ಸೂ. ಸೆಣಸುವದಟರ ಗಂಡ ಸಮರಾಂ
ಗಣ ಕಮಲ ಭೇರುಂಡನಾ ದಿನ
ಮಣಿಯ ಮಗನುದ್ದಂಡ ಕರ್ಣನ ಕಂಡಳಾ ಕುಂತಿ

ಒಲಿದವರನುಜ್ಜೀವಿಸುವ ಬಗೆ
ಬಲುಹು ಮುರಮಥನಂಗೆ ಮುನಿದೊಡೆ
ತಲೆಯ ಬರೆಹವ ತೊಡೆವನಲ್ಲದೆ ಬಳಿಕ ಸೈರಿಸನು
ನಳಿನನಾಭನು ಭಜಕರಿಗೆ ಬೆಂ
ಬಳಿಯ ಬಿರುದನು ಭೇದದಲಿ ಕುರು
ಕುಲವ ಕೊಂದನು ಕೇಳು ಜನಮೇಜಯ ಮಹೀಪಾಲ ೧

ಇನತನೂಜನ ಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನೆಯೆ ದೇವ ಮುರಾರಿಯಂಜುವೆ
ನೆನಲು ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ ೨

ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆ ಸಂ
ವಾದಿಸುವಡನ್ವಯದ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವಿಲ್ಲೆನುತ ದಾನವ
ಸೂದನನು ರವಿಸುತನ ಕಿವಿಯಲಿ ಬಿತ್ತಿದನು ಭಯವ ೩

ದಾನವಾಂತಕ ಬೆಸಸು ವಂಶ ವಿ
ಹೀನನ ನಿಮ್ಮಡಿಗಳೊಡನೆ ಸ
ಮಾನಿಸುವರೇ ಸಾಕೆನುತ ರವಿಸೂನು ಕೈಮುಗಿಯೆ
ಮಾನನಿಧಿ ನಿನ್ನಾಣೆ ಬಾರೈ
ನೀನು ನಮ್ಮೆಲ್ಲರ ಹವಣೆ ವರ
ಭಾನುವಂಶಲಲಾಮ ನೀ ರಾಮಂಗೆ ಸರಿಯೆಂದ ೪

ಕಳೆದುಕೊಂಡನು ವೀಳೆಯವನಂ
ಜುಳಿಯಲಾತಂಗಿತ್ತು ಕರ್ಣನ
ಕೆಲಕೆ ಬರಸೆಳೆದವನ ಕರದೊಳು ಕರತಳವನಿಕ್ಕಿ
ಎಲೆ ದಿವಾಕರತನಯ ನಿನ್ನಯ
ಕುಲವನರಿಯೆಯಲಾ ಸುಯೋಧನ
ನಲಿ ವೃಥಾ ಸೇವಕತನದಲಿಹುದುಚಿತವಲ್ಲೆಂದ ೫

ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು ೬

ಅದರಿನಾ ಪಾಂಡವರಲೈವರ
ಮೊದಲಿಗನು ನೀನಿರಲು ಧರಣಿಯ
ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು
ಇದು ನಿಧಾನವು ಕರ್ಣ ನಿನ್ನ
ಭ್ಯುದಯವನೆ ಬಯಸುವೆನು ನಿನ್ನಯ
ಪದಕೆ ಕೆಡಹುವೆನೈವರನು ನಡೆ ತನ್ನ ಸಂಗಾತ ೭

ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ೮

ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸನ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ೯

ಶೌರಿಯದಲಿದಿರಿಲ್ಲ ಕುಲದಲಿ
ಸೂರಿಯನ ಮಗನೊಡನೆ ಹುಟ್ಟಿದ
ವೀರರೈವರು ಪಾಂಡುತನಯರು ನಿನ್ನ ವೈಭವಕೆ
ಆರು ಸರಿಯೈ ಕರ್ಣ ನಡೆ ನಡೆ
ಧಾರುಣೀಪತಿಯಾಗು ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ ೧೦

ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ೧೧

ಕಾದಿ ಕೊಲುವೊಡೆ ಪಾಂಡುಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ
ಭೇದದಲಿ ಹೊಕ್ಕಿರಿದನೋ ಮಧು
ಸೂದನಕಟಕಟೆನುತ ಘನ ಚಿಂ
ತೋದಧಿಯಲದ್ದವೊಲು ಮೌನದೊಳಿದ್ದನಾ ಕರ್ಣ ೧೨

ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ ೧೩

ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ೧೪

ಒಡನೆ ಹುಟ್ಟಿದೆವೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ವಿಜಯನ
ಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ
ನುಡಿದು ಫಲವೇನಿನ್ನು ಕೇಳೆ
ನ್ನೊಡೆಯನಾದಂತಹೆನು ಬಾರೆನು
ಪೊಡವಿಯಲಿ ನೀ ಹರಹಿಕೊಳು ನಿನ್ನವರ ನಿಲಿಸೆಂದ ೧೫

ವೀರ ಕೌರವರಾಯನೇ ದಾ
ತಾರನಾತನ ಹಗೆಯೆ ಹಗೆ ಕೈ
ವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಸಾರದಲಿ ತೋರುವೆನು ನಿಜಭುಜ
ಶೌರಿಯದ ಸಂಪನ್ನತನವನು ಪಾಂಡುತನಯರಲಿ ೧೬
ಹಲವು ಮಾತೇನಖಿಳ ಜನಕೆ
ನ್ನುಳಿವು ಸೊಗಸದು ಕೌರವೇಶ್ವರ
ನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ
ಸಲಹಿದನು ಮನ್ನಣೆಯಲೆನಗ
ಗ್ಗಳಿಕೆಯಲ್ಲದೆ ಹೀನ ವೃತ್ತಿಯ
ಬಳಸಿ ನಡೆಸನು ಕೌರವೇಂದ್ರನನೆಂತು ಮರೆದಪೆನು ೧೭

ನೋಡಿ ದಣಿಯನು ಬಿರುದ ಹೊಗಳಿಸಿ
ಹಾಡಿ ದಣಿಯನು ನಿಚ್ಚಲುಚಿತವ
ಮಾಡಿ ತಣಿಯನು ಮಾನನಿಧಿಯನದೆಂತು ಮರೆದಪೆನು
ಕಾಡಲಾಗದು ಕೃಷ್ಣ ಖಾತಿಯ
ಮಾಡಲಾಗದು ಬಂದೆನಾದೊಡೆ
ರೂಢಿ ಮೆಚ್ಚದು ಕೌರವನ ಹಗೆ ಹರಿಬ ತನಗೆಂದ ೧೮

ಅರುಣಜಲದಾಜ್ಯದಲಿ ಬಂಬಲು
ಗರುಳ ಚರುವಿನಲೆಲುವಿನೊಟ್ಟಿಲ
ಬೆರಳ ಸಮಿಧೆಯಲಡಗಿನಖಿಳಾಹುತಿಯ ರಚನೆಯಲಿ
ನರಕ ಪಾಲದ ಪಾತ್ರೆಗಳ ತಿಲ
ದೊರಳೆಗಳ ಕೇಶೌಘದರ್ಭಾಂ
ಕುರದಲಾಹವ ಯಜ್ಞ ದೀಕ್ಷಿತನಹೆನು ತಾನೆಂದ ೧೯

ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ರುಣ ಹಿಂಗೆ ರಣದಲಿ ಸುಭಟ ಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ ೨೦

ಎನಲು ಕರ್ಣನ ದೃಢವ ಕಂಡನು
ಮನದೊಳುತ್ಸಾಹಿಸಿದನಾದೊಡೆ
ತನಯರೈವರ ಹದನು ನಿನ್ನದು ಬಲುಹ ಮಾಡುವೊಡೆ
ಮನಕೆ ಖತಿಯಹುದರುಹದಿರ್ದೊಡೆ
ತನಗೆ ಗುಣವಲ್ಲೆಂಬ ಕಾರಣ
ವಿನಿತನೊಡ್ಡೈಸಿದೆನು ನೀ ಸುಖಿಯಾಗು ಹೋಗೆಂದ ೨೧
ಬಂದರೊಳ್ಳಿತು ಬಾರದಿದ್ದೊಡೆ
ಕಂದ ಕೇಳೈ ಮಧುರ ವಚನದಿ
ಮಂದಮತಿಯನು ತಿಳುಹಿ ತಮ್ಮಂದಿರಿಗೆ ರಾಜ್ಯವನು
ಇಂದು ಕೊಡಿಸುವುದುಚಿತ ಸಂಪ್ರತಿ
ಗಿಂದು ಸೇರಿಸು ನಿನ್ನ ಮಾತನು
ಹಿಂದುಗಳೆಯನು ಕೌರವೇಶ್ವರನೆಂದನಸುರಾರಿ ೨೨

ಮಸೆದುದಿತ್ತಂಡಕ್ಕೆ ಮತ್ಸರ
ವಸಮ ಸಂಗರವೀಗ ನೀತಿಯ
ನುಸುರಿದರೆ ಮನಗಾಣನೇ ಕೌರವ ಮಹೀಶ್ವರನು
ವಿಸಸನದ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ವೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ ೨೩

ಕಳುಹಬೇಹುದು ದೇವ ದಿನಪತಿ
ಇಳಿದನಪರಾಂಬುಧಿಗೆ ಸಂಪ್ರತಿ
ಯಳಿದ ಹೊತ್ತಿಂದೀಗ ನೆಟ್ಟನೆ ನೀವು ಪಾಂಡವರು
ಹುಲುಸರವಿ ಹಾವಹುದು ಹುತ್ತಿನ
ತಲೆಯಲಿರಲಜ್ಞರಿಗೆ ಹಿಸುಣರ
ಬಳಕೆ ಹೊಗುವುದು ಕಳುಹ ಬೇಕೆಂದೆರಗಿದನು ಕರ್ಣ ೨೪

ಬೀಳುಕೊಂಡನು ಮನೆಗೆ ಬಂದು ವಿ
ಶಾಲಮತಿ ಚಿಂತಿಸಿದನಾ ಸಿರಿ
ಲೋಲ ಮಾಡಿದ ತಂತ್ರ ಮನದಲಿ ನಟ್ಟು ಬೇರೂರಿ
ಕಾಳುಮಾಡಿದನಕಟ ಕೌರವ
ಬಾಳಲರಿಯದೆ ಕೆಟ್ಟನೀ ಗೋ
ಪಾಲ ಬರಿದೇ ಬಿಡನು ಜೀವವ ಕೊಳ್ಳದಿರನೆಂದ ೨೫

ವೀರ ರವಿಸುತನೊಂದು ದಿನ ರವಿ
ವಾರದಲಿ ಪರಿತೋಷ ಮಿಗೆ ಭಾ
ಗೀರಥೀ ತೀರದಲಿ ತಾತಂಗರ್ಘ್ಯವನು ಕೊಡುತ
ಸಾರ ಮಂತ್ರವ ಜಪಿಸುತಿರಲೌ
ದಾರಿಯದ ಸುರತರುವ ಕುಂತೀ
ನಾರಿ ಕಾಣಲು ಬಂದಳಾತ್ಮಜನಿದ್ದ ನದಿಗಾಗಿ ೨೬

ಬರಲು ತಾಯ್ಗಿದಿರಾಗಿ ರವಿಸುತ
ನಿರದೆ ಬಂದನು ದಂಡದಂತಿರೆ
ಚರಣದಲಿ ಮೈಯಿಕ್ಕಲಾತನ ನೊಸಲ ನೆಗಹಿದಳು
ಬರಸೆಳೆದು ಬಿಗಿದಪ್ಪಿದಳು ನೀ
ರುರವಣಿಸಿದವು ನಯನದಲಿ ಸೆರೆ
ಕೊರಳಿಗೌಕಿ ತಾನಳಲಿನಬುಧಿಯೊಳಾಳ್ದಳಾ ಕುಂತಿ ೨೭

ಆ ಸಮಯದಲಿ ಗಂಗೆ ನಾರೀ
ವೇಷದಲಿ ನಡೆತಂದಳೆಲೆ ಕುಂ
ತೀ ಸತಿಯೆ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸು ದಿನವಿವನಾಗುಹೋಗಿನ
ಗಾಸಿಯನು ತಲೆಗಾಯ್ದೆನೆನ್ನಯ
ಭಾಷೆ ಸಂದುದೆನುತ್ತ ತಾಯಿಗೆ ಕೊಟ್ಟಳಾತ್ಮಜನ ೨೮

ಇರಲಿರಲು ರವಿ ಬಂದನೆಕ್ಕಟಿ
ಕರೆದನೀತನ ಕಿವಿಯೊಳೆಲ್ಲವ
ನೊರೆದ ನಿನಗೆಲೆ ಮಗನೆ ಕುಂತೀದೇವಿ ತಾಯಹುದು
ಮುರಹರನ ಮತದಿಂದ ನಿನ್ನಯ
ಸರಳ ಬೇಡಲು ಬಂದಳಂದಿನ
ಹರಿಗೆ ಕವಚವನಿತ್ತವೊಲು ಮರುಳಾಗಬೇಡೆಂದ ೨೯

ಬೆಸಸಿದುದಕೆ ಹಸಾದವೆಂದನು
ಬಿಸಜಬಂಧುವ ಕಳುಹಿದನು ಮ
ನ್ನಿಸಿದನಿತ್ತಲು ಮಾತೆಯನು ಭಯಭರಿತ ಭಕ್ತಿಯಲಿ
ಒಸೆದು ಬಿಜಯಂಗೈದ ಹದನನು
ವುಸುರ ಬೇಹುದು ತಾಯೆಯೆನೆ ಶೋ
ಕಿಸುತ ನುಡಿದಳು ಕುಂತಿ ಕರ್ಣನ ತೆಗೆದು ಬಿಗಿಯಪ್ಪಿ ೩೦

ಮಗನೆ ತಮ್ಮಂದಿರನು ಪಾಲಿಸು
ವಿಗಡತನವನು ಮಾಣು ನೀನೋ
ಲಗಿಸುವರೆ ಕುರುಪತಿಯ ನಿನಗವರಿದಿರೆಯಿತ್ತಂಡ
ಸೊಗಸು ತಾನೆಂದುದನು ಹಿಸುಣರ
ಬಗೆಯ ನೀ ಕೇಳದಿರು ನೀ ಮನ
ಬಿಗಿಸದಿರು ಸಲಿಸೆನ್ನ ವಚನವನೆಂದಳಾ ಕುಂತಿ ೩೧

ತಾಯಹುದು ತಾ ಬಲ್ಲೆನದು ಸಂ
ಜಾಯತವು ಪಾಂಡವರು ತಮ್ಮದಿ
ರೀಯುಭಯ ರಾಯರಲಿ ಪಟ್ಟದ ಹಿರಿಯ ತಾನಹುದು
ರಾಯನೆನ್ನನು ನೆಚ್ಚಿ ಹೊರೆದನು
ಸಾಯಲಳುಕುವೆನೇ ಸುಡೇತರ
ದೀಯಿಳೆಯ ಬಾಳಿಕೆ ಕೃತಘ್ನತೆಗೆಲ್ಲಿ ಗತಿಯೆಂದ ೩೨

ಮಕ್ಕಳೈವರಿಗಾ ಹಿರಿಯನದು
ತಕ್ಕ ಮಾತೆಲೆ ತಾಯೆ ಸಂದೇ
ಹಕ್ಕೆ ನೆಲೆಯಿಲ್ಲದು ನಿಲಲಿ ಧಾರುಣಿಯ ಬಯಸುವರೆ
ತಕ್ಕುದೇ ದಾತಾರನರಸಿಯೊ
ಳೊಕ್ಕತನವಿರಲಾರು ಮೆಚ್ಚುವ
ರಕ್ಕ ಹೇಳೌ ಹೇಸಳೇ ಜಯಲಕ್ಷ್ಮಿ ತನಗೆಂದ ೩೩

ಇಂದು ನೀವರುಹಿದ ಬಳಿಕ ರವಿ
ನಂದನನುಯೆಂದರಿದೆನಲ್ಲದೆ
ಹಿಂದೆ ದುರಿಯೋಧನನದಾವುದ ನೋಡಿ ಸಲಹಿದನು
ಬಂದು ಪಾಂಡವರೊಡನೆ ಕೂಡಿದ
ರಿಂದು ನಗದೇ ಲೋಕವಂತಿರ
ಲಿಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ ನೀವೆಂದ ೩೪

ಆದೊಡೈವರ ಮಕ್ಕಳನು ತಲೆ
ಗಾಯ್ದು ತೋರೈ ಕಂದ ನಿನಗಿ
ನ್ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯಲಿ
ಹೋದ ಬಾಣವ ಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಟ್ಟನು ಬಂದನರಮನೆಗೆ ೩೫