ಇಂತಪ್ಪ ಶಿವಯೋಗಿಯ ಶಿವಜ್ಞಾನ ಚೈತನ್ಯ ಅಕ್ಷರಜ್ಞಾತ್ವಾದಿ ಭೇದಂಗಳನೊಳಗೊಂಡು ವ್ಯಾವೃತ್ತಮಾಗಿರ್ಪ ಕಾರಣದಿಂ ಜ್ಞಾನ ಚಕ್ರವೆನಿಸಿತು. ಇದನುದ್ಧರಿಸುವ ಕ್ರಮವೆಂತೆಂದೊಡೆ

ನೂರನಲ್ವತ್ತು ನಾಲ್ಕಂಗುಲಿನ ಪ್ರಮಾಣಿನ ಚಕ್ರಕ್ಷೇತ್ರಮಂ ಚತುರಾಕಾರವಾಗಿ ಬರದು, ಅದರ ಮಧ್ಯದಲ್ಲಿ ಒಂದು ಕುರಹನಿರಿಸಿ, ಅದರ ಮ್ಯಾಲೆ ಬಳಸಿ ಅಂಗುಲಂಗುಲ ಪ್ರಮಾಣಿನಲ್ಲಿ ಷಡ್ವಿಧ ಕುರುಹಂಗಳಂ ಮಾಡಿ ಅಲ್ಲಿ ಷಟ್ಕೃತಿಯಂ ಬರದವರೊಳು ಪೂರ್ವದಿಕ್ಕು ಬಳಿಗೊಂಡು ಬಲಪ್ರದಕ್ಷಿಣವಾಗಿ ಪ, ಮ, ಬ, ಆ, ಸ, ವು ಎಂಬ ಷಡ್ವರ್ಣಗಳಂ, ಮಧ್ಯದಲ್ಲಿ ಹ ಕಾರಮಂ ಅದರೆಡಬಲದಲ್ಲಿ ಓಂಕಾರ ಕ್ಷಕಾರಂಗಳಂ ಬರೆವುದು.

ಬಳಿಕಾ ಷಟ್ಕೋಣಿಗಳ ಮ್ಯಾಲೆ ಐದಂಗುಲ ಪ್ರಮಾಣೋನ್ನತವಾದ ಷಡ್ವಿಧ ಭವನಂಗಳಂ ಮ್ಯಾಲೆರಡೆರಡೆರಡು ರೇಖೆಗಳ ಪೂರ್ಣಮಾಡಿ ಕೆಳಗುಬರೆ. ಕೆಳಗೆರಡೆರಡು ರೇಖೆಗಳ ತ್ರಿಭಾಗದೊಳಗೊಂದು ಭಾಗ ಕಡಿಮೆಯಾಗಿ ಮೇಲು ಬರೆಯಲು, ಅವರ ಮಧ್ಯದಲ್ಲಿ ಆರೆಸಳು ಪುಟ್ಟುವವು.

ಬಳಿಕವಾರೊಳೊ ಹ್ರಃ, ಹ್ರೂಂ, ಹ್ರೆಂ, ಹ್ರಿಂ, ಹ್ರೋಂ, ಹ್ರಾಂ ಎಂಬ ಷಡ್ವರ್ಣಗಳಂ ಅದರ ಕೆಳಗೆ ಓಂ, ಯ, ವಾ, ಶಿ, ಮ, ನ ಎಂಬ ಷಡ್ವರ್ಣಂಗಳಂ ಬರೆವುದು ಮತ್ತಮಾ ಷಡ್ವಿಧ ಭವನಂಗಳಲ್ಲಿ ಮೂಲೆ ಮೂಲೆಗಳೆಡೆವಿಡದಂತೆ ತ್ರಿಕೋಣೆ ಚತುರಾಕಾರದ ಮನೆಗಳ ದ್ವಾದಶಮಪ್ಪಂತೆ ಬರೆದವರಲ್ಲಿ ಬಲನೆಡಪ್ರದಕ್ಷಿಣಮಾಗಿ ಓಂಕಾರದೀ ವಿಶ್ರಷಡ್ವರ್ಣಂಗಳಂ ದ್ವಾದ್ಯಾದಶಮಪ್ಪಂತೆ ಅವಂ ಬಳಸಿ ಮ, ಅ, ಟ ಎಂಬ ಅಕ್ಷರತ್ರಯಂಗಳ ಆರಾರಂಪ್ಪಂತೆ ಬರೆಯಲು ಎಪ್ಪತ್ತೆರಡು ಮನೆಗಳಿಗೆ ಮಿಶ್ರಾಕ್ಷರಂಗಳು ನೂರೆಂಟಿಹವು.

ಬಳಿಕವರ ಸಂದು ಸಂದುಗಳಲ್ಲಿ ಅಡ್ಡಚೌಕದ ಮನೆಗಳಾರನು ಅವರ ಮಧ್ಯದಲ್ಲಿ ಒಂಭತ್ತೊಂಭತ್ತು ಮನೆಗಳಂ ಬರದವರಲ್ಲಿ ಆ ಮಿಶ್ರಷಡ್ವರ್ಣಗಳಂ ದ್ವಾದ್ಯದಶಮಪ್ಪಂತೆ ಬರೆಯಲು ಐವತ್ನಾಲ್ಕು ಮನೆಗಳಿಗೆ ಮಿಶ್ರಾಕ್ಷರಂಗಳೆಪ್ಪತ್ತೆರಡಹವು. ಬಳಿಕಾ ಚಕ್ರದ ಮೂಲೆ ಮೂಲೆಗಳ ಬಳಸಿ ಮಧ್ಯದಲ್ಲಿ ಒಂದಂಗುಲದಗಲ ಪ್ರಮಾಣಮಪ್ಪಂತೆ ರೇಖೆಗಳ ತೆಗೆಯಲು ಹನ್ನೆರಡು ಮೂರ್ತಿಗಳು ಹುಟ್ಟುವವು. ಳ ಕಾರವೊಂದನು ಉಳುಹಿ ಆಕಾರದೈವತ್ತುವರ್ಣಂಗಳಂ ಲೋಮವಿಲೋಮದಿಂ ಮಾಯಾಖ್ಯಂಗೂಡಿ, ಅಷ್ಟೋತ್ತರ ಶತಾಷ್ಠಕ್ಷರಗಳಂ ಬರೆವುದು.

ಮತ್ತಂ ಆ ಚೌಕದ ಮೂಲೆ ಮೂಲೆಗಳಲ್ಲಿ ಎರಡೆರಡು ಮನೆಗಳಂ ರಚಿಸಿ, ಅದರಲ್ಲಿ ಪೂರ್ವ ಅಗ್ನಿ ದಿಕ್ಕಿನ ಮನೆ ಮೊದಲುಗೊಂಡು ಪರಿವಿಡಿಯು ಬ, ಸ, ವ, ಅ, ಟ, ಮ ಹ, ಕ್ಷ ಎಂಬ ಅಷ್ಠಾಕ್ಷರಂಗಳಂ ಬರೆವುದು. ಇಲ್ಲಿಗೆ ಯಂತ್ರಾಕ್ಷರಂನ್ಯಾಸ ಮುಗಿಯಿತು. ಇನ್ನು ತತ್ತ್ವ ಮಂತ್ರಕುಳಸ್ಥಳ ಸಂಬಂಧವೆಂತೆಂದೊಡೆ

ಮಧ್ಯದ ಹಕಾರ ಕ್ಷಕಾರ ಒಕಾರಂಗಳೇ ನಿರಂಜನ ಶೂನ್ಯ ನಿಷ್ಕಲತತ್ತ್ವ, ಶಕ್ತಿತ್ರಯ ಪರಕಲಾನಾದ ಬಿಂದು ಪ್ರಣವತ್ರಯ. ಕೇವಲ ಲಿಂಗಾಂಗ ಸಂಬಂಧ ತ್ರಯಾತ್ಮಕವಾಗಿಹವು. ಇನ್ನು ಷಟ್ಕೋಣೆಗಳ ನ್ಯಾಸಾಕ್ಷರಂಗಳೊಳಗೆ ವ, ಬ, ಸ ಯಂಬಕ್ಷರ ತ್ರಯಂಗಳೇ ತತ್ತ್ವತ್ರಯ. ಆತ್ಮತ್ರಯ ಚಿತ್ಕಲಾಬಿಂದುತ್ರಯ, ಮಂತ್ರತ್ರಯ, ಲಿಂಗತ್ರಯ, ಸ್ವರೂಪವಾಗಿಹವು. ಮ, ಅ, ವು ಎಂಬಕ್ಷರ ತ್ರಯಂಗಳೇ ಶಕ್ತಿತ್ರಯ, ತನುತ್ರಯ, ಸತ್ಕಲಾನಂದ ಬಿಂದು ಪ್ರಣವತ್ರಯ ಅಂಗತ್ರಯ ಸ್ವರೂಪವಾಗಿಹವು.

ಇನ್ನು ಮಧ್ಯದಳದನ್ಯಾಸಾಕ್ಷರಂಗಳೊಳಗೆ ಹ್ರಃ ಕಾರಾದಿ ಷಡ್ವರ್ಣಂಗಳೊಳಗೆ ಷಟ್ ಸಾದಾಖ್ಯ, ಷಡಾತ್ಮ, ಷಟ್ ಪ್ರಸಾದ ಮಂತ್ರ, ಷಡ್ವಿಧಲಿಂಗ, ಷಡಾಕ್ಷರಪ್ರಣವ, ಷಟ್ ಸ್ಥಲಾಂಗ ಸ್ವರೂಪವಾಗಿಹವು, ಇನ್ನು ನೀಳಚೌಕದ ಷಡ್ ವಿಧ ಭವನಮಧ್ಯ ಸ್ಥಲವಾದ ಮೂಲೆ ಮೂಲೆಯ ಮನೆಗಳಲ್ಲಿ ನ್ಯಾಸವಾಗಿರ್ಪ ಬಲ ಪ್ರದಕ್ಷಣದ ಮ, ಅ, ವು ಎಂಬಕ್ಷರತ್ರಯಂಗಳೇ ಲಕ್ಷಣತ್ರಯ, ವರ್ಣತ್ರಯ, ಗುಣತ್ರಯ, ಮೂರ್ತಿತ್ರಯ, ತತ್ತ್ವತ್ರಯ, ಶಕ್ತಿತ್ರಯನೆಂಬ ಹದಿನೆಂಟುತತ್ವ, ಹದಿನೆಂಟುಮಂತ್ರ, ಹದಿನೆಂಟು ಲಿಂಗ ಸ್ವರೂಪವಾಗಿಹವು ಎಡಪ್ರದಕ್ಷಣದ ಅಕ್ಷರತ್ರಯಂಗಳೇ ತನುತ್ರಯ, ತನ್ಮಾತ್ಮತ್ರಯ, ಇಂದ್ರಿಯತ್ರಯ, ಚೇತನತ್ರಯ, ಕರಣತ್ರಯ, ಭಾವತ್ರಯ ಎಂಬ ಹದಿನೆಂಟು ಕರಣಪ್ರಣವ ಹದಿನೆಂಟು ಅಂಗಸ್ವರೂಪವಾಗಿಹವು. ಇನ್ನು ಒಂಭತ್ತು ಮನೆಗಳ ನ್ಯಾಸಾಕ್ಷರಂಗಳೊಳಗೆ ಬಲ ಪ್ರದರ್ಶದ ಮಿಶ್ರಷಡ್ವರ್ಣಂಗಳೇ ಷಡ್ ಲಕ್ಷಣ, ಷಡ್ವರ್ಣ, ಷಡ್ಗುಣ, ಷಣ್ಮೋರ್ತಿ, ಷಟ್ ತತ್ವ, ಷಟ್ ಶಕ್ತಿಗಳೆಂಬ ಮೂವತ್ತಾರು ತತ್ತ, ಮೂವತ್ತಾರು ಮಂತ್ರ, ಮೂವತ್ತಾರು ಲಿಂಗಸ್ವರೂಪವಾಗಿಹವು. ಎಡಪ್ರದಕ್ಷಣದ ಮಿಶ್ರಷಡ್ ವರ್ಣಗಳೇ ಕರ್ಮೇಂದ್ರಿಯ ಷಡ್ವಿಧ, ವಿಷಯ ಷಡ್ವಿಧ, ಜ್ಞಾನೇಂದ್ರಿಯ ಷಡ್ವಿಧ, ವಾಯು ಷಡ್ವಿಧ, ಕರಣ ಷಡ್ವಿಧ, ಭಾವಷಡ್ವಿಧವೆಂಬಾ ಮೂವತ್ತಾರು ಕರಣ ಮೂವತ್ತಾರು ಪ್ರಣಮ, ಮೂವತ್ತಾರು ಅಂಗಸ್ವರೂಪವಾಗಿಹವು. ಇಂತಿ ಒಟ್ಟವಿಸಲು ನೂರೆಂಟು ತತ್ವ, ಕರಣನೂರೆಂಟು, ಮಂತ್ರ ಪ್ರಣವ ನೂರೆಂಟು ಲಿಂಗಾಂಗಗಳಾದವು.

ಇನ್ನು ಇದೇ ಮರ್ಯಾದೆಯಲ್ಲಿ ಅಡ್ಡ ಚೌಕದ ಷಡ್ವಿಧ ಭವನಂಗಳ ಒಂಭತ್ತೊಂಭತ್ತು ಮನೆಗಳಲ್ಲಿ ನ್ಯಾಸವಾಗಿರ್ಪ ಮಿಶ್ರಷಡ್ ವರ್ಣಂಗಳೇ ಪ್ರತಿ ಮಿಶ್ರಸಂಖ್ಯಾಭೇದದಿಂ ಮೇಳವಿಸಲು ಇನ್ನೂರ ಹದಿನಾರು ತತ್ವಕರಣ, ಮಂತ್ರ ಪ್ರಣವ ನೂರೆಂಟು, ಲಿಂಗಾಂಗ ಸ್ಥಳಕುಳಗಳಾಗಿಹವು. ಇಂತೀ ಸ್ಥಳ ಕುಳಂಗಳಿಗೆಯೂ ಲಿಂಗ, ಹಸ್ತ ಶಕ್ತಿ, ಪ್ರಸಾದ, ಈ ನಾಲ್ಕು ಲಿಂಗ ಸಕೀಲಂಗಳು. ಅಂಗ, ಮುಖ, ಭಕ್ತಿ, ಪದಾರ್ಥ ಈ ನಾಲ್ಕು ಅಂಗ ಸಕೀಲಂಗಳು. ಇಂತೀ ಪರಿಯಲ್ಲಿ ಎಲ್ಲ ಸಕೀಲ ಸಂಬಂಧವನರಿವುದು.

ಇನ್ನು ಮೇಲಣ ದ್ವಾದಶ ಕೃತಿಗಳ ಮಧ್ಯಸ್ಥಲವಾದ ನೂರೆಂಟು ಮನೆಗಳ ನ್ಯಾಸಾಕ್ಷರಂಗಳೇ ಭಾವನ್ನ ಕಲಾಮೂರ್ತಿ, ಭಾವನ್ನ ತತ್ತ್ವ ಶಿವಶಕ್ತಿ, ಪ್ರಕೃತಿಪುರುಷರೆಂಬ ನೂರೆಂಟು ತತ್ವಕರಣ, ನೂರೆಂಟು ರುದ್ರ, ನೂರೆಂಟು ಶಕ್ತಿ, ಗುರು, ಚರ, ಪರ, ಎಂಬಾ ಲಿಂಗತ್ರಯ, ಮಂತ್ರಜ್ಞಾನ, ಪ್ರಸಾದವೆಂಬಾ ಅಂಗತ್ರಯ, ಸರ್ವಶೂನ್ಯ ನಿರಾಲಂಬಸ್ಥಲ ೧, ಅಂಗಸ್ಥಲ ೪೪, ಲಿಂಗಸ್ಥಲ ೫೭, ಇಂತೀ ನೂರೆಂಟು ಸ್ಥಲಕುಲಸ್ವರೂಪವಾಗಿಹವು. ಇನ್ನು ಚೌಕಾಮಧ್ಯ ಸ್ಥಲವಾದ ಅಷ್ಠ ಭವನನ್ಯಾಸಕ್ಷರಂಗಳೇ ಅಷ್ಠಮೂರ್ತಿ, ಅಷ್ಠತನು, ಅಷ್ಠಮಂತ್ರ, ಅಷ್ಠಾಂಗಲಿಂಗ, ಸಕೀಲಸಂಪತ್ರಿನಿಂ ಮತ್ತಂ ಮೂರು ಮೂರು ತೆರನಾದ ಅಷ್ಠಾವರ್ಣ ಸ್ವರೂಪವಾಗಿಹವು. ಇಂತೀ ಸರ್ವ ಸಿದ್ದೀಕರಣಮಾದ

 

ಜ್ಞಾನ ಚಕ್ರೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ