ಒಟ್ಟಾರೆ ಈ ಪುಸ್ತಿಕೆಯಲ್ಲಿ ಡಕ್ಕಲಿಗರ ಬದುಕಿನ ವಿವಿಧ ಮುಖಗಳನ್ನು ಪರಮಾರ್ಶಿಸಿ ನೋಡಿದಾಗ, ಕೆಲವು ವಿಷಯಗಳು ಸಾಮಾನ್ಯವೆನಿಸಿದರೂ ಮತ್ತೆ ಕೆಲವು ಅತ್ಯಂತ ವಿಸ್ಮಯಕಾರಿಯಾಗಿ ಕಂಡು ಬರುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ಯ್ರ ದೊರೆತು ಐದು ದಶಕಗಳೂ ಗತಿಸಿದರೂ ಇನ್ನು ಹಲವಾರು ಜನಪದ ಗುಂಪಿನವರು ಪುರಾತನ ಬದುಕಿನ ಪಳೆಯುಳಿಕೆಗಳೋ ಎನ್ನುವಂತೆ, ಓಬೆರಾಯನ ಕಾಲದ ಸಂಸ್ಕೃತಿಯ ನೆರಳಲ್ಲಿ ದಾಪುಗಾಲು ಹಾಕುತ್ತಿರುವುದು ವಿಸ್ಮಯ? ಮಾದಿಗರ ಮನೆಯ ಅನ್ನಕ್ಕಾಗಿ ಕಾದು ಕುಳಿತಿರುವುದು, ಚಂಡಾಳ ಗೊಂಬೆ ಕಟ್ಟುವುದು, ನಾಯಿ ಕಿವಿ ಕತ್ತರಿಸಿ ಬೆದರಿಸುವುದು ಇತ್ಯಾದಿ.

ಇಪ್ಪತ್ತೊಂದನೆಯ ಶತಮಾನದತ್ತ ಹೊರಟಿರುವ ಈ ಯಾಂತ್ರಿಕ ಜೀವನದ ಸ್ದು-ಗದ್ದಲದಲ್ಲಿ, ಡಕ್ಕಲಿಗರು ಧೈರ್ಯದಿಂದ ಮುನ್ನುಗ್ಗಬೇಕು. ಸಮಾಜ ನಿಂತ ನೀರಲ್ಲ. ಹರಿಯುವ ನದಿಯಂತೆ ಇತ್ತೀಚೆಗೆ ಅದು ಹೊಸ ಹೊಸ ಬದಲಾವಣೆಯನ್ನು ಹೊಂದಿದೆ. ಒಟ್ಟಿನಲ್ಲಿ ಡಕ್ಕಲಿಗರು ಸರ್ಕಾರದ ವಿವಿಧ ಯೋಜನೆಗಳ ನೆರವು ಬೇರೆ ಬೇರೆ ಸಂಘ ಸಂಸ್ಥೆಗಳು ನೀಡುವ ಪ್ರೋತ್ಸಾಹ ಮುಂತಾದ ಸೌಲತ್ತುಗಳನ್ನು ಪಡೆದು ಆಶಆವಾದಿಗಳಾಗಬೇಕು ಮತ್ತು ಮಕ್ಕಳಿಗೆ ವಿದ್ಯೆ ಕಲಿಸಿ ಹಳೆಯ ಬದುಕಿಗೆ ಪೂರ್ಣವಿರಾಮ ಹಾಕಿ ಹೊಸ ಬದುಕಿಗೆ ಮುನ್ನುಗ್ಗಬೇಕು. ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರದವರು ನೀಡುತ್ತಿರುವ ಯಾವುದೇ ಬಗೆಯ ನೆರವನ್ನು ಈ ಬಡಜನತೆಯ ಮನೆ ಬಾಗಿಲಿಗೆ ತಲುಪುವಂತಾಗಬೇಕು. ಮೇಲಾಧಿಕಾರಿಗಳಿಂದ ಹಿಡಿದು ಜನಸಾಮಾನ್ಯರಿಗೂ ಕೂಡ ಈ ಗುಂಪಿನವರು ಸಹಾಯ ಸವಲತ್ತುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಈ ಗುಂಪಿನವರು ಪ್ರಗತಿ ಹೊಂದುವುದರಲ್ಲಿ ಸಂದೇಹವಿಲ್ಲ.