ಭಾರತೀಯ ಸಂಸ್ಕೃತಿ ಅನೇಕ ಉಪಸಂಸ್ಕೃತಿಗಳ ಮೊತ್ತ. ಅನೇಕತೆಯಲ್ಲಿ ಏಕತೆಯನ್ನು ಕಾಣುವುದೇ ಇದರ ವೈಶಿಷ್ಟ್ಯ. ಹಾಗಿಲ್ಲದಿದ್ದರೆ ಈ ಸಾವಿರಾರು ವರ್ಷಗಳಲ್ಲಿ ಭಿನ್ನ ಧರ್ಮ, ಭಿನ್ನಜನತೆ, ಭಿನ್ನ ಆಚಾರ – ವಿಚಾರ, ನೀತಿ ಸಂಹಿತೆಗಳನ್ನು ಮೈಗೂಡಿಸಿಕೊಂಡು ಇಂದು ಬೆಳೆಯುತ್ತಿರಲಿಲ್ಲ. ಇಂದು ಭಾರತೀಯ ಸಂಸ್ಕೃತಿಯಲ್ಲಿ ಮೆಚ್ಚಬಹುದಾದಂಥ ಅಂಶಗಳೇನಾದರೂ ಇದ್ದರೆ ಆವೆಲ್ಲ ಈ ಭಿನ್ನ ಜನತೆ, ಭಿನ್ನ ಬುಡಕಟ್ಟುಗಳ ಒಟ್ಟಾರೆ ಸಂಸ್ಕೃತಿಯಿಂದುಂಟಾದದ್ದು. ಅನೇಕ ಝರಿ, ಹಳ್ಳಗಳು ಸೇರಿ ತೊರೆಯಾದಂತೆ , ತೊರೆಗಳು ಕೂಡಿ ಸಮುದ್ರವಾದಂತೆ ನಮ್ಮ ಭಾರತೀಯ ಸಂಸ್ಕೃತಿ ಉಪ ಸಂಸ್ಕೃತಿಗಳನ್ನು ಮೈಗೂಡಿಕೊಂಡು ವಿಶಾಲತೆಯನ್ನು ಪಡೆದಿದೆ. ಇಲ್ಲಿ ಯಾವೊಂದು ಉಪಸಂಸ್ಕೃತಿಯನ್ನು ಕಡೆಗಣಿಸುವಂತಿಲ್ಲ. ಇವು ಪರಂಪರೆಯ ಮುಖ್ಯಾಂಶಗಳನ್ನು ಉಳಿಸಿಕೊಂಡು ಪ್ರಗತಿಯತ್ತ ಮುನ್ನಡೆಯುತ್ತಿವೆ. ಪ್ರತ್ಯೇಕವಾದೊಂದು ಗುಂಪು ಅಥವಾ ಜನರ ಸಮೂಹ ಒಂದೆಡೆ ನಿಂತು ರೂಢಿಸಿಕೊಳ್ಳುವ ನಂಬಿಕೆ, ಮೂಢನಂಬಿಕೆ, ವೃತ್ತಿ, ರೀತಿ-ನೀತಿ, ಭಾಷೆ, ಆಚಾರ-ವಿಚಾರ, ಹಬ್ಬ-ಹರಿದಿನ, ವೇಷ -ಭೂಷಣ, ಬದುಕಿನ ಶೈಲಿ ಇವೆಲ್ಲವುಗಳ ಮೊತ್ತ ಸಂಸ್ಕೃತಿ ಎಂದೆನಿಸಿಕೊಳ್ಳುತ್ತದೆ.

ಈ ಹಿನ್ನೆಲೆಯಲ್ಲಿ ಪರಿಶೀಲಿಸಿದರೆ ಈಗಾಗಲೇ ನಗರ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ಗುರುತಿಸಿರುವಂತೆ, ಬೆಟ್ಟ ಗುಡ್ಡಗಳಲ್ಲಿ, ಪರ್ವತಾರಣ್ಯಗಳಲ್ಲಿ ಬದುಕುತ್ತಿದ್ದ ಜನರ ಸಂಸ್ಕೃತಿ ವೈಶಿಷ್ಟ್ಯಗಳನ್ನು ಗಮನಿಸಿ, “ಬುಡಕಟ್ಟು ಜನಾಂಗ” ಎಂದು ಪರಿಗಣಿಸಿಲಾಗುತ್ತಿದೆ. ಎಲ್ಲಾ ಬುಡಕಟ್ಟುಗಳ ಸಂಸ್ಕೃತಿ ಒಂದೇ ರೀತಿಯಾಗಿಲ್ಲ. ಇಂಥ ಬುಡಕಟ್ಟುಗಳ ಸಂಸ್ಕೃತಿಯ ನಡುವೆಯೂ ಅನೇಕ ವ್ಯತ್ಯಾಸಗಳು ಗೋಚರಿಸುತ್ತವೆ. ಆ ವ್ಯತ್ಯಾಸಗಳ ವೈಶಿಷ್ಟ್ಯ ಮತ್ತು ಮಹತ್ವದಿಂದಾಗಿಯೇ ಉಪಸಂಸ್ಕೃತಿಗಳು ಅಧ್ಯಯನ ಯೋಗ್ಯವಾಗಿವೆ. ಇವು ಗ್ರಾಮೀಣ ಅಥವಾ ನಗರ ಸಂಸ್ಕೃತಿಗಿಂತ ಯಾವುದೇ ರೂಪದಲ್ಲಿಯೂ ಕೀಳಲ್ಲ. ಗ್ರಾಮೀಣರ ಮತ್ತು ಗುಡ್ಡಗಾಡು ಜನರ ನಡುವಿನ ಸಂಪರ್ಕ, ಸಮೀಕರಣ ನಡೆದಿರುವ ಬಗೆಯನ್ನು ಅರಿಯಲಿಕ್ಕೆ ಇಂಥ ಅಧ್ಯಯನಗಳು ನೆರವಾಗುತ್ತವೆ. ಕೊರಮ ಬುಡಕಟ್ಟಿನ ಸಂಸ್ಕೃತಿ ಇಂಥ ಉಪಸಂಸ್ಕೃತಿಗಳಲ್ಲೊಂದು. ದ್ರಾವಿಡ ವರ್ಗಗಳ ನಡುವೆ ರೂಪುಗೊಂಡ ಕೊರಮ ಬುಡಕಟ್ಟಿನ ನೆಲೆ, ತಮಿಳುನಾಡಿನ ಒಂದು ಭಾಗ ಎಂಬುದನ್ನು ದೊರೆತಿರುವ ಲಿಖಿತ ಆಧಾರ ಮತ್ತು ಕ್ಷೇತ್ರ ಕಾರ್ಯದಿಂದ ನಿರ್ಣಯಿಸಲಾಗಿದೆ. ಬದುಕಿನ ಅನಿವಾರ್ಯತೆಯಿಂದಾಗಿಯೋ, ರಾಜಕೀಯ ಸ್ಥಿತ್ಯಂತರದಿಂದಾಗಿಯೋ, ಪ್ರಾಕೃತಿಕ ಸಂದರ್ಭಗಳಿಂದಾಗಿಯೋ, ಕೊರಮರು ತಮ್ಮ ಮೂಲ ನೆಲೆಯಿಂದ ಹೊರಟು ಭಾರತದಾದ್ಯಂತ ಹರಡಿ ಹಂಚಿ ಹೋಗಿರುವುದು ಗೋಚರಿಸುತ್ತದೆ. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ, ಈ ಕೊರಮ ಬುಡಕಟ್ಟಿನ ಜನ.

ಕಾಡಿನಿಂದ ನಾಡಿಗೆ ಬಂದ ಈ ಜನ ಹಿಂದೂ ಧರ್ಮದಲ್ಲಿ ಅಥವಾ ಮುಖ್ಯ ಪ್ರವಾಹದಲ್ಲಿ ತಮ್ಮನ್ನು ಕಂಡುಕೊಳ್ಳಲು ಮಾಡಿರುವ ಪ್ರಯತ್ನ ಅವರು ತಮ್ಮ ಜಾತಿಯ ಮತ್ತು ಭಾಷೆಯ ಹುಟ್ಟಿನ ಬಗೆಗೆ ಕಲ್ಪಿಸಿಕೊಂಡಿರುವ ಕಥೆಗಳಿಂದ ತಿಳಿಯುತ್ತದೆ. ಅರಸನ ಅಂಕೆಯಿಲ್ಲದೆ, ದೆವ್ವದ ಕಾಟವಿಲ್ಲದೆ, ನೀರಿನಲ್ಲಿನ ಮೀನಿನಂತೆ, ಬಾನಲ್ಲಿಯ ಹಕ್ಕಿಯಂತೆ ಸ್ವತಂತ್ರವಾಗಿ ಕಾಡು-ನಾಡಿನ ನಡುವೆ ರಾಯಭಾರಿಗಳಂತೆ ಬದುಕಿನ ಈ ಬುಡಕಟ್ಟಿನವರು ಕ್ರಮೇಣ ಜಾನಪದರ ಬದುಕಿನ ಒಳಹೊರಗನ್ನೆಲ್ಲ ಆವರಿಸಿದರು. ತಮ್ಮ ಜಾಣ್ಮೆ, ಪ್ರತಿಭೆ, ನೈಪುಣ್ಯತೆಯಿಂದ ಜನಾನುರಾಗಿಗಳಾಗುತ್ತಾ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳಿಂದ ಸಮಾಜದಲ್ಲಿ ಮೇಲೋ, ಕೀಳೋ ಆಗಿ ಬದುಕಿದರು. ಗ್ರಾಮೀನ ಜನರಿಗೆ ಬೇಕಾದ ತಟ್ಟಿ, ಬುಟ್ಟಿ, ಮಂಕರಿಗಳನ್ನೋ, ಹಗ್ಗ, ನೆಲವುಗಳನ್ನೋ ಒದಗಿಸುವುದರ ಮೂಲಕ ಅವರ ನಿಕಟ ಸಂಪರ್ಕ ಹೊಂದಿದರು. ಅಷ್ಟೇ ಅಲ್ಲದೆ ಗ್ರಾಮೀಣರ ಮಾನಸಿಕ ಚಿಂತೆಗಳನ್ನು ದೂರ ಮಾಡುವ ಮನಃಶಾಸ್ತ್ರಜ್ಞರಂತೆ, ರೋಗ-ರುಜಿನಗಳನ್ನು ನಿವಾರಿಸು ಸಂಚಾರಿ ವೈದ್ಯರಂತೆ, ಮಾಂತ್ರಿಕರಂತೆ ಕೆಲಸ ಮಾಡಿದರು. ಹಚ್ಚೆಯ ಕಲೆ ಮತ್ತು ಹಚ್ಚೆ ಹಾಕುವಾಗ ಹಾಕುತ್ತಿದ್ದ ಹಾಡುಗಳ ಮೂಲಕ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಸೇವೆ ಸಲ್ಲಿಸಿದರು. ಈ ಮುಖಾಂತರ ಈ ಬುಡಕಟ್ಟು ವಿಶಾಲವಾದ ಜೀವನ ಕ್ಷೇತ್ರಕ್ಕೆ ಕಾಲಿರಿಸಿದಂತಾಯಿತು. ರಾಷ್ಟ್ರೀಯ ಮುಖ್ಯ ಪ್ರವಾಹದಲ್ಲಿ ಅಪ್ರಯತ್ನ ಪೂರ್ವಕವಾಗಿ ಈ ಬುಡಕಟ್ಟು ಮಿಳಿತವಾಯಿತು.

ಅಂದಿನ ಸಾಮಾಜಕಿಕ ಸಂದರ್ಭದಲ್ಲಿ ಈ ಬುಡಕಟ್ಟಿನ ವೃತ್ತಿಗೆ ಹಾಗೆಯೇ ಪ್ರವೃತ್ತಿಗೆ ಅನುಕೂಲಕರ ವಾತಾವರಣ ಉಂಟಾದುದರಿಂದ ಕೊರಮರು ಸಾಮಾನ್ಯರಿಂದ ರಾಜಕಾರಣಿಯರವರೆಗೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು. ಈ ಕೊರಮ ಬುಡಕಟ್ಟಿನ ವರ್ಣವಯ ಬದುಕಿನ ಲಕ್ಷಣಗಳು ಜನಮನದ ಗಮನ ಸೆಳೆದವು. ಕಾಲದಿಂದ ಕಾಲಕ್ಕೆ ಮೇಲೇರಿದ ಇವರ ವ್ಯಕ್ತಿತ್ವ ಜನಪದರನ್ನಷ್ಟೇ ಅಲ್ಲದೆ, ಶಿಷ್ಯರನ್ನೂ ಆಕರ್ಷಿಸಿತು. ಕ್ರಿ.ಶ.ಸುಮಾರು ೯ನೇ ಶತಮಾನದ “ಶಿಲಪ್ಪದಿಕಾರಮ್”ನಲ್ಲಿ ಕಂಡು ಬಂರುವ ಕೊರವಿಯೊಬ್ಬಳ ಚಿತ್ರ ಕಾಡಿನ ಜನ-ನಾಡಿನಲ್ಲಿ ಗಳಿಸಿದ ಪ್ರಸಿದ್ಧಿಯನ್ನು ಸಂಕೇತಿಸುತ್ತದೆ. ಅದೊಂದು ಏಕಮಾತ್ರ ಹಳೆಯ ಪುರಾವೆ. ಜೈನ ಕವಿ ಕರ್ಣಪಾರ್ಯ ತನ್ನ “ನೇಮಿನಾಥ ಪುರಾಣ”ದಲ್ಲಿ ಕೊರಮ – ಕೊರವಂಜಿಗಳ ಬಗೆಗೆ ನೀಡಿರುವ ಮಾಹಿತಿ ವಿವೇಚಿಸಿದರೆ ೧೨ನೇ ಶತಮಾನದಲ್ಲಿ ಕೊರಮ ಬುಟಕಟ್ಟು ವ್ಯಾಪಕವಾಗಿ ಕನ್ನಡ ನಾಡಿನಲ್ಲಿ ಗಳಿಸಿದ್ದ ಪ್ರಚಾರವನ್ನು ಅರಿಯಬಹುದು. ಜನಮನದ ನಾಡಿಮಿಡಿತ ಅರಿತ ಶಿವಶರಣರು ಕೊರವಂಜಿ ಕಾಯಕವನ್ನು ಗೌರವಿಸಿದ್ದಾರೆ. ಶ್ರೀ ಜ.ಚ.ನಿ. ಅವರು ಕೊರಮ – ಕೊರವಂಜಿಯರನ್ನು ಕನ್ನಡ ಜಾನಪದ ಸಮಾಜದ “ನಾರದ – ನಾದರೆ”ಯದರೆಂದು  ಕರೆದಿರುವುದು ಉಚಿತವಾಗಿದೆ. ಈ ಬುಡಕಟ್ಟಿಗೆ ತೋರಿದ ಮನ್ನಣೆಯೂ ಆಗಿದೆ. ಜಾನಪದ ಸಾಹಿತ್ಯದಲ್ಲಿ ಕೊರಮ ಬುಡಕಟ್ಟಿನ ವೃತ್ತಿ – ಪ್ರವೃತ್ತಿಗಳು, ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಅಂಶವನ್ನು ತಮಿಳು, ತೆಲಗು ಮತ್ತು ಕನ್ನಡ ಜಾನಪದ ಮತ್ತು ಶಿಷ್ಟ ಸಾಹಿತ್ಯದಿಂದ ಅರಿಯಬಹುದು. ಹೀಗೆ ಮುಖ್ಯ ಪ್ರವಾಹದಲ್ಲಿ ಈ ಬುಡಕಟ್ಟು ತನ್ನನ್ನು ಗುರುತಿಸಿಕೊಂಡರೂ ತನ್ನ ಬುಡಕಟ್ಟಿನ ಲಕ್ಷಣಗಳನ್ನು ಮಾತ್ರ ಕಳೆದುಕೊಳ್ಳಲಿಲ್ಲ, ಎಂಬುದು ನಮ್ಮ ಈ ಸಂಶೋಧನೆ ತೋರುವ ವಿಶೇಷ.

ಭಾರತದಾದ್ಯಂತ ಚದುರಿದ ಕೊರಮರು ಅನೇಕ ಹೆಸರುಗಳಿಂದ ಕರೆಸಿಕೊಂಡರೂ ಆಯಾ ಪ್ರದೇಶದ ಸಂಸ್ಕೃತಿ, ಭಾಷೆಯ ಪ್ರಭಾವ ಅನಿವಾರ್ಯವಾಗಿ ಇವರ ಮೇಲಾಯಿತು. ಅಂದರೆ ಬುಡಕಟ್ಟಿನ ಲಕ್ಷಣಗಳು ಕರ್ಮಟವೆಂದೆನಿಸಿಕೊಳ್ಳಲಿಲ್ಲ. ಸುಧಾರಣೆಗೆ ಒಳಗಾಗುವ ಮನೋಭಾವ, ಎಲ್ಲರೊಳಗೆ ಒಂದಾಗುವ ಬಯಕೆಯ ಮೂಲಕ, ಸಮಾಜಕ್ಕೆ ತನ್ನಿಂದಾಗುವ ಸೇವೆ ಮಾಡುತ್ತ, ಆ ಮೂಲಕ ತಮ್ಮ ಜೀವನ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಕೊರಮರು ತೋರಿರುವ ಶ್ರದ್ಧೆ, ದುಡಿಮೆ, ಹೊಂದಾಣಿಕೆ ಮುಂತಾದ ವಿಶೇಷ ಗುಣಗಳನ್ನು ಗುರುತಿಸಬಹುದಾಗಿದೆ. ಆದರೆ ನಾಡಿನ ಜನ ಈ ಬುಡಕಟ್ಟಿನ ಮಹದಾಸೆಯನ್ನು ಅರಿತು ಸಮಾನತೆ, ಸಮಾನ ಅವಕಾಶ ದೊರಕಿಸುವಲ್ಲಿ ಮಾತ್ರ ವಿಫಲವಾಯಿತು ಎಂದೇ ಹೇಳಬಹುದು. ಅಂದಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಪರಿಸರ ಹಾಗೂ ಸುಧಾರಣಾವಾದಿ ಅವಕಾಶಗಳು ಕೊರಮರಿಗೆ ದೊರೆಯಲಿಲ್ಲ. ಆದರೂ ಕಾಲದಿಂದ ಕಾಲಕ್ಕೆ ಇವರಲ್ಲಿ ಉಂಟಾದ ಅರಿವಿನಿಂದಾಗಿ ಬದುಕಿನಲ್ಲಿ ಉಂಟಾದ ಬದಲಾವಣೆಯನ್ನು ಅರಿಯಬಹುದು.

ಕಾಡಿನಲ್ಲಿಯೇ ಉಳಿದು ಬೇಟೆಯನ್ನು ಅವಲಂಬಿಸಿ, ಮಾಂಸಹಾರಿಗಳಾಗಿಯೇ ಇದ್ದಿರಬಹುದಾದ ಈ ಬುಡಕಟ್ಟು, ನಾಡಿನ ಸಂಪರ್ಕ ಪಡೆದು, ಸುಧಾರಣಾ ಮನೋಭಾವವನ್ನು ಅಳವಡಿಸಿಕೊಂಡು, ಎಂದಿಗೂ ಅಸ್ಪೃಶ್ಯರಂತೆ ಬಾಳದೆ ಸಾಗಿ ಬಂದಿರುವುದು ಗಮನಾರ್ಹ ಸಂಗತಿ. ಮುಸ್ಲಿಂ ದೊರೆಗಳ ಕಾಲದಲ್ಲಿಯೂ ಅಂತಹ ತೊಂದರೆಗೆ ಒಳಗಾದಂತೆ ತೋರುವ ದಾಖಲೆಗಳು ಉಳಿದುಬಂದಿಲ್ಲ. ಬದಲಾಗಿ ಟಿಪ್ಪುಸುಲ್ತಾನ ಶತ್ರು ದಳದ ಕುದುರೆ ಮತ್ತು ಆಯುಧಗಳನ್ನು ಕದಿಯಲು, ಅವರ ಸೈನಿಕರ ಪಾಳಯವನ್ನು ಹಾಳು ಮಾಡಲು, ಕೊರಮ ಬುಡಕಟ್ಟಿನ ಜನರನ್ನು ಬಳಸಿಕೊಂಡ ಬಗೆಗೆ ದಾಖಲೆಗಳು ಇವೆ. ಅವರನ್ನು ಮತಾಂತರಗೊಳಿಸಿದ ದಾಖಲೆಗಳು ಇಲ್ಲ, ಹಾಗೆ ಮಾಡಿದಂತೆಯೂ ತೋರುವುದಿಲ್ಲ.

ಬ್ರಿಟಿಷರು ಈ ದೇಶಕ್ಕೆ ಬಂದ ಮೇಲೆ ಅವರ ಆಡಳಿತ ಕ್ರಮದಿಂದಾಗಿ ಪ್ರಗತಿಯತ್ತ ಸಾಗುತ್ತಿದ್ದ ಈ ಜನ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಬೇಕಾಯಿತು. ಮೂಲ ನೆಲೆಯನ್ನು ಕಳೆದುಕೊಂಡ ಅಲೆಮಾರಿಗಳಾದ ಈ ಜನ, ಸಮಾಜದ ನಂಬಿಕೆ ಗಳಿಸಲು ಸಾಧವಾಗಲಿಲ್ಲ. ನೆಮ್ಮದಿಯ ತಮ್ಮ ಬದುಕಿಗೆ ಬರಸಿಡಿಲೆರಗಿದಾಗ ಗಾಬರಿಗೊಂಡ ಇವರು ಬದುಕಲು ಅನೇಕ ವೃತ್ತಿಗಳನ್ನು ಅಳವಡಿಸಿಕೊಂಡರು. ತಮ್ಮ ಮೂಲ ವೃತ್ತಿಗಳಾದ ಬುಟ್ಟಿ ನೇಯುವುದು, ಹಗ್ಗ ಮಾಡುವುದು, ಕಣಿ ಹೇಳುವುದು, ಹಚ್ಚೆ ಹಾಕುವುದು ಅಂತೆಯೇ ಉಪ್ಪು ಮಾರುವುದು, ಎತ್ತುಗಳನ್ನು ಮಾರುವುದು, ಕಣಿ ಆಡಿಸುವುದು, ಹಾವು ಹಿಡಿಯುವುದು ಮುಂತಾದ ಉಪ ಉದ್ಯೋಗಗಳನ್ನು ಅನುಸರಿಸಿದಂತೆ ತೋರುತ್ತದೆ. ಕೆಲವರು ಕಳ್ಳತನ, ದರೋಡೆ, ಮೋಸ- ವಂಚನೆಗಳನ್ನು ಅವಲಂಬಿಸಿದರು. ಅಲ್ಲಿಯವರೆಗೆ ತಾವು ಮತ್ತು ತಮ್ಮ ತಮ್ಮ ಕೈಕಸಬುಗಳಿಗೆ ಪಡೆದಿದ್ದ ಸಾಮಾಜಿಕ ಮಾನ್ಯತೆಯನ್ನು ಕಳ್ಳತನ, ದರೋಡೆ ಮುಂತಾದ ಕಾರಣಗಳಿಂದಾಗಿ ಕಳೆದುಕೊಂಡರು. ಹರಿದು ತಿನ್ನುವ ಬಡತನದ ಕಾರಣಕ್ಕಾಗಿ ಇಂಥ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ನಿರತರಾದ ಇವರು, ಗಣ್ಯ ಸಮಾಜದ ಮಾನ್ಯತೆ ಕಳೆದುಕೊಂಡರು; ಮುಖ್ಯ ಪ್ರವಾಹದಿಂದ ದೂರ ಸರಿಯುವಂತಾದರು. ಇದರಿಂದ ಕೊರಮರೆಲ್ಲರೂ ಕಳ್ಳತನ ಮಾಡುತ್ತಿದ್ದರು ಎಂದರ್ಥವಲ್ಲ. ಇವರು ಮಾಡುತ್ತಿದ್ದ ಇತರ ಉದ್ಯೋಗಗಳನ್ನು, ಕಾಲದಿಂದ ಕಾಲಕ್ಕೆ ವಿದ್ವಾಂಸರು ದಾಖಲಿಸುತ್ತ ಬಂದಿದ್ದಾರೆ. ಇಂಥ ವ್ಯತ್ತಿಗಳಲ್ಲಿ ಅತೀಹೆಚ್ಚು ಪ್ರಭಾವ ಬೀರಿ ಜನಮನ ಸೆಳೆದದ್ದು ಈ ಬುಡಕಟ್ಟಿನ ಹೆಣ್ಣು ಮಗಳು ಕೊರವಂಜಿಯಾಗಿ ಕಣಿ ಹೇಳಿದ್ದು, ಅದರೊಡನೆ ಯಂತ್ರಕಟ್ಟುವ, ಮಂತ್ರಹಾಕುವ, ಮಕ್ಕಳ ಫಲಕ್ಕೆ ಔಷಧಿ ಕೊಡುವ ಕೆಲಸದಲ್ಲಿ ಪ್ರಸಿದ್ಧಳಾಗಿ ಸಮಾಜಕ್ಕೆ ಪ್ರಿಯಳಾದಳು. ತನ್ನ ಬುಡಕಟ್ಟಿಗೆ ಗೌರವ ತಂದಳು. ಈ ಕೊರವಂಜಿಯರು ನೂರಾರು ಬಗೆಯ ಹಚ್ಚೆಗಳನ್ನು ಹಾಕುತ್ತಿದ್ದರೆಂಬ ದಾಖಲೆಗಳನ್ನು ಗಮನಿಸಿದರೆ, ಹಚ್ಚೆ ಹಾಕುವುದು ಜಗತ್ತಿನ ಎಲ್ಲ ಭಾಗಗಳಲ್ಲಿ ಪ್ರಚಲಿತವಿದೆ. ಆದರ ಕೊರಮರ ಹಚ್ಚೆಯ ಚಿತ್ರಗಳು ಭಾರತೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳಾಗಿವೆ. ಈ ಚಿತ್ರಗಳೆಲ್ಲ ಪುರಾಣದ ಸನ್ನಿವೇಶಗಳಿಗೆ ಮತ್ತು ಪ್ರಕೃತ್ತಿಯ ನಾನಾ ವಸ್ತು ವಿಶೇಷಗಳಿಗೆ ಸಂಬಂಧಿಸಿದುದವು ಗಳೆಂಬುದು ಗಮನಾರ್ಹ. ಹಚ್ಚೆ ಹಾಕುವಾಗ ಇವರು ಹಾಡುತ್ತಿದ್ದ ಹಾಡುಗಳು ಯಾರನ್ನೂ ತಲೆದೂಗಿಸುತ್ತಿದ್ದವು. ಕೊರವಂಜಿಯ ಹಾಡಿನ ಶೈಲಿ, ತನ್ಮೂಲಕ ನೀತಿಯನ್ನು ಬೋಧಿಸುವ ಕ್ರಮ, ಅವರ ನಗೆ ಹಾಸ್ಯ, ಮಾತು- ರೀತಿ ಕೇವಲ ಜನಮನವನ್ನು ರಂಜಿಸುವ ಕಲೆ ಮಾತ್ರವಾಗಲಿಲ್ಲ; ಆ ಮೂಲಕ ಜನರು ಧಾರ್ಮಿಕ ಅಂಶಗಳ ಜೊತೆಗೆ ನೀತಿಯನ್ನು ಬೋಧಿಸಿ ಸಮಾಜ ಧರ್ಮವನ್ನು ರೂಪಿಸುವ ಕಾರ್ಯವನ್ನೂ ಮಾಡಿರುವುದು ಉಲ್ಲೇಖನೀಯ.

ಕೊರಮರ ಕಷ್ಟ ಸಹಿಷ್ಣುಗಳು. ಹೊಲ- ಮನೆಗಳನ್ನು ಮಾಡಿಕೊಳ್ಳದೆ ಅಲೆಮರಿಗಳಾಗಿ ಬಿಸಿಲು, ಮಳೆ, ಚಳಿ ಎನ್ನದೆ ಅವುಗಳಿಗೆ ಮೈಯೋಡ್ಡಿ, ಸಿಕ್ಕಿದರೆ ತಿಂದು. ಸಿಕ್ಕದಿದ್ದರೆ ಹೊಟ್ಟೆಗೆ ಬಟ್ಟೆ ಕಟ್ಟಿ ಬದುಕಲು ಹೆಣಗಿದವರು. ಈ ಸಾವಿರಾರು ವರ್ಷಗಳ ಅತಂತ್ರದ ಸ್ಥಿತಿ ಇಂದಿಗೂ ಅವರನ್ನು ಮೇಲೇಳಲು ಬಿಡುತ್ತಿಲ್ಲ.ಇವರು ಮಾಡುತ್ತಿದ್ದ ವೃತ್ತಿಗಳು ಇವರ ಬದುಕಿಗೆ ಆಧಾರವಾದವೇ ಹೊರತು ಆರ್ಥಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ ಮುಂದೆ ಬರಲು ಸಾಧ್ಯವಾಗಲಿಲ್ಲ. ಇತ್ತೀಚಿಗೆ ಸ್ವಾತಂತ್ರ್ಯ ನಂತರ ಎಲ್ಲೋ ಕೆಲವರ ಭೂಮಿ, ಕಾಣಿ ಮಾಡಿಕೊಂಡವರಿದ್ದರೂ, ಇನ್ನೂ ಅನಕ್ಷರಸ್ಥರಾಗಿ, ಅಲೆಮಾರಿಗಳಾಗಿ ಅನೇಕ ಜನ ಬಡತನದಲ್ಲಿಯೇ ಬೇಯುತ್ತಿದ್ದಾರೆ. ಅದೆಷ್ಟೋ ಶತಮಾನಗಳವರೆಗೆ ಗುಡ್ಡಗಾಡು ನಿವಾಸಿಗಳಾಗಿದ್ದು ಮುಂದೆ ಅದೆಷ್ಟೋ ಶತಮಾನಗಳ ವರೆಗೆ ಅಲೆಮಾರಿಗಳಾಗಿ ಬದುಕಿದ ಈ ಬುಡಕ್ಕಟ್ಟು ತನ್ನ ಆಚರಣೆ, ನಂಬಿಕೆಗಳನ್ನು, ರೀತಿ-ರಿವಾಜುಗಳನ್ನು, ವೈವಾಹಿಕ ಸಂಬಂಧ ಮತ್ತು ಸಾಂಸಾರಿಕ ನೀತಿಯನ್ನು ವ್ಯವಸ್ಥಿತವಾಗಿ ಇಂದಿಗೂ ಉಳಿಸಿಕೊಂಡು ಬಂದಿರುವುದು ಅತ್ಯಂತ ಆಶ್ಚರ್ಯದ ಸಂಗತಿಯಾಗಿದೆ. ಹಬ್ಬ ಹರಿದಿನಗಳಲ್ಲಿ ಆಚರಿಸುವ ಆಚರಣೆಗಳು, ಜನನದಲ್ಲಿ, ಮೈನೆರೆದಾಗ, ಮದುವೆಯಲ್ಲಿ, ಸಾವಿನಲ್ಲಿ ಆಚರಿಸುತ್ತಿದ್ದ ಮೂಲದ ಕೆಲವು ಆಚರಣೆಗಳ ಪರಿಸರದ ಪ್ರಭಾವದಿಂದ ಬದಲಾಗಿದ್ದರೂ, ಇನ್ನೂ ಕೆಲವು ಜೀವಂತವಾಗಿವೆ. ಕೊಮರ ಬುಡಕಟ್ಟಿನವರು ತಮ್ಮ ವೃತ್ತಿಯ ಗುಟ್ಟನ್ನು ಬುಟ್ಟು ಕೊಡುವವರಲ್ಲ. ಕಳ್ಳತನದ ಸಂದರ್ಭದಲ್ಲಿ ಇದು ಚೆನ್ನಾಗಿ ವ್ಯಕ್ತವಾಗುತ್ತವೆ. ವಿಶೇಷ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮಶೀಲವನ್ನು ಲೆಕ್ಕಿಸದೆ ತಮ್ಮವರನ್ನು, ತಮ್ಮ ಗಂಡಂದಿರನ್ನು ರಕ್ಷಿಸಲು ಗುಟ್ಟು ಬಿಟ್ಟು ಕೊಡದೆ ಅನಾಚಾರಕ್ಕೂ ಇಳಿದು ಆ ಸಂದರ್ಭವನ್ನು ನಿಭಾಯಿಸುತ್ತಿದ್ದುದು ಒಂದು ತಂತ್ರವಷ್ಟೆ. ಅವರಿಗೆ ಶೀಲದ ಬಗೆಗೆ ಕಟ್ಟೆಚ್ಚರ ಮತ್ತು ಸಮಾಜಿಕ ಬಂಧನದ ಪ್ರಜ್ಞೆ ವಿಶೇಷವಾಗಿತ್ತು. ಅವರ ಶೀಲಕ್ಕೆ ಹೆಚ್ಚಿನ ಮನ್ನಣೆ ಇತ್ತು ಎಂಬುದು ಗಮನಾರ್ಹ. ಇದು ಶಿವ ಕೊರವಂಜಿ ಗೀತೆಯಲ್ಲಿ ಸುವ್ಯಕ್ತವಾಗುತ್ತದೆ. ಈ ಕೊಮರ ಬುಡಕಟ್ಟು ನಾಗರಿಕರಲ್ಲಿರುವಂತೆ ರಕ್ತ ಶುದ್ಧಿ ಮತ್ತು ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ. ಅತಿ ಪ್ರಾಚೀನ ಕಾಲದಿಂದಲೂ ವೈವಾಹಿಕ ಸಂಬಂಧದಲ್ಲಿ “ಬೆಡಗುಹಳು, ಬಳಕೆಯಾಗುತ್ತಿವೆ. ವಿವಾಹಗಳು ಇಂದಿಗೂ ವ್ಯವಸ್ಥಿತವಾಗಿ ಭಿನ್ನ “ಗೋತ್ರ,ದಲ್ಲಿಯೇ ನಡೆಯುತ್ತಿವೆ. ಸಗೋತ್ರದಲ್ಲಿ ಸಂಬಂಧ ನಡೆಯುವುದಿಲ್ಲ. ಇಂಥ ಅಂಶಗಳನ್ನು ಜನತೆಯ ಮುಖ್ಯ ಪ್ರವಾಹದ ಪ್ರೇರಣೆಯಿಂದ ಅಂದರೆ ಆ ಕಾಲದ ನಾಗರಿಕರಿಂದ ರೂಢಿಸಿಕೊಂಡರೋ ಅಥವಾ ಇಂಥ ಅಲೆಮಾರಿ  ಬುಡಕಟ್ಟುಗಳ ಕಟ್ಟುಪಾಡುಗಳಿಂದ ಪ್ರೇರಿತರಾಗಿ ನಾಗರಿಕ ಸಮಾಜವೇ ಇಂಥ ರೀತಿಯನ್ನು ಸ್ವೀಕರಿಸಿತೋ ಎಂದು ನಿರ್ಣಯಿಸುವುದು ಕಷ್ಟ. ಕೊರಮ ಜನಾಂಗದ “ಬೆಡಗು “ಗೋತ್ರ,ಗಳು ಅತ್ಯಂತ ಪ್ರಾಚೀನವೆಂದು ಹೇಳಲಾಗುತ್ತಿದೆ.

ಕೊರಮರ ಮದುವೆಗಳಲ್ಲಿ ಹಿರಿಯರ ಪಾತ್ರವೇ ಮೇಲು. ಇವರಲ್ಲಿ ದೊಡ್ಡವರಿಗೆ ಚಿಕ್ಕವರು ವಿಧೇಯರಾಗಿ ನಡೆದುಕೊಳ್ಳುತ್ತಾರೆ. ಕೆಲವು ಬುಡಕಟ್ಟಿನಲ್ಲಿರುವಂತೆ ಹುಡುಗ-ಹುಡುಗಿ ಸ್ವತಂತ್ರವಾಗಿ ಪ್ರೇಮಿಸುವ ರೀತಿ ಈ ಜನಾಂಗದಲ್ಲಿ ಇಲ್ಲ. ಹೆಂಗಸರು ಗಂಡಂದಿರಿಗೆ ಸರಿಸಮವಾಗಿ ದುಡಿದರೂ, ಗಂಡಂದಿರಿಗೆ, ಹಿರಿಯರಿಗೆ ವಿಧೆಯರಾಗಿ ನಡೆಯುತ್ತಾರೆ. ಮದುವೆಗಳಲ್ಲಿ “ತಾಯಿದೀಪ, ಇರಿಸುವುದು, ಪುರೋಹಿತರನ್ನು ಮದುವೆಗೆ ಕರೆಯದೆ ಇರುವುದು ಸೂತಕದ ಸಂಬಂಧ ಆಚರಿಸುವ ಆಚರಣೆಗಳು, ಈ ಬುಡಕಟ್ಟಿನ ಮೂಲ ಆಚರಣೆಗಳ ಪಳೆಯುಳಿಕೆಗಳು ಎಂದು ತೋರುತ್ತದೆ. ಇಂದು ಬುಡಕಟ್ಟು ತನ್ನ ಲಕ್ಷಣಗಳನ್ನು ಕಳೆದುಕೊಂಡು ಜಾತಿಗಳಾಗಿ ಪರಿವರ್ತಿತವಾಗುತ್ತಿವೆ. ಅವರ ವೃತ್ತಿಗಳು ನಿಂತು ಹೋಗುತ್ತಿವೆ. ಭಾಷೆ ಸಾಯುತ್ತಿವೆ. ಇದು ಶೋಚನೀಯ ಸಂಗತಿ. ಕೊಮರ ಜನರ ವಿಶೇಷ ಕೊಡುಗೆ ಅವರದೇ ಆದ ಇಂದೂ ಉಳಿದುಕೊಂಡು ಬಂದಿರುವ ಕುಳುವ ಭಾಷೆ. ಇದು ಇನ್ನು ಶಾಸ್ತ್ರೀಯ ಅಧ್ಯಯನಕ್ಕೆ ಒಳಗಾಗದ್ದಿದರೂ ಮೂಲ ದ್ರಾವಿಡ ಭಾಷೆಯ ಕೆಲವು ವೈಶಿಷ್ಟ್ಯಗಳನ್ನು ಉಳಿಸಿಕೊಂಡಿವೆಯೆಂಬುದು ಗಮನಾರ್ಹ. ಇಂದು ಬುಡಕಟ್ಟು ಜನರ ತಮ್ಮ ಪರಿಸರದ ಬಹುಜನರ ಭಾಷೆಯನ್ನು ಅಳವಡಿಸಿಕೊಳ್ಳುವುದು ಸ್ವಾಗತಾರ್ಹ. ಬುಡಕಟ್ಟು ಜನಾಂಗದಂತೆಯೇ ಈ ಕುಳುವ ಭಾಷೆಯನ್ನು ಸಂರಕ್ಷಿಸುವುದು ಒಂದು ಸಾಂಸ್ಕೃತಿಕ ಅವಶ್ಯಕತೆಯಾಗಿದೆ. ದ್ರಾವಿಡ ಭಾಷೆಗಳ ಬೆಳವಣಿಗೆ, ಪರಸ್ಪರ ಸಂಬಂಧ ಮತ್ತು ಕೊಡು-ಪಡೆವ ಅಧ್ಯಯನಕ್ಕೆ ಕೆಲಮಟ್ಟಿಗಾದರೂ ಉಪಯೋಗವಾಗಬಹುದಾದ ಈ “ಕುಳುವ, ಭಾಷೆಯ ವಿಶಿಷ್ಟಾಂಶಗಳನ್ನು ರಕ್ಷಿಸುವ ಹಾಗೂ ಅಧ್ಯಯನ ಮಾಡುವ ಪ್ರಯತ್ನ ನಡೆಯಬೇಕಾಗಿದೆ.

ಕೊರಮ ಜನಾಂಗವು ತಮ್ಮದೇ ಆದ ಮೂಲ ಉಪಾಸನಾ ದೇವತೆ ಮತ್ತು ತತ್ಸಂಬಂಧವಾದ ಪುರಾಣ ಪರಂಪರೆ, ದೇವರ-ಧರ್ಮ, ಜೀವ-ಆತ್ಮ, ಸ್ವರ್ಗ-ನರಕ ಮುಂತಾದ ತಮ್ಮದೇ ಆದ ಯಾವ ವಿಶೇಷತೆಯನ್ನು ರೂಡಿಸಿಕೊಂಡಂತೆ ಕಂಡುಬರುವುದಿಲ್ಲ. ಹಿಂದೂ ಧರ್ಮ, ದೇವರನ್ನೇ ನಂಬಿ ಸಾಗಿ ಬಂದಿರುವುದು ಗೋಚರಿಸುತ್ತಸದೆ. ಆದರೆ ಪ್ರಾದೇಶಿಕವಾಗಿ ಕೆಲವರು ತಮ್ಮ ವೃತ್ತಿಗನುಗುಣವಾಗಿ “ಮೂದೇವಿ, “ಸತುವು, “ಮುನಿಶ್ವರ,ರನ್ನು ಪೂಜಿಸುತ್ತಿದ್ದುದು ತಿಳಿಯುತ್ತದೆ. ಅಲೆಮಾರಿಗಳಾಗಿರುವ ಜನ” ನೆಲೆಮಾರಿ”, ಗಳಾದ ಜನರಂತೆ ದೇವರು ಧರ್ಮ ಮತ್ತು ಪುರಾಣಗಳನ್ನು ಸೃಷ್ಟಿಸಲು ಹೇಗೆ ಸಾಧ್ಯ?

ಹಬ್ಬ ಹರಿದಿಗಳಲ್ಲಿ, ಮದುವೆ-ಮುಂಜಿವೆಗಳಲ್ಲಿ, ಹುಟ್ಟು-ಸಾವುಗಳಲ್ಲಿ ಬುಡಕಟ್ಟು ಜನರ ಆಚರಣೆಗಳು ಮತ್ತೆ ಜೀವಂತವಾಗಿ ನಿಲ್ಲಬೇಕು. ಅಂದರೆ ಬುಡಕಟ್ಟನ್ನು ಅದೇ ಸ್ಥಿತಿಯಲ್ಲಿಡಬೇಕು ಎಂದರ್ಥವಲ್ಲ. ಅವರ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳು ರೂಪಿತವಾಗಬೇಕು. ಜೊತೆಗೆ ಅವರ ಪರಂಪರೆಯಿಂದ ಬಂದಿರುವ ಬದುಕಿನ ಸಮಗ್ರ ರೀತಿ-ನೀತಿಗಳು, ಸಮಾಜ ವಿರೋಧಿಗಳಲ್ಲದ ವೃತ್ತಿಗಳಲ್ಲಿ ಅವರು ತೋರುವ ಕೌಶಲ ಮುಂದುವರೆಯಬೇಕು. ಅವೇ ಅವರ ಪ್ರಗತಿಗೆ ದಾರಿ ಮಾಡಿಕೊಡುವಂತಾಗಬೇಕು.

ಕೊರಮರನ್ನು ಸುಲಭವಾಗಿ ಪರಿವರ್ತಿಸಬಹುದು; ಮತಾಂತರ ತಂತ್ರದಿಂದಲ್ಲ, ಅವರ ಜೀವನ ಶೈಲಿಯನ್ನು ಬದಲಾಯಿಸುವ ಮೂಲಕ ಏಕೆಂದರೆ ಸಾವಿರಾರು ವರ್ಷಗಳಲ್ಲಿ ಈ ಜನಾಗ, ಬಡತನದಲ್ಲಿ ಬದುಕಿದರೂ ಮುಸ್ಲಿಮರ ಮತ್ತು ಕ್ರಿಶ್ಚಯನ್ನರ ಪ್ರಭಾವಕ್ಕೆ ಒಳಗಾಗಿ, ಮತಾಂತರಗೊಳ್ಳದೆ, ಹಿಂದೂ ಧರ್ಮದ ಮೂಲ ನೆಲೆಯಲ್ಲಿಯೇ ತಮ್ಮ ನೆಲೆ ಕಂಡುಕೊಂಡಿರುವುದು ಗಮನಾರ್ಹ. ಬ್ರಿಟಿಷ್ ಆಳ್ವಿಕೆಯಲ್ಲಿ ಕೊರಮರನ್ನು ರೈಲ್ವೆ ಗ್ಯಾಂಗುಗಳಲ್ಲಿ ಸೇರಿಸಿಕೊಂಡಿದ್ದು ಇವರ ಬದುಕಿಗೇ ಹೊಸ ತಿರುವನ್ನು ನೀಡಿದಂತಾಯಿತು. ಅವರ ಜನೋಪಯೋಗಿ ವೃತ್ತಿಗಳಿಗೆ ಪ್ರೇರಣೆ ನೀಡುವ ಸಹಕಾರಿ ಪದ್ಧತಿ, ಸಿದ್ಧ ವಸ್ತುಗಳನ್ನು ಸರಕಾರ ಕೊಂಡು ಪ್ರೋತ್ಸಾಹಿಸುವ ವ್ಯವಸ್ಥೆ ಇಂದು ಜರೂರಾಗಿ ಆಗಬೇಕಾಗಿದೆ.

ಕೊರಮ ಬುಡಕಟ್ಟು ಕುರಿತ ಇಲ್ಲಿಯವರೆಗಿನ ನಮ್ಮ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಕಂಡುಕೊಂಡ ಕೆಲವು ವೈಶಿಷ್ಟ್ಯಗಳು:

೧) ಕೊರಮ ಬುಡಕಟ್ಟು ಆದಿದ್ರಾವಿಡ ಜನಾಂಗದ ಒಂದು ಮೂಲಕ ಘಟಕವಾಗಿ ಬೆಳೆದು ಬಂದಿದೆ. ೨) ದ್ರಾವಿಡ ಮೂಲ ನೆಲೆಯಾಗಿರಬಹುದಾದ ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶದ ತಮಿಳುನಾಡಿನ “ಕುರು”(ಬೆಟ್ಟ) ಪ್ರದೇಶ ಈ ಬುಡಕಟ್ಟಿನ ಮೂಲ ನೆಲೆಯಾಗಿರುವಂತೆ ತೋರುತ್ತದೆ. ೩) ಕೊರಮ ಜನಾಂಗಗಳ ವೃತ್ತಿ, ಪ್ರವೃತ್ತಿಳ ಮೂಲ ಸ್ವರೂಪ ತಿಳಿಸುವ ದಾಖಲೆಗಳ ಅಭಾವವಿದ್ದರೂ ಬುಡಕಟಟಿನ ವಿವಿಧ ಶಾಖೆಗಳಲ್ಲಿ ಇಂದಿಗೂ ಭದ್ರವಾಗಿರುವ ಕೆಲವು ಮೂಲ ಅಂಶಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ೪) ೧. ಜನಾಂಗಪ್ರಿಯತೆ, ೨. ತಮ್ಮ ಜನಾಂಗದ ರಕ್ತ ಶುದ್ಧಿ, ೩. ಅತಿ ಸಮೀಪದ ಬಂಧುಗಳಲ್ಲಿ ಸೀಮಿತವಾಗಿದ್ದ ವೈವಾಹಿಕ ಸಂಬಂಧಗಳು, ೪. ದುಡಿಮೆಯ ದೃಷ್ಟಿಯಲ್ಲಿ ಪುರುಷ – ಸ್ತೀಯರಲ್ಲಿ ಸಮಾನ ಭಾವನೆ, ೫. ಸ್ವತಂತ್ರ ಜೀವನದೃಷ್ಟಿ, ೬.ಜನೋಪಯೋಗಿ ಜೀವನ ವೃತ್ತಿಗಳ ಅನುಸರಣೆ, ೭. ಕುಟುಂಬ ಮತ್ತು ಸಾಮಾಜಿಕ ಕಟ್ಟುಪಾಡು, ೮. ಕಷ್ಟ ಸಹಿಷ್ಣುತೆ, ೯. ನಂಬಿಕೆ ಇರುವಲ್ಲಿ ನಿಷ್ಠೆ, ೧೦. ಅಲ್ಪ ತೃಪ್ತಿ, ೧೧. ಬದಲಾವಣೆಗೆ ಸಲೀಸಾಗಿ ಹೊಂದಿಕೊಳ್ಳುವ ಮನೋವೃತ್ತಿ, ೧೨. ಸ್ವಾರ್ಥರಹಿತ ತ್ಯಾಗ ಮನೋಭಾವ, ೧೩. ಸಾಂಸ್ಕೃತಿಕ ವೈಶಿಷ್ಟ್ಯಗಳಾದ ಕಣಿ, ಹಚ್ಚೆ ಮತ್ತು ಹಗ್ಗ ಮತ್ತು ಬುಟ್ಟಿ ಮಾಡುವಲ್ಲಿ ನೈಪುಣ್ಯತೆ, ೧೪. ಹಕ್ಕಿ, ಪ್ರಾಣಿಗಳ  ಬೇಟೆಯ ವೈಶಿಷ್ಟ್ಯ, ೧೫. ನಿಸರ್ಗಪ್ರಿಯತೆ, ೧೬. ಸಾಕುಪ್ರಾಣಿಗಳ ಬಗೆಗಿನ ಆದರ, ೧೭. ಇವರಲ್ಲಿದ್ದ ವೈದ್ಯ ಪದ್ಧತಿ, ೧೮. ಎಂದಿಗೂ ಅಸ್ಪೃಶ್ಯರಾಗಿ ಬಾಳದಂಥ ಗುಣ ಮುಂತಾದವುಗಳನ್ನು ಗಮನಿಸಬಹುದು. ಇವು ಈ ಬುಡಕಟ್ಟಿನ ವೈಶಿಷ್ಟ್ಯಗಳು. ದಕ್ಷಿಣ ಕರ್ನಾಟಕದ ಕೊರಮ ಜನಾಂಗ ಆಧುಣಿಕರಣದ ಮಧ್ಯದಲ್ಲಿಯೂ ತಮ್ಮ ಮೂಲಕ ಈ ಅಂಶಗಳನ್ನು ಇನ್ನೂ ಉಳಿಸಿಕೊಂಡಿರುವುದು ಗಮನಾರ್ಹ.

ಕೊನೆಯಲ್ಲಿ……….

ಸಾವಿರಾರು ವರ್ಷಗಳಲ್ಲಿ ಕೆಳಸ್ತರದಲ್ಲಿಯೇ ಸಾಗಿಬಂದಿರುವ ಕೊರಮ ಬುಡಕಟ್ಟಿಗೆ ಸಾಮಾಜಿಕ ನ್ಯಾಯ ದೊರೆತಿಲ್ಲ. ಶಿಕ್ಷಣ ಇವರಿಗೆ ಕಡ್ಡಾಯವಾಗಬೇಕು. ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚು ಹೆಚ್ಚು ಅವಕಾಶ ದೊರೆಯುವಂತಾಗಬೇಕು. ಇನ್ನು ಅಲೆಮಾರಿಗಳಾಗಿ, ಅನಕ್ಷರ ಕುಕ್ಷಿಗಳಾಗಿ ಬದುಕುತ್ತಿರುವವರಿಗೆ ಸರ್ಕಾರ ಜಮೀನು ಒದಗಿಸುವುದಲ್ಲದೆ ನೆಲೆನಿಲ್ಲಲು ಸರಿಯಾದ ಶಾಶ್ವತ ಪರಿಹಾರ ನೀಡುವ ಯೋಜನೆಗಳನ್ನು ರೂಪಿಸಬೇಕು. ಮಳೆಯನ್ನೇ ನಂಬಿದವರಿಗೆ ಅಂತರ್ಜಲ ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರೊಳಗೊಂದಾಗಿ ಬದುಕುವ ಅವಕಾಶಗಳನ್ನು ಇವರಿಗೆ ಒದಗಿಸಿಕೊಡಬೇಕು. ಕ್ರೀಡಾಕ್ಷೇತ್ರಕ್ಕೆ ಇವರ ಪ್ರವೇಶವಾಗಿಲ್ಲ. ಈ ಬುಡಕಟ್ಟಿ ಮೂಲದಿಂದಲೂ ಕಷ್ಟ ಸಹಿಷ್ಣುಗಳಾಗಿ ವಂಶವಾಹಿನಿ ಗುಣಗಳನ್ನು ಹೊಂದಿರುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ಇವರಿಗೆ ತರಬೇತಿ ನೀಡಿದರ ನಿರೀಕ್ಷಿತ ಫಲಕಂಡು ಕೊಳ್ಳುವುದು ಕಷ್ಟವೇನಲ್ಲ. ಕೈಗಾಗಿಕಾ ಕ್ಷೇತ್ರದಲ್ಲಿ ಅವಕಾಶಕೊಟ್ಟು ದುಡಿಸಬಹುದು. ಚಿತ್ರಕಲಾ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಇವರಿಗೆ ಅವಕಾಶ ಕಲ್ಪಿಸಬೇಕು. ವಿದ್ಯೆ ತಲೆತಲಾಂತರದಿಂದ ಕೆಲವರ ಗುತ್ತಿಗೆಯಾಗಿದೆ. ಇದು ರಾಷ್ಟ್ರೀಕರಣವಾಗಿ ಎಲ್ಲರಿಗೂ ತೆರೆದುಕೊಳ್ಳಬೇಕಾಗಿದೆ. ಸುಶಿಕ್ಷತರ ಮಗನೊಬ್ಬನಿಗೆ ಸಿಕ್ಕುವ ಮನೆಪಾಠ, ತಂದೆ-ತಾಯಿಗಳ ಮಾರ್ಗದರ್ಶನ, ಪ್ರಸಾರ ಮಾಧ್ಯಮಗಳ ಮೂಲಕ ದೊರೆಯುವ ಸಾಮಾಜಿಕ ಜ್ಞಾನ ಕಾಡಿನಿಂದ ಬಂದ ಈ ಕಾಪಾಡಿಗಳಿಗೆ ದಕ್ಕಲು ಸಾಧ್ಯವಿಲ್ಲ. ಆದ್ದರಿಂದ ಇವರ ವಿದ್ಯಾಭ್ಯಾಸಕ್ಕೆ ವಿಶೇಷ ಗಮನಹರಿಸಬೇಕು. ಇಲ್ಲದಿದ್ದರೆ ಅವರು ಮುಂದುವರೆಯುವ ವೇಗವೂ ನಿಧಾನವಾಗುತ್ತದೆ. ಕಷ್ಟ ಸಹಿಷ್ಣುಗಳಾಗಿ ಬೆಳೆದುಬಂದ ಕೊರಮ ಮಹಿಳೆಯರು ಮುಖ್ಯ ಪ್ರವಾಹದ ಮಹಿಳೆಯೊಂದಿಗೆ ಪ್ರಗತಿಯತ್ತ ಮುನ್ನಡೆಯಲು ವಿಶೇಷವಾದ ಶಿಕ್ಷಣ ವ್ಯವಸ್ಥೆ, ಸಾಮಾಜೀಕರಣ ವ್ಯವಸ್ಥೆ ಆಗಬೇಕು. ಕೈಕಸುಬಳ ಪ್ರಾವೀಣ್ಯತೆಯ ವಿಕಾಸಕ್ಕೆ  ವಿವಿಧ ಮಾರ್ಗಗಳನ್ನು ರೂಪಿಸಬೇಕು. ಅವರಿಗಾಗಿ ಸಹಕಾರಿ ಸಂಘಗಳ ವ್ಯವಸ್ಥೆ ಮುಂತಾದವುಗಳನ್ನು ಸರ್ಕಾರ ಮತ್ತು ಸಾರ್ವಜನಿಕರು ರೂಪಿಸಲು ಮುಂದಾಗಬೇಕು. ವಿಶಾಲ ಭಾರತದ ಸಮ್ಮಿಶ್ರ ಸಂಸ್ಕೃತಿಗೆ ಕೊರಮ ಜನಾಂಗದ ಕೊಡುಗೆ ಒಂದು ಅಳಿಲು ಸೇವೆ.

ಅನೇಕತೆಯಲ್ಲಿ ಏಕತೆ ಎಂಬ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಮರೆಯರೆ, ಮೂಲ ಸಂಸ್ಕೃತಿ ಉಪಸಂಸ್ಕೃತಿಗಳ ಮುಖ್ಯಾಂಶಗಳ ಹರಬೆರಕೆಯ ಜೀವನ ದೃಷ್ಟಿಯನ್ನು ಬೆಳೆಸುವುದೇ ಇಂದಿನ ಅವಶ್ಯಕತೆ. ಮಾನವ ಸಹಜ ಸ್ವಭಾವವಾದ ತನ್ನ ಮೂಲ ನೆಲೆಯ ಪ್ರಿಯತೆಯ ಜೊತೆಗೆ ಕಾಲಕ್ಕೆ ತಕ್ಕಂತೆ ಬೇಕಾದ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಭಾವನೆಗಳನ್ನು ರೂಪಿಸುವುದು ಮುಖ್ಯವಾದದ್ದೆ, ಪರಂಪರೆಯನ್ನು ಉಳಿಸಿಕೊಂಡು ಆಧುನಿಕತೆಯತ್ತ ಹೊರಳುತ್ತಿರುವ ದಕ್ಷಿಣ ಕರ್ನಾಟಕದ ಕೊರಮ ಜನಾಂಗವನ್ನು ಕುರಿತ ಅಧ್ಯಯನ ಆದಿವಾಸಿಗಳಾಗಿ, ಅಲೆಮಾರಿಗಳಾಗಿ ಬದುಕುತ್ತಿರುವ ಎಲ್ಲ ದೇಶಗಳ ಜಿಪ್ಸಿ ಜನಾಂಗ ನಡೆದುಬಂದ ದಾರಿಗೆ, ಮುನ್ನಡೆಯಬೇಕಾದ ಗುರಿಗೆ ಈ ಕಿರು ಅಧ್ಯಯನ ಒಂದು ಬೆಳಕಿಂಡಿ ಮಾತ್ರ.

ಸಮಗ್ರ ಭಾರತದ ಅಲೆಮಾರಿ ಜನಾಂಗಗಳ, ಮೂಲ ಚಲನವಲನ – ವೃತ್ತಿ ವೈವಿಧ್ಯ, ಹಾಗೂ ಹೊರದೇಶಗಳಿಗೂ ಪ್ರವೇಶ ಮಾಡಿ ಬದುಕುತ್ತಿರುವವರ ಸಮಗ್ರ ಅಧ್ಯಯನಕ್ಕೆ ಇದೊಂದು ತೋರುಗಂಬ ಎಂದು ಪರಿಗಣಿತವಾದರೆ ನಮ್ಮ ಈ ಅಧ್ಯಯನದ ಶ್ರಮ ಸಾರ್ಥಕ, ಹೀಗೆ  ತೀವ್ರಗತಿಯಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿರುವ ಕೊರಮ ಬುಡಕಟ್ಟಿನ ಮೂಲ ಸಂಗತಿಗಳನ್ನು ದಾಖಲಿಸಿದ ತೃಪ್ತಿ ನಮ್ಮದು.