ಮಾನ್ಯಮಿತ್ರರೂ ಹದಿನಾಲ್ಕನೆಯ ಜಾನಪದ ಸಮ್ಮೇಲನದ ಅಧ್ಯಕ್ಷರೂ ಆದ ಡಾ. ಹಾ. ಮಾ. ನಾಯಕ ಅವರೇ, ಸಮ್ಮೇಲನದ ನಿರ್ದೇಶಕರಾದ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ ಅವರೇ, ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ಯಾಮನೂರು ಶಿವಶಂಕರಪ್ಪನವರೇ, ಜಾನಪದ ಪ್ರೇಮಿಗಳೆ-

ಕರ್ನಾಟಕ ವಿಶ್ವವಿದ್ಯಾಲಯ ನಮ್ಮ ನಾಡಿನ ಒಂದು ಉನ್ನತ ವಿದ್ಯಾಸಂಸ್ಥೆ. ಕನ್ನಡ ನಾಡಿಗೆ ಕರ್ನಾಟಕ ಎಂದು ಹೆಸರಿಸುವ ಪೂರ್ವದಲ್ಲಿಯೇ ನಮ್ಮ ವಿಶ್ವವಿದ್ಯಾಲಯದ ಹಿರಿಯರು ಕರ್ನಾಟಕ ವಿಶ್ವವಿದ್ಯಾಲಯವೆಂಬ ಹೆಸರಿನ್ನಿಟ್ಟುದು ಅವರ ಧೈರ್ಯ, ದೂರದರ್ಶಿತ್ವವನ್ನು ಸೂಚಿಸುತ್ತದೆ. ವಿಶ್ವದ ವಿದ್ಯೆಯನ್ನು ಕರ್ನಾಟಕಕ್ಕೂ, ಕರ್ನಾಟಕದ ವಿದ್ಯೆಯನ್ನು ವಿಶ್ವಕ್ಕೂ ವಿನಿಮಯಗೊಳಿಸುವಲ್ಲಿ ರಾಜ್ಯದ ಇತರ ವಿಶ್ವವಿದ್ಯಾಲಯಗಳಂತೆ, ಕರ್ನಾಟಕ ವಿಶ್ವವಿದ್ಯಾಲಯದ ಸಾಧನೆಯೂ ಮಹತ್ವದ್ದಾಗಿದೆ. ಇಂದು ರಾಜಸತ್ತೆಯ ಕಾಲ ಮುಗಿದು ಪ್ರಜಾಸತ್ತೆಯ ಕಾಲ ಅಸ್ತತ್ವದಲ್ಲಿದೆ. ಹೀಗಾಗಿ ಶಿಕ್ಷಣ ಕೇವಲ ಶ್ರೀಮಂತ ವರ್ಗದ, ನಗರವಾಸಿಗಳ ಸೊತ್ತಾಗದೇ ಬಡವರ್ಗದ ಗ್ರಾಮವಾಸಿಗಳ ಬಾಗಿಲನ್ನು ತಟ್ಟಬೇಕಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ವಿದ್ವತ್ ಜನತೆಗಾಗಿ ಬೋಧನೆ, ಸಂಶೋಧನೆ, ಪ್ರಕಟನೆಗಳಿಗೆ ಅವಕಾಶ ಕೊಡುವಂತೆ, ಜನತೆಗಾಗಿ ಪ್ರಚಾರೋಪನ್ಯಾಸಮಾಲೆ, ಎನ್. ಎಸ್. ಎಸ್. ಕ್ಯಾಂಪ, ಸಂಚಾರಿ ಗ್ರಂಥಾಲಯ ಇತ್ಯಾದಿಗಳನ್ನು ಸಾರ್ಥಕರೀತಿಯಲ್ಲಿ ನಡೆಸಿಕೊಂಡು ಬರುತ್ತಲಿದೆ. ಇದರಿಂದಾಗಿ ವಿಶ್ವವಿದ್ಯಾಲಯಕ್ಕೂ ಗ್ರಾಮೀಣ ಪರಿಸರಕ್ಕೂ ನೇರ ಸೇತುವೆ ನಿರ್ಮಾಣವಾಗಿದೆ. ಈ ನಿರ್ಮಾಣಕ್ಕೆ ಇನ್ನೊಂದು ನಿದರ್ಶನ ಈ ಅಖಿಲ ಕರ್ನಾಟಕ ಜಾನಪದ ಸಮ್ಮೇಲನ. ಕನ್ನಡ ಅಧ್ಯಯನಪೀಠ, ಸಾಹಿತ್ಯ, ಭಾಷಾಶಾಸ್ತ್ರ, ಜಾನಪದ ಮುಂತಾದ ವಿಷಯಗಳ ಅಧ್ಯಾಪನ, ಸಂಶೋಧನೆಯೊಡನೆ, ಗ್ರಾಮಕಲೆಗಳ ಹಾಗೂ ಜನಜೀವನ ಸಂಪರ್ಕ ಬೆಳೆಯಿಸುವ ಈ ಜಾನಪದ ಸಮ್ಮೇಳನವನ್ನು ಈ ಹದಿಮೂರು ವರ್ಷ ನಿರಂತರವಾಗಿ ನಡೆಯಿಸಿಕೊಂಡು ಬಂದಿರುವುದು ಅಭಿಮಾನದ ಸಂಗತಿ.

ಈ ಹದಿನಾಲ್ಕನೆಯ ಸಮ್ಮೇಲನದ ಸರ್ವಾಧ್ಯಕ್ಷತೆಯನ್ನು ನನ್ನ ಮಿತ್ರರೂ, ಸುಪ್ರಸಿದ್ಧ ಜಾನಪದ ವಿದ್ವಾಂಸರೂ ಆದ ಡಾ. ಹಾ. ಮಾ. ನಾಯಕ ಅವರು ವಹಿಸುತ್ತಿರುವದು ನನಗೆ ವಿಶೇಷ ಸಂತೋಷವನ್ನುಂಟುಮಾಡಿದೆ. ಡಾ. ನಾಯಕ ಅವರು ಈ ವಿಷಯಕ್ಕೆ ಹೊಸದಿಕ್ಕು ತೋರಿಸಿದ ಪ್ರಥಮರಲ್ಲಿ ಒಬ್ಬರು. ಇವರ ‘ಜಾನಪದ ಸ್ವರೂಪ’ ಈ ಕ್ಷೇತ್ರದ ಮಾರ್ಗದರ್ಶಿಕೃತಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದವನ್ನು ಬೆಳೆಯಿಸಿದ ಮುಖ್ಯರಲ್ಲಿ ಶ್ರೀ ನಾಯಕರೂ ಒಬ್ಬರು. ಹೀಗೆ ಜಾನಪದದ ಬರೆವಣಿಗೆ ಬೆಳವಣಿಗೆ ಕಾರ್ಯದಲ್ಲಿ ನಿರಂತರ ದುಡಿಯುತ್ತ ಬಂದ ಇವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಲನ ಅರ್ಥಪೂರ್ಣವಾಗಿ ಜರುಗುವುದೆಂದು ಆಶಿಸುತ್ತೇನೆ.

ದಾವಣಗೆರೆ ಅನೇಕ ದೃಷ್ಟಿಗಳಿಂದ ನಮ್ಮ ರಾಜ್ಯದ ಕೇಂದ್ರಪಟ್ಟಣ. ವ್ಯಾಪಾರ, ಉದ್ದಿಮೆ, ಶಿಕ್ಷಣ, ರಾಜಕೀಯ ಮೊದಲಾದ ಕ್ಷೇತ್ರಗಳ ಮೂಲಕ ಅಖಿಲ ಕರ್ನಾಟಕದ ಮೇಲೆ ತನ್ನ ಪ್ರಭಾವ ಬೀರಿದ ಈ ಪಟ್ಟಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವಕಾರ್ಯದರ್ಶಿಗಳಾದ ಬೀರಿದ ಈ ಪಟ್ಟಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವಕಾರ್ಯದರ್ಶಿಗಳಾದ ಶಾಮನೂರ ಶಿವಶಂಕರಪ್ಪನವರ ಮುಂದಾಳುತನ ಹಾಗೂ ದಾವಣಗೆರೆ ಜನತೆಯ ಸಹಕಾರದಿಂದಾಗಿ ನಮ್ಮ ವಿಶ್ವವಿದ್ಯಾಲಯದ ಈ ಸಮ್ಮೇಲನ ವೈಭವಪೂರ್ಣವಾಗಿ ಜರುಗುವಲ್ಲಿ ಸಂದೇಹವಿಲ್ಲ.

ಕರ್ನಾಟಕ ವಿಶ್ವವಿದ್ಯಾಲಯದ ಮಹತ್ವಪೂರ್ಣ ಸಮ್ಮೇಲನ ಮೊದಲಬಾರಿಗೆ ಅದರ ವ್ಯಾಪ್ತಿಯ ಆಚೆಗಿನ ಪ್ರದೇಶದಲ್ಲಿ ಜರುಗುತ್ತಲಿದೆ. ಬೆಳಗಾವಿಯಲ್ಲಿ ಜರುಗಿದ ೧೨ನೆಯ ಅಖಿಲ ಕರ್ನಾಟಿಕ ಜಾನಪದ ಸಮ್ಮೇಲನದಲ್ಲಿಯೇ ಈ ಸಮ್ಮೇಲನದ ಸೀಮೋಲ್ಲಂಘನೆಯ ಅವಶ್ಯಕತೆಯನ್ನು ಪ್ರಕಟಪಡಿಸಲಾಗಿದ್ದಿತು. ನಮ್ಮ ಆ ಆಶೆ ಈಗ ದಾವಣಗೆರೆಯಲ್ಲಿ ಆಕಾರಪಡೆದುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ, ಮುಂದಿನ ದಿನಗಳಲ್ಲಿ ಈ ಸಮ್ಮೇಲನ ಇನ್ನೂ ದೂರದ ನಗರಗಳಲ್ಲಿ ಅಷ್ಟೇ ಅಲ್ಲದೆ, ಕಾವೇರಿಯಿಂದ ಗೋದಾವರಿವರೆಗಿನ ಯಾವುದೇ ಪ್ರದೇಶದಲ್ಲಿ ಜರುಗಲೆಂದು ಹಾರೈಸುತ್ತೇನೆ.

ಅಖಿಲ ಕರ್ನಾಟಕ ಜಾನಪದ ಸಮ್ಮೇಲನ ಕನ್ನಡ ಅಧ್ಯಯನಪೀಠದ ಒಂದು ಮುಖ್ಯ ಉಪಕ್ರಮ. ಕನ್ನಡ ಅಧ್ಯಯನಪೀಠ ಕೇವಲ ಒಂದು ವಿಭಾಗವಲ್ಲ; ರಾಜ್ಯದ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನದ ಒಂದು ಸಂಸ್ಥೆ ಆಗಿದೆ. ಅದು ಏಕಕಾಲಕ್ಕೆ ಸಮಾಜ ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಂಪರ್ಕಸೇತುವೆಯಾಗಿ ನಿಂತಿದೆ. ಜಾನಪದ ಸಾಹಿತ್ಯ ಕಲೆಗಳ ಆಗರವಾದ ಉತ್ತರ ಕರ್ನಾಟಕದ ಸಾಂಸ್ಕೃತಿಕ ಕೇಂದ್ರಬಿಂದುವೂ ಆಗಿದೆ. ವಚನಸಾಹಿತ್ಯ, ಜನಪದ ಸಾಹಿತ್ಯ ಭಾಷಾಶಾಸ್ತ್ರ ವಿವಿಧ ಭಾಷೆಗಳ ಬೋಧನೆ ಮುಂತಾದ ಕಾರ್ಯಗಳಲ್ಲಿ ಕನ್ನಡ ಅಧ್ಯಯನಪೀಠದ ಸಾಧನೆ ಗಣನೀಯವಾಗಿದೆ.

ಜಾನಪದವನ್ನು ಇತರ ವಿಶ್ವವಿದ್ಯಾಲಯಗಳಂತೆ ಕೇವಲ ಸ್ನಾತಕೋತ್ತರ ಮಟ್ಟದಲ್ಲಿ ಮಾತ್ರ ಬೋಧಿಸದೇ ಕಾಲೇಜು ಮಟ್ಟದಲ್ಲಿಯೂ ಬೋಧಿಸುವ ವ್ಯವಸ್ಥೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿದೆ. ಇದು ಈ ವಿಶ್ವವಿದ್ಯಾಲಯದ ಜನಪರ ಧೋರಣೆಗೆ ಸಾಕ್ಷಿಯಾಗಿದೆ. ಹೀಗೆ ಬೋಧನೆಯೊಂದಿಗೆ ಜಾನಪದ ಸಂಶೋಧನೆ ಪ್ರಕಟನೆಗಳಿಗೂ ಇಲ್ಲಿ ಯೋಗ್ಯ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಜೊತೆಗೆ ಜಾನಪದ ವಸ್ತುಸಂಗ್ರಹಾಲಯ, ಧ್ವನಿಮುದ್ರಣ ಗ್ರಂಥಾಲಯ, ಸಾಕ್ಷಿಚಿತ್ರ ಸಂಗ್ರಹಾಲಯಗಳನ್ನು ಬೆಳೆಸುವದರತ್ತ ಕೈಗೆತ್ತಿಕೊಂಡಿರುವ ಯೋಜನೆಗಳು ಸೂಕ್ತ ಆಕಾರ ಪಡೆಯುತ್ತಿರುವದು ಸಂತೋಷದ ವಿಷಯವಾಗಿದೆ.

ಕನ್ನಡ ಅಧ್ಯಯನಪೀಠದ ಈ ಸಮ್ಮೇಲನ ಕರ್ನಾಟಕ ವಿಶ್ವವಿದ್ಯಾಲಯದ ಹೆಮ್ಮೆಯ ಕಾರ್ಯಕ್ರಮ. ಇಷ್ಟು ವ್ಯಾಪಕವಾದ ವೈವಿಧ್ಯಪೂರ್ಣವಾದ ಒಂದು ಕಾರ್ಯಕ್ರಮವನ್ನು ಹದಿನಾಲ್ಕು ವರ್ಷ ನಿಲ್ಲದೆ ನಡೆಸಿಕೊಂಡು ಬರುವುದು ದೊಡ್ಡ ಜವಾಬ್ದಾರಿಯೆಂದು ಬೇರೆ ಹೇಳಬೇಕಿಲ್ಲ. ಇದನ್ನು ಉನ್ನತ ಮಟ್ಟದಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ಅಧ್ಯಯನಪೀಠದ ಮಿತ್ರರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ಈ ಸಮ್ಮೇಲನಕ್ಕೆ ಎರಡು ಆಯಾಮಗಳಿವೆ: ಒಂದು-ವಿಚಾರ ಸಂಕಿರಣ. ಇನ್ನೊಂದು ರಂಗದರ್ಶನ, ಇವುಗಳಲ್ಲಿ ಒಂದು ಜಾನಪದದ ತಾತ್ವಿಕ ವಿವೇಚನೆಯಾದರೆ, ಇನ್ನೊಂದು ಅನ್ವಯಿಕ ಪ್ರದರ್ಶನವಾಗಿದೆ. ಪರಸ್ಪರ ಪೂರಕವಾಗಿರುವ ಇವು ಅಭ್ಯಾಸವನ್ನು ಪೂರ್ಣಗೊಳಿಸುವಲ್ಲಿ ಸಂದೇಹವಿಲ್ಲ.

ಕರ್ನಾಟಕದಲ್ಲಿ ಜಾನಪದ ಅಧ್ಯಯನ, ಪ್ರಚಾರಕ, ಪ್ರಕಟನೆ ವಿವಿಧ ಸಂಸ್ಥೆಗಳ ಮೂಲಕ ವ್ಯಾಪಕವಾಗಿ ನಡೆಯುತ್ತಿದೆ. ಈ ಸಾಧನೆ, ರಾಷ್ಟ್ರದಲ್ಲಿಯೇ ಒಂದು ವಿಶೇಷ ಎಂದು ತಿಳಿದು ಬಂದಿದೆ. ಅನೇಕ ಸಂಸ್ಕೃತಿಗಳ ಒಂದು ಸಂಕೀರ್ಣವಾಗಿರುವ ಜಾನಪದವನ್ನು ಇಂದು ವೈಜ್ಞಾನಿಕವಾಗಿ ವರ್ಗೀಕರಿಸಿಕೊಂಡು, ಆಧುನಿಕ ಜೀವನಕ್ಕೆ ಅನ್ವಯವಾಗಬಲ್ಲ ಅದರ ವಿಶೇಷಗಳನ್ನು ಗುರುತಿಸಬೇಕಾಗುತ್ತದೆ. ಅದರಲ್ಲಿಯೂ ಕಲೆಗೆ ಸಂಬಂಧಪಟ್ಟ ಸಂಗೀತ, ಕುಣಿತ, ವಾದ್ಯಗಳ ಅಭ್ಯಾಸ ಇನ್ನೂ ಜಟಿಲ. ನಮ್ಮ ಪರಂಪರೆಯ ಬೇರುಗಳನ್ನು ಹುಡುಕಿ, ಹೊಸ ಯುಗಮಾನಕ್ಕೆ ಅವಶ್ಯಕವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಜಾನಪದ ವಿದ್ವಾಂಸರು ಈ ಅಂಶಗಳತ್ತ ಗಮನವಿರಿಸುವರೆಂದು ನಂಬಿದ್ದೇನೆ.

ಇನ್ನೊಂದು ಮುಖ್ಯಸಂಗತಿ: ಪ್ರತಿದಿನ ಸಂಜೆ ಏರ್ಪಡಿಸಿರುವ ಜಾನಪದ ಕಲೆಗಳ ರಂಗದರ್ಶನ. ಇದು ಕೇವಲ ಮನರಂಜನೆಯ ಸಾಧನೆಯೆಂದು ಭಾವಿಸಬಾರದು. ವಿದ್ವಾಂಸರು ಇಲ್ಲಿಯ ಗೀತ, ನರ್ತನ, ವಾದ್ಯಗಳನ್ನು ಅಭ್ಯಾಸದೃಷ್ಟಿಯಿಂದ ಅವಲೋಕಿಸಬೇಕು, ಪರಿಶೀಲಿಸಬೇಕು. ಹೀಗೆ ವಿದ್ವಾಂಸರ ವಿಚಾರ ಸಂಕಿರಣಗಳು, ಜಾನಪದ ಕಲಾವಿದರ ಕಲಾದರ್ಶನಗಳು ಈ ಸಮ್ಮೇಳನದ ವೈಶಿಷ್ಟ್ಯವಾಗಿವೆ. ಜಾನಪದವನ್ನು ನಗರವಾಸಿಗಳಿಗೆ, ನಗರವಾಸಿಗಳನ್ನು ಜಾನಪದರಿಗೆ ಪರಿಚಯ ಮಾಡಿಕೊಡುವ ಈ ಹದಿನಾಲ್ಕನೇ ಜಾನಪದ ಸಮ್ಮೇಳನ ಎಲ್ಲಂದದಿಂದ ಯಶಸ್ವಿಯಾಗಲೆಂದು ಹಾರೈಸುತ್ತೇನೆ.