ಇಂತು ಸರ್ವಮಂತ್ರಾಧಾರವಾಗಿ ಸಕಲ ತತ್ವಂಗಳ ಗರ್ಭೀಕರಿಸಿಕೊಂಡಿರ್ಪ ಚಿದಂಬರದಿಂದುದಿಸಿದ ಶಿವಶಕ್ತಿ ಸಂಪುಟವಾದುದೇ ಘನಕೆ ಘನವಾದ ಪರಬ್ರಹ್ಮ, ಆ ಪರಬ್ರಹ್ಮವೇ ಷಡ್ವಿಧಮಾಗಿರ್ಪದುದನುದ್ಧರಿಸುವ ಕ್ರಮವೆಂತೆಂದೊಡೆ||

ಮೇಲಿನಿಂ ಕೆಳಗು ಬರೇ ನೀಳ ರೇಖೆಗಳೇಳನು ಬಳಿಕವರಲ್ಲಿ ಅಡ್ಡರೇಖೆಗಳೇಳನು ತೆಗೆಯಲು ಮೂವತ್ತಾರು ಮನೆಗಳಾದವು. ಆ ನೀಳರೇಖೆಗಳೇಳನ್ನು ನ್ನತವಂ ಮಾಡಿ ಮ್ಯಾಲಡ್ಡ ರೇಖೆಯಂ ತೆಗೆಯೆ ಷಡ್ವಿದ ಭವನವಾದವವರಲ್ಲಿ ಮೊದಲ ಮನೆಯ ಪರಿವಿಡಿಯಿಂ ಪರಬ್ರಹ್ಮ, ವಿಜ್ಞಾನಬ್ರಹ್ಮ, ಆನಂದಬ್ರಹ್ಮ, ಕಲಾಬ್ರಹ್ಮ, ಪಿಂಡಬ್ರಹ್ಮ, ಮೂರ್ತಿಬ್ರಹ್ಮ ಎಂಬ ಷಡ್ವಿಧ ಬ್ರಹ್ಮವನು.

ಬಳಿಕಾ ದಕ್ಷಣೆಯ ಭಾಗೆಯ ಅಡ್ಡ ರೇಖೆಗಳೇಳನುನ್ನತವ ಮಾಡಿ ನೀಳವೆರೆಡು ರೇಖೆಗಳಂ ತೆಗೆಯೆ ಹನ್ನೆರಡು ಮನೆಗಳಾದವರಲ್ಲಿ ಕಡೆಯ ಮ್ಯಾಲಣ ಮನೆಯ ತರಂಗೊಂಡು, ಆರರಲ್ಲಿ ಚಿಃಶಕ್ತಿ, ಪರಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಎಂಬ ಷಡ್ವಿಧ ಶಕ್ತಿಗಳಂ ಅದರೀಚೆ ಮ್ಯಾಲಣ ಮನೆಯ ಬಳಿವಿಡಿದು ಆರರಲ್ಲಿ ಶಿವಾಂಗ, ಭೂತಾಂಗ, ಯೋಗಾಂಗ, ಕಾಮಾಂಗ ವಿದ್ಯಾಂಗ, ಕರ್ಮಾಂಗವೆಂಬಾ ಷಡ್ವಿಧ ಲಿಂಗಮಂ.

ಮತ್ತಂ ಮೂವತ್ತಾರು ಮನೆಗಳೊಳಗೆ ಉತ್ತರ ಭಾಗೆಯ ಮೊದಲ ಮನೆಯ ಮ್ಯಾಲಣಿಂ ಕೆಳಗುಬರೆ. ಆರರಲ್ಲಿ ಶಿವ, ಕ್ಷೇತ್ರಜ್ಞ, ಕರ್ತಾರ, ಭಾವಚೈತನ್ಯ, ಅಂತಾರ್ಯಾಮಿ, ಎಂಬ ಷಡ್ವಿಧ ಮೂರ್ತಿಗಳಂ, ಬಳಕೀ ಪ್ರಕಾರದಿಂ ಎರಡನೆಯ ಪಂಕ್ತಿಯ ಮನೆಗಳಲ್ಲಿ ಸದಾಶಿವ, ಆಕಾಶ, ಶಬ್ದ, ಜ್ಞಾನ, ಶ್ರೋತ್ರ, ವಾಕು ಎಂಬ ಷಟ್ ತತ್ತ್ವಂಗಳಂ, ಮೂರನೆಯ ಪಂಕ್ತಿಯ ಮನೆಗಳಲ್ಲಿ ಈಶ್ವರ, ವಾಯು, ಸ್ಪರ್ಶನ, ಮನ, ತ್ವಕ್ಕು, ಪಾಣಿ ಎಂಬ ಷಟ್ ತತ್ತ್ವಂಗಳು, ನಾಲ್ಕನೆಯ ಪಂಕ್ತಿಯ ಮನೆಗಳಲ್ಲಿ ರುದ್ರ, ತೇಜ, ರೂಪು, ಅಹಂಕಾರ, ನೇತ್ರ, ಪಾದ ಎಂಬ ಷಟ್ ತತ್ತ್ವಂಗಳು, ಐದನೆಯ ಪಂಕ್ತಿಯ ಮನೆಗಳಲ್ಲಿ ವಿಷ್ಣು, ಅಪ್ಪು ರಸ, ಬುದ್ಧಿ ಜಿಹ್ವೆ, ಗುಹ್ಯೆ ಎಂಬ ಷಟ್ ತತ್ತ್ವಂಗಳಂ, ಆರನೆಯ ಪಂಕ್ತಿಯ ಮನೆಗಳಲ್ಲಿ ಬ್ರಹ್ಮ ಪೃಥ್ವಿ, ಗಂಧ, ಚಿತ್ತ, ಘ್ರಾಣ, ಪಾಯು ಎಂಬ ಷಟ್ ತತ್ತ್ವಂಗಳಂ ಬರೆಯಲು ಯಂತ್ರ ಲಕ್ಷಣ ತತ್ತ್ವಂನ್ಯಾಸ ಮುಗಿಯಿತು. ಇಂತಿವರ ಪ್ರವೃತ್ತಿ ಮಾರ್ಗವೆಂತೆಂದೊಡೆ :

ಆ ಷಡ್ವಿಧ ಬ್ರಹ್ಮ ಒಂದೊಂದು ಆರಾರಾಗಿ ಷಟ್ ತ್ರಿಂಶತತ್ತ್ವವಾದವವಕ್ಕೆ ವಿವರ : ಪರಬ್ರಹ್ಮದಿಂ ಶಿವ, ಕ್ಷೇತ್ರಜ್ಞ, ಕರ್ತಾರ, ಭಾವ ಚೈತನ್ಯ ಅಂತರ್ಯಾಮಿ, ಎಂಬ ಷಟ್ ತತ್ವಂಗಳಾದವು. ವಿಜ್ಞಾನಬ್ರಹ್ಮದಿಂ ಸದಾಶಿವ, ಆಕಾಶ, ಶಬ್ದ ಜ್ಞಾನ, ಶ್ರೋತ್ರ ವಾಕು ಎಂಬ ಷಟ್ ತತ್ವಂಗಳಾದವು. ಆನಂದಬ್ರಹ್ಮದಿಂ ಈಶ್ವರ, ವಾಯು, ಸ್ಪರ್ಶನ, ಮನ, ತ್ವಕ್ಕು, ಪಾಣಿಯೆಂಬ ಷಟ್‌ತತ್ವಂಗಳಾದವು. ಕಲಾಬ್ರಹ್ಮದಿಂ ರುದ್ರ ತೇಜ, ರೂಪು, ಅಹಂಕಾರ ನೇತ್ರ ಪಾದ, ಎಂಬ ಷಟ್ ತತ್ವಂಗಳಾದವು. ಪಿಂಡಬ್ರಹ್ಮದಿಂ ವಿಷ್ಣು, ಅಪ್ಪು, ರಸ, ಬುದ್ಧಿ, ಜಿಹ್ವೆ, ಗುಹ್ಯೆ ಎಂಬ ಷಟ್ ತತ್ವಂಗಳಾದವು. ಮೂರ್ತಿಬ್ರಹ್ಮದಿಂ ಬ್ರಹ್ಮ, ಪೃಥ್ವಿ, ಗಂಧ, ಚಿತ್ರ, ಘ್ರಾಣ, ವಾಯು ಎಂಬ ಷಟ್ ತತ್ವಂಗಳಾದವು. ಇಂತೀ ಬ್ರಹ್ಮವರ್ಗಮಂ ನಿರೂಪಿಸಿದ ತದನಂತರದಲ್ಲಿ ಶಕ್ತಿವರ್ಗಮಂ ನಿರೂಪಿಸಲ್ತಕ್ಕುದು.

ಪರಮ ಜ್ಞಾನಶಕ್ತಿಯಿಂ ಚಿದಾದಿ ಷಡ್ವಿಧ ಶಕ್ತಿಗಳುದಯವಾಗಿ ಶಿವಾಂಗ, ಭೂತಾಂಗ, ಯೋಗಾಂಗ, ಕಾಮಾಂಗ, ವಿದ್ಯಾಂಗ, ಕರ್ಮಾಂಗ, ಎಂಬ ಷಡಾಂಗ ಸ್ವರೂಪವಾಗಿ ಷಟ್ತ್ರಂಶ ತತ್ವಂಗಳಿಗೆ ಕಾರಣವಾಗಿರ್ಪವವಕ್ಕೆ ವಿವರ : ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಶಿವನೆಂಬಾರಕ್ಕೆ ಶಿವಾಂಗ ಸ್ವರೂಪವಾದ ಚಿಶ್ಚಕ್ತಿಯೇ ಕಾರಣವು. ಭೂಮಿ, ಜಲ, ಅಗ್ನಿ, ಮಾರುತ, ಆಕಾಶ, ಕ್ಷೇತ್ರಜ್ಞ ಎಂಬಾರಕ್ಕೆ ಭೂತಾಂಗ ಸ್ವರೂಪವಾದ ಪರಶಕ್ತಿಯೇ ಕಾರಣವು. ಗಂಧ, ರಸ, ರೂಪು, ಸ್ಪರ್ಶನ, ಶಬ್ದ ಕರ್ತಾರ ಎಂಬಾರಕ್ಕೆ ಯೋಗಾಂಗ ಸ್ವರೂಪವಾದ ಆದಿಶಕ್ತಿಯೇ ಕಾರಣವು. ಚಿತ್ತ, ಬುದ್ಧಿ, ಅಹಂಕಾರ, ಮನ, ಜ್ಞಾನ, ಭಾವ ಎಂಬಾರಕ್ಕೆ ಕಾಮಾಂಗ ಸ್ವರೂಪವಾದ ಇಚ್ಛಾಶಕ್ತಿಯೆ ಕಾರಣವು. ಘ್ರಾಣ, ಜಿಹ್ವೆ, ನೇತ್ರ, ಶ್ರೋತ್ರ, ಚೈತನ್ಯ ಎಂಬಾರಕ್ಕೆ ವಿದ್ಯಾಂಗ ಸ್ವರೂಪವಾದ ಜ್ಞಾನಶಕ್ತಿಯೇ ಕಾರಣವು. ಪಯು, ಗುಹ್ಯ, ಪಾದ, ಪಾಣಿ, ವಾಕು, ಅಂತರ್ಯಾಮಿ ಎಂಬಾರಕ್ಕೆ ಕರ್ಮಾಂಗ ಸ್ವರೂಪವಾದ ಕ್ರಿಯಾಶಕ್ತಿಯೇ ಕಾರಣವು. ಇಂತಿವರ ನಿವೃತ್ತಿ ಮಾರ್ಗವೆಂತೆಂದೊಡೆ:

ಚಿದಾದಿ ಕರ್ಮಪರಿಯಂತಂ ಸೃಷ್ಟಿ ಪರಾದಿಮೂರ್ತಿ ಪರ್ಯಾಂತಂ ಸಂಹಾರವಾದಕ್ಕೆ ವಿವರ : ಶಿವ ಮೊದಲಾದರು ತತ್ವಂಗಳು. ಪರಬ್ರಹ್ಮದಲ್ಲಿ ಸದಾಶಿವ ಮೊದಲಾದರು ತತ್ವಂಗಳು. ವಿಜ್ಞಾನ ಬ್ರಹ್ಮದಲ್ಲಿ ಮೊದಲಾದರು. ತತ್ವಂಗಳು, ಆನಂದ ಬ್ರಹ್ಮದಲ್ಲಿ ರುದ್ರ ಮೊದಲಾದರು ತತ್ವಂಗಳು, ಕಲಾಬ್ರಹ್ಮದಲ್ಲಿ ವಿಷ್ಣು ಮೊದಲಾದರು ತತ್ವಂಗಳು, ಪಿಂಡಬ್ರಹ್ಮದಲ್ಲಿ ಬ್ರಹ್ಮ ಮೊದಲಾದರು ತತ್ವಂಗಳು, ಮೂರ್ತಿಬ್ರಹ್ಮದಲ್ಲಿ ಲೀಯವಾಗಲು, ಬ್ರಹ್ಮ ಮೊದಲಾದ ಷಡ್ವಿಧವು, ಶಿವಾಂಗ ಸ್ವರೂಪವಾದ ಚಿಶ್ಚಕ್ತಿಯಲ್ಲಿ ಭೂಮಿ ಮೊದಲಾದ ಷಡ್ವಿಧವು, ಭೂತಾಂಗ ಸ್ವರೂಪವಾದ ಪರಶಕ್ತಿಯಲ್ಲಿ ಗಂಧ ಮೊದಲಾದ ಷಡ್ವಿದವು, ಯೋಗಾಂಗ ಸ್ವರೂಪವಾದ ಆದಿಶಕ್ತಿಯಲ್ಲಿ ಚಿತ್ತ ಮೊದಲಾದ ಷಡ್ವಿಧವು, ಕಾಮಾಂಗ ಸ್ವರೂಪವಾದ ಇಚ್ಛಾಶಕ್ತಿಯಲ್ಲಿ ಘ್ರಾಣ ಮೊದಲಾದ ಷಡ್ವಿದವು, ವಿದ್ಯಾಂಗ ಸ್ವರೂಪವಾದ ಜ್ಞಾನಶಕ್ತಿಯಲ್ಲಿ ವಾಯು ಮೊದಲಾದ ಷಡ್ವಿದವು, ಕರ್ಮಾಂಗ ಸ್ವರೂಪವಾದ ಕ್ರಿಯಾಶಕ್ತಿಯಲ್ಲಿ ಅಡಗಿದವು.

ಇಂತಾಗಲಾ ಷಡ್ವಿಧ ಬ್ರಹ್ಮವು ತಾವು ಒಂದೊಂದರಲ್ಲಿ ಲೀಯವಾಗಿ, ಪರವಸ್ತುವಿನಲ್ಲಿ, ವಿಶ್ರಾಂತಿಯಾಗಲು ಕ್ರಿಯಾಶಕ್ತಿ, ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಆ ಜ್ಞಾನಶಕ್ತಿ ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ, ಆ ಇಚ್ಛಾಶಕ್ತಿ ಆದಿಶಕ್ತಿಯ ಸಹಸ್ರಾಂಶದಲ್ಲಿ ಆ ಆದಿಶಕ್ತಿ ಪರಶಕ್ತಿಯ ಸಹಸ್ರಾಂಶದಲ್ಲಿ, ಆ ಪರಶಕ್ತಿ ಚಿತ್ ಶಕ್ತಿಯ ಸಹಸ್ರಾಂಶದಲ್ಲಿ ಲೀಯವಾಗಿ ಪರಮಜ್ಞಾನ ಶಕ್ತಿಯನೊಡಗೂಡಿ ಪರವಸ್ತುವಿನಲ್ಲಿ ವಿಶ್ರಾಂತಿಯಾಗಲೊಡನೆ ಆ ಪರತತ್ವ ನಿತ್ಯ ನಿರಾಳ ನಿಶ್ಚಿಂತ ನಿರ್ಮಾಯನಾಗಿ ಅದ್ವಿತೀಯ ಸ್ವರೂಪ ತಾನಾಗಿರ್ಪುದು. ಇಂತೀ ತತ್ವ ನಿರ್ಣಯವನರಿವುದೇ ಬ್ರಹ್ಮಜ್ಞಾನ, ಆ ಜ್ಞಾನವೇ ಸತ್ಯಾನಂದಮಯವಾಗಿರ್ಕುಂ|

 

ಷಡ್ಬ್ರಂಹ್ಮೊದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ