ಕೂಗಿದೆ ಕೇಳಿ
ಬೆಳಗಿನ ಕೋಳಿ
ಉದಯಾಗಾರದ ವೈತಾಳಿ,
ನಿದ್ದೆಯ ಹೂಳಿ
ಎಲ್ಲರು ಏಳಿ
ಬೆಳುಬೆಳಗಾಗಿದೆ ಮೇಲೇಳಿ.

ಕಾಂಚನತೊರೆ
ಹರಿಯಿತು ನೆರೆ
ಮೂಡಣ ದಿಕ್ತಟದಲ್ಲಿ
ಕೆಂದೆರೆಗಳ
ಹೊಂದೆರೆಗಳ
ಸಂಗಮವಾಯಿತು ಅಲ್ಲಿ.

ಬತ್ತಿತು ಹೊಳೆ
ಪೆರ್ಚಿತು ಕಳೆ,
ನಿಂತಿದೆ ತೆರೆಯೊತ್ತಿದ ಪುಳಿನ !
ಕೆಂಪೇರಿದೆ
ಸೊಂಪೇರಿದೆ
ಪ್ರಾಚೀ ದಿಗ್ವಧುವಿನ ವದನ !
ಮಧುರ ವಿಹಂಗಮ
ಸುರಸರಸಂಗಮ
ತಾನತಾನಗಳಾಗೇರಿ
ಹೊಮ್ಮಿತು ಬಾನಿಗೆ
ನವಸಂದೇಶಕೆ
ಸಂತಸದಾಹ್ವಾನವ ಕೋರಿ.
ಬೀಸಿದೆ ತಂಗಾಳಿ
ಮಧುಗೀತವ ಹೇಳಿ
ಹೂ ಹೂವಿಗೆ ಹಾರಿರೆ ಭ್ರಮರಾಳಿ.
ಬೆಳಗಾಯಿತು ಬಾನ್
ಬೆಳಗಾದುದು ಬುವಿ
ನಿಶ್ಚಲವಾಗಿದೆ ಮುಗಿಲೋಳಿ.
ಅದೊ ಮೂಡಿತು ಹೊತ್ತು.
ಚೈತನ್ಯದ ಬಿತ್ತು
ನವಜೀವನಜ್ಯೋತಿಯ ಹೊತ್ತು.
ಹಳೆ ದಿನವದು ಸತ್ತು
ನವ ಭವ್ಯಜಗತ್ತು
ನಲಿದಿದೆ ಕಣ್ದೆರೆದೆಚ್ಚೆತ್ತು.
ಆಲಸವೇಕೆ ?
ಕನಸೇ ಸಾಕೆ ?
ಅಲ್ಲದೆ ಈ ಸೌಂದರ್ಯವು ಬೇಕೆ ?
ತಡವಿನ್ನೇಕೆ
ಮುಂದಿನ ಚಣಕೆ
ತೂಗುವುದುಯ್ಯಾಲೆಯ ಜೋಕೆ.