಟದಲ್ಲಿ ಕೇಂದ್ರೀಯ ಅಂತರ್ಜಲ ಪ್ರಾಧಿಕಾರವನ್ನೂ ಸ್ಥಾಪಿಸಿದೆ. ದೇಶದ ವಿವಿಧೆಡೆ ಅಂತರ್ಜಲ ಮಟ್ಟವನ್ನು ಪರಿಶೀಲಿಸಿ ಆಯಾ ರಾಜ್ಯ ಸರಕಾರಗಳಿಗೆ ಪ್ರಾಧಿಕಾರ ಸಲಹೆಯನ್ನೂ ನೀಡುತ್ತಿದೆ. ಆದರೆ ಆಯಾ ಪ್ರದೇಶದ ಅಂತರ್ಜಲಮಟ್ಟಕ್ಕಷ್ಟೆ ಸೀಮಿತವಾಗಿವೆ. ಉತ್ತರಭಾರತದಂತಹ ವಿಶಾಲ ಪ್ರದೇಶದಲ್ಲಿನ ಒಟ್ಟಾರೆ ಪರಿಸ್ಥಿತಿಯನ್ನು ಇಂತಹ ಪ್ರಾದೇಶಿಕ ಅಧ್ಯಯನಗಳಿಂದ ಅಳೆಯುವುದು ತುಸು ಕಷ್ಟವೇ ಸರಿ. ಜಲಮೂಲಗಳ ಸ್ಥಿತಿಗತಿಯ ಬಗ್ಗೆ ಉಪಗ್ರಹಗಳ ನೆರವನ್ನೂ ಪಡೆಯಲಾಗಿದೆ. ಆದರೆ ಉಪಗ್ರಹಗಳ ಕಣ್ಣು ನೆಲದ ಮೇಲಿನ ನೀರಿನ ಸೆಲೆಗಳನ್ನಷ್ಟೆ ಕಾಣಬಲ್ಲುದು. ಭೂಮಿಯ ಆಳದಲ್ಲಿರುವ ಅಂತರ್ಜಲವನ್ನಲ್ಲ.

ಹೀಗಾಗಿ ರಾಡೆಲ್ರವರ ತಂಡ ಹೊಸದೊಂದು ಉಪಾಯ ಬಳಸಿದೆ. ಭೂಮಿಯ ಗುರುತ್ವಾಕರ್ಷಣೆ ಹಾಗೂ ವಾಯುಗುಣದ ಅಧ್ಯಯನಕ್ಕಾಗಿಯೇ ಆಕಾಶಕ್ಕೆ ಹಾರಿಸಿದ ಎರಡು ಉಪಗ್ರಹಗಳನ್ನು ಈ ತಂಡ ಬಳಸಿದೆ. ಗ್ರಾವಿಟಿ ರಿಕವರಿ ಅಂಡ್ ಕ್ಲೈಮೇಟ್ ಎಕ್ಸ್ಪೆರಿಮೆಂಟ್ (ಜಿಆರ್ಎಸಿಇ ಗ ಗ್ರೇಸ್) ಎಂದು ಹೆಸರಿಸಿದ ಈ ಜೋಡಿ ಉಪಗ್ರಹಗಳು ಕಾರ್ಯವೂ ವಿಶೇಷ. ಇವೆರಡೂ ಉಪಗ್ರಹಗಳೂ ಒಂದೇ ಪಥದಲ್ಲಿ, ಆದರೆ ಒಂದರ ಹಿಂದು ಇನ್ನೊಂದು, ಚಲಿಸುತ್ತವೆ. ಭೂಮಿಯ ಮೇಲೆ ನೀರಿರುವ ಸ್ಥಳದಲ್ಲಿನ ಗುರುತ್ವಾಕರ್ಷಣೆ ತುಸು ಹೆಚ್ಚಾಗಿರುತ್ತದೆ. ಹೀಗಾಗಿ ಇಂತಹ ಪ್ರದೇಶದ ಮೇಲೆ ಹಾರುವಾಗ ಮುಂದಿರುವ ಉಪಗ್ರಹದ ವೇಗ ತುಸು ಹೆಚ್ಚಾಗುತ್ತದೆ. ಅದೇ ಮಾರ್ಗದಲ್ಲಿ ಹಿಂದೆಯೇ ಹಾರಿಬಂದ ಉಪಗ್ರಹದ ವೇಗದಲ್ಲಿನ ವ್ಯತ್ಯಾಸ ಮೊದಲ ಉಪಗ್ರಹ ಹಾಗೂ ಎರಡನೆಯ ಉಪಗ್ರಹ ಹಾರಿದ ಅವಧಿಯೊಳಗೆ ಆ ಪ್ರದೇಶದಲ್ಲಿ ಆಗಿರಬಹುದಾದ ಗುರುತ್ವಾಕರ್ಷಣೆಯ ವ್ಯತ್ಯಾಸಗಳ ದ್ಯೋತಕವಷ್ಟೆ. ಉಳಿದೆಲ್ಲವೂ ಸಮನಾಗಿದ್ದಾಗ ಆ ಪ್ರದೇಶದಲ್ಲಿನ ಗುರುತ್ವಾಕರ್ಷಣೆಯಲ್ಲಿನ ವ್ಯತ್ಯಾಸ ಅಲ್ಲಿನ ನೀರಿನ ಆಕರಗಳಿಗೆ ಅನುಗುಣವಾಗಿ ಇರಬೇಕು ಎನ್ನುವುದು ತರ್ಕ. ರಾಡೆಲ್ರವರ ತಂಡ ಈ ತರ್ಕವನ್ನು ಅನುಸರಿಸಿ ಅಧ್ಯಯನ ನಡೆಸಿದೆ.

ಉತ್ತರಭಾರತದ ಮೇಲೆ ಹಾರುವಾಗ ಗ್ರೇಸ್ನ ಉಪಗ್ರಹಗಳು ಸಂಗ್ರಹಿಸಿದ ಗುರುತ್ವಾಕರ್ಷಣೆಯಲ್ಲಿನ ವ್ಯತ್ಯಾಸಗಳನ್ನು ಇವರು ದಾಖಲಿಸಿದರು. 2002 ಜುಲೈನಿಂದ 2008 ಜುಲೈವರೆಗೆ ಈ ಎರಡೂ ಉಪಗ್ರಹಗಳೂ ಸಂಗ್ರಹಿಸಿದ ಮಾಹಿತಿಯನ್ನು ಇವರು ವಿಶ್ಲೇಷಿಸಿದ್ದಾರೆ. ಇದರೊಟ್ಟಿಗೆ ಆ ಪ್ರದೇಶಗಳಲ್ಲಿ ಆ ಸಮಯದಲ್ಲಿ ಆದ ಮಳೆ, ಅಲ್ಲಿನ ಜಲಾಶಯಗಳಲ್ಲಿ ಇದ್ದ ನೀರಿನ ಪ್ರಮಾಣ, ಹಿಮಪಾತ ಇತ್ಯಾದಿ ಜಲಪೂರಣ ವಿದ್ಯಮಾನಗಳನ್ನು ಗಮನಿಸಿದ್ದಾರೆ. ಉಪಗ್ರಹಗಳು ನೀಡಿದ ಮಾಹಿತಿಯಲ್ಲಿ ಇವುಗಳ ಪರಿಣಾಮಗಳನ್ನು ಕಳೆದಾಗ ಉಳಿಯುವುದು ಆ ಪ್ರದೇಶದ ಅಂತರ್ಜಲದ ಪ್ರಭಾವವಷ್ಟೆ.  ಆರು ವರ್ಷಗಳ ಅವಧಿಯಲ್ಲಿ ನಡೆದ ಈ ಲೆಕ್ಕಾಚಾರ, ಋತುಗಳಿಗೆ ತಕ್ಕಂತೆ ಅಂತರ್ಜಲದ ಮಟ್ಟ ಬದಲಾಗುವುದನ್ನು ನಿರೂಪಿಸಿದೆ. ಆದರೆ ಒಟ್ಟಾರೆ ಅಂತರ್ಜಲದ ಮಟ್ಟ ಕ್ರಮೇಣ ಕುಸಿಯುತ್ತಿದೆ ಎನ್ನುವುದನ್ನೂ ಸ್ಪಷ್ಟಪಡಿಸಿದೆ. ಈ ಕುಸಿತ ಅಂತರ್ಜಲದ ಬಳಕೆಯಿಂದಲೇ ಹೊರತು ಮಳೆಯ ಪ್ರಮಾಣ ಕಡಿಮೆಯಾದ್ದರಿಂದಾಗಲಿ, ವಾಯುಗುಣ ಬದಲಾವಣೆಯಿಂದಾಗಲಿ ಅಲ್ಲ ಎನ್ನುವುದನ್ನೂ ಸಿದ್ಧಪಡಿಸಿದೆ.

ಅಂತರ್ಜಲದ ಮಟ್ಟ ಎಷ್ಟು ಕಡಿಮೆಯಾಗುತ್ತಿದೆ ಗೊತ್ತೇ? ರಾಜಸ್ತಾನ, ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳು ಈ ಆರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 109 ನ ಕಿಲೋಮೀಟರಿನಷ್ಟು ಅಂತರ್ಜಲವನ್ನು ಕಳೆದುಕೊಂಡಿವೆ. ಇದು ಭಾರತದ ಅತಿ ದೊಡ್ಡ ಜಲಾಶಯ ಅಪ್ಪರ್ ವೈಗಂಗಾ ಜಲಾಶಯದಲ್ಲಿರುವ ನೀರಿನ ಪ್ರಮಾಣದ ಇಮ್ಮಡಿ. ನಾವು ಬಳಸಿದ ನೀರಿನ ಪ್ರಮಾಣ ಹಾಗೂ ಅಂತರ್ಜಲಕ್ಕೆ ಸಹಜವಾಗಿ ಕೂಡಿಕೊಂಡ ನೀರಿನ ಪ್ರಮಾಣದಲ್ಲಿನ ವ್ಯತ್ಯಾಸ ಇದು. ಅರ್ಥಾತ್, ಮರುಪೂರಣಗೊಳ್ಳದಂತೆ ಮರೆಯಾದ ಅಂತರ್ಜಲ.  ಮುಂಗಾರು ಕ್ಷೀಣಿಸಿದ ಈ ವರ್ಷ, ಇನ್ನೂ ಹೆಚ್ಚಿನ ಅಂತರ್ಜಲ ಬಳಕೆಯಾಗಬಹುದು. ಹೀಗೇ ಆದಲ್ಲಿ ಮುಂದೆ ಉತ್ತರಭಾರತದಲ್ಲಿ ಅಂತರ್ಜಲ ಮರುಪೂರಣಗೊಳ್ಳದ ರೀತಿಯಲ್ಲಿ ಮರೆಯಾಗಿ ಹೋದೀತು ಎಂದು ರಾಡೆಲ್ ತಂಡ ಕಾಳಜಿ ವ್ಯಕ್ತಪಡಿಸಿದೆ. ಹೀಗೆ ಎಲ್ಲರ ಮನದಲ್ಲಿರುವ ಸಂಶಯವನ್ನು ವಿಶೇಷ ತಂತ್ರಗಳ ಮೂಲಕ ನಿಚ್ಚಳಗೊಳಿಸಿದೆ.

Matthew Rodell, Isabella Velicogna and James S. FAmiglietti., Satellite-based estimates of groundwater depletion in India, Nature, (DOI:10.1038/nature08238) 2009 first published 14.8.2009; 2009