ಕಳೆದ ಬಾರಿ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗೆ ಸಂಬಂಧಪಟ್ಟ ರೋಗ ನಿದಾನ, ಚಿಕಿತ್ಸೆಗಳನ್ನು ತಿಳಿದಿರಿ. ಈ ಬಾರಿ ಅದರ ಮತ್ತೊಂದು ಸಮಸ್ಯೆ ಮತ್ತು ಚಿಕಿತ್ಸೆಗಳನ್ನು ಓದಿ.

ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಬೆಳವಣಿಗೆಗೆ ಟೆಸ್ಟೊಸ್ಟಿರಾನ್ ಎಂಬ ಹಾರ್ಮೋನು ಮತ್ತು ವಯಸ್ಸಾಗುವುದು ಕಾರಣ. ಇದರಿಂದ ಪ್ರಾಸ್ಟೇಟ್ ಗ್ರಂಥಿ ಉಬ್ಬುತ್ತದೆ. ಕ್ಯಾನ್ಸರಿನಿಂದಲೂ ಪ್ರಾಸ್ಟೇಟ್ ಗ್ರಂಥಿಯ ಗಾತ್ರ ದೊಡ್ಡದಾಗುತ್ತಾ ಹೋಗಬಹುದು. ಕ್ಯಾನ್ಸರ್ ಇರಲಿ, ಇಲ್ಲದಿರಲಿ, ಪ್ರಾಸ್ಟೇಟಿನ ಉಬ್ಬುವಿಕೆ ಎಂಬುದು ಇಳಿವಯಸ್ಸಿನ ಬಹುಪಾಲು ಗಂಡಸರು ಎದುರಿಸಲೇಬೇಕಾದ ಸಮಸ್ಯೆ. ಪ್ರಾಸ್ಟೇಟ್ ಉಬ್ಬುವಿಕೆಗೆ ಇರುವ ಚಿಕಿತ್ಸೆಗೆ ಹಾರ್ಮೋನು ಚಿಕಿತ್ಸೆಯೂ (Hormone Therapy for Enlarged Prostate) ಒಂದು. ಪ್ರತಿಹಾರ್ಮೋನುಗಳು ಎಂಬ ರಾಸಾಯನಿಕಗಳನ್ನು ಬಳಸಿ ಟೆಸ್ಟೊಸ್ಟಿರಾನ್ ಉತ್ಪಾದನೆಯನ್ನು ಭಾಗಶಃ ಇಲ್ಲವೇ ಸಂಪೂರ್ಣವಾಗಿ ಕುಗ್ಗಿಸುವುದು ಈ ಚಿಕಿತ್ಸೆಯಲ್ಲಿನ ಕಾರ್ಯತಂತ್ರ. ಟೆಸ್ಟೊಸ್ಟಿರಾನ್ ಉತ್ಪಾದನೆ ಕಡಿಮೆ ಆದಷ್ಟೂ ಉಬ್ಬಿದ ಪ್ರಾಸ್ಟೇಟ್ ಗ್ರಂಥಿಯ ಗಾತ್ರ ಮತ್ತು ಗ್ರಂಥಿಯ ಜೀವಕೋಶಗಳ ಬೆಳವಣಿಗೆ ಕುಗ್ಗುತ್ತದೆ. ಪ್ರತಿಹಾರ್ಮೋನುಗಳನ್ನು ಬಳಸಿ ಆಂಡ್ರೋಜನ್ನುಗಳ ಉತ್ಪಾದನೆಯನ್ನು ಹೆಚ್ಚೂಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರಾಸ್ಟೇಟ್ ಬೆಳವಣಿಗೆಯನ್ನು ನಿಯಂತ್ರಿಸುವುದಕ್ಕೆ Total Androgen Control Hormone Therapyಎನ್ನುತ್ತಾರೆ.

ಪುರುಷರಲ್ಲಿ ಮೂತ್ರನಾಳ ಆರಂಭ ಆಗುವ ಬಳಿ ಪ್ರಾಸ್ಟೇಟ್ ಎಂಬ ಒಂದು ಚಿಕ್ಕ ಗ್ರಂಥಿ ಇರುತ್ತದೆ. ಇದು ನಾಳಯುಕ್ತ ಗ್ರಂಥಿ. ಇದು ಪುರುಷ ಜನನಾಂಗ ವ್ಯವಸ್ಥೆಯ ಒಂದು ಚಿಕ್ಕ ಭಾಗ. ಇದು ಹಾಲಿನಂಥ ಒಂದು ವಿಶಿಷ್ಟ ಪ್ರತ್ಯಾಮ್ಲೀಯ ದ್ರವವನ್ನು ಉತ್ಪಾದಿಸಿ ಶೇಖರಿಸಿಕೊಟ್ಟುಕೊಳ್ಳುತ್ತದೆ. ವೃಷಣಗಳು ಉತ್ಪತ್ತಿ ಮಾಡುವ ವೀರ್ಯಾಣುಗಳನ್ನು ಸಂರಕ್ಷಿಸುವುದು ಪ್ರಾಸ್ಟೇಟ್ ಸ್ರವಿಕೆಯ ಮುಖ್ಯ ಕಾರ್ಯ. ವೀರ್ಯಾಣುಗಳು ಉತ್ಪತ್ತಿಯಾಗುವುದು ವೃಷಣಗಳಲ್ಲಿ. ಹರಯಕ್ಕೆ ಬಂದ ಅನಂತರ ಗಂಡಸರಲ್ಲಿ ಆರಂಭವಾಗುವ ವೀರ್ಯಾಣುಗಳ ಉತ್ಪತ್ತಿ ಸಾಯುವವರೆಗೂ ಆಗುತ್ತಲೇ ಇರಬಹುದು.

ಪ್ರಾಸ್ಟೇಟ್ ಗ್ರಂಥಿ ಮತ್ತು ಅದರ ಸುತ್ತಲಿನ ರಚನೆಗಳು

ಕೆಲವೊಮ್ಮೆ ಅದರಲ್ಲೂ ವಿಶೇಷವಾಗಿ ವಯಸ್ಸಾದ ಗಂಡಸರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಜೀವಕೋಶಗಳು ದೊಡ್ಡದಾಗಿ, ಗ್ರಂಥಿಯ ಗಾತ್ರ ಅದರ ಸಾಧಾರಣ ಗಾತ್ರಕ್ಕಿಂತ ಗಣನೀಯವಾಗಿ ದೊಡ್ಡದಾಗಬಹುದು. ಈ ಸ್ಥಿತಿಯನ್ನು ಪ್ರಾಸ್ಟೇಟಿನ ನಿರುಪದ್ರವಿ ಉಬ್ಬುವಿಕೆ ಎನ್ನುತ್ತಾರೆ. ಇದನ್ನು ಇಂಗ್ಲೀಷಿನಲ್ಲಿ Benign prostatic hyperplasia (BPH) ಎನ್ನುತ್ತಾರೆ.  ಇದು ಗಂಡಸರಿಗೆ ಮಾತ್ರ ಬರುವ, ವಯಸ್ಸಿಗೆ ಸಂಬಂಧಪಟ್ಟ ಪರಿಸ್ಥಿತಿ. ಸಾಮಾನ್ಯವಾಗಿ ಬಿಪಿಎಚ್ ಉಂಟಾಗುವುದು 40ವರ್ಷಗಳ ಅನಂತರ. 40 – 80 ವರ್ಷ ವಯಸ್ಸಿನಲ್ಲಿರುವ ಸೇಕಡ 90ಗಂಡಸರಲ್ಲಿ ಬಿಪಿಎಚ್ ಸರ್ವೇಸಾಮಾನ್ಯ. ವಾಸ್ತವವಾಗಿ ಪ್ರಾಸ್ಟೇಟ್ ನಿಧಾನವಾಗಿ ಉಬ್ಬುತ್ತಲೇ ಇರುತ್ತದೆ. ಅದು ತೊಂದರೆ ಕೊಡುವಷ್ಟು ಉಬ್ಬಿ ಬಿಪಿಎಚ್ ಗೆ ತಿರುಗುವುದು ಇಳಿ ವಯಸ್ಸಿನಲ್ಲಿ. ಹೀಗಾದಾಗ ಪ್ರಾಸ್ಟೇಟ್ ಗ್ರಂಥಿ ಮೂತ್ರನಾಳವನ್ನು ಒತ್ತಿ ನಾಳ ಕಿರಿದಾಗಬಹುದು. ಇಲ್ಲವೇ ಅದು ಮುಚ್ಚಿಕೊಳ್ಳಬಹುದು. ಆಗ ಮೂತ್ರವಿಸರ್ಜನೆ ತ್ರಾಸದಾಯಕವಾಗಬಹುದು, ಮೂತ್ರಧಾರೆ ತನ್ನ ವೇಗವನ್ನು ಕಳೆದುಕೊಳ್ಳಬಹುದು, ಮೂತ್ರಚೀಲ ಸಂಪೂರ್ಣವಾಗಿ ಖಾಲಿ ಆಗದೆ ಇರಬಹುದು. ಮೂತ್ರಧಾರೆ ನಿರಂತರವಾಗಿರದೆ ಬಿಟ್ಟು ಬಿಟ್ಟು ಮೂತ್ರ ಹೊರಕ್ಕೆ ಚಿಮ್ಮಬಹುದು. ಇಲ್ಲವೇ ಮೂತ್ರವಿಸರ್ಜನೆ ಸಾಧ್ಯವೇ ಆಗದಿರಬಹುದು. ಇದಲ್ಲದೆ ಇನ್ನೂ ಹಲವು ಗಂಭೀರ ಆನುಷಂಗಿಕ ತೊಂದರೆಗಳು ಸಂಭವಿಸುವುದು ಸಾಧ್ಯ. ಹೀಗಾಗಿ ಬಿಪಿಎಚ್ ಅನ್ನು ನಿರ್ಲಕ್ಷಿಸಬಾರದು.

ಪ್ರಾಸ್ಟೇಟ್ ಗ್ರಂಥಿಯ ಉಬ್ಬು –ಬಿಪಿಎಚ್ – ಏಕೆ ಉಂಟಾಗುತ್ತದೆ ಎಂಬುದಕ್ಕೆ ಖಚಿತ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಇದರ ಕಾರಣಗಳ ಬಗ್ಗೆ ಒಂದಕ್ಕಿಂತ ಹೆಚ್ಚು ವಾದಗಳು (theories)ಚಾಲ್ತಿಯಲ್ಲಿ ಇವೆ. ಹೆಚ್ಚು ಚಾಲನೆಯಲ್ಲಿರುವ ಒಂದು ವಾದ ಈ ರೀತಿ ಇದೆ:ಬಿಪಿಎಚ್ ಕಂಡುಬರುವುದು ವಯಸ್ಸಾದ ಗಂಡಸರಲ್ಲಿ. ಹರಯಕ್ಕೆ ಮುಂಚೆಯೇ ಶಸ್ತ್ರಚಿಕಿತ್ಸೆ ಮಾಡಿ ವೃಷಣಗಳನ್ನು ನಿವಾರಿಸಿಕೊಂಡಿರುವ ಗಂಡಸರಲ್ಲಿ ಬಿಪಿಎಚ್ ಕಂಡುಬರುವುದಿಲ್ಲ ಎಂದರೆ, ವಯಸ್ಸಾಗುವಿಕೆ ಮತ್ತು ವೃಷಣಗಳಲ್ಲಿ ಜರುಗುವ ಚಟುವಟಿಕೆಗಳು ಒಟ್ಟಾಗಿ ಇದರ ಕಾರಣ ಎಂಬ ತೀರ್ಮಾನಕ್ಕೆ ತಜ್ಞರು ಬಂದಿದ್ದಾರೆ.

ಪುರುಷರಲ್ಲಿನ ವೃಷಣಗಳು ಆಂಡ್ರೋಜನ್ನುಗಳು ಎಂಬ ಗುಂಪಿಗೆ ಸೇರಿದ ಹಲವು ಪುರುಷ ಹಾರ್ಮೋನುಗಳನ್ನೂ ಈಸ್ಟ್ರೋಜನ್ ಎಂಬ ಸ್ತ್ರೀ ಹಾರ್ಮೋನನ್ನೂ ಉತ್ಪತ್ತಿಮಾಡುತ್ತವೆ. ಆಂಡ್ರೋಜನ್ನುಗಳಲ್ಲಿ ಟೆಸ್ಟೊಸ್ಟಿರಾನ್ ಎಂಬುದು ಸಹ ಒಂದು. ಟೆಸ್ಟೊಸ್ಟಿರಾನ್ ಮತ್ತು ಈಸ್ಟ್ರೋಜನ್‌ಗಳು ಸಂತಾನೋತ್ಪತ್ತಿಗೆ ಸಂಬಂಧಿಸಿದ ಹಾರ್ಮೋನುಗಳು. ಈ ಹಾರ್ಮೋನುಗಳು ಕ್ರಮವಾಗಿ ಪುರುಷ ಮತ್ತು ಸ್ತ್ರೀಯರಲ್ಲಿ ಆನುಷಂಗಿಕ ಲೈಂಗಿಕ ಲಕ್ಷಣಗಳ ಒಡಮೂಡಿಕೆಗೂ ಕಾರಣವಾಗಿವೆ. ಪುರುಷರಲ್ಲಿ ಸಾಮಾನ್ಯವಾಗಿ ಟೆಸ್ಟೊಸ್ಟಿರಾನ್ ಅಧಿಕವಾಗಿದ್ದು ಈಸ್ಟ್ರೋಜನ್ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ. ಸ್ಟ್ರೀಯರಲ್ಲಿ ಅದು ತದ್ವಿರುದ್ಧ. ಮೂತ್ರಪಿಂಡಗಳ ಮೇಲೆ ಟೋಪಿಯಂತೆ ಕುಳಿತಿರುವ ಆಡ್ರಿನಲ್ ಗ್ರಂಥಿಗಳೂ ಸಹ ಸ್ವಲ್ಪ ಆಂಡ್ರೋಜನನ್ನು ಉತ್ಪತ್ತಿಮಾಡುತ್ತದೆ. ಆದರೆ ಅದರ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಆನುಷಂಗಿಕ ಲೈಂಗಿಕ ಲಕ್ಷಣಗಳ ಬೆಳವಣಿಗೆಯಲ್ಲಿ ಅಡ್ರಿನಲ್ ಗ್ರಂಥಿಗಳ ಕೊಡುಗೆ ಅತ್ಯಲ್ಪ. ಅದೇನೇ ಇರಲಿ, 40ವರ್ಷ ದಾಟಿದ ಅನಂತರ ಟೆಸ್ಟೊಸ್ಟಿರಾನ್ ಹಾರ್ಮೋನಿನ ಉತ್ಪತ್ತಿ ಕಡಿಮೆ ಆಗುತ್ತದೆ. ಹೀಗಾಗಿ ಈಸ್ಟ್ರೋಜನ್ ಸಾಪೇಕ್ಷವಾಗಿ ಹೆಚ್ಚಾಗುತ್ತದೆ. ಕೋಶಗಳ ಬೆಳವಣಿಗೆ ಈಸ್ಟ್ರೋಜನ್ನಿನ ಕಾರ್ಯಗಳಲ್ಲಿ ಒಂದು. ಇಂದರಿಂದ ಇಳಿವಯಸ್ಸಿನ ಪುರುಷರಲ್ಲಿ ಪ್ರಾಸ್ಟೇಟ್‌ನ ಕೋಶಗಳು ಉಬ್ಬುತ್ತವೆ ಎಂಬುದು ತಜ್ಞರ ನಿಲುವು. ಇದಕ್ಕೆ ಪರಿಹಾರ ಏನು?

ಉಬ್ಬಿದ ಪ್ರಾಸ್ಟೇಟ್ ಗ್ರಂಥಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವುದು ಒಂದು ಪರಿಹಾರ. ಅದರ ಅಂಗಾಂಶಗಳಲ್ಲಿ ಕ್ಯಾನ್ಸರ್ ಕಂಡುಬಂದರೆ ಅದರ ಉಳಿಕೆ ಕೋಶಗಳ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಹೆಚ್ಚುವರಿಯಾಗಿ ಬೇರೆ ಚಿಕಿತ್ಸೆ ನೀಡುವುದು ಅಗತ್ಯ.  ಪ್ರಾಸ್ಟೇಟ್ ಮತ್ತೆ ಬೆಳೆಯುವುದು ಸಾಧ್ಯ. ಎಲ್ಲಿಯವರಿಗೆ ಟೆಸ್ಟೊಸ್ಟಿರಾನಿನ ಉತ್ಪಾದನೆ ಇರುತ್ತದೋ ಅಲ್ಲಿಯವರಿಗೆ ಪ್ರಾಸ್ಟೇಟ್ ಕ್ರಿಯಾಶೀಲವಾಗಿರುತ್ತವೆ. ಟೆಸ್ಟೊಸ್ಟಿರಾನ್ ಕಡಿಮೆ ಆದಷ್ಟೂ ಪ್ರಾಸ್ಟೇಟ್ ಕೋಶಗಳ ಬೆಳವಣಿಗೆ ಕುಗ್ಗುತ್ತದೆ. ಹೀಗಾಗಿ ದೇಹದಲ್ಲಿ ಟೆಸ್ಟೊಸ್ಟಿರಾನ್ ಉತ್ಪಾದನೆಯನ್ನು ಸ್ಥಗಿತಗೊಳಿಸುವುದು ಪರ್ಯಾಯ ಪರಿಹಾರ. ಇದೊಂದೇ ಹಾರ್ಮೋನಿನ ಉತ್ಪಾದನೆಯನ್ನು ನಿಯಂತ್ರಿಸುವ ಕೆಲಸ ಕಷ್ಟದ್ದು. ಹೀಗಾಗಿ ವೈದ್ಯರು ಆಂಡ್ರೋಜನ್ ಉತ್ಪಾದನೆಯನ್ನೇ ಕಡಿಮೆ ಮಾಡುತ್ತಾರೆ. ಇಲ್ಲವೇ ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಾರೆ. ಆಂಡ್ರೋಜನ್ ಉತ್ಪಾದನೆಯನ್ನು ಸ್ಥಗಿತಗೊಳಿಸುವುದು ಹೇಗೆ ಎಂಬುದನ್ನು ತಿಳಿಯುವ.

ವೃಷಣಗಳನ್ನೇ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸುವುದು ಒಂದು ವಿಧಾನ. ಇದು ಅನೇಕರಿಗೆ ಸಹ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ, ರಕ್ತದಲ್ಲಿರುವ ಟೆಸ್ಟೊಸ್ಟಿರಾನನ್ನು ಪ್ರಾಸ್ಟೇಟ್ ಗ್ರಂಥಿ ಗುರುತಿಸದಂತೆ ಮಾಡುವುದು ಒಂದು ಪರ್ಯಾಯ. ಹೇಗಾದರೂ ಮಾಡಿ ಆಂಡ್ರೋಜನ್ನುಗಳ ಉತ್ಪಾದನೆಯನ್ನೇ ಸ್ಥಗಿತಸೊಳಿಸುವುದು ಇನ್ನೊಂದು ಪರ್ಯಾಯ ಮಾರ್ಗ.  ಪ್ರಾಸ್ಟೇಟಿನ ಕೋಶಗಳು ಟೆಸ್ಟೊಸ್ಟಿರಾನನ್ನು ಗುರುತಿಸದಂತೆ ಮಾಡುವ ಕೆಲವು ರಾಸಾಯನಿಕಗಳು ಇವೆ. ಈ ರಾಸಾಯನಿಕಗಳು ಪ್ರತಿ ಆಂಡ್ರೊಜನ್ ಎಂಬ ಹೆಸರಿನಿಂದ ಪ್ರಖ್ಯಾತವಾಗಿವೆ. ಈ ಗುಂಪಿಗೆ ಸೇರಿದ ಇನ್ನು ಕೆಲವು ರಾಸಾಯನಿಕಗಳು ಆಂಡ್ರೊಜನ್ ಉತ್ಪಾದನೆಯನ್ನೇ ಕಡಿಮೆ ಮಾಡುತ್ತವೆ. ಇವನ್ನು ಮಾತ್ರೆಗಳ ರೂಪದಲ್ಲಿ ನೀಡಬಹುದು.  ಇಂಥ ಹಾರ್ಮೋನ್ ಚಿಕಿತ್ಸೆಯಿಂದ ಹಲವು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳೂ ಇವೆ.  ಆದಾಗ್ಯೂ ರೋಗಿಯ ಗರಿಷ್ಠ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ವೈದ್ಯರು ಯುಕ್ತ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.