ಇಂತೀ ಷಡಾಕ್ಷರ ಸಂಬಂಧವನರಿದ ಶಿವಯೋಗಿಯ ಪರತತ್ವಜ್ಞಾನ ಧ್ಯಾನ ಪರಮುಕ್ತಿ ಸಾಧನವಪ್ಪ ಬಸವಾಕ್ಷರೊದ್ಧರಣೆಯ ಸಂಬಂಧವೆಂತೆಂದೊಡೆ|

ಪರತತ್ವದ ಪರಮಜ್ಞಾನ ಚೈತನ್ಯವೇ ಪರಶಕ್ತಿ, ಆ ಪರಶಕ್ತಿಯ ಸುನಾದ ಚೈತನ್ಯವೇ ಬಕಾರ. ಚಿತ್ಪ್ರಭಾವರಣವೇ ಸಕಾರ. ಸತ್ಕಲಾ ತೋಜೋಪುಂಜವೇ ವಕಾರ. ಇಂತೀ ಬಸವಾಕ್ಷರ ತ್ರಯಕ್ಕೆ ವಿವರ|

ಶೂನ್ಯ ನಿಷ್ಕಲ ಶಿವಮಯವೆಂಬ ತತ್ವತ್ರಯ ಸತ್ತುಚಿತ್ತಾನಂದವೆಂಬ ಲಕ್ಷಣತ್ರಯ, ಸದಾಶಿವ, ಈಶ್ವರ ರುದ್ರರೆಂಬ ಮೂರ್ತಿತ್ರಯ, ಇಚ್ಛಾ, ಜ್ಞಾನಕ್ರಿಯೆ ಎಂಬ ಶಕ್ತಿತ್ರಯ, ಭವ, ಮೃಡ, ಹರ ಎಂಬ ತ್ರಯವಯ ಸ್ವರೂಪಿನಿಂ ತನುತ್ರಯ, ಜೀವತ್ರಯ, ಆತ್ಮತ್ರಯ ಅವಸ್ಥಾತ್ರಯ, ಮನತ್ರಯ, ಭಾವತ್ರಯೋತ್ಪತ್ತಿ ಹೇತುವಿನಿಂ ಸಕಲ ತತ್ವ ಕಾರಣವಾಗಿಹವು. ಇಂತಿವು ಸೃಷ್ಟಿಯ ಭೇದ.

ಇನ್ನು ನಿವೃತ್ತಿಯ ಲಕ್ಷಣ, ಗುರುತ್ರಯ, ಲಿಂಗತ್ರಯ, ಜಂಗಮ ತ್ರಯ, ಪ್ರಸಾದತ್ರಯ, ಪಾದೋದಕ ತ್ರಯ, ಭಕ್ತಿ ತ್ರಯ ಸ್ವರೂಪಿನಿಂ ಅಂಗತ್ರಯ, ಲಿಂಗತ್ರಯ ಅವಧಾನತ್ರಯ, ಕರಣತ್ರಯ, ಮುಖತ್ರಯ, ಅರ್ಪಿತ ತ್ರಯ, ಸಂಬಂಧದಿಂ ಸರ್ವಾಚಾರ ಸಾಧನವಾಗಿಹವು. ಇದನುಚ್ಚರಿಸುವ ಕ್ರಮವೆಂತೆಂದೊಡ|

ಬಸವ, ಬಸವ, ಬಸವ, ಬಸವ, ಬಸವ, ಬಸವ ಎಂದು ಪುನಃ ಪ್ರಯೋಗದಿಂದಾರು ವ್ಯಾಳ್ಯೆ ಸ್ಮರಿಸಲು ನೂರೆಂಟು ಪ್ರಣಮವಹುವು ಎಂದರಿದು ಜಪಿಸಲು ಶಿವಜ್ಞಾನ ಸಿದ್ಧಿಯಹುದಕ್ಕೆ ಸಂದೇಹವಿಲ್ಲ.

 

ಬಸವಾಕ್ಷರೊದ್ಧರಣೆಯ ಸಂಬಂಧ ಸಮಾಪ್ತಿ ಮಂಗಳ ಶ್ರೀ ಶ್ರೀ