ಹತ್ತು ಗಂಟೆಗೆ ಬರುತ್ತೇನೆಂದು ಹೇಳಿದ್ದ ವೊಲೋಜ, ಹನ್ನೆರಡು ಗಂಟೆಯಾದರೂ ಬರಲಿಲ್ಲ. ರೂಮಿನ ಕಿಟಕಿ ಗಾಜಿನಾಚೆಗೆ ಚಾಚಿಕೊಂಡ ಎತ್ತರವಾದ ಮನೆಗಳನ್ನು, ಬಿಸಿಲು ಸುರಿಯುವ ಆಕಾಶವನ್ನು ನೋಡುತ್ತ ಯಾರನ್ನಾದರೂ ಕಾಯುವುದು ಬೇಸರದ ಕೆಲಸ. ಇನ್ನು ಚುರುಗುಟ್ಟುವ ಹೊಟ್ಟೆಗೆ ಇಲ್ಲೇ  ಏನಾದರೂ ಕಾಣಿಸಬೇಕೆಂದು, ಕೆಳಗಿನ ಕೆಫೆಗೆ ಹೋಗಿ ಕೂತು, ನಾನು ನನ್ನ ಸ್ನೇಹಿತರಿಂದ ಬರೆಯಿಸಿಕೊಂಡಿದ್ದ ನನ್ನ ಶಾಖಾಹಾರದ ಪಟ್ಟಿಯನ್ನು ಬಡಿಸುವಾಕೆಯ ಮುಂದೆ ಒಪ್ಪಿಸಿದೆ. ಈ ದಿನ ‘ರೀಸ್’ – ಅನ್ನ – ದೊರೆಯುವುದಿಲ್ಲವೆಂದು ತಿಳಿಯಿತು. ಅದರ ಬದಲು ಬ್ರೆಡ್ಡು ಇತ್ಯಾದಿಗಳನ್ನು ತರಿಸಿ ತಿನ್ನತೊಡಗಿದೆ. ಒಂದು ಗಂಟೆಯ  ವೇಳೆಗೆ ವೊಲೋಜ ಬಂದ. ‘ನಿಮಗೆ ಲೆನಿನ್‌ಗ್ರಾಡ್ ಇತ್ಯಾದಿ ಸ್ಥಳಗಳಿಗೆ ಹೋಗುವ ಬಗ್ಗೆ ಏರ್ಪಾಡು ಮಾಡಲು ವಿದ್ಯಾಸಚಿವ ಶಾಖೆಗೆ ಹೋಗಿದ್ದೆ. ಅದಕ್ಕೇ ತಡವಾಯಿತು’ ಎಂದು ವರದಿ ಒಪ್ಪಿಸಿದ. ನಾನೇನೂ ಮಾತನಾಡದೆ ತೆಪ್ಪಗಾದೆ.

ಎರಡೂವರೆಯ ವೇಳೆಗೆ ಕಾರು ಬಂತು. ‘ಇನ್‌ಸ್ಟಿಟ್ಯೂಟ್ ಆಫ್ ಪೀಪಲ್ಸ್ ಆಫ್ ಏಷ್ಯಾ’(Institute of Peoples of Asia :  Academy of Sciences) ದಲ್ಲಿ ಉಪನ್ಯಾಸ ಮಾಡುವ ಕಾರ‍್ಯಕ್ರಮ ಮೊದಲೇ ನಿಗದಿಯಾಗಿತ್ತು. ಇದೊಂದು ಬಹು ದೊಡ್ಡ ಸಂಸ್ಥೆ. ಮೂರು ಗಂಟೆಗೆ ಒಂದು ಕೊಠಡಿಗೆ ಕರೆದೊಯ್ಯಲಾಯಿತು. Realism in Indian Poetics(ಭಾರತೀಯ ಕಾವ್ಯಮೀಮಾಂಸೆಯಲ್ಲಿ ವಾಸ್ತವವಾದ) ಎಂಬುದು ನಾನು ಸಿದ್ಧಪಡಿಸಿಕೊಂಡು ಹೋದ ಉಪನ್ಯಾಸ. ಈ ಸಭೆ ಕೂಡ ನನ್ನನ್ನು ಮಾಸ್ಕೋದಲ್ಲಿ ಒಪ್ಪಿಕೊಂಡ ಸಂಸ್ಥೆಯ ಸೂಚನೆಯ ಮೇರೆಗೆ ಆತುರದಲ್ಲಿ ಕರೆದದ್ದೆಂದು ತೋರಿತು. ಇಂಗ್ಲಿಷ್ ಬಲ್ಲ ಕೆಲವರನ್ನು – ಅಕ್ಯಾಡೆಮಿ ಆಫ್ ಸೈನ್ಸಸ್ ಸಂಸ್ಥೆಯ (ಇಲ್ಲಿScience ಎಂಬುದು ವಿಶಾಲಾರ್ಥದಲ್ಲಿ ಎಲ್ಲ ಅಧ್ಯಯನಕ್ಕೂ ಸೇರಿಕೊಂಡು ಹೇಳುವ ಹೆಸರು) ಅಧ್ಯಾಪಕ ವಿದ್ವಾಂಸರನ್ನು ಒಳಗೊಂಡ ಪರಿಮಿತ ಸಭೆ. ನನ್ನ ಉಪನ್ಯಾಸ ಮುಗಿದ ಮೇಲೆ ಅವರಲ್ಲಿ ಕೆಲವರು ಕೇಳಿದ ಪ್ರಶ್ನೆಗಳಿಗೂ, ನಾನು ಓದಿದ ಉಪನ್ಯಾಸಕ್ಕೂ ಏನೇನೂ ಸಂಬಂಧವಿರಲಿಲ್ಲ. ಅವರು ಕೇಳಿದ್ದು, ಕನ್ನಡ ಸಾಹಿತ್ಯದ ಮೇಲೆ ರಷ್ಯನ್ ಸಾಹಿತ್ಯದ ಪ್ರಭಾವ ಎಷ್ಟಾಗಿದೆ, ಏನೇನು ರಷ್ಯನ್ ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ, ಎಂಬ ಪ್ರಶ್ನೆಗಳು !

ಒಂದು ವಿಷಯ ನನ್ನ ಅನುಭವಕ್ಕೆ ಇಷ್ಟು ದಿನಗಳಲ್ಲಿ ಬಂದಿತು : ನಾನು ಸಂಧಿಸಿದ ಯಾವ ಪ್ರೊಫೆಸರ್ ಆಗಲಿ, ಉಪನ್ಯಾಸದ ಸಭೆಗಳಲ್ಲಿ  ಹಾಜರಿದ್ದವರೇ ಆಗಲಿ, ಕಡೆಗೆ ಸದಾ ನನ್ನ ಜತೆಗಿರುತ್ತಿದ್ದ ದ್ವಿಭಾಷಿ ವೊಲೋಜನಾಗಲಿ, ಕೇವಲ ಕುತೂಹಲಕ್ಕಾದರೂ ಇಂಡಿಯಾದ ಜನಜೀವನದ ಬಗೆಗಾಗಲಿ, ಸಂಸ್ಕೃತಿಯ ಬಗೆಗಾಗಲಿ ಎಂದೂ ಪ್ರಶ್ನೆಗಳನ್ನು  ಕೇಳುತ್ತಲೇ ಇರಲಿಲ್ಲ. ಈ ಜನ ತಾವು ಬೇರೆ ದೇಶದಿಂದ ಕಲಿಯಬೇಕಾದದ್ದೇನೂ ಇಲ್ಲವೇ ಇಲ್ಲವೆಂಬಂತೆ, ತಮ್ಮಿಂದ ಇತರರು ಕಲಿಯುವುದು ವಿಶೇಷವಾಗಿರುವಂತೆ ತಿಳಿದಿದ್ದಾರೋ ಏನೋ ; ಅಥವಾ ಐವತ್ತು ವರ್ಷಗಳ ಕಾಲ ಅತ್ತಿತ್ತ ನೋಡದೆ, ಪ್ರತ್ಯೇಕತೆಯ ಗೋಡೆಯ ನಡುವೆ, ಕೇವಲ ತಮ್ಮ ರಾಷ್ಟ್ರ ನಿರ್ಮಾಣವೊಂದರಲ್ಲಿಯೆ ತೊಡಗಿದ್ದರ ಪರಿಣಾಮವೋ !

ಈ ಜನ ಬೇರೆ ದೇಶಗಳ ಭಾಷೆಗಳನ್ನು ಕಲಿಯುವುದರಲ್ಲಿ ಎಷ್ಟೊಂದು ಆಸಕ್ತಿವಹಿಸುತ್ತಾರಲ್ಲ – ಅದರ ಅಂತರಾರ್ಥವೇನಿರಬಹುದು ? ತಾವು  ಬೇರೆಯ ಭಾಷೆಗಳನ್ನು ಕಲಿಯುವುದು, ಆಯಾ ಭಾಷೆಗಳ ಮೂಲಕ ಆ ದೇಶದ ಸಾಹಿತ್ಯ ಸಂಸ್ಕೃತಿಗಳನ್ನು ತಿಳಿಯುವುದಕ್ಕಾಗಿ ಎಂದು ಊಹಿಸಲು ಸಾಕಷ್ಟು  ಆಧಾರಗಳೆ ಇಲ್ಲ. ಬದಲು ತಮ್ಮ ದೇಶದ ರಾಜಕೀಯ ತತ್ವಗಳನ್ನು, ತಾವು ಕಲಿತ ಭಾಷೆಯ ಕಾಲುವೆಗಳ ಮೂಲಕ ಹೇಗೆ ರವಾನಿಸಬಹುದು ಎಂಬ ಉದ್ದೇಶವೇ ಪ್ರಧಾನವಾಗಿದೆಯೇನೋ. ಅಲ್ಲದೆ ಅವರು ಕಲಿಕೆಗೆ ಭಾಷೆಗಳನ್ನು ಆರಿಸಿಕೊಳ್ಳುವಾಗ ಕೂಡಾ, ಆಯಾ ಭಾಷೆಯನ್ನಾಡುವ ಜನ ಬದುಕುವ ಪ್ರದೇಶಗಳಲ್ಲಿ ಎಷ್ಟರ ಮಟ್ಟಿಗೆ ಕಮ್ಯೂನಿಸಂ ಪ್ರಭಾವ ಇದೆ ಎಂಬುದನ್ನೇನಾದರೂ, ಗಮನಿಸಿರುತ್ತಾರೋ ಎಂಬ ಗುಮಾನಿ ನನಗೆ!

ಕ್ರೆಮ್ಲಿನ್ನಿನೊಳಗಿರುವ ಆರ್ಮರಿಯನ್ನು ನೋಡಬೇಕೆಂದು ಮೊದಲೇ ಟಿಕೇಟು ತೆಗೆದಿರಿಸಿದೆವು. ಹನ್ನೊಂದೂವರೆಗೆ ಒಂದು ಸಲ, ಎರಡೂವರೆಗೆ ಒಂದು ಸಲ, ಮಾತ್ರ ಪ್ರವೇಶ, ನಮಗೆ ಸಿಕ್ಕ ಟಿಕೆಟ್ಟಿನ ಪ್ರಕಾರ ನಾವು ಮರು ದಿನ ಎರಡೂವರೆ  ಗಂಟೆಗೆ ಹೋಗಬೇಕು.

ಈ ದಿನ ಬೆಳಗಿನಿಂದ ಆದ ಕಾಲಹರಣ ; ಮತ್ತು  ನಿರುತ್ಸಾಹದ ಉಪನ್ಯಾಸದ ಕಾರ್ಯಕ್ರಮ – ಇವುಗಳಿಂದಾಗಿ ಬೇಸರ ಬಂದಿತ್ತು. ಹೀಗಾಗಿ ಐದು ಗಂಟೆಯ ವೇಳೆಗೆ ನನ್ನನ್ನು ಮಹಾದೇವಯ್ಯನವರ ಮನೆಗೆ ಬಿಡಲು ನನ್ನ ದ್ವಿಭಾಷಿಗೆ ಹೇಳಿದೆ. ಕಾರು ಸೀದಾ ಮಹಾದೇವಯ್ಯನವರ ಮನೆಗೆ ಮುಟ್ಟಿಸಿತು. ಬಿಸಿಬಿಸಿಯಾದ ನಮ್ಮೂರಿನ ಕಾಫಿ ಕುಡಿದು, ಅವರೊಡನೆ ಊಟದ ವೇಳೆಯ ತನಕ ಹರಟೆ ಹೊಡೆದ ಮೇಲೆ ನಾನು ಗೆಲುವಾದೆ.

ಇಲ್ಲಿನ ಗಂಡು ಹೆಣ್ಣಿನ ಬದುಕಿನ ಬಗೆಗೆ ಕೆಲವು ಸ್ವಾರಸ್ಯವಾದ ಅಂಶಗಳು ತಿಳಿದವು: ಹದಿನೆಂಟು ವರ್ಷ ವಯಸ್ಸಾದ ಕೂಡಲೆ ಹೆಣ್ಣು ತನ್ನ ಖಾಸಗಿ ಜೀವನದ ವಿಚಾರದಲ್ಲಿ ಸ್ವತಂತ್ರಳು, ತನ್ನ ಕಾಮ-ಪ್ರೇಮ-ಮದುವೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವವಳು ಅವಳೇ. ಮದುವೆಗೆ ಮುನ್ನ ಸಖ್ಯಜೀವನ ಸಾಕಷ್ಟಿದೆ. ಅಂತರ್ಜಾತೀಯ ವಿವಾಹ ಎಂಬ ಮಾತಿಗೆ ಇಲ್ಲಿ ಅರ್ಥವೇ ಇಲ್ಲ ! ಏಕೆಂದರೆ ಜಾತಿಯೇ ಇಲ್ಲ ! ಪಂಪನೆಂದಂತೆ ‘ಮನುಷ್ಯಜಾತಿ ತಾನೊಂದೆ ವಲಂ’. ಮದುವೆ ಸರಳವಾಗಿ, ಮದುವೆ ಕಚೇರಿಯಲ್ಲಿ ರುಜುಹಾಕಿ ಉಂಗುರಗಳನ್ನು ಬದಲಿಸಿ ಕೊಳ್ಳುವುದರಲ್ಲಿ ಮುಗಿದೇ ಹೋಗುತ್ತದೆ. ಕೆಲವರು ಚರ್ಚುಗಳಿಗೆ ಹೋಗಿ ಮಾಡಿಕೊಳ್ಳುತ್ತೇವೆಂದರೆ ಆಕ್ಷೇಪಣೆಯೇನಿಲ್ಲ ; ಹಾಗೆ ನೋಡಿದರೆ ಯಾರೂ – ಹೊಸ ಜನಾಂಗದ ತರುಣರು – ಚರ್ಚಿಗೆ ಹೋಗುವುದಿಲ್ಲ. ಇದ್ದಬದ್ದ ಚರ್ಚುಗಳನ್ನೆಲ್ಲಾ ವಸ್ತು ಪ್ರದರ್ಶನಾಲಯಗಳನ್ನಾಗಿ ಮಾಡಿದ್ದಾರೆ. ನಾಲ್ಕುಜನ ಮುದುಕ – ತದುಕರು ಹೋಗಿಬರಲು ಕೆಲವೇ ಚರ್ಚುಗಳನ್ನು ಉಳಿಸಿದ್ದಾರೆ. ಮದುವೆಗಳೆಲ್ಲ ಬಹುಮಟ್ಟಿಗೆ ಪ್ರೇಮ ವಿವಾಹಗಳು. ಗರ್ಭಪಾತಕ್ಕೆ ಕಾನೂನಿನ ಸಮ್ಮತಿಯಿದೆ. ಒಂದು ವೇಳೆ ಮದುವೆಗೆ ಮೊದಲು ಮಗುವಾದರೆ ಅದೇನೂ ಅಪರಾಧವಲ್ಲ ; ಅಂಥವಳು, ತಾನು ಪತಿತೆ ಎಂದು ಪಶ್ಚಾತ್ತಾಪಪಡುವ  ಅಗತ್ಯವಿಲ್ಲ. ಆ ಮಗುವಿನ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ. ತಾಯಿಯಾದಳು ಇಷ್ಟಪಟ್ಟರೆ ತಾನೇ ಸಾಕಿಕೊಳ್ಳಬಹುದು; ಅಥವಾ ಸಂರಕ್ಷಣಾಲಯಕ್ಕೆ ಒಪ್ಪಿಸಬಹುದು. ಒಬ್ಬ ತಂದೆಯ ಹೆಸರಿನಲ್ಲಿ ಮಗು ದಾಖಲಾಗುತ್ತದೆ.

ದಾಂಪತ್ಯ ಜೀವನ ಸಾಮಾನ್ಯವಾಗಿ, ಒಂದೇ ಕಡೆ ಕೆಲಸ ಮಾಡುವವರ ಜೋಡಿಯಾಗಿರುತ್ತದೆ. ವಿವಾಹ ವಿಚ್ಛೇದನಗಳು ಆಗುತ್ತಲೇ ಇರುತ್ತವೆ. ವಿವಾಹವಾಗಿದ್ದರೆ ಹೆಣ್ಣಿನ ಬಲಗೈಯಲ್ಲಿ ಉಂಗುರವಿರುತ್ತದೆ ; ವಿವಾಹ ವಿಚ್ಛೇದನವಾಗಿದ್ದರೆ ಎಡಗೈಯಲ್ಲಿ ಉಂಗುರವಿರುತ್ತದೆ. ಮದುವೆ ಮಾಡಿಕೊಳ್ಳದೆಯೂ ಗಂಡಹೆಂಡಿರಂತೆ ಜೀವನ ನಡೆಸಲೂ ಇಲ್ಲಿ ಅವಕಾಶವಿದೆ. ಬಹು ಮಟ್ಟಿಗೆ ತಂದೆತಾಯಂದಿರು ಹೆಣ್ಣು ಮಗುವಾಗಲಿ ಎಂದು ಹಾರೈಸುತ್ತಾರಂತೆ.

ರಷ್ಯಾ ದೇಶದಲ್ಲಿ, ಅದರಲ್ಲೂ ರಷ್ಯದ ಗಣರಾಜ್ಯದಲ್ಲಿ ಧರ್ಮವೆಂಬುದು, ದೇವರೆಂಬುದು ಬಹಿಷ್ಕೃತ. ಚರ್ಚುಗಳನ್ನೇ ಇಲ್ಲದಂತೆ ಮಾಡಿ, ದೇವರು, ಧರ್ಮ, ಅದಕ್ಕೆ ಅಂಟಿಕೊಳ್ಳುವ ಸಹಜವಾದ ಅನೇಕ ವಿಧಿಗಳನ್ನೂ, ನಂಬುಗೆಗಳನ್ನೂ ನಿರಾಕರಿಸಿದ್ದಾರೆ. ಯಾರಾದರು ಚರ್ಚಿಗೆ ಹೋಗುವುದನ್ನು ಕಂಡರೆ, ಅಂಥವರನ್ನು ಪಾರ್ಟಿಯಿಂದ ಹೊರಗೆ ಹಾಕಲಾಗುತ್ತದೆ. ವಿಧಿ – ಕರ್ಮ – ದೈವ ಇತ್ಯಾದಿಗಳ ಮೇಲೆ ಮನುಷ್ಯನ ಬದುಕು ಇಲ್ಲಿ ಅವಲಂಬಿಸಿಲ್ಲ. ಹಾಗೆ ನೋಡಿದರೆ ಮನುಷ್ಯ, ತಾನು ಮನುಷ್ಯನಾಗಿ ಬದುಕುವುದಕ್ಕೆ ಇವುಗಳಾವುವೂ ಅವಶ್ಯಕವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಈ ಜನ. ಪಾಪ – ಪುಣ್ಯ, ಸ್ವರ್ಗ – ನರಕಗಳ ಕಲ್ಪನೆಯಿಲ್ಲದೆ ವಾಸ್ತವಜೀವನವನ್ನು, ಅದಿದ್ದಂತೆಯೆ ಒಪ್ಪಿಕೊಂಡು, ಜೀವನದ ಬಗ್ಗೆ ಶ್ರದ್ಧೆ, ರಾಷ್ಟ್ರದ ಸಂಕಲ್ಪದಲ್ಲಿ ನಿಷ್ಠೆ, ಪ್ರಾಮಾಣಿಕವಾದ ದುಡಿಮೆ – ಇವುಗಳಿಂದ ಜನ ಸುಖವಾಗಿ ಬದುಕಬಹುದು. ಇದಾವುದೂ ಇಲ್ಲದ ಬರೀ ವೇದಾಂತದ ಮಾತನ್ನಾಡುತ್ತಾ ಜನರನ್ನು ಹಾದಿಗೆಡಿಸುವ, ಅನೇಕ ವೇಷಾಂತರಗಳಲ್ಲಿ ಬದುಕುವ, ಸಾಧುಸಂತಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಧಾರ್ಮಿಕ ಪರಂಪರೆಯಿಂದ ಏನು ಪ್ರಯೋಜನ ? ಬದುಕಿಗೆ ಇಳಿಯಲಾರದ ಅತಿ ಆದರ್ಶ ಕಲ್ಪನೆಗಳಿಗಿಂತ, ಅವುಗಳನ್ನು ಇಳಿಸಲಾರದ ಸಾಧಕರ ಸಂತೆಗಿಂತ, ಅದಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಇರುವ ಬದುಕನ್ನು ಉತ್ತಮಗೊಳಿಸುವ ವಾಸ್ತವ ಪ್ರಜ್ಞೆ ನಿಜಕ್ಕೂ ದೊಡ್ಡದು. ಆದರೆ ಯಾವುದೋ ಒಂದು ನಂಬಿಕೆಯ ಬಲವಿಲ್ಲದೆ, ಜಗತ್ತಿನ ಯಾವ ಜನವೂ ಬದುಕುವುದು ಕಷ್ಟ. ಅದಕ್ಕಾಗಿ ಧರ್ಮ ದೇವರು ಇಂಥ ಯಾವುದಾದರೂ ಒಂದು ಅವಲಂಬನೆ ಬೇಕು – ಎಂಬ ಮಾತೊಂದಿದೆ. ಈ ಜನಕ್ಕೆ ಹಿಂದಿನ ಧರ್ಮಶ್ರದ್ಧೆಯ ಸ್ಥಾನದಲ್ಲಿ ರಾಷ್ಟ್ರಪ್ರಜ್ಞೆಯನ್ನು ಇಡಲು ಪ್ರಯತ್ನ ನಡೆದಿದೆ. ತಾನು ಇಡೀ ದೇಶಕ್ಕೆ ಸಂಬಂಧಿಸಿದವನು ; ತಾನೇನಿದ್ದರೂ ಇದರ ಒಂದು ಉಪಕರಣ ಮಾತ್ರ -ಎನ್ನುವ ಭಾವನೆಯನ್ನು ಐವತ್ತು ವರ್ಷಗಳಲ್ಲಿ ಈ ಸರ್ಕಾರ ಜನತೆಯಲ್ಲಿ ರೂಢಿಸಲು ಪ್ರಯತ್ನಪಟ್ಟಿದೆ. ಆದರೆ ಮನುಷ್ಯ ಸ್ವಭಾವಕ್ಕೆ ನನ್ನದು ತನ್ನದು ಎನ್ನುವುದಿಲ್ಲದೆ ಜೀವನದಲ್ಲಿ ರುಚಿ ಕಾಣದು. ಕಷ್ಟ – ಸಂಕಟ ಸಮಯದಲ್ಲಿ, ತನ್ನಿಂದಾಚೆಗೆ ಯಾವುದೋ ಚೈತನ್ಯವಿದೆ, ಅದರಲ್ಲಿ ತಾನು ಮರೆಹೋಗಬೇಕು ಎಂಬ ಭಾವನೆಯಿಂದ ಬರುವ ಸಮಾಧಾನದ ಅಗತ್ಯವಿದೆ. ಈ ಎರಡೂ ಇಲ್ಲದ ಮೇಲೆ ಬದುಕಿನಲ್ಲಿ ಏನು ಉತ್ಸಾಹವಿದೆ ? ಈ ರಾಷ್ಟ್ರವೆಂಬ ಮಹಾಯಂತ್ರದ ಯಾವುದೋ ಒಂದು ಭಾಗವಾಗಿ ದುಡಿದು ದುಡಿದು ಸವೆಯುವುದಷ್ಟೆ ಜೀವನವೆ – ಎಂಬ ನಿರಾಸೆಯ ಭಾವನೆ ಈ ಜನಕ್ಕೆ ಬಂದಿಲ್ಲ ಎಂದೇನೂ ನನಗೆ ಅನ್ನಿಸಿಲ್ಲ. ಈ ಜನದ ಬಿಗಿದ ತುಟಿಗಳನ್ನು, ಒಂದು ರೀತಿಯ ನಿರ್ವೇದದ ಮುಖಗಳನ್ನು ನೋಡಿದರೆ ಗೊತ್ತಾಗುತ್ತದೆ. ಈಗೀಗ ಜನಕ್ಕೆ ಸ್ವಂತ ಮನೆಗಳನ್ನು ಕೊಳ್ಳಲು ಸರ್ಕಾರ ಸಾಲ ಕೊಡುತ್ತಿದೆಯಂತೆ; ಬೃಹತ್ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ರೈತರಿಗೆ, ತಮ್ಮ ಮನೆಯ ಸುತ್ತ ಸ್ವಂತಕ್ಕೆಂದು ಒಂದಷ್ಟು ಜಮೀನನ್ನೂ ಕೊಡಲಾಗುತ್ತಿದೆಯಂತೆ. ಅದರಲ್ಲಿ ಅವರು ತರಕಾರಿಯನ್ನು ಹಣ್ಣು ಹಂಪಲುಗಳನ್ನು ಬೆಳೆದು, ನಗರಕ್ಕೆ ತಂದು ಮಾರಾಟ ಮಾಡಿ ಸ್ವಂತ ಹಣವೊಂದಷ್ಟನ್ನು ಕೂಡಿಡಲು ಅವಕಾಶ ಕಲ್ಪಿಸಲಾಗಿದೆಯಂತೆ. ಇದು ಬದಲಾಗುತ್ತಿರುವ ರಷ್ಯದ ಧೋರಣೆಯ ಬಹು ಮುಖ್ಯವಾದ ಒಂದು ಅಂಶವೆಂದು ಕಾಣುತ್ತದೆ. ಈ ಜನಕ್ಕೆ ದೇವರಿಲ್ಲದ ಕೊರತೆಯನ್ನು ಲೆನಿನ್ ತುಂಬುತ್ತಿದ್ದಾನೆಂದು ತೋರುತ್ತದೆ. ಎಲ್ಲೆಲ್ಲಿ ನೋಡಿದರೂ ನಗರಗಳಲ್ಲಿ ಗ್ರಾಮಾಂತರದ ಹೆದ್ದಾರಿಗಳಲ್ಲಿ ಲೆನಿನ್ನನ ಭಾವಚಿತ್ರ ; ಲೆನಿನ್ನನ ಶಿಲಾವಿಗ್ರಹಗಳು; ಅಲ್ಲಲ್ಲಿ ಲೆನಿನ್ನನ ಮಹಾವಾಕ್ಯಗಳು; ಕಮ್ಯುನಿಸಂ ಚಿರಾಯುವಾಗಲಿ ಎಂಬ ಹಲಗೆಗಳು ಕಾಣುತ್ತವೆ. ಹೀಗೆ ಲೆನಿನ್ನನ ಮೇಲಿನ ‘ಭಕ್ತಿಪಂಥ’; ಲೆನಿನ್ನನ ಮಹಾವಾಕ್ಯಗಳ ‘ಮಂತ್ರ’; ಅಲ್ಲದೆ, ಸಾಕ್ಷಾತ್ತಾಗಿ ಲೆನಿನ್ನನ ಶವವನ್ನು ಇರಿಸಿರುವ ಕೆಂಪುಚೌಕದ ಶವಾಲಯವೇ ರಷ್ಯಾ ದೇಶದ ಜನರ ಕಾಶಿ.

ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟವಾಗಿದೆ ; ಈ ದೇಶದ ಜನ ಐವತ್ತು ವರ್ಷಗಳ ಕಾಲ ಅವಿಶ್ರಾಂತವಾಗಿ ದುಡಿದು ನಡೆಸಿರುವ ಸಾಧನೆ ಮಹತ್ತಾದದ್ದು. ನಾನಿದ್ದಷ್ಟು ದಿನವೂ ಈ ನಗರದಲ್ಲಿ ಒಬ್ಬ ಭಿಕ್ಷುಕನೂ ಕಾಣಲಿಲ್ಲ ; ಸದ್ಯಕ್ಕೆ ಇರುವುದು ಸಾಲದು,  ಇನ್ನಷ್ಟು ಇದ್ದರೆ ಬೇಕಾಗಿತ್ತು ಎಂಬ ಅತೃಪ್ತಿ ಜನರಲ್ಲಿರಬಹುದೆ ಹೊರತು,  ಹಸಿವಿನಿಂದ ನರಳುವ ಸ್ಥಿತಿಯಲ್ಲಿ ಯಾರೂ ಬದುಕುತ್ತಿಲ್ಲ. ತಲೆಯ ಮೇಲೊಂದು ಸೂರಿಲ್ಲದೆ ಬೀದಿಯಲ್ಲಿ ಯಾರೂ ಮಲಗುವ ಸ್ಥಿತಿ ಇಲ್ಲ. ವಿದ್ಯಾಭ್ಯಾಸ ಉಚಿತ ; ವಾಸಕ್ಕೆ ಮನೆ ; ಉದ್ಯೋಗದ ಭರವಸೆ ; ವಯಸ್ಸಾದರೆ ನೋಡಿಕೊಳ್ಳುವ ಏರ್ಪಾಡುಗಳು;  ರೋಗಿಗಳನ್ನೂ, ಅಂಗವಿಕಲರನ್ನೂ ನೋಡಿಕೊಳ್ಳುವ ವ್ಯವಸ್ಥೆ ಬೇರೆ ಇದೆ. ಇದಕ್ಕಿಂತ ಇನ್ನೇನು ಬೇಕು ? ಒಂದು ದೇಶ ಮೊದಲು ಇಷ್ಟನ್ನು ಮಾಡಿದರೆ ಸಾಲದೆ ? ಆದರೆ  ಇಷ್ಟನ್ನು ಮಾಡುವುದು ಸುಲಭವೇ ? ಸಾವಿರಾರು  ಜನ ಹೊಟ್ಟೆಗಿಲ್ಲದೆ ನರಳುವಲ್ಲಿ, ಕೆಲವೇ ಜನ ತಿಂದು ತೇಗುತ್ತ ಬದುಕುವ ಪರಿಸ್ಥಿತಿ ನಮ್ಮಲ್ಲಿದೆ. ಅಧ್ಯಾತ್ಮದಲ್ಲಿ ಮಾತ್ರ ಎಲ್ಲರೂ ಸಮಾನರೆ ; ಪರಬ್ರಹ್ಮ ಸ್ವರೂಪರೆ:  ಆದರೆ ವಾಸ್ತವದಲ್ಲಿ ಎಲ್ಲರೂ ಬೇರೆ ಬೇರೆಯೆ ! ‘ ಸರ್ವೇಜನಾಃ ಸುಖಿನೋಭವಂತು’ ಎನ್ನುತ್ತದೆ ಮಂತ್ರ. ಆದರೆ ಸರ್ವರೂ ಸುಖವಾಗಿರುವುದು ಹೇಗೆ ? ಅಂಥ ಸ್ಥಿತಿಯನ್ನು ತರುವುದು ಹೇಗೆ ? ರಷ್ಯಾದಲ್ಲಿ ಬುದ್ಧಿಜೀವಿಗಳು. ವಾಕ್ ಸ್ವಾತಂತ್ರ್ಯವಿಲ್ಲದೆ ನರಳುತ್ತಾರೆ ಎಂದು ಆಪಾದನೆ ಮಾಡುತ್ತಾರೆ ನಮ್ಮಲ್ಲಿನ ಬುದ್ಧಿಜೀವಿಗಳು. ‘ರಷ್ಯಾದ ಪಾಸ್ಟರ್‌ನಾಕ್‌ನಿಗೆ ನೋಡಿ ಹೇಗಾಯಿತು’ ಎನ್ನುತ್ತಾರೆ. ಆದರೆ ರಷ್ಯಾದ ಬುದ್ಧಿ ಜೀವಿಗಳು ನಿಜವಾಗಿಯೂ ನರಳುತ್ತಾರೋ ಇಲ್ಲವೋ, ಇದ್ದ ಕೆಲವು ದಿನಗಳಲ್ಲಿ ತಿಳಿಯಲಾಗಲಿಲ್ಲ. ಆದರೆ ಬಹಳಷ್ಟು ಜನ ಸುಖವಾಗಿದ್ದಾರೆಂಬುದೇನೋ ನಿಜ. ಪಾಸ್ಟರ್‌ನಾಕ್‌ನಂಥವರು ನರಳಿರಹುದು. ಆದರೆ ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದ್ದೂ, ಎಷ್ಟು ಜನ ನಿಜವಾದ ಪ್ರತಿಭಾವಂತರನ್ನು ಈ ಪರಿಸರ ಬೆಳೆಯಗೊಟ್ಟಿದೆ ? ಕೆಲವು ತುಂಬಾ ಪ್ರತಿಭಾವಂತರಾದ ವಿಜ್ಞಾನಿಗಳು ಏಕೆ ವಿದೇಶದಲ್ಲಿ ನೆಲೆಸಿದ್ದಾರೆ ? ಇನ್ನು ಕೆಲವು ಮೇಧಾವಿಗಳಾದ ವಿಜ್ಞಾನಿಗಳು ಏಕೆ ಆತ್ಮಹತ್ಯೆ ಮಾಡಿಕೊಂಡರು ? ಲಕ್ಷಾಂತರ ಜನ  ನೆಮ್ಮದಿಯಾಗಿರುವ ಸ್ಥಿತಿಯನ್ನು ತಂದ ಒಂದು ರಾಷ್ಟ್ರದಲ್ಲಿ, ನಾಲ್ಕು ಜನ ಬುದ್ಧಿ ಜೀವಿಗಳು ನರಳಿದ್ದರೆ ಅದನ್ನು ದೊಡ್ಡದು ಮಾಡಬೇಕಾಗಿಲ್ಲ. ಲಕ್ಷಾಂತರ ಜನ ಹೊಟ್ಟೆಗಿಲ್ಲದೆ ನರಳುವ ಸ್ಥಿತಿಯಲ್ಲಿರುವುದು, ಕೋಟ್ಯಂತರ ಜನ ಬದುಕಿನಲ್ಲಿ ಯಾವ ಸುಖವನ್ನೂ ಕಾಣದೆ, ನಾಳೆ ಎಂತೋ ಏನೋ ಎಂದು ತಾಕಲಾಡುವುದು, ನಮ್ಮ ಬುದ್ಧಿಜೀವಿಗಳನ್ನು ಸದಾಕಾಲ ಕೆರಳಿಸಿ, ಅವರ ಸಾಹಿತ್ಯಕ್ಕೆ ಮುಖ್ಯ ಪ್ರೇರಣೆಯಾಗುವ ಅವಕಾಶ ಎಷ್ಟು ಬೇಗ ಮುಗಿದರೆ ಅಷ್ಟು ಒಳ್ಳೆಯದು. ಅಂಥ ಕಾಲ ಎಂದು ಬಂದೀತು ? ಇಷ್ಟೊಂದು ವರ್ಷಗಳಿಂದ ನಾವು ಬೆಳೆದದ್ದು ಏನನ್ನು ? – ಬರೀ ಭಾಷಣಗಳನ್ನು ! ಇದೇ ನಮ್ಮ ಪ್ರಧಾನ ಉತ್ಪನ್ನವಾಗಿದೆ.