ಶತ್ರುವಿನ ಶತ್ರು ಮಿತ್ರ’. ಕೀಟ ಪ್ರಪಂಚಕ್ಕೆ ಅನ್ವಯಿಸುವ ಮಾತಿದು. ಜೀವ ವೈವಿದ್ಯದ ಜೀವಸರಪಳಿಯ ಒಂದೊಂದೇ ಕೊಂಡಿಗಳು ಕಳಚಿ ಕೀಟ ಪ್ರಪಂಚದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಜೀವದಾರಿ ನಿರ್ಜೀವ ದಾರಿ ಆಗಿದೆ. ಇರುವೆ, ಗೆದ್ದಲು ಹುಳು, ಜೇನು ಹಾಗೂ ದುಂಬಿಗಳು ಕಣ್ಮರೆಯಾಗುತ್ತಿವೆ. ಇರುವೆ ಹುತ್ತಗಳನ್ನು ಕಾಡಿನಲ್ಲೇ ನೋಡಬೇಕಾಗಿದೆ. ಕಳೆ, ಕಸ, ಚಿಪ್ಪಾಡಿ, ದಂಟುಗಳನ್ನೆಲ್ಲಾ ತಿಂದು ಸಾವಯವ ಗೊಬ್ಬರವಾಗಿಸುವ ಗೆದ್ದಲು ಹುಳುಗಳಿಗೆ ಆಹಾರವೇ ಇಲ್ಲದಂತಾಗಿದೆ. ಎರೆಹುಳುಗಳೂ ಕಣ್ಮರೆಯಾಗಿವೆ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ರಾಸಾಯನಿಕ ಕೃಷಿ.

ಪ್ರಕೃತಿಯಲ್ಲಿ ಒಂದು ತತ್ವ ಇದೆ. ನಮಗೆ ಬೇಕಾದದ್ದು ಬೇಡವಾದದ್ದು ಎರಡೂ ಇವೆ. ಬೇಕಾದುದಕ್ಕಿಂತ ಬೇಡವಾದುದು ಬೇಗ ಬೆಳೆಯಬಲ್ಲುದು. ಬೇಗನೆ ಸಾಯಲಾರದು. ಉದಾಹರಣೆಗೆ ಕಳೆಕಸಗಳನ್ನೇ ನೋಡಬಹುದು. ಕಳೆ – ಕಸಗಳು ಯಾವುದೇ ಬೀಜ ಹಾಕದೆ, ಆರೈಕೆ ಮಾಡದೆ, ಬೆಳೆಗಿಂತ ಮೊದಲೇ ನಳನಳಿಸುತ್ತವೆ. ಉಪಕಾರೀ ಕೀಟಗಳು ಅಲ್ಪ ಆಯುಷಿ. ‘ಬೆಕ್ಕು ಇಲ್ಲದ ಮನೆಯಲ್ಲಿ ಇಲಿಯ ಚೆಲ್ಲಾಟ’ಎಂಬ ಮಾತಿನಂತೆ ಕೀಟಪ್ರಪಂಚದಲ್ಲಿ ಬೆಳೆಹಾನಿ ಮಾಡುವ ಕೀಟಗಳ ಚೆಲ್ಲಾಟ ಹೆಚ್ಚಾಗಿದೆ. ಹಿಂದಿನ ಮೂವತ್ತು ವರ್ಷಗಳಲ್ಲಿ ಮಿತಿಮೀರಿದ ರಾಸಾಯನಿಕ ಗೊಬ್ಬರ, ಕಳೆನಾಶಕ ಮತ್ತು ಕ್ರಿಮಿನಾಶಕ ಹಾಗೂ ಕೀಟನಾಶಕಗಳ ಬಳಕೆ ಮಾಡಿದ್ದರಿಂದ ಅನಾಹುತವಾಗಿದೆ. ಕೀಟಗಳ ಚೆಲ್ಲಾಟ, ರೈತರಿಗೆ ಪ್ರಾಣಸಂಕಟವೆನಿಸಿದೆ.

ಹೆಸರು, ಅಲಸಂದೆ, ಉದ್ದು, ತೊಗರಿ, ಕಡಲೆ, ವಠಾಣಿ ಮತ್ತು ಅವರೆಕಾಯಿಕೊರೆಯುವ ಕೀಟಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತಿಲ್ಲ. ಮೊದಮೊದಲು ಕೇವಲ ಡಿಸಿಎಚ್ ಹತ್ತಿಗೆ ಕಾಯಿಕೊರಕದ ಬಾಧೆ ಆಗುತ್ತಿತ್ತು. ಅದೀಗ ಬೆಂಡೆ, ಬದನೆ, ಟೊಮ್ಯಾಟೋದಂತಹ ತರಕಾರಿಗಳನ್ನು ಮತ್ತು ಮಾವು, ದಾಳಿಂಬೆ, ದ್ರಾಕ್ಷಿ ಮೊದಲಾದ ಹಣ್ಣಿನ ಬೆಳೆಗಳನ್ನು ಬಾಧಿಸುತ್ತದೆ. ಎಲೆಕೋಸು, ಹೂಕೋಸುಗಳೂ ಕೀಟರಾಕ್ಷಸನ ಹಾವಳಿಗೆ ತುತ್ತಾಗಿವೆ. ಕಾಯಿಕೊರಕ ಕೀಟ, ಅದಕ್ಕೆ ‘ಹೀಲಿಯೋಥಿಸ್’ ಎಂದು ಕರೆಯಲಾಗುತ್ತಿದೆ. ಈ ಹೀಲಿಯೋಥಿಸ್ ಕೀಟ ಪ್ರಪಂಚದ ಸಾರ್ವಭೌಮತ್ವ ಪಡೆದಿದೆ. ಎಷ್ಟೇ ಬೆಲೆ ತೆತ್ತು ಸಿಂಪಡಿಸಿದರೂ ಕೀಟ ಸಾಯುತ್ತಿಲ್ಲ. ಹೀಗಾಗಿ ಕೃಷಿರಂಗದ ನೆಮ್ಮದಿ ಹಾಳಾಗಿದೆ.

ಪ್ರಕೃತಿಯಲ್ಲಿ ಒಂದನ್ನೊಂದು ಕೊಂದು ತಿಂದು  ಬದುಕುವುದು ಸಾಮಾನ್ಯ ಸಂಗತಿ. ಅದೇ ರೀತಿ ಕೀಡ ಪ್ರಪಂಚದಲ್ಲೂ ಒಂದನ್ನೊಂದು ಕೊಂದು ತಿಂದು ಬದುಕುತ್ತವೆ. ಇದರಿಂದ ಕೀಟ ಪ್ರಪಂಚದಲ್ಲಿ ಸಮತೋಲನ ಸಾಧ್ಯ. ಇಂದೇನಾಗಿದೆ? ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಒಂದೋ ಕೀಟಗಳು ಕೀಟನಾಶಕಗಳಿಗೆ ಪ್ರತಿರೋಧ ಶಕ್ತಿ ಹೊಂದಿವೆ. ಅಥವಾ ಹೊಂದಿಕೊಂಡಿವೆ. ಹೀಗಾಗಿ ಕೀಟಗಳು ಸಾಯುತ್ತಿಲ್ಲ. ಇನ್ನೊಂದು ವೈರಿ ಕೀಟಗಳನ್ನು ತಿಂದು ಹಾಕುವ ಕೀಟಗಳು ರಾಸಾಯನಿಕಗಳ ವಿಷ ಸಿಂಪರಣೆಯಿಂದ ಬೇಗನೆ ಸಾಯುತ್ತಿವೆ.  ಉಪಕಾರಿ ಕೀಟಗಳ ಸಂತತಿ ಅಪಕಾರಿ ಕೀಟಗಳ ಸಂತತಿಗಿಗಂತ ಅವಸಾನದತ್ತ ಸಾಗಿದೆ. ಈ ಗುಳಿದಿರುವ ದಾರಿ ಎಂದರೆ, ಉಪಕಾರಿ ಕೀಟಗಳ ಸಂತತಿ ಉಳಿಸುವುದು. ಪರತಂತ್ರ ಜೀವಿಗಳನ್ನು ಹೆಚ್ಚಿಸುವುದು.

ಉಪಕಾರಿ ಕೀಟಗಳು

ಉಪಕಾರಿ ಕೀಟಗಳು ಬೆಳೆ ಹಾನಿ ಮಾಡುವ ಕೀಟಗಳನ್ನು ದವಡೆಯಿಂದ ಚುಚ್ಚಿ, ಜೊಲ್ಲು ಸುರಿಸಿ, ಅವುಗಳ ದೇಹ ಭಾಗಗಳನ್ನು ಕರಗಿಸಿ ಜೀವರಸ ಹೀರುತ್ತವೆ. ಪರಭಕ್ಷಕ ಕೀಟಗಳು ಕಾಲು ಮತ್ತು ಬಾಯಿ ಮೂಲಕ ಗಟಟಿಯಾಗಿ ಹಿಡಿದು ಕಾಯಿಕೊರಕ ಕೀಟಗಳನ್ನು ತುಮಡರಿಸಿ ತಿನ್ನುತ್ತವೆ. ಬೆಳೆಯನ್ನು ಬಾಧಿಸಸುವ ನೊಣ, ಸಣ್ಣ ಪತಂಗಗಳು, ಕಂದುಜಿಗಿ ಹುಳ, ಮತ್ತು ಎಲೆಮಡಚುವ ಹುಳಗಳನ್ನು ಪರಭಕ್ಷಕ ಕೀಟಗಳು ಹಾರಾಡುತ್ತಾ ಬೇಟೆಯಾಡುತ್ತವೆ. ಮಿರಿಡ್ ಜಾತಿಯ ತಿಗಣೆಗಳು ಜಿಗಿಹುಳು ಮತ್ತು ಕಾಂಡಕೊರೆಯುವ ಹುಳಗಳನ್ನು ತಿನ್ನುತ್ತವೆ. ಕ್ಯಾರಬಿಡ್ ಎಂಬ ದುಂಬಿ ಜಾತಿಯ ಕೀಟಗಳು ಜಿಗಿಹುಳ, ಕೋರಿಹುಳ ಮತ್ತು ತೆಂಗಿನ ಗಿಡದ ಗರಿ ಕತ್ತರಿಸುವ ಹುಳಗಳನ್ನು ತಿನ್ನುತ್ತವೆ. ಗುಳದಾಳ ಹುಳದ ಮರಿಕೀಟಗಳು ಬಹಳ ಚುರುಕಾಗುತ್ತವೆ. ಬೆಳೆಯನ್ನು ಬಾಧಿಸುವ ಹೇನು, ಹಿಟ್ಟು-ತಿಗಣೆ, ಬಿಳಿನೊಣ, ನುಶಿ ಮತ್ತು ಜಿಗಿಹುಳು ಹಾಗೂ ಸುಳಿನೊಣಗಳನ್ನು ಎಗರಿಸಿ ತಿನ್ನುತ್ತವೆ. ವಿನಾಶಕಾರಿ ಕೀಟಗಳ ನಾಶಕ್ಕೆ ಉಪಕಾರಿ ಕೀಟಗಳ ಸಂಖ್ಯೆ – ಸಂತತಿ ಹೆಚ್ಚಿಸಬೇಕಾಗಿದೆ.

ಪರತಂತ್ರ ಜೀವಿಗಳು:

ಸ್ಥಳೀಯ ಕೀಟಗಳ ನಿಯಂತ್ರಣಕ್ಕೆ ದೂರದ ಅಮೇರಿಕಾದ ಜೈವಿಕ ಕೀಟ ಹತೋಟಿ ತಂತ್ರಜ್ಞಾನದ ಅಗತ್ಯ ಇರಲಾರದು. ಭಕ್ಷಕ, ಪರೋಪಜೀವಿ ಮತ್ತು ರೋಗಾಣುಗಳ ಮೂಲಕ ಕೀಟಗಳ ನಿಯಂತ್ರಣ ಮಾಡುವುದು ಒಳಿತು. ಪರಭಕ್ಷಕ ಅಥವಾ ಉಪಕಾರಿ ಕೀಟಗಳನ್ನು ಹೆಚ್ಚಿಸುವುದರ ಮೂಲಕ ಕೀಟ ಪ್ರಪಂಚದಲ್ಲಾದ ಅಸಮತೋಲನ ನಿವಾರಣೆ ಆಗಬಲ್ಲುದು. ಸಮಗ್ರ ಪೀಡೆ ನಿಯಂತ್ರಣ ಶ್ರಮ ಹಾಗೂ ಜೈವಿಕ ಪೀಡೆ ನಿಯಂತ್ರಣ ಕ್ರಮಗಳು ಅನಿವಾರ್ಯ ಎನಿಸಿವೆ. ಏನಿದು ಪರಂತ್ರ ಜೀವಿ? ಪ್ರಯೋಗಾಲಯಗಳಲ್ಲಿ ಪರತಂತ್ರಜೀವಿಗಳ ಮೊಟ್ಟೆ ಉತ್ಪಾದಿಸುವುದು. ಮೊದಲನೆ ಹಂತ, ಎರಡನೆ ಹಂತವೆಂದರೆ ಸಾವಿರಾರು ತತ್ತಿಗಳುಳ್ಳ ಕಾರ್ಡುಗಳನ್ನು ರೈತರಿಗೆ ಕೊಡುವುದು. ರೈತರು ಅದನ್ನು ಒಯ್ದು ಆಯಾ ಬೆಳೆಗಳಿಗೆ ಬರುವ ರಸಹೀರುವ ಮತ್ತು ಕಾಯಿಕೊರಕ ಕೀಟಗಳ ಬಾಧೆ ತಡೆಯಲು ಹೊಲದ ಬೆಳೆಯ ಗಿಡ ಅಥವಾ ದಂಟಿಗೆ ಇಲ್ಲವೇ ಕೋಲು ನಡೆಸಿ ಕಟ್ಟಬೇಕು. ಹೀಗೆ ಕಟ್ಟಿದ ತತ್ತಿಗಳು ಎರಡು ಮೂರುದಿನಗಳಲ್ಲಿ ಮರಿಗಳಾಗಿ ಬೆಳವಣಿಗೆ ಹೊಂದುತ್ತವೆ. ಬೆಳೆದ ಕೀಟಗಳು ಬೆಳೆಗಳನ್ನು ಬಾಧಿಸುವ ಕೀಟಗಳ ಸಂತತಿಯನ್ನು ಸರ್ವನಾಶ ಮಾಡುತ್ತವೆ. ಅದ್ಹೇಗೆ ಸಾಧ್ಯ? ಬೆಳೆಯನ್ನು ಬಾಧಿಸುವ (ರಸ ಹೀರುವ ಮತ್ತು ಕಾಯಿಕೊರಕದಂಥ) ಕೀಟಗಳ ತತ್ತಿಗಳನ್ನು ಚುಚ್ಚಿ ನಾಶ ಮಾಡುತ್ತವೆ. ಆಗ ಅಪಕಾರಿ ಕೀಟಗಳ ಸಂತತಿ ಹೆಚ್ಚಾಗಲಾರದು.

ಪರತಂತ್ರಜೀವಿಗಳಿಂದ ಉತ್ಪತ್ತಿಯಾದ ಕೀಟಗಳು ಕಾಯಿಕೊರಕ ಕೀಟಗಳನ್ನು ಸಾಯಿಸಬಲ್ಲವು ಆಗಿವೆ. ಇದರಿಂದ ಉಪಕಾರಿ ಕೀಟಗಳ ಸಂತತಿ ಹೆಚ್ಚಾಗುವುದು. ಬೆಳೆಗಳು ಕೀಟದ ಬಾಧೆಯಿಂದ ಮುಕ್ತ ಆಗುವವು. ರಾಸಾಯನಿಕಗಳ ಬಳಕೆಯ ದುಷ್ಪರಿಣಾಮಗಳು ಇಲ್ಲದಾಗುವವು. ಕಬ್ಬಿಗೆ ಬರುವ ಬಿಳಿ ಉಣ್ಣೆ (ಕೀಟ) ಗಳ ಹತೋಟಿಗೆ, ಟೊಮ್ಯಾಟೋ ಬದನೆ, ಹತ್ತಿ ಮತ್ತು ಕಡಲೆ ಬೆಳೆಯ ಕೀಟ ಹತೋಟಿಗೆ ಪರತಂತ್ರ ಜೀವಿಗಳ ತತ್ತಿಯ ಕಾರ್ಡುಗಳನ್ನು ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ.

ಪರತಂತ್ರ ಜೀವಿಗಳ ಪ್ರಯೋಗಾಲಯಗಳಯ ಎಲ್ಲಿವೆ?

ಈ ಪರತಂತ್ರಜೀವಿ ಪ್ರಯೋಗಾಲಯಗಳು ನಮ್ಮ ರಾಜ್ಯದಲ್ಲೂ ಸ್ಥಾಪನೆಗೊಂಡು ಕಾರ್ಯನಿರತವಾಗಿವೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಹಾಗೂ ಮಂಡ್ಯದಲ್ಲೂ ಪ್ರಯೋಗಶಾಲೆಗಳಿವೆ. ಈ ಪ್ರಯೋಗಶಾಲೆಗಳಲ್ಲಿ ಕ್ರೈಸೋಪರ್ಲಾ ಎಂಬ ಕೀಟದ ತತ್ತಿಗಳನ್ನು ರೈತರಿಗೆ ಅತಿ ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡಲಾಗುತ್ತಿದೆ. ಅಂಚೆ ಮೂಲಕವೂ ತರಿಸಿಕೊಳ್ಳಬಹುದಾಗಿದೆ. ಇತ್ತೀಚೆಗೆ ಧಾರವಾಡ, ಗಂಗಾವತಿ, ಗುಲಬರ್ಗಾ ಮತ್ತು ಡಾವಣಗೇರಿಗಳಲ್ಲಿಯೂ ಪರತಂತ್ರಜೀವಿ ಪ್ರಯೋಗಶಾಲೆಗಳು ಕಾರ್ಯನಿರತವಾಗಿದ್ದು ರೈತರು ಇವುಗಳ ಪ್ರಯೋಜನ ಪಡೆಯಬಹುದಾಗಿದೆ.

ಕೇವಲ ಬಿಟಿ ತಂತ್ರಜ್ಞಾನವೊಂದೇ ಕೀಟ ಹತೋಟಿಗೆ ಪರ್ಯಾಯ ಕ್ರಮ ಎಂದು ಪ್ರಚಾರ ಪಡೆಯುತ್ತಿರುವ ಸಂಸರ್ಭದಲ್ಲಿ ಪರತಂತ್ರಜೀವಿ ಪ್ರಯೋಗಾಲಯಗಳತ್ತ ರೈತರ ಗಮನ ಸೆಳೆಯಬೇಕಿದೆ.