ಪ್ರಾಚೀನ ಕರ್ನಾಟಕದ ಸಾಹಿತ್ಯ-ಸಂಸ್ಕೃತಿಯ ತಿಳುವಳಿಕೆಯನ್ನು ಮನಗಾಣಿಸಲು ಹಲವಾರು ಆಕರಗಳು ನೆರವಾಗುತ್ತವೆ. ಅವುಗಳಲ್ಲಿ ಭಾಷಾ ಸಾಮಗ್ರಿಗಳಾದ ಹಸ್ತಪ್ರತಿಗಳು ಪ್ರಮುಖವಾಗಿವೆ. ಹಸ್ತಪ್ರತಿಗಳ ಸಂ‌ಗ್ರಹ, ಸೂಚೀಕರಣ, ಸಂಪಾದನೆ ಹಾಗೂ ಅಧ್ಯಯನಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಅವುಗಳ ಅಧ್ಯಯನ ಕ್ರಮದಲ್ಲಿ ನೂತನ ಪ್ರಯೋಗಗಳು ನಡೆಯುತ್ತಲಿವೆ. ಹಸ್ತಪ್ರತಿ ಅಧ್ಯಯನಕ್ಕಾಗಿಯೇ ಸ್ವತಂತ್ರ ವಿಭಾಗವನ್ನು ಸ್ಥಾಪಿಸಿದ ಉದಾಹರಣೆಗಳು ಭಾರತದಲ್ಲಿ ವಿರಳ. ಆದರೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಇದಕ್ಕಾಗಿಯೇ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಿರುವುದು ಪ್ರಮುಖ ಅಂಶವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಸ್ತಪ್ರತಿ ಸರ್ವೇಕ್ಷಣೆ, ಸಂಗ್ರಹ, ಸಂರಕ್ಷಣೆ, ಸಂಶೋಧನೆ ಮತ್ತು ಪ್ರಕಟಣೆ-ಈ ಐದು ಹಂತಗಳಲ್ಲಿ ತನ್ನ ಯೋಜನೆಗಳನ್ನು ಪೂರೈಸುತ್ತಾ ಬರುತ್ತಲಿದೆ. ವಿಭಾಗದ ಪ್ರಾಧ್ಯಾಪಕರು ಸಾಮೂಹಿಕ ಮತ್ತು ವೈಯಕ್ತಿಕ ನೆಲೆಯಲ್ಲಿ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಕರ್ನಾಟಕದ ಹಳ್ಳಿಹಳ್ಳಿಗೂ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಹಸ್ತಪ್ರತಿಗಳನ್ನು ಸಂಗ್ರಹಿಸಿ-ಸಂರಕ್ಷಿಸುವುದು ವಿಭಾಗದ ಮೊದಲ ಆದ್ಯತೆ. ಈಗಾಗಲೇ ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬಿಜಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ತಾಳೆಗರಿ, ಕಡತ, ಕಾಗದ ರೂಪದ ನಾಲ್ಕು ಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಹಸ್ತಪ್ರತಿಗಳನ್ನು ಸಿಟ್ರಿನಲ್ ಆಯಿಲ್, ಕಂಪ್ಯೂಟರ‍್, ಸ್ಕ್ಯಾನರ‍್, ಡಿಜಿಟಲೈಜೇಶನ್ ಮುಂತಾದ ಪಾರಂಪರಿಕ ಮತ್ತು ಆಧುನಿಕ ರೀತಿಯಲ್ಲಿ ಸಂರಕ್ಷಿಸಲಾಗುತ್ತಿದೆ. ಹಸ್ತಪ್ರತಿಗಳ ವಿವರಣಾತ್ಮಕ ಸೂಚಿಯನ್ನು ವೈಜ್ಞಾನಿಕ ರೀತಿಯಲ್ಲಿ ಸಂಪುಟಗಳಲ್ಲಿ ಪ್ರಕಟಿಸಲಾಗುತ್ತಿದೆ. ಈಗಾಗಲೇ ನಾಲ್ಕು ಸಂಪುಟಗಳು ಪ್ರಕಟಗೊಂಡಿದ್ದು, ಇನ್ನೆರಡು ಸೂಚೀ ಸಂಪುಟಗಳ ಕಾರ್ಯ ಆರಂಭವಾಗಿದೆ. ಸಂಗ್ರಹಿಸಿದ ಹಸ್ತಪ್ರತಿಗಳ ಅಪ್ರಕಟಿತ ಮತ್ತು ಉಪೇಕ್ಷಿತ ಕೃತಿಗಳ ಪರಿಷ್ಕರಣ ಮತ್ತು ಪ್ರಕಟಣೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಭಾಗ ಮಾಲೆಯಡಿ ಈಗಾಗಲೇ ೩೬ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿದೆ. ಎಮ್ಮೆಬಸವನ ಕಾಲಜ್ಞಾನ ಸಾಹಿತ್ಯ, ಬಸವಯುಗದ ವಚನೇತರ ಸಾಹಿತ್ಯ, ಹಳೆಯ ಲಾವಣಿಗಳು, ಸ್ವರವಚನ ಸಂಪುಟ, ಹಸ್ತಪ್ರತಿಗಳ ಭಾಷಿಕ ರಚನೆ, ಗುಂಡಬ್ರಹ್ಮಯ್ಯಗಳ ಸಾಹಿತ್ಯ, ಚಿದಾನಂದಾವಧೂತ ಚಾರಿತ್ರ‍್ಯ ಕರಸ್ಥಲ ಸಾಹಿತ್ಯ, ನಾಗಲಿಂಗಸ್ವಾಮಿ ತತ್ತ್ವಪದಗಳು, ಕನ್ನಡ ಟೀಕಾಸಾಹಿತ್ಯ, ಕನ್ನಡ ದಾಖಲು ಸಾಹಿತ್ಯ, ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು, ಹಯರತ್ನಶ್ರೇಣಿ, ಜೈನಹಾಡುಗಳು, ಹೊಸ ಕುಮಾರರಾಮನ ಸಾಂಗತ್ಯ, ಹಸ್ತಪ್ರತಿ ಕ್ಷೇತ್ರಕಾರ್ಯ ಇತ್ಯಾದಿ ಕೃತಿಗಳಲ್ಲದೆ ಹಸ್ತಪ್ರತಿ ಅಧ್ಯಯನ, ಹಸ್ತಪ್ರತಿ ವ್ಯಾಸಂಗ ಸಂಪುಟಗಳು ಈ ಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸಿವೆ.

ವಿಭಾಗದ ಕಾರ್ಯ ವೈಖರಿಯನ್ನು ಮಾನ್ಯಮಾಡಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (U.G.C.) ಹಸ್ತಪ್ರತಿ ಸಂರಕ್ಷಣೆಗಾಗಿ ೫ ವರ್ಷಕ್ಕೆ ೧೦ ಲಕ್ಷ, ಪ್ರಧಾನ ಸಂಶೋಧನ ಯೋಜನೆಯಡಿ ಹಸ್ತಪ್ರತಿ ಲಿಪಿಕಾರರ ಚರಿತ್ರೆಗೆ ೨ ಲಕ್ಷ, ತುಳು ಪಾಡ್ದನಗಳ ಸಂಗ್ರಹಕ್ಕೆ ೫ ಲಕ್ಷ, ಕರ್ನಾಟಕ ಹಾಲುಮತ ಸಂಸ್ಕೃತಿಯ ದಾಖಲೀಕರಣ ಹಾಗೂ ವಿಶ್ಲೇಷಣೆಗೆ ೬ ಲಕ್ಷ, ಬಳ್ಳಾರಿ ಜಿಲ್ಲಾ ಶಾಸನೋಕ್ತ ಸ್ಥಳನಾಮಗಳ ಅಧ್ಯಯನಕ್ಕೆ ೪ ಲಕ್ಷ ಅನುದಾನವನ್ನು ಕೊಡಮಾಡಿದೆ. ನ್ಯಾಷನಲ್ ಮಿಷನ್ ಫಾರ‍್ ಮ್ಯಾನುಸ್ಕ್ರಿಪ್ಟ್ಸ್ ಸಂಸ್ಥೆಯಿಂದ ಉತ್ತರ ಕರ್ನಾಟಕ ಹಸ್ತಪ್ರತಿ ಸಂರಕ್ಷಣೆ ಮತ್ತು ಸಂಗ್ರಹಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ.

ಹಸ್ತಪ್ರತಿಗಳ ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾಡಿನ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಿದೆ. ಹಸ್ತಪ್ರತಿಗಳ ಅರ್ಥ, ಸ್ವರೂಪ, ಪ್ರಕಾರ, ಸಂಗ್ರಹ, ಸಂರಕ್ಷಣಾ ಕ್ರಮಗಳನ್ನು ಮತ್ತು ಲಿಪಿ, ಭಾಷೆ, ಬರವಣಿಗೆಗಳ ವಿಧಾನವನ್ನು ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು. ಬೆಳಗಾವಿ, ಗದಗ, ಶಿವಯೋಗಮಂದಿರ, ತಾಳಿಕೋಟೆ, ಬೀದರ, ಧಾರವಾಡ, ಚಿತ್ರದುರ್ಗಗಳಲ್ಲಿ ಇಂಥ ಶಿಬಿರಗಳು ನಡೆದಿವೆ. ಹಸ್ತಪ್ರತಿಗಳು, ಶಾಸನಗಳು, ಗುಡಿಗುಂಡಾರಗಳು, ಕೋಟೆ-ಕೊತ್ತಲುಗಳು, ಕೆರೆ-ಬಾವಿಗಳು ನಮ್ಮ ಸಂಸ್ಕೃತಿಯ ಪುರಾವೆಗಳು. ಅವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ “ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ” ಕಾರ್ಯಕ್ರಮವನ್ನು ಪ್ರತಿವರ್ಷ ವಿಭಾಗ ಏರ್ಪಡಿಸುತ್ತಾ ಬಂದಿದೆ. ಈಗಾಗಲೇ ಅಂದಾಜು ಇಪ್ಪತ್ತೈದಕ್ಕೂ ಹೆಚ್ಚು ಇಂಥ ಕಾರ್ಯಕ್ರಮಗಳನ್ನು ನಡೆಸಿದೆ.

ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನವನ್ನು ವಿಭಾಗ ಆಯೋಜಿಸುತ್ತಲಿದೆ. ಪ್ರಾಚೀನ ಸಾಹಿತ್ಯ, ಸಂಸ್ಕೃತಿ, ಹಸ್ತಪ್ರತಿ, ಗ್ರಂಥಾಸಂಪಾದನ ಕ್ಷೇತ್ರದಲ್ಲಿ ಸಾಧನೆಗೈದ ವಿದ್ವಾಂಸರೊಬ್ಬರ ಸಾಹಿತ್ಯ ಸಂಸ್ಕರಣೆ, ಲೌಕಿಕ ಶಾಸ್ತ್ರ ಕೃತಿಗಳ ಗೋಷ್ಠಿಗಳು, ಈ ಸಮ್ಮೇಳನದ ವಿಶೇಷತೆಗಳಾಗಿವೆ. ಮಂಗಳೂರು, ಸಂಕೇಶ್ವರ, ಬಿಜಾಪುರ, ತುಮಕೂರು, ಸೇಡಂ, ಬಸವನಬಾಗೇವಾಡಿಗಳಲ್ಲಿ ಈ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಈಗಾಗಲೆ ಹತ್ತರ ಸಂಭ್ರಮವನ್ನು ಪೂರೈಸಿರುವ ವಿಭಾಗ ಅದರಂಗವಾಗಿ ಡಿ.ಎಲ್.ಎನ್. ದತ್ತಿನಿಧಿ, ದಕ್ಷಿಣ ಭಾರತೀಯ ಗ್ರಂಥ ಸಂಪಾದನೆ, ಹಸ್ತಪ್ರತಿ ತಜ್ಞರ ಭಾವಚಿತ್ರ ಅನಾವರಣ, ಎಂ.ವಿ.ಸೀತಾರಾಮಯ್ಯ ಸಂಸ್ಮರಣೆ, ಹಸ್ತಪ್ರತಿ ಕ್ಷೇತ್ರದಲ್ಲಿ ದುಡಿದ ಮಹನೀಯರಿಗೆ ಗೌರವ ಸಮರ್ಪಣೆ ಮುಂತಾದ ರಚನಾತ್ಮಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಜಾಗತೀಕರಣದ ಈ ಹೊತ್ತಿನಲ್ಲಿ ಹಸ್ತಪ್ರತಿಗಳಂಥ ಪ್ರಾಚೀನ ಆಕರ ಸಾಮಗ್ರಿಗಳನ್ನು ಸಂಗ್ರಹಿಸುವ, ಅಧ್ಯಯನ ಮಾಡುವ ಅಗತ್ಯವಿದೆಯೇ? ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ಸುಳಿದಾಡುತ್ತಿದೆ. ಈ ಪ್ರಶ್ನೆಗೆ ಉತ್ತರವೆಂಬಂತೆ ಹಸ್ತಪ್ರತಿಶಾಸ್ತ್ರ ವಿಭಾಗವು ವೈಚಾರಿಕ ನೆಲೆಯಲ್ಲಿ ತನ್ನ ವಿಧಾನವನ್ನು ರೂಪಿಸಿಕೊಂಡು ಮುನ್ನೆಡೆದಿದೆ. ನಿರಂತರ ಚರ್ಚೆ-ಸಂವಾದಗಳನ್ನು ಏರ್ಪಡಿಸುವುದು, ಪುಸ್ತಕ ರೂಪದಲ್ಲಿ ಪ್ರಕಟಿಸುವುದು ವಿಭಾಗದ ಗುರುತರ ಜವಾಬ್ದಾರಿಯಾಗಿದೆ. ಈಗಾಗಲೇ ವಿಭಾಗ ಮಾಡಲೆಯ ಮೂಲಕ ಮೂವತ್ನಾಲ್ಕು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ ಮಾಲೆಯ ೩೫ನೆಯ ಪುಸ್ತಕವಾಗಿ ಬೆಳಕು ಕಾಣುತ್ತಲಿದೆ; “ಉದ್ಧರಣೆ ಸಾಹಿತ್ಯ”.

ಉದ್ಧರಣೆ ಸಾಹಿತ್ಯಕ್ಕೆ ಲಿಂಗಾಯತ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ವಾಚ್ಯ-ವರ್ಣಗಳಿಂದ ಕೂಡಿದ ಈ ಸಾಹಿತ್ಯ ಲಿಂಗಾಯತರ ಚಿತ್ರ ಸಾಹಿತ್ಯಕ್ಕೆ ನೀಡಿದ ಅಪೂರ್ವ ಕಾಣಿಕೆಯೆನಿಸಿದೆ. ವಾಚ್ಯಬೇರೆ, ಚಿತ್ರಬೇರೆ ಇರುವ ಇಲ್ಲವೇ ವಾಚ್ಯ-ಚಿತ್ರಗಳೆರಡೂ ಕೂಡಿಯೇ ಇರುವ ಉದ್ಧರಣೆ ಸಾಹಿತ್ಯವನ್ನು ಪ್ರಕಟಿಸಿದ ಆರಂಭದ ಹೆಗ್ಗಳಿಕೆ ಬಹುಶಃ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗಕ್ಕೆ ಸಲ್ಲುತ್ತದೆಂದು ಭಾವಿಸುತ್ತೇನೆ. ಸಂಸ್ಕೃತಿ ಪ್ರಿಯರು ಈ ಕೃತಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆಂದು ಆಶಿಸುತ್ತೇನೆ. ೨೧.೧೨.೨೦೧೦

ಡಾ. ಕೆ. ರವೀಂದ್ರನಾಥ
ಮುಖ್ಯಸ್ಥರು