ಸೂ. ವೀರ ಪಾಂಡವರದಟನಾ ಧನು
ಜಾರಿ ಹೇಳಿದ ವಚನರಚನೆಯ
ಕೌರವಗೆ ಬಂದರುಹೆ ಕೋಪಿಸಿ ಸಂಜಯನ ಜರೆದ

ಬೀಳಿಕೊಂಡುದು ರಜನಿ ಕುರು ಭೂ
ಪಾಲನುಪ್ಪವಡಿಸಿದನೋಲಗ
ಶಾಲೆಯಲಿ ನೆರಹಿದನು ಸಭ್ಯರನಾಪ್ತ ಮಂತ್ರಿಗಳ
ಕೇಳುವೆವು ಕರೆ ಸಂಜಯನನವ
ರೋಲಗದ ಮೈಸಿರಿಯನೆಂದು ನೃ
ಪಾಲನಟ್ಟಿದ ದೂತರೊಡನೈತಂದರೋಲಗಕೆ ೧

ಬಂದು ಮೈಯಿಕ್ಕಿದನು ಕುರು ನೃಪ
ವೃಂದವನು ಗಾಂಧಾರಿಯನು ಯಮ
ನಂದನನು ಬೆಸಗೊಂಡು ಕಳುಹಿದನುಚಿತ ವಚನದಲಿ
ಎಂದು ಬಳಿಕಿನ ರಾಜ ಕಾರ‍್ಯವ
ನಂದು ಬಿನ್ನೈಸಿದನು ಚಿತ್ತೈ
ಸೆಂದು ಧೃತರಾಷ್ಟ್ರಂಗೆ ದುರ್ಯೋಧನಗೆ ಕೈಮುಗಿದು ೨

ಜೀಯ ಬಿನ್ನಹವಿಂದು ಪಾಂಡವ
ರಾಯನೈಶ್ವರ್ಯವನು ಸಾವಿರ
ಬಾಯ ಸರ್ಪನು ಹೊಗಳಲಳವಲ್ಲೆನ್ನ ಪಾಡೇನು
ನಾಯಕರ ಕಡುಹುಗಳನವರವ
ರಾಯತವನನಿಬರಿಗೆ ಕಮಲದ
ಳಾಯತಾಕ್ಷನ ಕರುಣದಳತೆ ವಿಚಿತ್ರ ತರವೆಂದ ೩

ಓಲಾಗದೊಳುಬ್ಬೆದ್ದು ನುಡಿಯಲಿ
ಹೂಳಿ ತಮತಮಗೆನ್ನ ಜರೆದರು
ಕಾಳಗಕೆ ಕೈಗಟ್ಟಿ ಹಿಂಡೆದ್ದೊದರಿತವನಿಪರು
ಮೇಲೆ ಸಂತೈಸಿದನು ಧರ‍್ಮನೃ
ಪಾಲನಲ್ಲಿಂ ಬಳಿಕ ಮುರಹರ
ನಾಲಯಕೆ ಪರಿಮಿತದೊಳರ್ಜುನನೆನ್ನ ಕರೆಸಿದನು ೪

ದೇವನಿದ್ದನು ಸತ್ಯಭಾಮಾ
ದೇವಿಯರ ನಸುಮಲಗಿಯರ್ಜುನ
ದೇವನಂಕದ ಮೇಲೆ ಸಿರಿಪದಪಂಕಜವ ನೀಡಿ
ನಾವು ಬರಲೆಮಗುಚಿತದಲಿ ಸಂ
ಭಾವನೆಯ ಮಾಡಿದರು ನಮಗಿ
ನ್ನಾವುದನು ನೇಮಿಸಿದಿರೆನಲಿಂತೆಂದನಸುರಾರಿ ೫

ಎಮಗೆ ಸರಿಯಿತ್ತಂಡದಲ್ಲಿಯ
ಮಮತೆ ಬೇರೊಬ್ಬರಲಿ ಪಕ್ಷ
ಭ್ರಮೆಯ ಮಾಡೆವು ಹಿತವ ಬಯಸುವೆವೆರಡು ಸಂತತಿಗೆ
ಕಮಲಮುಖಿ ಸುಲಿವಡೆದು ಲಕ್ಷ್ಮೀ
ರಮಣ ಲಕ್ಷ್ಮೀ ರಮಣ ಲಕ್ಷ್ಮೀ ೬
ರಮಣಯೆಂದೊರಲಿದೊಡೆ ಸಂಜಯ ನೊಂದೆ ನಾನೆಂದ

ಕಾವುದೈ ಗೋವಿಂದ ಸಲಹೈ
ದೇವಕೀಸುತ ಗಂಡರೈವರ
ಭಾವ ಬೆಟ್ಟಿತು ನೀನಲೈ ದೇಸಿಗರ ದೈವವಲೈ
ದೇವ ಕೆಟ್ಟೆನು ಕೆಟ್ಟೆನೈ ಕರು
ಣಾವಲಂಬನದಿಂದ ತಡೆಯೈ
ಜೀವನವನೆಂದೊರಲಿದಳು ಹಂಗಿಗನು ತಾನೆಂದ ೭

ಭಂಟನಹೆ ಬಕುತರಿಗೆ ನೆನೆವರು
ನಂಟರೆಮಗೊಲಿದಂತೆ ಹೊಗಳಿದ
ರೆಂಟು ಮಡಿ ಹಿಗ್ಗುವೆವು ಮೆಚ್ಚೆವು ತರ್ಕ ಸಾಧಕರ
ಉಂಟು ಪಾಂಡವರೈವರಲಿ ಬಲು
ನಂಟತನ ಮರೆಯೇತಕೈವರ
ಕಂಟಕರು ನಮಗಾದ ಕಂಟಕರೆಂದು ಹರಿ ನುಡಿದ ೮

ನೆನೆವುದೆಂದನು ಪಾರ್ಥನಾ ಕಾ
ನನದೊಳಗೆ ಗಂಧರ್ವರಲಿ ಬಂ
ಧನವನೀ ಗೋಗ್ರಹಣದಲಿ ಮಾಡಿದ ಪಲಾಯನವ
ವನಜವದನೆಯ ಬಯಸಿದೊಡೆ ಬಿ
ಲ್ಲಿನಲಿ ಬಲಿವಡೆದುದನು ಕೌರವ
ಜನಪ ಮರೆದಿರಲಾಗದೆಂದರಸಂಗೆ ಹೇಳೆಂದ ೯

ಧೀರಭೀಮನ ಗದೆಯ ಹೊಯ್ಲಿನ
ಭಾರಣೆಯ ನಮ್ಮ ತುಳ ಚಾಪದ
ಸಾರ ಶಸ್ತ್ರಾವಳಿಯ ಮಳೆಗಾಲದ ಮಹಾದ್ಭುತವ
ವೀರ ನಕುಲನ ಸಾತ್ಯಕಿಯ ಬಲು
ಕೂರಸಿಯ ಸಹದೇವ ಮತ್ಸ್ಯರು
ದಾರತೆಯ ನಿಮ್ಮರಸ ನೆನೆದಿಹುದೆಂದನಾ ಪಾರ್ಥ ೧೦

ಹಿಂದೆ ಜೂಜಿನ ಸಭೆಯೊಳಗೆ ನಾ
ವೆಂದ ಮಾತುಗಳುಂಟು ತಾವದ
ಮುಂದೆ ನೋಡಲಿ ಕರ್ಣ ಶಕುನಿ ಸುಯೋಧನಾದಿಗಳು
ಇಂದು ನೆನೆವುದು ದೇಶ ಕಾಲವ
ಹಿಂದುಗಳೆಯದೆ ಬೇಗ ಮಾಡುವು
ದೆಂದು ಬಿನ್ನಹ ಮಾಡಹೇಳಿದನರ್ಜುನನು ನಿಮಗೆ ೧೧

ತೊಡೆಗಳಿಗೆ ಸುಕ್ಷೇಮವೇ ನಿ
ನ್ನೊಡೆಯನವನೊಡಹುಟ್ಟಿದನ ಮೈ
ಜಡಿದುದೇ ಪಾಲಿಸದಡನಿಬರಿಗಹುದು ರಕ್ತ ಜಲ
ಒಡನೆ ಹುಟ್ಟಿದ ನೂರ್ವರು ಮೈ
ಗೆಡರಲೇ ಬೆಸಗೊಂಬುದಂಜದಿ
ರೊಡೆಯರಿಗೆ ಹೊಣೆಗೊಂಡೆ ಹೇಳೆಂದಟ್ಟಿದನು ಭೀಮ ೧೨

ಸಾಕು ಸಂಜಯ ಗಳಹದಿರು ಫಡ
ನೂಕಿವನನಾರಲ್ಲಿಗಟ್ಟಿದ
ರಾ ಕುಠಾರರ ಬಯಲ ಗೃಹ ಗರ್ಜನೆಯ ಗರ ಹೊಡೆದು
ತೇಕಿ ತಲೆಕೆಳಕಾದನೀಯವಿ
ವೇಕಸಾಗರನೆಲೆ ನೃಪತಿ ಜಗ
ದೇಕ ವೀರನು ಕರ್ಣ ತಾನಿರೆ ಸಂಧಿಯೇಕೆಂದ ೧೩

ಮಂದಿಯಲಿ ಮೈಮರೆದು ಬಾಹಿರ
ನೆಂದ ಮಾತನು ರಾಜಸಭೆಯಲಿ
ತಂದು ಹರಹುವನಿವನು ಶಿಷ್ಟನೆ ಜಗದ ಭಂಡನಲ
ಇಂದುಮೌಳಿಯನೊಂದು ಬಾರಿಗೆ
ಹಿಂದು ಮುಂದನು ಮಾಡುವೆನು ತಾ
ಮಂದಿ ಕುಂತೀ ಮಕ್ಕಳಿದಿರೇ ತನಗೆ ಹೇಳೆಂದ ೧೪

ಭಂಡನೇ ಸಂಜಯನು ಲೋಕದ
ಭಂಡ ನೀನೆಲೆ ಕರ್ಣ ನಿನಗಾ
ಪಾಂಡವರ ಪರಿಯಂತವೇ ನಿನಗವರ ಸೇನೆಯಲಿ
ಗಂಡನೊಬ್ಬನು ಸಾಕು ಕೆದರುವೆ
ಗಂಡು ಗರ್ವದ ಮಾತ ನಿನ್ನನು
ದಿಂಡುದರಿವನು ಮುನಿದಡರ್ಜುನನೆಂದನಾ ಭೀಷ್ಮ ೧೫

ಖುಲ್ಲನಿವನೀ ಕರ್ಣನವರಲಿ
ಬಲ್ಲಿದನು ತಾನೆಂದು ದಿಟವಿವ
ನಲ್ಲಿ ನಂಬುಗೆ ಮಾಡದಿರು ಮರುಳೇ ಮಹೀಪತಿಯೆ
ಇಲ್ಲ ನೋಡರ್ಜುನಗೆ ಪಡಿ ನರ
ರಲ್ಲಿ ನಿರ್ಜರರಲ್ಲಿ ಪನ್ನಗ
ರಲ್ಲಿ ಕೈವಾರಿಗಳೆ ನಾವಿನ್ನೆಂದನಾ ಭೀಷ್ಮ ೧೬

ಮುರಿಯದಿರು ಗಾಂಗೇಯನೆಂದುದೆ
ಪರಮ ಮಂತ್ರವು ಪಾರ್ಥನನು ಸಂ
ಗರದೊಳಾನುವರಿಲ್ಲ ಕೇಳಮರಾಸುರಾಳಿಯಲಿ
ದುರುಳರಾಡುವ ಹೊಳ್ಳುನುಡಿಗಳು
ಗರುವರಭಿಮತವಲ್ಲ ಸಂಧಿಗೆ
ಕೊರಳುಗೊಳಿಸುವುದುಚಿತವೆಂದನು ದ್ರೋಣನರಸಂಗೆ ೧೭

ಹುರುಳುಗೆಡಿಸುವಿರಾವು ನುಡಿದೊಡೆ
ಕರಗಿ ಕುಂತೀ ಮಕ್ಕಳೆಂದೊಡೆ
ಹರಹಿ ಕೊಂಬಿರಿ ಡಿಂಬವೆಮ್ಮಲಿ ಜೀವವವದಿರಲಿ
ಭರತ ಸಂತತಿಯಲ್ಲಿ ಕೆಲಬರು
ಸುರರು ಕೆಲಬರು ನರರೆ ಸಾಕಂ (೧೮
ತಿರಲಿ ಸಮರದೊಳೆಮ್ಮ ನೋಡೆಂದನು ಸುಯೋಧನನು

ಬೇಡ ಮಗನೇ ಕೃಷ್ಣರಾಯನು
ರೂಢಿಸಿದ ಕಟ್ಟಾಳು ಕೆಲ ಕೆಲ
ರಾಡುವರು ಸಾಕ್ಷಾತು ಲಕ್ಷ್ಮೀಕಾಂತ ಹರಿಯೆಂದು
ಕೂಡಿಕೊಂಡಿಹನವರನಾತನು
ಕೇಡನವರಿಗೆ ಹೊದ್ದಲೀಯನು
ನಾಡನೊಪ್ಪಿಸು ಮಗನೆಯೆಂದನು ಬೆದರಿ ಧೃತರಾಷ್ಟ್ರ ೧೯

ಮರುಳುಗಳಲಾ ಬೊಪ್ಪನವರೀ
ಮುರಹರನು ಹರಿಯೆಂದು ಮುನ್ನದ
ನರಿದಿಹೆನು ನೀವಂಜದಿರಿ ನಿಮಗಾಗದವಸಾನ
ಗುರು ನದೀಸುತ ಮುಖ್ಯರಿರಲೀ
ಕುರುಕುಲಕೆ ಕೇಡಹುದೆ ಕೊಲುವೊಡೆ
ಸುರಪತಿಯ ಸುತನಳವೆಯೆಂದನು ಕೌರವರರಾಯ ೨೦

ಭಾರ ಹೆಚ್ಚಿದೊಡರಲಿ ಭೂಮಿ
ನಾರಿ ಬಿನ್ನಹ ಮಾಡಿದೊಡೆ ದೈ
ತ್ಯಾರಿ ಬಿಜಯಂಗೈದನವನಿಗೆ ಮನುಜ ವೇಷದಲಿ
ಭೂರಿ ದನುಜರನೊರಸಿದನು ಕೈ
ಯಾರ ಬಳಿಕರ್ಜುನನ ಕೈಯಲಿ
ಕೌರವರ ಕೊಲಿಸುವನು ನಾವಿನ್ನಂಜಲೇಕೆಂದ ೨೧

ಕಾವನಾತನೆ ಕೊಲುವನಾತನೆ
ಸಾವೆನಾತನ ಕೈಯ ಬಾಯಲಿ
ನೀವು ಪಾಂಡವರೊಡನೆ ಸುಖದಲಿ ರಾಜ್ಯವಾಳುವುದು
ಸಾವ ನಾನಂಜದೊಡೆ ಬದುಕುವ
ನೀವು ಚಿಂತಿಸಲೇಕೆ ನಿಮ್ಮನು
ಕಾವನೈ ಕರುಣದಲಿ ಗದುಗಿನ ವೀರನಾರಯಣ ೨೨