ಕನ್ನಡ ಹಸ್ತಪ್ರತಿಗಳಲ್ಲಿ ಚಿತ್ರರಚನೆ ಒಂದು ಕಲೆಯಾಗಿ ಬೆಳೆದು ಬಂದಿದೆ. ಇವುಗಳನ್ನು ಅಲಂಕಾರ ಚಿತ್ರಗಳು ಮತ್ತು ವಿಷಯಾಧಾರಿತ ಚಿತ್ರಗಳು ಎಂದು ವರ್ಗೀಕರಿಸಬಹುದಾಗಿದೆ. ಹಸ್ತಪ್ರತಿಗಳ ಕಟ್ಟುಗಳ ಮೇಲೆ, ಕಡತಗಳ ಪಟ್ಟಿಕೆಯ ಮೆಲೆ, ತಾಳೇಗರಿಗಳ ಆರಂಭಿಕ ಗರಿಗಳ ಮೇಲೆ ವರ್ಣಗಳಿಂದಲೋ, ರೇಖೆಗಳಿಂದಲೋ ಮೂಡಿಸಿದ ಚಿತ್ರಗಳನ್ನು ಅಲಂಕಾರಿಕ ಚಿತ್ರಗಳೆಂದು ಕರೆಯಬಹುದು. ಇನ್ನು ಹಸ್ತಪ್ರತಿಗಳಲ್ಲಿ ಬರೆದ ಕಾವ್ಯಶಾಸ್ತ್ರಗಳ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಗಳು ರಚನೆಯಾಗಿರುವುದನ್ನು ನೋಡಬಹುದು. ಇವುಗಳನ್ನು ಸಚಿತ್ರ ಹಸ್ತಪ್ರತಿಗಳೂ ಇಲ್ಲವೇ ವಿಷಯಾಧಾರಿತ ಚಿತ್ರಪ್ರತಿಗಳು ಎಂದು ಕರೆಯಲಾಗುತ್ತದೆ. ಈ ಚಿತ್ರ ಮತ್ತು ಸಾಹಿತ್ಯವನ್ನೊಳಗೊಂಡ ಹಸ್ತಪ್ರತಿಗಳು ಸಾಮಾನ್ಯವಾಗಿ ಎಲ್ಲಾ ಧರ್ಮದಲ್ಲಿ ಕಂಡುಬರುತ್ತವೆ. ವೈಧಾನಿಕತೆಯ ದೃಷ್ಟಿಯಿಂದ ಚಿತ್ರಸಾಹಿತ್ಯವನ್ನು ಹೊರತುಪಡಿಸಿ ಮಾಡಿದ ಗ್ರಂಥ ಸಂಪಾದನೆ ಅಪೂರ್ಣ ಕಾರ್ಯವೆನಿಸಿದ್ದಷ್ಟೇ ಅಲ್ಲ. ಚಿತ್ರಸಾಹಿತ್ಯದ ಮಹಾಸಂಪುಟವೊಂದನ್ನು ಕಳೆದುಕೊಂಡಿದ್ದೇವೆಂಬ ಭಾವನೆ ಆ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲ ವಿದ್ವಾಂಸರ ಆಲೋಚನೆಗಳು ಬಂದಿದೆ.

. ಸಚಿತ್ರ ಹಸ್ತಪ್ರತಿಗಳ ಇತಿಹಾಸ

ಕನ್ನಡ, ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಕಾಣಸಿಗುವ ಹಸ್ತಪ್ರತಿಗಳು ಕಾವ್ಯಸಾಹಿತ್ಯ, ಲೌಕಿಕ ಶಾಸ್ತ್ರಸಾಹಿತ್ಯ, ಆಗಮಿಕ ಶಾಸ್ತ್ರಸಾಹಿತ್ಯ ಪ್ರಕಾರಗಳಿವೆ. ಈ ಎಲ್ಲಾ ಪ್ರಕಾರಗಳಲ್ಲಿಯೂ ಚಿತ್ರಕಲೆಯು ಒಂದು ಪರಂಪರೆಯೆಂಬಂತೆ ಬಿಂಬಿತವಾಗಿದೆ. ಹೀಗಾಗಿ ಹಸ್ತಪ್ರತಿ ಚಿತ್ರಕಲೆಗೆ ಸುದೀರ್ಘ ಇತಿಹಾಸವಿದೆ. ಆ ಇತಿಹಾಸದ ಭಾಗವಾಗಿ ವಿದ್ವಾಂಸರ ಅಧ್ಯಯನಕ್ಕೆ ಒಳಗಾದ ಕೆಲವು ಸಚಿತ್ರ ಹಸ್ತಪ್ರತಿಗಳನ್ನು ಇಲ್ಲಿ ಗಮನಿಸಬಹುದು.

. ಶಾಸ್ತ್ರ ಕೃತಿಗಳು

ಚಿತ್ರಕಲೆಯನ್ನೇ ಕುರಿತು ಹೇಳುವ ಶಾಸ್ತ್ರಗ್ರಂಥಗಳು ಎರಡು ರೀತಿಯಲ್ಲಿ ಸಿಗುತ್ತವೆ. ಅವು ಪ್ರಧಾನ ಶಾಸ್ತ್ರಗ್ರಂಥಗಳು ಮತ್ತು ಪ್ರಾಸಂಗಿಕ ಶಾಸ್ತ್ರಗ್ರಂಥಗಳು, ಅಭಿಲಷಿತಾರ್ಥ ಚಿಂತಾಮಣಿ, ವಿಷ್ಣು ಧರ್ಮೋತ್ತರ ಪುರಾಣ, ಸಮರಾಂಗಣ ಸೂತ್ರ, ಶಿವತತ್ತ್ವ ರತ್ನಾಕರ, ಮುಂತಾದ ವಿಶ್ವಕೋಶಗಳಂಥ ರಚನೆಗಳು ಪ್ರಧಾನ ಕೃತಿಗಳಾದರೆ, ನಾಟ್ಯಶಾಸ್ತ್ರ, ಕಾಮಸೂತ್ರ, ಪಂಚದಶಿ, ನಾರದಸೂತ್ರ ಮುಂತಾದವುಗಳು ಚಿತ್ರಕಲೆಯನ್ನು ಕುರಿತು ಬಂದಂತಹ ಪ್ರಾಸಂಗಿಕ ಕೃತಿಗಳು. ಇಲ್ಲೆಲ್ಲ ಭಿತ್ತಿಯ ರಚನೆ, ಬಣ್ಣಗಳ ತಯಾರಿಕೆ, ಆಕೃತಿಗಳ ಲಕ್ಷಣ ಕುರಿತಂತೆ ತಾಂತ್ರಿಕ ವಿವರಗಳನ್ನು ಚಿತ್ರಕಲೆಯ ವೈಧಾನಿಕತೆಯ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ.

ವಿಷ್ಣುಧರ್ಮೋತ್ತರ ಪುರಾಣ

ಇದರಲ್ಲಿ ೨೫ರಿಂದ ೪೩ನೆಯ ಅಧ್ಯಾಯದವರೆಗೆ ಚಿತ್ರಸೂತ್ರಗಳಿವೆ. ಚಿತ್ರಕಲೆಯ ಸಮಗ್ರ ವರ್ಣನೆಗಳಿವೆ. ಇದು ಪ್ರಶ್ನೋತ್ತರ ರೂಪದ ಸಂವಾದಕಾವ್ಯ. “ಭಿತ್ತಿಯ ಸಿದ್ಧತೆ, ಅವುಗಳಲ್ಲಿಯ ಬಗೆಗಳು, ಕುಂಚ, ವರ್ಣಗಳು, ಲೇಪನ, ರಕ್ಷಣೆ, ನಾಲ್ಕು ವಿವಿಧ ಚಿತ್ರಗಳು, ಚಿತ್ರಕಾರನ ಮನೋಭಾವ, ದೇವ, ರಾಜ, ಮಂತ್ರಿ, ಋಷಿ, ದೈತ್ಯ, ದಾನವ, ವಿದ್ಯಾಧರ, ಪಿಶಾಚಿ, ವೇಶ್ಯಾಸ್ತ್ರೀಯರು, ಸಪ್ತಮಾತೃಕೆ, ವಿಧವೆ, ವೃದ್ಧೆ, ಸೇನಾಧಿಪತಿ, ಯೋಧ, ಮಾವಟಿಗ, ಭೃತ್ಯರು, ಪುರಜನರು, ಜಟ್ಟಿಗಳು, ಅಲ್ಲದೆ ಪ್ರಾಣಿಗಳನ್ನು ಹೇಗೆ ಬರೆಯಬೇಕೆಂದು ಹೇಳಿ; ನೋಡಿದ ವಸ್ತುಗಳನ್ನು ಅದಕ್ಕೆ ಹೋಲುವಂತೆ ಬರೆಯುವಿಕೆಯೇ ಮುಖ್ಯ ಎಂದು ಹೇಳುತ್ತಾನಲ್ಲದೆ, ಒಂಭತ್ತು ರಸಗಳ ಚಿತ್ರಣ, ಚಿತ್ರಿಸುವ ರೀತಿ, ಅಂತಹ ಚಿತ್ರಗಳು ಇರಬೇಕಾದ ಸ್ಥಳ ದೇವಾನುದೇವತೆಗಳ ಲಕ್ಷಣವನ್ನು ವಿವರಿಸಲಾಗಿದೆ” (ಅ.ಲ.ನರಸಿಂಹನ್ : ನಿಜದನೆಲೆ : ಡಾ.ಬಿ.ಕೆ. ಹಿರೇಮಠ ಅಭಿನಂದನ ಗ್ರಂಥ).

ಶ್ರೀತತ್ವನಿಧಿ

ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಶ್ರೀತತ್ವನಿಧಿ, ಸಾರಸಂಗ್ರಹಭಾರತ, ಸ್ವರಚೂಡಾಮಣಿ, ಸಚಿತ್ರ ರಾಮಾಯಣ, ದೇವೀ ಮಹಾತ್ಮೆಗಳಂಥ ಕೃತಿಗಳಲ್ಲಿ ಸಾಹಿತ್ಯ ಮತ್ತು ಚಿತ್ರಗಳು ಸಂಯೋಜನೆಗೊಂಡಿದೆ. ಒಂಭತ್ತು ವಿಭಾಗಗಳಲ್ಲಿ ಆಗಮ, ಶಿಲ್ಪ, ತಂತ್ರ, ಜ್ಯೋತಿಷ್ಯ ಮುಂತಾದ ವಿಷಯಗಳನ್ನು ಚಿತ್ರಗಳ ಮೂಲಕ ವಿವರಿಸಲಾಗಿದೆ. ೧೧೬೦ ಪುಟಗಳ ಬೃಹತ್ ಗ್ರಂಥವು ಶಕ್ತಿನಿಧಿ, ವಿಷ್ಣುನಿಧಿ, ಶಿವನಿಧಿ, ಬ್ರಹ್ಮನಿಧಿ ಇತ್ಯಾದಿ ಒಂಭತ್ತು ನಿಧಿಗಳಿಂದ ಕೂಡಿದ್ದು ೧೮೮೬ ವರ್ಣ ಹಾಗೂ ೪೫೮ ರಾಖಾಚಿತ್ರಗಳನ್ನು ಒಳಗೊಂಡಿರುವ ಅಪರೂಪದ ಕೃತಿಯೆನಿಸಿದೆ.

ಸ್ವರಚೂಡಾಮಣಿ

ರಂಗಾಮಾಲಾ ಚಿತ್ರಗಳ ರಚನೆಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರ ಹೆಸರನ್ನು ಬಹುಕಾಲ ಉಳಿಸಬಹುದಾದ ಸಚಿತ್ರ ಕೃತಿ ಸ್ವರಚೂಡಾಮಣಿ. ಹಿತಮಿತ ವರ್ಣಸಂಯೋಜನೆ, ಆಳವಾದ ದೃಶ್ಯ ಸಂಯೋಜನೆ, ನಿಖರವಾದ ರೇಖಾವಿನ್ಯಾಸ, ಹಾವಭಾವ, ಚಲನಶೀಲತೆ, ಚಿತ್ರಕಾರನ ಸಹಜತೆಯಿಂದ ಮಹೋನ್ನತ ಕೃತಿ ಇದಾಗಿದೆ.

ಸೌಗಂಧಿಕಾ ಪರಿಣಯ

ಕೆಳದಿ ಬಸವರಸನ ಶಿವತತ್ವ ರತ್ನಾಕರವನ್ನೇ ಹೆಚ್ಚು ಹೋಲುವ ಮುಮ್ಮಡಿ ಕೃಷ್ಣರಾಜರ ‘ಸೌಗಂಧಿಕಾ ಪರಿಣಯ’, ಶಿವತತ್ವರತ್ನಾಕರದ ೨೨೬ ಶ್ಲೋಕಗಳನ್ನೂ ಬಿಟ್ಟು ಅವುಗಳ ವಿವರಣೆಯನ್ನು ಮಾತ್ರ ಬಳಸಿಕೊಂಡು ಬರೆದ ಕೃತಿಯಾಗಿದೆ. ಇದರಲ್ಲಿಯೂ ಸಚಿತ್ರಗಳಿವೆ. ಗಣಪಣ, ಅಶ್ವಪಣ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಆನೆಗಳ, ಕುದುರೆಗಳ ಚಿತ್ರಗಳನ್ನು ರೇಖಿಸಿರುವುದು ಈ ಕೃತಿಯ ವಿಶೇಷ. ಈ ಕೃತಿಯನ್ನು ಡಾ. ಎಚ್.ಎಸ್.ಶ್ರೀಮತಿ ಅವರು ಸಂಪಾದಿಸಿ ಕೊಟ್ಟಿದ್ದಾರೆ.

ಮಾನಸೋಲ್ಲಾಸ

೧ನೇ ಸೋಮೇಶ್ವರನ ಮಾನಸೋಲ್ಲಾಸವು ಅಭಿಲಷಿತಾರ್ಥ ಚಿಂತಾಮಣಿಯ ಕನ್ನಡ ಅನುವಾದ. ಇದರ ಸಂಪಾದಕರು ಡಾ.ಎಂ.ಎಂ.ಕಲಬುರ್ಗಿ ಅವರು. ಚಿತ್ರಕಾರನ ಅರ್ಹತೆ, ಭಿತ್ತಿಯ ಸ್ವರೂಪ, ವಜ್ರಲೇಪ, ಚಿತ್ರಸಾಮಗ್ರಿ, ಚಿತ್ರಸೂತ್ರ, ಚಿತ್ರಪ್ರಮಾಣ, ತಿರ್ಯಕ್ ಸೂತ್ರ, ಮಿಶ್ರವರ್ಣ, ಚಿನ್ನವರ್ಣ, ದೇವತಾ ಚಿತ್ರಗಳು ಇತ್ಯಾದಿ ವಿಶಿಷ್ಟ ಲಕ್ಷಣಗಳನ್ನು ಚರ್ಚಿಸಿದ್ದಾನೆ. ಚಿತ್ರಗಳಲ್ಲಿ ವಿದ್ಧ, ಅವಿದ್ಧ, ಭಾವಚಿತ್ರ, ಧೂಲೀಚಿತ್ರ ಎಂದು ನಾಲ್ಕು ವಿಧಗಳನ್ನು ಸೋಮೇಶ್ವರ ತಿಳಿಸುತ್ತಾನೆ. ಚಿತ್ರಶಾಸ್ತ್ರವನ್ನು ಪರಿಚಯಿಸುವ ಅಪರೂಪದ ಕೃತಿ ಇದಾಗಿದೆ. ಚಿತ್ರಕಲೆಗೆ ಸಂಬಂಧಿಸಿದಂತೆ ೮೦೦ ಪದ್ಯಗಳು ಮೀಸಲಾಗಿದ್ದರೆ ಅಂಗ ಪ್ರತ್ಯಂಗಗಳ ವಿವರಣೆಗೆ ೪೦೦ ಪದ್ಯಗಳ ವ್ಯಾಪ್ತಿ ಪ್ರಾಪ್ತವಾಗಿದೆ.

ಶಿವತತ್ವರತ್ನಾಕರ

ಕೆಳದಿ ಬಸವರಾಜ ಸಂಕಲಿಸಿದ ಇದು ೯ ಕಲ್ಲೋಲ, ೧೦೮ ತರಂಗ, ಸುಮಾರು ೧೩ ಸಾವಿರ ಶ್ಲೋಕಗಳ ಗಜಗಾತ್ರದ ಕೃತಿ. ಚಿತ್ರಕಲಾ ವೈಧಾನಿಕತೆಯನ್ನು ಪರಿಚಯಿಸುವ ಈ ಶಾಸ್ತ್ರಕೃತಿ ೧೧ ಮತ್ತು ೧೨ನೆಯ ತರಂಗಗಳಲ್ಲಿ ಆನೆ ಕುದುರೆಗಳ ಲಕ್ಷಣಗಳನ್ನು ಚರ್ಚಿಸುತ್ತಾನೆ. ಅವುಗಳ ಜಾತಿ, ಉಪಯೋಗ, ಕುರಿತಂತೆ ವಿವರಿಸುವ ಬಸವರಸ ಆನೆಗಳ, ಕುದುರೆಗಳ ಸಚಿತ್ರಗಳನ್ನು ಸಂಕಲಿಸಿದ್ದಾನೆ. ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದಿಂದ ಸಂಪಾದಿಸಿ ಕೊಟ್ಟಿದ್ದಾರೆ.

ಹೀಗೆ ಪ್ರಧಾನ ಶಸ್ತ್ರಕೃತಿಗಳಲ್ಲದೆ ಧಾರ್ಮಿಕ ಅಥವಾ ಮಾಂತ್ರಿಕ ಸಂಗತಿಗಳನ್ನು ನಿರೂಪಿಸುವ ಮಂತ್ರ, ತಂತ್ರ, ಶಕುನ, ಯಂತ್ರಾದಿಗಳು ಚಿತ್ರ ಸಂಕೇತಗಳಿಂದ ಆವೃತಗೊಂಡಿವೆ. ಮೈಸೂರು ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದ (ಕೆ೮೧೮) ಪ್ರತಿ ಬಾಲಗ್ರಹಾದಿ ಪೀಡೆಗಳನ್ನು ವಿವರಿಸುತ್ತದೆ. ಪ್ರತಿಯ ಮುಖ್ಯ ಭಾಗದಲ್ಲಿ ದೇವತೆ, ಹನುಮಂತ, ಕೋಣ, ಕಂಭದಾಕೃತಿಯ ಚಿತ್ರಗಳಿವೆ. ಗ್ರಹಫಲಗಳನ್ನು ವಿವರಿಸುವ ಹಸ್ತಪ್ರತಿಗಳಲ್ಲಿ ಸೂರ್ಯ, ಕುಜ, ರಾಹು, ಕೇತುಗಳ ಚಿತ್ರಗಳು ಕಂಡು ಬರುತ್ತವೆ. ಹಾಗೆಯೇ ಮೈಸೂರು ವಿಶ್ವವಿದ್ಯಾಲಯದ ‘ಅಶ್ವಪರೀಕ್ಷೆ’ ಕೃತಿಯಲ್ಲಿ ೧೦೫ ವರ್ಣರಂಜಿತ ಚಿತ್ರಗಳು, ಅಶ್ವವೈದ್ಯ ಕೃತಿಯ ೮೪ ಪತ್ರಗಳಲ್ಲಿಯ ವೈವಿಧ್ಯಮಯ ಚಿತ್ರಗಳಿರುವುದನ್ನು ಅನುಲಕ್ಷಿಸಬಹುದು.

. ಕಾವ್ಯ ಕೃತಿಗಳು

ಕನ್ನಡ ಕಾವ್ಯಕೃತಿಗಳು ಧರ್ಮ, ಶಾಸ್ತ್ರ, ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿವೆ. ಹೀಗಾಗಿ ಜೈನ ಧಾರ್ಮಿಕ ಕೃತಿಗಳು ಶರಣರ ಕಾವ್ಯಗಳು, ಪುರಾಣಗಳು ಧಾರ್ಮಿಕ ತತ್ವಗಳನ್ನು ಸಚಿತ್ರವಾಗಿ ನಿರೂಪಿಸುವ ಇಂಥ ಕೃತಿಗಳ ಹಸ್ತಪ್ರತಿಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು.

ಧವಳಜಯಧವಳಮಹಾಧವಳ

ಮೂಡಬಿದ್ರೆ ಜೈನ ಸಿದ್ಧಾಂತ ಭವನದ ಹಸ್ತಪ್ರತಿ ಭಂಡಾರದಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ಗ್ರಂಥಗಳು ಚಿತ್ರಸಾಹಿತ್ಯದ ದೃಷ್ಠಿಯಿಂದ ಮೌಲಿಕವಾಗಿವೆ. ವಿಶಾಲವಾದ ತಾಳೆಗರಿಗಳನ್ನು ಬಳಸಿಕೊಂಡು ಜೈನತೀರ್ಥಂಕರರು, ಯಕ್ಷಯಕ್ಷಿಯರು, ಮುನಿಗಳು, ಭಕ್ತರು, ಸಖಿಯರು, ಸೇವಕರು ಮುಂತಾದ ಚಿತ್ರಗಳು ಆಕರ್ಷಕವಾಗಿವೆ. ಸಸ್ಯಜನ್ಯವಾದ ಇಲ್ಲಿ ವರ್ಣಗಳನ್ನು ತೂಲಿಕಾ-ಶಲಾಕ ಕುಂಚದಿಂದ ಮೂಡಿಸಲಾಗಿದೆ. ಕರ್ನಾಟಕದಲ್ಲಿ ಚಿತ್ರಕಲೆಯನ್ನು ಬೆಳೆಸುವ ಹೊಸಯುಗ ಆರಂಭಿಸಿದ ಗೌರವ ಈ ಕೃತಿಗಳಿಗೆ ಸಲ್ಲುತ್ತದೆ.

ಇತರೆ ಜೈನಕೃತಿಗಳಲ್ಲಿಯೂ ಚಿತ್ರಗಳಿರುವುದನ್ನು ನೋಡಬಹುದು. ಕೊಲ್ಲಾಪುರದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಠದ ಸಂಗ್ರಹದಲ್ಲಿಯ ಕೆಲವು ಕಾಗದ ಹಸ್ತಪ್ರತಿಗಳಲ್ಲಿ ತೀರ್ಥಂಕರರ ಜನನ, ಸ್ಥಳ, ಅವಸಾನಕಾಲವನ್ನು ಸಚಿತ್ರವಾಗಿ ವಿವರಿಸಲಾಗಿದೆ. ಇಲ್ಲಿಯ ‘ಪ್ರತಿಷ್ಠಾತಿಲಕ’ ಹಸ್ತಪ್ರತಿಯಲ್ಲಿ ಬಸದಿಗಳನ್ನು ಒಡಮೂಡಿಸಲಾಗಿದೆ. ಶ್ರವಣಬೆಳ್ಗೊಳದ ಹಸ್ತಪ್ರತಿ ಭಂಡಾರದ ‘ತ್ರಿಲೋಕಸಾರ’ ಓಲೆಗರಿಯಲ್ಲಿ ಜೈನಬಸದಿ, ಮಾನಸ್ತಂಭ, ಸ್ತಂಭಪೀಠ, ಮಂಟಪಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ವರ್ಧಮಾನ ವಿರಚಿತ ನಾಗಕುಮಾರ ಚರಿತೆಯ ಹಸ್ತಪ್ರತಿಯಲ್ಲಿಯೂ ಕೆಲವು ಚಿತ್ರಗಳನ್ನು ವಿದ್ವಾಂಸರು ಗುರುತಿಸಿದ್ದಾರೆ.

ಶ್ರೀಕೃಷ್ಣ ಪಾರಿಜಾತ

ಅಪರಾಳ ತಮ್ಮಣ್ಣನ ಶ್ರೀಕೃಷ್ಣ ಪಾರಿಜಾತದ ಹಲವಾರು ಹಸ್ತಪ್ರತಿಗಳು ಲಭ್ಯವಿದೆ. ಇವುಗಳಲ್ಲಿ ೧೮೭೦ರ ಜೀಜಾಬಾಯಿಯವರ ಸಚಿತ್ರ ಕೃಷ್ಣಪಾರಿಜಾತದ ಪ್ರತಿಯನ್ನು ಹಂಪಿ ವಿಶ್ವವಿದ್ಯಾಲಯದಿಂದ ಡಾ.ಕೃಷ್ಣ ಕಟ್ಟಿ ಸಂಪಾದಿಸಿದ್ದಾರೆ. ಜೀಜಾಬಾಯಿ ನಿತ್ಯ ಪಾರಾಯಣಕ್ಕಾಗಿ ಜಲವರ್ಣದ ಚಿತ್ರಗಳಿಂದ ಶ್ರೀಕೃಷ್ಣಪಾರಿಜಾತವನ್ನು ಪ್ರತಿಷ್ಠೆ ಮಾಡಿದ್ದಾಳೆ. ಇಲ್ಲಿ ಚಿತ್ರಗಳು ನಾಜೂಕಾದ ಗೆರೆಗಳಲ್ಲಿ ಹೆಚ್ಚು ವಾಸ್ತವದಿಂದ ಕೂಡಿದವುಗಳಾಗಿವೆ.

ಪದ್ಮಪುರಾಣಸ್ಥ ಶಿವಗೀತೆ

೧೮೫೮ರ ಪ್ರತಿ ಸಂಸ್ಕೃತ ಭಾಷೆ, ಕನ್ನಡ ಲಿಪಿಯನ್ನು ಒಳಗೊಂಡ ಕಲ್ಲಚ್ಚಿನ ಪ್ರತಿ, ರಾಮಾಯಣವನ್ನು ೧೮ ಅಧ್ಯಾಯಗಳಲ್ಲಿ ವಿವರಿಸುತ್ತದೆ. ಕಥೆಗನುಗುಣವಾಗಿ ಚಿತ್ರಗಳಿವೆ. ವ್ಯಾಸ ಸೂತರು, ಸೂತ ಪುರಾಣಿಕರು, ಶೌನಕಾದಿಗಳು, ಲಕ್ಷ್ಮಣ, ಶ್ರೀರಾಮ, ಅಗಸ್ತ್ಯಮುನಿಗಳು, ಉಪಾಸನಾವಿಧಿಯ ಉಪದೇಶ, ಮೋಕ್ಷಯಾಗದ ಉಪದೇಶ, ಭಕ್ತಿಯಾಗದ ಉಪದೇಶ ಮುಂತಾದ ೨೧ ಚಿತ್ರಗಳು ಇಲ್ಲಿ ಸಂಯೋಜನೆಗೊಂಡಿವೆ. ಹಳದಿ ಕಪ್ಪು ಬಣ್ಣಗಳಿಂದೊಡಗೂಡಿದ ರೇಖಾಚಿತ್ರದ ಮೂಲಕ ಪುಟದ ಅಂಚನ್ನು ಗುರುತಿಸಲಾಗಿದೆ.

ರಾಘವಾಂಕ ಚರಿತೆ

ಸಿದ್ಧನಂಜೇಶನ ರಾಘವಾಂಕ ಚರಿತೆಯ ಪ್ರತಿಯೊಂದು ಧಾರವಾಡ ಕನ್ನಡ ಅಧ್ಯಯನ ಪೀಠದಲ್ಲಿದೆ. ಇದರಲ್ಲಿ ರಾಘವಾಂಕನ ಜೀವನಕ್ಕೆ ಸಂಬಂಧಿಸಿದ ವರ್ಣಚಿತ್ರಗಳ ವಿವರಗಳು ದೊರೆಯುತ್ತವೆ. ಪ್ರಭುದೇವ, ಸಿದ್ಧರಾಮ, ರಾಘವಾಂಕ, ಹರಿಹರ, ಚಿಕ್ಕನಂಜಾರ್ಯ, ಚೆನ್ನವೀರಾಂಬಿಕೆ, ಮಹಾದೇವ, ರುದ್ರಾಣಿ, ಪ್ರತಾಪರುದ್ರ, ವಿರೂಪಾಕ್ಷ ಪಂಡಿತ, ಕೆರೆಯ ಪದ್ಮರಸರ ಕುರಿತಂತೆ ೩೫ ಆಕರ್ಷಕ ವರ್ಣಚಿತ್ರಗಳಿವೆ.

ವೃಷಭೇಂದ್ರ ವಿಳಾಸ

ನಂಜುಂಡ ಕವಿಯ ವೃಷಭೇಂದ್ರ ವಿಳಾಸ ಯಕ್ಷಗಾನ ಕೃತಿ. ಬಸವಣ್ಣನವರ ಜೀವನವನ್ನು ಚಿತ್ರಸಮೇತವಾಗಿ ಕಂಡರಿಸಿದ ಕೃತಿ. ಒಂದೂವರೆ ಅಡಿ ಉದ್ದ, ಅರ್ಧ ಅಡಿ ಅಗಲದ ಕಾಗದದ ಪ್ರತಿಯಾಗಿದೆ. ಪ್ರತಿ ಪುಟದಲ್ಲಿ ಕಥಾ ನಿರೂಪಣೆಯ ಒಂದು ಅಥವಾ ಎರಡು ಪದ್ಯಗಳಿದ್ದು, ಉಳಿದಂತೆ ಚಿತ್ರಗಳೇ ಅಧಿಕವಾಗಿವೆ. ೨೨೪ ಪುಟಗಳು, ೫೭೫ ಚಿತ್ರಗಳನ್ನೊಳಗೊಂಡ ಕೃತಿಯನ್ನು ಶ್ರೀ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಒಪ್ಪವಾಗಿ ಸಂಪಾದಿಸಿಕೊಟ್ಟಿದ್ದಾರೆ.

ಸಕೀಲಗಳು

ಕಾರ್ಯಕಾರಣ ಸಂಬಂಧವನ್ನು ತಿಳಿಸುವ ಸಕೀಲಗಳು ಅಷ್ಠವಿಧ, ನೂರೆಂಟು, ಇನ್ನೂರ ಹದಿನಾರು ಪ್ರಕಾರಗಳಲ್ಲಿವೆ. ಶಿವಶರಣರ ಚಿತ್ರವನ್ನೊಳಗೊಂಡ ಹಸ್ತಪ್ರತಿಯ ನಾಗಮಂಡಲ ತಾಲೂಕಿನ ದೊಡ್ಡಬೆಲೆಯ ದೊಡ್ಡಮಠದಲ್ಲಿ ದೊರೆತಿದೆ. ಇದನ್ನು ಡಾ.ಎಂ. ಚಿದಾನಂದಮೂರ್ತಿ ಅವರು ಪ್ರಕಟಿಸಿದ್ದಾರೆ. ಬಸವ-ಹಡಪದ, ಮಡಿವಾಳ-ಮೊಲ್ಲೆಬೊಮ್ಮ, ಚನ್ನಬಸವಣ್ಣ-ರೇಚಣ್ಣ, ಸಿದ್ಧರಾಮ-ಬಿಲ್ಲೇಶ ಮುಂತಾದವರನ್ನು ಸ್ಥಲಗಳಿಗನ್ವಯಿಸಿ ದೃಷ್ಟಾಂತವಾಗಿ ಚಿತ್ರಿಸಿರುವುದು ಪ್ರಶಂಸಾರ್ಹವೆಂದು ಡಾ.ಎಂ.ಚಿದಾನಂದ ಮೂರ್ತಿರವರು ಅಭಿಪ್ರಾಯಪಡುತ್ತಾರೆ.

ಶಬರಶಂಕರ ವಿಲಾಸ

ಷಡಕ್ಷರ ಕವಿಯ ಶಬರಶಂಕರ ವಿಲಾಸ ಓಲೆಗರಿ ಹಸ್ತಪ್ರತಿಯಲ್ಲಿ ಕಿರಾತಾರ್ಜುನೀಯ ಪ್ರಸಂಗವನ್ನು ಸಚಿತ್ರವಾಗಿ ರೇಖಿಸಲಾಗಿದೆ. ಶಿವ-ಅರ್ಜುನರ ಕಾದಾಟದ ಚಿತ್ರಣವನ್ನು ಮನೋಹರವಾಗಿ ವರ್ಣಿಸಿರುವ ಇಲ್ಲಿನ ಚಿತ್ರಗಳು ಅಪರೂಪವೆನಿಸಿವೆ.

ಚನ್ನಬಸವ ಪುರಾಣ

ಡಾ.ಮಲ್ಲಿಕಾರ್ಜುನ ಸಿ. ಬಾಗೋಡಿಯವರಿಗೆ ಕಸಬಾ ಲಿಂಗಸೂರಿನ ಗುರುಪಾದಪ್ಪ ಶೆಟ್ಟಿಯವರ ಮನೆಯಲ್ಲಿ ಚನ್ನಬಸವ ಪುರಾಣದ ಹಸ್ತಪ್ರತಿ ದೊರೆತಿದೆ. ಇದರಲ್ಲಿ ಶಿವನ ಲೀಲೆಗಳಿಗೆ ಸಂಬಂಧಿಸಿದ ಚಿತ್ರಗಳು ರಚನೆಗೊಂಡಿವೆ. ಅವುಗಳಲ್ಲಿ ಶಿವನ ಒಡ್ಡೋಲಗ, ಸಿದ್ಧರಾಮನಿಗೆ ಶಿವತತ್ವ ಬೋಧನೆ, ಪಾರ್ವತಿ ಪ್ರಶ್ನೆ, ಅಕ್ಕನಾಗಮ್ಮನ ಸ್ವಪ್ನ, ಬಿಜ್ಜಳನಿಗೆ ಚಾಡಿ ಹೇಳಿದ್ದು, ಚನ್ನಬಸವನ ಬಾಲಲೀಲೆ, ದಕ್ಷದ್ವಯರ ಧ್ವಂಸ ಪ್ರಸಂಗ, ಬಿಜ್ಜಳನ ಸಭೆಗೆ ಬಸವಣ್ಣನ ಆಗಮನ, ಮುಂತಾದ ಚಿತ್ರಗಳು ಕಥೆಗನುಗುಣವಾಗಿ ಚಿತ್ರಿತಗೊಂಡಿರುವುದು ವಿಶೇಷ.

ಮುಸ್ಲಿಂ ಸಚಿತ್ರ ಹಸ್ತಪ್ರತಿಗಳು

ಬಂದೇ ಆದಿಲ್ ಶಾಹನ ಕಾಲದ ನುಜುಮ್-ಉಲ್-ಉಲೂಮ್ ಹೆಸರಿನ ನಕ್ಷತ್ರ ಶಾಸ್ತ್ರದ ಪುಸ್ತಕದಲ್ಲಿ ೮೭೬ ಚಿತ್ರಗಳಿವೆ. ೧೮೭೦ರಲ್ಲಿ ರಚಿತವಾದ ‘ರಸಪ್ರದೀಪಟೀಕೆ’ ಎಂಬ ಕೃತಿಯು ನೃತ್ಯಗಾರ್ತಿಯರು ಮತ್ತು ವೀಕ್ಷಕರನ್ನು ಚಿತ್ರಿಸಲಾಗಿದೆ. ಒಟ್ಟಿನಲ್ಲಿ ವಿಜಯನಗರೋತ್ತರ ಕಾಲದಿಂದ ಹಿಡಿದು ಮೈಸೂರು ಅರಸರವರೆಗೂ ಮುಸ್ಲಿಂ ಸಚಿತ್ರ ಹಸ್ತಪ್ರತಿಗಳು. ಭಿತ್ತಿ ಚಿತ್ರಗಳು, ರಚನೆಯಾಗಿರುವುದು ಗಮನಿಸಬಹುದಾದ ಸಂಗತಿ. ಇವುಗಳ ವಸ್ತುನಿಷ್ಠ ಹಾಗೂ ಪ್ರತ್ಯೇಕ ಅಧ್ಯಯನಗಳು ನಡೆಯಬೇಕಾಗಿದೆ.

ಕೆಲವು ಮಹತ್ವದ ಕೃತಿಗಳ ಮೂಲಕ ಹಸ್ತಪ್ರತಿಗಳಲ್ಲಿನ ಚಿತ್ರಸಾಹಿತ್ಯದ ವ್ಯಾಪ್ತಿಯನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಇಲ್ಲಿ ಆ ಕೃತಿಗಳ ಸಾಧಕ-ಭಾದಕಗಳ ಮೌಲ್ಯಮಾಪನ ಮಾಡಿಲ್ಲ. ಆ ಉದ್ದೇಶವೂ ಇಲ್ಲಿ ಅಪ್ರಸ್ತುತ. ಉದ್ಧರಣೆ ಸಾಹಿತ್ಯದ ಸಂಪಾದನೆಯ ಹಿನ್ನೆಲೆಯಲ್ಲಿ ಸಚಿತ್ರ ಹಸ್ತಪ್ರತಿಗಳ ಸ್ಥೂಲ ಪರಿಚಯವನ್ನು, ಅವುಗಳ ರಚನಾ ಇತಿಹಾಸದ ಹಲವು ಮಜಲುಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಗಳಲ್ಲದೆ ಸಾಮಾನ್ಯವಾಗಿ ಕರ್ನಾಟಕದ ಬಹುತೇಕ ಹಸ್ತಪ್ರತಿಗಳು ಒಂದಾದರೂ ಅಲಂಕಾರ ಚಿತ್ರಗಳಿಂದ ರಚನೆಯಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ಹಸ್ತಪ್ರತಿ ಲಿಪಿಕಾರರು ಚಿತ್ರಸಾಹಿತ್ಯವನ್ನು ಅಕ್ಷರ ರಚನೆಯಲ್ಲಿ ವಿನ್ಯಾಸಗೊಳಿಸಿದವರು ಅಲಂಕಾರಿಕ ಬರಹ, ಸುಂದರ ಬರಹ ಎಂದು ಗುರುತಿಸುವಲ್ಲಿ ಮೂಲತಃ ಅವರ ಕಲಾನೈಪುಣ್ಯದ ಸ್ಥಾಯೀಗುಣವನ್ನು ಲಕ್ಷಿಸಬೇಕಾಗಿದೆ.

.ಉದ್ಧರಣೆ ಸಾಹಿತ್ಯ

ಅರ್ಥ

ವಿಷಯ ಪ್ರಧಾನವಾಗಿ ಲಿಂಗಾಯತ ಸಾಹಿತ್ಯವನ್ನು ಅರ್ಪಣ, ಅರ್ಚನ, ಅನುಭಾವ, ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ ಮತ್ತು ಸಕೀಲ ಸಾಹಿತ್ಯವೆಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಚಿತ್ರ ಪ್ರಧಾನವಾದ ಉದ್ಧರಣೆಗಳು ಲಿಂಗಾಯತ ಶಾಸ್ತ್ರ, ಸಾಹಿತ್ಯ ಹಾಗೂ ಚಿತ್ರಪರಂಪರೆಗೆ ವಿಶೇಷ ಕೊಡುಗೆಯಾಗಿರುವುದನ್ನು ಗಮನಿಸಬೇಕಾಗಿದೆ. ಹಸ್ತಪ್ರತಿಗಳನ್ನು ಶಾಸ್ತ್ರಸಮ್ಮತವಾಗಿ ಅಧ್ಯಯನ ಮಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಅವುಗಳಲ್ಲಿರುವ ಚಿತ್ರಕಲಾ ವಿನ್ಯಾಸವನ್ನು ಕುರಿತಂತೆ ಪರಿಪೂರ್ಣವಾದ ಅಧ್ಯಯನಕ್ಕೆ ಕೈ ಹಾಕಿಲ್ಲವೆಂದು ಹೇಳಬೇಕು. ಹಸ್ತಪ್ರತಿಗಳಲ್ಲಿ ಬರವಣಿಗೆಯ ಜೊತೆಗೆ ಅಲಂಕಾರಿಕ ಬಣ್ಣ, ರೇಖೆ, ವಿನ್ಯಾಸಗಳಿಂದ ಕೂಡಿದ ಸಚಿತ್ರ ಹಸ್ತಪ್ರತಿಗಳು ಸೃಷ್ಟಿಯಾದಂತೆ; ಪರಿಪೂರ್ಣವಾಗಿ ಚಿತ್ರಗಳಿಂದೊಡಗೂಡಿದ ಉದ್ಧರಣೆಗಳು ರಚನೆಯಾಗಿವೆ.

ಉದ್ಧರಣೆಗಳು ಎಂದರೆ ಲಿಂಗಾಯತ ತತ್ತ್ವಗಳ ರಹಸ್ಯವನ್ನು ತಿಳಿಸುವ ಒಂದು ಸಾಧನ. ಈ ಸಾಧನಗಳು ಅನಾದಿಭಕ್ತೋದ್ಧರಣೆ, ಅಷ್ಟಾವರಣೋದ್ಧರಣೆ, ಅನಾದಿ ಜಂಗಮೋದ್ಧರಣೆ, ಮಕುಟೋದ್ಧರಣೆ, ಶೂನ್ಯ ಲಿಂಗೋದ್ಧರಣೆ, ಚಿದಂಬರೋದ್ಧರಣೆ, ಷಡ್ಜ್ರಂಹ್ಮೋದ್ಧರಣೆ, ಬಸವಾಕ್ಷರೋದ್ಧರಣೆ, ನೂರೆಂಟು ಪ್ರಣವೋದ್ಧರನೆ, ಅಧೋಕುಂಡಲಿ ಉದ್ಧರಣೆ, ಊರ್ಧ್ವಕುಂಡಲಿ ಉದ್ಧರಣೆ, ಲಿಂಗಷಡಾಕ್ಷರೋದ್ಧರಣೆ, ಅಂಗಷಡಾಕ್ಷರೋದ್ಧರಣೆ, ಜ್ಞಾನಚಕ್ರೋದ್ಧರಣೆ, ಗೋಮುಖೋದ್ಧರಣೆ, ಪ್ರಣವೋದ್ಧರಣೆ, ನೂರೆಂಟು ತೆರೆದ ಅರ್ಪಣೋದ್ಧರಣೆ, ಅರುವತ್ತಾರು ತೆರೆದ ಕರಣಾಪಣೋದ್ಧರಣೆ, ನಾಲ್ವತ್ತೆಂಟು ತೆರೆದ ಅರ್ಪಣೋದ್ಧರಣೆ, ಇನ್ನೂರು ಹದಿನಾರು ತೆರೆದ ಅರ್ಪಣೋದ್ಧರಣೆ, ಮೂವತ್ತಾರು ತೆರದ ಮಿಶ್ರಾರ್ಪಣೋದ್ಧರಣೆ, ಕಾಯಾರ್ಪಣೋದ್ಧರಣೆ, ಲಯಯೋಗ ಸಮಾಧಿ ಉದ್ಧರಣೆ, ಗಣೇಶ್ವರನೋದ್ಧರಣೆ, ರಥೋದ್ಧರಣೆ – ಎಂಬಿತ್ಯಾದಿಯಾಗಿವೆ.

ಉದ್ಧರಣ ಎಂಬುದು ಉತ್ + ಹರಣ ಎಂಬ ಎರಡು ಪದಗಳಿಂದ ಕೂಡಿದೆ. ಉತ್ ಎಂದರೆ ಮೇಲೆ, ಮುಂದೆ, ಮಿಗಿಲು (ಊರ್ಧ್ವ) ಎಂದರ್ಥ, ಹಗರಣ ಎಂದರೆ ಅಪಹರಿಸು, ತೆಗೆದುಕೊಂಡು ಹೋಗು, ಒಯ್ಯು ಎಂದರ್ಥ. ಹೀಗಾಗಿ ಉದ್ಧರಣ ಎಂದರೆ ಉದ್ಧರಿಸು, ಮೇಲಕ್ಕೆತ್ತು, ಬಂಧನದಿಂದ ಮುಕ್ತಗೊಳಿಸು, ಪರಿಪೂರ್ಣ ಹಂತಕ್ಕೆ ಮುಟ್ಟಿಸು ಎಂಬಿತ್ಯಾದಿ ಅರ್ಥಗಳು ಪ್ರಾಪ್ತವಾಗುತ್ತವೆ. ಅಂದರೆ ರೋಗ, ಭಯ, ಮುಂತಾದ ಭವಬಂಧನಗಳ ಪರಿಹಾರಕ್ಕಾಗಿ ಇಲ್ಲವೆ ಅಧೋಮುಖಿಯಾದ ಜೀವಿಯನ್ನು ಊರ್ಧ್ವಮುಖಿಗೊಳಿಸುವ ಉತ್ಕರ್ಷಕ ಸಿದ್ಧಾಂತ, ತತ್ತ್ವ ಮತ್ತು ತಂತ್ರ ಸಾಹಿತ್ಯ ಇದಾಗಿದೆ. ಉದ್ಧರಣೆಗಳು ಚಿತ್ರ (ಪಟಲ) ಹಾಗೂ ಪಠ್ಯ (ವಾಚ್ಯ)ಗಳೆಂಬ ಎರಡು ರೀತಿಯಲ್ಲಿ ಬೆಳೆದು ಬಂದ ದೃಶ್ಯ-ಶ್ರವ್ಯದಿಂದೊಡಗೂಡಿದ ಸಾಹಿತ್ಯವಾಗಿದೆ. ಡಾ.ಜ.ಚ.ನಿ. ಅವರು ಈ ಸಾಹಿತ್ಯದ ಕೆಲವು ಲಕ್ಷಣಗಳನ್ನು ಕುರಿತು ಹೀಗೆ ತಿಳಿಸುತ್ತಾರೆ. “ಉದ್ಧರಣೆ ಸಾಹಿತ್ಯ ವಾಚ್ಯವೂ (ವಾಙ್ಮಯ) ಹೌದು, ವರ್ಣಮಯವೂ (ಬಣ್ಣ) ಹೌದು. ರೂಪದ ದೃಷ್ಟಿಯಿಂದ ಅಂಕಿ, ಅಕ್ಷರ, ವರ್ಣ ಪ್ರಧಾನ ಸಾಹಿತ್ಯ. ಸಮನ್ವಯ ದೃಷ್ಟಿಯಿಂದ ಸಾಂಖ್ಯ-ಯೋಗ, ಮೀಮಾಂಸೆ ಮತ್ತು ಜ್ಯೋತಿಷ್ಯಗಳ ಲಕ್ಷಣವುಳ್ಳ ಸಾಹಿತ್ಯ. ವಿಶೇಷವಾಗಿ ಅಂಕಿ-ಸಂಖ್ಯೆಗಳಿಗೆ ತತ್ವ ದೀಕ್ಷೆ ಮತ್ತು ಸಾಹಿತ್ಯ ದೀಕ್ಷೆ ನೀಡಿದ ಸಾಹಿತ್ಯ. ಸಾಂಕೇತಿಕ ದೃಶ್ಯ ಸಾಹಿತ್ಯ, ಸಂವಹನಶೀಲ ಸಾಹಿತ್ಯ” (ಗೌರವ : ಸಂ.ಶಿ. ಭೂಸನೂರುಮಠ ಅಭಿನಂದನ ಗ್ರಂಥ ಪುಟ ೧೪೫-೧೬೭)

ಸ್ವರೂಪ

ಕರ್ನಾಟಕ ಚಿತ್ರಕಲೆಯ ಬಹುವಿಧಾನಗಳನ್ನು ಪರಿಚಯಿಸುವ ಉದ್ಧರಣೆಗಳಿಗೆ ಮಹತ್ವದ ಸ್ಥಾನವಿದೆ. ಕಲೆಗಾರಿಕೆ ಹಾಗೂ ಅನುಭಾವಗಳೆರಡು ಎರಕಗೊಂಡ ಅಪೂರ್ವ ರಚನೆಗಳಿವು. ಹೀಗಾಗಿ ಉದ್ಧರಣೆಯ ಚಿತ್ರಗಳಲ್ಲಿನ ಪ್ರತಿಯೊಂದು ರಚನೆಗೂ, ಆಕೃತಿಗಳಿಗೂ ಇರುವ ಅರ್ಥವತ್ತಾದ ವಿವರಣೆಯನ್ನು ಗಮನಿಸಿದರೆ ಇಲ್ಲಿನ ಸಂಕೇತಗಳು ಶರಣರ ಬೆಡಗಿನ ವಚನಗಳಿಗೆ ತೀರಾ ಹತ್ತಿರವಾಗಿ ಕಾಣುತ್ತವೆ. ಇಂಥ ಹಲವಾರು ಸಂಕೇತಗಳೇ ಚಿತ್ರವಾಗಿ ಮೂಡಿ ನಿಲ್ಲುವ ಈ ಕೃತಿಗಳು ಕಣ್ಣಿಗೆ ಒಗಟಾಗಿ ಕಂಡರೂ ಇವು ಕೇವಲ ಕಲ್ಪನೆ ಅಥವಾ ಭ್ರಮೆಯ ಚಿತ್ರಗಳಲ್ಲ. ಇವುಗಳನ್ನು ಅನುಭಾವದ ನಿಲುಗನ್ನಡಿಗಳೆಂದೇ ಹೇಳಬೇಕಾಗುತ್ತದೆ ಎಂದು ಡಾ.ಬಿ.ಕೆ. ಹಿರೇಮಠ ಅಭಿಪ್ರಾಯ ಪಡುತ್ತಾರೆ. ಈ ಕಾರಣವಾಗಿಯೇ ಉದ್ಧರಣೆಗಳನ್ನು ಚಿತ್ರಕ್ಕೆ ಚಿತ್ರವೂ ಹೌದು, ಸಾಹಿತ್ಯಕ್ಕೆ ಸಾಹಿತ್ಯವೂ ಹೌದು, ಶಾಸ್ತ್ರಕ್ಕೆ ಶಾಸ್ತ್ರವೂ ಹೌದು ಎನ್ನಬಹುದು. ಇವುಗಳ ರಚನಾಕಾರನಿಗೆ ಉನ್ನತ ಅಧ್ಯಯನ, ಪರಿಶ್ರಮ, ಹಲವು ವಿಷಯಗಳ ಜ್ಞಾನ ಸಂಸ್ಕಾರಗಳಿರುವುದನ್ನು ಗುರುತಿಸಿಕೊಂಡರೆ ಇಲ್ಲಿಯ ಚಿತ್ರಗಳನ್ನು ಜಾನಪದ ಎನ್ನಬೇಕೋ? ಬೇಡವೋ? ಎಂಬ ಚರ್ಚೆ ವಿದ್ವಾಂಸರಲ್ಲಿದೆ. ಸಿಂಹ, ಜಿಂಕೆ, ಚಿಗರೆ, ಹಾವು, ಮೀನು, ಕಪ್ಪೆ ಹಾಗೂ ಬಳ್ಳಿಯಾಕಾರದ ಚಿತ್ರಗಳು ಶುದ್ಧ ಜನಪದ ಚಿತ್ರಕಲೆಗೆ ನಿದರ್ಶನವಾಗಿವೆ.

ಉದ್ಧರಣೆಗಳ ಸ್ವರೂಪ

೧.ಉದ್ಧರಣೆ ವಾಚ್ಯ ೨. ಉದ್ಧರಣೆ ಪಟಲ
೧. ರೇಖಾವಿನ್ಯಾಸ
(ತಾಳೆಪ್ರತಿ/ಕಾಗದಪ್ರತಿ)
೨. ವರ್ಣವಿನ್ಯಾಸ
(ತಾಳೆಪ್ರತಿ/ಕಾಗದಪ್ರತಿ)

ವಾಚ್ಯ (ಪಠ್ಯ) ಮತ್ತು ಚಿತ್ರ(ವರ್ಣ)ಗಳ ಸಂಗಮ ಉದ್ಧರಣೆಗಳಾದ್ದರಿಂದ ಇವುಗಳನ್ನು ಮೇಲಿನಂತೆ ವರ್ಗೀಕರಿಸುವುದು ಅವೈಜ್ಞಾನಿಕವಾಗಿ ಕಾಣಬಹುದು. ಆದರೆ ನಾಡಿನಾದ್ಯಂತ ಸಿಗುವ ಹಸ್ತಪ್ರತಿಗಳಲ್ಲಿ ಕೆಲವು ಉದ್ಧರಣೆಗಳು ಕೇವಲ ವಾಚ್ಯದಿಂದ; ಮತ್ತು ಕೆಲವು ಪಟಲ(ಚಿತ್ರ)ದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿ ಮಾಡಿರುವುದು ಕಂಡುಬರುತ್ತದೆ. ಈ ಕೆಳಗಿನ ಹೇಳಿಕೆಗಳು ಅದಕ್ಕೆ ಸಮರ್ಥನೆ ನೀಡುತ್ತವೆ.

“ಶ್ರೀ ಗುರುಬಸವಲಿಂಗಾಯ ನಮಃ| ಉದ್ಧರಣೆಯ ವಾಚ್ಯ ಬರೆಯುವುದಕ್ಕೆ ಶುಭಮಸ್ತು…ಪ್ಲವಂಗ ಸಂವತ್ಸರದ ಚೈತ್ರ ಶು೨ ಯಿಂದುವಾರದಲ್ಲು ಬ್ಯಂಗಳೂರಲ್ಲಿರುವ ಕೋಟಿಲಿಂಗಶಾಸ್ತ್ರಿ ಕುಮಾರ ಶರಭಯ್ಯನವರು ಬರೆದುಕೊಟ್ಟಿದ್ದು ಕಂಪ್ಲಿಯಲ್ಲಿರುವ ಕಲ್ಗುಡಿ ದೊಡ್ಡಪ್ಪನವರಿಗೆ ಉದ್ಧರಣೆ ವಾಚ್ಯವಹಿ ರುಜು|| (ಕನ್ನಡ ವಿ.ವಿ.,ಹಸ್ತಪ್ರತಿ ಸೂಚಿ ಸಂಪುಟ-೧, ಪುಟ ೪೨-೪೩).

“ಇದು ಉದ್ಧರಣೆಯ ಪಟಲಗಳಾಗಿರುವುದರಿಂದ ಸುಂದರವಾದ ೨೩ ಚಿತ್ರ ಪಟಲಗಳಿವೆ” (ಕನ್ನಡ ಅಧ್ಯಯನಪೀಠ, ಹಸ್ತಪ್ರತಿಸೂಚಿ, ಸಂಪುಟ-೮, ಪುಟ೨೯).

ಉದ್ಧರಣೆ ಪಟಲಗಳು ತಾಳೆಗರಿ ಮತ್ತು ಕಾಗದ ರೂಪದಲ್ಲಿ ಕಾಣಸಿಗುತ್ತವೆಯಾದರೂ ತಾಳೆಗರಿಗಳಲ್ಲಿಯ ಉದ್ಧರಣೆಗಳು ಪ್ರಮಾಣ ದೃಷ್ಟಿಯಿಂದ ವಿರಳ; ಕಾಗದ ಪ್ರತಿಗಳು ಹೇರಳವಾಗಿವೆ. ಇದಕ್ಕೆ ಕಾರಣ ಉದ್ಧರಣೆಗಳ ಸ್ಥಾಯೀ ಗುಣ ಚಿತ್ರಕಲೆ. ಅದರಲ್ಲೂ ವರ್ಣಚಿತ್ರಗಳಿಗೆ ಕಾಗದ ಉಪಯೋಗಕಾರಿ ಸಾಮಗ್ರಿ. ಹೀಗಾಗಿ ತಾಳೆಗರಿ ಚಿತ್ರಗಳು ಹೆಚ್ಚು ರೇಖಾಪ್ರಧಾನವಾಗಿರುತ್ತವೆ; ಕಾಗದ ಉದ್ಧರಣೆಗಳು ವರ್ಣಪ್ರಧಾನವಾಗಿರುತ್ತವೆ. ಕಾರಣ; ಇಲ್ಲಿಯವರೆಗಿನ ಸರ್ವೇಕ್ಷಣೆಯಿಂದ ಕಾಗದ ಮಾಧ್ಯಮದಲ್ಲಿ ಬರೆದ ಉದ್ಧರಣೆಗಳು ಹೆಚ್ಚಾಗಿವೆ.

ಹೀಗೆ ಎಳೆ ಎಳೆಯಾಗಿ ಉದ್ಧರಣೆಗಳನ್ನು ಬಿಡಿಸಿ ನೋಡುವ ಉದ್ದೇಶ ಹಸ್ತಪ್ರತಿಗಳ ವೈವಿಧ್ಯಮಯ ಅಧ್ಯಯನ ಹಾಗೂ ಚಿತ್ರಪ್ರಧಾನ ಹಸ್ತಪ್ರತಿಗಳ ಪ್ರತ್ಯೇಕ ರೂಪ ಸ್ವರೂಪಗಳ ದಾಖಲೀಕರಣವಾಗಿದೆ.

ಕೆಲವೊಂದು ಉದ್ಧರಣೆಗಳಲ್ಲಿ ವಾಚ್ಯ ಅದರ ಬೆನ್ನ ಹಿಂದೆಯೇ ಚಿತ್ರಗಳಿರುವುದನ್ನು ಗಮನಿಸತಕ್ಕ ಸಂಗತಿ. ಉದ್ಧರಣೆಗಳಲ್ಲಿ ಒಂದೊಂದು ಚಿತ್ರಕ್ಕೆ ಒಂದೊಂದು ವಿವರಣೆ ಇರುವುದನ್ನು ನೋಡಿದರೆ ಇವು ಬಿಡಿ ಸಾಹಿತ್ಯವೋ ಅಥವಾ ಅಖಂಡ ಸಾಹಿತ್ಯವೋ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಪ್ರಾಯಶಃ ತಾತ್ವಿಕತೆಯ ಹಿನ್ನೆಲೆಯಲ್ಲಿ ಇವುಗಳನ್ನು ನೋಡಿದರೆ ಅಖಂಡ ಸಾಹಿತ್ಯವಾಗಿ ಗೋಚರಿಸುತ್ತವೆ. ಒಂದು ಉದ್ಧರಣ ವಾಚ್ಯ ಮುಗಿದ ಮೇಲೆ ಇನ್ನೊಂದು ವಾಚ್ಯದ ಆರಂಭ ಹಿಂದಿನ ವಾಚ್ಯದ ಮುಂದುವರಿಕೆ ಅಥವಾ ಅದರೊಂದಿಗಿನ ತಾತ್ವಿಕ ಬೆಳವಣಿಗೆ ಎನ್ನುವ ಹಾಗೆ ರಚನೆಗೊಂಡಿದೆ. ಉದಾ. ಅನಾಧಿ ಭಕ್ತೋದ್ಧರಣೆಯ ನಂತರ ಜ್ಞಾನ ಅಷ್ಟಾವರಣೋದ್ಧರಣೆಯ ಆರಂಭ ಹೀಗಿದೆ:

“ಹಾಗೆ ಸಗುಣ ನಿರ್ಗುಣ ಸ್ವಭಾವ ಚಾರಿತ್ರ್ಯವನ್ನುಳ್ಳ ಅನಾದಿ ಭಕ್ತನ ಅಂಗದಲ್ಲಿ ಅಲಂಕೃತವಾಗಿರುವ ಅಷ್ಟಾವರಣದ ಜ್ಞಾನ ಸಾಧನ ಸಂಪತ್ತನ್ನುದ್ಧರಿಸುವ ಕ್ರಮವೆಂತೆಂದೊಡೆ” ಎಂದು ಆರಂಭವಾಗುತ್ತದೆ. ಇದರ ಮುಂದಿನ ಉದ್ಧರಣೆ ವಾಚ್ಯ ಈ ಉದ್ಧರಣೆಯ ತತ್ವದ ಮುಂದುವರಿಕೆಯಂತೆ ರಚನೆಗೊಂಡಿದೆ. ಈ ಉಲ್ಲೇಖವನ್ನು ನೋಡಿದರೆ ಇದು ಬಿಡಿ ಬಿಡಿಯಾದ ಖಂಡಕಾವ್ಯವಲ್ಲ. ಇಡಿಯಾದ ಅಖಂಡ ಕಾವ್ಯವೆನ್ನಿಸುತ್ತದೆ.

ಉದ್ಧರಣೆ ಸಾಹಿತ್ಯದ ಉಗಮ

ಉದ್ಧರಣೆ ಸಾಹಿತ್ಯದ ಉಗಮ ಆಗಮಗಳಿಂದ ಎಂದು ಪೂಜ್ಯ ಶ್ರೀ ಜ.ಚ.ನಿ. ಅವರು ಅಭಿಪ್ರಾಯಪಡುತ್ತಾರೆ. ಅದಕ್ಕೆ ಅವರು ನೀಡುವ ಕಾರಣ, ಆಗಮಗಳಲ್ಲಿ ಉದ್ಧರಣೆಗಳ ಚಿತ್ರಗಳಿವೆ, ವರ್ಣವಿನ್ಯಾಸ ನಿರೂಪಣೆಯಿದೆ, ಮಂತ್ರಾಕ್ಷರ ವಿನ್ಯಾಸವಿದೆ, ಎಂದು ಮುಂತಾಗಿ ಹೇಳಿ ಶುದ್ಧಾಖ್ಯ ತಂತ್ರದ ನಿದರ್ಶನವನ್ನು ನೀಡುತ್ತಾರೆ. ಮುಂದುವರಿದು ಪಾರಮೇಶ್ವರತಂತ್ರ, ಸೂಕ್ಷ್ಮತಂತ್ರ, ಮಂತ್ರ ಮಹೋದಧಿ ಶಿವರಹಸ್ಯ ಅನಾದಿ ವೀರಶೈವ ಸಾರಸಂಗ್ರಹ, ವೀರಶೈವಾಚಾರ ಪ್ರದೀಪಿಕೆ ಮುಂತಾದ ಕೃತಿಗಳಲ್ಲಿ ಚಕ್ರ ವಿಧಿವಿಧಾನಗಳಿರುವುದನ್ನು ಗಮನಕ್ಕೆ ತರುತ್ತಾರೆ. ಆದರೆ ಇವುಗಳ ಉಗಮವನ್ನು ಬಸವಾದಿ ಶರಣರ ವಚನಗಳಿಂದ ಹುಡುಕುವುದು ಅದರಲ್ಲೂ ಬಸವೋತ್ತರ ಯುಗದಲ್ಲಿ ಈ ಸಾಹಿತ್ಯ ಸೃಷ್ಟಿಯಾಗಿರಬೇಕು ಎಂಬುದು ಹೆಚ್ಚು ವಾಸ್ತವ. ಯಾಕೆಂದರೆ ವಚನಗಳ ಅಧ್ಯಯನವು ಮತ್ತೆ ತಾತ್ವಿಕತೆಯ ಕಡೆಗೆ ವಾಲುವ ಸಂಧಿಕಾಲದಲ್ಲಿ ಈ ಸಾಹಿತ್ಯ ನಿರ್ಮಾಣವಾಗಿದೆ. ಅಂದರೆ ವಚನಕಾರರ ಸ್ಥಾವರದಿಂದ ಜಂಗಮದ ಕಡೆಗೆ ಎಂಬ ತಾತ್ವಿಕ ಸಿದ್ಧಾಂತ ಪುರೋಗಾಮಿಗೆ ಪರಿಸರದಲ್ಲಿ ತಲೆಕೆಳಗಾಗಿ ಜಂಗಮದಿಂದ ಸ್ಥಾವರದ ಕಡೆಗೆ ಹೊರಳಿದ ಸಂದರ್ಭದಲ್ಲಿ ಈ ಸಾಹಿತ್ಯ ರಚನೆಯಾಗಿದೆ.

ಅನಾದಿ ಉದ್ಧರಣವಾಚ್ಯದ ಆರಂಭದಲ್ಲಿ “ಶ್ರೀ ವೀರಶೈವ ಸಿದ್ಧಾಂತ ಸ್ಥಾಪನಾಚಾರ‍್ಯರಪ್ಪ ಆದ್ಯರನುಮತದಿಂದ ಉದ್ಧರಿಸಿದ, ಕುಟಿಲ ಕುಹಕ ಮಂತ್ರ ತಂತ್ರಗಳಲ್ಲದ ಶಿವಜ್ಞಾನ ಸಾಧನವಪ್ಪ, ಶಿವಮಂತ್ರನ್ಯಾಸ, ಶಿವತತ್ತ್ವಸ್ಥಾಪಿತ ಶಿವಲಿಂಗಾಂಗ ಸಂಬಂಧ ಪ್ರತಿಪಾದಕಾಗಮ ಗ್ರಂಥಾರ್ಥ ವಾಚ್ಯಗಳಿಂದ, ಕೆಲವು ವಚನಗಳಿಂದ ಸಂಗ್ರಹಿಸಿದ ಉದ್ಧರಣೆ ಪಟಲವಿದು, ಶಿವಲಿಂಗಾಂಕಿತ ಶಾಸನವಿದು, ಶಿವಶರಣರವಧರಿಪುದು” -ಎಂಬ ಉದ್ಧರಣಿಕಾರನ ಹೇಳಿಕೆ ಮತ್ತು ಲಿಂಗಷಡಾಕ್ಷರೋದ್ಧರಣೆ ಮತ್ತು ಪಂಚಮೂರ್ತಿಲಿಂಗೋದ್ಧರಣೆಗಳ ಪೂರ್ಣಪಾಠ ತೋಂಟದ ಸಿದ್ಧಲಿಂಗ ಯತಿಗಳ ವಚನಗಳೇ ಆಗಿರುವುದನ್ನು ಲಕ್ಷಿಸಬೇಕು. ಈ ಹಿನ್ನೆಲೆಯಲ್ಲಿ ವೀರಶೈವ ತತ್ವಗಳನ್ನು ಧಾರ್ಮಿಕ ನೆಲೆಯಲ್ಲಿ ನಿರ್ವಚಿಸುವ ಕಾಲವೆನಿಸಿದ ಬಸವೋತ್ತರ ಯುಗದಲ್ಲಿ ಅಂದರೆ ೧೫ನೇ ಶತಮಾನದಿಂದೀಚೆಗೆ ಉದ್ಧರಣ ಸಾಹಿತ್ಯ ರಚನೆಯಾಗಿರಬೇಕೆಂದು ಸದ್ಯಕ್ಕೆ ಅಭಿಪ್ರಾಯಪಡಬಹುದಾಗಿದೆ.

ಉದ್ಧರಣೆಗಳ ಬಣ್ಣ ತಯಾರಿಕೆ

ಪ್ರಾಚೀನ ಚಿತ್ರಕಲಾವಿದರು ತಮ್ಮ ಸುತ್ತಲಿನ ಪರಿಸರದಲ್ಲಿ ಲಭ್ಯವಿದ್ದ ಸಾಮಗ್ರಿಗಳನ್ನು ಬಳಸಿಕೊಂಡು ಬಣ್ಣಗಳನ್ನು ತಯಾರಿಸುತ್ತಿದ್ದರು. ಕಲಾವಿದರು ಬಳಸುತ್ತಿದ್ದರೆನ್ನಲಾದ ಬಣ್ಣಗಳ ಯಾದಿಯನ್ನು ಕೆಲವು ಕಾವ್ಯಗಳು ಹೀಗೆ ಉಲ್ಲೇಖಿಸುತ್ತವೆ. ಪದ್ಮಸಂಹಿತೆಯಲ್ಲಿ ಪಂಚವರ್ಣಗಳನ್ನು ಹೇಳಿದರೆ, ಪೊನ್ನ ತನ್ನ ಶಾಂತಿ ಪುರಾಣದಲ್ಲಿ “…..ಅತಿಶಯ ಪಂಚರುಚಿ ಪ್ರತಿಕೃತಿ ಹರಿತಂ, ತಾಮ್ರ, ಕೃಷ್ಣ, ಪೀತ, ಸಿತ….” ಎಂಬುದಾಗಿಯೂ; ವಚನಕಾರ ಮೋಳಿಗೆ ಮಾರಯ್ಯ “ಷಡುವರ್ಣದ ಟಿಪ್ಪಣದಂತೆ….” ಎಂದು ಆರು ವರ್ಣಗಳ ಕಡೆಗೆ ನಮ್ಮ ಗಮನ ಹರಿಯಿಸುತ್ತಾನೆ. ಕವಿ ಚೌಂಡರಸ ತನ್ನ ಅಭಿನವ ದಶಕುಮಾರ ಚರಿತೆಯಲ್ಲಿ “….ಪಟದೊಳ್ ಸರ್ವಾಂಗ ಸೌಂದರ್ಯದೊಪ್ಪನವನಾಂ ಚಿತ್ರಮೆನಲ್ಕೆ ಕೂರ್ತು ಬರೆದೆಂ ಷಡ್ವರ್ಣ ಸಂಪೂರ್ಣದಿಂ…” ಎಂಬ ಹೇಳಿಕೆ ಮತ್ತು ಪಾಯಣವರ್ಣಿ ಕವಿ ಸಿಂಧೂವದೇವಿಯ ಭವಾವಳಿಯನ್ನು ವರ್ಣಿಸುತ್ತ ಆಕೆ ಪೂರ್ವದಲ್ಲಿ “ಹರಿತ, ಪೀತಾರುಣ, ಶ್ವೇತ, ಕೃಷ್ಣಗಳೆಂಬುರುತರ ಪಂಚವರ್ಣಗಳಿಂ…..” ಎಂಬ ಉಲ್ಲೇಖಗಳಿಂದ ಬಿಳಿ, ಹಳದಿ, ಕೆಂಪು, ಎಳೆಹಸಿರು, ಕಪ್ಪು ಇತ್ಯಾದಿ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಿದ್ದರೆಂಬುದು ತಿಳಿದುಬರುತ್ತದೆ.

ಬಿಳಿ ಬಣ್ಣ: ಸಂಗಮರಿಕಲ್ಲಿ (Marble)ನ ಚೂರುಗಳನ್ನು ಸುಟ್ಟು ನೀರಿನಲ್ಲಿ ನೆನಯಿಸಿ; ಸೂಸಿ ಅಂಟು ನೀರಿನಲ್ಲಿ ಮಿಶ್ರಣ ಮಾಡಿ ಬಿಳಿಬಣ್ಣವನ್ನು ತಯಾರಿಸುತ್ತಿದ್ದ ವಿಧಾನವನ್ನು ಕಂಡುಕೊಂಡಿದ್ದರು. ಆದರೆ ಹಸ್ತಪ್ರತಿ ಚಿತ್ರಕಾರರು ಈ ವಿಧಾನದಿಂದ ಸಿದ್ಧಗೊಂಡ ಬಿಳಿಬಣ್ಣವನ್ನು ಉಪಯೋಗಿಸಿದಂತಿಲ್ಲ; ಬದಲಾಗಿ ಹೇರಳವಾಗಿ ದೊರೆಯುವ ಹಸಿರು ಛಾಯೆಯ ಬಳಪದ ಕಲ್ಲನ್ನು ಗಂಧದಂತೆ ತೇಯ್ದು ಸಂಗ್ರಹಿಸಿದ ಕೆನೆಯನ್ನು ಅಂಟು ನೀರಿನೊಂದಿಗೆ ಬೆರಸಿ ಉಪಯೋಗಿಸುತ್ತಿರಬೇಕೆಂಬ ಊಹೆಯನ್ನು ಡಾ. ಬಿ.ಕೆ.ಹಿರೇಮಠರು ಮಾಡುತ್ತಾರೆ (ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಪುಟ ೧೮೪).

ಕಪ್ಪು ಬಣ್ಣ: ಸಾಸಿವೆ ಎಣ್ಣೆ ಇಲ್ಲವೇ ಔಡಲ ಎಣ್ಣೆಯಿಂದ ಕರ್ಪೂರ ಸಂಯುಕ್ತವಾದ ಬತ್ತಿಯನ್ನು ಉರಿಸಿ ಇಲ್ಲವೇ ಕುಡಿಯುಳ್ಳ ದೀಪದ ಮೇಲೆ ಮಣ್ಣಿನ ಮುಚ್ಚಳವನ್ನಿಟ್ಟು ಸಂಗ್ರಹಿಸಿದ ಕಾಡಿಗೆಯನ್ನು ಅಂಟು ನೀರಿಗೆ ಬೆರಸಿ ಕಪ್ಪುಬಣ್ಣವನ್ನು ತಯಾರಿಸುತ್ತಿದ್ದರು. ಉದ್ಧರಣೆಗಳಲ್ಲಿ ಈ ವರ್ಣದ ಬಳಕೆ ಅತೀ ಕಡಿಮೆಯೆನ್ನಬೇಕು. ಪ್ರಾಯಶಃ ಇದಕ್ಕೆ ಸೊಪ್ಪು, ಒಣ ಅಚ್ಚರಿಕೆ ಸೊಪ್ಪು ಮತ್ತು ಅರಿಸಿಣ ಪುಡಿಗಳನ್ನು ಸಮವಾಗಿ ಬೆರಸಿ ರಸ ಮಾಡಿದ ಮಿಶ್ರಣವನ್ನು ಸೇರಿಸಿ ಬೂದು ಬಣ್ಣಕ್ಕೆ ವರ್ಗಾಯಿಸಿಕೊಂಡು (ಹಚ್ಚೆ ಬಣ್ಣಕ್ಕೆ) ಬಳಸಿರುವುದೇ ಹೆಚ್ಚು ಕಂಡುಬರುತ್ತದೆ.

ನೀಲಿ ಬಣ್ಣ : ನೀಲೋಪಲ ಶಿಲೆಯನ್ನು ಪುಡಿಮಾಡಿ ಸೋಸಿ ಇಲ್ಲವೇ ನೀಲಿಸಸ್ಯದ ಪುಡಿಯನ್ನು ಅಂಟಿನೊಡನೆ ಬೆರಸಿ ತಯಾರಿಸುತ್ತಿದ್ದರು. ತುಂಬೆ ಹೂ ಹಾಗೂ ಎಲೆಗಳನ್ನು ಬಳಸಿ ಈ ಬಣ್ಣವನ್ನು ತಯಾರಿಸುತ್ತಿದ್ದರು.

ಹಳದಿ ಬಣ್ಣ : ಗೌರಿಮರದ ಎಲೆಗಳ ರಸದಿಂದ ಹಳದಿ ವರ್ಣವನ್ನು ತಯಾರಿಸುತ್ತಿದ್ದರು. ಮತ್ತು ಉರ್ಚಿಕಾಯಿ, ಬೆಂಗಾಲಿಕಾಯಿ ಹಣ್ಣಿನ ರಸದಿಂದಲೂ ಇವನ್ನು ಸಿದ್ಧಪಡಿಸುತ್ತಿದ್ದರು. ನನ್ನ ಗಮನಕ್ಕೆ ಬಂದಂತೆ ಉದ್ಧರಣೆಗಳಲ್ಲಿ ಅತಿ ಹೆಚ್ಚು ಬಳಕೆಗೊಂಡ ಬೆಡಗಿನ ಬಣ್ಣ ಇದಾಗಿದೆ.

ಹಸಿರು ವರ್ಣ : ಹಸ್ತಪ್ರತಿ ಚಿತ್ರಕಾರರು ಈ ಬಣ್ಣವನ್ನು ಹಳದಿ ಮತ್ತು ನೀಲಿ ಬಣ್ಣಗಳ ಸಮ್ಮಿಶ್ರಣದಿಂದ ತಯಾರಿಸಿಕೊಳ್ಳುವಂತೆ ತಿಳಿದುಬರುತ್ತದೆ.

ಹಳದಿ, ಗುಲಾಬಿ, ಕೆಂಪು, ನೀಲಿ ಮತ್ತು ಕಾವಿ ಬಣ್ಣಗಳನ್ನು ಅತಿ ಹೆಚ್ಚು ಬಳಸಿದ ಉದ್ಧರಣೆ ಚಿತ್ರಕಾರರು ಇವುಗಳ ಬಳಕೆಯನ್ನು ಪ್ರಾಯಶಃ ವಿನ್ಯಾಸಶಾಸ್ತ್ರ ಸಮ್ಮತವಾಗಿ ಸಂಯೋಜಿಸಿಕೊಂಡಂತೆ ತೋರುತ್ತದೆಯಾದರೂ ಬಣ್ಣಗಳ ಆಯ್ಕೆ ಚಿತ್ರಕಾರನ ಮನೋಧರ್ಮಕ್ಕೆ ಬಿಟ್ಟಂತೆ ಕಂಡುಬರುತ್ತದೆ.

ಬಣ್ಣಗಾರಿಕೆಯ ವಿವರ

ನಾನು ಗಮನಿಸಿದ ಕೆಲವು ಉದ್ಧರಣೆಗಳಲ್ಲಿ ಚಿತ್ರಕಾರನು ಬಳಸಿದ ಬಣ್ಣಗಾರಿಕೆಯ ವಿವರವನ್ನು ನೋಡಬಹುದು. ಇವು ಕಾಗದದ ಮೇಲೆ ಬರೆದ ವರ್ಣವಿನ್ಯಾಸಗಳು.

ಕೊಪ್ಪಳ ಜಿಲ್ಲೆ ಬನ್ನಿಕೊಪ್ಪ ಗ್ರಾಮದ ಶ್ರೀ ತೋಟನಗೌಡ, ಅಮರಪ್ಪಗೌಡ ಪೋಲಿಸ ಪಾಟೀಲರ ಮನೆಯಲ್ಲಿನ ಉದ್ಧರಣೆ ಪಟಲವು ೩೨ ಚಿತ್ರಗಳಿಂದ ಕೂಡಿದ್ದು ಒಂದು ಕಡೆ ಚಿತ್ರ ಅದರ ಬೆನ್ನಹಿಂದೆ ಆ ಚಿತ್ರಕ್ಕೆ ಸಂಬಂಧಿಸಿದ ವಾಚ್ಯವನ್ನು ಬರೆಯಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎರಡು ಉದ್ಧರಣೆ ಪುಟಗಳನ್ನು ಸಂರಕ್ಷಿಸಲಾಗಿದೆ. ಅವುಗಳಲ್ಲಿ ಪುಸ್ತಕ ರೂಪದಲ್ಲಿರುವ (ಕ್ರ.ಸಂ.೩೮೧) ಉದ್ಧರಣೆಯ ಚಿತ್ರ ಹಾಗೂ ಬಣ್ಣ ವಿನ್ಯಾಸವನ್ನು ನೋಡಬಹುದಾಗಿದೆ. ನಿದರ್ಶನಕ್ಕೆ ಅನಾದಿ ಜಂಗಮೋದ್ಧರಣೆಯಲ್ಲಿ ಹಳದಿ, ಕಾವಿ ಮತ್ತು ಕಂದು ಬಣ್ಣಗಳನ್ನು ಬಳಸಲಾಗಿದೆ. ಜಂಗಮಮೂರ್ತಿ ಕುಳಿತ ಲಿಂಗಪೀಠ ಸಂಪೂರ್ಣವಾಗಿ ಹಳದಿ ಬಣ್ಣದಿಂದ ಆವೃತ್ತವಾದ ರೇಖಾವಿನ್ಯಾಸದಿಂದ ಕೂಡಿದ್ದರೆ; ಜಂಗಮ ಮೂರ್ತಿಯ ಅಖಂಡ ಅಂಗಾಂಗ ದೇಹವು ಕಾವಿ ಬಣ್ಣದಿಂದ ವಿನ್ಯಾಸಗೊಂಡಿದೆ. ತಲೆ ಕಿರೀಟ ಹಾಗೂ ಭುಜ ಕಿರೀಟಗಳು ಹಳದಿ ಬಣ್ಣದಿಂದಲೂ ಹಾಗೂ ಹೆಗಲ ಮೇಲಿಂದ ನೀಳವಾಗಿ ಹಾಕಿಕೊಂಡ ಶಾಲಿನ ಹೊದಿಕೆ ಕಂದು ಬಣ್ಣದಿಂದ ಅಲಂಕೃತಗೊಂಡಿದೆ. ಒಟ್ಟು ಆಕೃತಿಯ ಸುತ್ತ ಅಂಚು ಹೂಬಳ್ಳಿಯಿಂದ ರಚನೆಗೊಂಡಿದೆ.

ಉದ್ಧರಣೆ ಚಿತ್ರಗಳ ಬಣ್ಣಗಾರಿಕೆಯಲ್ಲಿ ಬೇರೆ ಬೇರೆ ಹಸ್ತಪ್ರತಿಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಇದಕ್ಕೆ ಕಾರಣ ಚಿತ್ರಕಾರನ ಪರಿಸರ. ತನಗೆ ದೊರೆತ ಕಚ್ಚಾಸಾಮಗ್ರಿಗಳ ಮೇಲೆ ಆತನ ಬಣ್ಣಗಾರಿಕೆ ಅವಲಂಬಿತವಾಗಿರುತ್ತದೆ. ಹೀಗಾಗಿ ಭಿನ್ನವರ್ಣದ, ಆಕಾರಗಳಲ್ಲಿ ಭಿನ್ನ ಪ್ರಮಾಣದ ಚಿತ್ರಗಳಿರುವುದನ್ನು ಗಮನಿಸಬಹುದು. ಈ ಭಿನ್ನ ವರ್ಣಲೇಪನದಿಂದಾಗಿ ಉದ್ಧರಣೆಗಳ ಸಮಗ್ರ ಸರ್ವೇಕ್ಷಣೆ ಮತ್ತು ತೌಲನಿಕ ಅಧ್ಯಯನವಾಗಬೇಕಾದ ಅಗತ್ಯವಿದೆ. ಕಾಗದ ಪ್ರತಿಗಳಿಗೆ ಭಿನ್ನವಾಗಿ ತಾಳೆಗರಿಗಲ ಮೇಲಿನ ಉದ್ಧರಣೆ ಚಿತ್ರಗಳು ರಚನೆಯಾಗಿವೆ. ಇವು ಕೇವಲ ವರ್ಣರಹಿತವಾದ ರೇಖಾವಿನ್ಯಾಸದಿಂದ ಕೂಡಿದವುಗಳು (ವಿಶೇಷವಾಗಿ ಬಣ್ಣಗಾರಿಕೆಯ ತಾಡೋಲೆಗಳು ಸಿಗುತ್ತವೆ). ಚಿತ್ರಕಾರನು ಕಂಟ, ರೇಖಾಪಟ್ಟಿ ಮತ್ತು ಕೈವಾರ (Compass) ಗಳ ಸಹಾಯದಿಂದ ಸೃಷ್ಟಿಸಿದ ಸುಂದರವಾದ ರೇಖಾ ನಕ್ಷೆಗಳಾಗಿವೆ. ಯಾವುದೇ ಬಣ್ಣಗಾರಿಕೆಯಿಲ್ಲದಿದ್ದರೂ ಪ್ರತಿಕಾರ ಅಥವಾ ವಿನ್ಯಾಸಕಾರನ ಪರಿಣತಿಯಿಂದ ಬರಿಗೈಗೆ ಬಣ್ಣ ಲೇಪಿಸಿದಂತೆ ತೋರಿಸಿದ ಚಮತ್ಕೃತವಾದ ನಕ್ಷಾ ಚಿತ್ರಗಳಿವಾಗಿವೆ. ಇಲ್ಲಿಯ ಚಿತ್ರಗಳು ಅಂಗರಚನಾಶಾಸ್ತ್ರಕ್ಕೆ (ಅನಾಟಮಿ) ಚಲನಶೀಲತೆಯನ್ನು ನೀಡುತ್ತವೆ. ಇತ್ತೀಚಿನ ದಖ್ಖನ್ ಮತ್ತು ಮೊಘಲ್ ಶೈಲಿಯನ್ನು ಇವುಗಳಲ್ಲಿ ಕಾಣುತ್ತೇವೆಯಾದರೂ ಉದ್ಧರಣೆಗಳಲ್ಲಿ ಕೆಲವು ಹೆಚ್ಚು ಸ್ಫುಟವಾದ ರಚನೆಗಳಾಗಿವೆ.

ಉದ್ಧರಣೆಗಳ ತಾತ್ವಿಕತೆ

ಉದ್ಧರಣೆ ಪಟಲ ಕಲೆಗಾರಿಕೆಯಿಂದ ಎಷ್ಟು ಮಹತ್ವವೋ ಲಿಂಗಾಯತ ಸಂಸ್ಕಾರದ ದೃಷ್ಟಿಯಿಂದಲೂ ಅಷ್ಟೇ ಗಮನಾರ್ಹವಾದವುಗಳು. ಇಲ್ಲಿ ಉಲ್ಲೇಖಿಸಿದ ಜಂಗಮೋದ್ಧರಣೆ ಷಡಕ್ಷರಿ ಮಂತ್ರದ ಬೀಜಾಕ್ಷರಗಳಿಂದ ಪರಿಪೂರ್ಣಗೊಂಡಿದೆ. “ಓಂ=ತಲೆಯಲ್ಲಿ, ನ=ಎಡಭುಜದಲ್ಲಿ, ಮಃ=ಬಲಭುಜದಲ್ಲಿನ; ಶಿ=ನಾಭಿ ಕೆಳಭಾಗದಲ್ಲಿ, ವಾ=ಬಲಗಾಲಿನ ಮಂಡೆಯಲ್ಲಿ, ಯ=ಎಡಗಾಲಿನ ಮಂಡೆಯಲ್ಲಿದ್ದು ಕರಣ ಪ್ರಸಾದ ಪೂಜೆಯಲ್ಲಿ ಜಂಗಮರ ಈ ಭಾಗಗಳನ್ನು ಪತ್ರಿ-ಪುಷ್ಪ-ಗಂಧಗಳಿಂದ ಪೂಜಿಸುವುದನ್ನು ಗಮನಿಸಿದರೆ; ಲಿಂಗಾಯತರ ಪೂಜಾಕ್ರಮ ವ್ಯಕ್ತಿರೂಪದ ಸ್ಥಾವರ ಪೂಜೆಯ ಬದಲಾಗಿ ತತ್ತ್ವರೂಪದ ಜಂಗಮಪೂಜೆಯಾಗಿದೆ.

ಇನ್ನೊಂದು ಚಿತ್ರ, ಅಧೋಕುಂಡಲಿ ಮತ್ತು ಊರ್ಧ್ವಕುಂಡಲಿ ಉದ್ಧರಣೆಗಳದು. ಜಿಂಕೆಯ ಮುಖ, ಎದೆಯಿಂದ ನಡುವಿನವರೆಗೆ ಸ್ತ್ರೀದೇಹ ಮುಂದಿನವು ಹುಲಿಗಾಲು, ಹಿಂದಿನವು ನಂದಿಕಾಲು, ನೀಳವಾದ ಬೆನ್ನಮೇಲೆ ಹಾವು, ನಾಲ್ಕು ಕೈಗಳು ಮತ್ತು ಖಡ್ಗ, ರುಂಡಗಳು, ಜಲಚರ ಪ್ರಾಣಿಗಳಾದ ಮೀನು, ವ್ಯಾಘ್ರ, ಸಿಂಹ ಆಕಳು ಹರಿಣಗಳಂತಹ ಸಾಂಕೇತಿಕ ಚಿತ್ರಗಳಿಂದ ಆವೃತ್ತವಾಗಿವೆ. ಗಾಢವಾದ ಬಣ್ಣಗಾರಿಕೆಯಿಂದ ಕೂಡಿದ ಇವು ಚಿತ್ರ ಕಲಾವಿದನ ಪರಿಣತಿಗೆ ನಿದರ್ಶನಗಳಾಗಿವೆ.

ಈ ಚಿತ್ರಗಳಿಗೆ ಸಂಕೇತಗಳು ಹೀಗಿವೆ “ಅಹಂಕಾರ ಮಮಕಾರವೆಂಬೆರಡು ಕೋಡು. ಎಂಬತ್ತುನಾಲ್ಕು ಲಕ್ಷ ಜೀವರಾಶಿ ಶಿವನರಿಯದ ಪ್ರಾಣಿಗಳ ಸುಡುತ್ತಿಹನೆಂಬ ಜಿಂಕನ ಮೊರೆ. ತನ್ನರಿದೆನೆಂಬವರಿಗೆ ಮುಕ್ತಿ ತೋರುವೆನೆಂಬ ಮೂಗುತಿ. ಶಿವ ಲಿಖಿತವ-ದುರ್ಲಿಖಿತವ ಬರೆವುದಕ್ಕೆ ಓಲೆ ಕಂಟ. ವಿಷ ಅಮೃತವೆಂಬೆರಡು ಕೈಯಲ್ಲಿ ಕುಂಭಗಳು. ಸಿಂಹನಾದ ನುಡು. ವಿಷ ಅಮೃತ ತಲೆಮೊಲೆಗಳು ಶಿವಪಥಕ್ಕೆ ಹೆಜ್ಜೆಯನಿಟ್ಟು ಮರುಳದಿಹೆವೆಂಬ ಅಚಲವಾದ ವ್ಯಾಘ್ರಪಾದಂಗಳು ಮುಂದಿಹವು. ದಶವಾಯುಗಳೆ ತುರಗದ ಪಾದ, ಹಿಂಗಾಲು ಬಲನು ಕಾಲಮೃತ್ಯು, ಎಡನು ಅಪಮೃತ್ಯು. ಬಾಲವೇ ಕುಂಡಲಿಯ ಸರ್ಪ. ಅಧೋಮುಖವ ನೋಡುತಿಹುದು. ಸರ್ವಕಂಠ ಕಂಗಳೆ ಕಠಾರಿ. ತಲೆಕೆಳಗಾಗಿಹುದು. ಆ ಕಠಾರಿಯ ಮೊನೆ ಮೇಲಾಗಿರಬಹುದು. ಆ ಕುಂಡಲಿ ಮುಖ ಊರ್ಧ್ವವಾಗಿಹುದು. ಚತುರ್ವಿದ ಪದಗಳೇ ನಾಲ್ಕು ಮೊಲೆಗಳು. ಅದಕ್ಕೆ ಭ್ರಮಣ ಜೀವನೆಂಬ ಮೀನು. ಅರ್ಧ ಮಾಯಾಶಕ್ತಿ; ಅರ್ಧ ಚಿತ್ ಶಕ್ತಿ, ಮಾಯಾ ಮುಖದಿಂದ ಬ್ರಹ್ಮ ವಿಷ್ಣು ಅಧಿದೇವತೆಗಳು ನಿರ್ಮಿತಂಗಳು. ಊರ್ಧ್ವ ಮುಖದಿಂದ ಪ್ರಮಥಗಣಂಗಳು ನಿರ್ಮಿತ. ಮಾಯೆಯ ಹೊಟ್ಟೆ ಆ ಹೊಟ್ಟೆಯಿಂದ ಜನನವು. ಆ ಮಾಯಾ ಬೀಜ ಊರ್ಧ್ವ ಚಿದಗ್ನಿಯಿಂದ ಹುರಿಯಲು ಭವನಾಸ್ತಿ….”

ಕಲೆ-ಸಾಹಿತ್ಯ-ಸಂಸ್ಕೃತಿಗಳ ಸಂಗಮವಾಗಿರುವ ಉದ್ಧರಣೆಗಳು ಚಿತ್ರಕಲಾ ಪರಂಪರೆಗೆ ಮಹತ್ವದ ಕೊಡುಗೆಯೆನಿಸಿವೆ. ಉದ್ಧರಣೆಗಳಲ್ಲಿ ಒಂದು ಪದದ ಅರ್ಥ ಇನ್ನಾವ ಕೋಶದಲ್ಲಿಯೂ ಸಿಗಷ್ಟು ನಿಖರ, ನಿರ್ದಿಷ್ಟ ಮತ್ತು ತತ್ತ್ವಪರವಾದದ್ದು ಎಂಬುದನ್ನು ಗಮನಿಸಿದರೆ ಉದ್ಧರಣೆಗಳು ಶಬ್ದಕೋಶವೆನಿಸಿದೆ. ಉದಾ. ಪರಮಾನಂದವೇ ಪ್ರಸಾದ, ಪರಿಪೂರ್ಣತ್ವವೇ ಗುರು, ಅಖಂಡತ್ವವೇ ಭಕ್ತ, ಪ್ರಕಾಶತ್ವವೇ ಜಂಗಮ ನಿತ್ಯತ್ವವೇ ಲಿಂಗ -ಇಂಥ ಪರಿಭಾಷೆಗಳಿಗೆ ಇದಕ್ಕಿಂತಲೂ ಹೆಚ್ಚಿನ ಅರ್ಥಗಳು ದುರ್ಲಭ. ಹೆಸರೇ ಸೂಚಿಸುವಂತೆ ಅನಾಧಿಭಕ್ತ, ಅಷ್ಠಾವರಣ, ಅನಾದಿಜಂಗಮ, ಶೂನ್ಯಲಿಂಗ, ಮಹಾಲಿಂಗ, ಮಂತ್ರಪಂಚೀಕರಣ, ಲಿಂಗಪಂಚೀಕರಣ, ಲಿಂಗ ಷಡಾಕ್ಷರಿ, ಅಂಗಷಡಾಕ್ಷರಿ ಮುಂತಾದ ಉದ್ಧರಣೆಗಳು ಲಿಂಗಾಯತ ಧರ್ಮದ ವಿಧಿಕ್ರಮಗಳನ್ನು ನಿರೂಪಿಸುವುದಾಗಿದೆ. ಬಹುತೇಕ ಉದ್ಧರಣೆಗಳಲ್ಲಿ ವಿವರಣೆ ಇರುವುದು ಕನ್ನಡ ವರ್ಣಮಾಲೆಗಳು. ವರ್ಣಮಾಲೆಗಳಿಗೆ ವಿಶಿಷ್ಠ ಅರ್ಥ ನೀಡುವುದರ ಮೂಲಕ ಅಕ್ಷರ ಸಂಸ್ಕೃತಿಗೆ ಸಾಂಖ್ಯ-ಯೋಗ ಸಂಸ್ಕೃತಿಯ ಮೆರಗನ್ನು ನೀಡಲಾಗಿದೆ.

ಒಟ್ಟಿನಲ್ಲಿ ವಿದ್ವಾಂಸರಾದ ಡಾ. ಎಂ.ಎಂ. ಕಲಬುರ್ಗಿಯವರು ಜ.ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯಿಂದ ಪ್ರಕಟವಾದ ವೃಷಭೇಂದ್ರ ವಿಳಾಸ ಕೃತಿಯ ಬೆನ್ನುಡಿಯಲ್ಲಿ “ಬೌದ್ಧ ಗ್ರಂಥಗಳಲ್ಲಿ ಆರಂಭವಾದ ಅಕ್ಷರಪಠ್ಯ-ಚಿತ್ರಪಠ್ಯ ಕಲೆಗಳ ಸಂಯೋಜನ ಪದ್ಧತಿ, ಜೈನ ಪ್ರತಿಷ್ಠಾಕಲ್ಪ ಮೊದಲಾದ ಗ್ರಂಥಗಳಲ್ಲಿ ಬೆಳೆದು, ಮೈಸೂರು ಅರಸರ ಕಾಲದಲ್ಲಿ ಒಂದು ನಿರ್ದಿಷ್ಟ ಪರಂಪರೆಯಾಗಿ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿತು… ಲಿಂಗಾಯತ ಹಸ್ತಪ್ರತಿಗಳಲ್ಲಿ ಇಂತ ಸಮೃದ್ಧ ಕಲಾಪ್ರಜ್ಞೆ ಮೊದಲು ಕಾಣುವುದು ಉದ್ಧರಣೆ ಪಟಲಗಳಲ್ಲಿ…..ಕನ್ನಡದಲ್ಲಿ ಈ ಮೊದಲು ಸಚಿತ್ರ ಕಾವ್ಯ ಸಂಪಾದನೆಯ ಯೋಗ್ಯ ಮಾದರಿಗಳು ಕಂಡುಬರುವುದಿಲ್ಲ. ಚಿತ್ರ ಪಠ್ಯವನ್ನು ಮೂಲ ರೂಪದಲ್ಲಿ ಉಳಿಸಿಕೊಂಡು, ಅಕ್ಷರ ಪಠ್ಯವನ್ನು ಆಧುನಿಕಗೊಳಿಸಿಕೊಂಡು ಇವೆರಡನ್ನೂ ಒಂದೇ ಪುಟದಲ್ಲಿ ವಿನ್ಯಾಸಗೊಳಿಸುತ್ತಾ ವೃಷಭೇಂದ್ರ ವಿಳಾಸ ಕರತಿ ಸಂಪಾದನೆಗೊಂಡಿರುವ ಬಗ್ಗೆ ಹೇಳಿರುವ ಪ್ರಶಂಸನೀಯ ಮಾತುಗಳ ಹಿಂದೆ ನಮ್ಮ ಸಚಿತ್ರ ಹಸ್ತಪ್ರತಿಗಳ ಸಂಪಾದನೆ ಯಾವ ರೀತಿಯಾಗಿರಬೇಕೆಂಬುದರ ಕಡೆಗೆ ವಿದ್ವಾಂಸರ ಗಮನವನ್ನು ಸೆಳೆಯುತ್ತಾರೆ. ಪ್ರಸ್ತುತ ಉದ್ಧರಣೆ ಸಾಹಿತ್ಯ ಸಂಪಾದನೆ ಅಕ್ಷರಪಠ್ಯ (ವಾಚ್ಯ) ಮತ್ತು ಚಿತ್ರಪಠ್ಯ(ಪಟಲ)ಗಳ ಸಂಯೋಜನೆಯ ಪ್ರಯತ್ನವಾಗಿದೆ.

ಪರಿಷ್ಕರಣ

ಕರ್ನಾಟಕದಲ್ಲಿ ಉದ್ಧರಣೆ ಸಾಹಿತ್ಯ ಸಂಪತ್ತು ಹೇರಳವಾಗಿದೆ. ಧರ್ಮಸ್ಥಳದ ಶ್ರೀ ಮಂಜುನಾಥ ಸಂಶೋಧನ ಪ್ರತಿಷ್ಠಾನ, ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನಮಠ, ಮೈಸೂರು ವಿಶ್ವವಿದ್ಯಾಲಯ ಹಸ್ತಪ್ರತಿ ಭಂಡಾರ, ಧಾರವಾಡ ಆರ‍್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಂಡಾರಗಳಲ್ಲದೆ ಬಹುತೇಕ ಮಠ-ಮಾನ್ಯಗಳ ಒಡೆತನದಲ್ಲಿ ಉದ್ಧರಣೆಗಳು ಸಂರಕ್ಷಣೆಗೊಂಡಿವೆ. ಪ್ರಕಟಣೆಯ ದೃಷ್ಟಿಯಿಂದ ಭಾಷ್ಯಾಚಾರ್ಯರಾದ ಸದಾಶಿವಚಾರ್ಯ ಗಿರಿಯಾಪುರ ಇವರು ಆತ್ಮೋದ್ಧರಣ ಸಾಹಿತ್ಯದ ಇಪ್ಪತೊಂದು ಸುವಾಚ್ಯ-ಸಚಿತ್ರ ಪ್ರತಿಯೊಂದನ್ನು ಅಚ್ಚಾಕಿಸಿದ್ದಾರೆಂದು ಶ್ರೀ ಜ.ಚ.ನಿ. ಅವರು ಅಭಿಪ್ರಾಯಪಟ್ಟಿದ್ದಾರೆ (ಗೌರವ ಪುಟ ೧೫೯). ಈ ಪ್ರಯತ್ನವನ್ನು ಬಿಟ್ಟರೆ ಕರ್ನಾಟಕದಲ್ಲಿ ಉದ್ಧರಣೆ ಸಾಹಿತ್ಯದ ಪ್ರಕಟಣೆಯಾದಂತಿಲ್ಲ.

ಪ್ರಸ್ತುತ ಸಂಪಾದನೆಗೆ ನಾನು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರವನ್ನು ಮಾತ್ರ ಆಶ್ರಯಿಸಿದ್ದೇನೆ. ಉದ್ಧರಣೆ ವಾಚ್ಯವನ್ನು ಪ್ರತ್ಯೇಕ ಪುಸ್ತಕದಲ್ಲಿ ಬರೆದಿರುವ ಕ್ರ.ಸಂ. ೩೮೦ರ ಕಾಗದ ಪ್ರತಿ ಕಂಪ್ಲಿ ಕಲ್ಗುಡಿ ಸಿದ್ಧಪ್ಪ ಅವರ ಮನೆಯಲ್ಲಿ ದೊರೆತದ್ದು. ೩೬ ಪುಟಗಳಲ್ಲಿ ೨೩ ಉದ್ಧರಣೆಗಳ ವಾಚ್ಯವನ್ನು ಬರೆಯಲಾಗಿದೆ. ಕೊನೆಯಲ್ಲಿ ಪ್ಲವಂಗ ಸಂವತ್ಸರ ಚೈತ್ರ ಶುದ್ಧ ೨ ಯಿಂದುವಾರದಲ್ಲು ಬೆಂಗಳೂರಲ್ಲಿ ಇರುವ ಕೋಟಿಲಿಂಗಶಾಸ್ತ್ರಿ ಕುಮಾರ ಶರಭಯ್ಯನವರು ಬರೆದುಕೊಟ್ಟಿದ್ದು ಕಂಪ್ಲಿಯಲ್ಲಿರುವ ಕಲ್ಗುಡಿ ದೊಡ್ಡಪ್ಪನವರಿಗೆ ಉದ್ಧರಣೆ ವಾಚ್ಯದ ವಹಿರುಜು ಎಂಬ ಉಲ್ಲೇಖವಿದೆ. ಇದರಿಂದ ಇದನ್ನು ಪ್ರತಿ ಮಾಡಿದವನು ಶರಭಯ್ಯ. ಇದರ ಗಾತ್ರ ೧೨ “* ೯.೫” ಅಳತೆಯಾಗಿದೆ. ಪ್ರಸ್ತುತ ಸಂಪಾದನೆಗೆ ಈ ಕೃತಿಯನ್ನು ಮೂಲವಾಗಿರಿಸಿಕೊಂಡಿದ್ದೇನೆ. ಇನ್ನು ಉದ್ಧರಣೆ ಪಟಲಗಳ ಬಳಕೆಯಲ್ಲಿ ೨ ಸಚಿತ್ರ ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದೇನೆ. ೧೩“*೧೦.೫” ಅಳತೆಯ ೩೨ ಚಿತ್ರಗಳನ್ನೊಳಗೊಂಡ ಕ್ರ.ಸಂ.೩೮೧ರ ಪ್ರತಿ ಕಂಪ್ಲಿ ಕಲ್ಗುಡಿ ಸಿದ್ಧಪ್ಪನವರ ಮನೆಯಲ್ಲಿ ದೊರೆತದ್ದು. ಇದರಲ್ಲಿ ಕೊನೆಯ ಮತ್ತು ಆದಿಭಾಗದ ಕೆಲವು ಚಿತ್ರಗಳು ತೃಟಿತಗೊಂಡಿವೆ. ಹೀಗಾಗಿ ಸುಸ್ಥಿತಿಯಲ್ಲಿರುವ, ಬಣ್ಣಗಾರಿಕೆಯಿಂದ ಪ್ರಸನ್ನವಾಗಿರುವ ಕೆಲವು ಚಿತ್ರಗಳನ್ನು ಸಂಪಾದನೆಗೆ ಬಳಸಿಕೊಳ್ಳಲಾಗಿದೆ. ಉಳಿದಂತೆ ಕ್ರ.ಸಂ. ೫೦೮ರ ಸಾ.ಶಿ.ಮರುಳಯ್ಯ ಬೆಂಗಳೂರು ಇವರಿಂದ ದೊರೆತ ಹಸ್ತಪ್ರತಿಯ ಚಿತ್ರಗಳನ್ನು ಇಲ್ಲಿ ಅಡಕಗೊಳಿಸಲಾಗಿದೆ.

ಕೃತಜ್ಞತೆಗಳು

ಉದ್ಧರಣೆ ಸಾಹಿತ್ಯ ಸಂಪಾದನೆ ಹಸ್ತಪ್ರತಿಶಾಸ್ತ್ರ ವಿಭಾಗ ವೈಯಕ್ತಿಕ ಯೋಜನೆ. ಈ ಯೋಜನೆಯ ಸಮಗ್ರತೆಗೆ ವ್ಯಾಪಕ ಕ್ಷೇತ್ರಕಾರ್ಯಬೇಕು. ಯಾಕೆಂದರೆ ಭಿನ್ನ ಸ್ವರೂಪದ, ವಿಭಿನ್ನ ವರ್ಣದ ಉದ್ಧರಣೆಗಳು ದೊರೆಯುತ್ತವೆ. ಸಾಮ್ಯ-ವೈಸಾಮ್ಯದ ಅಧ್ಯಯನಕ್ಕಾದರೂ ಸಮಗ್ರ ಚಿತ್ರಗಳನ್ನು ನೀಡುವುದು ನ್ಯಾಯ ಸಮ್ಮತ. ಇದು ಒಬ್ಬರಿಂದಾಗುವ ಕೆಲಸವಲ್ಲ. ಆದ್ದರಿಂದ ನಾವು ಸಂಗ್ರಹಿಸಿದ ಹಸ್ತಪ್ರತಿಗಳ ಸಂಗ್ರಹಾಲಯದ ಅಪ್ರಕಟಿತ ಮತ್ತು ಉಪೇಕ್ಷಿತ ಸಾಹಿತ್ಯವನ್ನು ಬೆಳಕಿಗೆ ತರಬೇಕೆಂಬ ಆಶಯದಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡಿರುವೆ. ಅಂದರೆ ಇದು ಪರಿಪೂರ್ಣವಾಗಿದೆ ಎಂದು ನಾನು ಹೇಳುವುದಿಲ್ಲ. ಅದರಲ್ಲೂ ಉದ್ಧರಣೆಗಳ ಸಂಖ್ಯಾನಿರ್ಣಯ ಇನ್ನೂ ನಿಖರವಾಗಿಲ್ಲ. ಇಲ್ಲಿ ಸಂಪಾದನೆಗೊಂಡ ಉದ್ಧರಣೆಗಳಲ್ಲದೆ ರಥೋದ್ಧರಣೆ, ಮಿಶ್ರಾರ್ಫಣೋದ್ಧರಣೆ ಕರಣಾರ್ಪಣೋದ್ಧರಣೆ ಹೆಸರಿನ ಉಲ್ಲೇಖಗಳು ಇವೆ. ಹೀಗಾಗಿ ಪ್ರಸ್ತುತ ಕೃತಿ ೨೩ ಉದ್ಧರಣೆಗಳನ್ನು ಮಾತ್ರ ಒಳಗೊಂಡಿದೆ. ಮುಂದೆ ಈ ಕ್ಷೇತ್ರದ ತುಲನಾತ್ಮಕ ಮತ್ತು ವಿಸ್ತೃತ ಅಧ್ಯಯನಕ್ಕೆ ಬಹುದೊಡ್ಡ ಅವಕಾಶ ಮತ್ತು ಆಹ್ವಾನವಿದೆ.

ಈ ಯೋಜನೆಗೆ ಹಸ್ತಪ್ರತಿ ಭಂಡಾರವನ್ನು ಬಳಸಿಕೊಳ್ಳಲು ಸಹಕರಿಸಿದ ನನ್ನ ವಿಭಾಗದ ಪ್ರಾಧ್ಯಾಪಕ ಮಿತ್ರ ಸೌಜನ್ಯವನ್ನು ನೆನೆಯಲೇಬೇಕು. ಯೋಜನೆಗೆ ಶೈಕ್ಷಣಿಕವಾಗಿ ಅನುಮೋದಿಸಿದ ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರಿಗೆ, ಪ್ರಸಾರಾಂಗದ ನಿರ್ದೇಶಕರು ಮತ್ತು ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಈ ಸಂಪಾದಿತ ಕೃತಿಯ ಕರಡು ಪ್ರತಿಯನ್ನು ಪರಿಶೀಲಿಸಿ ಪ್ರಕಟಿಸಲು ಶಿಫಾರಸು ಮಾಡಿದ ಗೆಳೆಯ ಡಾ. ಪರಮಶಿವಮೂರ್ತಿ ಅವರಿಗೆ ಉಪಕೃತನಾಗಿರುವೆ. ಅಕ್ಷರ ಮತ್ತು ಸಚಿತ್ರ ಜೋಡಣೆಯನ್ನು ಶ್ರದ್ಧೆಯಿಂದ ಪೂರೈಸಿಕೊಟ್ಟ ಹೊಸಪೇಟೆಯ ಯಾಜಿ ಗ್ರಾಫಿಕ್ಸ್ ನ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ ಯಾಜಿ ಅವರಿಗೆ ಕೃತಜ್ಞತೆಗಳು. ಕೃತಿಯನ್ನು ಪ್ರಕಟಿಸುವಲ್ಲಿ ಶ್ರಮವಹಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೂ ಉಪಕೃತನಾಗಿದ್ದೇನೆ.

 

ಡಾ. ಕೆ.ರವೀಂದ್ರನಾಥ