ಸೂ. ಸಮರದನುಸಂಧಾನದಲಿ ಸಂ
ಭ್ರಮಿಸಿ ಶೌರಿ ಸಮೀರಸುತನಲಿ
ಸಮತೆಯನು ಸೇರಿಸಿದನಂದು ಸಮಗ್ರ ಸೂಕ್ತಿಯಲಿ

ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನಹಿತ ಮಂತ್ರಿಯ
ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ
ಮೇಲಣನುವಿನ್ನೇನು ಲಕ್ಷ್ಮೀ
ಲೋಲ ಕರುಣಿಸು ಕೌರವಕ್ಷಿತಿ
ಪಾಲಕರಲೆಮಗೇನು ಘಟಿಸುವುದೆಂದು ನೃಪ ನುಡಿದ ೧

ಕ್ಷಮೆಗೆ ಸೇರುವರಲ್ಲ ಮೂರ್ಖರು
ಕುಮತಿಗಳು ಮುಂದರಿಯದವರ
ಕ್ರಮವ ನೆಗಳಿದಡಳಿವುದನ್ವಯದಮಳ ಕೀರ್ತಿಗಳು
ನಮಗೆ ಹದನೇನಿನ್ನು ಸಂಧಿಯೊ
ಸಮರವೋ ಚಿತ್ತೈಸಬೇಹುದು
ಕಮಲಲೋಚನಯೆಂದು ಬಿನ್ನೈಸಿದನು ಯಮಸೂನು ೨

ಏನು ನಿನ್ನಭಿಮತವು ವರ ಸಂ
ಧಾನವೋ ಸಂಗ್ರಾಮವೋ ನಯ
ವೇನು ಮನದೋವರಿಯೊಳಿರಿಸದೆ ಹೇಳು ನಿಶ್ಚಯವ
ನೀನೊಲಿದ ಹದನಾವುದದನೊಲಿ
ದಾನು ಘಟಿಸುವೆನೆಂದು ಕುಂತೀ
ಸೂನುವನು ಬೆಸಗೊಂಡನಸುರ ವಿರೋಧಿ ನಸುನಗುತ ೩

ಅಳಿವವೊಡಲಿದು ಅವನಿ ಸಾಗರ
ವಳಿಯಲುಳಿವುದು ಕೀರ್ತಿ ಸೋದರ
ರೊಳಗೊಳಗೆ ಹೊಯ್ದಾಡಿ ಕೆಟ್ಟರುಯೆಂಬ ದುರಿಯಶದ
ಹಳಿವು ಹೊರುವುದು ದೇವ ಸುಡಲಾ
ನೆಲನನಾ ಕೌರವನ ಕೈಯಲಿ
ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ ೪

ವರ ಕುಶ ಸ್ಥಳವನು ವೃಕ ಸ್ಥಳ
ಪುರವನಾವಂತಿಯನು ಕೌರವ
ಧರಣಿಪಾಲನಲೀಸಿ ಕೊಡುವುದು ವಾರನಾವತವ
ಶರಧಿ ಮೇರೆಯೊಳೈದನೆಯ ಪುರ
ವರವನೊಲಿದುದ ಕೊಡಲಿ ಮನ ಮ
ತ್ಸರವ ಮರೆದೋಲೈಸುವೆವು ಧೃತರಾಷ್ಟ್ರ ನಂಘ್ರಿಗಳ ೫

ನೀವು ಬಿಜಯಂಗೈದು ಸಂಧಿಯ
ನಾವ ಪರಿಯಲಿ ಘಟಿಸಿ ಕುರುಭೂ
ಪಾವಳಿಯೊಳೆಮ್ಮಿರವು ಸಂಭವಿಸುವವೊಲೆಸಗುವದು
ಲಾವಕರ ನುಡಿಗಳಲಿ ಕೆಡುವುದು
ಕೋವಿದರ ಮತವವರಮೇಲೆಮ
ಗಾವ ಮನಮುನಿಸಿಲ್ಲ ಸಂಧಿಯ ಘಟಿಸಿ ಸಾಕೆಂದ ೬

ಎನೆ ಮುರಾಂತಕನಳುಕಿ ಯಮನಂ
ದನನ ನುಡಿ ಸಂಧಾನದಲಿ ಸಂ
ಜನಿಸಿತಾದೊಡೆ ಕಾಣೆನವನಿಯ ಹೊರೆಗೆ ಹರಿವುಗಳ
ಮನದೊಳನುಸಂಧಾನವಂತಕ
ತನುಜನಲಿ ತೊಳಸಾಯ್ತು ತೋಟಿಯ
ನೆನಹು ತಾನೇನೆನುತ ಚಿಂತಿಸುತಿರ್ದನಸುರಾರಿ ೭

ಎಲೆ ಕೃತಾಂತಜ ವೈರಿ ಭೂಮಿಪ
ಕುಲ ಕೃತಾಂತ ಸರಾಗನಹೆ ನಿ
ರ್ಮಳಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು
ನೆಲವ ಕೊಡಲರಿಯನು ವೃಥಾ ಕ
ಕ್ಕುಲಿತೆಯಲ್ಲದೆ ಕಾಣೆನಿದರಲಿ
ಫಲವನೆನುತಸುರಾರಿ ನುಡಿದನು ಧರ್ಮತನುಜಂಗೆ ೮

ಅರಸನಭಿಮತವಿಂದು ಸಂಧಿಗೆ
ಮರಳಿತೆಲೆ ಪವಮಾನಸುತ ನಿ
ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು
ಧರಣಿಪತಿ ತಪ್ಪುವನೆ ಕರ್ಕಶ
ಭರದ ಕದನದಲೇನು ಫಲ ಸೋ
ದರರ ವಧೆಗೊಡಬಡುವನಲ್ಲಸುರಾರಿ ಕೇಳೆಂದ ೯

ಹಗೆಯೊಳೆಮ್ಮವರೊಳಗೆ ಎದೆಗಿ
ಚ್ಚುಗಳ ಖುಲ್ಲ ಕುಠಾರರಪನಂ
ಬುಗೆಯ ಬಳಸಿದರದು ಪುರಾಕೃತ ಕರ್ಮದವಶೇಷ
ಬಗೆಯೆನವಮಾನವನು ಕೌರವ
ರಗಡು ಮಾಡಿದರೆಂಬ ಚಿತ್ತದ
ದುಗುಡವಿಂದೆಮಗಿಲ್ಲ ಸಂಧಿಯ ರಚಿಸಿ ಸಾಕೆಂದ ೧೦

ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರನ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳುಗುಳಕೆ ಪವಮಾನನಂದನ
ನಳುಕಿದನು ಮಝಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ ೧೧

ಈತನಭಿಮತವಿದು ಜಗದ್ವಿ
ಖ್ಯಾತ ಸಾಹಸಿ ಪಾರ್ಥ ಹೇಳೈ
ಮಾತಿನಾಳಾಪವನು ಕೇಳುವೆ ಶ್ರುತಿರಸಾಯನವ
ಭೀತಿ ಬೇಡಿನ್ನೆನಲು ಬೇರೆಮ
ಗೇತರಭಿಮತವೇನ ಬೆಸಸಿದ
ಡಾತುಕೊಂಬೆನು ಶಿರದಲೆಂದನು ಪಾರ್ಥ ವಿನಯದಲಿ ೧೨

ನಕುಲ ನೀ ಹೇಳನುಮತವ ನಿ
ನ್ನುಕುತಿ ಸಮರವೊ ಸಾಮವೋ ಮೇಣ್
ಸುಕರ ಮಂತ್ರವನರುಹು ನೀನಿನ್ನಂಜಬೇಡೆನಲು
ಯುಕುತಿ ನಮಗಿನ್ನೇನುಭಯ ರಾ
ಜಕವ ಸಂತೈಸುವುದು ಬೇರೆ
ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯನೊಲವಿನಲಿ ೧೩

ಆವುದಭಿಮತವೇನು ಹದ ಸಹ
ದೇವ ನೀ ಹೇಳೆನಲು ಬಿನ್ನಹ
ದೇವ ಸೇರದು ಸಂಧಿ ಸಂಗರವೆಮಗೆ ಸೇರುವುದು
ಆವ ವಿಧದಲಿ ಸಮರವನೆ ಸಂ
ಭಾವಿಸುವುದೆನೆ ನಗುತ ವರ ರಾ
ಜೀವನಾಭನು ಕಳುಹಿದನು ದ್ರೌಪದಿಯೆಡೆಗೆ ಚರರ ೧೪

ದೇವಿ ಚಿತ್ತೈಸುವುದು ವರ ವಸು
ದೇವ ಸುತನಟ್ಟಿದನು ಸಂ
ಭಾವಿಸುವುದರಿರಾಯರಲಿ ಸಂಧಾನ ಸೌರಂಭ
ನೀವು ಬಿಜಯಂಗೈದು ಚಿತ್ತದೊ
ಳಾವ ಹದನಾ ಹದನನಾ ರಾ
ಜೀವನಾಭಾದಿಗಳಿಗರುಹುವುದೆಂದರಾ ಚರರು ೧೫

ಏನು ಹದನೇನೆಲವೊ ವರ ಸಂ
ಧಾನವೇ ಕೌರವರೊಳದು ಸು
ಮ್ಮಾನವೇ ಪತಿಗಳಿಗೆ ಪಾಪಿಗಳಿರಿದರೋ ಸತಿಯ
ದಾನವಾಂತಕನೆಸಗುವನೆ ತ
ಪ್ಪೇನು ತಪ್ಪೇನೆನುತ ನಸುಮಸು
ಳ್ದಾನನಾಂಬುಜವದನೆ ಬಂದಳು ಕೃಷ್ಣ ನೋಲಗಕೆ ೧೬

ಭ್ರೂಲತೆಯ ಸುರಚಾಪದುರುಕೇ
ಶಾಳಿಗಳ ಕಾರ‍್ಮುಗಿಲಪಾಂಗದ
ಸಾಲ ಕುಡಿಮಿಂಚುಗಳ ನೂಪುರರವದ ಮೊಳಗುಗಳ
ಆ ಲತಾಂಗಿಯ ಗಮನವೇ ಮಳೆ
ಗಾಲದಂತಿರೆ ಧಾರ್ತರಾಷ್ಟ್ರ ಕು
ಲಾಳಿ ನಿಲುವುದೆ ಪವನಜನ ಸಂಪ್ರತಿಯ ಸೇರುವೆಗೆ ೧೭

ಕವಿದ ಚಿತ್ರಾವಳಿಯ ದಡ್ಡಿಯ
ವಿವಿಧ ಭಟರುಗ್ಗಡಣೆಯಲಿ ವರ
ಯುವತಿ ಬಂದಳು ಸಖಿಯರೊಯ್ಯಾರದಲಿ ನೃಪಸಭೆಗೆ
ನವ ಬಳಾಹಕದೊಳಗೆ ಮಿಂಚಿನ
ಗವಿಸಹಿತ ಮರಿಮೇಘವಾವಿ
ರ್ಭವಿಸಿತೆನೆ ದಂಡಿಗೆಯನಿಳಿದಳು ಹೊಕ್ಕಳೋಲಗವ ೧೮

ಎಲೆ ಸಮೀರಕುಮಾರ ಸಂಪ್ರತಿ
ಗೆಳಸಿದೈ ಕಲಿತನವ ನೀರೊಳು
ಕಲಕಿದೈ ಕೈವಾರವಾದುದೆ ಕೌರವೇಂದ್ರನಲಿ
ಕಲಿಸಿದೈ ಕೃಷ್ಣಂಗೆ ನೀತಿಯ
ಬಳಸಿದೈ ಬಹುಮತವ ನರಕದೊ
ಳಿಳಿಸಿದೈ ಶಶಿಕುಲವನೆಂದನಿಲಜನ ನೋಡಿದಳು ೧೯

ಬೇಡಲಟ್ಟುವನೇ ಮಹೀಪತಿ
ನಾಡೊಳೈದೂರುಗಳನವರಲಿ
ಮಾಡುವಾತನು ಕೃಷ್ಣನೇ ಸಂಧಾನವನು ನಿಮಗೆ
ಕೇಡಿಗನು ಕೌರವ ನೃಪಾಲನ
ಕೂಡಿ ಬದುಕುವ ಭೀಮಸೇನನೆ
ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ ೨೦

ಯತಿಗಳಾದಿರಿ ನೀವು ರೋಷ
ಚ್ಯುತರಲೇ ಬಳಿಕೇನು ಧರ್ಮ
ಜ್ಞತೆಯ ನೆಲೆಗಳನರಿದ ಮನವೆರಗುವುದೆ ಕಾಳಗಕೆ
ಕ್ಷಿತಿಯ ಪಾಲಿಸುವುದು ವಿರೋಧಿ
ವ್ಯತಿಕರವ ಬಿಡಿಸುವುದು ಕುಂತೀ
ಸುತರು ಕೌರವರೊಡನೆ ಸುಖದಲಿ ರಾಜ್ಯವಾಳುವುದು ೨೧

ಸೋಲ ಗೆಲವೇ ಕೌರವರ ಸಮ
ಪಾಳಿಯೊಳು ಸೋದರರು ನೀವ್ ಪಾಂ
ಚಾಲರಾವೇ ಹೊರಗು ನಿಮ್ಮೊಳು ಸಲುಗೆಯೇಕೆಮಗೆ
ಮೇಳವೇ ಸಿರಿ ಗಳಿಸಲರಿದು ಜ
ನಾಳಿ ಹೆಂಡಿರಪೂರ‍್ವವೇ ಕ್ಷಿತಿ
ಪಾಲಕರು ನೀವಾಗಲೆಮಗದು ಪರಮ ಪರಿಣಾಮ ೨೨

ಭೀಮ ಬಲವದರಾತಿ ಸೇನಾ
ಭೀಮ ಕುರುಕುಲ ಕುಸುಮಮಾರ್ಗಣ
ಭೀಮ ಮರೆದೈ ಮಾನಿನಿಯ ಮಾನಾಪಹಾನಿಗಳ
ರಾಮನಬಲೆಗೆ ಕುದಿದ ಘನ ಸಂ
ಗ್ರಾಮವನು ನೀ ಕೇಳಿದರಿಯಾ
ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀದೇವಿ ೨೩

ಧರೆಗೆ ಕಟ್ಟಭಿಮಾನ ಹೆಂಡಿರ
ಹರಿಬವಾ ಹರಿಬದಲಿ ಕೆಡುಹುವು
ದರಿಯನವಗಡಿಸಿದೊಡೆ ಸಾವರು ಪಂಥವುಳ್ಳವರು
ಸುರ ನರೋರಗರೊಳಗೆ ನಿಮ್ಮೈ
ವರಿಗೆ ಸರಿಯಿಲ್ಲಬಲೆಯೊಬ್ಬಳ
ಹರಿಬದಲಿ ಹಂಗಾದಿರೆಂಬಪದೆಸೆಗೆ ನೋನುವರೆ ೨೪

ಮುಂದಲೆಯ ಹಿಡಿದೆಳೆದು ಸಭೆಯಲಿ
ತಂದು ಸೀರೆಯ ಸುಲಿದಡವದಿರ
ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದರೆ
ಅಂದು ನೀ ಹಿಂದಿಕ್ಕಿ ಕೊಂಡುದ
ನಿಂದು ಮರೆದೈ ಸಂಧಿಗೋಸುಗ
ಮುಂದುವರಿದೈ ಕೃಷ್ಣಯೆಂದಳು ದ್ರೌಪದೀದೇವಿ ೨೫

ತನಯರೈವರು ವೀರ ಸಹದೇ
ವನು ಘಟೋತ್ಕಚನೀ ಸುಭದ್ರಾ
ತನಯನೆಮ್ಮಯ ತಂದೆ ಮೂರಕ್ಷೋಹಿಣಿಯ ಸೇನೆ
ಇನಿಬರೇ ಕಾದುವರು ದುಶ್ಶಾ
ಸನನ ರಕುತವ ಕುಡಿದು ಕುರುಕುಲ
ವನವ ಸುಡುವರು ನಿಮ್ಮ ಹಂಗೇಕೆಂದಳಿಂದುಮುಖಿ ೨೬

ವರಸತಿಯ ಬಿಸುಸುಯ್ಲ ಗಾಳಿಯೊ
ಳುರಿ ಚಡಾಳಿಸೆ ರೋಷಮಯದು
ಬ್ಬರದೊಳೌಡೊತ್ತಿದನು ಹಿಡಿದನು ಖತಿಯನಹಿತರೊಳು
ತರುಣಿ ಸೈರಿಸು ಸೈರಿಸಿನ್ನೀ
ಸುರಿವ ಕಂಬನಿಗಳಿಗೆ ಶತ ಸಾ
ವಿರ ಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ ೨೭

ಉರಿ ಹೊಗುವ ಮೀಸೆಗಳ ಬೆರಳಲಿ
ಮುರುಹಿ ವಾಮದ ಕರದಿ ತರುಣಿಯ
ಕುರುಳ ಸಂತೈಸಿದನು ಕಿಡಿಕಿಡಿಯೋಗಿ ಖಾತಿಯಲಿ
ನರಕಮರ್ದನ ಕೇಳು ಕೌರವ
ನರಿಗಳಿದಿರೇ ಕೀಳುವೆನು ಕುಲ
ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ ೨೮

ಯಮಸುತನ ಹರುವೆಂತುಟೆಂದಾ
ಕ್ರಮಕೆ ಮೊಗದಿರುಹಿದೆನು ಬಳಿಕೀ
ಕಮಲವದನೆಯ ಹರಿಬವೆನ್ನದು ಪತಿಗಳಿನಿಬರಲಿ
ಎಮಗೆ ಸಂಪ್ರತಿಗಿಲ್ಲ ಮನ ಘನ
ಸಮರವೇ ಸರ್ವಾರ್ಥ ಕೋಪ
ಶ್ರಮಕೆ ರಿಪುರುಧಿರಾಂಬು ಪಾನವೆ ವಿಪುಳ ಫಲವೆಂದ ೨೯

ಕೆಡಹಿ ರಿಪುವನು ಕರುಳ ದಂಡೆಯ
ಮುಡಿಸುವೆನು ಮಾನಿನಿಗೆ ರಕುತವ
ಕುಡಿಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ
ನಡೆದು ಸಂಧಿಯ ಮಾಡಿ ಮುರರಿಪು
ಕೊಡಿಸು ಸಾಕೈದೂರನಿವರಿಗೆ
ತಡೆಯದಾನೆರಡೂರ ಕೊಂಬೆನು ಕೌರವೇಂದ್ರನಲಿ ೩೦