ಇಂತಪ್ಪ ನಿತ್ಯ ನಿರವಯ ನಿರಂಜನ ಸತ್ಯಜ್ಞಾನಾನಂದಮಯವಪ್ಪ ಅಖಂಡ ತೇಜೋಮೂರ್ತಿಯಾದ ಮಹಾಘನಲಿಂಗವು, ಸ್ವಲೀಲೆಯಿಂದ ಸಕಲ ತತ್ತ್ವ ಬ್ರಹ್ಮಾಂಡ ಜಗತ್ ಸಚರಾಚರಂಗಳಂ ರಚಿಸಿ, ತಾನವಕ್ಕಾಧಾರ ಕರ್ತೃವೆನಿಸಿ ತನಗೊಂದಾಧಾರವ ಯೋಚಿಸಿಲಾಕ್ಷಣ, ತನ್ನನಾದಿ ಚಿಚೈತನ್ಯವೇ ಸ್ಪುರಿಸಿ ಮೂರ್ತಿಗೊಂಡು ಷಡುಸ್ಥಲ ಜ್ಞಾನವೇ ಪ್ರಾಣ, ಪಂಚಾಚಾರವೇ ಅಂಗವಾಗಿ ಭಸ್ಮೋದ್ದೋಳಿತ ವಿಗ್ರಹ ಗಾತ್ರದಿಂ ರುದ್ರಾಕ್ಷಭರಣ, ರಚಿತಾಲಂಕಾರದಿಂ, ಪಂಚಾಕ್ಷರಿ ಮಂತ್ರಭಾಷಾ ಸಮೇತನಾಗಿ, ಭಕ್ತಿ ಭಾವಂತಕರಣದಿಂ ಕರಕಮಲಮಂ ಮುಗಿದು ಬಿನ್ನವಿಸುತ್ತಿರ್ದ ಜಗದಾನಂದ ಕಾರಣ ಪುರುಷನಾದ ಭಕ್ತನಪ್ಪಾ ನಂದಿಕೇಶ್ವರನೇ ಸದ್ಧರ್ಮ ವಾಹನನೆನಿಸಿ ಜಗವನುದ್ಧರಿಸಿದ ವೃಷಭೇಶ್ವರನ ಸ್ವರೂಪು ಲಕ್ಷಣ ಭಕ್ತಿ ಪ್ರಭಾವತಿಶಯವೆಂತೆಂದೊಡೆ |

ಅಕಾರ ಟಕಾರಂಗಳೇ ಶೃಂಗಗಳು, ಮಕಾರವೇ ಮುಖ, ಓಂಕಾರವೇ ಶಿರಸ್ಸು, ಯಕಾರವೇ ಕರ್ಣಂಗಳು, ವಕಾರವೇ ತ್ವಕ್ಕು, ಶಿ ಕಾರವೇ ನೇತ್ರಂಗಳು, ನಕಾರವೇ ನಾಸಪುಟಂಗಳು, ಬಿಂದು ಕಳೆಗಳೇ ದಂತಪಂಕ್ತಿಗಳು, ಮಕಾರವೇ ಜಿಹ್ವೆ, ನಾದವೇ ಓಂಕಾರ ಸ್ವರ, ಬಸವಾಕ್ಷರ ತ್ರಯವೇ ಕೊರಳು, ಹಿಳಿಲು ಬೆನ್ನಸುಳಿ, ಹ್ರಂ, ಹ್ರಿಂ, ಹ್ರುಂ, ಹ್ರೈಂ, ಹ್ರಾಂ, ಹ್ರಃ ಎಂಬವೇ ಬಾಲ ಪೃಷ್ಠ ವೃಷಣ, ಗುಹ್ಯ, ನಾಭಿ, ಗರ್ಭ, ಸಪ್ತಕೋಟಿ ಮಹಮಂತ್ರಗಳೇ ರೋಮಂಗಳು, ಪರೆ, ಪಶ್ಯಂತಿ, ಮಧ್ಯಮೆ, ವೈಖರಿ ಎಂಬ ಚತುಃಸ್ವರೂಪಂಗಳೇ ಚರಣಂಗಳು, ಹ್ರಿಂಕಾರವೇ ಅಂಗ, ಹಕಾರವೇ ಪ್ರಾಣ, ಇಂತಪ್ಪ ಮಂತ್ರ ಮೂರ್ತಿಯಾದ ವೃಷಭೇಶ್ವರನ ಸರ್ವಕಲಾ ಸಾರೋದ್ಧಾರವೆಂತೆಂದೊಡೆ|

ಅ ಜ ಪ ಗಾಯತ್ರಿಯೇ ಶೃಂಗಗಳು, ಪರಮಶಿವಾಗಮವೇ ಶಿರಸ್ಸು, ಧನುರ್ವೇದ ಗಾಂಧರ್ವವೇದಂಗಳೇ ಕರ್ಣಂಗಳು, ಆಯುರ್ವೇದ ಅರ್ಥವೇದಂಗಳೇ ನೇತ್ರಂಗಳು, ಹ್ರಸ್ವ ದೀರ್ಘಂಗಳೇ ನಾಪುಟಂಗಳು, ವ್ಯಾಪಕಾಕ್ಷರವೇ ಮುಖ, ಸ್ವರಾಕ್ಷರವೇ ದಂತಪಂಕ್ತಿಗಳು, ವಿಕಲಾಕ್ಷರವೇ ಜಿಹ್ವೆ, ಸ್ವರಕರಣಂಗಳೆ ಓಂಕಾರ ರವ, ಆಗಮಂಗಳೇ ಕಂಠ, ಸ್ಮೃತಿಗಳೇ ಹಿಣಿಲು, ಪುರಾಣಂಗಳೇ ಬೆನ್ನುಸುಳಿ, ಶಾಸ್ತ್ರಂಗಳೇ ಬಾಲ, ತರ್ಕ ತಂತ್ರಗಳೇ ಪೃಷ್ಠ. ಉಪನಿಷತ್ತುಗಳೇ ವೃಷಣ. ರಹಸ್ಯಾಗಮಗಳೇ ಗುಹ್ಯ, ಸರ್ವಪದಾರ್ಥ ಸಿದ್ಧಿಯೇ ನಾಭಿ, ಸರ್ವತತ್ವಂಶರ್ಗತವೆ ಗರ್ಭ, ಉಪಶಾಸ್ತ್ರಂಗಳೆ ರೋಮಂಗಳು, ಉದಾತ್ತನುದಾತ್ತ ಸ್ಪುರಿತ ಪ್ರಚಯಂಗಳೇ ಚರಣಂಗಳು, ವೇದಂಗಳೇ ಅಂಗ, ಪರಮ ವೀರಶೈವಾಗಮವೇ ಪ್ರಾಣ, ಇಂತಪ್ಪ ಸರ್ವಜ್ಞತ್ವ ಮೂರ್ತಿಯಾದ ವೃಷಭೇಶ್ವರನ ಭಕ್ತಿ ಸಾರೋದ್ಧಾರ ಪ್ರಭಾವವೆಂತೆಂದೊಡೆ| ನಿರ್ಮೋಹ ನಿರಹಂಕಾರವೇ ಶೃಂಗಗಳು, ನಮಸ್ಕಾರವೇ ಶಿರಸ್ಸು ಅಂತರ‍್ ಬಾಹ್ಯ ನಾದಂಗಳೇ ಕರ್ನಂಗಳು, ಮನನ ನಿಧಿಧ್ಯಾಸನಂಗಳೇ ನೇತ್ರಂಗಳು, ಶಿವಧ್ಯಾನ ಸಂಸ್ಕಾರ ಸಾರಭವವೇ ನಾಸಪುಟಂಗಳು, ಸತ್ಯವೇ ಮುಖ ಸದ್ಗುಣ ಗಣವೇ ದಂತಪಂಕ್ತಿಗಳು, ಶಿವರತಿ ಸಾರ ಸೌಖ್ಯವೇ ಜಿಹ್ವೆ, ಶಿವಾನುಭಾವ ಪ್ರತಿಪಾದಕ ಗುಣ ಷಟ್ಕವೇ ಓಂಕಾರ ರವ, ದೃಢಭಾವವೇ ಕಂಠ, ನಿಷ್ಠಿಯೇ ಹಿಣಿಲು, ಏಕದೇವ ವೃಷ್ಠಾವಹಿತ್ವವೇ ಬೆನ್ನಸುಳಿ ಭವಸಾರೋತ್ತಾರ ಪಾರಾವಾರ ಗುಣವೇ ಬಾಲ, ಅಲೌಕಿಕ ಸ್ಥತಿಯೇ ಪೃಷ್ಠ, ಇಷ್ಠಾರ್ಥಸಿದ್ಧಿಕರವೇ ವೃಷಣ, ಶಿವಜ್ಞಾನ ರಹಸ್ಯವೇ ಗುಹ್ಯ, ಚಿದಾಕಾಶವೇ ನಾಭಿ, ಶಿವಕಥಾ ಮಹಿಮಾಗುಣ ಗರ್ಭಿಕೃತವೇ ಗರ್ಭ, ಸಕಲ ಕ್ರಿಯಾ ಸಂಪತ್ತೇ ರೋಮಂಗಳು, ಕರ್ಮ, ಭಕ್ತಿ, ಜ್ಞಾನ, ವೈರಾಗ್ಯಂಗಳೇ ಚರಣಂಗಳು, ಸದ್ಭಕ್ತಿಯೇ ಅಂಗ, ಸಮ್ಯಜ್ಞಾನವೇ ಪ್ರಾಣ, ಇಂತಿಪ್ಪ ಭಕ್ತಿ ಪ್ರಭಾವ ಮೂರ್ತಿಯಾದ ವೃಷಭೇಶ್ವರನ ಸರ್ವದೇವತಾ ಸಾರೋದ್ಧಾರವೆಂತೆಂದೊಡೆ|

ಶೃಂಗಾಗ್ರದಲ್ಲಿ ತುಂಬುರ ನಾರದಾದಿಗಳು, ತನ್ಮಧ್ಯದಲ್ಲಿ ಅಜಹರಿಗಳು, ಶಿರದಲ್ಲಿ, ಮೇರು ಮಂದಾರಾದಿಗಳು, ಲಲಾಟದಲ್ಲಿ ವೀರ ಕವೀರ ಭದ್ರಾದಿಗಳು, ಕರ್ಣಂಗಳಲ್ಲಿ ರುದ್ರಾದಿಗಳು, ನೇತ್ರಂಗಳಲ್ಲಿ ಶಶಿರವಿಗಳು, ನಾಸಪುಟಂಗಳಲ್ಲಿ ವಾಯು ಪುರುಷ ಭೂದೇವತೆಯ ಮುಖದಲ್ಲಿ ಮಹಾಗಣಂಗಳು, ದಂತಂಗಳಲ್ಲಿ ಭೃಂಗೀಶ್ವರಾದಿ ನಿರ್ಮಾಯ ಗಣಂಗಳು, ಜಿಹ್ವೆಯಲ್ಲಿ ಮಂತ್ರ ಮೂರ್ತಿಗಳು, ಓಂಕಾರ ರವದಲ್ಲಿ ನಾದ ಮೂರ್ತಿಗಳು, ಕಂಠದಲ್ಲಿ ಭೂವನ ಭುವೇಶ್ವರರು, ಹಿಣಿನಲ್ಲಿ ಪ್ರಥಮ ಗಣಧೀಶ್ವರರು, ಬೆನ್ನು ಸುಳಿಯಲ್ಲಿ ಉಮಾಮಹೇಶ್ವರರು, ಬಾದಂಡರೋಮಂಗಳಲ್ಲಿ ಸಕಲದೇವಾದಿ ದೇವರ್ಕಳು, ಪೃಷ್ಠದಲ್ಲಿ ಯಕ್ಷ ರಾಕ್ಷಸಾದಿಗಳು, ವೃಷಣದಲ್ಲಿ ಪುಣ್ಯತೀರ್ಥ ಮಹಾಪುರುಷರು, ಗುಹ್ಯದಲ್ಲಿ ಗುಹ್ಯಕಾದಿಗಳು, ನಾಭಿಯಲ್ಲಿ ಸಿದ್ಧ ವಿದ್ಯಾಧರರು, ಗರ್ಭದಲ್ಲಿ ಮನುಮುನಿಗಳು, ರೋಮಂಗಳಲ್ಲಿ ಚರಾಚರ ಜೀವರಾಶಿಗಳು, ಜಾಣುಜಂಘೆಗಳಲ್ಲಿ ಗ್ರಹರಾಶಿ ತಾರಾ ಪಂಥಗಳು, ಚರಣಂಗಳಲ್ಲಿ ಚತುರ್ಯುಗ, ಚತುರ್ವೇದ, ಚತುರ್ತಾದ, ಚತುಃಫಲಂಗಳು, ಅಂಗದಲ್ಲಿ ಅನಂತ ದಿವ್ಯಕ್ಷೇತ್ರಂಗಳು, ಪ್ರಾಣದಲ್ಲಿ ಪರಂಜ್ಯೋತಿರ್ಲಿಂಗಂಗಳಿಹವು. ಇಂತಪ್ಪ ಸರ್ವದೇವತಾ ಧಾರಮಪ್ಪ ವೃಷಭೇಶ್ವರನಿಂದಾದ ಸೃಷ್ಟಿಯ ಕ್ರಮವೆಂತೆಂದೊಡೆ|

ಗೋಮಯ ಗೋಮೂತ್ರದಿಂ ಪೃಥ್ವಿ ಜಲಂಗಳು, ತೇಜಸ್ಸಿನಿಂದ ಅಗ್ನಿ, ಉಶ್ವಾಸ, ನಿಶ್ವಾಸದಿಂ ವಾಯು, ಶಬ್ದದಿಂದಾಕಾಶ, ಕಂಗಳ ಕ್ರಾಂತಿಯಿಂ ರವಿಶಶಿಗಳು, ಬುದ್ಧಿ ಪ್ರಭಾವದಿಂದಾತ್ಮನೆಂಬೀ ಅಷ್ಠ ತನುಗಳುದಯವಾಗಿ, ಜಗತ್ ಸಚರಾಚರಗಳಾದವು. ಇಂತೀ ಸಕಲ ಜಗದಾಧಾರ ರಕ್ಷಣ ಕರ್ತೃವಪ್ಪ ವೃಷಭೇಶ್ವರನ ಅಲಂಕೃತೋಪಕರಣಂಗಳಾದವೆಂದೊಡೆ|

ಜ್ಞಾನ ಧ್ಯಾನಂಗಳೇ ಕೋಡಣಚುಗಳು, ಮಹಾನಾದ ಸುನಾದವೇ ಕಿವಿಯ ಚಮರಿ, ಶಿವಕೀರ್ತನ ಪ್ರಭಾಮಂಡಲವೇ ಕನ್ನಡಿ, ಅಣಿಮಾದೃಷ್ಟೈಶ್ವರ್ಯವೇ ಮುಖರಂಭ, ಸಮತೆಯೇ ವಾಗ್ಯೆ, ವಿಶ್ವಾಸ ಶ್ರದ್ದೆಯೇ ಕೊರಲದಂಡೆ, ಸತ್ಯಾಚಲ ಭಾಷೆಯೇ ಕೊರಲ ಗಂಟೆ, ವೇದಾದಿ ಉಘ್ಘಡಣೆಯೇ ಉರುಗೆಜ್ಜೆ ಹಾರಧ್ವನಿ, ಪ್ರಣಮೊಚರಣೆಯೇ ಅಂದುಗೆ ರವ, ದಯವೇ ಕಿಂಕಣಿದೊಡರು, ಪಂಚವರ್ಣ ಪ್ರಭಾವ ಪುಂಜವೇ ಹಲ್ಲಣ, ಸರ್ವಕಲಾರಸಿಕವೇ ಬಿಗಿವು, ಪರಮವೈರಾಗ್ಯವೇ ಅಂಕಣಿ, ನಿತ್ಯವೇ ಅಕ್ಕರಿಕೆ, ಇಂತಿ ಸರ್ವ ಲಕ್ಷಣ ಸಂಪನ್ನನಾಗೊಪ್ಪುವ ವೃಷಭೇಶ್ವರನ ಮುಖವೇ ಗೋಮುಖ. ಬಿಂದು ಪೀಠ, ಓಂಕಾರ ನಾದವೇ ಶಿಖಾಗ್ರದ ತೇಜೋಮಯಲಿಂಗ, ಇಂತೀನಾದಬಿಂದು ಸಂಯುಕ್ತವಾದುದೇ ಶಿವಲಿಂಗ, ಆ ಶಿವಲಿಂಗ ವೃಷಭೇಶ್ವರನ ಸಂಬಂಧದಲ್ಲಿ ಅಗಲದಿರ್ಪ ಕಾರಣ ಲಿಂಗಾವಲೋಕನ ದರ್ಶನ ಕಾಂಕ್ಷೆಯುಳ್ಳವರಿಗೆ ವೃಷಣ ಸ್ಪರ್ಶನ ಶೃಂಗ ಮಧ್ಯಾವಲೋಕವಿಲ್ಲದಿರಲು ಆ ದರ್ಶನ ಸ್ಪರ್ಶನ ನಿಷ್ಟಲ, ಅಂತಲ್ಲದೇ ಲಿಂಗಧಾರಣ ಸಂಪನ್ನರಿಗಾದುದು ವೃಷಲಿಂಗ ತದ್ಭಾವವಾದ ಬಸವಲಿಂಗಾ ಎಂಬ ಪರಮ ಮಂತ್ರೋಚ್ಛರಣವಿಲ್ಲದಿರಲು ದರ್ಶನ ಸ್ಪರ್ಶನಧಾರಣಾದಿಗಳು ನಿಷ್ಪಲ, ಅದು ಕಾರಣ ಬಸವಲಿಂಗ ನಾಮೋಚ್ಛರಣ ಜಪಕ್ರಿಯಾ ಲಕ್ಷಣವೆಂತೆಂದೊಡೆ|

ಓಂ, ಹ್ರಂ ಶುದ್ಧ ಗುರುಬಸವ, ಓಂ, ಹ್ರಿಂ ನಮಃ ಶಿವಾಯ ಗುರುವಿನ ಗುರುಬಸವ, ಓಂ, ಹ್ರಾಂ ಸಿದ್ಧ ಗುರುಬಸವ, ಓಂ, ಹ್ರೊಂ ಅಟಮ ಚರಾಚರ ಬಸವ, ಓಂ ಹ್ರಾಂ, ಮಹಾಪ್ರಸಿದ್ಧ ಗುರುಬಸವ, ಓಂ, ಹ್ರಃ ಬಸವ ಪವಿತ್ರ ಭಾವನ ಭಾವನ ಬಸವ ಎಂಬ ಅಷ್ಟಾಂಗನ್ಯಾಸ ಚತುಃಸಾರಾಯ ಮಂತ್ರವನ್ನುಚ್ಚರಿಸಲು ಸರ್ವಸಿದ್ಧಿ|

 

ವೃಷಭೋದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ