೧೨ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಲನದ ಅಧ್ಯಕ್ಷರಾದ ಡಾ. ಆರ್.ಸಿ. ಹಿರೇಮಠ ಅವರೇ, ಸಿಂಡಿಕೇಟ್ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ:-

ಕನ್ನಡಿಗರ ಅಶೋತ್ತರಗಳ ಪ್ರತೀಕವಾದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಈಗ ೨೫ ವರ್ಷ. ೧೯೪೯ ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಒಂದು ಶಾಖೆಯಾಗಿ ತಲೆ ಎತ್ತಿದ ಈ ವಿದ್ಯಾಸಂಸ್ಥೆ ಆಮೇಲೆ ಗುಲಬರ್ಗಾದಲ್ಲಿ ತನ್ನ ಶಾಖೆಯನ್ನು ಸ್ಥಾಪಿಸಿ, ಅದನ್ನು ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ರೂಪಿಸಿತು. ಜೊತೆಗೆ ಸೊಂಡೂರಿನಲ್ಲಿ ‘ಸ್ನಾತಕೋತ್ತರ ತಾಂತ್ರಿಕ ಅಧ್ಯಯನ ಶಾಖೆ’ಯನ್ನೂ, ಕಾರವಾರದಲ್ಲಿ ‘ಸಾಗರವಿಜ್ಞಾನ ಅಧ್ಯಯನ ಶಾಖೆ’ಯನ್ನೂ ಅಸ್ತಿತ್ವಕ್ಕೆ ತಂದ ಇದು, ತೀರ ಇತ್ತೀಚೆ ಬೆಳಗಾವಿಯಲ್ಲಿ ಸ್ನಾತಕೋತ್ತರ ಆವರಣವನ್ನು ಪ್ರಾರಂಭಿಸಿದೆ. ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಶಿಕ್ಷಣದ ನೆಲೆಗಳನ್ನು ಸ್ಥಾಪಿಸುತ್ತಿರುವುದು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾಪ್ರಸಾರ ನೀತಿಗೆ ನಿದರ್ಶನವೆನಿಸಿದೆ. ಕೇವಲ ಕೇಂದ್ರ ಸ್ಥಾಪಿಸುವದಷ್ಟೇ ಮುಖ್ಯವಲ್ಲ. ಸ್ಥಾಪಿಸಿದ ಕೇಂದ್ರದ ಬಹಿರಂಗವನ್ನು ಬದ್ರಗೊಳಿಸುವುದೂ ಅಂತರಂಗವನ್ನು ಸತ್ವಶಾಲಿಗೊಳಿಸುವುದೂ ಮುಖ್ಯ. ಈ ದೃಷ್ಟಿಯಿಂದ ಬೆಳಗಾವಿ ಕೇಂದ್ರದ ಯೋಗಕ್ಷೇಮವನ್ನು ಕರ್ನಾಟಕ ವಿಶ್ವವಿದ್ಯಾಲಯ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಲಿದೆ. ಬೆಳಗಾವಿ ಆವರಣದ ಅಭಿವೃದ್ಧಿ ಚರ್ಚೆಗಾಗಿಯೇ ಇಂದು ಮಧ್ಯಾಹ್ನ ಸಿಂಡಿಕೇಟ್ ಸಭೆ ಜರುಗುತ್ತಲಿರುವುದು ಇದಕ್ಕೆ ನಿದರ್ಶನವೆನಿಸಿದೆ.

ಹೀಗೆ ಬೆಳಗಾವಿ ಕೇಂದ್ರವನ್ನು ಶೈಕ್ಷಣಿಕವಾಗಿ ಸತ್ವಶಾಲಿಗೊಳಿಸುವ ದಿಸೆಯಲ್ಲಿ ಇನ್ನೊಂದು ಹೊಸ ಹೆಜ್ಜೆ ಎನಿಸಿದೆ ಇಂದು ಜರುಗುತ್ತಲಿರುವ ೧೨ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಲನ ಯಾವುದೇ ವಿದ್ಯಾಕೇಂದ್ರವು ಬೋಧನೆಯೊಂದಿಗೆ ವಿಚಾರ ಸಂಕಿರಣ, ಸಭೆ -ಸಮ್ಮೇಲನ ಇತ್ಯಾದಿಗಳ ಮೂಲಕವೂ ನಿರಂತರ ಕ್ರಿಯಾಶೀಲವಾಗಿರಬೇಕು. ಬೇರೆ ಬೇರೆ ಪ್ರದೇಶದ ವಿದ್ವಾಂಸರ ಆಗಮನ, ಅವರ ವಿದ್ವತ್‌ಪೂರ್ಣ ಉಪನ್ಯಾಸ, ಚರ್ಚೆ-ಪ್ರತಿ ಚರ್ಚೆ ಇತ್ಯಾದಿಗಳಿಂದ ವಿದ್ಯಾಕೇಂದ್ರ ಹೊಸ ಜೀವ ಪಡೆಯುತ್ತದೆ. ಕನ್ನಡ ಅಧ್ಯಯನ ಪೀಠದ ಈ ಸಮ್ಮೇಲನ, ಈ ಆವರಣಕ್ಕೆ ಅಂಥ ಒಂದು ಅಪೂರ್ವ ಅವಕಾಶವೆಂದು ನಾನು ಬಗೆಯುತ್ತೇನೆ.

ಕನ್ನಡ ಅಧ್ಯಯನಪೀಠ ನಮ್ಮ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳ ಅಧ್ಯಯನ, ಅಧ್ಯಾಪನ, ಸಂಶೋಧನ ಮತ್ತು ಪ್ರಸಾರಗಳ ಯೋಗ್ಯವೇದಿಕೆ ವಿಶ್ವವಿದ್ಯಾಲಯದ ಚೊಚ್ಚಿಲು ಶಾಕೆಯಾದ ಇದು ಬೋಧನೆ, ಸಂಶೋಧನೆ, ಪ್ರಕಟನ ಮತ್ತು ಪ್ರಸಾರ ಎಂಬ ನಾಲ್ಕು ಮುಖಗಳಲ್ಲಿ ಮುನ್ನಡೆದ ಒಂದು ಸಂಸ್ಥೆ. ವಿಶ್ವವಿದ್ಯಾಲಯದ ಸಂದೇಶವನ್ನು ಸಮಾಜಕ್ಕೂ ಸಮಾಜದ ಸಂದೇಶವನ್ನು ವಿಶ್ವವಿದ್ಯಾಲಕ್ಕೂ ಪ್ರಸಾರ ಮಾಡುವ ರಾಯಭಾರಿ ಸಂಸ್ಥೆಯಿದು. ಹೀಗೆ ಪ್ರಾದೇಶಿಕ ವಿಶ್ವವಿದ್ಯಾಲಯಗಳಲ್ಲಿ ಪ್ರಾಂತಭಾಷಾವಿಭಾಗಗಳ ಪಾತ್ರ ಮಹತ್ವಪೂರ್ಣವೆಂಬ ಅಂಶವನ್ನು ಅರ್ಥಮಾಡಿಕೊಂಡ ಕನ್ನಡ ಅಧ್ಯಯನ ಪೀಠ ನಾಡು, ನುಡಿ, ಸಾಹಿತ್ಯ, ಶಾಸ್ತ್ರ, ಇತ್ಯಾದಿ ಕ್ಷೇತ್ರಗಳಲ್ಲಿ ಈವರೆಗೆ ಗಣನೀಯ ಕಾರ್ಯ ಮಾಡಿದೆ. ಈ ಕಾರ್ಯ-ಕಲಾಪಗಳ ಒಂದು ಅಂಗ ಜಾನಪದ ಸಮ್ಮೇಲನ.

‘ವಿಶ್ವವಿದ್ಯಾಲಯ’ ಪದಕ್ಕೆ ಈಗ ಹೊಸ ಅರ್ಥ ಪ್ರಾಪ್ತವಾಗಿದೆ. ಅದು ಕೇವಲ ಶ್ರೀಮಂತರಿಗಾಗಿ ಅಲ್ಲ, ಬಡವರಿಗಾಗಿಯೂ ಇದೆ. ಕೇವಲ ವಿದ್ವತ್ ಜನತೆಗಾಗಿ ಅಲ್ಲ, ಜನತೆಗಾಗಿಯೂ ಇದೆ – ಎಂಬ ಪ್ರಜ್ಞೆ ಇಂದು ನಿಖರವಾಗುತ್ತ ನಡೆದಂತೆ, ವಿಶ್ವವಿದ್ಯಾಲಯಗಳು ಶ್ರೀಸಾಮಾನ್ಯನ ಆಚಾರ-ವಿಚಾರಗಳ, ಬದುಕು-ಭಾವನೆಗಳ ಅಧ್ಯಯನದತ್ತ ಕ್ರಮೇಣ ಹೆಚ್ಚು ಗಮನಕೊಡತೊಡಗಿದೆ. ಶ್ರೀಸಾಮಾನ್ಯನಿಗೆ ವಿಶ್ವವಿದ್ಯಾಲಯಕ್ಕೆ ಬರಲು ಸಾಧ್ಯವಾಗದಿದ್ದರೆ ವಿಶ್ವವಿದ್ಯಾಲಯವೇ ಶ್ರೀಸಾಮಾನ್ಯನ ಬಾಗಿಲಿಗೆ ಹೋಗಬೇಕು. ಈ ದೃಷ್ಟಿಯಿಂದ ಕರ್ನಾಟಕ ವಿಶ್ವವಿದ್ಯಾಲಯ ಪ್ರಚಾರೋಪನ್ಯಾಸಮಾಲೆ, ಎನ್.ಎಸ್.ಎಸ್. ಕ್ಯಾಂಪ್, ವಯಸ್ಕರ ಶಿಕ್ಷಣ ಬೋಧೆ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಶ್ರೇಣಿಯ ಒಂದು ಅಪೂರ್ವ ಉಪಕ್ರಮ. ಈ ಜಾನಪದ ಸಮ್ಮೇಲನ.

‘ಜನಪದ’ವೆಂಬುದು ಗ್ರಾಮೀನ ಜನಸಮೂಹ. ಇದು ಲಕ್ಷೋಪಲಕ್ಷ ವರ್ಷಗಳಷ್ಟು ಹಳೆಯ ಸಮಾಜ. ಇದರ ಕಾಯಕ, ವಾಚಿಕ, ಮಾನಸಿಕ ಪದರಗಳಲ್ಲಿ ಅಷ್ಟು ಪೂರ್ವದ ಅನುಭವಗಳು ಪರೋಕ್ಷ-ಪ್ರತ್ಯಕ್ಷ ರೂಪದಿಂದ ಸೇರಿಕೊಂಡಿರುತ್ತವೆ. ಇವುಗಳ ಅಧ್ಯಯನಕ್ಕೆ ಇಂದು ಮಹತ್ವ ಪ್ರಾಪ್ತವಾಗಿದೆ. ಇದನ್ನು ಗಮನಿಸಿ ಕನ್ನಡ ಅಧ್ಯಯನ ಪೀಠ ಜಾನಪದ ಬೋಧನ, ಸಂಶೋಧನ, ಪ್ರಕಟನಕಾರ್ಯಗಳೊಂದಿಗೆ ಸಮ್ಮೇಲನವನ್ನೂ ನಡೆಸುತ್ತದೆ. ಈ ಮೊದಲು ಜಾನಪದ ವೃತ್ತಿ ಕಲಾವಿದರು, ಗ್ರಾಮೀಣ ಆಯಗಾರರು, ಸ್ತ್ರೀದೇವತೆಗಳು, ಪುರುಷದೇವತೆಗಳು ಈ ಅಧ್ಯಯನ ನಡೆಸಿ, ಈ ಸಲ ‘ಆಕಾಶ ಜಾನಪದ’ ವೆಂಬ ಅಧ್ಯಯನಕ್ಕೆ ಕೈಹಾಕಿದೆ. ಆಕಾಶ ಮತ್ತು ಆಕಾಶಗಳಲ್ಲಿ ತೋರುವ ಸೂರ‍್ಯ, ಚಂದ್ರ, ಮೋಡ, ಮಳೆ, ನಕ್ಷತ್ರ, ಗ್ರಹ, ಬಿಸಿಲು, ಬೆಳದಿಂಗಳು ಇತ್ಯಾದಿಗಳೆಂದರೆ ಏನು? ಇವು ತಮ್ಮ ಜೀವನದ ಮೇಲೆ ಮಾಡುವ ಪರಿಪುಣಾಮಗಳೇನು? ಇತ್ಯಾದಿ ವಿಷಯವಾಗಿ ನಮ್ಮ ಜಾನಪದರದೇ ಆದ ಬೇರೊಂದು ತಿಳಿವಳಿಕೆಯಿದೆ. ಮನೆ ಮಾರುಗಳಿಲ್ಲದೆ ಆಕಾಶದ ಕೆಳಗೆ ಬದುಕಿದೆ, ಬದುಕುವ ಈ ಕೋಟಿ ಕೋಟಿ ಜನ ಪ್ರತಿನಿತ್ಯದ ಅವಲೋಕನ, ಅನುಭವದಿಂದ ಇವುಗಳ ಬಗ್ಗೆ ಕೆಲವು ನಿರ್ದಿಷ್ಟ ನಿಲುವು ತಾಳಿದ್ದಾರೆ, ನಂಬಿಕೆಗಳನ್ನು ರೂಪಿಸಿಕೊಂಡಿದ್ದಾರೆ. ಈ ನಿಲುವು-ನಂಬಿಕೆಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ ಕೆಲಸ ಇಂದು ನಡೆಯಬೇಕಾಗಿದೆ. ಇವುಗಳ ಸತ್ಯಾ ಸತ್ಯತೆಯನ್ನು ಶೋಧಿಸಬೇಕಾಗಿದೆ. ಖಗೋಲವನ್ನು ಕುರಿತು ಈವರೆಗೆ ನಾವು ಪ್ರಯೋಗ ಶಾಲೆಯಲ್ಲಿ ಅಭ್ಯಾಸ ನಡೆಸಿದ್ದೇವೆ. ಇಂದು ನಾಳೆ ಇಲ್ಲಿ ನಡೆಯುವ ಜೀವನ ಪ್ರಯೋಗಶಾಲೆಯ ಅಭ್ಯಾಸ ಅದಕ್ಕೆ ಪೂರಕವೆಂದು ನಾನು ಬಗೆಯುತ್ತೇನೆ. ಹೀಗಾಗಿ ಈ ಜಾನಪದ ನಂಬಿಕೆಗಳನ್ನು ಸಾರಾಸಗಟು ಅಲ್ಲಗಳೆಯಬಾರದು. ಅಲ್ಲಗಲೆದರೆ ಸಾವಿರಾರು ವರ್ಷಗಳ ಅನುಭವವನ್ನೇ ತಳ್ಳಿಹಾಕಿದಂತಾಗುತ್ತದೆ. ನಾವು ಎಷ್ಟೇ ವಿದ್ಯಾವಂತರಾದರೂ ಈ ನಂಬಿಕೆಗಳಿಂದ, ಕೆಲವೊಮ್ಮೆ ಮೂಢನಂಬಿಕೆಗಳಿಂದ ಮುಕ್ತರಾಗದಷ್ಟು ಇವು ನಮ್ಮನ್ನು ಮುತ್ತಿಕೊಂಡಿವೆ. ಹಬ್ಬ-ಹುಣ್ಣಿಮೆಗಳಲ್ಲಿ ಮಾವಿನ ತಳಿರು ಸಿಗದಾಗ ಪ್ಲಾಸ್ಟಿಕ್ ತಳಿರು ಕಟ್ಟುತ್ತೇವೆ. ನಾಗಪಂಚಮಿಯಂದು ನಾಗಪ್ಪನಿಎ ಎರೆಯಲು ಹಾಲು ಸಿಗದಾದ ಪೌಡರ್ ಹಾಲು ಬಳಸುತ್ತೇವೆ. ಹೀಗೆ ಜಾನಪದ ನಂಬಿಕೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುವುದೇ ಹೊರತು, ಅದು ಸಾಯುವುದಿಲ್ಲವೆಂದು ತೋರುತ್ತದೆ.

ಇದೇ ರೀತಿ ಖಗೋಲವನ್ನು ಕುರಿತು ಜಾನಪದರಲ್ಲಿ ಅಸಂಖ್ಯಾತ ನಂಬಿಕೆಗಳು ಸೃಷ್ಟಿಯಾಗಿವೆ. ಸೂರ‍್ಯಗ್ರಹಣ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೂರ‍್ಯ ಕಿರಣದ ಸ್ಪರ್ಶವಾದರೆ ಹುಟ್ಟು ಮಕ್ಕಳು ಅಂಗವಿಕಲರಾಗುತ್ತಾರೆಂಬುದು ಜಾನಪದರ ಭಾವನೆ. ಹೀಗಾಗಿ ಗ್ರಾಮೀಣ ಗರ್ಭಿಣಿ ಗ್ರಹಣ ಸಂದರ್ಭದಲ್ಲಿ ಕಂಬಳಿ ಮುಸುಕು ಹಾಕಿಕೊಂಡು ಕತ್ತಲಕೋಣೆಯಲ್ಲಿ ಮಲಗುತ್ತಾಳೆ. ಸೂರ‍್ಯಗ್ರಹಣವೆಂಬುದು ಸೂರ‍್ಯನ ಮೇಲೆ ಬಿದ್ದ ಭೂಮಿಯ ನೆರಳು ಎಂದು ಈಗ ಗೊತ್ತಾಗಿದೆ. ಹೀಗಿದ್ದೂ ಸೂರ‍್ಯಗ್ರಹಣದ ಬಗ್ಗೆ ಕೆಲ ವರ್ಗದಲ್ಲಿ ಓದಿಸುವ ಪ್ರಾಧ್ಯಾಪಿಕೆಯರೂ, ಹೆರಿಗೆ ಆಸ್ಪತ್ರೆ ನಡೆಸುವ ಸ್ತ್ರೀವೈದ್ಯರೂ ಗರ್ಭಿಣಿಯರಿದ್ದಾಗ ತಾವೂ ಕಂಬಳಿ ಹೊದ್ದು ಕತ್ತಲು ಕೋಣೆ ಸೇರುವುದನ್ನು ನಾನು ನೋಡಿದ್ದೇನೆ. ದೊಡಡ ದೊಡ್ಡ ಖಗೋಲ ವಿಜ್ಞಾನಿಗಳು ಸೂರ‍್ಯ ಗ್ರಹಣದಂದು ಉಪವಾಸವಿರುವುದು, ಸ್ನಾನ ಸಂಧ್ಯಾ ವಂದನೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಇಷ್ಟು ಆಳವಾಗಿ ನಮ್ಮಲ್ಲಿ ಮನೆ ಮಾಡಿದ ಈ ಖಗೋಲ ಸಂಬಂಧ ನಂಬಿಕೆಗಳ ವೈಜ್ಞಾನಿಕ ಅಧ್ಯಯನ ಇಂದು ಮತ್ತು ನಾಳೆ ಈ ವೇದಿಕೆಯ ಮೇಲೆ ಜರುಗುತ್ತಲಿದೆ.

ಈ ಸಮ್ಮೇಲನ ಕೇವಲ ತಾತ್ವಿಕ ಅಧ್ಯಯನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಅಧ್ಯಯನಕ್ಕೂ ಅವಕಾಶ ಮಾಡಿಕೊಟ್ಟುದು ವಿಶೇಷವೆನಿಸಿದೆ. ಕಾರಣ ಇಲ್ಲಿ ಪ್ರತಿದಿನ ಸಂಜೆ ಜರುಗುವ ಸೂತ್ರಗೊಂಬೆಯಾಟ. ಸುಗ್ಗಿ ಕುಣಿತ, ದಟ್ಟಿಕುಣಿತ – ಇತ್ಯಾದಿಗಳನ್ನು ಕೇವಲ ಮನರಂಜನೆಯೆಂದು ನೋಡದೆ ಅಧ್ಯಯನ ದೃಷ್ಟಿಯಿಂದಲೂ ನೋಡಬೇಕೆಂದು ಸೂಚಿಸುತ್ತೇನೆ.

ಈ ಸಮ್ಮೇಲನದ ಸರ್ವಾಧ್ಯಕ್ಷರು ಡಾ. ಆರ್.ಸಿ. ಹಿರೇಮಠರು. ಕರ್ನಾಟಕ ವಿಶ್ವವಿದ್ಯಾಲಯದೊಂದಿಗೆ ಬೆಳೆದು, ಅದರ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ದುಡಿದವರೂ, ನಮ್ಮ ನಾಡಿನ ಖ್ಯಾತ ವಿದ್ವಾಂಸರೂ ಆಗಿರುವ ಅವರ ಅಧ್ಯಕ್ಷತೆಯಿಂದ ಈ ಸಮ್ಮೇಲನಕ್ಕೆ ಒಂದು ಘನತೆ ಪ್ರಾಪ್ತವಾಗಿದೆ. ವೈಯಕ್ತಿಕವಾಗಿ ನನಗೆ ಸಂತೋಷವಾಗಿದೆ. ಕನ್ನಡ ಅಧ್ಯಯನಪೀಠ, ಮಿತ್ರರು, ಬೆಳಗಾವ ಸ್ನಾತಕೋತ್ತರ ಆವರಣದ ಮಿತ್ರರ ಸಹಾಯದಿಂದ ಬೆಳಗಾವಿಯ ಕಾಲೇಜು ಪ್ರಿನ್ಸಿಪಾಲರ, ಪ್ರಾಧ್ಯಾಪಕರ, ಸಾರ್ವಜನಿಕರ ಸಹಕಾರದಿಂದ ಈ ಸಮ್ಮೇಲನವನ್ನು ಸಂಘಟಿಸಿದ್ದಾರೆ. ಇದು ಕೇವಲ ಒಂದು ಸಭೆಯಲ್ಲ, ಸಮ್ಮೇಲನ. ಕೇವಲ ಅಧ್ಯಯನ ವೇದಿಕೆಯಲ್ಲ, ಒಂದು ಅಧಿವೇಶನ ಇದನ್ನು ಸಂಘಟಿಸುವುದಕ್ಕೆ ಕೈತುಂಬ ದುಡ್ಡು ಬೇಕಾಗುತ್ತದೆ; ಮೈತುಂಬ ದುಡಿಯಬೇಕಾಗುತ್ತದೆ. ಈ ಎಲ್ಲ ಮಿತ್ರರು ಕೈತುಂಬ ಇರಬೇಕಾದ ದುಡ್ಡಿನ ಕೊರತೆಯನ್ನು ಮೈತುಂಬ ದುಡಿದು ತುಂಬಿಕೊಂಡಿದ್ದಾರೆಂದು ನನಗೆ ಮನವರಿಕೆಯಾಗಿದೆ. ನಿಮ್ಮ ಶ್ರಮ ಸಫಲವಾಗಲಿ ಎಂದು ಹಾರೈಸುತ್ತ ಸಮ್ಮೇಲನದ ಅಧ್ಯಕ್ಷರಿಗೂ, ವಿಚಾರಸಂಕಿರಣದ ವಿದ್ವಾಂಸರಿಗೂ, ರಂಗದರ್ಶನ ಕಲಾವಿದರಿಗೂ ಸಮ್ಮೇಲನದ ಸಂಘಟಕರಿಗೂ, ತಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತ, ಈ ಸಮ್ಮೇಲನವನ್ನು ಉದ್ಘಾಟಿಸುತ್ತೇನೆ.