ನಕಾರವೆ ಪೃಥ್ವಿ; ಮಕಾರವೆ ಅಪ್ಪು: ಶಿಕಾರವೆ ಅಗ್ನಿ;
ವಕಾರವೆ ವಾಯು; ಯಕಾರವೆ ಆಕಾಶ;
ಓಂಕಾರವೆ ಆತ್ಮಸ್ವರೂಪು ನೋಡಾ.
ಮತ್ತೆ
ನಕಾರವೇ ಬ್ರಹ್ಮ; ಮಕಾರವೆ ವಿಷ್ಣು, ಶಿಕಾರವೆ ರುದ್ರ;
ವಕಾರವೆ ಈಶ್ವರ; ಯಕಾರವೆ ಸದಾಶಿವ:
ಓಂಕಾರವೆ ಮಹಾತ್ಮನು ನೋಡಾ
ಮತ್ತೆ
ಅಂತರ್ಯಾಮಿಯೆ ನಕಾರ; ಚೈತನ್ಯನೆ ಮಕಾರ; ಭಾವನೆ ಶಿಕಾರ
ಕರ್ತಾರನೆ ವಕಾರ: ಕ್ಷೇತ್ರಜ್ಞನೆ ಯಕಾರ
ಶಿವನೆ ಓಂಕಾರ ನೋಡಾ
ಮತ್ತೆ
ಕರ್ಮಾಂಗ ಸ್ವರೂಪನಪ್ಪ ಭಕ್ತನ ನಕಾರ;
ವಿದ್ಯಾಂಗ ಸ್ವರೂಪನಪ್ಪ ಮಾಹೇಶ್ವರನೆ ಮಕಾರ
ಕಾಮಾಂಗ ಸ್ವರೂಪನಪ್ಪ ಪ್ರಸಾದಿಯೇ ಶಿಕಾರ
ಯೋಗಾಂಗ ಸ್ವರೂಪನಪ್ಪ ಪ್ರಾಣಲಿಂಗಿಯೇ ವಕಾರ
ಭೂತಾಂಗ ಸ್ವರೂಪನಪ್ಪ ಶರಣನೆ ಯಕಾರ;
ಶಿವಾಂಗ ಸ್ವರೂಪನಪ್ಪ ಐಕ್ಯನೆ ಓಂಕಾರ ನೋಡಾ.
ಭೂತಾಂಗ ಸ್ವರೂಪನಪ್ಪ ಶರಣನೆ ಯಕಾರ
ಮತ್ತೆ
ನಕಾರವೆ ಸದ್ಭಕ್ತಿ; ಮಕಾರವೆ ನೈಷ್ಠಿಕಾಭಕ್ತಿ; ಶಿಕಾರವೆ ಅವಧಾನಭಕ್ತಿ
ವಕಾರವೆ ಅನುಭಾವಭಕ್ತಿ; ಯಕಾರದ ಆನಂದಭಕ್ತಿ
ಓಂಕಾರವೆ ಸಮರಸಭಕ್ತಿ ನೋಡಾ.
ಮತ್ತೆ
ಆತ್ಮತತ್ವವೇ ನಕಾರ; ವಿದ್ಯಾತತ್ವವೆ ಮಕಾರ
ಶಿಕಾರವೆ ಶಿವತತ್ವ ನೋಡಾ
ವಕಾರವೇ ಈಶ್ವರತತ್ವ; ಯಕಾರವೇ ಸದಾಶಿವತತ್ವ;
ಓಂಕಾರವೆ ಪರತತ್ವ ನೋಡಾ
ಮತ್ತೆ
ನಕಾರವೆ ಸುಚಿತ್ತಹಸ್ತ; ಮಕಾರವೆ ಸುಬುದ್ಧಿ ಹಸ್ತ;
ಶಿಕಾರವೆ ನಿರಹಂಕಾರಹಸ್ತ; ವಕಾರವೆ ಸುಮನಹಸ್ತ;
ಹಕಾರವೆ ಸುಜ್ಞಾನಹಸ್ತ; ಓಂಕಾರವೆ ಸದ್ಭಾವಹಸ್ತ
ಇಂತಿವು ಅಂಗಷಡಕ್ಷರ ಕಾಣಾ.
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೆ|

 

ಅಂಗ ಷಡಾಕ್ಷರೋದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ