ಸೂ. ದುರಿತ ವಿಪಿನಕೃಶಾನು ಯದುಕುಲ
ವರ ಕುಶೇಶಯ ಭಾನು ನಿಜಪದ
ಶರಣಜನ ಸುರಧೇನು ಹೊಕ್ಕನು ಹಸ್ತಿನಾಪುರವ

ದೇವ ಸಂಧಿಯನೊಲಿದು ಮಾಡುವು
ದಾವು ಮುಖದಿರುಹಿದೆವು ಯೀ ಸಹ
ದೇವನೀ ಸಾತ್ಯಕಿ ಯುಧಾಮನ್ಯುತ್ತಮೌಜಸರ
ಭಾವವೆಮ್ಮದು ಬಳಿಕಲರ್ಜುನ
ದೇವ ಧರ‍್ಮಜ ನಕುಲರೆಂಬುದ
ನಾವು ಮಿಸುಕುವರಲ್ಲ ಚಿತ್ತೈಸೆಂದನಾ ಭೀಮ ೧

ಕೆಲರು ಸಂಪ್ರತಿಗೊಲಿವರಿತ್ತಲು
ಕೆಲರು ವಿಗ್ರಹಕೆಳಸುವವರಿದ
ರೊಳಗೆ ನಿಶ್ಚಯವಿಲ್ಲದಿರೆ ನೃಪ ಕಾರ‍್ಯವೆಂತಹುದು
ತಿಳಿಯ ಹೇಳವನೀಶ ಪರಮಂ
ಡಲಕೆ ಪಯಣವ ಮಾಡುವೆವು ನಾ
ವಳುಕಿದವರಲ್ಲೆನಲು ಕೃಷ್ಣಂಗರಸನಿಂತೆಂದ ೨

ವಿದಿತವೈದೂರುಗಳ ಕೊಟ್ಟೊಡೆ
ಹದುಳವಿಡುವುದು ಮುನಿದರಾದೊಡೆ
ಕದನವನೆ ಕೈಕೊಳ್ಳುವುದುಚಿತಾನುಚಿತದನುವರಿದು
ಹದನ ನೀನೇ ಬಲ್ಲೆ ಸಾಕಿ
ನ್ನಿದು ನಿಧಾನವು ಬಗೆಯಲೆಮ್ಮ
ಭ್ಯುದಯ ನಿಮ್ಮಾಧೀನವೆಂದನು ಧರ್ಮನಂದನನು ೩

ಪಯಣವನು ನಿಶ್ಬೈಸಿ ದನುಜಾ
ರಿಯನು ಬೀಳ್ಕೊಂಡವನಿಪತಿ ಪಾ
ಳಯದೊಳಗೆ ಸಾರಿಸಿದನಗ್ಗದ ಮಂಡಲೀಕರಿಗೆ
ನಯದೊಳಾ ಮರುದಿವಸ ಮಂಗಳ
ಮಯ ಮುಹೂರ್ತದ ಜೋಯಿಸರ ಜೋ
ಕೆಯಲಿ ನಿರ್ಗಮ ನಿರತನಾದನು ಕೃಷ್ಣನೊಲವಿನಲಿ ೪

ಮೊರೆಯೆ ದುಂದುಭಿ ಶಂಖ ಕಹಳಾ
ವರ ಮೃದಂಗಾದಿಗಳು ಭೂಸುರ
ಸುರಭಿಗಳ ಬಲವಂದು ದಧಿ ದೂರ್ವಾಕ್ಷತಾವಳಿಯ
ಧರಿಸಿ ಧರಣೀದೇವರನು ಸ
ತ್ಕರಿಸಿ ಕರತಳದಿಂದ ನಾಸಿಕ
ದೆರಲ ಚಂದ್ರೋದಯವನೀಕ್ಷಿಸಿ ದೇವ ಹೊರವಂಟ ೫

ಘನ ಬಳಾಹಕ ಸೈನ್ಯ ಸುಗ್ರೀ
ವನನು ನಿರ್ಮಳ ಮೇಘಪುಷ್ಪನ
ನನುವಿನಲಿ ಹೂಡಿದನು ದಾರುಕ ಹೇಮಮಯ ರಥವ
ಧನುವ ಶಸ್ತ್ರಾಸ್ತ್ರವ ಸುದರ್ಶನ
ಕನಕ ಕವಚ ಕೃಪಾಣವನು ಸ್ಯಂ
ದನದೊಳಿಳುಹೆಂದಸುರರಿಪು ಸಾತ್ಯಕಿಗೆ ನೇಮಿಸಿದ ೬

ಇವರಿಗವದಿರು ನೆಟ್ಟನೇ ಮುನಿ
ವವರು ನಾವಿವರವರು ಮತ್ತಂ
ತಿವರಿಗವನಿಯನೀಸಿ ಕೊಡುವುದು ನಮ್ಮ ಭರವಸಿಕೆ
ಅವಗಡಿಸಿದೊಡೆ ಕಾದುವುದು ಕೌ
ರವರು ಖುಲ್ಲರು ರಥದೊಳಗೆ ಕೈ
ದುವನು ತುಂಬೆಂದಸುರರಿಪು ಸಾತ್ಯಕಿಗೆ ನೇಮಿಸಿದ ೭

ಕಲಿತ ಸನ್ನಾಹದಲಿ ಸಾರಥಿ
ಸುಳಿಸಿದನು ಹೊಂದೇರನಭ್ರಕೆ
ತಳಿತವಮಳಚ್ಛತ್ರ ಚಾಮರ ಸಿತಪತಾಕೆಗಳು
ಅಳುಕೆ ನೆಲನಕ್ಷೋಣಿ ಬಲವಿ
ಟ್ಟಳಿಸಿ ನಡೆದುದು ರಥಕೆ ದಾನವ
ಕುಲದಿಶಾಪಟ ಕೃಷ್ಣ ಬಿಜಯಂಗೈದನೊಲವಿನಲಿ ೮

ಕಳುಹುತೈತಂದಖಿಳ ಪಾಂಡವ
ಬಲಕೆ ನೇಮವ ಕೊಟ್ಟು ಧರ್ಮಜ
ಫಲುಗುಣರ ನಿಲಿಸಿದನು ಸಹದೇವನನು ನಕುಲನನು
ಕಳುಹಿದನು ನೀ ಮರಳೆನಲು ಬೆಂ
ಬಳಿಯಲನಿಲಜನೈದಿ ಹಗೆಯಲಿ (೯
ಕಲಹವನು ಮಸೆಯೆಂದು ನಂಬುಗೆಗೊಂಡು ಮರಳಿದನು

ದೇವಿಯರು ನೀವ್ ಮರಳಿಯೆನೆ ರಾ
ಜೀವನಾಭನ ಹೊರೆಗೆದ್ರೌಪದಿ
ದೇವಿ ಬಂದಳು ನೊಸಲ ಚಾಚಿದಳಂಘ್ರಿ ಕಮಲದಲಿ
ಸ್ಥಾವರಕೆ ಜಂಗಮಕೆ ನೀನೇ
ಜೀವಚೇಷ್ಟಕನವದಿರಂತ
ರ್ಭಾವವನು ನೆರೆ ಬಲಿಯಲಾಗದು ಸಂಧಿ ಕಾರ್ಯದಲಿ ೧೦

ಖಳರು ತಮ್ಮುನ್ನತಿಯ ಕೀಲನು
ಕಳಚಿ ಕಳೆದರು ಮರಳಿ ಮಾಡುವ
ಡಳುಕಿದರು ತನ್ನವರು ಪತಿಗಳೆ ಪರಮ ವೈರಿಗಳು
ಹಳಿವ ನೀನೇ ಬಲ್ಲೆಯಿನ್ನೆ
ನ್ನುಳಿವ ನೀನೇ ಬಲ್ಲೆ ಹಿರಿದಾ
ಗಳಲಿದೆನು ಸಲಹೆಂದು ಕಂಬನಿದುಂಬಿದಳು ತರಳೆ ೧೧

ಏಳು ತಾಯೆ ಸರೋಜಮುಖಿ ವಿಪಿ
ನಾಲಯದೊಳತಿ ನವೆದೆ ನಿನ್ನವ
ರಾಳಿಗೊಂಡಂದವನು ಬಲ್ಲೆನು ನಿನ್ನ ಹರಿಬದಲಿ
ಕಾಳಗವನೇ ಬಲಿದು ತಹೆನಿವ
ರೇಳಿಲವ ಮಾಡಿದೊಡೆ ರಿಪುಗಳ
ಸೀಳಿ ಕರುಳನು ಮುಡಿಸದಿಹೆನೇ ನಿನ್ನ ಕಬರಿಯಲಿ ೧೨

ದೇವಕಿಯ ಮೇಲಾಣೆ ವರ ವಸು
ದೇವನಂಘ್ರಿಗಳಾಣೆ ಮನುಮಥ
ದೇವನಾಣೆ ನಿಧಾನವನು ಕೇಳಬಲೆ ನಿನ್ನಾಣೆ
ನಾವು ಸಂಧಿಯ ನೆವದಲವದಿರ
ಭಾವವನು ಕಲಿಮಾಡಿ ಕೋಪವ
ತೀವಿ ಸಂಧಿಯ ಮುರಿದು ಬಹೆವಿದ ನಂಬು ನೀನೆಂದ ೧೩

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ ೧೪

ಮುನಿವರರನುಪಚಿರಿಸಿದನು ಹ
ಸ್ತಿನಪುರಿಗೆ ಸಂಗಾತ ಬಹೆವೆಂ
ದೆನಲು ಬರಹೇಳಿದನು ಸಕಲ ಮಹಾತಪೋಧನರ
ಘನ ಕುಶಸ್ಥಳಪುರದಲೆಡೆಗೈ
ದನು ಸುಯೋಧನನಲ್ಲಿಗಟ್ಟಿದ
ವಿನುತ ದೂತರು ಬಿನ್ನವಿಸಿದರು ಮುರಹರನ ಬರವ ೧೫

ಕೇಳಿದನು ಧೃತರಾಷ್ಟ್ರನಾಗ ಕೃ
ಪಾಳುವಿನ ಗಮನವನು ಚಿತ್ತವ
ಹೂಳಿ ಹೆಚ್ಚಿದ ಹರುಷದಲಿ ಉಬ್ಬೆದ್ದನಡಿಗಡಿಗೆ
ಹೇಳಿದನು ವಿದುರಂಗೆ ಭಂಡಾ
ರಾಲಯದೊಳುಳ್ಳಮಳ ಮೌಕ್ತಿಕ
ಜಾಳಿಗೆಯ ಪೆಟ್ಟಿಗೆಯೊಳಾಯಿಸು ವರ ಸುರತ್ನಗಳ ೧೬

ಎಲೆ ವಿದುರ ಕೇಳೈ ಸುಯೋಧನ
ನುಳಿಯೆ ಸಕಲ ಮಹಾ ಪ್ರಧಾನರು
ನಳಿನನಾಭನನಿದಿರುಗೊಳಲಿ ಕೃತಾರ್ಥರಾದವರು
ಹೊಳಲು ಗುಡಿ ತೋರಣದಲೆಸೆಯಲಿ
ಕಳಸ ಕನ್ನಡಿ ಸಹಿತ ನಡೆಯಲಿ
ನಳಿನವದನೆಯರೆಂದು ನೇಮಿಸಿದನು ಮಹೀಪಾಲ ೧೭

ತೆಗೆ ಸುವಸ್ತು ವನೀಯದಿರು ಹರಿ
ಹಗೆ ಕಣಾ ಕುಂತೀಕುಮಾರರು
ಹಗೆಗಳೇ ಮನ್ನಿಸಿದರೆಂದುಳುಹುವನೆ ಮುರವೈರಿ
ನಗರಿಗಾತನು ಬರಲಿ ಯಾದವ
ನಗಡುತನಕೌಷಧಿಯ ಬಲ್ಲೆನು
ಬಿಗಿದು ಕೆಡಹುವೆನೆಂದು ನುಡಿದನು ಕೌರವರ ರಾಯ ೧೮

ಖಾತಿಗೊಂಡನು ಭೀಷ್ಮನೆಲೆ ಕಡು
ಪಾತಕನೆ ನೀ ಕೃಷ್ಣನನು ಬಿಗಿ
ವಾತನೇ ಬಳಿಕೇನು ಬಲ್ಲೆನು ನಿನ್ನ ಸಾಹಸವ
ಈತ ನುಡಿದೀ ಮಾತ ಕೇಳಲು
ಪಾತಕವು ಬಹುದೆಂದು ಗಂಗಾ
ಜಾತನೋಲಗದಿಂದ ಸರಿದನು ತನ್ನ ಮಂದಿರಕೆ ೧೯

ಪುರವ ರಚಿಸಿದರುದಯದಲಿ ಬಿ
ತ್ತರ ಮಿಗಲು ಗಾಂಗೇಯ ಗೌತಮ
ಗುರುವಿದುರ ಶಲ್ಯಾದಿ ಸುಜನರು ಬಂದರಿದಿರಾಗಿ
ತರುಣಿಯರು ಕೆಂದಳಿರ ಕಲಶದ
ಕರತಳದ ಗರುವಾಯಿಯಲಿ ಪಂ
ಕರುಹನಾಭನನಿದಿರುಗೊಂಡರು ವಿವಿಧ ವಿಭವದಲಿ ೨೦

ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಖಿಳ ಜನವಂ
ಜುಳಿಯನಿಟ್ಟುದು ಭಾಳದಲಿ ಪರಿಶುದ್ಧಭಾವದಲಿ
ನಳಿನನಾಭನ ದಿವ್ಯಮೂರ್ತಿಯ
ಲಲಿತ ಕಾಂತಿಯ ಕಡಲೊಳಗೆ ನೆರೆ (೨೧
ಮುಳುಗಿದುದು ಪುರಜನದ ಕಣುಮನವೊಂದು ನಿಮಿಷದಲಿ

ಮಂದಿ ಮೈಯಿಕ್ಕಿತು ಮುರಾಂತಕ
ನಿಂದು ಮನದೊಲವಿನಲಿ ಗಂಗಾ
ನಂದನ ದ್ರೋಣಾದಿಗಳನೆತ್ತಿದನು ಕರುಣದಲಿ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ವೀಳಯವನಾ
ಮಂದಿಗಿತ್ತನು ದೇವ ಬಂದನು ಹಸ್ತಿನಾಪುರಿಗೆ ೨೨

ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ ೨೩

ನಸುಬಿರಿದ ಪರಿಪಕ್ವದಾಡಿಮ
ವಸರದೊಳಗರವಟ್ಟಿಗೆಯ ದರ
ಹಸಿತ ಪಂಕಜಗಳಿತ ಮಕರಂದದ ತಟಾಕದಲಿ
ರಸಭರಿತ ಖರ್ಜೂರ ಫಲ ಸಂ
ಪ್ರಸರ ಛತ್ರವನೆಸಗಿಯುಪವನ
ವೆಸೆದುದೈ ಧಾರ್ಮಿಕನವೊಲು ಯದುರಾಯನಿದಿರಿನಲಿ ೨೪

ಎಳಲತೆಯನೆರಗಿಸುತ ಮಲೆತರೆ
ತಳಿರುಗಳನಲ್ಲಾಡಿ ವರ ಪರಿ
ಮಳದ ಕಪ್ಪವ ಕೊಂಡು ಮರಿದುಂಬಿಗಳ ಗೀತವನು
ಸಲೆ ಸೊಗಸಿ ಮಕರಂದ ನದಿಯಲಿ
ತಳಿತು ಬೀಡನು ಬಿಡುತ ಜನದಲಿ
ಸುಳಿದುದೈ ತಂಗಾಳಿ ಭೂಮೀಪಾಲನಂಗದಲಿ ೨೫

ಮಘಮಘಿಪ ಹೊಂಬಾಳೆಗಳ ರಸ
ವೊಗುವ ಮಧುರದ್ರಾಕ್ಷೆಗಳ ನಿಡು
ಮುಗಿಲ ತುಡುಕುವ ತೆಂಗುಗಳ ನೆರೆ ಕಾತ ಪನಸುಗಳ
ಬಿಗಿದ ಪಣ್ಗೊನೆವಾಳೆಗಳ ಸೊಂ
ಪೊಗುವ ಕರ್ಪೂರ ದ್ರುಮೌಘದ
ಸೊಗಸು ಸೆಳೆದುದು ಮನವನಾ ಗಜನಗರದುಪವನದ ೨೬

ಲಲಿತ ಶುಕಚಯ ಚಂಚು ಪುಟದಿಂ
ದಳಿತ ಜಂಬೂ ಪಕ್ವ ಫಲ ರಸ
ಲುಳಿತ ನವಮಕರಂದ ಮಧುರೋರ್ಝರನಿವಾತದಲಿ
ತಳಿತ ಕಿನ್ನರ ಮಿಥುನ ಸುಖ ಪರಿ
ಮಿಳಿತ ಗೀತಶ್ರವಣ ಸನ್ನುತ
ಪುಳಿನ ಸುಪ್ತ ಮರಾಳವೆಸೆದುದು ಗಜಪುರೋದ್ಯಾನ ೨೭

ಅರರೆ ಪಾತಾಳದ ವಿಳಾಸಿನಿ
ಯರಿಗೆ ಚೌಕಿಗೆಯೋ ಸುದುರ್ಗದ
ಹಿರಿಯಗಳೊ ಬಲುಗೋಟೆಯೋ ನಿಚ್ಚಣಿಕೆಯೋ ದಿವದ
ಮುರಿಮುರಿದ ಹುಲಿಮುಖದ ಹೇಮದ
ತರದ ತೆನೆಗಳ ವಜ್ರಮಯ ಬಂ
ಧುರ ಕವಾಟಸ್ಫುಟದಲೆಸೆದುದು ಹಸ್ತಿನಾನಗರ ೨೮

ಹೊಗಳುತೈತಂದಸುರರಿಪು ಗಜ
ನಗರವನು ಹೊಕ್ಕನು ಸುಯೋಧನ
ನಗಣಿತೈಶ್ವರ್ಯವ ಮಹಾದೇವೆನುತ ನಲವಿನಲಿ
ಬಿಗಿದ ಬೀದಿಯ ನಯದ ನೆಲೆಗ
ಟ್ಟುಗಳ ಮಣಿಮಯ ಹೇಮದುಪ್ಪರಿ
ಗೆಗಳ ಕೇರಿಗಳೊಳಗೆ ಬರುತಿರ್ದನು ಮುರಧ್ವಂಸಿ ೨೯

ಮಂದದಲಿ ಸುಳಿವಾನೆ ಕುದುರೆಯ
ಸಂದಣಿಯ ಕೀಲಿಸಿದ ಭೂಮಿಪ
ರಂದಣದ ಸಾಲುಗಳ ತೆಕ್ಕೆಯ ಹಳಿಯದಾಳುಗಳ
ಮಂದಿಯಲಿ ಹೊಗಲನಿಲಗುಬ್ಬಸ
ವೆಂದರುಳಿದವರಳವೆಯೆನಲರ
ವಿಂದನಾಭನು ಬಂದನಾ ಧೃತರಾಷ್ಟ್ರನರಮನೆಗೆ ೩೦

ಇದಿರುಗೊಂಡನು ಕಾಣಿಕೆಯನಿ
ಕ್ಕಿದನು ಕುಶಲ ಕ್ಷೇಮವನು ಕೇ
ಳಿದನು ಬಕುತಿಯಲೆರಗಿದನು ಚರಣದಲಿ ಧೃತರಾಷ್ಟ್ರ
ಸದನವನು ಹೊಕ್ಕಂತೆ ನಿಮಿಷಾ
ರ್ಧದಲಿ ಕುಳ್ಳಿರ್ದನಿಬರನು ಕಳು
ಹಿದನು ಕಾರುಣ್ಯದಲಿ ಗದುಗಿನ ವೀರ ನಾರಯಣ ೩೧