ಇಂತು ಸರ್ವ ಮಂತ್ರಾಲಯವಪ್ಪ ಅನಾದಿ ಜಂಗಮದ ಮಕುಟದಿಂದುದಯವಾದ ಶೂನ್ಯಲಿಂಗೋದ್ಧರಣೆಯ ಸಂಬಂಧವೆಂತೆಂದೊಡೆ|

ಮಾತಾಪಿತ ಸಹೋದರ ಬಂಧು ಸತಿಸುತ ಕುಲಗೋತ್ರ ನಾಮರೂಪು ತನುಕರುಣಾದಿ ಭೋಗ ಭುವನ ಕಾಲೋಕಲ್ಪತ ಮಾಯೋಪಾದಿಗಳಿಲ್ಲದೆ ಬಾಹ್ಯಾಂಭ್ಯಾಂತರ ದಿಕ್ಕುವಿದಿಕ್ಕು ಆದ್ಯಾಂತರಹಿತವಾಗಿ ಜ್ವಲಿಸುತ್ತಿರ್ದ ಕಾಲಾಗ್ನಿ ಯೋಪಾದಿಯ ಕಾಂತಿಯಿಂ, ಕೋಟಿ ಮಿಂಚುಗಳ ಪ್ರಭಾವ ಪುಂಜವನೊಳಗೊಂಡು ಪ್ರಕಾಶಿಸುತ್ತಿರ್ದ ಶಿಖಾಗ್ರದ, ಸೂಕ್ಷ್ಮ ಚಿತ್ಕಲಾಲಿಂಗವು ಭಾವಮನ ದೃಷ್ಟಿಗಳಿಂ ಬಹಿಷ್ಕರಿಸಿ ವೃತ್ತಗೊಳಕ, ಗೋಮುಖಾಕಾರದಿಂ, ವ್ಯಕ್ತೀಕರಿಸಿ, ಸರ್ವಲಕ್ಷಣ ಸಂಪೂರ್ಣವಾಗಿ, ಪರಮಲೀಲೋಲ್ಲಾಸ ಭಕ್ತಿಭಾವ ಭರಿತಾಂತಃಕರಣನಾಗಿರ್ಪ ಅನಾದಿ ಜಂಗಮದ ವಾಮ ಕರದಲ್ಲಿ ಸ್ಥಾಪ್ಯವಾಗಿರ್ಪುವು| ಇದನ್ನುದ್ಧರಿಸುವ ಕ್ರಮವೆಂತೆಂದೊಡೆ|

ಲಿಂಗಾಕಾರವಪ್ಪಂತೆ ಪೂರ್ವಪರಕ್ಕೆ ನೀಳರೇಖೆಗಳಾರನು, ದಕ್ಷಿಣೋತ್ತರಕ್ಕೆ ಅಡ್ಡ ರೇಖೆಗಳೆಂಟನೂ, ಮೇಲೆ ಗೋಳಕಾಕಾರವನು ಬರೆಯಲು, ಗೋಳಕಕ್ಕೆ ಎರಡು ಪೂರ್ವ ಪೀಠಕ್ಕೆ ಒಂಭತ್ತು, ಅಧೋಪೀಠಕ್ಕೊಂಭತ್ತು, ಮನೆಗಳು ಪಟ್ಟುವವು. ಈ ವಿಧ ಮಂತ್ರನ್ಯಾಸಕ್ರಮ ಗೋಳಕದ ಮನೆಯಲ್ಲಿ ನ್ಯಾಸವಾದ ‘ಹ’ಕಾರವೇ ನಿರಂಜನ ತತ್ತ್ವ, ಅದರ ಕೆಳಗಣ ಮೂರು ಮನೆಯೇ ನಾಳ, ಅಲ್ಲಿ ನ್ಯಾಸವಾದ ಕ್ಷಕಾರವೇ ಶೂನ್ಯತತ್ತ್ವ, ಅದರ ಕೆಳಗಣ ಮುರು ಮನೆಗಳೇ ವರ್ತಳ, ಅಲ್ಲಿ ನ್ಯಾಸವಾದ ಬಸವಾಕ್ಷರವೇ ನಿಃಕಲತತ್ವ, ಅದರ ದಕ್ಷಿಣ ಮನೆಯಲ್ಲಿ ನ್ಯಾಸವಾದ ಉಕಾರವೇ ಈಶ್ವರ ತತ್ತ್ವ, ಉತ್ತರ ದಿಕ್ಕಿನ ಮನೆಯೇ ಗೋಮುಖ, ಅಲ್ಲಿ ನ್ಯಾಸವಾದ ಮಕಾರವೇ ಸದಾಶಿವತತ್ತ್ವ, ಅದರ ಕೆಳಗಣ ಮೂರು ಮನೆಯೇ ವರ್ತುಳದಂಡ, ಅಲ್ಲಿ ನ್ಯಾಸವಾದ ಯಕಾರ, ಓಂಕಾರ, ಸಕಾರಂಗಳೇ ಮಹಾಸಾದಾಖ್ಯ, ಶಿವಸಾದಾಖ್ಯ, ಅಮೂರ್ತಿಸಾದಾಖ್ಯ, ಅದರ ಕೆಳಗನ ಮನೆಯೇ ಮಧ್ಯ, ಅಲ್ಲಿ ನ್ಯಾಸವಾದ ಅಕಾರವೇ ರುದ್ರತತ್ತ್ವ, ಇಂತಿವು ಊರ್ಧ್ವ ಮುಖಂನ್ಯಾಸ ಶಿವಬೀಜಮಗಳೆಂದರಿವುದು. ಅದರ ಕೆಳಗಣ ಮನೆಯಲ್ಲಿ ನ್ಯಾಸವಾದ ‘ಶಿ’ ಕಾರವೇ ಇಚ್ಛಾಶಕ್ತಿ, ಅದರ ಕೆಳಗಣ ಮೂರು ಮನೆಗಳೇ ಕಂಡಿಕಾದಂಡ, ಅಲ್ಲಿ ನ್ಯಾಸವಾಗಿರ್ಪ ‘ನ’ಕಾರ “ಓಂ” ಕಾರ, ‘ಮ’ಕಾರವೇ ಕ್ರಿಯಾಶಕ್ತಿ, ಚಿಚ್ಛಕ್ತಿ, ಜ್ಞಾನಶಕ್ತಿ, ಅದರ ಕೆಳಗಣ ಐದು ಮನೆಗಳೇ ಶಕ್ತಿಪೀಠದಲ್ಲಿ ನ್ಯಾಸವಾದ ನಮಃಶಿವಾಯ ಎಂಬ ಪಂಚಾಕ್ಷರಂಗಳೇ ಪಂಚಶಕ್ತಿ – ಇಂತಿವು ಅಧೋಮುಖಂನ್ಯಾಸ ಶಕ್ತಿ ಬೀಜಂಗಳೆಂದರಿವುದು.

ಮತ್ತಂ, ಊರ್ಧ್ವ ಪೀಠಿಕೆಯಲ್ಲಿ ನ್ಯಾಸವಾದ ನಮಃಶಿವಾಯ ಎಂಬ ಪಂಚಾಕ್ಷರವೇ ಪಂಚಬ್ರಹ್ಮ, ವರ್ತುಳ ಮಧ್ಯದ ಓಂಕಾರವೇ ಪರಬ್ರಹ್ಮ, ಎಡಬಲದ ಕೆಳಗಣ ಮನೆಯ ಬಸವಾಕ್ಷರವೇ ಶಿವ ಸದಾಶಿವ ಮಹೇಶ್ವರತತ್ತ್ವ, ಇಂತಿವು ಊರ್ಧ್ವ ಮುಖಂನ್ಯಾಸ ಶಿವಬೀಜಂಗಳೆಂದರಿವುದೂ.

ಇನ್ನು ಅಧಃ ಪೀಠಿಕೆಯಲ್ಲಿ ನ್ಯಾಸವಾದ ನಮಃ ಶಿವಾಯ ಎಂಬ ಪಂಚಾಕ್ಷರಂಗಳೇ ಪಂಚಶಕ್ತಿ, ಖಂಡಿಕಾದಂಡ ಮಧ್ಯದ ಓಂಕಾರವೇ ಚಿಚ್ಛಕ್ತಿ, ಅದರ ಎಡಬಲ ಹಿಂದಣ ‘ಅ’‘ಟ’ ಮಾಕ್ಷರವೇ ಶಕ್ತಿ ತ್ರಯವು. ಇಂತಿವು ಅಧೋಮುಖಂನ್ಯಾಸ ಶಕ್ತಿ ಬೀಜಂಗಳೆಂದರಿವುದೂ.

ಲಿಂಗಲಕ್ಷಣ ಉಪದೇಶಕ್ರಮ| ಇನ್ನು ಲಿಂಗದ ಗೋಳಕದಲ್ಲಿ ಅನಾದಿ ಜಂಗಮ, ಶೂನ್ಯಲಿಂಗ ಚಿದಂಬರ, ಶಿವಶಕ್ತಿ ನಾಳದಲ್ಲಿ, ಪಂಚಶಕ್ತಿ, ಪಂಚಮುಖ, ಪಂಚಸಾದಾಖ್ಯ, ಪಂಚನಾದ, ಪಂಚಮೂರ್ತಿ, ಗೋಮುಖದಲ್ಲಿ. ಈಶ್ವರಾಷ್ಠಕ, ವರ್ತುಳದಲ್ಲಿ, ಮಹೇಶ್ವರ, ಪಂಚವಿಂಶತಿ, ಮಧ್ಯದಲ್ಲಿ, ರುದ್ರೇಕಾದಶ ಪೀಠದಲ್ಲಿ ತ್ರಯಾವಯ, ಹಿರಣ್ಯಗರ್ಭ, ವಿರಾಣ್ಮೂರ್ತಿಬ್ರಹ್ಮ, ವಿಷ್ಣುಗಳಂ ಗರ್ಭೀಕರಿಸಿಕೊಂಡು ಷಡ್ ಧ್ವಜಗ ಜನ್ಮ ಭೂಮಿಯಾಗಿರ್ಪುದೆಂದರಿವುದು. ವಾಮಕರಸ್ಥಲದಲ್ಲಿ ಅಂಗುಷ್ಠಾಗ್ರದತ್ತಣ ಗೋಮುಖವಾಗಿ ಕನಿಷ್ಟ ಅನಾಮಿಕಾಂಗುಲಿಯಿಂ ಪಿಡಿವುದೀಗ ಧಾರಣಕ್ರಮ.

ಇನ್ನು ಅಷ್ಠ ವಿಧಾರ್ಚನೆ ಮೊದಲಾದ ನಿತ್ಯನೇಮ ಪೂಜಾಕ್ರಿಯೆಗಳಲ್ಲಿ ಸುಲಭನಾಗಿ ಯಥೋಚಿತ ಭಕ್ತಿ ಭಾವ ಸ್ವತಂತ್ರ ಲೀಲಾಚಾರಿತ್ರನಾಗಿ ಮಾಡುವ ನಿಯತ ಪೂಜಾರತಿ ಈಗ ಅರ್ಚನಕ್ರಮ. ಮತ್ತ ಮೀ ಲಿಂಗದ ಷಟ್ ಸ್ಥಾನಗಳಲ್ಲಿ ಶಿರಭುಜ ನಡು ಪಾದಂಗಳಲ್ಲಿ ನಮಃಶಿವಾಯ ಎಂಬ ಮೂಲಮಂತ್ರ ಸಂಬಂಧವನ್ನು ಆದಿಪ್ರಣವ, ಅಕಾರ ಪ್ರಣವ, ಟಕಾರ ಪ್ರಣವ, ಮಕಾರ ಪ್ರಣವ, ಬಿಂದು ಪ್ರಣವ, ನಾದಪ್ರಣವ, ಸಂಬಂಧವನು, ನಾದ ಬಿಂದು ಕಳಾ ಸಂಬಂಧವನು. ಮತ್ತಂ,

||ವಚನ||
ನಿರಾಳದಷ್ಟದಳಕಮಲದೊಳಗೆ
ನಿರಂಜನ ಚೌಕ ಮಧ್ಯನೋಡಾ
ಅದರ ಬೀಜಾಕ್ಷರದ ಭೇದವನಾರು ಬಲ್ಲರೋ
ನಿರಂಜನ ಪ್ರಣವ, ಅವಾಚ್ಯ ಪ್ರಣವ, ಕಲಾಪ್ರಣವ
ಆದಿ ಪ್ರಣವ, ಅನಾದಿ ಪ್ರಣವ, ಅಕಾರ ಪ್ರಣವ
ಟಕಾರ ಪ್ರಣವ ಮಕಾರ ಪ್ರಣವ ಜ್ಯೋತಿ ಪ್ರಣವ
ಅಖಂಡ ಜ್ಯೋತಿ ಪ್ರಣವ ಅಖಂಡ ಮಹಾಜ್ಯೋತಿ ಪ್ರಣವ
ಗೋಳಾಕಾಕಾರ ಪ್ರಣವ ಅಖಂಡ ಗೋಳಕಾಕಾರ ಪ್ರಣವ
ಅಖಂಡ ಮಹಾ ಗೋಳಕಾಕಾರ ಪ್ರಣವ ಇಂತೀ ನಿರಾಳದಷ್ಠದಳ
ಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ
ಇದರ ಬೀಜಾಕ್ಷರದ ಭೇದವಾ ನಿಜಲಿಂಗೈಕ್ಯರಲ್ಲದೆ
ಮಿಕ್ಕಿನ ವೇಷಧಾರಿಗಳೆತ್ತ ಬಲ್ಲರೈಯ್ಯ ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರಾ||

ಮತಂ ವಾಚ್ಯ|| ಮೂಲ ಪಂಚಾಕ್ಷರಿ ಮೊದಲಾಗಿ ಪಂಚಪಂಚಾಕ್ಷರಿ ಮೂವತ್ತೆಂಟು ಪ್ರಣವ ಸಂಬಂಧವನರಿದು ಸ್ಮರಿಸುವುದೀಗ ಧ್ಯಾನಲಕ್ಷಣ.

ಇನ್ನು ಪರಶಿವನ ಲೀಲೆಗೊದಗಿದ ಸರ್ವಾಚಾರ ಸಂಪತ್ತು ಅನಾದಿ ಚಿರ್ತ ಸ್ವರೂಪವಾದ ಶರಣನ ತ್ಯಾಗಂಗದಲ್ಲಿ ನಿಂದು ಭೋಗಾಂಗದಲ್ಲಿ ಬೆಳಗಿ, ಯೋಗಾಂಗದಲ್ಲಿ ಪ್ರಜ್ವಲಿಸಿ, ಇಷ್ಟ ಪ್ರಾಣ ಭಾವರೂಪವಾಗಿ ಗುರುಲಿಂಗ ಜಂಗಮವೆನಿಸಲವರ ಏಕಪ್ರಸನ್ನವೇ ಪ್ರಸಾದ, ತದೇಕ ಚೈತನ್ಯ ರಸ, ಪ್ರವಾಹವೇ ಪಾದೋದಕ, ತದ್ರೂಪವೇ ಭಕ್ತ, ಆ ಭಕ್ತನ ಅವಿರಳದರಿವೇ ಜಂಗಮ, ಆ ಜಂಗಮದ ಮೂಲಜ್ಞಾನವೇ ಶೂನ್ಯಲಿಂಗ, ಆ ಲಿಂಗವೇ ಶಿವಾದಿರುದ್ರಾಂತ್ಯಮಾದ ಭಾವನ್ನ ಕಲಾಮೂರ್ತಿಗಳ ಬ್ರಹ್ಮಾದಿತೃಣಾಂತ್ಯಮಾದ ಸಮಸ್ತ ಸೃಷ್ಟಿಗಳ ಉತ್ಪತ್ತಿ ಕಾರಣವಾಗಿಹುದು. ಇಂತಿವರ ಗರ್ಭೀಕರಿಸಿಕೊಂಡಿರ್ಪ ಅನಾದಿ ಪಿಂಡದಲ್ಲಿ ಅಭಿನ್ನ ಜ್ಞಾನಜನಿಸಿ ಸಂಸಾರ ಹೇಯಮಂ ಮಾಡಿ ಗುರುಕರಣವಂ ಪಡೆದು ಲಿಂಗವನಂಗದಲ್ಲಿ ಧರಿಸಿ ವಿಭೂತಿ ರುದ್ರಾಕ್ಷಿಯನಂಲಂಕರಿಸಿ, ಪ್ರಣವಪಂಚಾಕ್ಷರಿಯ ಜಪಿಸಿ, ಭಕ್ತಿಸ್ಥಲನಂಗಂಗೊಂಡು ಉಭಯ ಸ್ಥಲದಲ್ಲಿ ನಿಂದು ತ್ರಿವಿಧ ಸಂಪನ್ನನಾಗಿ ಚತುರ್ವಿಧ ಸಾರಾಯ ಸಾಂಗವಾಗಿ ಉಪಾಧಿಯನ್ನುಪದೇಶಿಸಿ, ನಿರುಪಾಧಿಕನೆನಿಸಿ ಸಹಜಮಾಟ ವಿಡಿದು ಗುರುಲಿಂಗ, ಶಿವಲಿಂಗ, ಚರಲಿಂಗ, ತ್ರಿವಿಧ ತ್ರಿವಿಧದಲ್ಲಿ ಆಯತವಾಗಿ ತ್ರಿವಿಧ ಷಡ್ವಿಧ ಷಟ್ತ್ರಿಂಶ ಅಂಗ ಲಿಂಗಾವಧಾನಿಯಾದ ಭಕ್ತನು ಆಚಾರಲಿಂಗದಲ್ಲಿ ಐಕ್ಯವಾಗಿ ನೈಷ್ಠಿಕಾಮುಖದಿಂ ಮಹೇಶ್ವರ ಸ್ಥಲವನಂಗೊಂಡು ಲಿಂಗನಿಷ್ಠಾಪರನಾಗಿ ಪೂರ್ವಾಶ್ರಯವಾಗ ದ್ವೈತ ಆಹ್ವಾನ, ಅಷ್ಠತನು, ಮೂರ್ತಿ ಸರ್ವಗತ ನಿರಸನಾಗಿ ಶಿವಜಗನ್ಮಯನೆನಿಸಿ, ಭಕ್ತ ದೇಹಿಕ ಲಿಂಗವೆಂದಂಗೀಕರಿಸಿ ಆಗಮಲಿಂಗ ಕಾಯಲಿಂಗ, ಆಚಾರಲಿಂಗ ತ್ರಿವಿಧ ತ್ರಿವಿಧದಲ್ಲಿ ಆಯತವಾಗಿ ತ್ರಿವಿಧ ಷಡ್ವಿಧ ಷಟ್ತ್ರಿಂಶ ಅಂಗಲಿಂಗಾವಧಾನಿಯಾದ ಮಹೇಶ್ವರನ ಗುರುಲಿಂಗದಲ್ಲಿ ಐಕ್ಯವಾಗಿ ಸಾವಧಾನ ಮುಖದಿಂ ಪ್ರಸಾದಿ ಸ್ಥಲವನಂಗಂಗೊಡು ಗುರು, ಲಿಂಗ, ಲಿಂಗಮ, ಭಕ್ತ, ಶರಣ ಪ್ರಸಾದ ಮಹತ್ವವಿಡಿದು ಅನುಗ್ರಹಲಿಂಗ, ಅರ್ಪಿತಲಿಂಗ, ತನುಗುಣಲಿಂಗ, ತ್ರಿವಿಧ ತ್ರಿವಿಧದಲ್ಲಿ ಆಯತವಾಗಿ ತ್ರಿವಿಧ ಷಡ್ವಿಧ ಷಟ್ತ್ರಂಶ ಅಂಗಲಿಂಗಾವಧಾನಿಯಾದ ಪ್ರಸಾದಿ ಶಿವಲಿಂಗದಲ್ಲಿ ಐಕ್ಯನಾಗಿ, ಅನುಭಾವ ಮುಖದಿಂ ಪ್ರಾಣಲಿಂಗಸ್ಥಲವನಂಗಂಗೊಂಡು ಪ್ರಾಣವನಂಗರ್ಚಿಸಿ ಶಿವಯೋಗದಲ್ಲಿ ಸಮಾಧಿಯನೈದಿ, ಲಿಂಗ ಮನೋಮೂರ್ತಿಯಾಗಿ ಅಂಗಲಿಂಗಸಂಬಂಧವಳಪಟ್ಟು ಒಲವು ಲಿಂಗ, ನಿರೂಪಲಿಂಗ, ಪ್ರಸಾದ ಲಿಂಗ, ಪಾದೋಪಕ ಲಿಂಗ, ತ್ರಿವಿಧತ್ರಿವಿಧದಲ್ಲಿ ಆಯತವಾಗಿ ತ್ರಿವಿಧ ಷಡ್ವಿಧ ಷಟ್ತ್ರಿಂಶ ಅಂಗಲಿಂಗಾವಧಾನಿಯಾದ ಪ್ರಾಣಲಿಂಗ ಜಂಗಮ ಲಿಂಗದಲ್ಲಿ ಐಕ್ಯವಾಗಿ ಆನಂದಮುಖದಿಂದ ಶರಣಸ್ಥಲ ವನಂಗಂಗೊಂಡು ತಾಮಸ ನಿರಸನವಾಗಿ ನಿರ್ದೇಶನ ನೆಲೆಗೊಳಿಸಿ ಶೀಲಸಂಪಾದನೆಯನರಿದು. ನಿಷ್ಟತಿಲಿಂಗ, ಆಕಾಶಲಿಂಗ, ಪ್ರಕಾಶಲಿಂಗ ತ್ರಿವಿಧ ತ್ರಿವಿಧದಲ್ಲಿ ಆಯತವಾಗಿ ತ್ರಿವಿಧ ಷಡ್ವಿಧ ಷಟ್ತ್ರಿಂಶ ಅಂಗಲಿಂಗಾವಧಾನಿಯಾದ ಶರಣನು ಪ್ರಸಾದ ಲಿಂಗದಲ್ಲಿ ಐಕ್ಯವಾಗಿ ಸಮರಸಮುಖದಿಂ ಐಕ್ಯಸ್ಥಲ ವನಂಗಂಗೊಂಡು, ಸರ್ವಾಚಾರ ಸಂಪನ್ನನಾಗಿ ಏಕಭಾಜನ, ಸಹಭೋಜನ ಅಳವಟ್ಟು ಕೊಂಡದ್ದು ಪ್ರಸಾದ, ನಿಂದುದ್ದು ಓದಗರ ಚರಚರನಾಸ್ತಿಯೆಂಬ ಗುರುಪ್ರಸಾದ ತ್ರಿವಿಧಲಿಂಗ, ಭಾಂಡಭಾಜನ, ಅಂಗಲೇಪನವೆಂಬ ಲಿಂಗ ಪ್ರಸಾದ, ತ್ರಿವಿಧಲಿಮಗ, ಸ್ವಯಪರನಾಸ್ತಿ, ಭಾವಾಭಾವನಷ್ಟ, ಜ್ಞಾನಶೂನ್ಯವೆಂಬ ಜಂಗಮಪ್ರಸಾದ ತ್ರಿವಿಧಲಿಂಗದಾಯಕವಾದ ಐಕ್ಯನು ಮಹಾಲಿಂಗದಲ್ಲಿ ಸಮರಸವಾಗಿ ಅರಿವತಿರು ಮರಹು ನಷ್ಟವಾಗಿ ನಿಜದಲ್ಲಿ ನಿಂದು ನಿಬ್ಬೆರಗಾಗಿ ನಿಶ್ಯಬ್ದ ಗಂಭೀರವಾಗಿರ್ಪ ಷಟ್ಸ್ಥಲ ಬ್ರಹ್ಮ ಸೂಚನೆಯನ್ನರಿದು ಲಿಂಗದ ಷಡ್ವಿದ ತ್ರಿವಿಧ, ಅಭಯ ಏಕ ಸ್ಥಾನವನರಿದು ಸಂಬಂಧಿಸಿ ಲಿಂಗಸುಖ ಸಂಪನ್ನ ನಾಗಿರ್ಪುದೀಗ ಅನುಭಾವ ಲಕ್ಷಣ!

ಇನ್ನು ಸೃಷ್ಟಿ ಕ್ರಮ ನಿರ್ದೇಶ : ಮತ್ತಂ ಈ ಶೂನ್ಯ ಲಿಂಗದಲ್ಲಿ ನಿಃಷ್ಕಲಲಿಂಗ ಆನಿಷ್ಕಲಲಿಂಗದಿಂ ಪರಶಕ್ತಿ ಆಪರಶಕ್ತಿಯಿಂ ನಾದ ಬಿಂದುಗಳು ಆ ನಾದ ಬಿಂದುಗಳೇ ಮಹಾಲಿಂಗ, ಆ ಮಹಾಲಿಂಗದಿಂ ಸದಾಶಿವ ಇಚ್ಛಾಶಕ್ತಿ, ಆ ಸದಾಶಿವ ಇಚ್ಛಾ ಶಕ್ತಿಯಿಂ ಈಶ್ವರ ಜ್ಞಾನ ಶಕ್ತಿ, ಆ ಈಶ್ವರ ಜ್ಞಾನಶಕ್ತಿಯಿಂ ರುದ್ರಕ್ರಿಯಾಶಕ್ತಿ, ಆ ರುದ್ರ ಕ್ರಿಯಾಶಕ್ತಿಯಿಂ ವಿಷ್ಣುಶಕ್ತಿ ಆ ವಿಷ್ಣುಶಕ್ತಿಯಿಂ ಬ್ರಹ್ಮ ಸರಸ್ವತಿ, ಆ ಬ್ರಹ್ಮ ಸರಸ್ವತಿಯಿಂ ಜಗತ್ ಸಚರಾಚರಂಗಳುದಯವಾದವೆಂದರಿವುದು.

 

ಶೂನ್ಯಲಿಂಗೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ