ಮುಡಿಯಂ ಪಿಡಿದೆೞೆದವನಂ
ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನಂ
ಮುಡಿಯಿಸುಗೆ, ಆ ಮುಡಿಯಂ ದಲ್
ಮುಡಿಯೆಂ ಗಳಂ, ಈಗಳಿಂತೆನ್ನಯ ಮುಡಿಯಂ

ಎಂದು ಹೇಳಿದುದನ್ನು ಕೇಳಿ ಭೀಮಸೇನನು ಕೋಪೋದ್ರೇಕವನ್ನು ತಡೆಯಲಾರದೆ ನವಮೇಘನಾದದಿಂದ ಹೀಗೆಂದು ಪ್ರತಿಜ್ಞೆ ಮಾಡುವನು :

ಮುಳಿಸಿಂದಂ ನುಡಿದೊಂದು ನಿನ್ನ ನುಡಿಸಲ್ಗೆ, ಆರಾಗದೆಂಬರ್
ಮಹಾ ಪ್ರಳಯೋಲ್ಕೋಪಮ ಮದ್ಗದಾಹತಿಯಿನ್,
ಅತ್ಯುಗ್ರಾಜಿಯೊಳ್ ಮುನ್ನಮಿ|
ಖಳ ದುಶ್ಯಾಸನಂ ಪೊರಳ್ಚಿ ಬಸಿಱಂ
ಪೋಳ್ದಿಕ್ಕಿ ಬಂಬಲ್ಗರು
ಳ್ಗಳಿನ್, ಆನಲ್ತೆ ವಿಳಾಸದಿಂ ಮುಡಿಯಿಪೆಂ ಪಂಕೇಜಪತ್ರೇಕ್ಷಣೇ||

ಕುಡಿವೆಂ ದುಶ್ಯಾಸನೋರಸ್ಥಳಮನ್, ಅಗಲೆ ಪೋೞ್ದಾರ್ದು ಪೊ
ಕ್ಕುಡಿವೆಂ ಪಿಂಗಾಕ್ಷನೂರುದ್ವಯಮನ್, ಉರುಗದಾಘಾತದಿಂ ನುಚ್ಚುನೂಱು
ಗೊಡೆವೆಂ ತದ್ರತ್ನರಶ್ಮಿಪ್ರಕಟಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವು, ಅಹಿತರಂ ನೋಡಿ ಪಂಕೇಜವಕ್ರೇ ||

ಎಂದು ಗರ್ಜಿಸಿ ದಿಕ್ಪಾಲಕರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿ ‘ವಿಳಯಕಾಳಜಳಧರ ನಿನಾದದಿಂ’ ಮೊಳಗುವನು. ಈ ಕೋಪಾಟೋಪದ ಮಧ್ಯದಲ್ಲಿ ಪಂಪನ ಪ್ರಕಾರ ಪತಿಯಾದ ಅರ್ಜುನನು ಒಂದು ಮಾತನ್ನೂ ಆಡದೆ ಕುಳಿತಿರುವನು. ಇದು ಆಭಾಸವಾಗಿ ಕಾಣುವುದಿಲ್ಲವೆ? ಈಸಂದರ್ಭದಲ್ಲಿ ಭೀಮನಾಡಿದ ಮಾತನ್ನೇ ಪ್ರಕಾರಾಂತರವಾಗಿ ಅರ್ಜುನನೇ ಹೇಳಿದ್ದರೆ ಇನ್ನೂ ಹೆಚ್ಚು ಸಮಂಜಸವಾಗುತ್ತಿದ್ದಿತಲ್ಲವೆ? ಈ ಸಮಯದಲ್ಲಿ ಪಂಪನು ತನ್ನ ಮಾರ್ಪಾಟನ್ನು ಮರೆತು ಮೂಲಭಾರತದಲ್ಲಿದ್ದುದನ್ನು ಇದ್ದಂತೆಯೇ ಹೇಳಿ ಬಿಟ್ಟಿದ್ದಾನೆ.

ಮುಂದೆ ಇನ್ನೆರಡು ಸ್ಥಳಗಳಲ್ಲಿ ಪಂಪನು ಹೀಗೆಯೆ ಮುಗ್ಗರಿಸಿರುವನು. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಕೀಚಕನು ದೌಪದಿಯಲ್ಲಿ ಅತ್ಯಾಚಾರನಡೆಸಲು ಪ್ರಯತ್ನ ಪಟ್ಟಾಗ ದ್ರೌಪದಿಯು ರಾತ್ರಿಯ ವೇಳೆಯಲ್ಲಿ, ಅದೂ ಕಟ್ಟೇಕಾಂತದಲ್ಲಿ ದುರುಳದಮನಕ್ಕೆ ಮೊರೆಯಿಟ್ಟದ್ದ ಭೀಮನಲ್ಲಿ ; ಅರ್ಜುನನಲ್ಲಲ್ಲ. ಇದು ಮೊದಲಿಗಿಂತಲೂ ಹೆಚ್ಚು ಪಂಪನ ವಿಸ್ಮರಣೆಯನ್ನೂ ವ್ಯಕ್ತಗೊಳಿಸುತ್ತದೆ. ಅರ್ಜುನನು ಬೃಹನ್ನಳೆಯಾಗಿದ್ದುದರಿಂದ ದ್ರೌಪದಿಯು ಹೀಗೆ ಮಾಡಿದಳೆಂದು ಹೇಳಲಾಗುವುದಿಲ್ಲ. ಇದೇ ರೂಪದಲ್ಲಿದ್ದಾಗಲೇ ಅರ್ಜುನನು ಉತ್ತರಗೋಗ್ರಹಣ ಕಾಲದಲ್ಲಿ ಯುದ್ಧಮಾಡಿ ಎಲ್ಲರನ್ನೂ ಸೋಲಿಸಲಿಲ್ಲವೆ? ತಮ್ಮ ಗುಟ್ಟುರಟ್ಟಾಗುವುದೆಂದು ಹೀಗೆ ಮಾಡಿದನೆಂದು ಭಾವಿಸಿದರೂ ಆಗಲೂ ಅರ್ಜುನನೇ ಈ ಕೆಲಸವನ್ನು ಮಾಡಿದ್ದರೆ ಹೆಚ್ಚು ಸಮಂಜಸವಾಗಿ ಕಾಣುತ್ತಿತ್ತು. ಇಲ್ಲಿಯೂ ವಿಸ್ಮರಣೆಯೇ ಇದಕ್ಕೆ ಕಾರಣ. ಕೊನೆಗೆ ಭೀಮಸೇನನು ದುಶ್ಯಾಸನನನ್ನು ಸಂಹರಿಸಿ ತನ್ನ ಪೂಣ್ಕೆಯನ್ನು ಪೂರೈಸಿದ ಮೇಲೆ ‘ದ್ರುಪದಾತ್ಮಜೆಗೆ ಬೞಯನಟ್ಟಿ ಜಯವನಿತೆ ಬರ್ಪಂತೆ ಬಂದ ತನ್ನ ತಳೋದರಿಯಂ ಕೆಲದೊಳ್ ಕುಳ್ಳಿರಿಸಿ ಪೊಸೆದು ಜಡೆಗೊಂಡಿರ್ದ ಕೇಶಮಂ ಪಸರಿಸಿ ವೈರಿಯ ಪಲ್ಲ ಪಣಿಗೆಯಿಂ ಬಾಚಿ ದುಶ್ಯಾಸನನ ಕರುಳ್ಗಳೆ ಬಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿ ಅವಳ ಮೊಗಮಂ ನೋಡಿ ಮುಗುಳ್ಗಗೆ ನಕ್ಕು’ ಅವಳಲ್ಲಿ ಪ್ರಣಯಮೋಹವಂ ಬೀರಿ ಮಾತನಾಡುವನು. ದ್ರೌಪದಿಯಾದರೋ ಭೀಮನಲ್ಲಿ ತನ್ನ ಅನುರಾಗವನ್ನು ವ್ಯಕ್ತಪಡಿಸುವಳು. ಈ ಸಂದರ್ಭಗಳಲ್ಲೆಲ್ಲಾ ಅರ್ಜುನನು ಪ್ರೇಕ್ಷಕನು ಮಾತ್ರನಾಗಿರುವನು. ಸಾಕ್ಷಾತ್‌ಪತಿಯೇ ಇದುರಿನಲ್ಲಿರುವಾಗ, ಅದರಲ್ಲಿಯೂ ಅವನು ಮೂರು ಲೋಕ ಗಂಡನಾಗಿರುವಾಗ ದ್ರೌಪದಿಯನ್ನು ರಕ್ಷಿಸಲು ಮೈದುನನಾದ ಭೀಮಸೇನನು ಈ ರೀತಿ ನಡೆದುಕೊಂಡುದು ವಿಸ್ಮಯಜನಕವಲ್ಲವೆ? ಈ ಸಮಯಗಳಲ್ಲೆಲ್ಲ ಪಂಪನು ಭೀಮಸೇನನು ದ್ರೌಪದಿಯ ಮೈದುನನೆಂಬುದನ್ನು ಮರೆತು ಪತಿಯೆಂಬ ಪೂರ್ವವಾಸನೆಯಿಂದಲೇ ಭ್ರಾಂತನಾಗಿದ್ದಾನೆ. ಅವನು ಮನಸ್ಸು ಮಾಡಿದ್ದರೆ ಈ ಸಂದರ್ಭಗಳನ್ನು ವ್ಯತ್ಯಾಸಮಾಡಲಾಗದಿರಲಿಲ್ಲ.

ಪಂಪನಲ್ಲಿ ಜೈನ ವೈದಿಕ ಸಂಸ್ಕಾರಗಳು ಮಿಳಿತವಾಗಿವೆ. ಅವನು ಭಾರತವನ್ನು ರಚಿಸುತ್ತಿರುವುದು, ವೈದಿಕನಾದ-ಶೈವನಾದ ಅರಿಕೇಸರಿಗಾಗಿ. ಅವನು ಅದನ್ನು ಜ್ಞಾಪಕದಲ್ಲಿಟ್ಟುಕೊಂಡು ಶಿವಭಕ್ತಿಗೆ, ಪೂಜೆಗೆ, ಸ್ತೋತ್ರಕ್ಕೆ, ಅಲ್ಲಲ್ಲೇ ಅವಕಾಶವನ್ನುಂಟುಮಾಡಿ ಕೊಂಡಿದ್ದಾನೆ. ಆದರೂ ತನ್ನ ಜೈನಸಂಸ್ಕಾರ ಅತಿಯಾಗಿಲ್ಲದಿದ್ದರೂ ಆಗಾಗ ಸ್ವಲ್ಪ ಹೆಡೆಯೆತ್ತಿ ಕಥಾಭಿತ್ತಿಯಲ್ಲಿಯೂ ಪಾತ್ರಪರಿಕಲ್ಪನೆಯಲ್ಲಿಯೂ ತನ್ನ ಪ್ರಭಾವವನ್ನು ಬೀರಿದೆ. ‘ಪಂಪ ಭಾರತ’ವೂ ‘ಜಿನಪದಾಂಭೋಜವರಪ್ರಸನ್ನ’ವಾದುದು. ಪಂಪನಿಗೆ ವ್ಯಾಸರು, ವ್ಯಾಸಭಟ್ಟಾರಕರು. ವಿಷ್ಣು ಕೃಷ್ಣರು ಅಭವ, ಅಜ, ಅಜಿತ,ಅನಂತರು. ಅರ್ಜುನನ ಜನ್ಮೋತ್ಸವದ ವರ್ಣನೆಯಲ್ಲಿ ತೀರ್ಥಂಕರ ಜನ್ಮೋತ್ಸವದ ಛಾಯೆಯಿದೆ. ಅರ್ಜುನನು ತಪಸ್ಸು ಮಾಡುವಾಗ ಇಂದ್ರನಿಗೆ ಆಸನಕಂಪವಾಗುತ್ತದೆ. ಸಂಸಾರಾಸಾರತೆಯ ಮತ್ತು ಭವಾವಳಿಗಳ ಸೂಚನೆ ಆಗಾಗ ಕಂಡುಬರುತ್ತದೆ. ಜನ್ಮಾಂತರಸ್ಮರಣೆ, ಜಾತಿಸ್ಮರತ್ವ, ಬಲದೇವ ವಾಸುದೇವರ ಜೋಡಿ ಇವೂ ಅಲ್ಲಲ್ಲಿ ಇವೆ. ಇವೆಲ್ಲಕ್ಕಿಂತಲೂ ಪಂಪನ ಜೈನಮತ ಪ್ರಭಾವ ವಿಶೇಷ ಕಂಡುಬರುವುದು ಶ್ರೀಕೃಷ್ಣನ ಪಾತ್ರರಚನೆಯಲ್ಲಿ. ಹಿಂದುಗಳಿಗೆ ಭಾರತವು ಪಂಚಮವೇದ. ಅದರ ಮೂಲಶಕ್ತಿ ಶ್ರೀಕೃಷ್ಣ. ಕೆಲವು ಕವಿಗಳಂತೂ ಭಾರತವನ್ನು ಕೃಷ್ಣಚರಿತೆಯೆಂದೇ ಕರೆದಿರುವುದೂ ಉಂಟು. ಜೈನರರಿಗೆ ಭಾರತದಲ್ಲಾಗಲಿ ಕೃಷ್ಣ ಭಗವಂತನಲ್ಲಾಗಲಿ ಈ ಪೂಜ್ಯಮನೋಭಾವವಿಲ್ಲ. ಅವರ ಪ್ರಕಾರ ಕೃಷ್ಣನು ಗುಣಾವಗುಣಮಿಶ್ರಿತವನಾದ ಒಬ್ಬ ಸಾಮಾನ್ಯ ಮನುಷ್ಯ-ವಾಸುದೇವ. ಈ ಜೈನಮತದ ಪ್ರಭಾವದ ಫಲವಾಗಿ ಪಂಪನು ಮಹಾಭಾರತದ ಬೃಹದ್ದೇವತೆಯಾದ ಶ್ರೀಕೃಷ್ಣನ ವಿಷಯದಲ್ಲಿ ತನ್ನ ಆ ತೀರ್ಥಂಕರನ ವಿಷಯದಲ್ಲಿದ್ದ ಶ್ರದ್ಧಾ ಭಕ್ತಿಗಳಿಲ್ಲದುದರಿಂದ ಅವನನ್ನು ಸಾಮಾನ್ಯ ವ್ಯಕ್ತಿಯಂತೆ ಚಿತ್ರಿಸಿ ಅವನ ಪ್ರಾಮುಖ್ಯವಿರುವ ಸನ್ನಿವೇಶಗಳನ್ನೆಲ್ಲಾ ತೇಲಿಸಿಬಿಟ್ಟು ಕೊನೆಗೆ ಆತನ ಗೀತೋಪದೇಶವನ್ನು ‘ವಿಕ್ರಮಾರ್ಜುನನೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋಱ…ನಿನಗೊಡ್ಡಿ ನಿಂದುದನಿದನೋವದೆ ಕೊಲ್ವೊಡೆ ನೀನುಮೆನ್ನ ಕಜ್ಜದೊಳೆಸಗೆಂದು ಸೈತಜಿತನಾದಿಯ ರೇದರಹಸ್ಯದೊಳ್ ನಿರಂತರದ ಪರಿಚರ್ಯೆಯಿಂ ನೆಯೆ ಯೋಜಿಸಿದಂ ಕದನತ್ರಿಣೇತ್ರನಂ’ ಎಂಬ ಭಾಗದಿಂದ ಮುಗಿಸಿಬಿಟ್ಟಿದ್ದಾನೆ. ಕೊನೆಗೆ ಮಹಾಭಾರತವು ಲೋಕಪೂಜ್ಯವಾಗುವುದಕ್ಕೆ ಕಾರಣರಾದ ವ್ಯಕ್ತಿಗಳನ್ನು ತಿಳಿಸುವ

ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ
ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ
ರ್ಮಲಂ ಚಿತ್ತಂ ಧರ್ಮಪುತ್ರಂ ಮಿಗಿಲ್, ಇವರ್ಗಳಿನೀ ಭಾರತಂ ಲೋಕಪೂಜ್ಯಂ ||

ಎಂಬ ಪದ್ಯದಲ್ಲಿಯೂ ಕೂಡ ಕೃಷ್ಣನ ಹೆಸರಿಗೆ ಒಂದು ಸ್ಥಾನವಿಲ್ಲ. ವ್ಯಾಸಭಾರತದ ದೃಷ್ಟಿಯಿಂದ ನೋಡುವುದಾದರೆ ಈ ಸಂಗತಿ ಸ್ವಲ್ಪ ಊನವಾಗಿಯೇ ಕಾಣುತ್ತದೆ. (ಇದು ಲೌಕಿಕಕಾವ್ಯವಾದುದರಿಂದ ಲೌಕಿಕವನ್ನು ಮೀರಿದ ಕೃಷ್ಣನ ಹೆಸರನ್ನು ಇದರಲ್ಲಿ ಸೇರಿಸಿಲ್ಲವೆಂದು ಭಾರತದ ಕೆಲವೆಡೆಯಲ್ಲಿ ಬರುವ ಕೃಷ್ಣನ ಶಕ್ತಿ ವೈಭವಗಳ ವರ್ಣನೆ ಪಂಪನಿಗೆ ಕೃಷ್ಣನಲ್ಲಿ ಪೂರ್ಣಭಕ್ತಿಯಿತ್ತೆಂದು ಸೂಚಿಸುವುದೆಂದೂ ಕೆಲವರು ಅಭಿಪ್ರಾಯ ಪಡುವುದು ಅಷ್ಟು ಸಮರ್ಪಕವಾಗಿ ಕಾಣುವುದಿಲ್ಲ.)

ಇನ್ನು ಕೆಲವೆಡೆಗಳಲ್ಲಿ ಪಂಪನ ಬದಲಾವಣೆಗಳು ಕಥಾಸಂವಿಧಾನಕ್ಕೆ ವಿಶೇಷ ಹೊಳಪನ್ನು ತರುವುವು. ವ್ಯಾಸಭಾರತದ ವಸ್ತ್ರಾಪಹರಣದ ಕಥೆಯು ಲೌಕಿಕದೃಷ್ಟಿಯಿಂದ ಅನುಚಿತವಾದುದೆಂದು ಭಾವಿಸಿ ಪಂಪನು ಅದನ್ನು ಬಿಟ್ಟು ಕೇಶಾಪಕರ್ಷಣದ ವಿಚಾರವನ್ನು ಮಾತ್ರ ಹೇಳಿ ಕೊನೆಯಲ್ಲಿ ದುಶ್ಯಾಸನನ ವಧಾನಂತರ

ಇದರೊಳ್ ಶ್ವೇತಾಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದೞ್ಕಾಡಿತ್ತು ಅಡಂಗಿತ್ತಿದಳೆ ಕರುರಾಜಾನ್ವಯಂ, ಮತ್ಪ್ರತಾಪ
ಕ್ಕಿದಳೆ ನೋಡಗುರ್ವುರ್ವಿದುದು, ಇದುವೆ ಮಹಾಭಾರತಕ್ಕಾದಿಯಾಯ್ತು ಆ
ಬ್ಜದಳಾಕ್ಷಿ ಪೇೞ, ಸಾಮಾನ್ಯಮೆ, ಬಗೆಯೆ, ಭವತ್ಕೇಶಪಾಶಪ್ರಪಂಚಂ ||

ಎಂದು ಹೇಳಿ ವೇಣೀಸಂಹಾರವನ್ನು ಮುಗಿಸುವುದು ಸ್ವಾರಸ್ಯವಾಗಿದೆ.

ಹಾಗೆಯೇ ದ್ರೌಪದಿಯು ದುಶ್ಯಾಸನದಿಂದ ಸಭೆಗೆ ಸೆಳೆಯಲ್ಪಟ್ಟಾಗ ಕರ್ಣನು ನೋಡಿ ನಕ್ಕನೆಂದೂ ಸಲ್ಲದ ಮಾತುಗಳನ್ನಾಡಿದನೆಂದೂ ವ್ಯಾಸಭಾರತದಲ್ಲಿರುವುದನ್ನು ಬಿಟ್ಟಿರುವುದೂ ಕರ್ಣನನ್ನು ರಾಜಲಕ್ಷ್ಮಿ ಬಿಡಲಾರಳೆಂಬುವುದೂ ‘ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ’ ಎಂದು ಹೇಳುವುದೂ ಕರ್ಣನ ಪಾತ್ರಕ್ಕೆ ಗೌರವವನ್ನು, ಮಹಿಮೆಯನ್ನು ಕೊಡುವುದಲ್ಲದೆ ಒಟ್ಟಿನಲ್ಲಿ ಬಹಳ ಗಂಭೀರವಾಗಿದೆ.ಪಂಪಭಾರತದಲ್ಲಿ ಇನ್ನೂ ಕೆಲವು ಹೊಸಸಂಗತಿಗಳಿವೆ. ಯುಷ್ಠಿರನ ಆಜ್ಞಾನುಸಾರ ಯಕ್ಷನ ವಿಷಸರೋವರಕ್ಕೆ ನೀರು ತರಲು ಹೋದ ಭೀಮಾರ್ಜುನ ನಕುಲ ಸಹದೇವರು ಯಕ್ಷನ ಪ್ರಶ್ನೆಗೆ ಉತ್ತರಕೊಡದೆ ನೀರನ್ನು ಕುಡಿದು ಮೈಮರೆತು ಬೀಳುವರು. ದುರ್ಯೋಧನನ ಪುರೋಹಿತನಾದ ಕನಕಸ್ವಾಮಿಯು ಪಾಂಡವರನ್ನು ಕೊಲ್ಲಲು ಕಳುಹಿಸಿದ ಕೀರ್ತಿಗೆಯು ಬಂದು ಕೊಳದ ತಡಿಯಲ್ಲಿ ಬಿದ್ದಿದ್ದ ನಾಲ್ವರನ್ನೂ ತಿಂದು ಮುಗಿಸುವನೆಂದೆಣಿಸಿ ಕೈಹಾಕುವುದು ಅವರನ್ನು ಆ ಅವಸ್ಥೆಗೆ ತಂದ ದೈವವು ಪ್ರತ್ಯಕ್ಷವಾಗಿ ಆ ಉಗ್ರದೇವತೆಯನ್ನು ನೀನು ದೂರಪೋಗು ಎನ್ನಲು ‘ನಾನು ನನ್ನ ಮಾತಿನಂತೆ ನಡೆದುಕೊಳ್ಳಬೇಕು, ಯಾರನ್ನು ಭಕ್ಷಿಸಲಿ, ಎಂದು ಕೇಳುವುದು. ಆಗ ಯಕ್ಷನು ‘ಎಲೈ ಪಿಶಾಚಿಯೇ ನಿನ್ನನ್ನು ಯಾವನು ಹುಟ್ಟಿಸಿದನೋ ಅವನನ್ನೇ ತಿನ್ನು’ ಎಂದು ಹೇಳಲು ಆ ದೇವತೆಯು ಹಾಗೆಯೇ ಹಿಂದಿರುಗಿ ‘ಕನಕನ ಬೇಳ್ವೆ ಕನಕನಿಗೇ ತಟ್ಟಿತು’ಎಂದು ಜನರಾಡಿಕೊಳ್ಳುವಂತೆ ಅವನನ್ನೇ ತಿಂದು ಬಿಟ್ಟಿತು. ಈ ಕಥೆಯು ಪಂಪಭಾರತದಲ್ಲಿದೆ, ಮೂಲಭಾರತದಲ್ಲಿಲ್ಲ. ಅರ್ಜುನನಿಗೆ ‘ಕಿರೀಟಿ’ಯೆಂಬ ಹೆಸರು ಬರಲು ಪಂಪನು ಕೊಟ್ಟಿರುವ ಕಾರಣವೂ ವ್ಯಾಸಭಾರತದಲ್ಲಿಲ್ಲ. ಕೃಷ್ಣಪರಮಾತ್ಮನು ಸಂಧಾನಕ್ಕೆ ಬಂದ ಕಾಲದಲ್ಲಿ ದುರ್ಯೋಧನನು ವಿದುರನನ್ನು ಹೀಯಾಳಿಸಲು ವಿದುರನು ರೇಗಿ-

ಕಡು ಮುಳಿದು ನಿನ್ನ ತೊಡೆಗಳ
ನುಡಿವೆಡೆಯೊಳ್ ಭೀಮಸೇನನಾ ಪದದೊಳ್
ಪಿಡಿಯಲೈಂದಿರ್ದೆನಿದಂ
ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ ||

ಎಂದು ಹೇಳುವುದೂ ಪಂಪನದೇ. ಕರ್ಣನು ಕುಂತಿಯ ಮಗನೆಂದು ದುರ್ಯೋಧನನು ತಿಳಿದುಕೊಂಡುದು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ಎಂದು ಹೇಳುವ ಕೃಷ್ಣನ ಮಾತುಗಳಿಗೆ ಮೂಲಭಾರತದಲ್ಲಿ ಆಧಾರವಿಲ್ಲ. ಈ ಬದಲಾವಣೆಗಳಿಗೆಲ್ಲ ಸರಿಯಾದ ಕಾರಣವನ್ನು ಊಹಿಸುವುದು ಸಾಧ್ಯವಿಲ್ಲ. ಇವುಗಳನ್ನು ನೋಡಿದರೆ ಪಂಪನೇ ಮೂಲಭಾರತದಿಂದ ಈ ಬದಲಾವಣೆಗಳನ್ನು ಮಾಡಿಕೊಂಡನೇ ಅಥವಾ ಹೀಗೆ ಕಥಾಶರೀರದಲ್ಲಿ ವ್ಯತ್ಯಾಸವನ್ನು ಹೊಂದಿದ್ದ ಬಹುಸ ಜೈನಸಂಬಂಯಾದ ಬೇರೊಂದು ಭಾರತವೇ ಪಂಪನ ಕಾಲದಲ್ಲಿದ್ದಿತೋ ಎಂಬ ಸಂಶಯವು ಹುಟ್ಟುವುದು. ಸರಿಯಾದ ಆಧಾರಗಳು ಸಿಕ್ಕುವವರೆಗೆ ಹೀಗೆ ನಿರ್ಧರಿಸಲು ಸಾಧ್ಯವಿಲ್ಲ.

‘ಪಂಪ ಭಾರತ’ದಲ್ಲಿ ಪೂರ್ವಕವಿಗಳಿಂದ ಸ್ವೀಕರಣ ವಿಚಾರ : ಪಂಪನು ಮೇಲೆ ಹೇಳಿದಂತೆ ಮೂಲಭಾರತದಕಥೆಯಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿರುವುದಲ್ಲದೆ ಕನ್ನಡದ ಸಂಪತ್ತೂ ಸ್ವಾರಸ್ಯವೂ ಸುಟವಾಗುವಂತೆ ಸಂಸ್ಕೃತದ ಶ್ರೇಷ್ಠಕವಿಗಳಾದ ಕಾಳಿದಾಸ, ಭಾರವಿ, ಶ್ರೀಹರ್ಷ, ಭಟ್ಟನಾರಾಯಣ ಮೊದಲಾದವರ ಕೃತಿಗಳಿಂದ ಕೆಲವು ಭಾಗಗಳ ಸಾರವನ್ನು ತನ್ನ ಕಾವ್ಯದಲ್ಲಿ ಪ್ರಯೋಗಿಸಿದ್ದಾನೆ. ನಾಲ್ಕನೆಯ ಆಶ್ವಾಸದಲ್ಲಿ ಬರುವ ಮಲಯಪರ್ವತದ ವರ್ಣನೆಯು ನಾಗಾನಂದದ ಮಲಯಪರ್ವತದ ವಣ೭ನೆಯ ಅನುವಾದವಿರಬೇಕು. ಪಂಚಮಾಶ್ವಾಸದಲ್ಲಿ ವಿರಹಜ್ವಾಲೆಯಿಂದ ತಪ್ತಳಾದ ಸುಭದ್ರೆಯನ್ನು ಅರ್ಜುನನು ಮರೆಯಾಗಿ ನಿಂತು ನೋಡುತ್ತ ಅವರ ಸರಸಲ್ಲಾಪಗಳನ್ನು ಕೇಳುವ ಸನ್ನಿವೇಶವನ್ನು ಕಾಳಿದಾಸನ ‘ಶಾಕುಂತಲ’ದಿಂದ ತೆಗೆದುಕೊಂಡಿರಬೇಕು. ಸಪ್ತಮಾಶ್ವಾಸದ ಇಂದ್ರಕೀಲಪ್ರಕರಣವು ಭಾರವಿಯ ‘ಕಿರಾತಾರ್ಜುನೀಯ’ದ ಸಾರಾಂಶವೆಂದು ಹೇಳಬಹುದು. ಕರ್ಣಾಶ್ವತ್ಥಾಮರ ವಾಗ್ಯುದ್ಧವು ‘ವೇಣೀಸಂಹಾರ’ ನಾಟಕದ ಛಾಯೆಯಿಂದ ಕೂಡಿದೆ. ಹೀಗೆ ಪಂಪನು ಸಮಯೋಚಿತವಾಗಿ ಸಂಸ್ಕ ತದ ಉದ್ದಾಮಕವಿಗಳ ಉದಾತ್ತವಾದ ಪ್ರತಿಭೆಯನ್ನು ತನ್ನ ಕಾವ್ಯದಲ್ಲಿ ಪ್ರತಿಬಿಂಬಿಸಿ ಕನ್ನಡವನ್ನು ಸಂಪದ್ಯುಕ್ತವಾಗಿ ಮಾಡಿದ್ದಾನೆ. ಭಾವವನ್ನು ಇತರರಿಂದ ತೆಗೆದುಕೊಂಡಿದ್ದರೂ ನಿರೂಪಣ ರೀತಿಯನ್ನು ತನ್ನದನ್ನಾಗಿಯೇ ಮಾಡಿಕೊಂಡಿರುವುದು ಅವನ ವೈಶಿಷ್ಟ್ಯ.

ಪಂಪಭಾರತದ ಕಥಾಸರಣಿ : ಪಂಪನಿಗೆ ಸಮಗ್ರಭಾರತವನ್ನು ಬರೆಯುವ ಭರದಲ್ಲಿ ಹೆಚ್ಚು ವಿವರಗಳನ್ನು ತುಂಬುವುದಕ್ಕೆ ಅವಕಾಶವಿಲ್ಲ.‘ಪೆಱವುಮುಪಾಖ್ಯಾನ ಕಥೆಗಳೊಳಮೊಂದಂ ಕುಂದಲೀಯದೆ ಪೇೞ್ವೆಂ’ ಎಂದು ಹೇಳುವನಾದರೂ ಎಷ್ಟೋ ವಿಷಯಗಳನ್ನು ಬಹುಕೌಶಲದಿಂದ ಕ್ರೋಢೀಕರಿಸಿ ಒಂದೆರಡು ಮಾತುಗಳಲ್ಲಿ ಕಾವ್ಯಕ್ಕೆ ಸರಿಹೋಗುವಂತೆಯೂ ಆಯಾ ಸನ್ನಿವೇಶಗಳ ಮಹತ್ವವೂ ಪಾತ್ರಗಳ ವ್ಯಕ್ತಿತ್ವವೂ ಚೆನ್ನಾಗಿ ಸುರಿಸುವಂತೆಯೂ ಮೂಲಗ್ರಂಥದ ಆಶಯ ಕೆಡದಂತೆಯೂ ಮೂಲರೇಖೆಗಳನ್ನು ಮಾತ್ರ ಎಳೆದಿರುವನು. ಮೊದಲು ಪಾಂಡವ ಕೌರವ ಜನನದಿಂದ ಹೊರಟು ಅವಳ ಬಾಲಕೇಳಿ, ಭೀಮ ದುರ್ಯೋಧನರ ದ್ವೇಷಕ್ಕೆ ಕಾರಣ, ಲಾಕ್ಷಾಗೃಹದಹನ, ಹಿಡಿಂಬಾಸುರವಧೆ, ದ್ರೌಪದೀಪರಿಣಯ, ಇಂದ್ರಪ್ರಸ್ಥಗಮನ, ಇವುಗಳವರೆಗೆ ಕಥಾಸರಣಿಯಲ್ಲಿ ಎಲ್ಲಿಯೂ ಎಡರು ಬಾರದಂತೆ ಸರಿಪಡಿಸಿಕೊಂಡು ನಿರೂಪಿಸುತ್ತ ಹೋಗಿರುವನು. ಇಲ್ಲಿಂದ ಮುಂದೆ ಮೂಲಭಾರತದ ಪ್ರಕಾರ ನಾರದಾದೇಶದಂತೆ ಅರ್ಜುನನನ್ನು ಭೂಪ್ರದಕ್ಷಿಣೆಗೆ ಕಳುಹಿಸಬೇಕು. ಹಾಗೆ ಇಲ್ಲಿ ಮಾಡಲು ಸಾಧ್ಯವಿಲ್ಲ. ದ್ರೌಪದಿಯ ಪತಿಯು ಅರ್ಜುನನೊಬ್ಬನೇ ಎಂಬ ವಿಷಯದಲ್ಲಿ ಪಂಪನು ಜಾಗರೂಕನಾಗಿರುವನು. ಅಲ್ಲದೆ ‘ವರ್ಣಕಂ ಕತೆಯೊಳೆಡಂಬಡಂ ಪಡೆಯೆ’ ಹೇಳಬೇಕು ತಾನೆ? ಆದುದರಿಂದ ಅರ್ಜುನನ ಪ್ರಯಾಣಕ್ಕೆ ಪಂಪನು ಬೇರೆಯ ಕಾರಣವನ್ನು ಕಲ್ಪಿಸಿರುವನು. ಅದು ‘ದಿಗಂಗನಾ ಮುಖಾವಲೋಕನಕ್ಕಾಗಿ’. ಅರ್ಜುನು ದಿಗ್ವಿಜಯಾರ್ಥವಾಗಿ ಹೊರಟು ಸಮಸ್ತ ರಾಷ್ಟ್ರಗಳಲ್ಲಿ ‘ಆತ್ಮೀಯ ಶಾಸನಾಯತ್ತಂ’ ಮಾಡುತ್ತ ಬರುವನು. ಇಲ್ಲಿ ಪಂಪನಿಗೆ ಅನೇಕ ದೇಶಗಳನ್ನು, ತನ್ನ ವಿಸ್ತಾರವಾದ ಅನುಭವವನ್ನು ವರ್ಣಿಸುವುದಕ್ಕೆ ಅವಕಾಶ ಸಿಕ್ಕುವುದು. ಅರ್ಜುನನು ಮುಂದೆ ಹೊರಟು ಗೋಕರ್ಣ ಬನವಾಸಿಗಳನ್ನು ದಾಟಿ ದ್ವಾರಕಾಪುರವನ್ನು ಸೇರಿ ‘ಅಲ್ಲಿ ತನ್ನ ಹಲವು ಜನ್ಮಗಳ ಕೆಳೆಯ’ನಾದ ಕೃಷ್ಣನು ತನ್ನನ್ನು ಇದಿರ್ಗೊಳ್ಳಲು ಪುರಪ್ರವೇಶಮಾಡುವನು. ಪರಸ್ತ್ರೀಯರು ಫಲ್ಗುಣನ ರೂಪಾತಿಶಯವನ್ನು ನೋಡಿ ‘ಗುಣಾರ್ಣವನೀತನೇ’ ಎಂದು ಬೆರಗುಗೊಂಡು ನೋಡವರು. ಅಲ್ಲಿಂದ ಮುಂದೆ ಸುಭದ್ರಾರ್ಜುನರ ಅನುರಾಗ, ಸೂರ್ಯಸ್ತಮಯ, ರಾತ್ರಿ, ಚಂದ್ರೋದಯ, ಅರ್ಜುನ ಚಂದ್ರಿಕಾವಿಹಾರ, ವೇಶ್ಯಾವಾಟಿಕೆ, ಪಾನಗೋಷ್ಠಿ, ಸುಭದ್ರೆಯ ವಿರಹ, ಸುಭದ್ರಾಪರಿಣಯ-ಮೊದಲಾದವುಗಳಲ್ಲಿ ವರ್ಣಕಕಾವ್ಯದ ಲಕ್ಷಣಗಳನ್ನು ಪೂರ್ತಿಗೊಳಿಸುವುದಕ್ಕೆ ಸಹಾಯಕವಾಗುವುದು. ಇವುಗಳ ವರ್ಣನೆಗಳಿಂದ ಆಶ್ವಾಸಗಳು ತುಂಬಿ ತುಳುಕಾಡುವುವು. ಕಥೆಯ ಬೆಳವಣಿಗೆಗೆ-ಅನುಸೂತ್ಯವಾದ ಪ್ರವಾಹಕ್ಕೆ-ಇದು ಸ್ವಲ್ಪ ಕುಂದನ್ನು, ಅಡಚಣೆಯನ್ನು ಉಂಟು ಮಾಡಿದರೂ ಪಂಪನ ಅಪಾರವಾದ ಅನುಭವದ ಪ್ರದರ್ಶನಕ್ಕೂ ಆಳವಾದ ರಸಿಕತೆಗೂ, ಉತ್ತಮವಾದ ವರ್ಣನಾಕೌಶಲಕ್ಯೂ ಇವು ಕೈಗನ್ನಡಿಯಂತಿವೆ. ಇವುಗಳನ್ನು ಪ್ರತ್ಯೇಕವಾಗಿ ಓದಿದರೆ ಸ್ವತಂತ್ರ ಭಾವಗೀತೆಗಳಂತೆಯೇ ಇವೆ. ಇವನ್ನು ಓದುವಾಗ ಭಾರತವನ್ನು ಓದುತ್ತಿರುವ ಅರಿವೇ ಇರುವುದಿಲ್ಲ. ಚಿತ್ರದ ಮೇಲೆ ಚಿತ್ರ, ಏಕಪ್ರಕಾರವಾದ ಚಿತ್ರಪಟದ ಸುರುಳಿಯನ್ನು ಬಿಚ್ಚಿದಂತೆ ಕಣ್ಣುಮುಂದೆ ಹಾದು ಹೋಗಿ ಕಣ್ಮನಗಳನ್ನು ತೃಪ್ತಿಗೊಳಿಸಿ ವಾಚಕರನ್ನು ಮುಗ್ಧರನ್ನಾಗಿಸುವುವು. ಮುಂದೆ ಅರ್ಜುನನೂ ಸುಭದ್ರೆಯೂ ಇಂದ್ರಪ್ರಸ್ಥವನ್ನು ಪ್ರವೇಶಿಸುವುದು, ಸುಭದ್ರಾವಿವಾಹ, ಅಭಿಮನ್ಯುವಿನ ಜನನ, ಮೃಗಯಾವಿಹಾರ-ಇವೇ ಮೊದಲಾದುವು ಬಹು ರಸಭರಿತವಾಗಿಯೂ ಮಿತಿಯರಿತೂ ವರ್ಣಿತವಾಗಿವೆ.

ಮುಂದೆ ಅರ್ಜುನನ ಅನ್ಯಾದೃಶ್ಯವಾದ ಪೌರುಷವನ್ನು ವ್ಯಕ್ತಗೊಳಿಸುವ ಖಾಂಡವದಹನದ ದೃಶ್ಯ ಕಣ್ಣಿಗೆ ಬೀಳುವುದು. ಇಲ್ಲಿ ಕವಿಯು ಪ್ರಸ್ತುತ ವಿಷಯವನ್ನು ಮನದಟ್ಟಾಗುವಂತೆ ವರ್ಣಿಸುವ ವೈಖರಿಯೂ ಗ್ರಹಿಸಲಸಾಧ್ಯವಾದುದನ್ನು ಶಬ್ದಗಳ ಸಂವಿಧಾನದಿಂದ ಚಿತ್ರಿಸುವ ನೈಪುಣ್ಯವೂ ಬಹು ಶ್ಲಾಘನೀಯವಾಗಿವೆ. ಇನ್ನು ಮೇಲೆ ಕಥೆಯು ಹೆಚ್ಚು ವ್ಯತ್ಯಾಸವಾಗದೆ ಯಥಾಕ್ರಮವಾಗಿ ರಾಜಸೂಯಾರಂಭದಿಂದ ಪಾಂಡವರ ಅರಣ್ಯಪ್ರವೇಶದವರೆಗೆ ಬಹು ಜಾಗ್ರತೆಯಿಂದ ಸಾಗುವುದು. ಮೂಲಭಾರತದ ಪ್ರಕಾರ ಧರ್ಮನಂದನನು ಅರಣ್ಯಪ್ರವೇಶ ಮಾಡಿದೊಡನೆಯೇ ಋಷಿಗಳು ಬಂದು ಧರ್ಮೋಪದೇಶವನ್ನು ಮಾಡಬೇಕು. ಪಂಪನು ಈ ರಗಳೆಯನ್ನು ಬಿಟ್ಟಿದ್ದಾನೆ. ಹೇಗೂ ಹನ್ನೆರಡು ವರ್ಷಗಳು ಕಳೆಯಬೇಕು. ಅದಕ್ಕಾಗಿ ಕೆಲವು ವ್ಯಾಖ್ಯಾನಗಳನ್ನು ಮಾತ್ರ ಪಂಪನು ನಿರೂಪಿಸುವನು. ಇಷ್ಟರಲ್ಲಿ ಅರ್ಜುನನು ಇಂದ್ರಕೀಲದಲ್ಲಿ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದು ಬರುವನು. ಮುಂದೆ ಅಜ್ಞಾತವಾಸ, ಗೋಗ್ರಹಣ, ಕೃಷ್ಣದೌತ್ಯ, ಯುದ್ಧನಿರ್ಣಯ ಮೊದಲಾದವುಗಳಲ್ಲಿ ಸಂಕ್ಷೇಪವಾಗಿಯೂ ಲಲಿತವಾಗಿಯೂ ನಿರೂಪಿತವಾಗಿವೆ.

ಇವೆಲ್ಲ ಹತ್ತು ಆಶ್ವಾಸಗಳಲ್ಲಿ ಮುಗಿಯುವುವು. ಪಂಪನು ಮುಂದಿನ ಆಶ್ವಾಸಗಳನ್ನು ಪೂರ್ಣವಾಗಿ ಯುದ್ಧಕ್ಕಾಗಿಯೇ ಉಪಯೋಗಿಸಿ ಕೊಂಡಿರುವನು. ಮನಸ್ಸು ಮಾಡಿದ್ದರೆ ಇದನ್ನು ಇನ್ನೂ ಕಡಮೆಮಾಡಬಹುದಾಗಿತ್ತು. ಆದರೆ ಸಾಹಸಾಭರಣನ ಯುದ್ಧ ಕೌಶಲವನ್ನು ವಿಸ್ತಾರವಾಗಿ ವರ್ಣಿಸಬೇಕೆಂದೋ ಸಮಸ್ತ ಭಾರತವನ್ನು ತಪ್ಪದೇ ಹೇಳಬೇಕೆಂದೋ ಯುದ್ಧರಂಗದಲ್ಲಿ ತನಗಿದ್ದ ಅಪಾರವಾದ ಪರಿಚಯವನ್ನು ಪ್ರದರ್ಶನ ಮಾಡಬೇಕೆಂದೋ ಆ ಭಾಗವನ್ನು ವಿಸ್ತರಿಸಿದ್ದಾನೆ. ಈ ಭಾಗದಲ್ಲಿಯೇ ಭಾರತದ ಪ್ರಭಾವ ವ್ಯಕ್ತಿಗಳಾದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ, ದುಶ್ಯಾಸನ, ಶಲ್ಯ, ಅರ್ಜುನ, ಭೀಮ, ಧರ್ಮರಾಯ, ಅಭಿಮನ್ಯು, ಸೈಂಧವ, ಶ್ವೇತ ಮೊದಲಾದವರ ಉದ್ದಾಮ ಸಾಹಸದ, ಔನ್ನತ್ಯದ, ಮಹಾನುಭಾವತ್ವದ, ತ್ಯಾಗದ ವಿವಿಧ ಪರಿಚಯಗಳು ಮನದಟ್ಟಾಗುವುದು. ಕೌರವರ ಪಕ್ಷದ ವೀರಾವೀರರೆಲ್ಲರೂ ಯುದ್ಧರಂಗದಲ್ಲಿ ಮಡಿಯುವರು. ಪಾಂಡವರಿಗೆ ಜಯವು ಲಭಿಸುವುದು. ಅರ್ಜುನನ ಪಟ್ಟಾಭಿಷೇಕದೊಂದಿಗೆ ಕಾವ್ಯವು ಪರಿಸಮಾಪ್ತಿಗೊಳ್ಳುವುದು.

ಪಂಪನ ಶೈಲಿ- ಒಬ್ಬ ಕವಿಯ ವ್ಯಕ್ತಿತ್ವವೂ ಮಹತ್ವವೂ ಅವನ ಶೈಲಿಯಲ್ಲಿ ಪ್ರತಿಬಿಂಬಿಸುತ್ತದೆ ಎಂದು ತಿಳಿದವರು ಹೇಳುತ್ತಾರೆ. ಇದು ಬಹುಮಟ್ಟಿಗೆ ನಿಜ. ಅವನ ಆವೇಶ, ಅವನ ಮನೋಭಾವ, ಅವನ ಲೋಕಾನುಭವ, ಅವನ ಪ್ರತಿಭಾಸಂಪನ್ನತೆ, ಜ್ಞಾನ, ವಾಗ್ಧೋರಣೆ ವ್ಯಕ್ತಿತ್ವ-ಪ್ರತಿಯೊಂದೂ ಅವನ ಶೈಲಿಯಲ್ಲಿ ಸುಟವಾಗಿ ಎದ್ದು ಕಾಣುತ್ತವೆ. ಕವಿಯು ಹುಲುಗವಿಯಾದರೆ ಹಿಂದಿನ ಕಾವ್ಯಗಳನ್ನೇ ಮಾದರಿಯಾಗಿಟ್ಟುಕೊಂಡು ಅವುಗಳ ಸಾರವನ್ನು ಗ್ರಹಿಸದೆ ನಿರ್ಜೀವವಾದ ಕಟ್ಟಡವನ್ನು ತೆಗೆದುಕೊಂಡು ಶಬ್ದಗಳ ಜೋಡಣೆಯಿಂದ ಶುಷ್ಕವಾಗಿ ಪಡಿಯಚ್ಚನ್ನು ನಿರ್ಮಿಸುತ್ತಾನೆ. ಅದರಲ್ಲಿ ಸತ್ವವಿರುವುದಿಲ್ಲ, ಜೀವವಿರುವುದಿಲ್ಲ, ಮನುಷ್ಯನ ಭಾವನಾಡಿಗಳನ್ನೂ ಮೀಟುವ ಆವೇಶವಿರುವುದಿಲ್ಲ. ಕವಿಯು ಅರ್ಥವಿಲ್ಲದ ಕವಿಸಮಯಗಳನ್ನು ಒಂದರಮೇಲೊಂದನ್ನು ಮೂಟೆ ಮೂಟೆಯಾಗಿ ತುಂಬಿ ಜುಗುಪ್ಸೆಯನ್ನಂಟು ಮಾಡುತ್ತಾನೆ. ಹಾಗಲ್ಲದೆ ಕವಿಯು ಪ್ರಜ್ಞಾಶಾಲಿಯೂ ಕಲ್ಪನಾಚತುರನೂ ಪ್ರತಿಭಾಸಂಪನ್ನನೂ ಅನುಭವ ಶಾಲಿಯೂ ಆದರೆ ಕಾವ್ಯದಲ್ಲಿ ಒಂದೂ ವಿಧವಾದ ಆವೇಶವನ್ನು ತುಂಬಿ ವಾಚಕನ ಮೇಲೆ ತನ್ನದೇ ಆದ ಸಮ್ಮೋಹನಾಸ್ತ್ರವನ್ನು ಬೀರಿ ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ. ಸಾಧಾರಣವಾಗಿ ಕನ್ನಡ ಕವಿಗಳನೇಕರಿಗೆ ಈ ಕಾವ್ಯಮರ್ಮ ತಿಳಿಯದೆಂಬ ಅಪಪ್ರಥೆಯಿದೆ. ಆದರೆ ಕವಿತಾಗುಣಾರ್ಣವನಾದ ಪಂಪನ ವಿಷಯವೇ ಬೇರೆ. ಆತನು ಕವಿ ವೃಷಭ. ಕವಿಯಾಗಿದ್ದಂತೆಯೇ ಕಲಿಯೂ ಆಗಿದ್ದವನು.ಕನ್ನಡ,ಸಂಸ್ಕೃತ,ಪ್ರಾಕೃತ,ಅಪಭ್ರಂಶುಗಳ ಪೂರ್ಣಪಾಂಡಿತ್ಯವುಳ್ಳವನು. ಜೀವನದ ವಿವಿಧ ಕ್ಷೇತ್ರಗಳ ಪ್ರತ್ಯಕ್ಷಾನುಭವವನ್ನುಳ್ಳವನು. ವೈದಿಕ ಮತ್ತು ಜೈನ ಸಂಸ್ಕಾರಗಳ ಮೇಳವನ್ನುಳ್ಳವನು. ರಸಿಕತೆಯನ್ನೂ ರಾಜಾಶ್ರಯವನ್ನೂ ಆತ್ಮಾಭಿಮಾನವನ್ನೂ ಆನಂದಾನುಭವವನ್ನೂ ಉಳ್ಳವನು.ತನ್ನ ಹಿಂದಿನ ಗ್ರಂಥಗಳ ಮಾದರಿಯಲ್ಲಿ ಗ್ರಂಥರಚನೆಗೆ ಹೊರಟಿದ್ದರೂ ಅವುಗಳ ಸಾರವನ್ನು ಉಪಯೋಗಿಸಿಕೊಂಡಿದ್ದರೂ ಮಾರ್ಗ ಮತ್ತು ಶೈಲಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾನೆ. ಮುಂದಿನ ಕವಿಗಳಿಗೆ ಮಾರ್ಗದರ್ಶಕನಾಗಿದ್ದಾನೆ. ಆದುದರಿಂದ ಅವನ ಶೈಲಿಯಲ್ಲಿ ಪ್ರತ್ಯೇಕ ವ್ಯಕ್ತಿತ್ವವಿದೆ. ಒಂದು ಮೋಹಕ ಶಕ್ತಿಯಿದೆ. ಅವನು ಯಾವುದನ್ನು ಚಿತ್ರಿಸಿದರೂ ಮನದಟ್ಟಾಗುವಂತೆ ಚಿತ್ರಿಸುತ್ತಾನೆ. ಅದನ್ನು ಓದುತ್ತ ವಾಚಕನೂ ಮುಗ್ಧನಾಗಿ ಅಲ್ಲಿಯ ಪಾತ್ರಗಳು ಮತ್ತು ಸನ್ನಿವೇಶಗಳಲ್ಲಿ ಐಕ್ಯನಾಗುವನು. ಕಥಾಶರೀರದಲ್ಲಿ ತಾನೂ ಭೂಮಿಕೆಯಾಗಿ ಬಿಡುವನು. ಪಂಪನ ಯಾವ ವರ್ಣನೆಯನ್ನು ತೆಗೆದುಕೊಂಡರೂ ಹೀಗೆಯೇ. ಬನವಾಸಿಯ ವರ್ಣನೆಯನ್ನು ನೋಡಿ. ಅದರ ವೈಭವವನ್ನು ಓದಿದ ಕೂಡಲೆ ವಾಚಕನೂ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ ಹುಟ್ಟಬೇಕೆಂದು ಆಶಿಸುವನು. ಸುಭದ್ರಾಪರಿಣಯಕ್ಕೆ ಮುಂಚಿನ ಚಂದ್ರಿಕಾವಿಹಾರದಲ್ಲಿ ವೇಶ್ಯಾವಾಟಿಕೆಯ ವರ್ಣನೆಯನ್ನು ಓದುತ್ತಿದ್ದರೆತಾನೂ ಆ ಬೀದಿಯಲ್ಲಿ ಸಂಚರಿಸುತ್ತಿರುವಂತೆ ಭ್ರಾಂತಿಗೊಳ್ಳುವನು. ದುಶ್ಯಾಸನನು ದ್ರೌಪದಿಯ ಕೇಶಗ್ರಹಣ ಮಾಡಿ ಸೆಳೆದುಕೊಂಡು ಬರುವುದನ್ನು ವಾಚಿಸಿದಾಗ ಪಾಪಿ ದುಶ್ಯಾಸನನನ್ನು ಸೀಳಿ ಬಿಡೋಣವೇ ಎಂಬ ಆಕ್ರೋಶವನ್ನು ತಾಳುವನು. ಭೀಮಸೇನನು ಕಾಲಮೇಘದಂತೆ ಗರ್ಜಿಸಿ ಆರ್ಭಟಮಾಡುವುದನ್ನು ಓದುತ್ತಿದ್ದರೆ ಹೃದಯದಲ್ಲಿ ನಡುಕ ಹುಟ್ಟಿ ಸ್ತಬ್ದನಾಗುವನು. ಬಿದ್ದ ಚಕ್ರವರ್ತಿಯ ಮುಡಿಯನ್ನು ಭೀಮನು ಒದೆಯುತ್ತಿರುವುದನ್ನು ಓದುತ್ತಿದ್ದರೆ ‘ಛೀ ಭೀಮಾ ನಿನಗೆಷ್ಟು ದುರಹಂಕಾರ ! ನೀನು ಮೂರ್ಛಿತನಾಗಿದ್ದಾಗ ದುರ್ಯೋಧನನು ನಿನ್ನಲ್ಲಿ ಕರುಣೆಯನ್ನು ತೋರದಿದ್ದರೆ ನೀನೇನಾಗುತ್ತಿದ್ದೆ, ಅವನು ನಿನ್ನಲ್ಲಿ ತೋರಿಸಿದ ಕರುಣೆಗೆ ಇದೇ ಪ್ರತಿಫಲ’? ಎಂದು ಹೇಳಲುದ್ಯುಕ್ತನಾಗುವನು. ಗದಾಯುದ್ಧದ ಪ್ರಾರಂಭದಲ್ಲಿ ಹಲಾಯುಧನು ದುರ್ಯೋಧನನನ್ನು ಕುರಿತು ‘ನೀ ಮರುಳ್ತನಮನೇಕೆ ಮಾಡಿದಯ್’ ಎಂಬುದಕ್ಕೆ ಅವನು ‘ಪಾಂಡುತನಯರ್ ನಿರ್ದೋಷಿಗಳ್, ಮದ್ಬಂಧು ಶೋಕಾಗ್ನಿಯಿಂದುರಿದಪ್ಪೆಂ’ ಎನ್ನುತ್ತಿದ್ದರೆ ‘ದುರ್ಯೋಧನ, ನೀನು ನಿಜವಾಗಿಯೂ ಮಹಾನುಭಾವನೇ ಅಹುದು’ ಎನ್ನುವನು. ಕೊನೆಗ ಪಂಪನು ವಿಕ್ರಮಾರ್ಜುನನ ಪಟ್ಟಾಭಿಷೇಕ ಮಹೋತ್ಸವವನ್ನು ವರ್ಣಿಸುವಾಗ ಅವನೂ ಅದರಲ್ಲಿ ಭಾಗಿಯಾಗಿ ಪಾಂಡವರು ಹಸ್ತಿನಾಪುರವನ್ನು ಪ್ರವೇಶಿಸಿವಾಗ ಅವರನ್ನು ಸ್ವಾಗತಿಸುವ ಪಲ್ಲವಿತವಾದ ಆಮ್ರವನವನ್ನು ಕಣ್ಣಾರೆ ನೋಡುವನು. ಗುಡಿತೋರಣಗಳಿಂದ ವಿರಾಜಿಸುವ ಬೀದಿಗಳಲ್ಲಿ ಓಡಾಡುವನು. ಸಂಸಾರ ಸಾರೋದಯನ ಒಡ್ಡೋಲಗದಲ್ಲಿ ವೈತಾಳಿಕರೂ ಮಂಗಳಪಾಠಕರೂ ಒಂದೇ ಕೊರಳಿನಿಂದ ಮಂಗಳವನ್ನೋದುತ್ತ ‘ಅರಿಗಂಗೀಗೆ ಮಂಗಳ ಮಂಗಳ ಮಹಾಶ್ರೀಯಂ ಜಯಂ ಶ್ರೀಯುಮಂ’ ಎಂದು ಘೋಷಿಸುತ್ತಿದ್ದರೆ ತಾನೂ ಅವರೊಡನೆ ‘ಅರಿಕೇಸರಿಗೆ ಜೈ’ ಎನ್ನುತ್ತಾನೆ. ಇದೆಲ್ಲ ಏತರಿಂದ? ಪಂಪನ ಅನ್ಯಾದೃಶ್ಯವಾದ ಕಾವ್ಯರಚನಾ ಪ್ರೌಢಿಮೆಯಿಂದಲ್ಲವೇ? ಅವನು ಯಾವುದನ್ನು ವರ್ಣಿಸಿದರೂ ತಾನು ಮೊದಲು ಅದನ್ನು ಚಿತ್ರಿಸಿಕೊಂಡು ಅದರ ಪ್ರತಿಬಿಂಬ ವಾಚಕರಿಗೆ ತೋರುವಂತೆ ಸಹಜವಾದ ಸ್ವಾಭಾವಿಕವಾದ ಮಾತಿನಿದಂ ಹೇಳುತ್ತ ಹೋಗುವುದರಿಂದ ಆಯಾ ವರ್ಣನೆಗಳನ್ನು ಓದುತ್ತಿದ್ದಾಗ ಆಯಾ ಚಿತ್ರಗಳೇ ವಾಚಕರೆದುರಿಗೆ ಜೀವದುಂಬಿ ನಲಿಯುವಂತೆ ಭಾಸವಾಗುತ್ತದೆ.

ಪಂಪನ ಕಾವ್ಯತತ್ತ್ವ : ಕವಿತಾಗುಣಾರ್ಣವನು ಉತ್ತಮಕಾವ್ಯದ ತಿರುಳನ್ನೂ ತನ್ನ ಕಾವ್ಯದ ಮೂಲತತ್ವವನ್ನೂ ತಾನೇ ಮುಂದಿನ ಪದ್ಯಗಳಲ್ಲಿ ಶ್ರುತಪಡಿಸಿದ್ದಾನೆ.

ಮೃದು ಪದಗತಿಯಿಂ ರಸಭಾ
ವದ ಪೆರ್ಚಿಂ ಪಣ್ಯವನಿತೆಯೊಲ್ ಕೃತಿಸೌಂದ
ರ್ಯದ ಚಾತುರ್ಯದ ಕಣಿಯಿನೆ
ವಿದಗ್ಧಬುಧಜನಮನ್, ಅಲೆಯಲೆವೇಡಾ ||

ಕಿವಿಯಂ ಬಗೆವುಗುವೊಡೆ ಕೊಂ
ಕುವೆತ್ತ ಪೊಸನುಡಿಯೆ ಪುಗುಗುಂ…
ಮೃದುಮಧುರ ವಚನರಚನೆಯೊಳ್
ಉದಾತ್ತಂ,ಅರ್ಥಪ್ರತೀತಿಯಂ ಕೇಳ್ವ ಜನ
ಕ್ಕಿದಿರೊಳ್ ಕುಡದಂದದು…ಕವಿಯ ಮನದೊಳಿರ್ದಂತೆವಲಂ ||

ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದು, ಒಂದಿ ದೇಸಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಂ, ಒಪ್ಪುಗುಂ,
ಆ ಸಕಳಾರ್ಥಸಂಯುತಂ, ಅಳಂಕೃತಿಯುಕ್ತಂ, ಉದಾತ್ತವೃತ್ತಿ ವಿ-
ನ್ಯಾಸಂ, ಅನೇಕ ಲಕ್ಷಣಗುಣಪ್ರಭವಂ, ಮೃದುಪಾದಮಾದ ವಾಕೀಸುಭಗಂ ಕಳಾಕಳಿತಂ

ಪಂಪನು ರಾಜದ್ರಾಜಕಮೆನಿಸಿದ ಪುಲಿಗೆರೆಯ ತಿರುಳುಗನ್ನಡದಲ್ಲಿ ತನ್ನ ಕಾವ್ಯಗಳನ್ನು ರಚಿಸಿದ್ದಾನೆ. ಅದರಲ್ಲಿ ಪೊಸದೇಸಿಯಿದೆ, ಬೆಡಂಗಿದೆ, ಅರ್ಥವ್ಯಕ್ತಿಯಿದೆ, ಅದು ‘ವಿದಿತಂ ಪ್ರಾತೀತಿಕಂ, ಕೋಮಲಂ, ಅತಿಸುಭಗಂ, ಸುಂದರಂ, ಸೂಕ್ತಿಗರ್ಭಂ, ಮೃದುಸಂದರ್ಭಂ, ವಿಚಾರಕ್ಷಮಂ, ಉಚಿತಪದಂ, ಶ್ರವ್ಯಂ, ಆರ್ಯಾಕುಲಂ, ವ್ಯಾಪ್ತದಿಗಂತಂ ಕಾವ್ಯಂ’ ಎಂದು ಕವಿಜನ ಮೆಚ್ಚಿದ್ದಾರೆ. ಇದು ನಿಚ್ಚಂ ಪೊಸತರ್ಣವಂಬೊಲ್ ಅತಿ ಗಂಭೀರಂ, ಲಲಿತಪದವುಳ್ಳುದು, ಪ್ರಸನ್ನ ಕವಿತಾಗುಣ ಪೂರ್ಣವಾದುದು. ಆತನಿಂದ ಮುಂದೆ ಬಂದ ಕವಿಗಳು ಜಾತಿಮತ ಪಕ್ಷಪಾತವಿಲ್ಲದೆ ‘ಸುಭಗಕವಿ ಪಂಪನಿಂ ವಾಗ್ವಿಭವೋನ್ನತಿ ನೆಗೞ್ದುದು, ರಸಿಕಾಗ್ರಣಿ ಹಂಪದೇವಂ’, ‘ಸತ್ಕವಿಹಂಪನಕೃತಿ ಸೌಂದರೀಸುಭಗಂ’, ‘ಪಂಪನ ರೀತಿ’, ‘ಪಂಪನಿಂಪು’, ‘ಪಂಪನ ಗುಣಂ’, ‘ಪಂಪನೊಂದಸದೃಶಮಪ್ಪ ರಸಭಾವಂ’, ಎಂದು ಪಂಪನ ಶೈಲಿಯ ಅಸಾಧಾರಣಶಕ್ತಿಯನ್ನು ತಮ್ಮ ತಮ್ಮ ಅನುಭವಾನುಸಾರವಾಗಿ ಸ್ತೋತ್ರಮಾಡಿದ್ದಾರೆ. ಆ ಒಂದೊಂದು ಗುಣವನ್ನೂ ಪ್ರತ್ಯೇಕವಾಗಿ ನಿರ್ದೇಶಿಸಿ ತೋರಿಸುವುದು ಕಷ್ಟವಾದ ಕಾರ್ಯ. ಕೆಲವು ಪ್ರಧಾನವಾದ ಗುಣಗಳ ಸ್ಥೂಲ ಪರಿಚಯವನ್ನು ಮಾತ್ರ ಮಾಡಿಸಲು ಪ್ರಯತ್ನಪಡಬಹುದು.

ಪಂಪನ ಶೈಲಿಯ ಪ್ರಧಾನಗುಣ ಪ್ರಸಾದ, ಗಾಂಭೀರ್ಯ, ಅರ್ಥವ್ಯಕ್ತಿ, ಕೊಂಕುನುಡಿ, ಧ್ವನಿ, ಮೃದುಪದರಚನೆ, ಹಿತಮಿತ ಮೃದವಚನಪೂರ್ಣತೆ ಮತ್ತು ಸಂಯಮ. ಅವನು ಎಂದೂ ಆಡಂಬರಕ್ಕೂ ಆರ್ಭಟಕ್ಕೂ ಪ್ರಯತ್ನಪಡುವುದಿಲ್ಲ. ಆದುದರಿಂದಲೇ ಅವನ ಕಾವ್ಯದಲ್ಲಿ ವಿಶೇಷವಾದ ಓಜಸ್ಸಾಗಲಿ ಪದವೈತ್ರಿಯಾಗಲಿ ಕಾಣಲಾಗುವುದಿಲ್ಲ. ಈ ಎರಡು ಗುಣಗಳೂ ಶಕ್ತಿಕವಿಯಾದ ರನ್ನನಿಗೆ ಮೀಸಲು. ಚಿತ್ತಸ್ಥೆ ರ್ಯದಿಂದ ಮೃದುಪದಗತಿಯಿಂದ ಪೂರ್ವನಿಷ್ಠವಾದ ಆದರ್ಶಸಾಧನೆಗಾಗಿ ಸಂಯಮದಿಂದ ಸಾಗುವುದು ಪಂಪನ ಸ್ವಭಾವ. ಬಾಹುಬಲಿಯು ಅಣ್ಣನಾದ ಭರತನಿಗೆ ತಿಳಿಸುವ ಮುಂದಿನ ಪ್ರಾರ್ಥನೆ ಈ ಗುಣಗಳನ್ನು ಉದಹರಿಸುತ್ತದೆ.

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಳೋ
ತ್ಪಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನ್, ಆಂ ನಿನಗಿತ್ತೆನ್, ಇದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಂ, ಆಟಿಸಿದಂದು ನೆಗೞ್ತೆ ಮಾಸದೇ||

ಉಭಯಭಾಷಾಪಂಡಿತನಾದ ಪಂಪನಿಗೆ ಸಂಸ್ಕೃತದಲ್ಲಿ ವ್ಯಾಮೋಹ ಹೆಚ್ಚು. ಆತನು ತನ್ನ ಕಾವ್ಯಗಳನ್ನು ರಚಿಸಿದುದು ಪಂಡಿತರನ್ನು ಮೆಚ್ಚಿಸುವುದಕ್ಕಾಗಿಯೂ ಅಹುದು. ಅಚ್ಚಗನ್ನಡಶೈಲಿಯಲ್ಲಿ ಬರೆಯುವುದು ಇನ್ನೂ ಅವನ ಕಾಲಕ್ಕೆ ರೂಢಿಗೆ ಬಂದಿರಲಿಲ್ಲ. ಅಷ್ಟೇ ಅಲ್ಲದೆ ಸಂಸ್ಕೃತಪಂಡಿತರಾದ ಕನ್ನಡ ಕವಿಗಳು ತಮ್ಮ ಕನ್ನಡ ಕಾವ್ಯಗಳಲ್ಲಿಯೂ ಸಂಸ್ಕೃತವನ್ನು ತುಂಬುವುದು ಒಂದು ಗುಣವೆಂದು ಭಾವಿಸಿದ್ದರು. ಆದುದರಿಂದ ಪಂಪನ ಕಾವ್ಯವು ಸಂಸ್ಕೃತಮಯವಾಗಿರುವುದು ಆಶ್ಚರ್ಯವೇನೂ ಅಲ್ಲ. ಅವನು ಕೆಲವೆಡೆಗಳಲ್ಲಿ ಪೂರ್ಣವಾಗಿ ಸಂಸ್ಕೃತವೃತ್ತಗಳನ್ನೇ ರಚಿಸಿರುವನು. ಮುಂದಿನ ಈಶ್ವರನ ಪ್ರಾರ್ಥನೆಯನ್ನು ನೋಡಿ:

ಪ್ರಚಂಡಲಯತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ವಿಳಯಯಾ ಭುವಾ ಸಗಿರಿ ಸಾಕಾರದ್ವೀಪಯಾ
ಕುಲಾಲಕರನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸಸರ್ವಜಗತಾಂ ಗುರು, ಗಿರಿಸುತಾಪತಿ ಪಾತು ವ||

ಆದಿಪುರಾಣದಲ್ಲಿ ಬರುವ ಮುಂದಿನ ಆರೋಗಣೆಯ ವರ್ಣನೆಯು ಅವನ ಸಂಸ್ಕೃತ ಗದ್ಯದ ವೈಖರಿಯನ್ನು ವಿಶದಪಡಿಸುವುದು.

ಭರತಮಹೀಶಂ ಭೋಜನಭೂಮಿಗೆ ರಾಜಹಂಸವಿಳಾಸದಿಂ ಬಿಜಯಂಗೆಯ್ದು ಸಕಲ ವಿದ್ಯಾಪ್ರವೀಣಗುರುಜನಾರ್ಯಜನವಿಳಾಸಿನೀಜನಪರಿವೃತನ್ ಅತಿಮೃದುರಸನಾಮರ್ದನ ಮಾತ್ರ ದ್ರಾವಣೀಯಘೃತಪೂರಮುಮಂ ಅಲ್ಪದಶನದಂಶಮಾತ್ರಖಂಡನೀಯಮಂಡಕಮುಮಂ ಅತ್ಯಂತ ಕೋಮಲತಾಲುತಳಸಂಘಟ್ಟಮಾತ್ರಕ್ಷೋದನೀಯಮೋದಕಮುಮಂ, ಅನಿಷ್ಠುರೋಷ್ಠ ಪುಟಮಧ್ಯ ಸಂಧಾರಣಮಾತ್ರಚೂರ್ಣನೀಯ ಶಾಕವರ್ತಿಕಮುಮಂ, ಅತಿ ದೊರೋಚ್ಛ್ವಾಸ ವಿಕಾಸನಾಸಾಂಜಲಿಪುಟ ಪೀಯಮಾನದುಗ್ಧ ಹಯ್ಯಂಗವೀನಮುಮಂ, ನೀಹಾರಶಕಲಧವಲಪರಿಣತಕಪಿತ್ಥಫಲಪರಿಮಳ ಮಧುರದಯುಮಂ, ಏಕೀಭೂತಸಕಲ ಭುವನಶಿಶಿರ ದ್ರವ್ಯಸಂಚಾರದ್ರವ ಶಂಖಾಕಾರ ಶಿಖರಿಣೀರಮಣೀಯಮುಂ ಅಮೃತಪಿಂಡಾಯಮಾನ ಅಪಿಂಡದುಗ್ಧಸ್ನಿಗ್ಧಮುಮಪ್ಪ ಮನೋ ಹರಾಹಾರಮಂ||

ಪಂಪಭಾರತದಲ್ಲಿಯೇ ಹದಿನಾಲ್ಕನೆಯ ಆಶ್ವಾಸದಲ್ಲಿ ಅರಿಗನಿಗೆ ವಂದಿಮಾಗಧರು ಓದುವ ಮಂಗಳವೃತ್ತಗಳು ಸಂಪೂರ್ಣವಾಗಿ ಸಂಸ್ಕೃತಶ್ಲೋಕಗಳಾಗಿಯೇ ಇವೆ.

ಆದರೂ ಪಂಪನಿಗೆ ಅದರ ಇತಿ ಗೊತ್ತು. ಅದಕ್ಕಾಗಿಯೇ ಅವನು ಪುರಾಣ ಕಾವ್ಯವಾದ ‘ಆದಿಪುರಾಣ’ದಲ್ಲಿ ತುಂಬಿರುವಷ್ಟು ಸಂಸ್ಕೃತಶಬ್ದಗಳನ್ನೂ ಪಾರಿಭಾಷಿಕ ನುಡಿಗಟ್ಟನ್ನೂ ಲೌಕಿಕ ಕಾವ್ಯವಾದ ‘ವಿಕ್ರಮಾರ್ಜುನ ವಿಜಯ’ದಲ್ಲಿ ತುಂಬಿಲ್ಲ. ಸಂಸ್ಕೃತ ಶಬ್ದಗಳಿಂದ ಒಂದು ವಿಧವಾದ ಘೋಷವೂ, ಆರ್ಭಟವೂ, ಢಣಢಣತ್ಕಾರವೂ ಬರುವುದೆಂಬುದು ಆತನಿಗೆ ತಿಳಿದ ವಿಷಯ. ಆದುದರಿಂದ ವೀರರಸಪ್ರಧಾನವಾದ ಭೇರಿಯ ನಾದ, ರ ಪ್ರತಿಜ್ಞೆ, ಘೋರಯುದ್ಧ, ಜಯಘೋಷಣ- ಈ ಸಂದರ್ಭಗಳಲ್ಲಿ ಮಾತ್ರ ಸಂಸ್ಕೃತ ಶಬ್ದಗಳನ್ನು ಉಪಯೋಗಿಸಿಕೊಂಡು ಮಿಕ್ಕೆಡೆಗಳಲ್ಲೆಲ್ಲ ಕನ್ನಡ ಪದಗಳನ್ನೇ ಉಪಯೋಗಿಸಿ ಉತ್ಕೃಷ್ಟ ಭಾಷಾಸರಣಿಯಲ್ಲಿ ಕಾವ್ಯವನ್ನು ರಚಿಸಿದ್ದಾನೆ. ಇವನ ಗ್ರಂಥಗಳಲ್ಲಿ- ಅದರಲ್ಲಿಯೂ ಪಂಪಭಾರತದಲ್ಲಿ ಸಿಕ್ಕುವಷ್ಟು ಅಚ್ಚಗನ್ನಡ ಶಬ್ದಗಳು ಮತ್ತಾವ ಕನ್ನಡ ಕೃತಿಗಳಲ್ಲಿಯೂ ಸಿಕ್ಕಲಾರದೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಆದರೂ ಅವನ ಕೆಲವು ಸಮಾಸಪದಗಳು ಬಹುದೀರ್ಘವಾಗಿ ಅರ್ಥಕ್ಕೆ ತೊಡಕನ್ನುಂಟು ಮಾಡಿ ಉಚ್ಚಾರಣೆಗೂ ಕಷ್ಟವಾಗುವುವು. ಲಘುವಾಗಿ ಸರಳವಾಗಿದ್ದಾಗ ಅರ್ಥಪೂರ್ಣವೂ ಸುಶ್ರಾವ್ಯವೂ ಆಗಿರುತ್ತವೆ.

‘ಬಾಣಾಸನ ಬಾಣ ಪಾಣಿ ಕರ್ಣಂ ಬಂದಂ’ ‘ಕಷ್ಟಂ ದುಖಾನಿಳಪರಿ
ಪುಷ್ಪಂ’ ‘ಸಂಸ್ಕೃತಿ ಭೋಗಂಗಳ್ ಭೋಗಿ ಭೋಗದಿಂ ವಿಷಮಂಗಳ್’,

ಹಿಂದೆಯೇ ತಿಳಿಸಿರುವಂತೆ ಪಂಪನ ಹಿರಿಮೆ ಅವನ ವಿವಿಧ ರೀತಿಯ ವರ್ಣನೆಗಳು. ಅವನ ಅನ್ಯಾದೃಶವಾದ ಲೋಕಾನುಭವವೇ ಇದಕ್ಕೆ ಕಾರಣ. ತನ್ನ ಕಾಲದ ಎಲ್ಲ ಕ್ಷೇತ್ರಗಳ ವಿವಿಧ ಪರಿಚಯವೂ ಅವನಿಗಿದೆ. ಆದುದರಿಂದಲೇ ಅವನು ಪರಮಾಣುವಿನಿಂದ ಪರಮೇಶ್ವರನವರೆಗೆ ಯಾವುದನ್ನಾದರೂ ಪ್ರತ್ಯಕ್ಷೀಕರಿಸಬಲ್ಲ. ಸಾಸಿವೆಯಲ್ಲಿ ಸಾಗರವನ್ನು ತುಂಬಲು ಬಲ್ಲ. ಮಧುವನ್ನು ಮೇರುವಾಗಿಸಲೂ ಬಲ್ಲ. ವ್ಯಕ್ತಿ, ಸನ್ನಿವೇಶ, ಋತು, ಬೇಟೆ, ವೇಶ್ಯಾವಾಟಿ, ಪಾನಗೋಷ್ಠಿ, ಯುದ್ಧ ಮೊದಲಾದ ಯಾವುದರ ವರ್ಣನೆಯಾದರೂ ಮೂರ್ತಿಮತ್ತಾಗಿ ಎದುರಿಗಿರುವಂತೆ ಭಾಸವಾಗುವುದು. ಮಯನನ್ನು ಸನ್ಮಾನಿಸಿ ಕಳುಹಿಸಿದನಂತರ ಧರ್ಮಪುತ್ರನು ತನ್ನ ನಾಲ್ವರು ತಮ್ಮಂದಿರೊಡಗೂಡಿ ಓಲಗಗೊಂಡಿರುವಾಗ ಇಂದ್ರಲೋಕದಿಂದ ಬಂದ ನಾರದರ ಚಿತ್ರವಿದು.

ಸರಿಗೆಯೊಳ್ ಸಮೆದಕ್ಷಮಾಲಿಕೆ, ಪೊನ್ನ ಮುಂಜಿ, ತೊಳಪ್ಪ ಕ
ಪ್ಪುರದ ಭಸ್ಮರಜಸ್ತ್ರಿಪುಂಡ್ರಕಮೊಪ್ಪೆ, ಪಿಂಗಜಟಾಳಿ ತಾ
ವರೆಯ ಸೂತ್ರದೋಳಾದ ಜನ್ನವಿರಂ, ದುಕೂಲದ ಕೋವಣಂ
ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರುಳ್ಚಿದಂ ||

ಹಾಗೆಯೇ ಪಾಸುಪತಾಸ್ತ್ರವನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಿರುವ ಸೌಮ್ಯ ಭಯಂಕರನಾದ ಅರ್ಜುನನ ಚಿತ್ರ ಮತ್ತೂ ಸ್ಪಷ್ಟವಾಗಿದೆ.

ಅದಿರದ ಚಿತ್ತಂ, ಅಳ್ಕದ ಮನಂ, ಬಗೆಗೊಳ್ಳದೆ ಮೋಹಂ, ಎತ್ತಿದ ಕ
ಟ್ಟಿದ ಜಡೆ, ತೊಟ್ಟ ರತ್ನಕವಚಂ, ಕೊರಲೊಳ್ ಸಲೆ ಕೋದ ಬಿಲ್ ಪ್ರಯ
ತ್ನದೆ ಬಿಗಿದಿರ್ದೆರೞ್ದೊಣೆ ಮಿಸುಪ್ಪಸಿಖೇಟಕಂ, ಅಂತಿವೊಂದುಗುಂ
ದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ||

ಪಂಪನ ಸನ್ನಿವೇಶಚಿತ್ರಗಳೂ ಹೀಗೆಯೇ. ವಾಚಕರ ಮುಂದೆ ಪ್ರತ್ಯಕ್ಷವಾಗಿ ಬಂದು ನಿಲ್ಲುವುವು. ಏಕಚಕ್ರಪುರದಲ್ಲಿ ಬಕಾಸುರನಿಗೆ ಆಹಾರವನ್ನು ಕಳುಹಿಸುವುದಕ್ಕೆ ಜನಗಳಿಲ್ಲದೆವ್ಯಸನ ಪಡುತ್ತಿರುವ ಬ್ರಾಹ್ಮಣನ ಮನೆಯ ದೃಶ್ಯ ಎಷ್ಟು ಹೃದಯ ವಿದ್ರಾವಕವಾಗಿದೆ!