ಅಕಾಲ ಮಾಯೆ, ಮೋಹ, ಜೀವ ಜನ ಸರ್ವಾಕಾರವಳಿದು, ನಿತ್ಯ ನಿರ್ಮಯ, ನಿರ್ಮೋಹ, ಸಜೀವ, ಸುಜನ ಸತ್ಪ್ರಾಣವಾಕಾರವಾದ ಸ್ವರೂಪ ಲಕ್ಷಣ ಸಂಬಂಧವೆಂತೆನಲು|

ಪರಮ ಶಿವ ರತಿವಿಲಾಸ ಮೋಹನವೇ ಮುಖ, ಸದ್ವಿಕವೇ ಶಿರಸ್ಸು, ಶಿವಸದ್ವಾಸನಾ ಸ್ವೀಕಾರವೇ ನಾಸಿಕ, ನಿತ್ಯ ನಿಜಮುಕ್ತಿಯೇ ಮೂಗುತಿ, ಚಿದಾವಾಕ್ಷೆಯೇ ಜಿಹ್ವೆ, ನಿಃ ಸಂಕಲ್ಪ ನಿರ್ವಿಕಲ್ಪಾದಿ ಸದ್ಗುಣಂಗಳೇ ದಂತಪಂಕ್ತಿಗಳ, ಚಿತ್ಕರಣ ಮಥಂಗಳೇ ಕೋರೆದಾಡೆಗಳು, ಸುಜ್ಞಾನ ಮಹಾಜ್ಞಾನಂಗಳೇ ನಯನಂಗಳು, ಸದ್ಭೋದೆ ನಿರ್ಬೋಧೆಗಳೇ ಕರ್ಣಂಗಳೂ, ಮಾರ್ಗಕ್ರಿಯೆ ಮೀರಿದ ಕ್ರಿಯಾ ಚಾರಂಗಳೇ ಕರ್ಣಾಂಭರಣಂಗಳೂ, ನಿರಹಂಕಾರ, ಮಮಕಾರಂಗಳೇ ಕೋಡ್ಗಳು, ಸದೃಢವೇ ಕಂಠ, ನಿಜನಿಷ್ಠಯೇ ಕಂಠಾಭರಣ ಸುನಾದ ಸೂತ್ರ ವಿಡಿದಿರ್ಪ, ಮಂತ್ರಾಕ್ಷರ ಮಾಲೆಯೇ ಕೊರಳ ಹಾರ, ಸುಚಿತ್ತ ಸುಬುದ್ಧಿ, ಸುಮನ ಸದ್ಭಾವವೇ ಕರ ಚತುಷ್ಠಯಂಗಳು, ಸದ್ಗುಣ ಪ್ರಭಾವಂಗಳೇ ಹಸ್ತಾಭರಣಂಗಳು, ಪರಮಾಮೃತ ಚಿದಾಮೃತ ಪೂರಿತವಾದ ಪಾತ್ರ ಸತ್ಪ್ರಾತಂಗಳೇ ಮ್ಯಾಲಣ ಹಸ್ತದ್ವಯದ ಕುಂಭಂಗಳು, ನಿರ್ಲಿಖಿತವ ಲಿಖಿಸುವ ಮೂಲಜ್ಞಾನವೇ ಬಲದ ಹಸ್ತದ ಕಂಠ, ಪ್ರಾರಬ್ದ ಕಲ್ಪಿತವಳಿದ ಚಿತ್ಪಿಂಡ ಸಂಬಂಧವಪ್ಪ ಫಣೆಯ ಪಂಚಾಕ್ಷರ ಲೇಖನವೇ ಎಡದ ಹಸ್ತದ ಶಾಸನ ಪತ್ರ, ಭಕ್ತರ ಸಾರಾಮೃತ ಪೂರಿತವಾದ ಸತ್ಕರ್ಮ ನಿಷ್ಕರ್ಮಂಗಳೇ ಸ್ತನಂಗಳು.

ಅಲ್ಲಿಯ ನಿಃಪ್ಪ್ರಪಂಚಾಧ್ಯಾನವೇ ಕಂಚುಕ ತನ್ನೀ ಪ್ರಪಂಚು ಮೂಲಕಾವಲಂಬನ ಗರ್ಭೀಕೃತವೇ ಗರ್ಭ, ತನ್ಮಧ್ಯಸ್ಥಿತಿಯೇ ನಾಭಿ. ಆ ಸ್ಥಿತಿಗತಿ ಸಂಧಾನರತಿಯೇ ನಡುವು, ನಿಜೋತ್ಪತ್ತಿ ಹೇತು, ಸಾಧನ ಗುಣವೇ ಗೋಪ್ಯಾಂಗ, ಷಡ್ವಿಧ ಭಕ್ತಿಯುಕ್ತವಾದ ಜ್ಞಾನವೇ ಉಟ್ಟಪಟ್ಟಾವಳಿ ಸಪುರವಸ್ತ್ರ, ಸದ್ಭಾವ ಪ್ರಕೃತಿಯೇ ಮಧ್ಯಾವರಣ ಸದಾಚಾರ ಸಚ್ಚಾರಿತ್ರ್ಯವೇ ಚರಣದ್ವಯಂಗಳು, ತತ್ಸಂಬಂಧವಾದ ನಿಷ್ಕಪಟ, ನಿಷ್ಕುಹಕ ಗುಣಪ್ರಭಾವಂಗಳೇ ಪಾದ್ಯಾವರಣಂಗಳು, ಅಸಾಧ್ಯಸಾಧಕ, ವಿಜಯ ವಿಶಾಲ ಪ್ರತಾಪ ಗುಣವೇ ಬಿರಿದಿನ ಕಾಲ ಪೆಂಡೆಯ ನಿಲುವ ತೊಡರು ಬಾಪುಲಿಗಳು, ನಿಷ್ಕ್ರೋಧ, ನಿರ್ಮೊಹ, ಸಜೀವ, ನಿರ್ಮಾಯೆ- ಈ ನಾಲ್ಕು ವಾಹನಂಗಳು. ಸದ್ಧರ್ಮ, ಸುಜ್ಞಾನ, ಪರಮವೈರಾಗ್ಯ ಮಹದೈಶ್ವರ್ಯ ಈ ನಾಲ್ಕು ಚರಣಂಗಳು, ಅಭೋಕ್ತೃ ಕರ್ಮ ಸ್ಥಿತಿಯೇ ಕೆಚ್ಚಲು ಶಿವಧರ್ಮ ಶಿವಜ್ಞಾನಾರ್ಥ ಶಿವರತಿಕಾಮ, ಶಿವಸುಖ ಮೋಕ್ಷಂಗಳೇ ಸ್ತನಂಗಳು, ಆ ಸ್ತನ್ಯಪಾನ ಸ್ವೀಕೃತರಪ್ಪ ಸಜೀವಾತ್ಮಕರೇ ಚಿತ್ ಸುಧಾಂಬೋರಾಶಿ ಕ್ರಿಡಿತ ಮತ್ಸ್ಯಂಗಳು.

ಇಂತಾಗಲು ದಂಡಾಹತವಾದ ಭುಜಂಗದಂತೆ ಸುಪ್ತವಾದ ಕುಂಡಲೀ ಸರ್ಪನು ಶಿವಯೋಗ ಸಾಧನ ಸಂಪತ್ಕರದಿಂ ಪ್ರಬಲವಪ್ಪ ಜ್ಞಾನಾಗ್ನಿ ಮುಖದಿಂದೆಚ್ಚೆತ್ತು ಊರ್ಧ್ವದ ಮುಖವಾಗಿ ಸತ್ಪ್ರಾಣದ ಜ್ಞಾನ ಕುಂಡಲಿಯೆನಿಸಿ, ಅಗ್ನಿ ಮಂಡಲದಿಂ ಸೂರ್ಯ ಮಂಡಲಕ್ಕಡರಿ, ಅಲ್ಲಿಂದ ಚಂದ್ರ ಮಂಡಲವನೇರಿ ಅಲ್ಲಿಂದ ಬಂಧು ತ್ರಿಕೂಟಾದ್ರಿಯಲ್ಲಿ ನಿಂದು ಮಂತ್ರೋಚ್ಚಾರಿತ ಲೋಲನಂದ ಬ್ರಹ್ಮನಾದಾನು ಸಂಗಿಯಾಗಿ ಪ್ರಣವಘೋಷದಿಂ ಪಶ್ವಿಮಗಾಮಿಯಾಗಿ ಖಗರಂಧ್ರ ಸ್ಥಾನಮಂ ಸಾರಿ ಫಣಾಮಣೆ ಪ್ರಜ್ವಲಿಸುತ್ತಾ ಪರಮ ತೇಜೋರಾಶಿಯನಿಪ ಪರತತ್ವದೊಳ್ಬೆರದು ಮನಸ್ಸಮಾಧಿಯ ನೇಯಿದಿರ್ಪುದು.

ಮತ್ತಂ, ಮದನಾವರ್ತಿಸಿ ಪೂರ್ವೋಕ್ತ ಕ್ರಮದಂತೆ ನಿವೃತ್ತಿ ಮುಖವನುಳ್ಳ ಸರ್ವ ಸದ್ಗುಣ ಸಂವತ್ಸಂಭ್ರಮದಿಂ ಚಿತ್ ಸಮುದ್ರ ಎಸುವುತ್ತಿಹುದು.

 

ಊರ್ಧ್ವಕುಂಡಲಿ ಶಕ್ತೋದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ