ಹೆಸರು: ಹರ್ಷಿತಾ
ಊರು: ಶ್ರೀರಾಂಪುರ.

ಪ್ರಶ್ನೆ: ಮೈಸೂರು ಆಕಾಶವಾಣಿಗೆ ಹರ್ಷಿತಾ ಮಾಡುವ ನಮಸ್ಕಾರಗಳು. ನಿಲಯದಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಮುಡಿ ಬರುತ್ತಿದೆ. ಅದರಲ್ಲೂ ನಮ್ಮ ಮನೆ ಮಲ್ಲಿಗೆ ತಪ್ಪದೇ ಕೇಳುತ್ತಿರುತ್ತೇನೆ. ತುಂಬಾ ಚೆನ್ನಾಗಿ ಮುಡಿ ಬರುತ್ತಾ ಇದೆ.

ನಮ್ಮ ಮದುವೆಯಾಗಿ ವರ್ಷವಾಯಿತು, ನಮಗೆ ಇನ್ನೂ ಮಕ್ಕಳಾಗಿಲ್ಲ. ವರ್ಷದ ಹಿಂದೆ ಡಾಕ್ಡರ್ಗೆ ತೋರಿಸಿ ಮಾತ್ರೆ, ಔಷಧಿ ತೆಗೆದುಕೊಂಡಿದ್ದೆ. ಕಾರಣಾಂತರದಿಂದ ಎಲ್ಲೂ ಹೋಗುವುದಕ್ಕೆ ಆಗದೆ ಬಹಳ ನಿರಾಸೆಯಿಂದ ಜೀವನ ಸಾಗಿಸುತ್ತಿದ್ದೇವೆ. ಈಗ ಕೆಲವು ದಿನಗಳ ಹಿಂದೆ ಮತ್ತೆ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದೆ. ಮತ್ತೇ ಸ್ಕ್ಯಾನಿಂಗ್ನಲ್ಲಿ ಗರ್ಭಾಶಯ ಚನ್ನಾಗಿದೆ ಏನೂ ತೊಂದರೆ ಇಲ್ಲ ಅಂತ ಹೇಳಿದರು. ಆದರೆ ಲ್ಯಾಪ್ರೋಸ್ಕೋಪಿ ಚಿಕಿತ್ಸೆ ಮಾಡಿಸಬೇಕೆಂದು ಹೇಳಿದರು. ಲ್ಯಾಪ್ರೋಸ್ಕೋಪಿ ಚಿಕಿತ್ಸೆ ಬಗ್ಗೆ ತಿಳಿಸಿರಿ ಇದನ್ನು ಮಾಡಿಸಿದರೆ ಮಕ್ಕಳಾಗುತ್ತದೆಯೇ? ಚಿಕಿತ್ಸೆ ಇಲ್ಲದೆ ಮಾತ್ರೆ, ಇಂಜೆಕ್ಷನ್ನಿಂದ ಮಕ್ಕಳನ್ನು ಪಡೆಯೋಕೆ ಸಾಧ್ಯವಿಲ್ಲವೇ?

ನಾನು ಪತ್ರ ಬರೆದು ತುಂಬ ವರ್ಷಗಳೇ ಕಳೆದಿದೆ. ಮೊಬೈಲ್ ಬಂದಾಗಿನಿಂದ ಪತ್ರ ಬರೆಯೋದು ವರೆತು ಹೋಗಿದೆ. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.

ಉತ್ತರ: ಲ್ಯಾಪ್ರೋಸ್ಕೋಪ್ ಎಂಬುದು “ಉದರದರ್ಶಕ” ಶಸ್ತ್ರ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಿಂದ ಗರ್ಭಕೋಶದ, ಅಂಡಕೋಶದ, ಬಂಜೆತನದ ತೊಂದರೆಗಳನ್ನು ಕಂಡು ಹಿಡಿಯಬಹುದು ಮತ್ತು ಸರಿಪಡಿಸುವುದು ಈ ಶಸ್ತ್ರ ಚಿಕಿತ್ಸೆಯಿಂದ ಸಾಧ್ಯವಾಗುತ್ತದೆ. ದೀರ್ಘಕಾಲದ ಹೊಟ್ಟೆನೋವಿನ ತೊಂದರೆ, ಹೊಟ್ಟೆಯ ಟಿ.ಬಿ. ಖಾಯಿಲೆ, ಕ್ಯಾನ್ಸರ‍್ ಖಾಯಿಲೆ ಮತ್ತು ಮುಚ್ಚಿಹೋಗಿರುವ ಅಂಡಣಳಿಕೆಗಳು ಹಾಗೂ ಅಂಡಾಶಯದ ನೀರು ಗುಳ್ಳೆಗಳು ಇವುಗಳನ್ನು ಕಂಡುಹಿಡಿದು ಈ ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು.

ಲ್ಯಾಪ್ರೋಸ್ಕೋಪ್ ಶಸ್ತ್ರ ಚಿಕಿತ್ಸೆ ಮಾಡುವ ವಿಧಾನ: ಇದೊಂದು ಆಧುನಿಕ ವೈಜ್ಞಾನಿಕ ರೀತಿಯಿಂದ ಕೂಡಿದ ಶಸ್ತ್ರ ಚಿಕಿತ್ಸೆಯಾಗಿದೆ. ಇದರಲ್ಲಿ ೧/೨ ಅಥವಾ ೧ ಸೆಂ.ಮೀ. ನಷ್ಟು ರಂಧ್ರವನ್ನು ಉದರದಲ್ಲಿ (ಹೊಟ್ಟೆಯಲ್ಲಿ) ಅಗತ್ಯಕ್ಕೆ ತಕ್ಕಂತೆ ಮಾಡಲಾಗುತ್ತದೆ. ಈ ರಂಧ್ರಗಳ ಮುಲಕ ಟೆಲಿಸ್ಕೋಪ್ ಕ್ಯಾಮರಾ ಹಾಕಿ ಅದನ್ನು ವೀಡಿಯೊ, ಟಿ.ವಿ.ಯಲ್ಲಿ ನೋಡುತ್ತಾ ಸೂಕ್ಷ್ಮ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯ. ಇದೊಂದು ಸುಲಭ, ಸರಳ ಶಸ್ತ್ರ ಚಿಕಿತ್ಸಾ ವಿಧಾನವಾಗಿದೆ.                       

ಶಸ್ತ್ರ ಚಿಕಿತ್ಸೆಯಿಂದ ಆಗುವ ಉಪಯೋಗಗಳು:

೧. ೧೦-೧೨ ಸೆಂ.ಮೀ. ಉದ್ದದ ಹೊಟ್ಟೆಯನ್ನು (ಉದರ) ಕೊಯ್ದು ಶಸ್ತ್ರ ಚಿಕಿತ್ಸೆ ಮಾಡುವ ಬದಲಿಗೆ ೧/೨ ಅಥವಾ ಒಂದು ಸೆಂ.ಮೀ. ನಷ್ಟು ರಂಧ್ರ ಮಾಡಲಾಗುತ್ತದೆ.

೨. ಈ ಶಸ್ತ್ರ ಚಿಕಿತ್ಸೆಯ ನಂತರ ಯಾವುದೇ ಕಲೆ (ಗುರುತು) ಉಳಿಯುವುದಿಲ್ಲ.

೩. ಈ ಶಸ್ತ್ರ ಚಿಕಿತ್ಸೆ ನಂತರ ಪಥ್ಯವನ್ನು ಅನುಸರಿಸುವ ಅಗತ್ಯವಿಲ್ಲ.

೪. ಬಹುದಿನಗಳ ವಿಶ್ರಾಂತಿಯ ಅವಶ್ಯವಿಲ್ಲ.

೫. ಹೆಚ್ಚಿನ ಔಷಧಿಗಳ ಸೇವನೆ ಇರುವುದಿಲ್ಲ.

೬. ಶಸ್ತ್ರ ಚಿಕಿತ್ಸೆಯ ಗಾಯಕ್ಕೆ ನಂಜಿನ ಸೋಂಕಾಗುವ ಭಯ ಇರುವುದಿಲ್ಲ.

೭. ಶೀಘ್ರ ಗುಣಮುಖರಾಗಬಹುದು.

೮. ಲ್ಯಾಪ್ರೋಸ್ಕೋಪಿಯ ಮುಖಾಂತರ ಪ್ರಣಾಳ ಶಿಶು ಚಿಕಿತ್ಸೆಗೂ, ಗಿಫ್ಟ್(Gift), ಇದಲ್ಲದೆ ಅಂಡಾಣುಗಳನ್ನು ಶೇಖರಣೆ ಮಾಡಲು ಉಪಯೋಗಿಸಬಹುದು ಮತ್ತು ಸ್ಥಾನಪಲ್ಲಟಗೊಂಡ ಭ್ರೂಣಕ್ಕೂ (Ectopic Pregnancy) ಚಿಕಿತ್ಸೆ ನೀಡಬಹುದು. ನಿಮ್ಮ ವೈದ್ಯರ ಸಲಹೆಯಂತೆ ಒಂದು ಸಾರಿ ಪರೀಕ್ಷೆ ಮಾಡಿಸಿಕೊಳ್ಳಿ.