ಧರ್ಮ ಕರ್ಮಗಳೆಲ್ಲ ಕೊನೆಗಂಡಿತೆನ್ನೊಳಗೆ,
ಘನಶ್ಯಾಮೆಯನು ನಾನು ನೆನೆಯಲಾರೆ.
ನನ್ನ ಇರವನು ಕಂಡು ನಾನೆ ನಾಚುತಲಿರುವೆ,
ನನ್ನ ಮನವನು ನಾನೆ ತಡೆಯಲಾರೆ.

ಕರವಾಲವನು ಹಿಡಿದ ರುಂಡಮಾಲಿಯ ಕುರಿತು
ನಾನಿಲ್ಲಿ ಪೂಜೆಯಲಿ ತೊಡಗಿದಾಗ,
ಕೊಳಲನೂದುತಲಿರುವ ವನಮಾಲಿಯಾಕೃತಿಯು
ಬಂದು ನಿಲ್ಲುವುದಲ್ಲ, ಮಾಡಲೇನು !

ಶ್ರೀ ತ್ರಿನೇತ್ರೆಯ ಕುರಿತು ನಾನು ಧ್ಯಾನಿಸುತಿರಲು
ಕಮಲನೇತ್ರನು ಬಂದು ನಿಲ್ಲುವನು ಮುಂದೆ !
ತಾಯ ಶ್ರೀ ಪಾದದಲಿ ಹೂವನರ್ಪಿಸುವಾಗ
ಘನಶ್ಯಾಮಸುಂದರಗೆ ಮರುಳುಗೊಂಡೆ !

ಪ್ರತಿಸಲವು ಪೂಜೆಯಲಿ ಘನಶ್ಯಾಮೆಯನು ಕುರಿತು
ನಾನು ಆರಾಧಿಸುವ ಹೊತ್ತಿನಲ್ಲಿ,
ಘನಶ್ಯಾಮ ಸುಂದರನು ಎಲ್ಲ ಪೂಜೆಯ ಮರೆಸಿ
ಬಂದು ನಿಲುವನು ಹೊನ್ನಕಾಂತಿಯಲ್ಲಿ !