ಉದಯ ಶಂಕರ್ಇಪ್ಪತ್ತನೆ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ನೃತ್ಯಕಲೆಯ ಪುನರುಜ್ಜೀವ ನಕ್ಕೂ, ಹತ್ತಾರು ಹೊಸ ನೃತ್ಯರೂಪಕಗಳ ಸೃಷ್ಟಿಗೂ, ಭಾರತೀಯ ನರ್ತನದ ಅಂತರರಾಷ್ಟ್ರೀಯ ಖ್ಯಾತಿಗೂ ಕಾರಣರಾದ ವರು ಉದಯ ಶಂಕರ್.

 ಉದಯ ಶಂಕರ್

ಹಾವಾಡಿಗನು ಪುಂಗಿಯೂದಲು ಶುರುಮಾಡುವುದೇ ತಡ, ಹಾವು ಎಡಕ್ಕೂ ಬಲಕ್ಕೂ ಮೇಲಕ್ಕೂ ಕೆಳಕ್ಕೂ ಮುಂದಕ್ಕೂ ಹಿಂದಕ್ಕೂ ಬಾಗಿ ಬಳುಕಿ ನರ್ತನ ಮಾಡತೊಡಗುತ್ತದೆ. ಮೋಡ ಕಂಡೊಡನೆ ನವಿಲು ಕುಣಿಯಲಾರಂಭಿಸುತ್ತದೆ. ಯಾವುದೋ ಆವೇಶವನ್ನೂ ಭಾವದ ತೀವ್ರತೆಯನ್ನೂ ಹೊರಪಡಿಸಲು ಪ್ರಾಣಿಗಳು ಬಳಸುವ ಒಂದು ಸಾಧನ, ಇಂಥ ಕುಣಿತ. ಆದರೆ ಇದು ಹುಚ್ಚು ಹುಚ್ಚಾದ ಅಸ್ತವ್ಯಸ್ತ ಕುಣಿತವಲ್ಲ. ಕುಣಿತ ಯಾವುದೊ ಒಂದು ವ್ಯವಸ್ಥೆಯನ್ನು ಅನುಸರಿಸುತ್ತದೆ. ಕುಣಿಯುತ್ತಿರುವ ನವಿಲು ಒಂದು ಕಾಲನ್ನು ಮುಂದೆ ಹಾಕುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಅದನ್ನು ಮತ್ತೆ ಹಿಂದಕ್ಕೆ ಎಳೆದಿರಿಸುವುದಕ್ಕೂ ಅಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಚಲನೆಯ ಈ ನಶ್ಚಿತ ವಿಧಾನವನ್ನೆ ‘ಲಯ’ ಎಂದು ಕರೆಯುವುದು. ಸಂಗೀತದಲ್ಲಿ ಇದೇ ‘ತಾಳ’ ಎನಿಸುತ್ತದೆ. ಲಯವೆಂಬುದು ಎಲ್ಲ ಜೀವಿಗಳಿಗೂ ಸಹಜ ಸ್ವಾಭಾವಿಕ. ಶರೀರದ ಅನಿವಾರ್ಯ ಕ್ರಿಯೆಗಳಾದ ಉಸಿರಾಟ, ಹೃದಯದ ಬಡಿತ ಮುಂತಾದವುಗಳಲ್ಲಿಯೂ ಇಂಥದೇ ಲಯ ಅಥವಾ ಪ್ರಮಾಣಬದ್ಧತೆಯನ್ನು ಕಾಣುತ್ತೇವೆ.

ಮನುಷ್ಯರ ಅಭಿರುಚಿಯನ್ನು ಉತ್ತಮಪಡಿಸಲು ಐದನೆಯ ವೇದವೊಂದನ್ನು ಸೃಷ್ಟಿಮಾಡು ಎಂದು ಬ್ರಹ್ಮನನ್ನು ದೇವತೆಗಳೇ ಬೇಡಿಕೊಂಡರಂತೆ. ನಾಟ್ಯವೇದವನ್ನು ಮೊದಲು ಬ್ರಹ್ಮನು ಭರತಮುನಿಗೆ ಹೇಳಿಕೊಟ್ಟ. ಭರತನು ಅಪ್ಸರೆಯರನ್ನೂ ಗಂಧರ್ವರನ್ನೂ ಗುಂಪು ಸೇರಿಸಿ ಅವರಿಗೆ ಶಿಕ್ಷಣ ಕೊಟ್ಟು ಶಿವನ ಮುಂದೆ ನರ್ತನ ಮಾಡಿಸಿದ. ಆಗ ಶಿವನಿಗೆ ಹಿಂದೆ ನರ್ತನದಲ್ಲಿ ತನಗಿದ್ದ ಪ್ರಾವೀಣ್ಯ ನೆನಪಾಯಿತು; ತನ್ನ ಗಣಗಳ ಮೂಲಕ ಭರತನಿಗೆ ನಾಟ್ಯಕಲೆಯ ಸೂಕ್ಷ್ಮ ಅಂಶಗಳನ್ನು ತಿಳಿಯಪಡಿಸಿದ ನೃತ್ಯದಲ್ಲಿ ತಾಂಡವ, ಲಾಸ್ಯ ಎಂದು ಎರಡು ಪ್ರಮುಖ ಭೇದಗಳು ಪೌರುಷಪ್ರಧಾನವಾದ ತಾಂಡವನ್ನು ಶಿವನಿಂದಲೂ ಲಾಲಿತ್ಯಪ್ರಧಾನವಾದ ಲಾಸ್ಯವನ್ನು ಪಾರ್ವತಿಯಿಂದಲೂ ಭರತನು ಕಲಿತು ತನ್ನ ಶಿಷ್ಯರಿಗೆ ಕಲಿಸಿದ. ಬ್ರಹ್ಮನು ಉಪದೇಶಿಸಿದ ‘ನಾಟ್ಯವೇದ’ ವನ್ನು ಆಧಾರವಾಗಿರಿಸಿಕೊಂಡು ಭರತಮುನಿ ರಚಿಸಿದ ಗ್ರಂಥ ‘ನಾಟ್ಯಶಾಸ್ತ್ರ’

ಐತಿಹಾಸಿಕ ದೃಷ್ಟಿಯಿಂದ ನೋಡಿದರೆ ಜಾನಪದ ನರ್ತನಗಳಿಗೆ ಶಾಸ್ತ್ರೀಯ ರೂಪಕೊಡಲು ನೆರವಾದ ಗ್ರಂಥ ‘ನಾಟ್ಯಶಾಸ್ತ್ರ’  ನರ್ತನ ಮಾತ್ರವಲ್ಲದೆ ಸಂಗೀತ, ಅಲಂಕಾರ ಶಾಸ್ತ್ರ ಮೊದಲಾದವಕ್ಕೂ ಆ ಗ್ರಂಥ ದಿಕ್ಸೂಚಿಯಾಯಿತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೊಂದು ಪ್ರಾಂತದಲ್ಲಿ ಒಂದೊಂದು ಜಾನಪದ ನರ್ತನಪ್ರಕಾರ ರೂಢಿಯಲ್ಲಿ ಬಂದಿತು. ಕರ್ನಾಟಕದಲ್ಲಿ ಸುಗ್ಗಿ ಕುಣಿತ, ಮಧ್ಯಪ್ರದೇಶದಲ್ಲಿ ಸಂತಾಲರ ನರ್ತನ, ಗುಜರಾತಿನಲ್ಲಿ ಗಾರ್ಬಾ, ರಾಜಸ್ಥಾನದಲ್ಲಿ ಬಂಜಾರಾ, ಪಂಜಾಬಿನಲ್ಲಿ ಬಾಂಗ್ರಾ-ಹೀಗೆ ಒಂದೊಂದು ಪ್ರಾಂತದಲ್ಲಿ ಒಂದೊಂದು ನರ್ತನಪ್ರಕಾರ ರೂಢಿಯಲ್ಲಿತ್ತು. ಜಾನಪದ ನರ್ತನಗಳು ಕಾಲಕ್ರಮದಲ್ಲಿ ಶಾಸ್ತ್ರೀಯ ರೂಪ ಪಡೆದುಕೊಂಡವು. ಜಾನಪದದಿಂದ ಜನಿಸಿದರೂ ಅದಕ್ಕಿಂತ ಹೆಚ್ಚು ಸಂಸ್ಕಾರಯುತವಾದವು, ಭರತನಾಟ್ಯ, ಕಥಕ್, ಕಥಕ್ಕಳಿ, ಕುಚಿಪುಡಿ, ಒಡಿಸ್ಸಿ, ಮಣಿಪುರಿ- ಈ ಶಾಸ್ತ್ರೀಯ ನರ್ತನಗಳು.

ಐತಿಹಾಸಿಕ, ಸಾಮಾಜಿಕ, ಪರಿಸರವನ್ನು ಅವಲಂಬಿಸಿ ನರ್ತನಕಲೆ ಒಮ್ಮೊಮ್ಮೆ ಉಚ್ಛ್ರಾಯದೆಶೆಯಲ್ಲಿರುತ್ತದೆ, ಒಮ್ಮೊಮ್ಮೆ ಕ್ಷೀಣದೆಶೆಯಲ್ಲಿರುತ್ತದೆ. ಈ ಶತಮಾನದ ಆರಂಭದಲ್ಲಿ ಹಲವಾರು ಕಾರಣಗಳಿಂದ ನರ್ತನಕಲೆ ತನ್ನ ಮಾನ್ಯತೆ ಕಳೆದುಕೊಂಡಿತ್ತು. ಅದರ ಪುನರುಜ್ಜೀವನಕ್ಕೆ ಕಾರಣರಾದವರಲ್ಲಿ ಪ್ರಮುಖರು, ವಲ್ಲತ್ತೋಳ್, ಉದಯ ಶಂಕರ್  ಮುಂತಾದವರು ನರ್ತನ ಹೀನವೃತ್ತಿ, ಅಸಭ್ಯವೃತ್ತಿ ಎಂದು ಜನ ಭಾವಿಸಿದ್ದರು. ಅದು ಶ್ರೇಷ್ಠಕಲೆಯೆನಿಸಲು ಉದಯಶಂಕರ್ ಮುಂತಾದವರ ಅವಿರತ ಶ್ರಮ ಕಾರಣವಾಯಿತು.

ಹಿಂದೆ ಬಹುಮಟ್ಟಿಗೆ ನೃತ್ಯ ಅಭ್ಯಾಸ ಮಾಡುತ್ತಿದ್ದವರು ಹೆಂಗಸರೇ. ನಮ್ಮ ದೇಶದಲ್ಲಿ ನಟರಾಜನನ್ನು ಪೂಜೆಸಿದ್ದಾರೆ, ನಿಜ. ಆದರೆ ಗಂಡಸರೂ ನೃತ್ಯ ಮಾಡಬಲ್ಲರೆಂಬ ಸಂಗತಿ ಸಾಮಾನ್ಯಜನರ ಅನುಭವಕ್ಕೆ ಬಂದದ್ದೇ ಉದಯಶಂಕರನನ್ನು ನೋಡಿದ ಮೇಲೆ ಎನ್ನಬಹುದು.

ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಭಾರತೀಯನೃತ್ಯ ಕಲಾವಿದರಲ್ಲಿ ಬಹುಶ- ಮೊಟ್ಟಮೊದಲನೆಯವರು ಉದಯ ಶಂಕರ್.

ಅಧ್ಯಯನ

ಉದಯಶಂಕರ್ ೧೯೦೦ರಲ್ಲಿ ಉದಯಪುರದಲ್ಲಿ ಹುಟ್ಟಿದರು. ಅವರ ತಂದೆ ರಾಜಸ್ಥಾನದ ಝಲವಾರಾ ಪ್ರಾಂತದಲ್ಲಿ ದಿವಾನರಾಗಿದ್ದರು. ಬಾಲ್ಯದಲ್ಲಿಯೇ ಕಲೆಯತ್ತ ಮನಸ್ಸಿನ ಒಲವನ್ನು ಪ್ರಕಟಿಸಿದ್ದ ಉದಯಶಂಕರರ ಶಿಕ್ಷಣಕ್ಕೆ ತಂದೆ ವಿಶೇಷ ಗಮನ ನೀಡಿದರು. ಉದಯ ಶಂಕರರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಪ್ರಾರಂಭದ ವಿದ್ಯಾಭ್ಯಾಸ ವಾರಣಾಸಿಯಲ್ಲಿ ನಡೆಯಿತು. ತರುವಾಯ ಮುಂಬಯಿಯ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದರು. ಉದಯಶಂಕರ್ ವಿದ್ಯಾರ್ಥಿದೆಶೆಯಲ್ಲಿದ್ದಾಗಲೇ, ಮೊದಲ ಮಹಾಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರ ನೆರವಿಗಾಗಿ ತಮ್ಮ ತಂದೆ ಸಂಗ್ರಹಿಸುತ್ತಿದ್ದ ನಿಧಿಗೆ ಹಣ ಕೂಡಿಸಲು ನಾಟಕವೊಂದನ್ನು ಆಡಿಸಿದರು. ಜೆ.ಜೆ.ಶಾಲೆಯ ಅಭ್ಯಾಸ ಮುಗಿದ ಮೇಲೆ ಚಿತ್ರಕಲೆ ಮತ್ತು ವಾಸ್ತುವಿನ್ಯಾಸದಲ್ಲಿ ಪ್ರೌಢಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ರಾಯಲ್ ಕಾಲೇಜ್ ಆಫ್ ಆರ್ಟ್ಸ್‌ಗೆ ಸೇರಿದರು.

ರಾಯಲ್ ಕಾಲೇಜಿನ ಪ್ರಾಚಾರ್ಯ ಸರ್ ವಿಲಿಯಂ ರಾದನ್‌ಸ್ಟೀನ್ ಅವರು ಚಿತ್ರಕಲೆಯಲ್ಲಿ ತುಂಬ ಕೀರ್ತಿಗಳಿಸಿದ್ದರು. ಅವರು, ‘‘ಭಾರತೀಯ ಸಂಸ್ಕೃತಿಯೂ ಕಲೆಯೂ ತುಂಬ ಶ್ರೀಮಂತವಾಗಿವೆ, ಭವ್ಯವಾಗಿವೆ. ನೀವು ಅವುಗಳಿಂದಲೇ ವಸ್ತುಗಳನ್ನಾರಿಸಿಕೊಂಡು ಚಿತ್ರಿಸಿ’’ ಎಂದು ಹುರಿದುಂಬಿಸಿದರು. ‘‘ನನ್ನ ಸಾಧನೆಗೆಲ್ಲ ಮುಖ್ಯ ಕಾರಣರಾದವರು ಆ ಮಹನೀಯರೇ’’ ಎಂದು ಉದಯ ಶಂಕರ್ ಪದೇ ಪದೇ ನೆನೆಯುತ್ತಿದ್ದರು.

ಚಿತ್ರಕಲಾಭ್ಯಾಸಕ್ಕೆ ಬದ್ಧರಾಗಿದ್ದ ಉದಯ ಶಂಕರರಲ್ಲಿ ನರ್ತನಕಲೆಯ ಬಗೆಗೆ ಉತ್ಸಾಹ ಚಿಗುರೊಡೆದದ್ದು ೧೯೨೨ರಲ್ಲಿ-ಅವರು ರಾಯಲ್ ಕಾಲೇಜಿನಲ್ಲಿ ಮೂರನೆಯ ವರ್ಷ ವ್ಯಾಸಂಗದಲ್ಲಿ ತೊಡಗಿದ್ದಾಗ. ಆ ವರ್ಷ ವೆಂಬ್ಲಿ ರಂಗಮಂಟಪದಲ್ಲಿ ಲೇಡಿ ದೊರಾಬ್ಜಿ ತಾತಾ ಅವರು ‘ಭಾರತದಿನ’ ಉತ್ಸವದ ಸಂದರ್ಭದಲ್ಲಿ ನೃತ್ಯಕಾರ್ಯವೊಂದನ್ನು ಏರ್ಪಡಿಸಿದ್ದರು. ಅದರಲ್ಲಿ ಉದಯಶಂಕರ್ ಆಕಸ್ಮಿಕವಾಗಿ ಭಾಗವಹಿಸಿದರು. ನರ್ತನ ಶಿಕ್ಷಣ ಇಲ್ಲದಿದ್ದರೂ ಉದಯ ಶಂಕರ್ ತುಂಬ ಭಾವಪೂರ್ಣವಾಗಿ, ಪರಿಣಾಮಕಾರಿಯಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಸಂದರ್ಭವೇ ಅವರ ನೃತ್ಯಜೀವನಕ್ಕೆ ನಾಂದಿಯಾಯಿತು.

ಉದಯಶಂಕರರು ಚಿತ್ರಕಲೆ, ಸಂಗೀತ, ವಸ್ತು ವಿನ್ಯಾಸ, ನೃತ್ಯಸಂಯೋಜನೆ ಮುಂತಾದ ಹಲವು ಕ್ಷೇತ್ರಗಳ ಮೇಲೆ ಪ್ರಭುತ್ವ ಸಾಧಿಸಿಕೊಂಡರು. ಚಿತ್ರಕಲೆಯಲ್ಲಿ ಅವರು ಪಡೆದ ದೀರ್ಘಕಾಲದ ತರಬೇತಿ ಅವರ ನೃತ್ಯ ಕಲೆಯ ಸಾಫಲ್ಯಕ್ಕೆ ನೆರವಾಯಿತು.

ಆನಾ ಪಾವ್ಲೊವಾ

ಚಿತ್ರಕಲೆಯಲ್ಲಿ ತೇರ್ಗಡೆಯಾದ ಮೇಲೆ ಉದಯ ಶಂಕರ್ ಅವರಿಗೆ ಆಕಸ್ಮಿಕವಾಗಿ ರಷ್ಯದ ಪ್ರಸಿದ್ಧ ಬ್ಯಾಲೆ ಕಲಾವಿದೆ ಆನಾ ಪಾವ್ಲೊವಾಳ (ಜನನ:೩.೧.೧೮೮೫; ನಿಧನ: ೨೩.೧.೧೯೩೧) ಭೇಟಿ ಆಯಿತು. ಪಾವ್ಲೊವಾ ಪರಿಚಯ ಉದಯ ಶಂಕರರ ಜೀವನಕ್ಕೆ ಹೊಸ ತಿರುವು ಕೊಟ್ಟಿತು. ಪಾವ್ಲೊವಾ ವಿಶ್ವವಿಖ್ಯಾತ ಬ್ಯಾಲೆನರ್ತಕ ವಾಸ್ಲಾವ್ ನಿಜಿನ್‌ಸ್ಕಿಯೊಡನೆ ನರ್ತಿಸಿದ್ದವಳು; ಬ್ಯಾಲೆಯ ಹೆಸರನ್ನೂ ಕೇಳಿರದ ಊರೂರು ಹಳ್ಳಿಹಳ್ಳಿಗೂ ನರ್ತನವನ್ನು ಒಯ್ಯಲು ಹಂಬಲಿಸಿದ್ದವಳು. ಸಂಚಾರಸೌಕರ್ಯಗಳಿಲ್ಲದ ಆ ಕಾಲದಲ್ಲಿ ಎಂಟುಲಕ್ಷ ಕಿಲೋಮೀಟರಿಗೂ ಹೆಚ್ಚು ಆಕೆ ಪಯಣಿಸಿದಳೆಂಬುದರಿಂದ ಆಕೆಯ ನರ್ತನೋತ್ಸಾಹವನ್ನು ಊಹಿಸಬಹುದು.

‘ಗೋಧಿಯ ಪೈರಿನ ಹೊಲದ ಮೇಲೆ ಬೀಸುವ ಮಾರುತ’ದಂತೆ ರಂಗಮಂಚದ ಮೇಲೆ ಹಾಯುತ್ತಿದ್ದಳಂತೆ, ಆನಾ ಪಾವ್ಲೊವಾ. ಅವಳ ನೃತ್ಯ ನೋಡಿ ಮೈ ಮರೆಯುತ್ತಿದ್ದ ಪ್ರೇಕ್ಷಕರಿಗೆ ಅವಳು ಸ್ವಪ್ನಲೋಕದ ಅಪ್ಸರೆಯಾಗಿ ಕಾಣುತ್ತಿದ್ದಳು. ‘ಸಾಯುತ್ತಿರುವ ಹಂಸ’ ಎಂಬ ನೃತ್ಯ ಆಕೆ ಪ್ರದರ್ಶಿಸುತ್ತಿದ್ದರೆ ಜಗತ್ತೆಲ್ಲ ದುಃಖಮಯವೆನಿಸಿಬಿಡುತ್ತಿತ್ತು.

ಪಾವ್ಲೊವಾಳ ಅಭ್ಯಾಸ ಕಠಿನ ರೀತಿಯದು. ಸೋಮಾರಿಗಳನ್ನು ಕಂಡರೆ ಆಕೆಗೆ ಮೈಯುರಿಯುತ್ತಿತ್ತು. ಅಭ್ಯಾಸ ಮಾಡುವಾಗ ಎಲ್ಲಾದರೂ ಹೆಜ್ಜೆತಪ್ಪಿದರೇ ತನ್ನನೇ ತಾನು ಹಳಿದುಕೊಳ್ಳುತ್ತಿದ್ದಳು.

ಪಾವ್ಲೊವಾ ಉದಯ ಶಂಕರನನ್ನು ನೋಡಿದಳು. ತಾನೇ ರಚಿಸಿದ್ದ ರಾಧಾಕೃಷ್ಣ ರೂಪಕದಲ್ಲಿ ಕೃಷ್ಣಪಾತ್ರದ ನರ್ತನಕ್ಕೆ ಉದಯ ಶಂಕರ್ ಹೊಂದಿಕೆಯಾಗುತ್ತಾರೆಂದು ಪಾವ್ಲೊವಾಳ ಮನಸ್ಸಿಗೆ ಬಂದಿತು. ಉದಯ ಶಂಕರರ ರಂಗಪ್ರವೇಶಕ್ಕೆ ಅದು ಕಾರಣವಾಯಿತು. ಆ ಬಗೆಗೆ ರಾದನ್‌ಸ್ಟೀನ್‌ರೊಡನೆ ಪಾವ್ಲೊವಾ ಮಾತಾಡಿದರು.

ಪಾ: ಉದಯಶಂಕರರಲ್ಲಿ ಒಳ್ಳೆಯ ನರ್ತನ ಪ್ರತಿಭೆ ಇದೆ. ನನ್ನ ನರ್ತನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರಿಗೆ ಅನುಮತಿ ಕೊಡಿ.

ರಾ: ಛೆಛೆ! ಎಲ್ಲಾದರೂ ಆದೀತೆ? ಆತ ಹುಟ್ಟಿನಿಂದ ಚಿತ್ರಕಲೆಯತ್ತ ಒಲಿದಿದ್ದಾನೆ, ಅದರ ಅಭ್ಯಾಸದಲ್ಲಿ ತುಂಬಾ ಆಸಕ್ತನಾಗಿದ್ದಾನೆ’’

ಪಾ: ‘‘ಆದರೆ ಆತನ ಮೈಕಟ್ಟು ನೋಡಿ, ನರ್ತನಕ್ಕಾಗಿಯೇ ಹೇಳಿಮಾಡಿಸಿದಂತಿದೆ’’

ರಾ: ಆಯಿತು, ನೀವು ಹಾಗೆ ಭಾವಿಸುವುದಾದರೆ ಆಗಲಿ ನಿಮ್ಮ ನೃತ್ಯ ತಂಡಕ್ಕೆ ಸೇರಿಸಿಕೊಳ್ಳಿ.

ಪಾವ್ಲೊವಾದ ನಿರೀಕ್ಷೆ ಸುಳ್ಳಾಗಲಿಲ್ಲ. ಹೊಂಬಣ್ಣದ ಮೈ, ನೈಜವಾದ ಲಯಬದ್ಧತೆ, ಲವಲವಿಕೆ ಪಡೆದಿದ್ದ ಉದಯ ಶಂಕರರು ತಾವು ದೀರ್ಘಕಾಲ ನರ್ತನಾಭ್ಯಾಸ ಮಾಡಿದ್ದವರೆಂದು ಅನಿಸುವಷ್ಟು ಸಫಲವಾಗಿ ‘ರಾಧಾಕೃಷ್ಣ’ ರೂಪಕದಲ್ಲಿ ಅಭಿನಯಿಸಿದರು. ಲಂಡನ್ನಿನ ಕೊವೆಂಟ್ ಗಾರ್ಡನ್ನಿನ ರಾಯಲ್ ಅಪೆರಾ ಹೌಸ್‌ನಲ್ಲಿ ಅಭಿನಯಿಸಲಾದ ಆ ನೃತ್ಯರೂಪಕ ಅಭೂತಪೂರ್ವವೆನಿಸಿತು. ‘ರಾಧಾಕೃಷ್ಣ’ದ ಜೊತೆಗೆ ‘ರಜಪೂತ ವಿವಾಹ’ ಎಂಬ ರೂಪಕವನ್ನೂ ಸೇರಿಸಿ ಓರಿಯೆಂಟಲ್ ಇಂಪ್ರೆಶನ್ಸ್ (ಪೂರ್ವದೇಶಗಳ ಪ್ರಸಂಗಗಳು) ಎಂದು ಆ ಕಾರ್ಯಕ್ರಮವನ್ನು ಕರೆಯಲಾಗಿತ್ತು.

ಪಾವ್ಲೊವಾ ಉದಯ ಶಂಕರ್ ತಂಡ ಒಂಬತ್ತು ತಿಂಗಳ ಕಾಲ ಬ್ರಿಟಿಷ್, ಕೊಲಂಬಿಯ, ಮೆಕ್ಸಿಕೊ ಅಮೆರಿಕಾಗಳಲ್ಲೂ ಸಂಚರಿಸಿ ಅಸಂಖ್ಯ ಪ್ರದರ್ಶನಗಳನ್ನು ನೀಡಿತು. ಅಲ್ಲಿಂದಾಚೆಗೆ ೧೧ ವರ್ಷಕಾಲ ಉದಯ ಶಂಕರರು ಲಂಡನ್ನಿನಲ್ಲೆ ವಾಸ್ತವ್ಯ ಹೂಡಿದರು. ೧೯೬೮ರಲ್ಲಿ ಪಾವ್ಲೊವಾರೊಡನೆ ಭಾರತಕ್ಕೆ ಬಂದು ಅವರು ನೀಡಿದ ಪ್ರದರ್ಶನಗಳಿಂದ ಅವರ ಪ್ರತಿಭೆ ಜನಜನಿತವಾಯಿತು. ಮುಂಬಯಿ, ದೆಹಲಿ, ಕಲ್ಕತ್ತ ಮುಂತಾದೆಡೆ ಪಾವ್ಲೊವಾ-ಉದಯ ಶಂಕರ್ ತಂಡ ಪ್ರದರ್ಶಿಸಿದ ‘ರಾಧಾ-ಕೃಷ್ಣ’ ನೃತ್ಯರೂಪಕ ಜನರನ್ನು ವಿಸ್ಮಯಗೊಳಿಸಿತು. ರಾಧೆಯಾಗಿ ಪಾವ್ಲೊವಾ, ಕೃಷ್ಣನಾಗಿ ಉದಯ ಶಂಕರ್ ನೀಡಿದ ಅಭಿನಯ ಇತಿಹಾಸಾರ್ಹ ವೆನಿಸಿತು.

ನೃತ್ಯರೂಪಕ

ಪೌರಾಣಿಕ ಅಥವಾ ಐತಿಹಾಸಿಕ ಪ್ರಸಂಗವೊಂದನ್ನು ಅಭಿನಯದ ಮೂಲಕ ಪ್ರದರ್ಶಿಸುವುದಕ್ಕೆ ಬ್ಯಾಲೆ (ಅಥವಾ ನೃತ್ಯರೂಪಕ) ಎಂದು ಕರೆಯುತ್ತಾರೆ. ಈ ಶತಮಾನದ ಆರಂಭದಲ್ಲಿ ಅಮೆರಿಕದ ಪ್ರತಿಭಾವಂತ ಕಲಾವಿದೆ ಇಸಾಡೊರಾ ಡಂಕನ್ ಎಂಬಾಕೆ ಬ್ಯಾಲೆಗೆ ಹೊಸ ರೂಪ ಕೊಟ್ಟಳು. ಷೊಪ್ಞಾ ಮುಂತಾದವರ ಸಂಗೀತಕೃತಿಗಳನ್ನು ಬಳಸಿಕೊಂಡು ಆಕೆ ವಿನ್ಯಾಸಗೊಳಿಸಿದ ನರ್ತನ ಪಾಶ್ಚಾತ್ಯ ಜಗತ್ತಿನಲ್ಲೆಲ್ಲ ಮೆಚ್ಚಿಕೆ ಗಳಿಸಿತು. ಭಾರತದಲ್ಲಾದರೋ ರಾಮಾಯಣ, ಮಹಾಭಾರತ, ಭಾಗವತಗಳ ಮತ್ತು ಪುರಾಣಗಳ ಪ್ರಸಂಗಗಳನ್ನು ಅಭಿನಯಿಸುವ ರೂಢಿಯು ಕಥಕ್ಕಳಿ ಮುಂತಾದ ನೃತ್ಯಪ್ರಕಾರಗಳಲ್ಲಿ ಬಹು ಕಾಲದಿಂದ ನಡೆದುಬಂದಿತ್ತು. ಭಾರತದ ಗೇಯನೃತ್ಯ ರೂಪಕವನ್ನು ಪಾಶ್ಚಾತ್ಯರ ಗಮನಕ್ಕೆ ತಂದವರಲ್ಲಿ ಐರೋಪ್ಯ ನರ್ತಕಿ ರುತ್ ಸೆಯಿಂಟ್ ಡೆನಿಸ್ ಮೊದಲಿಗಳು. ಅಲ್ಲಿಂದೀಚೆಗೆ ಉದಯ ಶಂಕರರ ಒಡಗೂಡಿ ಖ್ಯಾತ ನರ್ತಕಿ ಆನಾ ಪಾವ್ಲೊವಾ ಭಾರತೀಯ ನೃತ್ಯರೂಪಕಗಳನ್ನು ಅಭಿನಯಿಸಿದಾಗ ಪಾಶ್ಚಾತ್ಯ ಜಗತ್ತೆಲ್ಲ ನಿಬ್ಬೆರಗಾಯಿತು. ಪೌರಾಣಿಕ ವಸ್ತುಗಳನ್ನುಳ್ಳ ನೃತ್ಯರೂಪಕಗಳು ಯೂರೋಪಿನಲ್ಲಿ ವಿರಳವೆಂದೇ ಹೇಳಬೇಕು. ಇದರಿಂದಾಗಿ ಉದಯ ಶಂಕರ-ಪಾವ್ಲೊವಾರ ಶಿವಪಾರ್ವತೀ ನೃತ್ಯ, ರಾಧಾಕೃಷ್ಣ ನೃತ್ಯ ಮುಂತಾದವುಗಳು ಪಾಶ್ಚಾತ್ಯರನ್ನು ಮುಗ್ದಗೊಳಿಸಿದ್ದು ಸಹಜ.

ಹೊಸ ವಸ್ತು, ಹೊಸ ವಿನ್ಯಾಸ

ಪೌರಾಣಿಕ ರೂಪಕಗಳನ್ನು ಯೂರೋಪಿನಲ್ಲಿ ಪ್ರಚುರಗೊಳಿಸಿದ ಉದಯ ಶಂಕರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮಕಾಲೀನ ವಸ್ತುಗಳನ್ನು ಕುರಿತೂ ನೃತ್ಯರೂಪಕಗಳನ್ನು ಸೃಷ್ಟಿಸಿದರು. ‘ಜೀವನದ ಲಯವಂತಿಕೆ’ (ರಿದ್‌ಮ್ ಆಫ್ ಲೈಫ್) ಇಂಥವುಗಳಲ್ಲೊಂದು. ವಿವಿಧ ಜನವರ್ಗಗಳ ಪರಿಸ್ಥಿತಿ, ವಿಶಿಷ್ಟ ಸಮಸ್ಯೆಗಳು ಮುಂತಾದವು ಈ ರೂಪಕದ ವಿಷಯ. ಪಟ್ಟಣದಿಂದ ಒಬ್ಬ ತರುಣ ಹಳ್ಳಿಗೆ ಹೋಗುತ್ತಾನೆ. ಹಳ್ಳಿಯ ಜನರ ಸರಳತೆ ಪ್ರಾಮಾಣಿಕತೆಗಳಿಗೂ ಪಟ್ಟಣಗಳವರ ಕಪಟ ಕೃತ್ರಿಮಗಳಿಗೂ ಇರುವ ಅಂತರ ಕಂಡು ಅವನು ಚಿಂತೆಗೊಳಗಾಗುತತಾನೆ. ಅಪ್ಸರೆಯರ ನೃತ್ಯ ಮುಂತಾದ ವೈಭವಗಳು ಎಲ್ಲ ಚಿಂತೆಯನ್ನೂ ಮರೆಸುವಂತೆ ಒಂದು ಕನಸು ಬೀಳುತ್ತದೆ ಅವನಿಗೆ. ಬಡ ಗ್ರಾಮೀಣರ ಸಮಸ್ಯೆಗಳನ್ನೆಲ್ಲ ನಾನು ಪರಿಹರಿಸುತ್ತೇನೆ ಎಂದು ಆಶ್ವಾಸನೆ ಕೊಡುವ ಅತಿಮಾನವನೊಬ್ಬನ ದರ್ಶನವೂ ಆಗುತ್ತದೆ. ರಾಷ್ಟ್ರೀಯ ಆಂದೋಲನದಲ್ಲಿ ಒಂದು ಕಡೆ ಹೆಂಗಸರೂ ಕೂಡ ಎಚ್ಚೆತ್ತು ದೇಶಕ್ಕಾಗಿ ಸರ್ವತ್ಯಾಗ ಮಾಡುವ ಚಿತ್ರ ಕಂಡರೆ ಇನ್ನೊಂದು ಕಡೆ ಸುಳ್ಳು, ಆಡಂಬರ, ಕಪಟ ನಾಟಕಗಳೂ ಕಣ್ಣಿಗೆ ಬೀಳುತ್ತವೆ. ಆದರೂ ರಾಷ್ಟ್ರಭಕ್ತರಿಂದ ನಿಜವಾಗಿ ದೇಶೋದ್ದಾರ ಆಗುತ್ತದೆಂಬ ಅವನ ನಂಬಿಕೆ ಮುಂದುವರಿಯುತ್ತದೆ. ಪರ್ಯವಸಾನದಲ್ಲಿ ಸಮಸ್ಯೆ ಬಗೆಹರಿಯದೆ ಎಲ್ಲೆಡೆ ಅಸ್ತವ್ಯಸ್ತತೆ ಕಂಡರೂ ಭರವಸೆಯ ಆಶಾಕಿರಣ ಮಾಸಿರುವುದಿಲ್ಲ.

ಅಲ್ಲಿಂದೀಚೆಗೆ ಉದಯ ಶಂಕರ್ ಅವರು ಕಾರ್ಮಿಕ ವರ್ಗ, ಯಂತ್ರೋದ್ಯಮಗಳನ್ನು ಕೇಂದ್ರವಾಗಿರಿಸಿಕೊಂಡು ‘ದುಡಿತ ಮತ್ತು ಯಂತ್ರ’ ಎಂಬ ಇನ್ನೊಂದು ರೂಪಕವನ್ನು ರಚಿಸಿದರು. ಭಾರತ ಬಹು ವಿಶಾಲವಾದ ದೇಶ, ಜನ ಹಲವು ರಾಜ್ಯಗಳಲ್ಲಿ ವಾಸಿಸುತ್ತಾರೆ. ಅವರು ಹಲವು ಧರ್ಮಗಳಿಗೆ ಸೇರಿದವರು, ಹಲವು ಭಾಷೆಗಳನ್ನಾಡುತ್ತಾರೆ. ಹಲವು ಬಗೆಯ ಉಡುಗೆ ತೊಡಿಗೆಗಳನ್ನು ಧರಿಸುತ್ತಾರೆ. ಆದರೆ ಅವರು ಒಂದೇ ಜನಾಂಗ, ಅವರ ಸಂಸ್ಕೃತಿ ಒಂದೇ. ಇದನ್ನು ಉದಯಶಂಕರರು ‘ಬಾಳಿನ ಲಯ’ ಎಂಬ ಬ್ಯಾಲೆಯಲ್ಲಿ ನಿರೂಪಿಸಿದ್ದಾರೆ. ಹೀಗೆ ಭಾರತೀಯ ನರ್ತನಕಲೆಯನ್ನು ನವೀಕರಿಸಿ ಅದರ ಸಮಕಾಲೀನ ಮೌಲ್ಯವನ್ನು ಹೆಚ್ಚಿಸಿದ್ದು ಉದಯ ಶಂಕರರ ಒಂದು ದೊಡ್ಡ ಸಾಧನೆ

ಶ್ರದ್ಧೆ, ಉತ್ಸಾಹ

ಆನಾ ಪಾವ್ಲೊವಾರೊಡನೆ ಪ್ರಪಂಚ ಪರ್ಯಟನೆ ಮಾಡಿದ ಉದಯ ಶಂಕರರಿಗೆ ತಮ್ಮ ಕಲೆಯ ಬಗೆಗೆ ಶ್ರದ್ಧೆ ಮತ್ತಷ್ಟು ಹೆಚ್ಚಿತು. ‘ಪಾವ್ಲೊವಾರ ಸಹವಾಸದಿಂದ ನಾನು ಕಲಿತಿದ್ದು ಇದು. ಕೇವಲ ಕನಸು ಕಾಣುತ್ತ ಸುಮ್ಮನಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ. ಒಂದೊಂದು ಭಾವನೆಯನ್ನು ಕ್ರಮಕ್ರಮವಾಗಿ ಪ್ರತ್ಯಕ್ಷಗೊಳಿಸಲು ಶ್ರಮಿಸಬೇಕು.’’

ಚಿತ್ರಕಲೆ ಕಲಿಯಲು ಇಂಗ್ಲೆಂಡಿಗೆ ಹೋದ ಉದಯ ಶಂಕರ್, ಪಾವ್ಲೊವಾರ ಸಂಗಡಿಕೆಯಿಂದಾಗಿ ನರ್ತಕರಾಗಿ ಮರಳಿದರು. ‘‘ಗೋದಿಯ ಪೈರಿನ ಹೊಲದ ಮೇಲೆ ಬೀಸುವ  ಮಾರುತದಂತೆ ನನ್ನ ಜೀವನದ ದಿಕ್ಕನ್ನು ಪಾವ್ಲೊವಾ ಬದಲಿಸಿದಳು’’ ಎಂದಿದ್ದಾರೆ ಉದಯ ಶಂಕರ್. ಈ ಹಿನ್ನೆಲೆಯಲ್ಲಿ ಉದಯ ಶಂಕರ್ ಶಾಸ್ತ್ರೀಯ ತಳಹದಿಯ ಭಾರತೀಯ ಬ್ಯಾಲೆಯ ಜನಕರೆನಿಸಿದರು.

ಭಾರತದಲ್ಲಾಗಲಿ ಲಂಡನ್ನಿನಲ್ಲಾಗಲಿ, ಶಾಸ್ತ್ರೀಯ ನೃತ್ಯಾಭ್ಯಾಸ ತುಂಬ ಕಟ್ಟುನಿಟ್ಟಿನ ಶಿಸ್ತಿನಿಂದ ಕೂಡಿದ್ದು. ಧಾರ್ಮಿಕ ಹಿನ್ನೆಲೆಯಂತೂ ಈ ಶಿಕ್ಷಣ ತಪಸ್ಸಿನ ರೂಪ ತಳೆಯುತ್ತದೆ. ಗುರು-ಶಿಷ್ಯೆ ಪರಂಪರೆಗೆ ಇಲ್ಲಿ ವಿಶೇಷ ಮಹತ್ವ.

ಪರಂಪರೆಗೆ ಭಂಗತಾರದಂತೆ ಕಥಕ್ಕಳಿ, ಮಣಿಪುರಿ ಮುಂತಾದ ಬೇರೆಬೇರೆ ಶೈಲಿಗಳ ಆಕರ್ಷಕ ಅಂಶಗಳನ್ನೆಲ್ಲ ಬಳಸಿಕೊಂಡು ಉದಯ ಶಂಕರರು ನಾವೀನ್ಯಭರಿತವಾಗಿ ರೂಪಿಸಿ ಪ್ರದರ್ಶಿಸಿದ ಕಾರ್ತಿಕೇಯ, ಶಿವತಾಂಡವ -ಶಿವಪಾರ್ವತಿ ನೃತ್ಯದ್ವಯ, ಇಂದ್ರ, ಪ್ರಮೀಳಾರ್ಜುನ, ಶಾಶ್ವತ ರಾಗ ಮುಂತಾದ ಹೊಸ ರೂಪಕಗಳು ಉದಯ ಶಂಕರರಿಗೂ ಭಾರತೀಯ ನೃತ್ಯಕಲೆಗೂ ವಿಶೇಷ ಕೀರ್ತಿ ತಂದವು.

ಭಾರತದ ಹಲವಾರೆಡೆ ಹರೇನ್ ಘೋಷ್ ಅವರು ಉದಯ ಶಂಕರರ ನೃತ್ಯಕಾರ್ಯಕ್ರಮಗಳನ್ನು ಏರ್ಪಡಿಸಿದರು. ಉದಯ ಶಂಕರರ ನೃತ್ಯಕಾರ್ಯಕ್ರಮಗಳನ್ನು ಏರ್ಪಡಿಸಿದರು. ಉದಯ ಶಂಕರರ ಹೆಸರು ನಾಡಿನಲ್ಲೆಲ್ಲ ಮನೆ ಮಾತಾಯಿತು. ಸಾಧನಾಬೋಸ್, ಬಾಸಸರಸ್ವತಿ, ರುಕ್ಮಿಣಿದೇವಿ ಮುಂತಾದವರ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಿದವರೂ ಹರೇನ್‌ಘೋಷ್‌ರವರೇ.

ಉದಯ ಶಂಕರರ ನರ್ತನ ಹಲವು ವಿವಾದಗಳಿಗೂ ಎಡೆಗೊಟ್ಟಿತು. ಭಾರತೀಯ ಶಿವತಾಂಡವ, ಕಾಳೀಯ ಮರ್ದನ ಮುಂತಾದ ನರ್ತನಗಳನ್ನು ಮೆಚ್ಚಿದ್ದು ಸ್ವಾಭಾವಿಕ. ಆದರೆ ಸುಗ್ಗಿ ಕುಣಿತ, ಬೇಡರ ಕುಣಿತ, ಹಾವಿನ ಕುಣಿತ ಮುಂತಾದವನ್ನು ಉದಯಶಂಕರರು ರಂಗಕ್ಕೆ ತಂದಾಗ ಮಡಿವಂತರು ಅದನ್ನು ಅಶಾಸ್ತ್ರೀಯವೆಂದರು. ಆದರೆ ಕ್ರಮೇಣ ಉದಯ ಶಂಕರರ ಪ್ರಯೋಗಗಳು ಜನರ ಮನ್ನಣೆ ಸಂಪಾದಿಸಿಕೊಂಡವು ಮಾತ್ರವಲ್ಲ, ಭಾರತೀಯ ನೃತ್ಯಕಲೆಯ ನವೋದಯಕ್ಕೆ ಕಾರಣರಾದರೆಂಬ ಕೀರ್ತಿಯನ್ನು ಉದಯ ಶಂಕರರಿಗೆ ತಂದುಕೊಟ್ಟವು.

ಉದಯ ಶಂಕರರ ಯಶಸ್ಸಿನ ಮೂಲವಿರುವುದು, ಅವರ ನೈಜ ಕಲಾವೇಶದಲ್ಲಿ ಅಸಾಧಾರಣ ಶ್ರದ್ಧಾವಂತಿಕೆಯಲ್ಲಿ. ‘‘ರಂಗದ ಮೇಲಿದ್ದಾಗ ನನಗೆ ದೇವಾಲಯದಲ್ಲಿದ್ದೇನೆಂಬ, ಪೂಜೆಯಲ್ಲಿ ತೊಡಗಿದ್ದೇನೆಂಬ ಭಾವನೆ ಉಂಟಾಗುತ್ತದೆ’’ ಎಂದು ಅವರು ಒಂದೆಡೆ ಹೇಳಿದರು.

ಪ್ರೇಕ್ಷಕರ ಅನುಭವ

ಅಮೆರಿಕದಲ್ಲಿ ಪಾವ್ಲೊವಾ-ಉದಯ ಶಂಕರ್ ತಂಡದ ನೃತ್ಯ ಎಷ್ಟು ಪ್ರಸಿದ್ಧಿ ಪಡೆಯಿತೆಂದು ವರ್ಣಿಸಲು ಮಾತುಗಳು ಸಾಲದು. ಅಮೆರಿಕದ ಜನತೆಗೆ ಉದಯ ಶಂಕರರ ಕಲೆಯ ಪರಿಚಯ. ದೊರಕಿಸಲು ನೆರವಾದ ಒಬ್ಬರು ಅಂದಿನ ಜಗತ್ಪ್ರಸಿದ್ಧ ಕಾರ್ಯಕ್ರಮ ಯೋಜಕರಲ್ಲೊಬ್ಬರಾದ (ಇಂಪ್ರಸೇರಿಯೊ) ಎಸ್.ಹ್ಯುರೊಕ್ ಎಂಬವರು. ಆತ ಲಂಡನ್ನಿನಲ್ಲೂ ಪ್ಯಾರಿಸಿನಲ್ಲೂ ಉದಯಶಂಕರರ ಪ್ರತಿಭೆಯನ್ನು ಕಣ್ಣಾರೆ ಕಂಡಿದ್ದರು. ಉದಯ ಶಂಕರರೊಡನೆ ಸಂಪರ್ಕ ಬೆಳಸಿ, ‘‘ನೀವು ಅಮೆರಿಕದಲ್ಲಿ ಪ್ರದರ್ಶನಗಳನ್ನು ನೀಡಿದರೆ ತುಂಬ ಜನಪ್ರಿಯವಾಗುತ್ತದೆ’’ ಎಂದರು.

ಆ ವೇಳೆಗೆ ‘ಶಿವತಾಂಡವ’, ‘ಕಾರ್ತಿಕೇಯ’ ಮುಂತಾದ ಹಲವಾರು ರೂಪಕಗಳ ಅಭಿನಯದಲ್ಲಿ ಉದಯ ಶಂಕರರ ತಂಡ ನುರಿತಿತ್ತು. ಹೋದೆಡೆಯಲ್ಲೆಲ್ಲ ಅವರು ಜನರನ್ನು ಮೋಹಗೊಳಿಸಿದರು. ಉದಯ ಶಂಕರರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಕೆಲವರು ಕರೆದರೆ ಹಿಂದೂ ದೇವತೆ ಎಂದೇ ಕೆಲವರು ಕೊಂಡಾಡಿದರು.

ಹ್ಯುರೊಕ್ ಅವರು ಹೇಳಿರುವಂತೆ: ‘‘ಉದಯ ಶಂಕರರ ಸಮಯಪ್ರಜ್ಞೆ ಅಸಾಧಾರಣ. ಭಾರತದ ಇತಿಹಾಸ-ಸಂಸ್ಕೃತಿಗಳ ಪರಿಜ್ಞಾನ, ಪೌರಾಣಿಕ ಪ್ರಸಂಗಗಳನ್ನು ಪ್ರತ್ಯಕ್ಷಗೊಳಿಸುವ ಸಾಮರ್ಥ್ಯ, ಆ ಕಥೆಗಳ ಅಲೌಕಿಕ ಪರಿಸರದ ಪುನಃಸೃಷ್ಟಿ, ನರ್ತನ ಗಾಯನ ಯೋಜನ ಪ್ರತಿಭೆ-ಇವೆಲ್ಲದರ ಜೊತೆಗೆ ಪಾಶ್ಚಾತ್ಯ ರಂಗ ಪ್ರೇಕ್ಷಕರ ಮನೋವೃತ್ತಿಯ ಗ್ರಹಿಕೆ ಹಾಗೂ ಅಲ್ಲಿಯ ಕಾಲಪರಿಮಿತಿಗೆ ಹೊಂದಿಕೊಳ್ಳುವ ಜಾಣ್ಮೆ-ಇದನ್ನೆಲ್ಲ ಮೈಗೂಡಿಸಿಕೊಂಡಿದ್ದ ಶಂಕರ್ ಶ್ರೇಷ್ಠವರ್ಗದ ಪ್ರದರ್ಶಕರೆನಿಸಿದರು.’’

ಪಾಶ್ಚಾತ್ಯ ಪ್ರೇಕ್ಷಕರು ಉದಯ ಶಂಕರರಿಂದ ಎಷ್ಟು ಪ್ರಭಾವಿತರಾದರೆಂದರೆ ಎಷ್ಟೋ ಮಂದಿ ಅವರನ್ನು ಮುಟ್ಟಬಯಸಿದರು- ಆ ದೇಹ ನಿಜವಾಗಿ ಚರ್ಮಮಾಂಸಗಳಿಂದ ಮಾಡಿದ್ದೇ? ಎಂದು ಉದ್ಗರಿಸಿದರು.

ಉದಯ ಶಂಕರರ ನರ್ತನ ನೋಡಿ ಖ್ಯಾತ ಲೇಖಕ ಜೇಮ್ಸ್ ಜಾಯ್ಸ್ ತಮ್ಮ ಮಗಳಿಗೆ ಹೀಗೆ ಪತ್ರ ಬರೆದರು: ‘‘ರಂಗದ ಮೇಲೆ ಈತ ಒಬ್ಬ ಗಂಧರ್ವನಂತೆ ಚಲಿಸುತ್ತಾನೆ…..ಎಷ್ಟೋ ಕೋಟಲೆಗಳಿಗೆ ಸಿಕ್ಕಿರುವ ಈ ಪ್ರಪಂಚದಲ್ಲಿ ಇನ್ನೂ ಕೆಲವು ಸೌಂದರ್ಯಾಂಶಗಳು ಉಳಿದಿವೆ ಎನಿಸುತ್ತದೆ, ಈ ನೃತ್ಯ ನೋಡಿದಾಗ.’’

ಉದಯ ಶಂಕರರ ಅನುಭವ

ಅಮೆರಿಕದ ಅನುಭವವನ್ನು ಉದಯ ಶಂಕರರ ಮಾತುಗಳಲ್ಲೆ ಕೇಳೋಣ: ‘ಮುಂಬಯಿಯಿಂದ ಲಂಡನ್ನಿಗೆ ಹೋದದ್ದು ಒಂದು ಮೆಟ್ಟಲೇರಿದಂತಾದರೆ, ಲಂಡನ್ನಿನಿಂದ ನ್ಯೂಯಾರ‍್ಕಿಗೆ ಹೋದದ್ದು ಒಮ್ಮೆಗೆ ಮೂವತ್ತೊ ನಲವತ್ತೊ ಮೆಟ್ಟಿಲುಗಳೆತ್ತರ ಜಿಗಿದಂತಾಯಿತು….

‘‘ನಗರದಲ್ಲಿ ಎತ್ತ ಕಣ್ಣು ತಿರುಗಿಸಿದರೂ ಪಾವ್ಲೊವಾ ಪ್ರದರ್ಶನದ ಭಿತ್ತಿಪತ್ರಗಳೇ. ‘ಭಾರತೀಯ ವಿವಾಹ’ ಮತ್ತು ‘ರಾಧಾ-ಕೃಷ್ಣ’  ರೂಪಕಗಳನ್ನು ಪ್ರದರ್ಶಿಸುವುದಾಗಿ ಪ್ರಕಟಿಸಿದ್ದರು, ನನ್ನ ಹೆಸರನ್ನೂ ಸೇರಿಸಿದ್ದರು. ನನಗೆ ಏಕೊ ಎದೆ ನಡುಗುತಿತ್ತು. ಆದರೆ ಮೊದಲ ಪ್ರದರ್ಶನವಾದೊಡನೆ ಗಾಬರಿ ಮರೆಯಾಗಿ ಆತ್ಮವಿಶ್ವಾಸ ಮೂಡಿತು…

ಅಮೆರಿಕದಲ್ಲಿ ಪಾವ್ಲೊವಾ ಎಷ್ಟು ಜನಪ್ರಿಯರಾಗಿ ದ್ದಾರೆಂಬುದನ್ನು ಕಣ್ಣಿಂದ ನೋಡಿಯೇ ತಿಳಿಯಬೇಕು. ಊರಿಂದ ಊರಿಗೆ ನಮ್ಮನ್ನು ವಿಶೇಷ ರೈಲು ಗಾಡಿ ಒಯ್ಯುತ್ತಿತ್ತು. ರೈಲಿನ ಮೇಲೆ ಬಂಗಾರದ ಅಕ್ಷರಗಳಲ್ಲಿ ‘ಪಾವ್ಲೊವಾ ಎಕ್ಸ್‌ಪ್ರೆಸ್’  ಎಂದು ಬರೆಯಲಾಗಿತ್ತು….

‘‘ಬ್ಯಾಲೆಯ ಕೆಲವು ಸಣ್ಣ ಗೌಣ ಪಾತ್ರಗಳ ನಿರ್ವಹಣೆಯನ್ನು ನಾನು ಕಲಿತರೆ ತಂಡದ ವೆಚ್ಚ ಕಡಿಮೆ ಮಾಡಬಹುದೆಂದು ನನಗೆ ತೋರಿತು; ಪಾವ್ಲೊವಾರಿಗೆ ಸೂಚಿಸಿದೆ. ಅವರ ಪ್ರತಿಕ್ರಿಯೆ ನಾನು ನಿರೀಕ್ಷಿಸಿದ್ದಕ್ಕೆ ವಿರುದ್ಧವಾಗಿತ್ತು. ಆಕೆ ಅಂದರು: ‘ನಮ್ಮ ಶೈಲಿಯ ನೃತ್ಯ ನೀನೇಕೆ ಕಲಿಯಬೇಕು? ನಿನ್ನ ದೇಶದಲ್ಲಿ ಕಲೆಯ ಎಂಥ ಅಮೂಲ್ಯವಾದ ನಿಧಿ ಇದೆಯೆಂದು ನಿನಗೆ ತಿಳಿಯದೆ? ಭಾರತದ ಸಂಗೀತ-ನರ್ತನಗಳು ಅಪರೂಪವಾದವು, ಅತ್ಯಂತ ಸುಂದರವಾದವು. ಪಾಶ್ಚಾತ್ಯರಾದ ನಮಗೆ ಅದರ ಬಗೆಗೆ ಏನೂ ತಿಳಿಯದು….ನಿನ್ನ ನರ್ತನದಲ್ಲಿ ದೇಹ-ಆತ್ಮಗಳನ್ನು ಸಮರಗೊಳಿಸುವ ಆಧ್ಯಾತ್ಮಿಕ ಪರಿಸರವಿದೆ. ನಿನ್ನನ್ನು ನೋಡಿದೊಡನೆ ಭಾರತದಿಂದ ಈ ಕಲಾಸಂಪತ್ತನ್ನು ನಮಗೆ ತಂದು ಕೊಡಬಲ್ಲವನು ನೀನೆ ಎಂದು ನನಗನಿಸಿತು. ಇದರಲ್ಲಿ ನಿನಗೆ ಒಳ್ಳೆಯ ಭವಿಷ್ಯ ಇದೆ’ ….

‘‘ಯಾವ ಹೊಸ ಊರಿಗೆ ಹೋದರೂ ನಾನು ಮೊದಲು ಮಾಡುತ್ತಿದ್ದ. ಕೆಲಸ ಕಲಾಗಾರಗಳನ್ನೂ ಗ್ರಂಥ ಭಂಡಾರಗಳನ್ನೂ ನೋಡುವುದು. ಬೆಳಿಗ್ಗೆ ಉಪಹಾರವಾದೊಡನೆ ಹೊರಟು ದಿನವೆಲ್ಲ ಆ ಚಿತ್ರಶಾಲೆ  ಗ್ರಂಥಾಗಾರಗಳಲ್ಲಿ ಕಳೆದು ಮಧ್ಯಾಹ್ನ ಎಲ್ಲಿಯೊ ಊಟಮಾಡಿ ಸಂಜೆ ಪ್ರದರ್ಶನದ ವೇಳೆಗೆ ರಂಗಮಂಟಪಕ್ಕೆ ಬರುತ್ತಿದ್ದೆ. ಎಲ್ಲಿಯೂ ಒಂದು ಕಲಾಗಾರವನ್ನು ನಾನು ನೋಡದಿರಲಿಲ್ಲ….

‘‘ನಮ್ಮ ನಿಯತ ಕಾರ್ಯಕ್ರಮ ಕೆಲವೊಮ್ಮೆ ಬದಲಾಗಬೇಕಾಗುತ್ತಿತ್ತು. ಅಮೆರಿಕದಲ್ಲಿ ಚಲಿಸುತ್ತಿರುವ ರೈಲಿನಲ್ಲೇ ತಂತಿಗಳನ್ನು ತಲಪಿಸುವ ವ್ಯವಸ್ಥೆಯಿದೆ. ಒಂದೊಂದು ಸಲ ‘ಆ ಊರಿನ ರಂಗಮಂಟಪ ನಿಮ್ಮಷ್ಟು ದೊಡ್ಡ ತಂಡಕ್ಕೆ ಸಾಲದು’ ಎಂಬ ತಂತಿ ಬರುತ್ತಿತ್ತು. ತಂತಿ ಬಂದೊಡನೆ ನಮ್ಮ ಎದೆಬಡಿತ ಜೋರಾಗುತ್ತಿತ್ತು; ಹೋಗಲಿರುವ ಊರಿನ ರಂಗಸ್ಥಳಕ್ಕೆ ಅಳವಡಿಸಲಾಗುವಂತೆ ಕಾರ್ಯಕ್ರಮವನ್ನು ಬದಲಾಯಿಸಲಾಗುತ್ತಿತ್ತು. ಒಡನಂಯೇ ತಾಲೀಮು ಆರಂಭ-ಚಲಿಸುವ ರೈಲಿನಲ್ಲಿಯೇ ಸಂಗೀತ ನಿರ್ದೇಶಕ ಹಾಡತೊಡಗುವನು, ನಟನಟಿಯರು ಅಭಿನಯಿಸತೊಡಗುವರು. ನಿಲ್ದಾಣಗಳಲ್ಲಿ ಅವಕಾಶವಾದರೆ ರೈಲ್ವೆ ಪ್ಲಾಟ್‌ಫಾರ್ಮುಗಳ ಮೇಲೇ ತಾಲೀಮು ನಡೆಯುವುದು….

‘‘ಹಾಲಿವುಡ್‌ನಲ್ಲಿ ಚಾರ್ಲಿ ಚಾಪ್ಲಿನರ ಸ್ಟುಡಿಯೊವಿಗೂ ಭೇಟಿಯಿತ್ತೆವು….

‘ಕಾರ್ನೆಗಿ ಹಾಲ್‌ನಲ್ಲಿ ೧೯೩೩ ರಲ್ಲಿ ಹೊಸ ಇತಿಹಾಸ ಸೃಷ್ಟಿಯಾಯಿತೆನ್ನಬಹುದು. ಅದರ ಚರಿತ್ರೆಯಲ್ಲೆ ಮೊಟ್ಟಮೊದಲ ಬಾರಿಗೆ ಅಲ್ಲಿ ನೃತ್ಯಕಾರ್ಯಕ್ರಮ ನಡೆಯಿತು. ೫೦೦೦ ಮಂದಿ ಕಿಕ್ಕಿರಿದಿದ್ದ ಸಭೆ ಭೋರ್ಗರೆದ ಕರತಾಡನ ಅಭೂತಪೂರ್ವ. ಕಾರ್ನೆಗಿ ಹಾಲ್‌ನ ಸಂಪ್ರದಾಯದಲ್ಲಿ ಬದಲಾವಣೆಗೆ ಕಾರಣನಾದವನು ಒಬ್ಬ ಭಾರತೀಯನೆಂಬುದು ಭಾರತೀಯರಿಗೆ ಹೆಮ್ಮೆಯ ಸಂಗತಿ.’’

ಕಾರ್ನೆಗಿ ಹಾಲ್ ಎಂದರೆ ಅಮೆರಿಕದಲ್ಲಿ ಘನತೆಯ ಪ್ರತೀಕ. ಅಲ್ಲಿ ಕಚೇರಿ ನಡೆಸಲು ಅವಕಾಶ ದೊರಕಿಸಿಕೊಳ್ಳುವುದು ಇಂದಿಗೂ ಜಗತ್ತಿನಾದ್ಯಂತ ಕಲಾವಿದರ ಹೆಗ್ಗನಸು.

೧೯೩೬ರಲ್ಲಿ ಮತ್ತೆ ಕಲೆಕಾಲ. ಉದಯ ಶಂಕರ್ ಯೂರೋಪ್ ಅಮೆರಿಕಗಳಲ್ಲಿ ಸಂಚರಿಸಿದರು. ಈ ಬಾರಿ ಅವರು ತಮ್ಮ (ಪ್ರಸಿದ್ಧ ಸಿತಾರ್‌ವಾದಕ) ರವಿ ಶಂಕರ್ ಅವರೂ ಸಂಗಡ ಇದ್ದರು.

ಕುಗ್ಗದ ಉತ್ಸಾಹ

ಉದಯ ಶಂಕರ್ ತಮ್ಮದೇ ಆದ ಭಾರತೀಯ ತಂಡವೊಂದನ್ನು ಕಟ್ಟಿಬೆಳಸುವಂತೆ ಪಾವ್ಲೊವಾ ಪ್ರೋತ್ಸಾಹಿಸಿದರು. ೧೯೨೮ರಲ್ಲಿ ಉದಯಶಂಕರರೊಡನೆ ಭಾರತಕ್ಕೆ ಬಂದಾಗ ಭಾರತೀಯ ಸಾಂಸ್ಕೃತಿಕ ಪ್ರಾಕಾರದಲ್ಲಿ ನೃತ್ಯ ಕ್ಷೇತ್ರದಲ್ಲಿ ಮಾಡಬಹುದಾದ ಕೆಲಸವನ್ನು ವಿವರಿಸಿದರು.

ಭಾರತದ ಭೇಟಿಯ ನಂತರ ಉದಯಶಂಕರರು ಪ್ಯಾರಿಸಿಗೆ ಹೋದರು. ಅಲ್ಲಿ ಅವರು ಜೀವಿಕೆಗೇ ಕಷ್ಟಪಡಬೇಕಾಯಿತು. ಸರಿಯಾದ ಒಂದು ಜೊತೆ ಪಾದರಕ್ಷೆಗಳಿಗೂ ಅವರಲ್ಲಿ ಹಣ ಇರಲಿಲ್ಲ. ವೃತ್ತಪತ್ರಿಕೆಗಳನ್ನೇ ತಲೆದಿಂಬಾಗಿ ಮಾಡಿಕೊಂಡು ಮಲಗಿದರು. ಕ್ಯಾಬರೆಗಳಲ್ಲಿ ಕುಣಿದು ಪುಡಿಗಾಸು ಗಳಿಸಿದರು. ಕೆಲವೊಮ್ಮೆ ಹದಿನೆಂಟು ಗಂಟೆಗಳಷ್ಟು ಕಾಲ ಸತತವಾಗಿ ಕುಣಿಯಬೇಕಾಗುತ್ತಿತ್ತು ಅಂದಿನ ಅನ್ನಸಂಪಾದನೆಗೆ. ಆದರೂ ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕೆಂಬ ಅವರ ಉತ್ಸಾಹ ಕುಗ್ಗಲಿಲ್ಲ.

ಭಾರತಕ್ಕೆ ಹಿಂದಿರುಗಿದ ಮೇಲೆ ರಂಗಪ್ರದರ್ಶನಕ್ಕಾಗಿ ಹೊಸ ವಸ್ತುಗಳನ್ನರಸಿ ಉದಯ ಶಂಕರರು ವಿಶಾಲವಾದ ಅಧ್ಯಯನ ನಡೆಸಿದರು. ವಿವಿಧ ಪ್ರಾಂತಗಳ ಶಾಸ್ತ್ರೀಯ ಹಾಗೂ ಜಾನಪದ ನರ್ತನಗಳನ್ನು ವೀಕ್ಷಿಸಿದರು. ಭಾರತೀಯ, ಪಾಶ್ಚಾತ್ಯ-ಎಂಬ ವಿಂಗಡಣೆಯ ರೇಖೆಗಳನ್ನೆಲ್ಲ ಬದಿಗೆ ಸರಿಸಿ, ಈ ಎಲ್ಲ ಪ್ರಾಕಾರಗಳ ಹಾಗೂ ಶೈಲಿಗಳ ಉದಾತ್ತ ಅಂಶಗಳನ್ನೊಳಗೊಂಡ ಹೊಸ ಪ್ರಸ್ಥಾನವನ್ನೇ ರೂಪಿಸಿದರು. ಮೊದಮೊದಲು ಸಾಂಪ್ರದಾಯಿಕರ ಟೀಕೆ ವಿಪುಲವಾಗಿ ಬಂದಿತು; ಆದರೆ ಉದಯ ಶಂಕರರ ಪ್ರದರ್ಶನಗಳ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು.

ಕಲಾಕೇಂದ್ರದ ಸ್ಥಾಪನೆ

೧೯೩೮ರಲ್ಲಿ ಭಾರತಕ್ಕೆ ಹಿಂದಿರುಗಿದ ಉದಯ ಶಂಕರರ ವಿವಿಧ ಪ್ರಯೋಗಗಳನ್ನು ರವೀಂದ್ರನಾಥ ಠಾಕೂರರು ಪ್ರೋತ್ಸಾಹಿಸಿದ್ದಲ್ಲದೆ ‘ನಿನಗಿರುವ ಅಸಾಧಾರಣ ಕಲ್ಪನಾಶಕ್ತಿ ಯಿಂದ ಇನ್ನೂ ಇತರ ಹೊಸ ನೃತ್ಯರೂಪಕಗಳನನು ರೂಪಿಸು’’ ಎಂದು ಪ್ರಚೋದಿಸಿದರು.

ರವೀಂದ್ರನಾಥ ಠಾಕೂರರನ್ನು ಉದಯ ಶಂಕರ್ ತಮ್ಮ ಗುರುಗಳಿಂದ ಪರಿಗಣಿಸಿದ್ದರು.  ಠಾಕೂರರು, ಆನಾ ಪಾವ್ಲೊವಾ ಅಲ್ಲದೆ ಮೈಕೆಲ್ ಚೆಹೂನ್ ಮುಂತಾದ ಹಲವರಿಂದಲೂ ಅವರು ಪ್ರಭಾವಿತರಾದರು. ನರ್ತನದಲ್ಲಿ ಮಾತಿಗಿಂತ ಚಲನೆ ಮುಖ್ಯವೆಂಬುದು ಚೆಹೂವರ ಸಿದ್ಧಾಂತ.

‘‘ಭಾರತೀಯ ನೃತ್ಯಗಳು ಇಂದು ಸತ್ವಹೀನವಾಗಿವೆ, ಯಾಂತ್ರಿಕವಾಗಿಹೋಗಿವೆ. ಅಭಿನಯವೆಂದರೆ ಕೇವಲ ಘಟನೆಗಳ ನಿರೂಪಣೆಯಾಗಬಾರದು. ಅಭಿನಯದ ಪ್ರತಿಯೊಂದು ಸಂಚಾರವೂ ಲವಲವಿಕೆಯಿಂದ ಕೂಡಿದ್ದು ಜೀವಂತ ಸತ್ಯದ ಪ್ರತಿಬಿಂಬವಾಗಬೇಕು’’ ಎಂಬ ಉದಯ ಶಂಕರರ ಮಾತು ಅವರ ಕಲೆಯಲ್ಲಿ ನಿದರ್ಶನಪಟ್ಟಿತು.

ಕಲಾಪೋಷಕರಾದ ಡಾರ್ಲಿಂಗ್‌ಟನ್ ಕುಟುಂಬದವರ ನೆರವಿನಿಂದ ಉದಯ ಶಂಕರರು ಹಿಮಾಲಯದ ರಮ್ಯತಾಣ ಆಲ್ಮೊರಾದಲ್ಲಿ ದೇವದಾರು ಮುಂತಾದ ಮರಗಳಿಂದ ನಿಬಿಡವಾದ ೬೪ ಎಕರೆಯಷ್ಟು ವಿಸ್ತಾರವಾದ ಜಮೀನನ್ನು ಕೊಂಡು ಅಲ್ಲಿ ಕಲಾಶಿಕ್ಷಣಕ್ಕೆ ಮೀಸಲಾದ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ೧೯೪೦ ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಿದರು. ಪ್ರಸಿದ್ಧ ಸರೋದ್‌ವಾದಕ ಮೈಹರಿನ ಉಸ್ತಾದ್ ಅಲ್ಲಾವುದೀನ್‌ಖಾನ್, ತಿಮಿರಬರನ್ ಭಟ್ಟಾಚಾರ್ಯ, ಶಂಕರನ್ ನಂಬೂದಿರಿ, ಕುಂದಪ್ಪಪಿಳ್ಳೆ ಮುಂತಾದ ಪ್ರತಿಷ್ಟಿತ ಕಲಾವಿದರು ಕೇಂದ್ರದ ಅಧ್ಯಾಪಕವರ್ಗದಲ್ಲಿದ್ದರು.

ಸತತ ಅನ್ವೇಷಣೆಯಲ್ಲಿ ತೊಡಗಿರುವುದು ಉದಯ ಶಂಕರರ ಸ್ವಭಾವ. ಕಥಕ್ಕಳಿ, ಮಣಿಪುರಿ ನೃತ್ಯಗಳನ್ನು ಮಾಡಿದರು. ಅವುಗಳಿಂದ ಹೆಜ್ಜೆವಿನ್ಯಾಸ ಮತ್ತು ಮುದ್ರೆಗಳನ್ನು ಆಯ್ದುಕೊಂಡರು. ಆಲ್ಮೊರಾದಲ್ಲಿ ಅವರು ಬುದ್ಧಚರಿತ್ರೆಯನ್ನೂ ರಾಮಾಯಣವನ್ನೂ ಛಾಯಾಕೃತಿಗಳ ಮೂಲಕ ಪ್ರದರ್ಶಿಸುವ ಕೌತುಕಕರ ನೃತ್ಯಕಾರ್ಯಕ್ರಮ ಯೋಜಿಸಿದರು.

ನರ್ತನ, ನಟನೆ, ಸಿನಿಮಾ ತಂತ್ರ, ಯಕ್ಷಿಣಿ ಮುಂತಾದ ವಿವಿಧ ಮಾಧ್ಯಮಗಳ ವಿಚಿತ್ರ ಹೆಣಿಗೆಯೊಂದನ್ನು ಉದಯ ಶಂಕರರು ರೂಪಿಸಿದರು; ಅದನ್ನು ಶಂಕರ್ ಸ್ಕೋಪ್ ಎಂದು ಕರೆದರು.

ಅವರ ಸಾಧನೆಯ ವೈಶಿಷ್ಟ್ಯ

ಉದಯ ಶಂಕರರು ನಿರ್ಮಿಸಿ ಜನಪ್ರಿಯಗೊಳಿಸಿದ ರೂಪಕಗಳು ಪೂರ್ತಿ ಶಾಸ್ತ್ರೀಯವೂ ಅಲ್ಲ, ಪೂರ್ತಿ ಸ್ವಚ್ಛಂದವೂ ಅಲ್ಲ ಶಾಸ್ತ್ರೀಯ ತಂತ್ರವನ್ನು ಬಳಸಿಕೊಂಡು ಸಮಕಾಲೀನ ಮನೋಭಾವಕ್ಕೆ ರಂಜಿಸುವಂಥ ನೃತ್ಯಪ್ರಕಾರವೊಂದನ್ನು ಅವರು ರೂಪಿಸಿದರು. ಈ ಪ್ರಯೋಗದಲ್ಲಿ ಅವರು ಅಸಾಧಾರಣ ಯಶಸ್ಸನ್ನು ಪಡೆದರೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಶುದ್ಧ ಶಾಸ್ತ್ರೀಯ ನೃತ್ಯದ ಸೌಂದರ್ಯವನ್ನು ಅನುಭವಿಸಲು ಕೊಂಚಮಟ್ಟದ ಮನಸ್ಸಂಸ್ಕಾರವೂ ಬುದ್ಧಿವ್ಯಾಯಾಮವೂ ಬೇಕಾಗುತ್ತದೆ. ಇಂಥ ಸಂಸ್ಕಾರ ಇಲ್ಲದವರನ್ನೂ ಆಕರ್ಷಿಸಿ ರಂಜಿಸಬೇಕೆಂಬುದು ಉದಯ ಶಂಕರರ ಪ್ರಯತ್ನ. ಅವರಂತೆ ಹೊಸ ಪ್ರಯೋಗಗಳನ್ನು ಮಾಡಹೊರಟು ಭಿನ್ನ ಭಿನ್ನ ಶೈಲಿಗಳನ್ನು ಬೆರೆಸಿದವರು ಎಷ್ಟೋ ಮಂದಿ. ಅಂಥ ಅನೇಕ ಪ್ರಯತ್ನಗಳು ಅಭಾಸದಲ್ಲಿ ಪರ್ಯವಸಾನವಾದವು. ಈ ದಿಕ್ಕಿನಲ್ಲಿ ಉದಯ ಶಂಕರರ ಸಾಧನೆ ಫಲಿಸಿದ್ದು ಅವರ ವಿಶೇಷ ಪ್ರತಿಭೆಯ ಕಾರಣದಿಂದ

ಉದಯ ಶಂಕರರ ರೂಪಕಗಳನ್ನು ಯಾವ ಜಾತಿಗೆ ಸೇರಿಸಬೇಕು? ಅದು ಕಥಕ್ ಶೈಲಿಯದೆ? ಕಥಕ್ಕಳಿಯೆ? ಅಥವಾ ಪಾಶ್ಚಾತ್ಯ ಬ್ಯಾಲೆ ಶೈಲಿ-ತಂತ್ರಗಳ ಅನುಕರಣೆಯೆ? ಇಂಥ ಜಿಜ್ಞಾಸೆ ಪೂರ್ತಿ ಅಸಂಗತವಾಗುತ್ತದೆ. ಹಲವಾರು ಶೈಲಿಗಳ ಶ್ರೇಷ್ಠ ಅಂಶಗಳನ್ನು ಈ ರೂಪಗಳಲ್ಲಿ ಗುರುತಿಸಬಹು ದಾದರೂ ಅವು ಯಾವುದೇ ಒಂದು ಪ್ರಾಕಾರಕ್ಕೂ ಸೇರತಕ್ಕವಲ್ಲ; ನೃತ್ಯವನ್ನು ಸಾರ್ವತ್ರಿಕಗೊಳಿಸುವ, ಎಂದರೆ ಎಲ್ಲ ಮಟ್ಟದ ಜನರಿಗೂ ಎಟಕುವಂತೆ ಮಾಡುವ ಒಂದು ವಿಶಿಷ್ಟ ರಂಗಕಲೆ ಅದು.

ಸಹಕಾರಿ ವರ್ಗ

ಹಲವಾರು ಮಂದಿ ಪ್ರಭಾವಂತರ ನೆರವನ್ನು ಉದಯ ಶಂಕರ್ ತಮ್ಮ ಕಾರ್ಯಕ್ರಮಗಳಿಗಾಗಿ ಪಡೆದರು. ಮೊದಮೊದಲು ಅವರ ನೃತ್ಯಕ್ಕೆ ಸಂಗೀತ ಸಹಕಾರ ಒದಗಿಸಿದವರು ಪ್ರಸಿದ್ಧರಾದ ತಿಮಿರ ಬರನ್ ಭಟ್ಟಾಚಾರ್ಯ. ಉತ್ತರೋತ್ತರ ತಿಮಿರ ಬರನ್ ನ್ಯೂ ಥಿಯೇಟರ‍್ಸ್ ಸಂಸ್ಥೆಗೆ ಸೇರಿದರು. ಅಲ್ಲಿಂದಾಚೆಗೆ ಉದಯ ಶಂಕರರು ಸಂಗೀತ ಯೋಜನೆಗಾಗಿ ಶಿರಾವಳಿಯವರನ್ನು ನೇಮಿಸಿಕೊಂಡರು.

ಉದಯ ಶಂಕರರ ಮೊದಮೊದಲಿನ ನೃತ್ಯಕಾರ್ಯಕ್ರಮಗಳ ಯಶಸ್ಸಿಗೆ ಅವರ ಸಹನರ್ತಕಿ ಕುಮಾರಿ ಸಿಂಕೀ ಎಂಬಾಕೆಯ ಪ್ರತಿಭೆಯೂ ಜೊಹರಾ ಸೈಗಲ್ ಮುಂತಾದ ಕಲಾವಿದರ ಉತ್ಸಾಹಪೂರ್ಣ ಸಹಕಾರವೂ ಕಾರಣವಾದವು. ಹುಟ್ಟಿನಿಂದ ಪಾಶ್ಚಾತ್ಯಳಾದರೂ ಸಿಂಕೀ ಭಾರತೀಯ ನರ್ತನದ ರೀತಿ ಮರ್ಯಾದೆಯನ್ನು ಉದಯ ಶಂಕರರ ವೈಶಿಷ್ಟ್ಯಗಳನ್ನು ಸಂಪೂರ್ಣ ಕರಗತ ಮಾಡಿಕೊಂಡಿದ್ದಳು.

ಉದಯ ಶಂಕರರ ಆ ಮೇಲಿನ ಕಾರ್ಯಕ್ರಮಗಳಲ್ಲಿ ಕಲಕಲತಾ ಎಂಬ ಇನ್ನೊಬ್ಬ ಪ್ರತಿಭಾವಂತೆಯ ಸಹಕಾರವಿತ್ತು.

ಕಲ್ಪನಾ

ಉದಯಶಂಕರರು ತಮ್ಮ ಪ್ರದರ್ಶನಗಳಿಂದ ಲಕ್ಷಾಂತರ ರೂಪಾಯಿ ಹಣ ಗಳಿಸಿದರು. ನರ್ತನಕ್ಷೇತ್ರದಲ್ಲಿ ಬಹುಶಃ ಅವರಷ್ಟು ಹೆಚ್ಚು ಸಂಪಾದಿಸಿದ ಭಾರತೀಯ ಬೇರೆಯಿಲ್ಲ. ಆದರೆ ಸ್ವಭಾವತಃ ಉದಾರಿಗಳೂ ಆದರ್ಶವಾದಿಗಳೂ ಆದ ಅವರ ಕೈಯಲ್ಲಿ ಹಣ ಉಲಿಯಲಿಲ್ಲ. ಆಲ್ಮೋರಾದಲ್ಲಿ ಕಲಾಕೇಂದ್ರದ ನಿರ್ವಹಣೆಗಾಗಿಯೂ ಸಹೋದ್ಯೋಗಿ ಗಳಿಗಾಗಿಯೂ ಉದಯ ಶಂಕರ್ ತಮ್ಮಲ್ಲಿದ್ದ ಹಣವ ವಷ್ಟನ್ನೂ ಖರ್ಚುಮಾಡಿ ಬರಿಗೈಯಾದರು. ಕಲಾಕೇಂದ್ರವನ್ನು ಮುಚ್ಚುವುದು ಅನಿವಾರ್ಯವಾಯಿತು.

ತಮಗಾಗಿದ್ದ ನಷ್ಟವನ್ನು ತುಂಬಿ ಕೇಂದ್ರವನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ ಮಾತ್ರ ಉದಯ ಶಂಕರರಲ್ಲಿ ಇದ್ದೇ ಇತ್ತು. ಉದಯ ಶಂಕರರು ‘ಕಲ್ಪನಾ’ ಎಂಬ ನೃತ್ಯಪ್ರಧಾನ ಚಲನಚಿತ್ರವನ್ನು ಅಗಾಧ ವೆಚ್ಚದಲ್ಲಿ ಅದ್ದೂರಿಯಾಗಿ ತಯಾರಿಸಿದರು. ಈ ಚಿತ್ರವನ್ನು ತಯಾರಿಸಲು ಅವರಿಗೆ ಹಲವು ಉದ್ದೇಶಗಳಿದ್ದವು. ಕೇಂದ್ರವನ್ನು ಮತ್ತೆ ಪ್ರಾರಂಭಿಸುವುದೂ ಒಂದು.

‘ಕಲ್ಪನಾ’ ಚಿತ್ರ ಕಲಾತ್ಮಕತೆಯ ದೃಷ್ಟಿಯಿಂದ ಅದ್ಭುತವೆನಿಸಿತು. ಆದರೆ ಹಣ ಬರಲಿಲ್ಲ. ಉದಯ ಶಂಕರರು ಮತ್ತಷ್ಟು ಸಾಲದಲ್ಲಿ ಮುಳುಗಿದರು.

ಮಹದಾಕಾಂಕ್ಷೆಯಿಂದ ಅಪಾರ ವೆಚ್ಚಮಾಡಿ ಉದಯ ಶಂಕರರು ಸ್ಥಾಪಿಸಿದ ಆಲ್ಮೋರಾ ಕಲಾಕೇಂದ್ರ ಕೆಲವು ವರ್ಷಗಳಲ್ಲೆ ಅಸ್ತಂಗತವಾಯಿತು. ಇದಕ್ಕೆ ಕಾರಣಗಳು ಹಲವಾರು ಕಲಾಕೇಂದ್ರಕ್ಕಾಗಿ ಆರಿಸಿದ್ದ ಜಾಗವೇ ಭಾರತದ ಬಹುಪಾಲು ಜನರ ದೇಹಪ್ರಕೃತಿಗೆ ಒಗ್ಗದಂಥದು. ನಾಗರಿಕ ಸೌಕರ್ಯಗಳಿಂದ ದೂರವಾದ್ದು. ಕೇಂದ್ರದ ನಿರ್ವಹಣೆಯಲ್ಲಿ ಆರಂಭದಿಂದಲೇ ತಲೆಹಾಕಿದ್ದ ಅವ್ಯವಸ್ಥೆಯೂ ವೈಫಲ್ಯಕ್ಕೆ ಕಾರಣವಾಯಿತು. ಮಹಾಯುದ್ಧದ ಕಾರಣದಿಂದ ಉದಯ ಶಂಕರರ ವಿದೇಶ ಪರ್ಯಟನಗಳೂ ನಿಂತು ಹೋಗಿ ಹಣದ ಮೂಲ ಬತ್ತಿದಂತಾಯಿತು. ಭಾರತೀಯ ಶ್ರೀಮಂತವರ್ಗದಿಂದ ಉದಯ ಶಂಕರರು ನಿರೀಕ್ಷಿಸಿದ್ದ ನೆರವು ದೊರೆಯಯಿಲ್ಲ ಹೀಗೆ ಕೇಂದ್ರವನ್ನು ಮುಚ್ಚಬೇಕಾಗಿ ಬಂದದ್ದು ಕನಸುಗಾರ ಉದಯಶಂಕರರಿಗೆ  ದೊಡ್ಡ ಆಘಾತವಾಯಿತು.

ಹೀಗೆ ತುಂಬಲಾಗದ ಆರ್ಥಿಕ  ನಷ್ಟ, ತಮ್ಮ ಜೀವದುಸಿರಾಗಿದ್ದ ಕಲಾಕೇಂದ್ರದ ಅವಸಾನ-ಎರಡೂ ಆಘಾತಗಳಿಗೆ ತುತ್ತಾದ ಉದಯ ಶಂಕರ್ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ವ್ಯಕ್ತಿತ್ವ

ಶ್ರೀ. ಜಿ. ವೆಂಕಟಾಚಲಂ ಅವರು ಪ್ರಸಿದ್ಧ ಕಲಾವಿಮರ್ಶ ಕರು ಹಲವಾರು ಕಲಾವಿದರಿಗೆ ಪ್ರೋತ್ಸಾಹವಿತ್ತವರು. ಅವರು ಉದಯ ಶಂಕರರ ವ್ಯಕ್ತಿತ್ವವನ್ನು ಹೀಗೆ ವರ್ಣಿಸಿದರು:

‘‘ಅವರಲ್ಲಿ ಒಂದು ಬಗೆಯ ಅಲೌಕಿಕತೆ ಇದೆ….ಅವರದು ನೆಮ್ಮದಿಯ ಬದುಕು, ಆದರೆ ಅವರ ಅಂತರಂಗ ಆಶಾಂತ. ಹಣದಿಂದ ದೊರೆಯಬಹುದಾದ ಭೋಗವೆಲ್ಲ ಲಭ್ಯವಿದ್ದರೂ ಅವರ ಮನಸ್ಸು ಸೌಖ್ಯ ಅನುಭವಿಸದು. ಕಲೆಯಿಂದ ಅವರು ಹೇರಳ ಹಣ ಸಂಪಾದಿಸಿದರು, ಆದರೆ ಗಳಿಸಿದ್ದನ್ನು ಉದಾರ ವಾಗಿ ಸಹೋದ್ಯೋಗಿಗಳಿಗೆ ಹಂಚಿದರು….ಜಗತ್ತನ್ನೆಲ್ಲ ಸುತ್ತಿ ಬಂದಿದ್ದರೂ ಸರಳ ಭಾರತೀಯ ಜೀವನರೀತಿಯೇ ಅವರಿಗೆ ಹಿಡಿಸಿರುವುದು; ಕುರ್ತಾ ಪೈಜಾಮಗಳು ಅವರಿಗೆ ಹೇಳಿ ಮಾಡಿಸಿದಂತಿವೆ.

‘‘ಅವರ ಹೆಮ್ಮೆ, ಸ್ವಾಭಿಮಾನ ಸಹಜವಾದವು. ಭಾರತದ ಪ್ರಾಚೀನ ಕಲೆಯ ಸುಪ್ತ ಸೌಂದರ್ಯವನ್ನು ಇಂದಿನ ಜಗತ್ತಿಗೆ ಪ್ರಕಟಿಸಿದ್ದು ಸಣ್ಣ ಸಾಧನೆಯಲ್ಲ. ಕವಿ ರವೀಂದ್ರನಾಥ ಠಾಕೂರರಂತೆ ಉದಯ ಶಂಕರರೂ ಅನುಪಮ ಸಾಂಸ್ಕೃತಿಕ ರಾಯಭಾರಿ…

‘‘ಪ್ರದರ್ಶನಕಲೆಯಲ್ಲಿ ಶಂಕರರು ಸಾಟಿಯಿಲ್ಲದವರು. ಜಗತ್ತಿನ ಶ್ರೇಷ್ಠ ರಂಗಸ್ಥಳಗಳ ಹಾಗೂ ನಿರ್ದೇಶಕರ ಪರಿಚಯ ಅವರ ಪ್ರದರ್ಶನ ಪ್ರತಿಭೆಗೆ ಮೆರುಗಿತ್ತಿದೆ. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಅವರ ಪ್ರದರ್ಶನಗಳ ಸಾಫಲ್ಯಕ್ಕೆ ಕಾರಣವಾದವು ಅವರ ನೈಜವಾದ ರಸಜ್ಞತೆ, ಪರಿಷ್ಕಾರ ಶ್ರದ್ಧೆ, ಕಾರ್ಯವಂತಿಕೆ.

ಈ ಪ್ರದರ್ಶನನಿಷ್ಠೆಯೂ ಭಾರತದ ಸಾಂಸ್ಕೃತಿಕ ಜೀವನಕ್ಕೆ ಉದಯ ಶಂಕರರ ಒಂದು ಪ್ರಮುಖ ಕೊಡುಗೆ. ಇದಕ್ಕಾಗಿ ಭಾರತ ಅವರಿಗೆ ಕೃತಜ್ಞರಾಗಿರಬೇಕು. ಭಾರತದ ಬಹುಪಾಲು ಪ್ರದರ್ಶನಗಳಲ್ಲಿ ಕಾರ್ಯವಂತಿಕೆಯ ಅಭಾವ ಎದ್ದು ಕಾಣುತ್ತದೆ. ರಂಜಕತೆ, ರಂಗನಿರ್ವಹಣೆ -ಎರಡೂ ದೃಷ್ಟಿಗಳಿಂದ ಶಂಕರರ ಪ್ರದರ್ಶನಗಳ ಯಶಸ್ಸು ಅದ್ವಿತೀಯ.’’

ರವೀಂದ್ರನಾಥ ಠಾಕೂರರು ಉದಯಶಂಕರರ ಬಗೆಗೆ ಒಮ್ಮೆ ಹೇಳಿದರು: ‘‘ಈ ಮನುಷ್ಯನಿಗೆ ಅಹಂಭಾವವೆಂಬುದೇ ಇಲ್ಲ. ಇದು ಆಶ್ಚರ್ಯಕರ ಸಂಗತಿ ಅಹಂಭಾವಕ್ಕೆ ಪೋಷಕವಾದ ಸಂದರ್ಭಗಳು ಅವರಿಗೆ ಹೆಜ್ಜೆ ಹೆಜ್ಜೆಗೂ ಒದಗುತ್ತವೆ. ಬೇರೆ ಯಾರನ್ನಾದರೂ ಇಂಥ ಅವಕಾಶಗಳು ಹುಚ್ಚೆಬ್ಬಿಸಬಲ್ಲವು. ಆದರೆ ಅವರ ನಮ್ರತೆ ಅವರ ಆರೋಗ್ಯವನ್ನೂ ಕಲಾಪ್ರತಿಭೆಯನ್ನೂ ರಕ್ಷಿಸಿವೆ’’

ಕಡೆಯ ದಿನಗಳು

ಉದಯ ಶಂಕರರಿಗೆ ಯಶಸ್ಸು ಹೇರಳವಾಗಿ ಬಂತು. ರವೀಂದ್ರನಾಥ ಠಾಕೂರರಂತೆ ಉದಯ ಶಂಕರರೂ ಭಾರತದ ಸಾಂಸ್ಕೃತಿಕ ರಾಯಭಾರಿಯೆಂದು ಜಗತ್ತಿನಾಧ್ಯಂತ ಮನ್ನಣೆ ಪಡೆದರು. ಉತ್ತರೋತ್ತರ ಕೇಂದ್ರ ಸಂಗೀತ ನಾಟಕ ಅಕಾಡೆ ಮಿಯ ಗೌರವ ಸದಸ್ಯತ್ವ (ಫೆಲೋಶಿಪ್), ೧೯೭೧ ರಲ್ಲಿ ‘ಪದ್ಮಭೂಷಣ’  ಪ್ರಶಸ್ತಿ, ೧೯೭೫ರಲ್ಲಿ ವಿಶ್ವಭಾರತಿ ವಿದ್ಯಾ ಲಯದ ವಿಶೇಷ ಘಟಿಕೋತ್ಸವದಲ್ಲಿ ನೀಡಲಾದ ‘ದೇಶೀಕೋತ್ತಮ’ ಪ್ರಶಸ್ತಿ, ಮುಂತಾದ ಗೌರವಗಳು ಉದಯ ಶಂಕರರಿಗೆ ದೊರೆತವು.

ಜೀವನ ಸಾಗಿಸಲು ಅವರ್ಣನೀಯ ಕಷ್ಟಗಳು ಒದಗಿದಾಗಲೂ ಉದಯ ಶಂಕರರ ನೃತ್ಯಶ್ರದ್ಧೆ ಕಡಮೆಯಾಗಲಿಲ್ಲ. ಹೊರಗೆ ದಾರಿದ್ರ್ಯವನ್ನೆದುರಿಸುತ್ತಿದ್ದರೂ ಅವರ ಹೃದಯ ಸಿರಿವಂತಿಕೆ ಕುಗ್ಗಲಿಲ್ಲ. ರವೀಂದ್ರರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ (೧೯೬೧) ಅವರ ಕೃತಿಯೊಂದನ್ನು ನೃತ್ಯಕ್ಕೆ ಅಳವಡಿಸಿ ಪ್ರದರ್ಶಿಸಿದರು, ಉದಯ ಶಂಕರರು.

ಕಷ್ಟದ ಕಡೆಯ ದಿನಗಳು

ಉದಯ ಶಂಕರರ ಕಡೆಯ ದಿನಗಳು ಕಷ್ಟಮಯ ವಾಗಿದ್ದವು. ಉಲ್ಲಾಸಶೂನ್ಯವಾಗಿದ್ದವು. ಜಗತ್ಪ್ರಸಿದ್ಧನಾದ ಮಹೋನ್ನತ ಕಲಾವಿದ ತನ್ನ ಜೀವಿತಾವಧಿಯಲ್ಲಿಯೇ ಹೇಗೆ ಜನರ ನೆನಪಿನಿಂದ ಮಾಸಿಹೋಗುತ್ತಾನೆನ್ನಲು ಉದಯ ಶಂಕರರ ಜೀವನ ನಿದರ್ಶನ

ಕಡೆಯ ವರ್ಷಗಳಲ್ಲಿ ಉದಯ ಶಂಕರ್ ಏಕಾಕಿಗಳಾಗಿ, ಕಲ್ಕತ್ತದ ಬಾಲಿಗಂಜಿನ ಮೂಲೆಯಲ್ಲಿ ಗೇಣಳತೆಯ ಕೊಠಡಿಯೊಂದನ್ನು ಬಾಡಿಗೆಗೆ ಹಿಡಿದು ವಾಸವಾಗಿದ್ದರು. ಪ್ರೊಫೆಸರ್ ಶಶಿಕಾಂತ ಗುಹಾ ಎಂಬ ಸಜ್ಜನರು ಕೆಲಕಾಲ ರೂಮಿನ ಬಾಡಿಗೆ ಕೊಡುತ್ತಿದ್ದರು. ಆದರೆ ಯಾವುದೊ ಅಪಘಾತದ ಕಾರಣ ಈ ನೆರವಿಗೆ ಕಡಿತ ಬಿತ್ತು. ಈಚಿನ ವರ್ಷಗಳಲ್ಲಿ ಉದಯಶಂಕರರಿಗೆ ಸರ್ಕಾರದಿಂದ ಬರುತ್ತಿದ್ದ ಮಾಸಾಶನ ಒಂದು ಸಾವಿರ ರೂಪಾಯಿ ಅದರಲ್ಲಿ ರೂಮಿನ ಬಾಡಿಗೆ ಕೊಟ್ಟರೆ ಉಳಿಯುತ್ತಿದ್ದದ್ದು ಬರಿಯ ಇನ್ನೂರು ರೂಪಾಯಿ.

ಹೀಗಾಗಿ ‘‘ಕಡಮೆ ಬಾಡಿಗೆ ಇರುವ ಮನೆಯೊಂದನ್ನು ದಯವಿಟ್ಟು ನೀಡಿ. ಇಲ್ಲವಾದರೆ ನಾನು ಬೀದಿಪಾಲಾಗಬೇಕಾಗುತ್ತದೆ’’ ಎಂದು ಸರ್ಕಾರಕ್ಕೆ ೭೬ ವರ್ಷ ವಯಸ್ಸಿನ ಈ ಜಗದ್ವಿಖ್ಯಾತ ಕಲಾವಿದ ಅರಿಕೆ ಮಾಡಿಕೊಳ್ಳಬೇಕಾಯಿತು. ಕೆಲವರಮಾನ ವಸತಿ ಯೋಜನೆಯೊಂದರಲ್ಲಿ ತಲೆಯ ಮೇಲೊಂದು ಸೂರು ಏರ್ಪಡಿಸಿಕೊಳ್ಳಲು ಉದಯ ಶಂಕರ್ ಪ್ರಯತ್ನ ನಡೆಸಿದ್ದರು. ಜನವೂ ಸರ್ಕಾರವೂ ಇತಿಹಾಸ ನಿರ್ಮಿಸಿದ ಈ ಕಲಾವಿದನ ಬವಣೆಗೆ ಪರಿಹಾರ ಕಂಡುಹಿಡಿಯುವವರೆಗೆ ಆತ ಕಾಯಲಿಲ್ಲ. ಉದಯ ಶಂಕರರು ೧೯೭೬ರ ಸೆಪ್ಟೆಂಬರ್ ೨೬ರಂದು ಕಲ್ಕತ್ತದಲ್ಲಿ ಕೊನೆಯುಸಿರೆಳೆದರು.

ನೆಹರು ಫೆಲೋಶಿಪ್ ನಂಥ ಲಾಂಛನ ನ್ಯಾಯವಾಗಿ ಉದಯ ಶಂಕರರಿಗೆ ಅಯಾಚಿತವಾಗಿ ಸಲ್ಲಬೇಕಿತ್ತು ಆದರೆ ಆತ್ಮಾಭಿಮಾನ ಬದಿಗಿಟ್ಟು ಅವರಾಗಿ ಅರ್ಜಿ ಸಲ್ಲಿಸಿದ್ದರೂ ಅರ್ಜಿ ತಿರಸ್ಕೃತವಾಯಿತು!

ಪರಂಪರೆ

ಉದಯ ಶಂಕರರು ನಿರ್ಗಮಿಸಿದರೂ ಅವರು ನಿರ್ಮಿಸಿದ ಹೊಸ ಪ್ರಸ್ಥಾನ ಮುಂದುವರಿದಿದೆ. ಭಾರತೀಯ ಸಂಸ್ಕೃತಿಯ ಅನುಪಮ ಸೌಂದರ್ಯವನ್ನೂ ವೈವಿಧ್ಯವನ್ನೂ ಪ್ರದರ್ಶಿಸಲು ನರ್ತನವನ್ನು ಸಮರ್ಥ ಮಾಧ್ಯಮವಾಗಿ ಅವರು ಬಳಸಿದರು.

ಉದಯ ಶಂಕರರ ಪ್ರತಿಭೆಯ ಪ್ರವಾಹ ವಂಶವಾಹಿಯಾಗಿ ಹರಿದಿದೆ. ಅವರ ಮಕ್ಕಳಾದ ಸಂಗೀತ ನಿರ್ದೇಶಕ ಆನಂದ ಶಂಕರ್, ಚಿತ್ರತಾರೆ ಮಮತಾ ಶಂಕರ್ ಮುಂತಾದವರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಪಡೆದು ಪ್ರವರ್ಧಮಾನರಾಗಿದ್ದಾರೆ. ಉದಯ ಶಂಕರರಿಂದ ಶಿಕ್ಷಣ ಪಡೆದವರೂ ಸ್ಫೂರ್ತಿಗೊಂಡವರೂ ಎಷ್ಟೋ ಮಂದಿ ಇಂದು ನರ್ತನ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ್ದಾರೆ. ಇವರಲ್ಲಿ ಪ್ರಭಾತ ಗಂಗೂಲಿ, ನರೇಂದ್ರ ಶರ್ಮ, ಸುಂದರಿ ಶ್ರೀಧರಾನಿ, ಭಗವಾನ್‌ದಾಸ್ ಮುಂತಾದವರೆಲ್ಲ ಇಂದು ಅಗ್ರಪಂಕ್ತಿಯ ಕಲಾಕಾರರೆನಿಸಿದ್ದಾರೆ. ಇವರಲ್ಲದೆ ಪ್ರಸಿದ್ಧ ಚಿತ್ರ ನಿರ್ಮಾಪಕ (ದಿವಂಗತ) ಗುರುದತ್ ಮುಂತಾದ ಅನೇಕರು ಉದಯ ಶಂಕರರಿಂದ ತರಬೇತಿ ಪಡೆದವರು.

‘‘ನನ್ನ ನೃತ್ಯಗಳಲ್ಲಿ ನಾನು ಸಾಧಿಸಲು, ಬಯಸುದುದು ಸರಳತೆ, ಶಕ್ತಿ, ಸೌಂದರ್ಯ-ಇವನ್ನು’’ ಎಂದಿದ್ದರು ಉದಯ ಶಂಕರರು.

ನರ್ತನಕಲೆ ನಶಿಸಿಹೋಗುತ್ತಿದ್ದ ಕಾಲದಲ್ಲಿ ಅದರ ಪುನರು ತ್ಥಾನಕ್ಕೆ ಕಾರಣರಾದವರೆಂದೂ, ಪಾಶ್ಚಾತ್ಯ ಜಗತ್ತಿಗೆ ಭಾರತೀಯ ಕಲೆಯ ವೈಶಿಷ್ಟ್ಯವನ್ನು ಪರಿಚಯ ಮಾಡಿ ಕೊಟ್ಟರೆಂದೂ, ಆಧುನಿಕ ಭಾರತೀಯ ನೃತ್ಯರೂಪಕಗಳ ಜನಕರೆಂದೂ ಉದಯಶಂಕರರ ಹೆಸರು ನಮ್ಮ ನಾಡಿನ ಕಲಾ ಇತಿಹಾಸದಲ್ಲಿ ಸ್ಥಿರವಾಗಿ ನಿಲ್ಲುತ್ತದೆ.