. ಉಪಮಾ

ನಾನಾ ವಸ್ತು-ವಿಭೇದಮನೇನಾನುಂ ತೆಱದೆ ಪೋಲ್ಕೆ ಮಾಡುವುದುಪಮಾ- |

ಮಾನಿತ-ಸದಳಂಕಾರಮನೂನ-ವಿಕಲ್ಪ-ಪ್ರಪಂಚಮೀ ತೆಱದಱಾ ||೫೯||

 

೫೬. ‘ಗುಣಗಳೆಂಬ ಮಣಿಭೂಷಣಗಳಿಂದ ಈ ನಿನ್ನ ಆಕೃತಿಯೂ, ಚಂದ್ರ ಕಿರಣ ಸದೃಶವಾದ ನಿನ್ನ ಯಶೌಘದಿಂದ ಸಕಲ ದಿಙ್ಮಂಡಲವೂ ಬೆಳಗಿಸಲ್ಪಟ್ಟಿದೆ ಇಲ್ಲವೆ ಬಿಳುಪೇರಿಸಲ್ಪಟ್ಟಿದೆ’. *ಮೂಲ ಕಂದಪದ್ಯದ ಆದಿಯಲ್ಲಿ ‘ವಿಶದತರಂ’ ಎಂಬುದು ಗುಣವಾಚಕವಾಗಿದ್ದು ಅದೇ ಸಮಾನವಾಗಿ ಆಕೃತಿಗೂ ದಿಙ್ಮಂಡಲಕ್ಕೂ ಅನ್ವಯಿಸುವ ಪ್ರಯುಕ್ತ ಇದು ‘ಗುಣದೀಪಕ’. ಇಲ್ಲಿ ‘ಆಯ್ದು’ ಎಂದಿದ್ದರೂ ಇದಕ್ಕೆ ಕ್ರಿಯಾಪದವೆಂಬ ಪ್ರಾಶಸ್ತ್ಯ ಈ ಪ್ರಯೋಗದಲ್ಲಿಲ್ಲ; ಅದು ಅಪ್ರಧಾನ ಅದನ್ನು ಬಿಟ್ಟರೂ ಪದ್ಯತಾತ್ಪರ್ಯಕ್ಕೆ ಬಾಧೆಯಿಲ್ಲ.*

೫೭. ‘ಸೂರ್ಯನು ಉದಯಗಿರಿಯ ಶಿಖರಕ್ಕೆ ವಿಶೇಷಾಲಂಕಾರಪ್ರಾಯನಾಗಿ (ಮೂಡಿ), ಕತ್ತಲೆಂಬ ರಿಪುಸೈನ್ಯವನ್ನು ಇಲ್ಲವಾಗಿಸಿದನು, ತನ್ನ ಅಂಗದಿಂದ ನಕ್ಷತ್ರಗಳ ಬೆಳಕನ್ನು ಕೂಡ ನಾಶಮಾಡಿದನು’. *ಇಲ್ಲಿ ಆದಿಯಲ್ಲಿ ಬಂದಿರುವ ‘ದ್ರವ್ಯ’-ವಾಚಕ ನಾಮಪದ ಅಥವಾ ‘ಸೂರ್ಯ’ನೆಂಬ ಒಂದೇ ಕರ್ತೃಪದ ಎರಡು ಕ್ರಿಯೆಗಳಿಗೂ ಸಮಾನವಾಗಿ ಆನ್ವಯಿಸುವುದು ಸ್ಪಷ್ಟವಿದೆ ಆದ್ದರಿಂದ ದ್ರವ್ಯ-ದೀಪಕ. ಹೋಲಿಸಿ-ದಂಡಿ, ಐಐ -೧೦೧*.

೫೮. ‘ದೀಪಕ’ದ ಜಾತಿ ಮುಂತಾದ ಪ್ರಭೇದಗಳು ಹೀಗೆ ಆದಿಯಲ್ಲಿ ಬರುವುದನ್ನು ತೋರಿಸಿದ್ದಾಯಿತು. ಮಧ್ಯ ಮತ್ತು ಅಂತ್ಯಗಳಲ್ಲಿ ಬರುವ ಅವುಗಳ ಪ್ರಕಾರವನ್ನೂ ಮೇಲೆ ಸೂಚಿಸಿದ ಲಕ್ಷ್ಯಗಳ ಮಾದರಿಯಲ್ಲೇ ಕವೀಶ್ವರರು ಊಹಿಸಿಕೊಂಡು ಅರಿಯಬೇಕು.

೫೯. ಬೇರೆ ಬೇರೆಯಾದ ವಸ್ತು ಪ್ರಕಾರಗಳನ್ನು ಏನಾದರೊಂದು ರೀತಿಯಿಂದ ಹೋಲಿಸುವುದೇ ‘ಉಪಮಾ’ ಎಂದು ವಿಖ್ಯಾತವಾದ ಒಳ್ಳೆಯ ಅಲಂಕಾರ. ಅದರ ಪ್ರಭೇದಗಳ ವಿವರಗಳು ಈ ತೆರನಾಗಿವೆ-

i) ವಸ್ತೂಪಮೆ

ವನರುಹದಂತೆ ಮುಖಂ ಲೋಚನಮೆಸೆವುತ್ಪಲದೊಳ್ ತಳಂ ತಳಿರಂತೆಂ- |

ದನುರೂಪಮಾಗಿ ಪೇೞ್ವೊಡೆನಸುಂ ವಸ್ತೂಪಮಾನಮೆಂಬುದು ಪೆಸಱಂ ||೬೦||

ii) ಧರ್ಮೋಪಮೆ

ತಳಿರ್ಗಳವೋಲ್ ಮೆಲ್ಲಿದುವೀ ತಳಂಗಳಳಿಕುಲವೋಲ್ ವಿನೀಳಂಗಳ್ ನಿ- |

ನ್ನಳಕಾಳಿಗಳೆಂಬುದನಾಕುಳಮಿಲ್ಲದೆ ವಿಬುಧರಱಗೆ ಧರ್ಮೋಪಮೆಯಂ ||೬೧||

iii) ವಿಪರ್ಯಯೋಪಮೆ

ನಿನ್ನ ಮುಖದಂತೆ ಕಮಳಮಿದುನ್ನಿದ್ರಂ ನಿನ್ನ ತಳದವೋಲಾರಕ್ತಂ |

[1]ನನ್ನಿಯಿನೀ ಪಲ್ಲವಮೆನೆ ಸನ್ನುತರೂಪಿಂ ವಿಪರ್ಯಯೋಪಮಮಕ್ಕುಂ ||೬೨||

೬೦. ಮುಖ ಕಮಲದಂತೆ, ಕಣ್ಣು ಚೆಲುವಾದ ಕನ್ನೈದಿಲೆಯಂತೆ, ಅಂಗೈ ಚಿಗುರಿನಂತೆ, ಎಂದು ಒಂದನ್ನು ಇನ್ನೊಂದರೊಡನೆ ಅನುರೂಪವಾಗಿ ಹೋಲಿಸಿ ಹೇಳಿದರೆ ಅದಕ್ಕೆ ‘ವಸ್ತೂಪಮೆ’ಯೆಂದು ಹೆಸರು. *ಇಲ್ಲಿ ಎರಡು ವಸ್ತುಗಳಲ್ಲೂ ಔಪಮ್ಯವನ್ನು ಹೇಳಲಾಗದೆ; ಸಾಧಾರಣಧರ್ಮವನ್ನು ವಾಚ್ಯವಾಗಿ ಹೇಳದೆ ಸೂಚ್ಯವಾಗಿ ಅಧ್ಯಾಹೃತವಾಗುವಂತೆ ಕಲ್ಪಸಿದೆ-ಕಮಲದಂತ ಮುಖ ಎಂದರೆ ಕಮಲದಂತೆ ಚೆಲುವುಳ್ಳ ಮುಖ ಎಂದು ತಾತ್ಪರ್ಯ.*

೬೧. ಈ ಅಂಗೈಗಳು ಚಿಗುರುಗಳಂತೆ ಮೃದುವಾಗಿವೆ, ನಿನ್ನ ಕೇಶಗಳು ದುಂಬಿಗಳು ಕಪ್ಪಾಗಿವೆ, ಎಂಬುದನ್ನು ಸಂದೇಹವಿಲ್ಲದೆ ಬುಧರು ‘ಧರ್ಮೋಪಮೆ’ ಯೆಂದರಿಯಬೇಕು. * ಇಲ್ಲಿ ‘ಧರ್ಮ’ ಅಥವಾ ಸಾಧಾರಣಧರ್ಮ (= ಎರಡರಲ್ಲೂ ಇರುವ ಸಾದೃಶ್ಯಾಂಶ) ವನ್ನು- ಮೃದು’, ‘ಕಪ್ಪು’ ಎಂದು -ವಾಚ್ಯವಾಗಿಯೇ ಹೇಳಿರುವ್ಯದರಿಂದ ಇದು ‘ಧರ್ಮೋಪಮೆ’*

೬೨. ‘ಈ ಕಮಲವು ನಿನ್ನ ಮುಖದಂತೆ ಅರಳಿದೆ, ಈ ತಳಿರು ನಿನ್ನ ಅಂಗೈಯಂತೆ ಕೆಂಪಾಗಿದೆ’ ಎಂದು ವರ್ಣಿಸಿದರೆ ಇದು ‘ವಿಪರ್ಯಯೋಪಮೆ’. *ಇಲ್ಲ ಉಪಮೇಯವಾದ ಮುಖವನ್ನೇ ಉಪಮಾನವನ್ನಾಗಿಯೂ ಉಪಮಾನವಾದ ಕಮಲವನ್ನೇ ಉಪಮೇಯದಂತೆಯೂ ವರ್ಣಿಸಿರುವುದರಿಂದ ಉಪಮಾನೋಪಮೇಯಗಳು ತಿರುಗುಮುರುಗಾಗುವ ಕಾರಣ ‘ವಿಪರ್ಯಯೋಪಮೆ’ ಎಂಬ ಹೆಸರು ಅನ್ವರ್ಥಕವಾಗಿದೆ. ದಂಡಿಯ ಪ್ರಕಾರ ಇದು ‘ವಿಪರ್ಯಾಸೋಪಮೆ’ (II -೧೭). ಇದನ್ನೇ ಮುಂದಿನವರು ‘ಪ್ರತೀಪ’ ಅಲಂಕಾರವೆನ್ನುವರು.*

iv) ಅನ್ಯೋನ್ಯೋಪಮೆ

ಕಮಳಮಿದು ನಿನ್ನ ಮುಖದಂತೆ ಮುಖಮುಮೀ ಕಮಳದಂತೆ ನಿಕ್ಕುವಮೆಂದಿಂ- |

ತಮರ್ದಿರೆ ಪೇೞ್ವುದನಱಗುತ್ತಮರನ್ಯೋನ್ಯೋಪಮಾನ-ನಾಮಾಂಕಿತಮಂ ||೬೩||

v) ನಿಯಮೋಪಮೆ

ಸರಸಿಜದೊಳ್ ನಿನ್ನ ಮುಖಂ ತರುಣೀ ಸದೃಶಂ ಸಮಂತು ಪೋಲದು ಪೆಱತಂ |

ನಿರುತಮಿದೆಂಬುದು ನಿಯಮಾಂತರಿತಂ ನಿಯಮೋಪಮಾ-ವಿಕಲ್ಪಿತ-ಭಾ[2]ವಂ ||೬೪||

vi) ಅನಿಯಮೋಪಮೆ

ಕಮಳಮಿದನ್ನೆಗಮೀ ನಿನ್ನ ಮುಕದೊಳೋರಂತೆ ಪೆಱದುಮಿದಱೊಳ್ ಸದೃಶಂ|

ಸಮವಾಯಮುಳ್ಳೊಡೆಲ್ಲಂ ಸಮನಿಸುಗಂತೆಂಬುದನಿಯಮೋಪಮೆಯಕ್ಕುಂ ||೬೫||

vii) ಅತಿಶಯೋಪಮೆ

ವದನಂ ಮದೀಯ-ಲೋಚನ-ಮುದಾವಹಂ ಕಮಳಮಳಿ-ಕುಳೋತ್ಸವ-ಜನಕಂ |

ವಿದಿತ-ವಿಭೇದ-ಕ್ರಮಮಿಂತಿದಲ್ಲದಿಲ್ಲೆಂಬುದತಿಶಯೋಪಮೆ ಸತತಂ ||೬೬||

೬೩. ‘ಈ ಕಮಲವು ನಿನ್ನ ಮುಖದಂತಿದೆ, ಈ ನಿನ್ನ ಮುಖವು ಕೂಡ ನಿಜವಾಗಿ ಕಮಲದಂತಿದೆ’ ಎಂದು ಹೇಳುವುದಕ್ಕೆ ವಿದ್ವಾಂಸರು ಅನ್ಯೋನ್ಯೋಪಮೆ’ಯೆಂಬ ಹೆಸರೆಂದು ಅರಿಯಬೇಕು. *ಇಲ್ಲಿ ಪರಸ್ಪರವಾಗಿ ಮುಖವು ಕಮಲದಂತೆ, ಕಮಲವು ಮುಖದಂತೆ ಎಂದು ವರ್ಣಿಸಿರುವುದರಿಂದ ಈ ಹೆಸರು. ಮುಂದಿನವರು ಇದನ್ನೇ ‘ಉಪಮೇಯೋಪಮೆ’ ಎಂಬ ಸ್ವತಂತ್ರ ಅಲಂಕಾರವೆನ್ನುವರು.*

೬೪. ‘ತರುಣಿಯೆ! ನಿನ್ನ ಮುಖವು ಕಮಲವೊಂದನ್ನು ಮಾತ್ರ ಹೋಲುವುದು; ಬೇರೆ ಇನ್ನಾವ ವಸ್ತುವನ್ನೂ ಹೋಲದು’, ಎಂಬಾಗ ಹೋಲಿಕೆಗೆ ನಿಯಮ ಅಥವಾ ಸಂಕುಚಿತ ಮಿತಿಯನ್ನು ಹಾಕಿದಂತಾಗಿ ಅದು ‘ನಿಯಮೋಪಮೆ’ಯೆನಿಸುವುದು. (ನಿಯಮ= ಛಿoಠ್ಟಿಜ್ಚಿಠಿಜಿಟ್ಞ. ಸಾದೃಶ್ಯ ಒಂದೇ ವಸ್ತುವಿಗೆ ಮಾತ್ರ ಸೀಮಿತವೆಂದೂ, ಬೇರೆ ಮತ್ತಾವ ವಸ್ತುವಿನೊಂದಿಗೂ ಸಂಘಟಿಸದೆಂದೂ ಕಲ್ಪಸುವುದೇ ಇಲ್ಲಿ ವಿವಕ್ಷಿತವಾದ ‘ನಿಯಮನ’.*

೬೫. ‘ಪದ್ಮವು ನಿನ್ನ ಮುಖಕ್ಕೆ ಸದೃಶ, ಅದರ ಹಾಗೆಯೇ ಸಾಮ್ಯವನ್ನುಳ್ಳ ಮಿಕ್ಕೆಲ್ಲ ವಸ್ತುಗಳಾದರೂ ಕೂಡ, ಎಂದಾಗ ‘ಅನಿಯಮೋಪಮೆ’ *ಇಲ್ಲಿ ಯಾವ ನಿಯಮವೂ ಇಲ್ಲದ್ದರಿಂದ ಅನಿಯಮವೆಂದರಿಯಬೇಕು.*

೬೬. ‘(ನಿನ್ನೀ) ಮುಖವು ನನ್ನ ನೇತ್ರಗಳಿಗೆ ಆನಂದಕರವಾಗಿದೆ; ಕಮಲವಾದರೋ ದುಂಬಿಗಳಿಗೆ ಹರ್ಷಜನಕವಾಗಿದೆ; ಇಷ್ಟು ಹೊರತು ಅವಕ್ಕೆ ಬೇರೇನೂ ವ್ಯತ್ಯಾಸವಿಲ್ಲ’ ಎಂಬುದು ‘ಅತಿಶಯೋಪಮೆ’. *ಇಲ್ಲಿ ಉಪಮಾನೋಪಮೇಯಗಳ ಸಾದೃಶ್ಯದ ಉಕ್ತಿಯೊಡನೆ ಅವುಗಳಲ್ಲಿರುವ ವ್ಯತ್ಯಾಸವೊಂದನ್ನು ಎತ್ತಿ ಕಾಣಿಸಿರುವುದರಿಂದ ಅತಿಶಯೋಪಮೆ.*

viii) ಉಪಮೋತ್ಪ್ರೇಕ್ಷೆ

ಈಕೆಯ ವದನಾಕಾರಮನೇಕಾಂತಂ ಪೋಲ್ವೆನೆಂಬುದರ್ಕಾಗಿ ಕನತ್– |

ಕೋಕನದಕ್ಕಿಂದುಗಮುಂಟಾಕಾಂಕ್ಷಣಮದಱೊಳೆಂಬುದುಪಮೋತ್ಪ್ರೇಕ್ಷಂ ||೬೭||

ix) ಅದ್ಭುತೋಪಮೆ

ಕಮಳಂ ಲಲಿತ-ಭ್ರೂ-ವಿಭ್ರಮಮಂ ವಿ[3]ಲಸಿತ-ವಿಲೋಲ-ಲೋಚನ-ಯುಗಮಂ |

ಸಮವಾಯಮುಳ್ಳೊಡದು ನಿನ್ನ ಮೊಗಕ್ಕೆಣೆಯೆಂಬುದದ್ಭುತೋಪಮೆ ನಿಯತಂ ||೬೮||

x) ಮೋಹೋಪಮೆ

ಕಮಳ-ವಿಮೋಹದಿನೀ ನಿನ್ನ ಮೊಗಕ್ಕೆಱಗುವುದು ತೊಱೆವುದಾ ಸರಸಿಜಮಂ |

ಭ್ರಮರಂ ವದನಮಿದಲ್ತೆಂದು ಮೋಹದಿಂದೆಂಬುದಿದುವೆ ಮೋಹೋಪಮಿತಂ ||೬೯||

೬೭. ‘ಈಕೆಯ ಮುಖಾಕೃತಿಯನ್ನು ಸಂಪೂರ್ಣವಾಗಿ ಹೋಲಬೇಕೆಂಬ ಆಸೆ ಕೆಂದಾವರೆಗೂ ಚಂದ್ರನಿಗೂ ಉಂಟು’ ಎನ್ನುವುದು ‘ಉಪಮೋತ್ಪ್ರೇಕ್ಷೆ’ *ಇಲ್ಲಿ ಗ್ರಂಥಕಾರನು ‘ಉಪಮೋತ್ಪ್ರೇಕ್ಷೆ’ಯೆಂದರೂ ದಂಡಿಯಂತೆ ಅವನ ತಾತ್ಪರ್ಯವೂ ಉತ್ಪ್ರೇಕ್ಷಿತೋಪಮೆ’ಯೆಂದೇ ಇರಬೇಕೆಂಬುದು ನಿಸ್ಸಂಶಯ; ಏಕೆಂದರೆ ಇಲ್ಲಿ ಉಪಮೆಯ ಪ್ರಕಾರಭೇದ ಪ್ರಸಕ್ತವೇ ಹೊರತು, ಉತ್ಪ್ರೇಕ್ಷೆಯೆಂಬ ಅಲಂಕಾರಾಂತರವಲ್ಲ. ಕೆಂದಾವರೆಗೂ ಚಂದ್ರನಿಗೂ ಮುಖಸಾದೃಶ್ಯವನ್ನು ಹೇಗಾದರೂ ಸಂಪಾದಿಸಬೇಕೆಂಬ ಆಕಾಂಕ್ಷೆಯುಂಟೆನ್ನುವುದು ಕವಿಯಿಂದ ಉತ್ಪ್ರೇಕ್ಷಿತವಾದ (imagined ) ಅಂಶ.*

೬೯. ‘ಇದು ಮುಖವಲ್ಲ, ಕಮಲವೇ ಎಂಬ ಭ್ರಮೆಯಿಂದ ದುಂಬಿ ನಿನ್ನ ಮುಖಕ್ಕೆ ಬಂದೆರಗುತ್ತಿದೆ; ಕಮಲವನ್ನೇ ತೊರೆಯುತ್ತಿದೆ’ ಎನ್ನುವುದು ‘ಮೋಹೋಪಮೆ’ *ಇಲ್ಲಿ ‘ಮೋಹ’ ಎಂದರೆ ಭ್ರಮೆ ಅಥವಾ ಭ್ರಾಂತಿಯೆಂದರ್ಥ. ಈಚಿನ ಲಕ್ಷಣ ಗ್ರಂಥಗಳಲ್ಲಿ ಇದನ್ನೇ ‘ಭ್ರಾಂತಿಮದಲಂಕಾರ’ವೆನ್ನಲಾಗುತ್ತದೆ.*

xi) ಸಂಶಯೋಪಮೆ

ಸರಸಿಜಮೋ ಮೊ[4]ಗಮೋ ಮೇಣ್ ದ್ವಿರೇಫಮೋ ಲೋಲ-ನಯನ-ಯುಗಮೋ ಮನದೊಳ್ |

ಪಿರಿದುಂ ಸಂಶಯಮೆಂಬುದು ನಿರಂತರಂ ಸಂಶಯೋಪಮಾಲಂಕಾರಂ ||೭೦||

xii) ಊರ್ಜಿತೋಪಮೆ

ಸರಸಿರುಹಮಿಂದು-ದೀಧಿತಿ-ಪರಾಜಿತ-ಶ್ರೀ-ವಿಲಾಸಮೀ ನಿನ್ನ ಮುಖಂ |

ಹರಿಣ-ಧರ-ವಿಜಯ-ಶೋಭಾ-ಕರಮೆಂಬುದಿದೂರ್ಜಿತೋಪಮಾನ-ವಿಭಾಗಂ ||೭೧||

xiii) ಶ್ಲೇಷೋಷಮೆ

ಪರಮ-ಶ್ರೀ-ನಿಳಯಂ ಶಶ-ಧರ-ಕಾಂತಿ-ವಿರೋಧಿ-ರೋಚಿ ವದನಂ ನಿನ್ನಾ |

ಸರಸಿರುಹದವೋಲೆಮಬುದು ನಿರುತಂ ಶ್ಲೇಷೋಪಮಾ-ವಿಕಲ್ಪ-ವಿಶೇಷಂ ||೭೨||

೭೦. ‘ಇದೇನು ಮುಖವೋ ಅಥವಾ ಕಮಲವೋ? ಇದು ದುಂಬಿಯೋ ಅಥವಾ ವಿಲೋಲವಾದ ನೇತ್ರಯುಗಲವೋ?- ಎಂಬ ದೊಡ್ಡ ಸಂಶಯ ನನ್ನ ಮನಸ್ಸಿನಲ್ಲಿ ಉಂಟಾಗಿದೆ’ ಎನ್ನುವುದು ‘ಸಂಶಯೋಪಮೆ’. *ಇದನ್ನೇ ಈಚಿನವರು ‘ಸಂದೇಹ’ ಅಥವಾ ‘ಸಸಂದೇಹ’ ಅಲಂಕಾರವೆನ್ನುವರು.*

೭೧. ಚಂದ್ರನ ಶ್ರೀವಿಲಾಸದಿಂದ ಪರಾಜಿತವಾಗುವ ಚೆಲುವು ಕಮಲದ್ದು. ನಿನ್ನ ಈ ಮುಖದ ಚೆಲುವಾದರೋ ಚಂದ್ರನ ಚೆಲುವನ್ನು ಗೆಲ್ಲುತ್ತಿರುವಂತಹುದು- ಎನ್ನುವುದು ‘ಊರ್ಜಿತೋಪಮೆ’ *ಇಲ್ಲಿ ದಂಡಿ ‘ನಿರ್ಣಯೋಪಮೆ’ಯೆಂದುದನ್ನೇ ಈ ನಾಮಾಂತರದಿಂದ ಕರೆಯಲಾಗಿದೆ-( II -೨೭). ಹಿಂದಿನದರಲ್ಲಿ ಮನಸ್ಸಿನ ಸಂಶಯ ಸ್ಥಿತಿಯನ್ನು ವರ್ಣಿಸಿದ್ದರೆ, ಇಲ್ಲಿ ಸಂಶಯಾವಸ್ಥೆ ಹೋಗಿ ನಿಶ್ಚಯ ಅಥವಾ ನಿರ್ಣಯವುಂಟಾಗುವುದನ್ನು ವರ್ಣಿಸಲಾಗಿದೆ. ‘ಇದು ಕಮಲವಲ್ಲ, ಮುಖವೇ ಸರಿ, ಎಂದು ನಿರ್ಣಯ ಇಲ್ಲಿ ಉಂಟಾಗಲು ಕಾರಣವನ್ನು ಕೊಡಲಾಗಿದೆ. ಕಮಲವಾಗಿದ್ದರೆ ಚಂದ್ರನಿಗಿಂತ ಕಾಂತಿಹೀನವಿರಬೇಕಾಗಿತ್ತು. ಇದಾದರೆ ಚಂದ್ರನಿಗಿಂತ ಅಧಿಕವಾದ ಕಾಂತ್ಯತಿಶಯವನ್ನು ಪಡೆದಿದೆ; ಆದ್ದರಿಂದ ಇದು ಕಮಲವಲ್ಲ, ಮುಖವೇ ಎಂದು ನಿರ್ಣಯ. ಈ ಪದ್ಯಕ್ಕೆ ಅರ್ಥಾಂತರ ಕಲ್ಪಿಸುವುದು ಅಸಮರ್ಥನೀಯ.*

೭೨. ನಿನ್ನಮುಖವೂ ಕಮಲದಂತೆಯೇ ‘ಶ್ರೀನಿಲಯ’ ಮತ್ತು ‘ಚಂದ್ರ ಕಾಂತಿವಿರೋಧಿ’ ಎನ್ನುವುದು ‘ಶ್ಲೇಷೋಪಮೆ’ಯೆಂಬ ಉಪಮಾಭೇದ. *‘ಶ್ರೀನಿಲಯ’ ಮತ್ತು ‘ಚಂದ್ರಕಾಂತಿವಿರೋಧಿ’ ಎಂಬ ಎರಡು ವಿಶೇಷಣಗಳಿಗೂ ಶ್ಲೇಷೆ ಅಥವಾ ಉಭಯಾರ್ಥಗಳಿವೆ. ಮುಖವು ಚೆಲುವಿಗೆ ಆಶ್ರಯವಾದ್ದರಿಂದ ‘ಶ್ರೀನಿಲಯ’ವಾದರೆ, ಕಮಲವು ಲಕ್ಷ್ಮಿಗೆ ಆಶ್ರಯವಾಗಿ ‘ಶ್ರೀನಿಲಯ’. ಮುಖವು ಚಂದ್ರಕಾಂತಿಯನ್ನು ಮೀರಿಸುವ ಲಾವಣ್ಯದಿಂದ ಕೂಡಿ ‘ಚಂದ್ರಕಾಂತಿವಿರೋಧಿ’ಯಾದರೆ ಕಮಲವು ಚಂದ್ರನ ಬೆಳಕಿನ ಮೊಗ್ಗಾಗಿಬಿಡುವ್ಯದರಿಂದ ‘ಚಂದ್ರಕಾಂತಿವಿರೋಧಿ’. ಹೋಲಿಸಿ-ದಂಡಿ-II-೨೮*.

xiv) ನಿಂದೋಪಮೆ

[5]ರಸೀಜಂ ಸರಜಂ ಶಶಧರ-ಬಿಂಬಮದತಿಕಳಂಕಿತಂ ನಿನ್ನ ಮೊಗಂ |

ನಿರುಪಮಮಾಗಿಯುಮವಱೊಳ್ ದೊರೆಯೆಂಬುದನಱದುಕೊಳ್ಗೆ ನಿಂದೋಪಮೆಯಂ ||೭೩||

xv) ಪ್ರಶಂಸೋಪಮೆ

ಅಮೃತ-ಭವಂ ಶಿಶಿರ-ಕರಂ ಕಮಲಂ ಜಗದೇಕ-ಪಾವನೀಯ-ಶ್ರೀಕಂ |

ಸಮನವಱೊಳ್ ನಿನ್ನ ಮುಖಂ ಕ್ರಮದೆಂಬುದನಱವುದಾ ಪ್ರಶಂಸೋಪಮೆಯಂ ||೭೪||

xvi) ವಿರೋಧೋಪಮೆ

ಶರದುದಿತ-ಶಿಶಿರ-ಕರನುಂ ಸರಸಿರುಹಮುಮೀ ತ್ವದೀಯ-ವದನಮುಮಿನಿತುಂ |

ದೊರೆಕೊಳಿಸುವೊಡೆ ಪರಸ್ಪರ-ವಿರೋಧಿಗಳ್ ನಿರುತಮೆನೆ ವಿರೋಧೋಪಮಿತಂ ||೭೫||

೭೩. ‘ಕಮಲವು ರಜಸ್ಸಮೇತವಾದದ್ದು (ದೋಷಪೂರ್ಣ ಮತ್ತು ಪುಷ್ಪ-ಧೂಳಿಸಮೇತ ಎಂದು ಶ್ಲೇಷ); ಚಂದ್ರಬಿಂಬ ಕಳಂಕದಿಂದ ಕೂಡಿದ್ದು; (ಆದ್ದರಿಂದ ಅವುಗಳೊಡನೆ ಉಪಮೆಗೆ ನಿನ್ನಮುಖ ತಕ್ಕುದಲ್ಲವಾಗಿ) ಹೀಗೆ ನಿರುಪಮವಾಗಿದ್ದರೂ ನಿನ್ನ ಮುಖ ಅವುಗಳೊಡನೆ ಸಮಾನ’ವೆಂಬುದನ್ನು ‘ನಿಂದೋಪಮೆ’ಯಂದರಿಯ ಬೇಕು. *ಉಪಮಾನಗಳಲ್ಲಿಯ ದೋಷವನ್ನೆತ್ತಿ ಹೇಳಿ ಉಪಮೆಗೆ ನಿಜವಾಗಿ ತಕ್ಕವಲ್ಲವೆಂದು ನಿಂದಿಸಿರುವುದರಿಂದ, ಹೋಲಿಸಿ :-ದಂಡಿ=- II -೩೦.*

೭೪. ‘ಚಂದ್ರನು ಅಮೃತಸಂಭವನು (ಅಮೃತವೆಂದರೆ ನೀರು, ಅಥವಾ ಕ್ಷೀರ; ಇಲ್ಲಿ ಕ್ಷೀರಸಾಗರವೆಂದು ವಿವಕ್ಷಿತಾರ್ಥ), ಕಮಲವು ಜಗತ್ಪಾವನೆಯಾದ ಲಕ್ಷ್ಮಿಗೆ ನಿವಾಸ; ಅವುಗಳೊಡನೆ ನಿನ್ನ ಮುಖ ಸದೃಶವಾಗಿದೆ’ ಎಂಬ ನಿರೂಪಣಕ್ರಮದಿಂದ ‘ಪ್ರಶಂಸೋಪಮೆ’ಯನ್ನು ಗುರುತಿಸಬೇಕು. *ಇಲ್ಲಿ ಉಪಮಾನಗಳ ಮಹಿಮಾತಿಶಯವನ್ನು ಕೊಂಡಾಡಿರುವುದರಿಂದ ಪ್ರಶಂಸೋಪಮೆ. ಹೋಲಿಸಿ-ದಂಡಿ II -೩೧.*

೭೫. ‘ಶರಚ್ಚಂದ್ರ, ಕಮಲ, ನಿನ್ನ ಮುಖ-ಈ ಮೂರೂ ಅಷ್ಟಿಷ್ಟು ಸದೃಶವೆನ್ನೋಣವೆಂದರೆ ಅವು ಪರಸ್ಪರ ವಿರೋಧಿಗಳಾಗಿವೆಯಲ್ಲ!’ ಎಂಬುದು ವಿರೋಧೋಪಮೆ. ಹೋಲಿಸಿ-ದಂಡಿ MM-೩೩*.

xvii) ತತ್ತ್ವಾಖ್ಯಾನೋಪಮೆ

ಅಳಿಗಳಿವು ಕಣ್ಗಳಲ್ಲಿವು ನಳಿನಮಿದೀ ವದನಮಲ್ತು ನಿಜ-ಕಾಮಿನಿಯಾ |

ತಿಳಿದಿಂತು ಪೇ[6]ೞ್ವೊಡಿದು ಮೊಕ್ಕಳಮುಪಮಾಖ್ಯಾತಮಪ್ಪ ತ[7]ತ್ತ್ವಾಖ್ಯಾನಂ ||೭೬||

xviii) ಅಸಾಧಾರಣೋಪಮೆ

ಹರಿಣ-ಧರ-ಸರಸಿಜಂಗಳ್ ದೊ[8]ರೆಯಲ್ಲಿವು ತನಗೆ ತಾನೆ ದೊರೆ ನಿನ್ನ ಮೊಗಂ |

ನಿರುಪಮಮೆಂಬುದನಱವುದು ನಿರುತಮಸಾಧಾರಣೋಪಮೋದಯ-ವಿಧಿಯಂ ||೭೭|

ಎಂದರೆ-‘ಇದು ಕಮಲವಲ್ಲ, ಮುಖವೇ ನಿಜ; ಇವು ದುಂಬಿಗಳಲ್ಲ, ಕಣ್ಣುಗಳೇ ಸರಿ’ ಎಂಬಲ್ಲಿ ವಾಸ್ತವಿಕ ಸತ್ಯವನ್ನೇ ಒತ್ತಿಹೇಳುವಾಗಲೂ ಉಪಮಾನಗಳೊಂದಿಗೆ ಅದೋ ಇದೋ ಎಂಬ ಸಂಶಯ ಮೊದಲು ಮೂಡುವಷ್ಟು ಉಪಮೇಯದ ಸಾದೃಶ್ಯವಿದೆಯೆಂಬ ಕಾರಣದಿಂದಾಗಿ ಇದು ತತ್ತ್ವಾಖ್ಯಾನೋಪಮೆ. ಈ ಗ್ರಂಥಕಾರನ ವಾಕ್ಯದಲ್ಲಿ ಈ ರೀತಿಯ ತತ್ತ್ವಾಖ್ಯಾನಕ್ಕೆ ಪ್ರತಿಯಾಗಿ ಈಗಾಗಲೇ ಹೇಳಲಾಗಿರುವ ‘ರೂಪಕಾಪಹ್ನುತಿ’ ಆಲಂಕಾರದ ಉದಾಹರಣೆಯೇ (ಮೇಲೆ MM-೨೪ನೆಯ ಪದ್ಯ ನೋಡಿ) ಇಲ್ಲಿಯೂ ಅವಿವಕ್ಷಿತವಾಗಿ ಮತ್ತು ಅನಿರೀಕ್ಷಿತವಾಗಿ ಬಂದಂತಾಗಿದೆ-‘ವದನಮಿದಲ್ತಂ ಬುರುಹಂ, ಮದಲೋಲ ವಿಲೋಚನಂಗಳಲ್ಲಮಿವಳಿಗಳ್’ ಎಂಬುದಕ್ಕೂ ಈ ಲಕ್ಷ್ಯಕ್ಕೂ ಯಾವ ವ್ಯತ್ಯಾಸವೂ ಕಾಣದು. ಇಲ್ಲಿಯ ಲಕ್ಷ್ಯ ಲಕ್ಷಣಾನುಸಾರವಾಗ ಬೇಕಾದರೆ ಪೂರ್ವಾರ್ಧದ ಪಾಠವನ್ನು ಹೀಗೆ ಪರಿಷ್ಕರಿಸಿಕೊಳ್ಳಬೇಕು-

“ಅಳಿಯಲ್ತಿದು ನಯನಯುಗಂ

ನಳಿನಂ ಮೇಣಲ್ತು ಮೊಗಮೆ ನಿಜಕಾಮಿನಿಯಾ”*

೭೭. ‘ಚಂದ್ರ, ಕಮಲ ಇವೊಂದೂ ನಿನ್ನ ಮುಖಕ್ಕೆ ಸಮಾನವಲ್ಲ; ನಿನ್ನ ಮುಖ ತನಗೆ ಮಾತ್ರ ಸಮಾನವಾದ್ದರಿಂದ ನಿರುಪಮ’ ಎನ್ನುವುದು ‘ಅಸಾಧಾರಣೋಪಮೆ’. *ಅಸಾಧಾರಣ=ಅಸಮಾನ ಮತ್ತು ಅದ್ವಿತೀಯ. ಇದನ್ನೇ ಮುಂದಿನವರು ‘ಅನನ್ವಯಾಲಂಕಾರ’ವೆನ್ನುವರು ಮತ್ತು ‘ಗಗನವು ಗಗನಕ್ಕೆ ಸದೃಶ’, ‘ಸಾಗರವು ಸಾಗರಕ್ಕೇ ಸಮಾನ’ ಮೊದಲಾದ ಲಕ್ಷ್ಯಗಳನ್ನು ಕೊಡುತ್ತಾರೆ. ಹೋಲಿಸಿ- ದಂಡಿ II -೩೭.*

xix) ಅಭೂತೋಪಮೆ

ನುತ-ಶಶಿ-ಕಿರಣ-ಕಾಂತಿ-ಪ್ರತತಿಯನೊಡಗೂಡಿ ಮಾಡಿದವೊಲಾಯಿತ್ತಿಂ* |

ತತಿಶಯಮೀ ನಿನ್ನ ಮುಖಂ ನಿತಾಂತಮೆಂಬಾಗಳಱಗಭೂತೋಪಮೆಯಂ ||೭೮||

xx) ಅಸಂಭವೋಪಮೆ

ಹರಿಣಧರನೊಳ್ ವಿಷಂ ಮಲಯರುಹದೊಳನಲಾರ್ಚಿ ನಿನ್ನ ವದನೋದರದೊಳ್ |

ಪರುಷ-ತರ-ವಚನಮಪ್ಪುದು ದುರವಾಪಮಿದಿಂತಸಂಭವೋಪಮಮಕ್ಕುಂ ||೭೯||

xxi) ಬಹೂಪಮೆ

ಮಲಯರುಹ-ಶಶಿರಕರ-ಶೀತಲಿಕಾ-ಕರಕೇಂದುಕಾಂತ-ಜಲ-ಶೀತಲಮೀ |

ಲಲನಾಲಿಂಗನ-ಸುಖಕರ-ವಿಲಾಸಮೆಂಬುದು ಬಹೂಪಮಾನ-ವಿಕಲ್ಪಂ ||೮೦||

೭೮. ‘ನಿಜವಾಗಿ ಚಂದ್ರನ ಕಾಂತಿಯ ಸಾರವನ್ನೆಲ್ಲ ಸಂಗ್ರಹಿಸಿಕೊಂಡು ನಿರ್ಮಿಸಿರುವಂತಿದೆ ನಿನ್ನ ಮುಖದ ಸೌಂದರ್ಯ’ ಎನ್ನುವಾಗ ‘ಅಭೂತೋಪಮೆ’ ಎಂದರಿಯಬೇಕು. *ಚಂದ್ರಕಾಂತಿಯ ಸಾರಸಂಗ್ರಹವೇ ಮುಖವೆಂದರೆ ಆ ಕಾಂತಿಯೆಂಬ ಧರ್ಮಕ್ಕೆ ‘ಧರ್ಮಿ’ ಆಥಾವ ಆಶ್ರಯಸ್ಥಾನವಾದ ವಸ್ತುಸ್ವರೂಪವೇ ಬೇರೆಯಿಲ್ಲವಾಗುವುದರಿಂದ ಎಂದರೆ ಅಸಿದ್ಧವಾಗುವುದರಿಂದ ಇದು ಅಭೂತೋಪಮೆ. ಆದರೆ ಅದ್ಭುತೋಪಮೆಯಲ್ಲಿ ಧರ್ಮಿಯೊಂದು ಪ್ರಸಿದ್ಧವಾಗಿರುತ್ತದೆ. ಅದರಲ್ಲಿ ಅದ್ಭುತವಾದ ಎಂದರೆ ಅಸಿದ್ಧವಾದ ಧರ್ಮವನ್ನು ಮಾತ್ರ ಕಲ್ಪಿಸಲಾಗುತ್ತದೆ ಎಂದು ತರುಣ ವಾಚಸ್ಪತಿ ಕಾವ್ಯಾದರ್ಶವ್ಯಾಖ್ಯೆಯಲ್ಲಿ ಬರೆದಿದ್ದಾನೆ. ಹೋಲಿಸಿ-ದಂಡಿ, ಐಐ -೩೮*.

೭೯. ‘ಚಂದ್ರಬಿಂಬದಿಂದ ವಿಷದ ಹಾಗೆ, ಚಂದನತರುವಿನಿಂದ ಬೆಂಕಿಯುರಿಯ ಹಾಗೆ ನಿನ್ನ ಮುಖದಿಂದ ಬಿರುಸುಮಾತೆನ್ನುವುದು’ ಎನ್ನುವುದು ಅಸಂಭವೋಪಮೆ’ *ಇದನ್ನೇ ದಂಡಿ ‘ಅಸಂಭಾವಿತೋಪಮೆ’ ಎಂದಿದ್ದಾನೆ. ಹೋಲಿಸಿ-ದಂಡಿ, II -೩೯*.

೮೦. ಈ ಲಲನೆಯ ಆಲಿಂಗನಸುಖವಿಲಾಸವೆಂಬುದು ಚಂದನರಸ, ಚಂದ್ರ ಕಿರಣ, ಚಂದ್ರಕಾಂತಜಲಗಳಂತೆ ಶೀತಲವಾಗಿರುವುದು’ ಎನ್ನುವುದು ‘ಬಹೂಪಮೆ’ಯೆಂಬ ಪ್ರಭೇದ. *ಹೋಲಿಸಿ-ದಂಡಿ, MM-೪೦. ಇಲ್ಲಿ ಒಂದನ್ನು ಅನೇಕ ಉಪಮಾನಗಳಿಗೆ ಹೋಲಿಸಿರುವುದರಿಂದ ಈ ಹೆಸರು ಅನ್ವರ್ಥಕವಾಗಿದೆ.*

xxii) ಮಾಲೋಪಮೆ

[9]ನಿತ-ಪ್ರಗಲ್ಭನೊಳ್ ಮಾ[10]ತನದೊಲ್ ಮಾಹಾತ್ಮ್ಯದೊಳ್ ನಿ[11]ಜೋದಾರತೆಯೊಲ್ |

ಅನುಪಮ-ಗುಣದೊಳ್ ಶ್ರೀ[12]ಶಂ ಘನಮೆನೆ ಮಾಲೋಪಮಾನ-ಭೇದಮಿದಕ್ಕುಂ ||೮೧||

ವಿನಯದೊಳಱವಿನ ವೋಲಱವಿನೊಳಮುಪಶಮದ ಗುಣದವೋಲಾದಱವಿಂ |

ಮನಮುರು ಗುಣದೊಳ್ ಸಿರಿಯೊಳ್ ತನಗೆನೆ ಮಾಲೋಪಮಾನ-ಭೇದ-ವಿಕಲ್ಪಂ[13] ||೮೨||

೮೧. ‘ಉದಾತ್ತಚರಿತನಲ್ಲಿ ಹಿರಿತನದಂತೆ, ಹಿರಿತನದಲ್ಲಿ ಔದಾರ್ಯದಂತೆ, ನಿರುಪಮ (ಔದಾರ್ಯ) ಗುಣದಲ್ಲಿ ಲಕ್ಷ್ಮಿಪತಿಯು ಘನನು’ ಎಂಬುದು ‘ಮಾಲೋಪಮೆ’ *ಹೋಲಿಸಿ-ದಂಡಿ, MM-೪೨-‘ಸೂರ್ಯನಲ್ಲಿ ಬಿಸಿಲಿನಂತೆ, ಹಗಲಿನಲ್ಲಿ ಸೂರ್ಯನಂತೆ, ಆಗಸದಲ್ಲಿ ಹಗಲಿನಂತೆ ನಿನ್ನಲ್ಲಿ ಪರಾಕ್ರಮವು ಸೇರಿ ಸೊಬಗೇರಿಸಿದೆ’-ಇಲ್ಲಿ ಹಿಂದಿನ ವಾಕ್ಯದ ವಸ್ತುವೇ ಮುಂದಿನ ವಾಕ್ಯದಲ್ಲಿ ಉಪಮಾನವಾಗುವುದರಿಂದ ಒಂದಕ್ಕೊಂದನ್ನು ಪೋಣಿಸಿ ಮಾಲೆ ಮಾಡಿದಂತಾಗಿದೆ.*

೮೨. ಮಾಲೋಪಮೆಗೇ ‘ಕ’ ಹಸ್ತಪ್ರತಿಯಲ್ಲಿ ಮಾತ್ರ ದೊರೆಯುವ ಇನ್ನೊಂದು ಲಕ್ಷ್ಯವಿದು- ‘ವಿನಯದಲ್ಲಿ ಅರಿವಿನಂತೆ, ಅರಿವಿನಲ್ಲಿ ಉಪಶಮದಂತೆ, ಅರಿವು, ವಿನಯಾದಿಗುಣಗಳು ಮತ್ತು ಸಿರಿಯೆಲ್ಲದರಲ್ಲಿಯೂ ಅವನು ಮನವಾಂತನು’ ಎಂಬುದು ಕೂಡ ಮಾಲೋಪಮೆಯೇ.

xxiii) ವಾಕ್ಯೋಪಮೆ

ಭವದೀಯ-ವದನಮಾಲೋಲ-ವಿಲೋಚನಮುದಿತ-ರಾಗ-ಮಣಿ-ವಿ[14]ಳಸಿತಮುಂ |

ಪ್ರವಿಕಸಿತಾಂಬುಜ-ವನಮಂ ಸವಿಶೇಷಂ ಪೋ*ಲ್ಗುಮೆನ್ಗೆ ವಾಕ್ಯೋಪಮೆಯಂ ||೮೩||

xxiv) ಸಂಧಾನೋಪಮೆ

ವಿಪರೀತಂ ತರು-ತತಿಯ ವೊಲಪರಾಗಂ ಶುದ್ಧ-ಭೂಮಿವೋಲ್ ಪದ್ಮಿನಿವೋಲ್ |

ಉಪಗತ-ವಿಭ್ರಮ-ರಹಿತಂ ಕುಪಿತಾಕೃತಿಯೆಂಬುದುಪಮೆ ಸಂ[15]ಧಾನಾಂಕಂ ||೮೪||

xxv) ಪ್ರತಿವಸ್ತೂಪಮೆ

ಪ್ರತಿವಸ್ತೂಪಮಿತಾಲಂಕೃತಮಿಂತಕ್ಕುಂ ಧರಾಧಿಪಾ ನಿನ್ನನ್ನಂ |

ವಿತತ-ಯಶ-ನಿಲಯ ತಾ[16]ರಾಪತಿ-ದಿನಕರ-ಸದೃಶ-ತೇಜನೆಂಬುದುಮುಂಟೇ ||೮೫||

೮೩. ‘ಲೋಲ ಲೋಚನಗಳಿರುವ ನಿನ್ನ ಮುಖವು ಉದಯಕಾಲದ ಕೆಂಪಿನ ರತ್ನಕಾಂತಿಯಿಂದ ಸೊಬಗಾಂತು ಚೆನ್ನಾಗಿ ಅರಳಿದ ಕಮಲವನವನ್ನು ವಿಶೇಷವಾಗಿ ಹೋಲುತ್ತಿದೆ’ ಎನ್ನುವಾಗ ‘ವಾಕ್ಯೋಪಮೆ’. *ಏಕೆಂದರೆ ಇಲ್ಲಿ ಉಪಮೇಯವಾದ ಮುಖವು ವಿಶೇಷಣ-ವಿಶೇಷ್ಯಗಳೆರಡನ್ನೂ ಹೊಂದಿ ಸ್ವಯಂಪೂರ್ಣವಾಗಿರುವ ಒಂದು ವಾಕ್ಯಾರ್ಥವಾಗಿರುವಂತೆ, ಅದೇರೀತಿಯಾಗಿ ಉಪಮಾನವೂ ಕೂಡ ಇನ್ನೊಂದು ವಾಕ್ಯಾರ್ಥವಾಗಿದೆ. ಉಪಮಾವಾಚಕ ಕಡೆಗೊಮ್ಮೆ ಮಾತ್ರ ಬಂದಿದೆ. ಉಪಮಾವಾಚಕಗಳು ಒಂದಕ್ಕಿಂತ ಹೆಚ್ಚು ಬರುವ ಇನ್ನೊಂದು ಇದರ ಪ್ರಕಾರವನ್ನು ಕೂಡ ದಂಡಿ ಹೇಳಿದ್ದಾನೆ. ಅದನ್ನು ಈ ಗ್ರಂಥಕಾರ ಹೇಳಿಲ್ಲ. ಹೋಲಿಸಿ-ದಂಡಿ, II -೪೩-೪೫.*

೮೪. ನಿನ್ನ ಕುಪಿತಾಕೃತಿಯು ತರುಗಣದಂತೆ “ವಿಪರೀತ” *ತರುಗಳು ‘ವಿ’=ಪಕ್ಷಿಗಳಿಂದ ‘ಪರೀತ’=ಆಕೀರ್ಣ; ವರ್ಣಿತ ವ್ಯಕ್ತಿಯ ಆಕೃತಿ ವಿರುದ್ಧ ಮುಖಭಾವವನ್ನುಳ್ಳುದು*; ಶುದ್ಧಭೂಮಿಯಂತೆ “ಅಪರಾಗ” *ಭೂಮಿ ಅ+ಪರಾಗ=ದೂಳಿಲ್ಲದ್ದು; ಆಕೃತಿ ಅಪ+ರಾಗ=ಪ್ರೇಮಶೂನ್ಯವಾದದ್ದು*; ಪದ್ಮಿನಿಯಂತೆ “ಉಪಗತ-ವಿಭ್ರಮ”ವಿಲ್ಲದ್ದು *ಪದ್ಮಿನಿಯ ವಿಭ್ರಮದಿಂದ ಉಪಗತ ಎಂದರೆ ವಿಲಾಸಸಮೇತ, ಆಕೃತಿಯು ಭ್ರಾಂತಿಹೀನ ಅಥವಾ ನಿಶ್ಚಿತ.* ಹೀಗೆ ವಿಶೇಷಣಗಳು ಮಾತ್ರ ಶ್ಲಿಷ್ಟವಾಗಿ ಬಂದಿರುವ ಈ ಉಪಮೆ ‘ಸಂಧಾನೋಪಮೆ’ಯೆನಿಸುವುದು. *ದಂಡಿಯಲ್ಲಿ ಈ ಪ್ರಭೇದವಿಲ್ಲ.*

೮೫. ‘ಪ್ರತಿವಸ್ತೂಪಮೆ’ಯ ಲಕ್ಷ್ಯ ಹೀಗಿರುತ್ತದೆ-‘ರಾಜನೆ, ನಿನ್ನ ಹಾಗೆ ವಿಶಾಲ ಯಶೋನಿಧಿಯೂ ಸೂರ್ಯಚಂದ್ರರಿಗೆ ಸದೃಶವಾದ ತೇಜಸ್ವಿಯೂ ಇನ್ನೊಬ್ಬನೆಲ್ಲಾದರೂ ಉಂಟೆ? *ಇಲ್ಲಿ ಪ್ರಸ್ತುತನಾದ ರಾಜನೇ ‘ವಸ್ತು’ ಅವನನ್ನು ಹೋಲುವ ಇನ್ನೊಬ್ಬನೇ ‘ಪ್ರತಿವಸ್ತು’. ತತ್ಸಮನಾದ ಪ್ರತಿವಸ್ತುವನ್ನೂ ಇಲ್ಲಿ ಇಲ್ಲವೆನ್ನಲಾಗಿದೆ. ಇಲ್ಲಿ ಮುಂದಿನವರ ‘ಅಪಹ್ನುತಿ’, ‘ಅನನ್ವಯ’ಗಳ ಛಾಯೆಯೂ ಸ್ಪಷ್ಟ. ಹೋಲಿಸಿ- ದಂಡಿ, II -೪೬-೪೭.*

xxvi) ಹೇತೂಪಮೆ

ಸುರ-ಗಿರಿವೋಲ್ ಧೈರ್ಯದಿನಂಬರ-ಮಣಿವೋಲ್ ತೇಜದಿಂ ಶಶಾಂಕಂಬೋಲ್ ಬಂ-

ಧುರ-ಕಾಂತಿ-ಗುಣದಿನೆಂದಿಂತಿರೆ ಪೇೞ್ವುದನಱದುಕೊಳ್ಗೆ ಹೇತೂಪಮೆಯಂ ||೮೬||

ಉಪಮೆಯ ಗುಣದೋಷಗಳು

ಹೀನಾಧಿಕ-ಗುಣ-ದೋಷ-ವಿತಾನಮುಮಂ ಲಿಂಗ-ವಚನ-ಭೇದಂಗಳುಮಂ |

ಮಾ[17]ನ-ಧನರಱದು ಪೇೞ ನುಮಾನಕ್ಕವಿರುದ್ಧಮಾಗೆ ಲಕ್ಷ್ಯಾಗಮದೊಳ್ ||೮೭||

ನಿನ್ನಂತೆ ಸುರೇಶ್ವರನುತ್ಪನ್ನ-ಮಹೈಶ್ವರ್ಯನೆಂಬುದುಂ ಜಲನಿಧಿ ತಾಂ |

ಸನ್ನುತ-ಗಂಭೀರನೆಂಬುದುಮಿನ್ನದು ಹೀನಾಧಿಕ-ಪ್ರಶಂಸಾನುಗುಣಂ ||೮೮||

೮೬. *ಉಪಮೆಗೆ ಕಾರಣದ ನಿರ್ದೇಶ ಬರುತ್ತಿದ್ದರೆ ‘ಹೇತೂಪಮೆ’ ಉದಾಹರಣೆ-* ‘(ರಾಜನೇ ನೀನು) ಧೈರ್ಯದಿಂದ ಮೇರುವಿನಂತೆಯೂ, ತೇಜದಿಂದ ಸೂರ್ಯನಂತೆಯೂ ರುಚಿರಕಾಂತಿಯಿಂದ ಚಂದ್ರನಂತೆಯೂ ಇರುವೆ’-ಎಂಬುದನ್ನು ‘ಹೇತೂಪಮೆ’ಯೆಂದರಿಯಬೇಕು. *ಹೋಲಿಸಿ-ದಂಡಿ, II -೫೦*.

೮೭. ‘ಹೀನೋಪಮೆ’, ‘ಅಧಿಕೋಪಮೆ’ ಮುಂತಾದವು ಯಾವಾಗ ಗುಣವೆನಿಸುವವು, ಯಾವಾಗ ದೋಷವೆನಿಸುವವು ಎಂಬುದನ್ನೂ, ಹಾಗೆಯೇ ಭಿನ್ನಲಿಂಗ, ಭಿನ್ನ ವಚನಗಳು ಕೂಡ ಯಾವಾಗ ಗುಣ, ಯಾವಾಗ ದೋಷ ಎಮ್ಬುದನ್ನೂ ಮಾನಧನರಾದ ವಿದ್ವಾಂಸರು ಅರಿತುಕೊಂಡು ಯುಕ್ತಿಗೆ ವಿರೋಧ ಬಾರದಂತೆ ಲಕ್ಷ್ಯಗಳಲ್ಲಿ ಪ್ರಯೋಗ ಮಾಡಬೇಕು.

೮೮. ‘ನಿನ್ನಂತೆ ದೇವೇಂದ್ರನು ಅತುಲೈಶ್ವರ್ಯಸಂಪನ್ನನು’ ಎನ್ನುವುದೂ ‘ನಿನ್ನಂತೆ ಸಮುದ್ರವು ಗಾಂಭೀರ್ಯಸಂಪನ್ನ’ವೆಂಬುದೂ ಕಡಿಮೆಯ ಉಪಮೇಯವನ್ನು ಹೆಚ್ಚಿ ಉಪಮಾನದೊಂದಿಗೆ ಹೋಲಿಸುವ ಸಾದೃಶ್ಯವರ್ಣನೆಯನ್ನೊಳಗೊಂಡಿದ್ದರೂ ಗುಣವೇ ಹೊರತು ದೋಷವಲ್ಲ. *ಏಕೆಂದರೆ ಉಪಮೇಯಕ್ಕಿಂತ ಹೆಚ್ಚಿನ ಗುಣಾತಿಶಯವುಳ್ಳ ಉಪಮಾನದೊಡನೆ ಹೋಲಿಕೆಯೇ ಉಪಮಾಲಂಕಾರದ ಜೀವಾಳವಾಗಿದೆ, ಹೋಲಿಸಿ-ದಂಡಿ, II -೫೩.*

ಕೊಳದಂತಂಬರಮತಿನಿರ್ಮಳಮೀತಂ ಸ್ವಾಮಿಭಕ್ತನೆಂದುಂನಾಯ್ವೋ- |

ಲಿ[18]ಳೆಯೊಳ್ ಕರಮೆಂಬುದಿದಗ್ಗಳಮಾ ಹೀನಾಧಿಕ-ಪ್ರಶಂಸಾ-ದೋಷಂ ||೮೯||

ಪುರುಷಂಬೊಲೀಕೆ ಕರಂ ಪುರುಷಾಕೃತಿಯೆಂಬುದಿಂತು ನಾನಾ-ಲಿಂಗಂ |

ನಿರುತಂ ಪ್ರಾಣಂಗಳವೋಲ್ ನರ[19]ಪಂ ಪ್ರಿಯನೆಂಬುದಿಂತು ನಾನಾ-ವಚನಂ ||೯||

ಇಂತುಪಮಾ-ಕ್ರಮಮನಪರ್ಯಂತಂಗುಣ-ಗಣಮನಱದು ಪೇೞ್ಗೆ ಕವೀಶರ್ |

ಸಂತತಮಿಂತಕ್ಕುಂ ಕಾಂತಾಂತಿಕಮತಿಶಯದ ಲಕ್ಷ್ಯ-ಲಕ್ಷಣ-ಯುಗದಿಂ ||೯೧||


[1] ನಿನ್ನಯನ್ನೀ ‘ಪಾ, ಮ’. ಇಲ್ಲಿ ಸ್ವೀಕೃತವಾದದ್ದು ‘ಸೀ’ ಅವರ ಸೂಚಿತಪಾಠ; ‘ನಿರ್ನೆರಮೀ-ಮುಳಿಯ ತಿಮ್ಮಪ್ಪಯ್ಯನವರಿಂದ ಸೂಚಿತಪಾಠ; ಕವಿರಾಜಮಾರ್ಗವಿವೇಕ, ಪು. ೨೮೦.

[2] ಭಾಗಂ ‘ಕ, ಮ, ಸೀ’.

[3] ವಿಸ್ಮಿತ ‘ಪಾ’

[4] ಮುಖಮೋ ‘ಕ’.

[5] ಸರಸಿಜಂ ಸರಸಿಜಂ ‘ಬ’.

[6] ಪೇೞ್ದೊಡಿದು ‘ಮ’.

[7] ತತ್ತಾಖ್ಯಾತಂ ‘ಮ’.

[8] ದೊರೆಯಲ್ತವು ‘ಮ’

[9] ಜನಿತಪ್ರಗಲ್ಭದೊಳ್ ‘ಪಾ, ಮ, ಸೀ;.

[10] ಮಾಂತನದೊಳ್ ‘ಪಾ, ಮ’; ಮಾ(ನ)ನದೂಳ್ ‘ಸೀ’.

[11] ನಿಜೋದಾರತೆಯೊಳ್ ‘ಪಾ, ಮ,ಸೀ’. ಈ ಮೂರೂ (೫, ೬, ೭) ಪಾಠಗಳಿಂದ ಅರ್ಥಬೋಧೇಯಾಗಲು; ಇಲ್ಲಿ ಮಾಲೋಪಮೆಯ ಲಕ್ಷಣವೂ ಕೂಡದು, ಆದ್ದರಿಂದ ‘ಳ್’ ಎಂಬುದನ್ನು ‘ಲ್’ ಎಂದು ಅತ್ಯಲ್ಪ-ವ್ಯತ್ಯಾಸದಿಂದ ಪರಿಷ್ಕೃರಿಸಲಾಗಿದೆ, ಉಪಮಾವಾಚಿಯಾಗುವಂತೆ.

[12] ಶ್ರೀನಂ ‘ಅ, ಬ’.

[13] ಇದು ‘ಕ’ದಲ್ಲಿ ಮಾತ್ರ ಕಾಣಬರುವ ಪದ್ಯ; ಅಪಪಾಠಗಳನ್ನು ತೆಗೆದು ಇಲ್ಲಿ ಪರಿಷ್ಕರಿಸಿಕೊಟ್ಟಿದೆ. ಇವೆರಡರಲ್ಲಿ ಒಂದನ್ನು ಮಾತ್ರ ಮೂಲಗ್ರಂಥ ಕಾರನು ಲಕ್ಷ್ಯವಾಗಿ ಕೊಟ್ಟಿರುವ ಸಾಧ್ಯತೆ ಹೆಚ್ಚು.

[14] ವಿಳಸಿತಮಂ ‘ಪಾ, ಮ’. ಇಲ್ಲಿ ಸ್ವೀಕೃತವಾಗಿರುವುದು ‘ಸೀ ಸುಚಿತಪಾಠ.

* ಪೊಲ್ಕು ‘ಪಾ’.

[15] ಸಂಧಾನಂತಂ ‘ಕ’.

[16] ತಾರಾತತಿ ‘ಕ’.

[17] ಮಾನದರನರಿದು ‘ಬ’.

[18] ಲಿಳೆಯಂ ‘ಪಾ, ವ’; ಈ ಪಾಠ ‘ಸೀ’ ಸೂಚಿತ.

[19] ನೆರಪಂ ‘ಮ, ಪಾ, ಬ’.