ಓ ಎಚ್ಚರು ಓ ಎಚ್ಚರು
ಎದೆಯಾಳದ ಮರಿಯೇ,
ಹೊರಜಗದೀ ಕಲ್ ಚಪ್ಪಡಿ-
ಯಡಿ ನಲುಗುವ ಸಸಿಯೇ.

ಬಲು ಮಿದು, ಭಂಗುರ ನೀ-
ಮುಟ್ಟಿದರೇ ಮುರಿವೆ.
ಒಳಗಿನ ಕ್ರತು ಎಚ್ಚತ್ತರೆ
ಮೆಲ್ಲನೆ ನೀ ಮೇಲೆದ್ದರೆ
ಚಪ್ಪಡಿಯನೆ ಒಡೆವೆ !

ಹುಳುಕೊರೆಯುವ, ಗೆದ್ದಲು
ಮೈಮುತ್ತುವ ಭಯವೆ ?
ಅಳಿಯುವ ನಿರ್ಬಲಗದು
ಬೆಳೆಯುವ ನಿನಗಲ್ಲ.
ವಾಲ್ಮೀಕಿಯ ತೆರದಲಿ ನೀ
ಬಾ ಸಿಡಿಲಿನ ಮರಿಯೇ.

ನಿನ್ನೆದೆಯನು ಮೆಟ್ಟುವ, ಆ
ಕಲ್‌ಚಪ್ಪಡಿ ನಿನ್ನಡಿಗೆ
ಹುಡಿಯಾಗುತ ಕಡೆಗೆ
ಬೇರಿಗೆ ಬಲವೀವುದು ಮುಂದೆ
ಮನವನು ಮಾಡಿಂದೇ.

ಮಣ್ಣೊಳಗಿನ ಮಂದಾರವೆ
ಇನ್ನಾದರು ಮೇಲೇಳೋ
ಆಕಾಶವೆ ಕೈ ಬೀಸಿದೆ
ಆ ವಾಣಿಯ ಕೇಳೋ
ನಿದ್ದೆಯ ತೊರೆದೇಳೋ.