ದುರ್ಗಸಿಂಹನು ತನ್ನ ಕಥೆಯನ್ನು ಹೇಳುವ ರೀತಿಯಿಂದ ಓದುಗರ ಮನಸ್ಸನ್ನು ಒಲಿಸುತ್ತಾನೆ. ಅವನ  ಶೈಲಿ ಅವನದೇ ; ಯಾರ ಅನುಕರಣೆಯೂ ಅಲ್ಲ. ಅವನಿಗಿಂತ ಹಿಂದೆ  ‘ವಡ್ಡಾರಾಧನೆ, ಎಂಬ ಕಥಾ ಸಾಹಿತ್ಯ ಅಗಿ ಹೋಗಿದ್ದರೂ ಅದರ ಛಾಯೆಯೂ ಅವನ ಶೈಲಿಯ ಮೇಲೆ ಬಿದ್ದಿಲ್ಲ ಅವನ ಅನಂತರ ನಯಸೇನ ಕತೆಗಾರನಾಗಿ ಬರುತ್ತಾನೆ. ಪಂಚತಂತ್ರವನ್ನಂತು ಅವನಷ್ಟು ಚೆನ್ನಾಗಿ ಹೇಳಿದ ಕನ್ನಡದ ಕವಿ ಬೇರೆಯಿಲ್ಲ. ಅದರಿಂದ ದುರ್ಗಸಿಂಹನು ಈ ದೃಷ್ಟಿಯಿಂದ ಏಕಮೇವಾದ್ವಿತೀಯನಾಗಿದ್ದಾನೆ.

ದುರ್ಗಸಿಂಹನ ಬಗೆಗೆ ಇಷ್ಟು ವಿಚಾರವನ್ನು ಖಚಿತವಾಗಿ ಹೇಳಬಹುದು

೧. ಅವನು ಪಂಚತಂತ್ರವನ್ನು ಕನ್ನಡದಲ್ಲಿ ಹೇಳಿದ ಏಕಮೇವಾದ್ವಿತೀಯ ಕವಿ.

೨. ಅವನು ಅದನ್ನು ಹೊಸತಾಗಿ ಹೇಳಿದ್ದಾನೆ.

೩. ಕನ್ನಡದಲ್ಲಿ ನಾಗವರ್ಮನ ಕನ್ನಡ ಕಾದಂಬರಿಗೆ ಯಾವ ಸ್ಥಾನವಿದೆಯೋ ದುರ್ಗಸಿಂಹನ ಕನ್ನಡ ಪಂಚತಂತ್ರಕ್ಕೆ ಅದೇ ಸ್ಥಾನವಿದೆ.

೪. ಅವನಿಗೆ ತನ್ನದೇ ಅದ ಶೈಲಿಯಿದೆ.

೫. ಅವನ ಕಥಾಮಾರ್ಗವನ್ನು ನಯಸೇನನು ಮುಂದೆ ಅನುಸರಿಸುವಂತಾಯಿತು.

ದುರ್ಗಸಿಂಹನಲ್ಲಿ ಕನ್ನಡದ ಜನಕ್ಕೆ ಸಂಸ್ಕೃತದ ಈ ಜನಪ್ರಿಯ ಕಥಾಸಾಹಿತ್ಯವನ್ನು ಸರಳವಾಗಿ ಪ್ರಿಯವಾಗಿ ಕನ್ನಡದ ಉಸಿರಿನಲ್ಲಿ ಹೇಳಬೇಕೆಂಬ ತೀವ್ರ ಉತ್ಸಾಹ ಕಾಣುತ್ತದೆ. ಅಲ್ಲಲ್ಲಿ ಬರುವ ಕನ್ನಡದ ನುಡಿಗಟ್ಟುಗಳು, ಗಾದೆಗಳೂ, ಕನ್ನಡ ಭಾಷೆಯ ಒಗರು ರುಚಿಯೂ ಇದನ್ನು ಸಾರುತ್ತವೆ. ಇದನ್ನು ಓದುವಾಗ ನಮಗೆ ಇದು ಬೇರೆ ಭಾಷೆಯ ಕೃತಿ ಎಂದೆನ್ನಿಸುವುದಿಲ್ಲ. ಇದು ಕನ್ನಡ ಭಾಷೆಯ ಪಂಚತಂತ್ರ, ಇಲ್ಲಿ ಬರುವ ಪ್ರಾಣಿ ಪಾತ್ರಗಳೂ, ಪಕ್ಷಿಗಳೂ, ಇದೇ ಮಣ್ಣಿನವು ಎಂಬಂತೆ ವರ್ತಿಸುತ್ತವೆ, ಮಾತನಾಡುತ್ತವೆ.

ದುರ್ಗಸಿಂಹನು ಒಂದೇ ಒಂದು ಕೃತಿಯನ್ನು ಬರೆದೂ ಹತ್ತಿರ ಹತ್ತಿರ ಸಾವಿರ ವರ್ಷಕಾಲ ಬದುಕಿ ಉಳಿದಿದ್ದಾನೆ-ತನ್ನ ಕೃತಿಯ ಮೂಲಕ ಅನೇಕ ಕವಿಗಳು ಅನೇಕ ಕೃತಿಗಳನ್ನು ರಚಿಸಿಯೂ ಹೇಳಹೇಸರಿಲ್ಲದಂತಾಗಿದ್ದರೆ. ದುರ್ಗಸಿಂಹನ ಕೃತಿಯನ್ನು ಜನರೂ ಮನ್ನಿಸಿದುದರಿಂದ ಇಷ್ಟು ಕಾಲ ಬದುಕಿ ಉಳಿಯಿತು. ಸಾವಿರ ಕಾಲ ಬಾಳಿದುದಕ್ಕೆ ಸಾವಿಲ್ಲ ‘ನಗಳ್ಗೇ ಕಾವ್ಯಂ ಧರಾಚಕ್ರದೊಳ್ ಎಂಬ ಕವಿಯ ಅಸೆ ಫಲಿಸಿದೆ. ಅವನ ಕೃತಿ ಬೇರೆ ಬೇರೆ ಲೇಖಕರ ಮೂಲಕ ಸಂಗ್ರಹವಾಗಿ, ಕತೆಗಳ ಗೊಂಚಲಾಗಿ ಮರುಹುಟ್ಟು ಪಡೆದು ಕನ್ನಡದ ಕಥಾಪ್ರೇಮಿಗಲ್ಲಿ ನಿರಂತರವಾಗಿ ನೆಲಸುತ್ತ ಬಂದಿದೆ. ಈ ದೃಷ್ಟಿಯಿಯಂದಲೂ ಅದೊಂದು ಅಪೂರ್ವ ಗ್ರಂಥ. ಸಂಸ್ಕೃತ ಪಂಚತಂತ್ರದ ಒಂದು ಪರಂಪರೆಯನ್ನು ಕನ್ನಡಕ್ಕೆ ಮೊತ್ತಮೊದಲು ಸರಳ ಸುಂದರವಾಗಿ ಪರಿಚಯ ಮಾಡಿಕೊಟ್ಟ ಕೀರ್ತಿ ದುರ್ಗಸಿಂಹನಿಗೆ ಸಲ್ಲುತ್ತದೆ.