ನಿರ್ಭಯ, ದೇಶಪ್ರೇಮ, ಕಾರ್ಯನಿಷ್ಠೆ – ಇವುಗಳ ಸಂಗಮವಾಗಿದ್ದರು ಬಾಬಾಸಾಹೇಬ ಆಪ್ಟೆ. ಇವರ ನಿಜವಾದ ಹೆಸರು ಉಮಾಕಾಂತ ಆಪ್ಟೆ.

ಓದಿನಲ್ಲಿ ನಿಷ್ಠೆ

೧೯೦೩ನೇ ಅಗಸ್ಟ್ ಇಪ್ಪತ್ತೆಂಟರೆಂದು ಯವತಮಾಳನ ಒಂದು ಬಡಕುಟುಂಬದಲ್ಲಿ ಉಮಾಕಾಂತರ ಜನ್ಮವಾಯಿತು. ಅವರ ತಂದೆ ಕೇಶವರಾವ್ ಆಪ್ಟೆಯವರು ಸರ್ಕಾರಿ ಪಾಠ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಪದೇ ಪದೇ ಅವರಿಗೆ ವರ್ಗವಾಗುತ್ತಿತ್ತು. ಅದರಿಂದ ಅನೇಕ ಊರುಗಳಲ್ಲಿ ಉಮಾಕಾಂತನ ಶಿಕ್ಷಣ ನಡೆಯಿತು. ಚಿಕ್ಕಂದಿನಲ್ಲಿ ಅವನು ಆಗಾಗ ಕಾಯಿಲೆ ಬೀಳುತ್ತಿದ್ದ.

ಸಾಮಾನ್ಯವಾಗಿ ಬಾಲಕರು ಚಿಕ್ಕಂದಿನಲ್ಲಿ ಆಟ ಪಾಠಗಳಲ್ಲಿ ಮಗ್ನರಾಗುತ್ತಾರೆ. ಊಟ ತಿಂಡಿಗಳೆಂದರೆ ಅವರಿಗೆ ಬಹಳ ಆಸೆ ಇರುತ್ತದೆ. ಆದರೆ ಬಾಲಕ ಉಮಾಕಾಂತನಿಗೆ ಹೆಚ್ಚಿನ ಪ್ರೀಯವಸ್ತು ಪುಸ್ತಕ. ಯಾವುದಾದರೂ ಹೊಸ ಪುಸ್ತಕ ಸಿಕ್ಕರೆ ಸಾಕು. ಅನ್ಯ ಬಾಲಕರಿಗೆ ಅವರ ಇಷ್ಟದ ಸಿಹಿ ತಿಂಡಿ ಸಿಕ್ಕರೆ ಆಗುವಷ್ಟು ಆನಂದ ಅವನಿಗಾಗುತ್ತಿತ್ತು.

ಎಂಟು ವರ್ಷದವನಾಗಿದ್ದಾಗಿನ ಘಟನೆ. ಮನೆಗೆ ಅವರ ಮಾವ ಬಂದಿದ್ದರು. ಅವರು ತಮ್ಮ ಮಕ್ಕಳಿಗಾಗಿ ಕಲವು ಪುಸ್ತಕಗಳನ್ನು ತಂದಿದ್ದರು. ಅದರಲ್ಲಿ ಈಸೋಪನ ನೀತಿಕಥೆಗಳ ಪುಸ್ತಕವೂ ಇತ್ತು. ಎರಡು ದಿನಗಳ ನಂತರ ಮಾವ ಊರಿಗೆ ಹೋಗುವವರಿದ್ದರು. ಅವರೊಡನೆ ಪುಸ್ತಕವೂ ಹೋಗುವುದಿತ್ತು. ಉಮಾಕಾಂತನು ಆ ಪುಸ್ತಕವನ್ನು ಪೂರ್ತಿ ಓದಲು ನಿಶ್ಚಯಿಸಿದ. ಶನಿವಾರ ರಾತ್ರಿ ಬಹಳ ಹೊತ್ತಿನವರೆಗೆ ಓದುತ್ತಿದ್ದ. ಹೆಚ್ಚೆಂದರೆ ನಾಲ್ಕು ಗಂಟೆಗಳಷ್ಟು ಮಾತ್ರ ನಿದ್ರಿಸಿದ್ದ. ಬೆಳಿಗ್ಗೆ ಏಳುತ್ತಲೇ ಪುನಃ ಪುಸ್ತಕ ಹಿಡಿದು ಮನೆಯ ಒಂದು ಮೂಲೆಯಲ್ಲಿ ಕುಳಿತು ಓದುವುದರಲ್ಲಿ ತಲ್ಲೀನನಾದ.

ಊಟದ ವೇಳೆ ಆಯಿತು. “ಊಟಕ್ಕೆ ಬಾ; ಅಮ್ಮ ಕರೆಯುತ್ತಿದ್ದಾಳೆ” ತಂಗಿ ಬಂದು ಕರೆದಳು.

“ಇಲ್ಲ ಇವತ್ತು ನಾನು ಊಟ ಮಾಡುವುದಿಲ್ಲ” ಉಮಾಕಾಂತ ಉತ್ತರಿಸಿದ. ತಂಗಿ ಹೊರಟು ಹೋದಳು.

ತಮ್ಮ ಕರೆಯಲು ಬಂದ, ಅವನಿಗೂ ಅದೇ ಉತ್ತರ. ನಂತರ ತಾಯಿಯೇ ಬಂದರು. ಆಗ ಉಮಾಕಾಂತ ಎದ್ದು ಅಂಗಲಾಚುತ್ತ – “ಅಮ್ಮ ನನ್ನನ್ನು ಕ್ಷಮಿಸು. ನನಗೆ ಓದಲು ಬಿಡು. ಇವತ್ತು ನಾನು ಊಟ ಮಾಡುವುದಿಲ್ಲ. ಬಲವಂತದಿಂದ ನೀನು ಕರೆದೊಯ್ದರೂ ನಾನು ಊಟ ಮಾಡಲಾರೆ” ಎಂದ.

ಅವರ ತಂದೆಗೆ ವಿಷಯ ತಿಳಿಯುತ್ತಲೇ ಬಹಳ ಕೋಪಗೊಂಡರು. ಅವರು ಮನೆಯಲ್ಲಿ ಎಲ್ಲ ಸಣ್ಣ ಪುಟ್ಟ ಕಾರ್ಯಗಳನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದರು. ಇತರರೂ ಹಾಗೇ ಮಾಡಬೇಕೆಂಬ ಆಗ್ರಹ ಅವರದು. ಕೈಯಲ್ಲಿ ಬೆತ್ತ ಹಿಡಿದು ಉಮಾಕಾಂತನ ಹತ್ತಿರ ಬಂದರು. “ಏಳುತ್ತಿಯೋ ಅಥವಾ ಬೇಕೋ ಏಟು? ಎಲ್ಲರ ಜೊತೆಗೇ ನೀನೂ ಊಟ ಮಾಡಬೇಕು. ಆಮೇಲೆ ಬಂದರೆ ನಿನಗೆ ಊಟ ಸಿಗಲಾರದು.”

ಉಮಾಕಾಂತ ಎದ್ದುನಿಂತ. “ಈಪುಸ್ತಕವನ್ನು ಪೂರ್ತಿ ಓದುವವರೆಗೆ ನಾನು ನೀರು ಸಹ ಕುಡಿಯುವುದಿಲ್ಲ ಎಂದು ನಿಶ್ಚಯಿಸಿರುವೆ. ಇನ್ನು ಊಟದ ಪ್ರಶ್ನೆ ಎಲ್ಲಿ ಬಂತು? ನಿಮಗೆ ಹೊಡೆಯಲೇ ಬೇಕೆಂದಿದ್ದರೆ ಹೊಡೆಯಬಹುದು. ಈ ಪುಸ್ತಕವನ್ನು ಮಾತ್ರ ನಾನು ಪೂರ್ತಿ ಓದಲೇಬೇಕು.”

ತಂದೆಯ ಎದುರು ಬೆನ್ನು ತೆರೆದು ಉಮಾಕಾಂತ ಅಲ್ಲೇ ಕುಳಿತುಕೊಂಡ. ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ಹಾಗೇ ಅಳುತ್ತಲೇ ಪುಸ್ತಕ ಓದತೊಡಗಿದ. ಅಷ್ಟರಲ್ಲಿ ಅವರ ಮಾವ ಅಲ್ಲಿಗೆ ಬಂದರು. ಅವರು ತಂದೆಯವರಿಗೆ ಸಮಾಧಾನ ಮಾಡಿದರು.

ಉಮಾಕಾಂತ ಹತ್ತು ಗಂಟೆಗಳವರೆಗೆ ಒಂದೇ ಸಮನೆ ಓದಿ ಪುಸ್ತಕವನ್ನು ಪೂರ್ಣಗೊಳಿಸಿದ. ಅವನ ಮುಖ ತೃಪ್ತಿಯಿಂದ ಕಂಗೊಳಿಸಿತು. ಆನಂದದಿಂದ ಕುಣಿದಾಡಿದ.

“ನಡಿ ಮಗು, ಈಗಲಾದರೂ ಊಟಮಾಡು” ಅಮ್ಮ ಕರೆದರು. “ಇಲ್ಲಮ್ಮ, ಈಗ ಊಟ ಮಾಡೊಲ್ಲ. ನಮ್ಮ ಮನೆಯ ನಿಯಮದಂತೆ ಎಲ್ಲರೊಡನೆಯೇ ಊಟ ಮಾಡುವೆ. ಈಗ ಆನಂದದಿಂದ ನನ್ನ ಹೊಟ್ಟೆ ತುಂಬೆದೆ”.

“ನಿನಗೆ ಈ ಪುಸ್ತಕ ಇಷ್ಟು ಹಿಡಿಸಿದ್ದರೆ ನಿನಗೇ ಈ ಪುಸ್ತಕವನ್ನು ಉಡುಗೊರೆಯಾಗಿ ಕೊಡುವೆ” ಮಾವ ಹೇಳಿದರು.

“ಅದನ್ನು ನಾನು ಪೂರ್ತಿ ಓದಿಬಿಟ್ಟಿದ್ದೇನೆ. ಈಗ ಅದು ನನಗೆ ಬೇಡ. ಅದರಲ್ಲಿನ ಎಲ್ಲ ಕಥೆಗಳೂ ನನಗೆ ಬಾಯಿ ಪಾಠವಾಗಿದೆ”.

ಮಾವನು ಅವನನ್ನು ಪರೀಕ್ಷಿಸಲು ಇಷ್ಟಪಟ್ಟು ನಾಲ್ಕಾರು ಇತೆಗಳ ಹೆಸರನ್ನು ಓದಿದರು. ಉಮಾಕಂತನು ಆ ಕಥೆಗಳನ್ನು ಸುಂದರವಾಗಿ ವರ್ಣಿಸಿದ. ಪುಸ್ತಕದಲ್ಲಿನ ಯಾವ ವಾಕ್ಯವನ್ನೂ ಬಿಡಲಿಲ್ಲ, ಬದಲಿಸಲಿಲ್ಲ, ಉಮಾಕಾಂತನ ಈ ಅದ್ಭುತ ಗ್ರಹಣ ಶಕ್ತಿಯನ್ನು ಕಂಡು ಮಾನ ಆಶ್ಚರ್ಯಪಟ್ಟರು.

“ದೇಶಕ್ಕಾಗಿ ಜೀವನ ಮುಡಿಪು”

೧೯೧೫ನೇ ಡಿಸೆಂಬರಿನ ಘಟನೆ. ಆಗ ಉಮಾಕಾಂತನು ಕಾರಂಜಿ ಎಂಬ ಊರಿನಲ್ಲಿ ಓದುತ್ತಿದ್ದ. ಲೋಕಮಾನ್ಯ ತಿಲಕರು ಯವತಮಾಳ್ ದಿಂದ ಮೂರ್ತಿಜಾಪುರಕ್ಕೆ ಹೋಗಲಿರುವುದಾಗಿ ತಿಳಿಯಿತು. ರೈಲು ಕಾರಂಜಿ ಮೂಲಕವೇ ಹೋಗುವದಿತ್ತು ಅವರ ದರ್ಶನ ಪಡೆಯಲು ಭಾಷಣ ಕೇಳಲು ಕೆಲವರು ನಿಲ್ದಾಣಕ್ಕೆ ಹೋಗಲಿದ್ದರು. ಶಾಲೆ ಮುಗಿದ ಕೂಡಲೇ ಗಾಡಿಬರುವ ಸಮಯಕ್ಕೆ ತಾನೂ ಅಲ್ಲಿಗೆ ಹೋಗಲು ನಿಶ್ಚಯಿಸಿದ.

ಆ ದಿನಗಳಲ್ಲಿ ಆಂಗ್ಲರು ಭಾರತದಲ್ಲಿ ರಾಜ್ಯ ನಡೆಸುತ್ತಿದ್ದರು. ಎಂದೆಂದಗೂ ಭಾರತ ತಮ್ಮ ಅಧೀನದಲ್ಲೇ ಇರಲೆಂದು ಆಶಿಸುತ್ತಿದ್ದರು. ಇಂಗ್ಲಿಷರ ವಿರುದ್ಧ ಎದ್ದು ನಿಂತವರಲ್ಲಿ ಲೋಕಮಾನ್ಯ ತಿಲಕರು ಮೊದಲಿನವರು. ಆದ್ದರಿಂದ ಅವರ ಭಾಷಣಗಳನ್ನು ಯಾರೂ ಕೇಳಬಾರದೆಂದು ಬ್ರಿಟಿಷ್ ಅಧಿಕಾರಗಳು ಭಾರತೀಯರನ್ನು ಹೆದರಿಸುತ್ತಿದ್ದರು.

ಆ ದಿನವೂ ಕಾರಂಜಾದ ಶಾಲೆಯ ಮುಖ್ಯಾಧ್ಯಾಪಕರಿಗೆ ಅದೇ ರೀತಿಯ ಅನ್ಯಾಯವಾದ ಆಜ್ಞೆ ತಲುಪಿತ್ತು. “ತಿಲಕರ ಭಾಷಣವನ್ನು ಕೇಳಲು ವಿದ್ಯಾರ್ಥಿಗಳನ್ನು ಬಿಡಬೇಡಿ. ಈ ಆಜ್ಞೆಯ ಉಲ್ಲಂಘನೆಯಾದರೆ ನೀವು ಶಿಕ್ಷೆ ಅನುಭವಿಸಬೇಕಾಗುವುದು”.

ಮುಖ್ಯಾಧ್ಯಾಪಕರು ಹೆದರಿದರು. ಕೆಲವು ಶಿಕ್ಷಕರೊಡನೆ ವಿಚಾರ ಮಾಡಿ ಯೋಜನೆ ಮಾಡಿದರು. ಶಾಲೆಯ ಹೆಬ್ಬಾಗಿಲನ್ನು ಮುಚ್ಚಲಾಯಿತು. ಯಾವುದೇ ವಿದ್ಯಾರ್ಥಿ ಅಥವಾ ಶಿಕ್ಷಕರು ಶಾಲೆಯಿಂದ ಹೊರಗೆ ಹೋಗಕೂಡದೆಂದು ಎಲ್ಲರಿಗೂ ತಿಳಿಸಿದರು.ಮಧ್ಯೆ ವಿರಾಮದ ವೇಳೆಯಲ್ಲಿ ಮುಖ್ಯಾಧ್ಯಾಪಕರು ತಮ್ಮ ಹಣದಿಂಡ ವಿದ್ಯಾರ್ಥಿಗಳಿಗೆ ಕಡಲೇಪುರಿ ಹಂಚಿದರು. ಆದರೆ ಯಾರಿಗೂ ಸಹ ಹೆಬ್ಬಾಗಿಲಿನವರೆಗೆ ಸುಳಿಯಲೂ ಬಿಡಲಿಲ್ಲ.

ಉಮಾಕಾಂತ ಈ ಕಡಲೇಪುರಿ ತಿನ್ನಲಿಲ್ಲ. ಈ ತಿಂಡಿ ಹಂಚುವುದರ ಹಿಂದೆ ಏನೋ ಭೇದವಿದೆ ಎಂದು ಅವನಿಗೆ ಅನ್ನಿಸುತ್ತಿತ್ತು. ಶಾಲೆಯಲ್ಲಿ ಶಿಕ್ಷಣ ಎಂದಿನಂತೆ ನಡೆಯುತ್ತಿತ್ತು. ಪಾಠಗಳು ಒಂದರ ನಂತರ ಒಂದು ಮುಗಿಯುತ್ತಿದ್ದವು. ಆದರೆ ನಿತ್ಯದ ನಿಯಮದಂತೆ ಗಂಟೆ ಮಾತ್ರ ಬಾರಿಸಲಿಲ್ಲ. ಗಡಿಯಾರದ ಕಡೆ ಇತರರ ಗಮನವೇ ಇದ್ಧಂತೆ ಕಾಣಲಿಲ್ಲ. ಗಂಟೆ ಐದು ಬಾರಿಸುತ್ತಲೇ ರೈಲಿನ ಶಿಳ್ಳು ಕೇಳಿಸಿತು. ಉಮಾಕಾಂತ ಕೂತಲ್ಲೇ ಚಡಪಡಿಸಿದ. ನೀರಿನಿಂದ ಹೊರತೆಗೆದ ಮೀನಿನಂತಾಗಿತ್ತು ಅವನ ಸ್ಥಿತಿ.

ಕೊನೆಗೆ ಆ ದುರ್ಬಲ ತೆಳುವಾದ ಕಿಶೋರ ಉಮಾಕಾಂತ ತನ್ನಲ್ಲ ಸಾಹಸವನ್ನೂ ಒಟ್ಟುಗೂಡಿಸಿ ಎದ್ದು ನಿಂತು ಹೇಳಿದ, “ಶಾಲೆ ಮುಗಿಯುವ ಸಮಯ ಆಗಿ ಹೋಯಿತು. ನನಗೆ ಅವಸರದ ಕಾರ್ಯವಿದೆ, ನಾನು ಹೊರಗೆ ಹೋಗಬೇಕು”.

ಆ ವಾಕ್ಯವನ್ನು ಕೇಳುತ್ತಲೇ ಅಧ್ಯಾಪಕರು ಕಿಡಿ ಕಿಡಿಯಾದರು. ಉಮಾಕಾಂತನ ಕಿವಿ ಹಿಡಿದು ಎಳೆದರು. ಬೆನ್ನಿನ ಮೇಲೆ ಜೋರಾಗಿ ಗುದ್ದಿದರು. ಅವನನ್ನು ತರಗತಿಯಿಂದ ಹೊರಗೆ ದಬ್ಬಿ ಜವಾನನನ್ನು ಕರೆದು “ಇವನನ್ನು ಮುಖ್ಯಾಧ್ಯಾಪಕರ ಬಳಿ ಕರೆದುಕೊಂಡು ಹೋಗು” ಎಂದರು.

ಜವಾನ ಉಮಾಕಾಂತನನ್ನು ಮುಖ್ಯಾಧ್ಯಾಪಕರ ಎದುರಿಗೆ ನಿಲ್ಲಿಸಿದ. “ಏನು? ಏನಾಯಿತು? ನಿನಗೇನು ಬೇಕು?” ಮುಖ್ಯಾಧ್ಯಾಪಕರು ಪ್ರಶ್ನಿಸಿದರು. ಉಮಾಕಾಂತ. “ಪಾಠಶಾಲೆಯ ಸಮಯ ಮುಗಿದಿದೆ. ನಾನು ಹೋಗಬೇಕು?”

ಮುಖ್ಯಾಧ್ಯಾಪಕರು: “ಹೊರಗೆ ಏಕೆ ಹೋಗಬೇಕು?”

ಉಮಾಕಾಂತ: “ಲೋಕಮಾನ್ಯ ತಿಲಕರ ದರ್ಶನ ಪಡೆಯಲು ನಾನು ಸ್ಟೇಶನ್ ಗೆ ಹೋಗಬೇಕು”.

ಈ ವಾಕ್ಯ ಕೇಳಿದೊಡನೆಯೇ ಮುಖ್ಯಾಧ್ಯಾಪಕರು ಸಿಟ್ಟಿನಿಂದ ಬೆಂಕಿಯಾದರು. ಮೂಲೆಯಲ್ಲಿನ ಬೆತ್ತ ತೆಗೆದುಕೊಂಡರು. ಉಮಾಕಾಂತನಿಗೆ ಚೆನ್ನಾಗಿ ಹೊಡೆದರು. ಅಷ್ಟು ಹೊತ್ತಿಗೆ ಪುನಃ ರೈಲಿನ ಶಿಳ್ಳು ಕೇಳಿಸಿತು. ರೈಲು ಕಾರಂಜಾ ನಿಲ್ದಾಣವನ್ನು ಬಿಡುತ್ತಿತ್ತು.

ಮುಖ್ಯಾಧ್ಯಾಪಕರು ವಿಜಯದ ಆನಂದದಿಂದ ನೋಡ ತೊಡಗಿದರು. ಅವರ ಶಾಲೆಯಿಂದ ಒಬ್ಬ ವಿದ್ಯಾರ್ಥಿಗೂ ನಿಲ್ದಾಣಕ್ಕೆ ಹೋಗಲಾಗಲಿಲ್ಲ. ಬೆತ್ತವನ್ನು ಮೂಲೆಯಲ್ಲಿರಿಸಿ, “ಈಗ ಗಂಟೆ ಹೊಡೆಯುತ್ತದೆ, ಸಂತೋಷದಿಂದ ಮನೆಗೆ ಹೋಗು ಸರಿಯಾಗಿ ನಿನ್ನ ಪಾಠ ಓದಿಕೋ, ನಾನು ಮಡಿದ್ದು ನಿನ್ನ ಹಿತಕ್ಕಾಗಿಯೇ” ಎಂದರು.

ಉಮಾಕಾಂತ ಕೂಡಲೇ ಉತ್ತರಿಸಿದ, “ಹೌದು, ನೀವು ನನ್ನ ಒಳ್ಳೆಯದಕ್ಕೆ ಮಾಡಿದ್ದು. ನೀವು ನನ್ನನ್ನು ಇಲ್ಲಿ ಬಂಧಿಸಿದ್ದರಿಂದ ನಾನು ನನ್ನ ಮನಸ್ಸಿನಲ್ಲೇ ತಿಲಕರ ಧ್ಯಾನ ಮಾಡಿದೆ. ನನ್ನ ಕಲ್ಪನೆಯಿಂದಲೇ ಅವರ ಭಾಷಣವನ್ನೂ ಕೇಳಿದೆ. ಅದರಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ತಿಲಕರ ಆಜ್ಞೆಯಂತೆ ನನ್ನ ಸಂಪೂರ್ಣ ಜೀವನವನ್ನು ದೇಶ ಕಾರ್ಯಕ್ಕಾಗಿಯೇ ವಿನಿಯೋಗಿಸಲು ನಿಶ್ಚಯಿಸಿರುವೆ”.

ಬಾಪೂಜಿ ಆಣೆ

ಕೇಶವರಾಯರಿಗೆ ಯವತಮಾಳಿಗೆ ಬದಲು ಆಯಿತು. ಉಮಾಕಾಂತನ ವಿದ್ಯಾಭ್ಯಾಸ ಯವತಮಾಳಿನಲ್ಲಿ ಪ್ರಾರಂಭವಾಯಿತು. ಅವನ ಸಹಪಾಠಿ ರಾಮಚಂದ್ರ ಯಶವಂತ ಸರ್ ಮುಕದ್ದಮ್ ಅವನೊಡನೆ ಉಮಾಕಾಂತನ ಗಾಢ ಸ್ನೇಹ ಬೆಳೆಯಿತು.

ಲೋಕಮಾನ್ಯ ತಿಲಕರ ಏಕನಿಷ್ಠ ಅನುನಾಯಿ ಮತ್ತು ಶ್ರೇಷ್ಠ ಸಹಕಾರಿ ಲೋಕನಾಯಕ ಬಾಪೂಜಿ ಆಣೆಯವರು ಯವತಮಾಳಿನವರು. ಅವರು ರಾಮಚಂದ್ರನ ದೂರದ ನೆಂಟರು ಉಮಾಕಾಂತ ರಾಮಚಂದ್ರನೊಡನೆ ಬಾಪೂಜಿ ಆಣೆಯವರ ಮನೆಗೆ ಹೋಗಲು ಪ್ರಾರಂಭಿಸಿದ. ಅವರ ಮಾತುಕಥೆಗಳನ್ನು ಗಮನವಿಟ್ಟು ಕೇಳುತ್ತಿದ್ದ. ಅವರಿಂದ ಉತ್ತಮ ಪುಸ್ತಕಗಳನ್ನು ಓದಲು ಪಡೆಯುತ್ತಿದ್ದ. ಮತ್ತು ಓದಿದ ನಂತರ ನಿಯಮ ಪೂರ್ವಕವಾಗಿ ಹಿಂತಿರುಗಿಸುತ್ತಿದ್ದ.

ಬಾಪೂಜಿ ಆಣೆಯರು ಅವನು ಓದಿದ ಪುಸ್ತಕಗಳ ಸಾರಾಂಶಗಳನ್ನೂ ಕೇಳೂತ್ತಿದ್ದರು. ಉಮಾಕಾಂತ ಕೆಲವೇ ಮಾತುಗಳಲ್ಲಿ ಓದಿದ ಪುಸ್ತಕದ ತಿರುಳನ್ನು ತಿಳಿಸುವುದನ್ನು ಕೇಳಿ ಬಾಪೂಜಿಯವರು ಬಹಳ ಪ್ರಸನ್ನರಾಗಿ ಅವನ ಬೆನ್ನು ತಟ್ಟುತ್ತಿದ್ದರು. ಅವನಿಗೆ ಅರ್ಥವಾಗದ ಕಠಿಣವಾದ ವಿಷಯಗಳನ್ನು ವಿವರಿಸುತ್ತಿದ್ದರು.

ನನ್ನ ಸಂಪೂರ್ಣ ಜೀವನವನ್ನು ದೇಶಕ್ಕಾಗಿ ವಿನಿಯೋಗಿಸುತ್ತೇನೆ

೧೯೧೯ ರಲ್ಲಿ ಕೇಶವರಾಯರು ಕಾಯಿಲೆ ಬಿದ್ದರು. ಡಿಸೆಂಬರ್ ತಿಂಗಳಿನಲ್ಲಿ ತೀರಿಕೊಂಡರು. ಸ್ವಲ್ಪ ಸಮಾಧಾನ ವಿಷಯವೆಂದರೆ ಆ ವೇಳೆಗೆ ಉಮಾಕಾಂತನ ತಂಗಿ ಮಥುರಾಬಾಯಿಯ ವಿವಾಹವಾಗಿತ್ತು. ಆಕೆ ವಣಿಯಲ್ಲಿ ಇರುತ್ತಿದ್ದರು, ತಮ್ಮ ರಾಜ ಐದನೆಯ ತರಗತಿಯಲ್ಲಿ ಓದುತ್ತಿದ್ದ.

ಆ ದಿನಗಳಲ್ಲಿ ಉಮಾಕಾಂತ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಮಿತ್ರ ರಾಮಚಂದ್ರ ಎಲ್ಲ ತರಹದ ಸಹಾಯ ಮಾಡುತ್ತಿದ್ದ. ಶಾಲೆಯಲ್ಲಿ ಓದಲು ಅವಶ್ಯಕ ಪುಸ್ತಕಗಳನ್ನು ಕೊಳ್ಳಲು ಉಮಾಕಾಂತನ ಬಳಿ ಹಣವಿರುತ್ತಿರಲಿಲ್ಲ. ಅದರಿಂದ ರಾತ್ರಿ ತಮ್ಮ ಮನೆಯಲ್ಲೇ ಓದಲು ಸಾಧ್ಯವಾಗುತ್ತಿರಲಿಲ್ಲ. ಕರಲವು ವೇಳೆ ಮನೆಯಲ್ಲಿ ಅಡಿಗೆ ಸಹಾ ಆಗುತ್ತಿರಲಿಲ್ಲ. ರಾಮಚಂದ್ರ ಈ ಎಲ್ಲ ಅಭಾವಗಳನ್ನು ತನ್ನ ಶಕ್ತ್ಯಾನುಸಾರ ದೂರ ಮಾಡುತ್ತಿದ್ದ.

ಈ ದುಃಖದ ದಿನಗಳಲ್ಲೇ ಉಮಾಕಂತ ಮರಾಠಿ ಮಹಾಕವಿ ಮೋರೋಪಂತರ “ಆರ್ಯಭಾರತ” ಗ್ರಂಥದ ಅಧ್ಯಯನ ಮಾಡಿದ. ಮಹಾಭಾರತದ ಕಥೆಗಳು ಅವನಿಗೆ ಹೊಸ ಬೆಳಕು ತೋರಿಸಿದವು. ಅವನಿಗೆ ಅತುಲ ಧೈರ್ಯ ವಿಪುಲ ಸಮಾಧಾನ ಸಿಕ್ಕಿತು.

ದೇವರಿಗೆ ಸಮರ್ಪಿಸಿದೆ ಎಂದು ತಿಳಿ

ಅನೇಕ ವಿಧವಾದ ಸಂಕಟಗಳನ್ನು ಎದುರಿಸುತ್ತ ಉಮಾಕಾಂತ ತನ್ನ ವಿದ್ಯಾಭ್ಯಾಸವನ್ನು ನಿಯಮ ಪೂರ್ವಕವಾಗಿ ನಡೆಸುತ್ತಿದ್ದ. ೧೯೨೦ ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಎರಡನೇ ಶ್ರೇಣಿಯಲ್ಲಿ ತೇರ್ಗಡೆಯಾದ.

ತಾಯಿ ಗಂಗಾಬಾಯಿಗೆ ಬಹಳ ಆನಂದವಾಯಿತು. ಅವರೆಂದರು, “ಮಗೂ, ಬಹಳ ಒಳ್ಳೆಯದಾಯಿತು. ಈಗ ನಿನಗೆ ಎಲ್ಲಾದರೂ ಕೆಲಸ ಸಿಗುತ್ತದೆ. ನಿನ್ನ ಮದುವೆ ಆಗುತ್ತದೆ. ಆಗ ನಾವು ಸುಖವಾಗಿ ಕಾಲ ಕಳೆಯಬಹುದು”.

“ಅಮ್ಮ, ಒಮ್ಮೆ ನೀನು ನನ್ನ ಚಿಕ್ಕಂದಿನ ಒಂದು ಘಟನೆ ಬಗ್ಗೆ ಹೇಳಿದ್ದೆ. ನಾನು ಚಿಕ್ಕವನಾಗಿದ್ದಾಗ ಬಹಳ ಕಾಯಿಲೆ ಬೀಳುತ್ತಿದ್ದೆ. ಒಂದು ಬಾರಿ ಸ್ಥಿತಿ ಚಿಂತಾಜನಕವಾಗಿ ಈಗಲೋ ಆಗಲೋ ಅನ್ನುವಂತಾಗಿತ್ತು. ಆಗ ನನ್ನದು ದೇವರ ಮುಂದೆ ಮಲಗಿಸಿ “ಪರಮೇಶ್ವರಾ! ಈ ಮಗು ನಿನ್ನದು, ಬೇಕಾದರೆ ಉಳಿಸು ಬೇಡವಾದರೆ ಮುಗಿಸು” ಎಂದು ಪ್ರಾರ್ಥಿಸಿದೆ. ಕೆಲವೇ ಸಮಯದ ನಂತರ ನನ್ನ ಜ್ವರ ಕಡಿಮೆಯಾಗುತ್ತಾ ಬಂತು. ಕೆಲವೇ ದಿನಗಳಲ್ಲಿ ನಾನು ಆರೋಗ್ಯ ಹೊಂದಿದೆ. ಇದು ನಿಜವೇ?

ಅಮ್ಮ ಹೇಳಿದರು: “ಹೌದು ಮಗು, ನಡೆದದ್ದು ಹಾಗೆಯೇ”. ಉಮಾಕಾಂತ ಕೇಳಿದ: “ಅಮ್ಮ, ಹಾಗಾದರೆ ನೀನು ನನ್ನನ್ನು ದೇವರೆಗೇ ಸಮರ್ಪಿಸಿದೆ ಎಂದು ತಿಳಿ. ಮನೆಯ ಮಗ ಎಂದು ತಿಳಯಬೇಡ. ಹಣ ಸಂಪಾದಿಸುವುದು ನನ್ನ ಗುರಿಯಲ್ಲ. ನಾನು ಮದುವೆಯಾಗುವುದಿಲ್ಲ. ನಾನು ನನ್ನ ಸಂಪೂರ್ಣ ಜೀವನವನ್ನು ರಾಷ್ಟ್ರ ಸೇವೆಗೆ ಸಮರ್ಪಿಸುವೆ”.

“ನಿನ್ನ ಇಷ್ಟದಂತೆಯೇ ಆಗಲಿ. ಎಲ್ಲಿ ಇದ್ದರೂ ಸುಖವಾಗಿರು” – ತಾಯಿ ಎಂದರು.

ಬಾಪೂಜಿ ಆಣೆಯವರಿಂದ ಪರಿಚಯ ಪತ್ರ ಪಡೆದು ಉಮಾಕಾಂತ ಧಾಮಣಗಾಂವ್ ಗೆ ಬಂದರು. ಅಲ್ಲಿನ ಶಾಲೆಯಲ್ಲಿ ಅವರಿಗೆ ಅಧ್ಯಾಪಕರ ಕೆಲಸ ಸಿಕ್ಕಿತು. ಅವರನ್ನು ಎಲ್ಲರೂ ಅಪ್ಪೇಜಿ ಎಂದು ಕರೆಯತೊಡಗಿದರು.

ಆದರ್ಶ ಶಿಕ್ಷಕ

ಅಪ್ಪೇಜಿಯವರಯ ಕೇವಲ ಸಂಬಳ ಪಡೆಯುವ ಶಿಕ್ಷಕರಾಗಿರಲಿಲ್ಲ. ಅವರು ಕೇವಲ ಪಠ್ಯಪುಸ್ತಕಗಳನ್ನು ಮಾತ್ರವೇ ಕಲಿಸುತ್ತಿರಲಿಲ್ಲ. ಸಾರ್ಥಕ ಜೀವನ ನಡೆಸಲು ಮಾರ್ಗದರ್ಶನ ಮಾಡುತ್ತಿದ್ದರು. ವಿದ್ಯಾರ್ಥಿಗಳನ್ನು ತಮ್ಮ ತಮ್ಮಂದಿರಂತೆ ಕಾಣುತ್ತಿದ್ದರು. ಅವರ ಸ್ವಭಾವದ ಓರೆ ಕೋರೆಗಳನ್ನು ತಿದ್ದುತ್ತಿದ್ದರು.

ತರಗತಿಯಲ್ಲಿ ಮನಃಪೂರ್ವಕವಾಗಿ ಪಾಠ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಷಯಗಳನ್ನು ವಿವರಿಸುತ್ತಿದ್ದರು. ಸ್ವಲ್ಪ ಕಾಲದಲ್ಲಿಯೇ ಅವರು ವಿದ್ಯಾರ್ಥಿಗಳ ಪ್ರೀತಿ ಗೌರವಗಳನ್ನು ಸಂಪಾದಿಸಿದರು.

ಅಪ್ಪೆಯವರ ವಿದ್ಯಾರ್ಥಿ ಪ್ರಿಯತೆಯನ್ನು ಕಂಡು ಕೆಲವು ಶಿಕ್ಷಕರು ಕರುಬುತ್ತಿದ್ದರು. ಒಂದು ಬಾರಿ ಒಬ್ಬ ಶಿಕ್ಷಕರು, ಮುಖ್ಯ ಶಿಕ್ಷಕರೆದುರು ಅಪ್ಪೇಜಿಯವರನ್ನು ಕುರಿತು “ಇಂದು ನೀವು ಝಾನ್ಸಿ ರಾಣಿ ಮತ್ತು ತಾತ್ಯಾ ಟೋಪಿಯವರ ಬಗ್ಗೆ ತರಗತಿಯಲ್ಲಿ ಬಹಳ ಹೊತ್ತು ಆವೇಶದಿಂದ ಭಾಷಣ ಮಾಡುತ್ತಿದ್ದಿರಿ. ಪುಸ್ತಕದಲ್ಲಿ ಅವರ ಬಗ್ಗೆ ಪಾಠವಿದೆಯೇ?” ಎಂದು ಕೇಳಿದರು.

“ನಾನು ಯಾವಾಗಲೂ ಆವೇಶದಿಂದ ಮಾತಾಡುವುದಿಲ್ಲ. ನಿಧಾನವಾಗಿ ಮಾತನಾಡುವುದೇ ನನ್ನ ಪದ್ಧತಿ. ಎರಡನೆಯದಾಗಿ ವಿಕ್ಟೋರಿಯಾ ರಾಣಿಯ ಪ್ರಸಿದ್ಧ ಪತ್ರಕದ ವಿಷಯ ಪಾಠದಲ್ಲಿ ಬಂದಾಗ ೧೮೫೭ ರ ಕ್ರಾಂತಿಯುದ್ಧದ ವಿಷಯವನ್ನು ತಿಳಿಸಲೇಬೇಕಾಯಿತು. ಯಾರೇ ಆಗಲಿ ಆ ಕ್ರಾಂತಿ ಯುದ್ಧ ನಾಲ್ಕು ಮಾತು ಆಡಿದರೂ ಅದರಲ್ಲಿ ರಾಣಿ ಲಕ್ಷ್ಮೀ ಬಾಯಿ ಮತ್ತು ತಾತ್ಯಾಟೋಪಿಯವರ ಹೆಸರು ಬರುವುದು ಅನಿವಾರೈ” ಅಪ್ಪೇಜಿಯವರೆಂದರು.

ಶಿಕ್ಷಕರು, “ಈ ರೀತೆಯೇ ನಡೆದರೆ ಪುಸ್ತಕದ ಪಾಠಗಳು ಅರ್ಧವಾಗಿಯೇ ಉಳಿದು ವಿದ್ಯಾರ್ಥಿಗಳ ಅಭ್ಯಾಸ ಪೂರ್ಣವಾಗಲಾರದು. ವಿದ್ಯಾರ್ಥಿಗಳಿಗೆ ರಾಜಕೀಯ ವಿಷಯವನ್ನು ತಿಳಿಸಬಾರದು.

ಅಪ್ಪೇಜಿಯವರು ಕೂಡಲೇ “ನಾನು ಗಿಳಿ ಪಾಠವನ್ನು ಶಿಕ್ಷಣವೆಂದು ತಿಳಿದಿಲ್ಲ. ಶಿಕ್ಷಣದ ಅರ್ಥ ವಿದ್ಯಾರ್ಥಿಗಳ ಜೀವನವನ್ನು ಸುಶಿಕ್ಷಿತಗೊಳಿಸುವುದು. ಅವರನ್ನು ನೈಜ ಜ್ಞಾನದೆಡೆಗೆ ಕೊಂಡೊಯ್ಯುವುದು.

ವಾದ – ವಿವಾದ ಬೆಳೆಯುತ್ತಿರುವುದನ್ನು ಕಂಡ ಮುಖ್ಯಾಧ್ಯಾಪಕರು ಇಬ್ಬರಿಗೂ ತಿಳಿ ಹೇಳಿ ಅವರನ್ನು ಶಾಂತಗೊಳಿಸಿದರು.

೧೯೨೪ ನೇ ಆಗಸ್ಟ್ ಒಂದು ಅಪ್ಪೇಜಿಯವರು ತಮ್ಮ ತರಗತಿಯಲ್ಲಿ ತಿಲಕರ ಪುಣ್ಯತಿಥಿಯನ್ನು ಆಚರಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕೆಲವು ವಿದ್ಯಾರ್ಥಿಗಳು ಸುಂದರವಾದ ಕವಿತೆಗಳನ್ನು ಹಾಡಿದರು. ಕೆಲವರು ತಿಲಕ್ ಜೀವನದ ಬಗ್ಗೆ ಭಾಷಣ ಮಾಡಿದರು. ನಂತರ ಎಲ್ಲರೂ ಸೇರಿ ಗೀತೆಯ ಎರಡು ಅಧ್ಯಾಯಗಳನ್ನು ಸಾಮೂಹಿಕವಾಗಿ ಓದಿದರು. ಈ ರೀತಿ ಒಂದು ಪ್ರೇರಣೆ ನೀಡಬಲ್ಲ ಮಾದರೆ ಉತ್ಸವ ಆಚರಿಸಲಾಯಿತು.

ಸಿಹಿಯಾದ ಹಣ್ಣಿನಲ್ಲಿ ಹುಳ ಬೀಳುವುದು ಬೇಗ. ಅದೇ ರೀತಿ ಒಳ್ಳೆಯ ವಿಷಯದಲ್ಲಿ ದುಷ್ಟರಿಗೆ ಬೇಗ ಕೆಡಕು ಕಾಣುತ್ತದೆ. ಅಪ್ಪೇಜಿಯವರ ಚಟುವಟಿಕೆಗಳ ಪೂರ್ಣ ವಿವರವನ್ನು ಉತ್ಪ್ರೇಕ್ಷೆಗೊಳಿಸಿ ಆಂಗ್ಲ ಅಧಿಕಾರಿಗಳಿಗೆ ತಿಳಿಸುವ ದೇಶದ್ರೋಹಿಗಳು ಆ ಶಾಲೆಯಲ್ಲೂ ಇದ್ದರು. ಅದರಿಂದ ಬೇಗನೇ ಸರ್ಕಾರದ ಶಿಕ್ಷಣ ವಿಭಾಗದಿಂದ ಮುಖ್ಯಾಪಾಧ್ಯಾಯರಿಗೆ ಆಜ್ಞೆ ಬಂದಿತು. “ನಿಮ್ಮ ಶಾಲೆಯಲ್ಲಿ ರಾಜದ್ರೋಹ ಕಾರ್ಯ ನಡೆಯುತ್ತಿದೆ. ಅದನ್ನು ತಕ್ಷಣ ನಿಲ್ಲಿಸಿ. ಇಲ್ಲವಾದರೆ ನಿಮ್ಮ ಮೇಲೆ ಕಠೋರ ಕ್ರಮ ಕೈಗೊಳ್ಳಲಾಗುವುದು.”

ಮುಖ್ಯಾಧ್ಯಾಪಕರು ಬಹಳ ಹೆದರಿದರು. ತಕ್ಷಣ ಅಪ್ಪೇಜಿಯವರನ್ನು ಕರೆಸಿ ಅವರಿಗೆ ಬೆದರಿಸಿದರು, ಗದರಿಸಿದರು.

ಅಪ್ಪೇಜಿಯವರು ಮುಖ್ಯ ಶಿಕ್ಷಕರನ್ನು ಕುರಿತು “ಕ್ಷಮಿಸಿ, ನೀವು ನನಗಿಂತ ಹಿರಿಯರು. ಅದರಿಂದ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ ಇಷ್ಟು ಮಾತ್ರ ಖಂಡಿತ ಹೇಳಬಲ್ಲೆ. ಯಾವ ಶಾಲೆಯಲ್ಲಿ ಪ್ರಾತಃಸ್ಮರಣೀಯ ತಿಲಕರ ಹೆಸರು ಹೇಳುವುದಕ್ಕೂ ಅಡ್ಡಿ ಇದೆಯೋ ಅಲ್ಲಿ ಇರಲು ನಾನೇ ಅಪೇಕ್ಷಿಸುವುದಿಲ್ಲ. ಇದೋ ನನ್ನ ರಾಜೀನಾಮೆ”.

ಮುಖ್ಯಾಧ್ಯಾಪಕರ ಮೇಜಿನ ಮೇಲೆ ರಾಜೀನಾಮೆ ಪತ್ರವನ್ನಿಟ್ಟು ಅವರಿಗೆ ಬಾಗಿ ನಮಸ್ಕರಿಸಿ, ಶಾಲೆಯಿಂದ ಹೊರಗೆ ಬಂದರು.

೧೯೨೪ ರ ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ನಾಗಪುರಕ್ಕೆ ಬಂದರು.

ಸಂಘಕಾರ್ಯದ ಪ್ರಾರಂಭ

ಧಾಮಣಗಾಂವ್ನಲ್ಲಿ ದೊರೆತಿದ್ದ ಏಕಾಂತ ಜೀವನದಲ್ಲಿ ಅಪ್ಪೇಜಿಯವರು ವಿದ್ಯಾರ್ಥಿಗಳಿಗೆ ಪಾಠ ಹೇಳಿದರಷ್ಟೇ ಅಲ್ಲ; ತಾವೂ ಸ್ವತಃ ಬಹಳ ಅಧ್ಯಯನ ಮಾಡಿದರು. ಗಂಟೆಗಟ್ಟಲೆ ಮನನ – ಚಿಂತನ ಮಾಡುತ್ತಿದ್ದರು. ತಮ್ಮ ವಿಚಾರವನ್ನು ಆಗಾಗ ಬರೆದು ಇಡುತ್ತಿದ್ದರು. ಅವರ ಚಿಕ್ಕ – ಪುಟ್ಟ ಲೇಖನಗಳು “ಕೇಸರಿ” ಹಾಗೂ “ಮಹಾರಾಷ್ಟ್ರ” ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ತಮ್ಮ ಲೇಖನಿಯ ಮೂಲಕ ದೇಶಸೇವೆ ಮಾಡಲು ನಾಗಪುರಕ್ಕೆ ಬಂದಿದ್ದರು. ಅನೇಕ ಕಡೆ ಹುಡುಕಿದರೂ ಅವರಿಗೆ ಹಿಡುಸುವ ಕೆಲಸ ಸಿಕ್ಕಲಿಲ್ಲ. ಕೊನೆಯಲ್ಲಿ “ಉದ್ಯಮ” ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿದರು. ಬರು ಬರುತ್ತಾ “ಉದ್ಯಮ” ಮಾಸಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದರು. ಕಾರ್ಯಾಲಯದಲ್ಲಿ ಕೆಲಸ ಮಾಡುತ್ತ ಟೈಪಿಂಗ್ ಅನ್ನೂ ಕಲಿತರು. 

ಎಡಗಡೆ-ತಿಲಕರ ಹೆಸರು ಹೇಳಲು ಅಡ್ಡಿ ಇರುವ ಶಾಲೆಯಲ್ಲಿ ನಾನಿರುವುದಿಲ್ಲ ಬಲಗಡೆ - ನಾವು ಇನ್ನೂ ಅನೇಕ ವಿಪತ್ತುಗಳನ್ನು ದಾಟಬೇಕಾಗಿದೆ.

ಉದ್ಯಮ ಕಾರ್ಯಾಲಯದಲ್ಲಿ ಒರ್ವ ತೆಳ್ಳಗಿನ, ದುರ್ಬಲ, ಆದರೆ ಉತ್ಸಾಹೀ ಬುದ್ದಿವಂತನಾದ ತರುಣ ಕೆಲಸ ಮಾಡುತ್ತಿದ್ದ. ಅವನ ಹೆಸರು ಲಕ್ಮ್ಷೀಕಾಂತ ಪರಮಾನಂದ ಭೀಶೀಕರ್. ಎಲ್ಲರೂ ಅವನನ್ನು ನಾನ ಆ ಭೀಶೀಕರ್ ಎಂದು ಕರೆಯುತ್ತಿದ್ದರು. ಅವರೊಡನೆ ಅಪ್ಪೇಜಿಯವರ ಸ್ನೇಹವಾಯಿತು. ನಾನಾ ಭೀಶೀಕರ್ ಡಾಕ್ಟರ್ ಹೆಡಗೇವಾರ್ ರವರ ಮನೆಗೆ ನಿತ್ಯ ಹೋಗಿ ಬರುತ್ತಿದ್ದರು. ಹೆಡಗೇವಾರ್ ರವರ ಬಗ್ಗೆ ಅಪ್ಪೇಜಿಯವರಿಗೆ ಅನೇಕ ವಿಷಯ ತಿಳಿಸಿದರು. ಭೀಶೀಕರರೊಡನೆ ಹೆಸಗೇವಾರರ ಮನೆಗೆ ಹೋಗಲು ಪ್ರಾರಂಭಿಸಿದರು.

ಡಾಕ್ಟರ್ ಹೆಡಗೇವಾರರ ಸ್ವಭಾವದಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ಒಮ್ಮೆ ಭೇಟಿಯಾದವರಿಗೆ ಪುನಃ ಪುನಃ ಅವರನ್ನು ಕಾಣುವ ಇಚ್ಛೆ ಉಂಟಾಗುತಿತ್ತು.

ಕೆಲವೇ ತಿಂಗಳುಗಳ ಮುಂಚೆ ಡಾಕ್ಟರ್ ಜೀಯವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು. ಸಂಘದ ವಿಚಾರ ಅಷ್ಟೆ ಅವರ ಮನಸ್ಸಿನಲ್ಲಿ ನೆಟ್ಟಿತು. ಅವರು ಸಂಘದ ಸ್ವಯಂಸೇವಕರಾದರು.

೧೯೨೪ ರಿಂದ ೧೯೩೨ ರವರೆಗೆ ಅಪ್ಪೇಜಿಯವರು ಉದ್ಯಮ ಮುದ್ರಣಾಲಯ, ದೇಶಸೇವಕ ಮುದ್ರಣಾಲಯ, ವಿಮಾ ಕಂಪನಿ ಮೊದಲಾದ ವಿವಿಧ ಸಂಸ್ಥೆಗಳಲ್ಲಿ ಲೇಖಕನ ಅಥವಾ ಟೈಪಿಸ್ಟ್ ಕೆಲಸ ಮಾಡಿದರು. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಒಂದಂಶವನ್ನು ಅವರ ತಾಯಿಯವರಿಗೆ ಕಳುಹಿಸುತ್ತಿದ್ದರು. ಸ್ವಂತಕ್ಕಾಗಿ ಸ್ವಲ್ಪಾಂಶ ಖರ್ಚು ಮಾಡಿ ಉಳಿದ ಅಧಿಕಾಂಶವನ್ನು ಸಂಘದ ಕಾರ್ಯಕ್ಕಾಗಿ ಉಪಯೋಗಿಸುತ್ತಿದ್ದರು. ಅವರು ತಮ್ಮ ತನು – ಮನ – ಧನವನ್ನು ಸಂಘದ ಕಾರ್ಯಕ್ಕಾಗಿ ಅರ್ಪಿಸಿದ್ದರು.

ಡಾಕ್ಟರ್ ಜೀಯವರ ಪ್ರೇರಣೆಯಿಂದ ಅಪ್ಪೇಜಿಯವರು ಒಂದು ವಿದ್ಯಾರ್ಥಿ ಮಂಡಲ ಸ್ಥಾಪಿಸಿದರು. ಆರಿಸಿದ ಬುದ್ಧಿವಂತ ವಿದ್ಯಾರ್ಥಿಗಳನ್ನು ಚೆನ್ನಾಗಿ ಪರೀಕ್ಷಿಸಿದ ನಂತರ ಈ ಮಂಡಲದ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದರು. ಈ ಮಂಡಲದ ಸದಸ್ಯರ ಸಭೆ ಪ್ರತಿ ರವಿವಾರ ಆಪ್ಪೇಜಿಯವರ ಮನೆಯಲ್ಲಿ ನಡೆಯುತ್ತಿತ್ತು. ಆಗ ದೇಶಭಕ್ತ ಕ್ರಾಂತಿಕಾರಿಗಳ ಚರಿತ್ರೆಯನ್ನು ಓದಲಾಗುತ್ತಿತ್ತು. ರಾಷ್ಟ್ರಾಭಿಮಾನದಿಂದ ತುಂಬಿದ ಹಾಡುಗಳನ್ನು ಹಾಡಲಾಗುತ್ತಿತ್ತು. ರಾಷ್ಟ್ರದ ಉತ್ಥಾನಕ್ಕೆ ಏನೇನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವತಃ ಅಪ್ಪೇಜಿಯವರು ಬಹಳ ಉತ್ಸಾಹದಿಂದ, ಭಾಗವಹಿಸುತ್ತಿದ್ದರು. ಅನೇಕಬಾರಿ ಅಪ್ಪೆಯವರು ಯುವಕ ಮಿತ್ರರನ್ನು ಮನೆಗೆ ಊಟಕ್ಕೆ ಕರೆಯುತ್ತಿದ್ದರು. ಅವರಿಗೆ ಪುಸ್ತಕಗಳನ್ನು ತಂದುಕೊಡುತ್ತಿದ್ದರು.

ಅನೇಕ ವಿದ್ಯಾರ್ಥಿಗಳಿಗೆ ಅವರು ಓದಿನಲ್ಲಿ ಸಹಾಯ ಮಾಡುತ್ತಿದ್ದರು. ಅವರಿಂದ ಏನೂ ಪ್ರತಿಫಲ ಪಡೆಯದೆ ಪಾಠ ಹೇಳೂತ್ತಿದ್ದರು. ಸ್ವತಃ ಶ್ರೀಮಂತರಲ್ಲದಿದ್ದರೂ ಅನೇಕರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು.

ಸಂಘದ ಕಾರ್ಯ ಬೆಳೆಯುತ್ತಿತ್ತು. ಸ್ವಯಂ ಸೇವಕರಿಗೆ ಆಗಾಗ ಓಟ್ಟುಗೂಡಲು ಒಂದು ಸ್ವತಂತ್ರ ಮನೆಯ ಅವಶ್ಯಕತೆ ಕಂಡು ಬಂದಿತು. ಆಗ ಅಪ್ಪೇಜಿ ಹಾಗೂ ಅವರ ಮಿತ್ರ ಬರ್ವೆ ಡಾಕ್ಟರ್ ಜೀಯವರ ಅನುಮತಿ ಪಡೆದು ಒಂದು ಮನೆಯನ್ನು ಬಾಡಿಗೆಗೆ ಪಡೆದರು. ಅದೇ ಸಂಘದ ಕಾರ್ಯಾಲಯವಾಯಿತು.

ಯಾದವ ಜೋಶಿ ಎಂಬ ಕಿಶೋರ ಸ್ವಯಂ ಸೇವಕ ಕಾರ್ಯಾಲಯದಲ್ಲೇ ಇರುತ್ತಿದ್ದ. ಅವನ ಪರೀಕ್ಷೆ ಹತ್ತಿರ ಬಂದಿತ್ತು. ಅಪ್ಪೇಜಿಯವರು ಸ್ವತಃ ಅವನನ್ನು ಬೆಳೀಗ್ಗೆ ನಾಲ್ಕು ಗಂಟೆಗೇ ಎಬ್ಬಿಸಿ ಪಾಠ ಹೇಳಿಕೊಡುತ್ತಿದ್ದರು. ಪರೀಕ್ಷೆಯ ದಿನಗಳಲ್ಲಿ ಸಜ್ಜಿಗೆ ತಯಾರಿಸಿ ಅವನಿಗೆ ಕೊಡುತ್ತಿದ್ದರು.

೧೯೨೭ ರಲ್ಲಿ ಸಂಘದ ಪ್ರಥಮ ಶಿಕ್ಷಣ ವರ್ಗ ನಡೆಯಿತು. ಅದು ಎಡಸುವರೆ ತಿಂಗಳು ನಡೆಯಿತು. ಆ ವರ್ಗದ ಬೌದ್ದಿಕ ವಿಭಾಗದ ಜವಾಬ್ದಾರಿಯನ್ನು ಅಪ್ಪೇಜಿಯವರಿಗೆ ವಹಿಸಲಾಗಿತ್ತು. ಅಪ್ಪೇಜಿಯವರು ಹಗಲಿರುಳೂ ಆ ಕಾರ್ಯದಲ್ಲೇ ಮಗ್ನರಾಗಿರುತ್ತಿದ್ದರು. ಅಪ್ಪೇಜಿಯವರ ಕಾರ್ಯತತ್ಪರತೆ ಕಂಡು ಡಾಕ್ಟರ್ ಜಿ ಯವರು ಬಹಳ ಪ್ರಸನ್ನರಾಗುತ್ತಿದ್ದರು.

ಅಪ್ಪೇಜಿಯವರ ಪರಿಚಯ ಮಾಡಿಕೊಡುತ್ತ ಡಾಕ್ಟರ್ ಜಿಯವರು ಒಮ್ಮೊಮ್ಮೆ ಇವರು ದೊಡ್ಡ “ಅಕ್ಷರ ಶತ್ರುಗಳು” ಎಂದು ಹೇಳುತ್ತಿದ್ದರು (ಅಕ್ಷರಶತ್ರು ಎಂಬ ಪದಕ್ಕೆ ಸಾಧಾರಣ ಅರ್ಥ ಅನಕ್ಷರಸ್ಥ ಎಂದು). ಇದನ್ನು ಕೇಳಿದವರು ಆಶ್ಚರ್ಯದಿಂದ ನೋಡಲು ಪ್ರಾರಂಭಿಸಿದಾಗ ಡಾಕ್ಟರ್ ಜಿಯವರು ಅದರ ಅರ್ಥ ವಿವರಿಸುತ್ತಿದ್ದರು. “ಎಲ್ಲಾದರೂ ಸರಿ ಪುಸ್ತಕ, ಅಥವಾ ಮುದ್ರಿಸಿದ ಕಾಗದ ಕಂಡರೆ ಸಾಕು. ಒಮ್ಮೆಲೇ ಅದರ ಮೇಲೆರಗುತ್ತಾರೆ. ಅದನ್ನು ಓದಿ ಮುಗಿಸುವವರೆಗೆ ಇವರಿಗೆ ಸಮಾಧಾನವಾಗುವುದಿಲ್ಲ, ಇವರು ಅಂತಹ ಅಕ್ಷರ ಶತ್ರುಗಳು”.

ಸಂಘದ ಕಾರ್ಯ ನಾಗಪುರ ಹಾಗೂ ಹತ್ತಿರದ ಜಿಲ್ಲೆಗಳಲ್ಲಿ ಬೆಳೆಯುತ್ತಿತ್ತು. ಅಪ್ಪೇಜಿಯವರು ತಮ್ಮ ಜೇಬಿನ ಖರ್ಚಿನಿಂದ ಪ್ರತಿ ರವಿವಾರ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದರು. ಅಲ್ಲಿನ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಅವಿಶ್ರಾಂತ ಪರಿಶ್ರಮ

ಸೂರ್ಯ ಪ್ರತಿದಿನ ಹುಟ್ಟುತ್ತಾನೆ, ತಿರುಗುತ್ತಾನೆ. ಸಂಪೂರ್ಣ ವಿಶ್ವಕ್ಕೇ ಪ್ರಕಾಶ ನೀಡುತ್ತಾನೆ. ಅಪ್ಪೇಜಿಯವರ ಜೀವನವೂ ಅಂತೆಯೇ ಇತ್ತು.

ಸಂಘದ ಕಾರ್ಯಕರ್ತರು ಅವರನ್ನು ಪ್ರೇಮದಿಂದ ಹಾಗೂ ಆದರದಿಂದ “ಬಾಬಾಸಾಹೇಬ್” ಎಂದು ಕರೆಯುತ್ತಿದ್ದರು. ಅವರು ಹೋದೆಡೆ ಆನಂದ, ಉತ್ಸಾಹ ಉಕ್ಕುತ್ತಿತ್ತು. ಅವರು ನಿರಾಡಂಬರವಾಗಿ ಕೆಲಸ ಮಾಡುತ್ತಿದ್ದರು. ಹಳ್ಳಿಹಳ್ಳಿಗೆ ಹೋಗಿ ಜನರಿಗೆ ದೇಶದ ವಿಷಯ ತಿಳಿಯ ಹೇಳಲು ಸಾವಿರಾರು ಮೈಲಿ ಕಾಲ್ನಡಿಗೆಯಲ್ಲೇ ಹೋದರು. ದೊಡ್ಡ ಶ್ರೀಮಂತರನ್ನು ಕಾಣುತ್ತಿದ್ದರು. ಅದೇ ರೀತಿ ಚಿಕ್ಕ ಪುಟ್ಟ ಗ್ರಾಮಗಳಿಗೆ ಹೋಗಿ ಅನಕ್ಷರಸ್ಥ ಬಡ ರೈತರನ್ನೂ ಕಾಣುತ್ತಿದ್ದರು.

ಹೊಸ ಹೊಸ ಸ್ಥಾನಗಳಿಗೆ ಹೋದಾಗ ಅಲ್ಲಿಯ ವ್ಯವಸ್ಥೆಯೇ ಬೇರೆ ಬೇರೆ ಇರುತ್ತಿತ್ತು. ಒಮ್ಮೆ ಆತ್ಮ ನಿಷ್ಠೆ ಸಿರಿವಂತರ ಮನೆಯಲ್ಲಿ ವಾಸವಾದರೆ ಇನ್ನೊಮ್ಮೆ ಬಡ ರೈತನ ಗುಡಿಸಿಲಿನಲ್ಲಿ. ಒಮ್ಮೆ ಪಂಚಕಜ್ಜಾಯದ ಊಟ ಸಿಕ್ಕರೆ ಒಮ್ಮೆ ಕೇವಲ ಹುರಿಗಡಲೆ ತಿಂದು ದಿನ ಕಳೆಯಬೇಕಾಗುತ್ತಿತ್ತು. ಆದರೆ ಅವರು ಸದಾ ಆನಂದವಾಗಿರುತ್ತಿದ್ದರು.

“ಇದು ಕಡಿಮೆ ಮಹತ್ವದ್ದೇನು?”

೧೯೩೭ ರ ಘಟನೆ. ಕಾನ್ ಪುರಕ್ಕೆ ಹೋಗಿದ್ದರು. ಆಗ ಅಪ್ಪೇಜಿಯವರನ್ನು ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಇ ನಿಲಯದ ಒಬ್ಬ ಸ್ವಯಂಸೇವಕನ ಕೊಠಡಿಯಲ್ಲಿ ಇಳಿಸಲಾಗಿತ್ತು. ಒಂದು ಭಾಷಣ ಮಾಡಿ ನಂತರ ದಿನವೆಲ್ಲಾ ವಿಶ್ರಾಂತಿ ಪಡೆಯುವರೆಂದು ಆ ವಿದ್ಯಾರ್ಥಿ ಯೋಚಿಸಿದ್ದ. ಆದರೆ ಅಪ್ಪೇಜಿಯವರ ಜೀವನದಲ್ಲಿ ವಿಶ್ರಾಂತಿ ಎಂಗ ಶಬ್ದವೇ ಇರಲಿಲ್ಲ. ಬೆಳಿಗ್ಗೆ ಆರು, ಆರೂವರೆಗೇ ಸ್ನಾನ ಮುಗಿಸಿ ತಯಾರಾದರು. ಜೊತೆಯಲ್ಲಿ ಒಬ್ಬ ಸ್ವಯಂ ಸೇವಕನನ್ನು ಕರೆದುಕೊಂಡು ಹೊರಗೆ ಹೊರಟರು.

ಹೇಗೋ ನಗರದ ಸಜ್ಜನರ ಹಾಗೂ ಗಣ್ಯರ ವಿಳಾಸ ಪಡೆದು ಅವರ ಮನೆಗೆ ಹೋಗಿ ಪರಿಚಯ ಮಾಡಿಕೊಂಡು ಅವರಿಗೆ ಸಂಘದ ಸಿದ್ದಾಂತವನ್ನು ತಿಳಿಸುತ್ತಿದ್ದರು. ದಿನದಲ್ಲಿ ೧೫ – ೨೦ ಜನರನ್ನು ಕಾಣಲು ಇಪ್ಪತ್ತು ಮೈಲಿಗಳಷ್ಟು ನಡೆದರು. ಊಟದ ಹೆಸರಿನಲ್ಲಿ ಮಧ್ಯಾಹ್ನ ಒಂದು ಸಣ್ಣ ಹೋಟೆಲಿನಲ್ಲಿ ಒಂದಿಷ್ಟು ಚಪಾತಿ – ಪಲ್ಯ ತಿಂದಿದ್ದರು. ರಾತ್ರಿ ಅವರು ವಿದ್ಯಾರ್ಥಿ ನಿಲಯಕ್ಕೆ ವಾಪಸಾದಾಗ ಅವರ ಜೊತೆಗೆ ಹೋಗಿದ್ದ ಕಟ್ಟುಮಸ್ತಾದ ತರುಣ ಸ್ವಯಂಸೇವಕ ಒಣಗಿಹೋಗಿದ್ದ. ದಣಿದು ಬಸವಳಿದಿದ್ದ. ಆದರೆ ಅಪ್ಪೇಜಿಯವರು ಮಾತ್ರ ಬೆಳಿಗ್ಗೆ ಹೊರಡುವಾಗ ಇದ್ದಂತೆಯೇ ಪ್ರಸನ್ನರಾಗಿ ಉತ್ಸಾಹದಿಂದಿದ್ದರು. ಮರುದಿನ ಆ ಸ್ವಯಂ ಸೇವಕನಿಗೆ ಜ್ವರ ಬಂದಿತು. ಅದರಿಂದ ಇನ್ನಬ್ಬ ಸ್ವಯಂಸೇವಕನ ನಿಯುಕ್ತಿಯಾಯಿತು. ಆದರೆ ಆ ಸಂಜೆ ಅವನ ಸ್ಥಿತಿಯೂ ಹಾಗೇ ಆಗಿತ್ತು. ಮೂರನೇ ದಿನ ಒಬ್ಬ ದೃಢಕಾಯನಾದ ಸ್ವಯಂ ಸೇವಕನನ್ನು ಅವರೊಂದಿಗೆ ಕಳುಹಿಸಿದ್ದರು. ತನಗೆ ಏನೂ ಆಗಲಾರದೆಂಬ ಕಲ್ಪನೆಯಿಂದ ಅವನು ಹೋಗಿದ್ದ. ಆದರೆ ಸಂಜೆ ಅವನೂ ಸೋಲೊಪ್ಪಬೇಕಾಯಿತು. ಬಾಬಾಸಾಹೇಬ್ ಅಪ್ಪೆಯವರ ಶರೀರ ಸಾಧಾರಣವಾಗೇ ಇತ್ತು. ಆದರೆ ಅವರ ಪ್ರಖರ ಧ್ಯೇಯನಿಷ್ಠೆ ಅವರ ಶರೀರದಲ್ಲಿ ಅಸಾಮಾನ್ಯ ಶಕ್ತಿಯನ್ನು ತುಂಬಿತ್ತು.

೧೯೪೩ ರಲ್ಲಿ ಬಾಬಾ ಸಾಹೇಬರು ಉನ್ನಾವ್ ಗೆ ಹೋಗಿದ್ದರು. ಊಟವಾದ ಮೇಲೆ ನಗರದ ಗಣ್ಯವ್‌ಐಕ್ತಿಗಳ ಬೈಠಕ್, ನಂತರ ರಾತ್ರಿ ೧೦ ಘಂಟೆಯ ರೈಲಿನಲ್ಲಿ ಕಾನಪುರಕ್ಕೆ ಪ್ರಯಾಣ – ಇದು ಉನ್ನಾವ್ ನಗರದ ಕಾರ್ಯಕ್ರಮವಾಗಿತ್ತು. ಮರುದಿನ ಕಾನಪುರದಲ್ಲಿ ಬೆಳಿಗ್ಗೆ ವಿದ್ಯಾಥಿಘಗಳ ಸಭೆ ಏರ್ಪಡಿಸಲಾಗಿತ್ತು.

ಉನ್ನಾವ್ನಲ್ಲಿ ಸಂಜೆಯ ಸಭೆ ತುಂಬ ಹೊತ್ತು ನಡೆಯಿತು. ಕಾನಪುರದ ರೈಲು ಹೊರಟುಹೋಯಿತು. ಅದೇ ಅವತ್ತಿಗೆ ಕಡೆಯ ರೈಲು; ಆಗ ಮಾಡುವುದೇನು? ಭಾವೂರಾವ್ ದೇವರಸ್ ಮತ್ತು ಅನಂತರಾವ್ ಗೋಖಲೆ ಜೊತೆಗಿದ್ದರು. “ಈಗ ನಾವು ಮಲಗೋಣ. ಬೆಳಿಗ್ಗೆ ಮೂರುವರೆಗೆ ಎಎಉ ಗಾಡಿಯಲ್ಲಿ ಕಾನಪುರಕ್ಕೆ ಹೋಗೋಣ. ಆರು ಘಂಟೆಗೆ ಸರಿಯಾಗಿ ತಲಪುತ್ತೇವೆ” ಎಂದು ಅವರು ಸೂಚಿಸಿದರು.

ಆಗ ಆಪ್ಪೇಜಿಯವರು ನಾಳೆ ಮಾಡುವುದನ್ನು ಇಂದು, ಇಂದು ಮಾಡುವುದನ್ನು ಈಗಲೇ ಮಾಡಬೇಕು. ಇಷ್ಟು ರಾತ್ರಿಯಲ್ಲಿ ಗಾಡಿಯವನು ಸಿಗುವನೋ ಇಲ್ಲವೋ ತಿಳೀಯದು. ಸಿಕ್ಕರೂ ಸಹ ಅವನ ಕುದುರೆ ಎಂತಹದಿರುವುದೋ, ಎರಡು ದಿನದಲ್ಲಿ ಎರಡೂವರೆ ಮೈಲಿಯಂತೆ ಹೋಗುವುದಾದರೆ! ಕಾನಪುರಕ್ಕೆ ಇಲ್ಲಿಂದ ಇರುವುದಾದರೂ ಎಷ್ಟು ದೂರ? ಕೇವಲ ಹನ್ನೆರಡು ಮೈಲಿ. ನಮ್ಮ ಹತ್ತಿರ ವಿಶೇಷ ಸಾಮಾನೂ ಇಲ್ಲ. ನಾವು ನಡದೇ ಹೋದರೆ ಬೆಳಿಗ್ಗೆ ನಾಲ್ಕು ಘಂಟೆಗೆ ಕಾನಪುರ ತಲಪುತ್ತೇವೆ”.

ಗೋಖಲೆ ಅವರಿಗೆ ತಿಳೀಹೇಳಲು ಪ್ರಯತ್ನಿಸಿದರು. ಅಲ್ಲಿನ ಸಭೆ ಅಷ್ಟು ಮಹತ್ವದ್ದೇನಲ್ಲ. ಕೇವಲ ಹತ್ತು ಹನ್ನೆರಡು ವಿದ್ಯಾರ್ಥಿಗಳನ್ನು ನಿಮ್ಮನ್ನು ಕಾಣಲು ಕರೆಯಲಾಗಿದೆ”.

“ಅಂದರೆ ಇದು ಕಡಿಮೆ ಮಹತ್ವದ್ದೇನು? ಆ ವಿದ್ಯಾರ್ಥಿಗಳು ಬೆಳಿಗ್ಗೆ ಆರು ಘಂಟೆಗೆ ಬಂದಾಗ ಅಲ್ಲಿ ನಾವಿಲ್ಲದ್ದನ್ನು ಕಂಡರೆ ಅವರ ಮೇಲೆ ಏನು ಪರಿಣಾಮ ಆಗುವುದು? ಇನ್ನು ಹೆಚ್ಚು ಚಿರ್ಚಿಸದೆ ನಾವು ಈಗಿಂದೀಗ ಹೊರಡೋಣ”.

ಆ ರಾತ್ರಿಯಲ್ಲಿ ಮೂವರೂ ಕಾನಪುರದ ಕಡೆ ನಡೆದರು. ಮಧ್ಯರಾತ್ರಿಯ ನಂತರ ನಾಲ್ಕು ಗಂಟೆ ನಡೆಯುತ್ತಿದ್ದರು. ಪೂರ್ವನಿಶ್ಚಯದಂತೆ ಆಪ್ಪೇಜಿಯವರು ಸರಿಯಾಗಿ ಆರು ಘಂಟೆಗೆ ಬೈಠಕ್ ನ ಸ್ಥಾನಕ್ಕೆ ತಲುಪಿದರು. ಅವರನ್ನು ಕಾಣಲು ಕೇವಲ ಆರು ಸ್ವಯಂಸೇವಕರು ಬಂದರು. ಆಪ್ಪೇಜಿಯವರು ನಿಟ್ಟುಸಿರು ಬಿಡಲಿಲ್ಲ. ಕೋಪಗೊಳ್ಳಲಿಲ್ಲ. ಸಿಡಿಗುಟ್ಟಲಿಲ್ಲ. ತಮ್ಮ ಪಾದಯಾತ್ರೆಯ ಬಗ್ಗೆ ಉಲ್ಲೇಖಿಸಲೂ ಇಲ್ಲ. ಅದೇ ಪ್ರೇಮಪೂರ್ಣ, ಶಾಂತ, ಮಾರ್ದವ ಸ್ವರದಲ್ಲಿ ಅವರಿಗೆ ಸಂಘದ ಮೂಲ ಸಿದ್ಧಾಂತಗಳನ್ನು ತಿಳೀಸಿದರು. ದಿನವೆಲ್ಲಾ ಸಣ್ಣಪುಟ್ಟ ಕಾರ್ಯಕ್ರಮಗಳು ನಡೆದೇ ಇದ್ದವು. ಅನಂತ್ ಬೇರೆ ಊರಿಗೆ ಅಥವಾ ಹಳ್ಳಿಗೆ ಹೋಗುವುದು. ಮತ್ತು ಇದೇ ರೀತಿ ದಿನಗಳು, ತಿಂಗಳುಗಳು, ವರ್ಷಗಳವರೆಗೆ ಕಾರ್ಯ ಮಾಡುತ್ತಿರುವುದು – ಇದೇ ಅವರ ಜೀವನದ ಸಾರ.

ಸೂರ್ಯ ಎಂದೂ ನಿಲ್ಲುವುದಿಲ್ಲ, ದಣಿಯುವುದಿಲ್ಲ, ತೃಪ್ತನಾಗುವುದಿಲ್ಲ, ಅಪ್ಪೇಜಿಯವರು ಎಂದೂ ನಿಲ್ಲಲಿಲ್ಲ, ದಣಿಯಲಿಲ್ಲ, ತೃಪ್ತರಾಗಲಿಲ್ಲ. ದೊಡ್ಡ ದೊಡ್ಡ ಸಂಕಟಗಳು ಬಂದಾಗಲೂ ಅವರು ವಿಚಲಿತರಾಗಲಿಲ್ಲ.

ಮೃತ್ಯು ಮುಖದಲ್ಲೂ ನಿರ್ಭಯ

ಬಾಬಾ ಸಾಹೇಬ್ ಆಪ್ಪೆಯವರು ತಮ್ಮ ನಿಯೋಜಿನ ಕಾರ್ಯಕ್ರಮವನ್ನು ಅತ್ಯಂತ ತತ್ಪರತೆಯಿಂದ ಪೂರ್ಣ ಗೊಳೀಸುತ್ತಿದ್ದರು. ಇದಕ್ಕೆ ಸಹಸ್ರಾರು ಉದಾಹರಣೆಗಳನ್ನು ಕೊಡಬಹುದು. ಇಲ್ಲಿ ಕೇವಲ ಒಂದು ಪ್ರಸಂಗದ ವರ್ಣನೆ ಸಾಕಾದೀತು.

೧೯೪೨ ನೇ ಅಗಸ್ಟ್ ತಿಂಗಳ ಪ್ರಸಂಗ. “ಬ್ರೀಟಿಷರೇ ಭಾರತದಿಂದ ತೊಲಗಿ” ಆಂದೋಲನ ಪ್ರಾರಂಭವಾಗಿತ್ತು. ಬ್ರಿಟಿಷ್ ಸರ್ಕಾರವು ದೇಶದ ಪ್ರಮುಖ ನಾಯಕರನ್ನು ಜೈಲಿಗೆ ನೂಕಿತ್ತು. ಅನೇಕ ಯುವಕ ಮುಂದಾಳುಗಳು ಭೂಗತರಾಗಿದ್ದರು. ಬ್ರಿಟಿಷರ ವಿರುದ್ಧ ಅನೇಕರು ವಿವಿಧ ಆಂದೋಲನವನ್ನು ನಡೆಸುತ್ತಿದ್ದರು. ಆಂಗ್ಲ ಅಧಿಕಾರಿಗಳು ಕ್ರೂರವಾಗಿ ವರ್ತಿಸುತ್ತಿದ್ದರು. ಲಾಠಿ ಪ್ರಹಾರ, ಗುಂಡು ಹೊಡೆಯುವುದು ಸಾಮಾನ್ಯವಾದ ಘಟನೆಯಾಗಿ ಹೋಗಿತ್ತು.

ಇಂತಹ ಕಾಲದಲ್ಲಿ ಆಪ್ಪೆಯವರು ಬಿಹಾರದ ಪ್ರವಾಸ ಕೈಗೊಂಡಿದ್ದರು. ಅಗಸ್ಟ್ ಹತ್ತರಂದು ದರಭಂಗಾ ತಲುಪಿದರು. ಊರಲ್ಲಿ ಎಲ್ಲೆಡೆ ಆತಂಕ ಹರಡಿತ್ತು. ಆದರೂ ಸಂಘದ ಸ್ವಯಂಸೇವಕರು ಹೆಚ್ಚು ಸಂಖ್ಯೆಯಲ್ಲಿ ಅವರನ್ನು ಕಾಣಲು ಒಟ್ಟುಗೂಡಿದರು. ಅವರೆದುರು ಮಾತನಾಡುತ್ತ ಆಪ್ಟೇಜಿಯವರು “ಇಂದು ನಮ್ಮ ದೇಶದ ಸ್ಥಿತಿ ಬಹಳ ಚಿಂತಾಜನಕವಾಗಿದೆ. ನಮ್ಮ ನಾಯಕರು ಕಾರಾಗೃಹದಲ್ಲಿ ಬಂಧಿಗಳಾಗಿದ್ದಾರೆ. ನಮ್ಮ ದೇಶದವರೇ ಹಲವರು ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ನಾವು ಸಂಘಟಿತರಾಗಿ ಶಿಸ್ತಿನಿಂದ ದುಡುದಾಗಲೇ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬಲ್ಲೆವು. ನಾವು ಕ್ಷಣಿಕವಾದ ಆವೇಶಕ್ಕೆ ಬಲಿ ಬೀಳಬಾರದು. ಶಾಂತಚಿತ್ತದಿಂದ ಭವಿಸ್ಯದ ವಿಚಾರ ಮಾಡಿ ನಾಲ್ಕು ಕಾಲ ನಿಲ್ಲುವ ಕಾರ್ಯ ಮಾಡಬೇಕು” ಎಂದರು.

ಆಪ್ಟೇಜಿಯವರು ದರಭಂಗಾ ಅದ್ಹೇಗೋ ತಲುಪಿದ್ದರು. ಆದರೆ ಮುಮದಿನ ಪ್ರವಾಸ ಹೇಗೆ? ರೈಲು ಮೋಟಾರುಗಳೆಲ್ಲಾ ನಿಂತಿದ್ದವು. ಯಾವ ವಾಹನಗಳೂ ನಡೆಯುತ್ತಿರಲಿಲ್ಲ. ಅಲ್ಲಿನ ಕಾರ್ಯಕರ್ತರು ಚಿಂತಿತರಾದರು. ಆಗ ಬಾಬಾ ಸಾಹೇಬರು “ಇದಕ್ಕಾಗಿ ಇಷ್ಟೇಕೆ ಚಿಂತೆ? ನಾವು ನಡೆದೇ ಹೋಗೋಣ” ಎಂದರು.

ಆಗಸ್ಟ್ ೧೧ ರ ಬೆಳಿಗ್ಗೆ ನಾಲ್ಕು ಘಂಟೆಗೆ ಆಪ್ಟೇಇಜಿಯವರು ದರಭಂಗಾದಿಂದ ಹೊರಟರು. ಅವರೊಡನೆ ಪೆಟ್ಟಿಗೆ ಮತ್ತು ಕೈಚೀಲ ಹಿಡಿದು ಕಾಶೀನಾಥ ಮಿಶ್ರರೂ ನಡೆದರು, ನಾಲ್ಕೂ ಕಡೆ ಅಶಾಂತಿ ಹಾಗೂ ಭೀತಿ ಹರಡಿತ್ತು. ಯಾವಾಗ ಏನು ಬೇಕಾದರೂ ಆಗಬಹುದಿತ್ತು. ಆದರೆ ಆಪ್ಟೇಜಿಯವರು ದಾಪುಗಾಲು ಹಾಕುತ್ತಾ ಉತ್ಸಾಹದಿಂದ ಮುಂದೆ ಸಾಗುತ್ತಿದ್ದರು. ಹತ್ತು ಗಂಟೇಗಳ ಕಾಲ ಒಂದೇ ಸಮನೆ ನಡೆದ ನಂತರ ಮಧ್ಯಾಹ್ನ ಎರಡು ಗಂಟೆಗೆ ಮುಜಫರ್ ಪುರ ತಲುಪಿದರು.

ಚಾಕಿಯಾ ನಗರದಲ್ಲಿ ಸಾರ್ವಜನಿಕ ಸಭೆ ನಡೆದಿತ್ತು. ಅಪಾರ ಜನ ಸಮುದಾಯ ಕಲೆತಿತ್ತು. ನಾಯಕರ ಆವೇಶಪೂರ್ಣ ಭಾಷಣ ಜರುಗಿತ್ತು. ಅಷ್ಟರಲ್ಲಿ ವಿಶೇಷ ರೈಲಿನಿಂದ ಬಂದ ಪೋಲಿಸರು ಅಲ್ಲಿ ತಲುಪಿದರು. ಸಿಪಾಯಿಗಳು ಬಂಧೂಕು ಸಜ್ಜುಗೊಳಿಸಿದರು. ಗುಂಡುಗಳು ಹಾರತೊಡಗಿದವು. ಜನ ದಿಕ್ಕಾಪಾಲಾಗಿ ಹುಚ್ಚರಂತೆ ಓಡ ತೊಡಗಿದರು. ಅದು ರಣರಂಗವಾಗಿ ಕಠಣುತ್ತಿತ್ತು. ಆದರೆ ಆಪ್ಟೇಜಿಯವರು ಅವುಗಳ ಮಧ್ಯದಲ್ಲೇ ಮುಂದೆ – ಮುಂದೆ ಸಾಗುತ್ತಲೇ ಇದ್ದರು. ಜೊತೆಗಿದ್ದವರು ಗೊಂದಲದಲ್ಲಿ ಬೇರೆಯಾದರು. ಆದರೂ ಆಪ್ಟೆಯವರು ನಿಲ್ಲಲಿಲ್ಲ. ನಡೆದೇ ಇದ್ದರು. ಜೊತೆಗಾರರು ಊರ ಹೊರಗೆ ಪುನಃ ಸೇರಿದರು. ಅವರೊಡನಿದ್ದ ಕಾಶೀನಾಥ ಮಿಶ್ರ ಮತ್ತು ಶಖುನಿ ಓಜಾ ಅವರು ನಂತರ ಹೇಳಿದರು. “ಇಷ್ಟು ನಿರ್ಭಯ ನಿಶ್ಚಿಂತ ಮತ್ತು ವಿಚಿತ್ರ ನಡಿಗೆಯ ವ್ಯಕ್ತಿಯನ್ನು ನಾವೆಂದೂ ಕಂಡಿರಲಿಲ್ಲ. ಅಂದು ನಾವು ಕೇವಲ ದೇವರ ಕೃಪೆಯಿಂದಲೇ ಉಳಿದೆವು.”

ಹನ್ನೆರಡು ಗಂಟೆಗಳ ಕಾಲ್ನಡಿಗೆ ನಂತರ ಆಪ್ಟೇಜಿಯವರು ಸಂಜೆ ನಾಲ್ಕು ಗಂಟೆಗೆ ಮೋತಿಹಾರಿ ತಲುಪಿದರು. ಸ್ನಾನ, ಭೋಜನದ ಶಾಸ್ತ್ರ ಮುಗಿಯಿತೋ ಇಲ್ಲವೋ ಪ್ರಾರಂಭವಾದ ಸಭೆಗಳು ರಾತ್ರಿ ಹನ್ನೆರಡು ಗಂಟೆಯವರೆಗೆ ನಡೆದಿದ್ದವು. ಅನಂತರ ಅಲ್ಲಿಂದ ೧೪ ನೇ ತಾರೀಖು ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ ನಾಲ್ಕು ಗಂಟೆಗೆ ಬೇತಿಯಾ ತಲುಪಿದರು. ಬೇತಿಯಾದಲ್ಲಿ ಹಿಂದಿನ ದಿನ ಗುಂಡು ಹಾರಿಸಲಾಗಿತ್ತು. ಕೆಲವಲು ಯುವಕರು ಮೃತರಾಗಿದ್ದರು. ಅಲ್ಲಿಯೂ ಆಪ್ಟೆಯವರು ಹೋರಾಟ ನಡೆಸುತ್ತಿದ್ದ ತರುಣರನ್ನು ಭೇಟಿಯಾದರು.

ಈಗ ಅಲ್ಲಿಂದ ಪಟ್ನಾಗೆ ಹೋಗಬೇಕಿತ್ತು. ಆದರೆ ಆ ರಸ್ತೆಯಲ್ಲಿ ಕೆಂಪು ಸೈನಿಕರ ಬಿಗಿಯಾದ ಕಾವಲಿತ್ತು. ಆದ್ದರಿಂದ ಗಂಡಕಿ ನದಿಯ ಮೂಲಕ ನಾವೆಯಲ್ಲಿ ಪಟ್ನಾ ತಲುಪವುದೆಂದು ನಿರ್ಣಯಿಸಲಾಯಿತು. ಬಾಬಾ ಸಾಹೇಬರು ಗಂಡಕಿ ನದಿಯಮೂಲಕ ನಾವೆಯಲ್ಲಿ ಪಟ್ನಾ ತಲುಪುವುದೆಂದು ನಿರ್ಣಯಿಸಲಾಯಿತು. ಬಾಬಾ ಸಾಹೇಬರು ಗಂಡಕಿ ನದಿಯ ದಡ ತಲುಪಿದರು. ನದಿಯ ಪ್ರವಾಹ ಬಂದಿತ್ತು. ಆ ಸ್ಥಿತಿಯಲ್ಲಿ ನಾವೆ ನಡೆಸಲು ಯಾವ ನಾವಿಕನೂ ತಯಾರಾಗಲಿಲ್ಲ. ಬಹಳ ಹುಡುಕಿದ ನಂತರ ಒಬ್ಬ ವೃದ್ಧ ನಾವಿಕ ಒಪ್ಪಿದ.

ಆಗಾಧವಾದ ಜಲರಾಶಿ ಉಕ್ಕುತ್ತಿತ್ತು. ಆಳೆತ್ತರದ ಅಲೆಗಳು ಏಳುತ್ತಿದ್ದವು, ಅದರ ಮೇಲೆ ಸವಾರಿ ಮಾಡಲು ಒಬ್ಬ ವೃದ್‌ಏ ತನ್ನ ಹಳೇ ಚಿಕ್ಕ ನೌಕೆಯನ್ನು ಸಿದ್ಧಪಡಿಸಿ ತಯಾರಾಗಿದ್ದ. ಕಾಶೀನಾಥ ಮಿಶ್ರರು ಆತಂಕದಿಂದ ಹೇಳಿದರು. “ಬಾಬಾ ಸಾಹೇಬ್ ನಾವು ಬಹು ದೊಡ್ಡ ವಿಪತ್ತಿನ ಕಾರ್ಯ ಮಾಡುತ್ತದ್ದೇವೆ”.

ಬಾಬಾ ಸಾಹೇಬರು ಕೂಡಲೇ “ನಡಿ, ಹತ್ತು ದೋಣಿಯನ್ನು. ನಾವು ಇನ್ನೂ ಅನೇಕ ವಿಪತ್ತುಗಳನ್ನು ದಾಟಬೇಕಾಗಿದೆ ಚಿಂತಿಸಬೇಡ” ಎನ್ನುತ್ತಾ ದೋಣಿ ಹತ್ತಿದರು.

ಅಪಾರ ಜಲರಾಶಿಯ ಮೇಲೆ ಆ ಚಿಕ್ಕ ನೌಕೆ ಸಾಗತೊಡಗಿತು. ದೊಡ್ಡ ದೊಡ್ಡ ಅಲೆಗಳು ಬರುವುದನ್ನು ಕಂಡರೆ ಗುಡ್ಡಗಳು ಓಡಿ ಬರುತ್ತಿರುವಂತೆ ಕಾಣುತ್ತಿತ್ತು. ಪ್ರತಿ ಕ್ಷಣ ಅಪಾಯವಿತ್ತು. ದೋಣಿ ಈಗಲೋ ಆಗಲೋ ಮುಳುಗುವುದಾಗಿ ಅನಿಸುತ್ತಿತ್ತು. ಅದೊಂದು ಮೃತ್ಯು ಯಾತ್ರೆಯೇ ಆಗಿತ್ತು. ಆದರೆ ಬಾಬಾ ಸಾಹೇಬರು ಆ ಮೃತ್ಯು ಮುಖದಲ್ಲೂ ಶಾಂತವಾಗಿ ಅನೇಕ ಘಟನೆ -ಕಥೆ ಹೇಳೂವುದರಲ್ಲಿ ಮಗ್ನರಾಗಿದ್ದರು. 

ಇದು ಕಡಿಮೆ ಮಹತ್ವದ್ದೇನು ?

ನಿರ್ಜನವಾದ ನದಿ ದಡದಲ್ಲಿ ರಾತ್ರಿ ಕಳೆಯಿತು. ಎಲ್ಲರೂ ಸೇರಿ ಒಣಗಿದ ರೊಟ್ಟಿ ತಿಂದರು. ಮಧ್ಯ ರಾತ್ರಿಯಲ್ಲಿ ದರೋಡೆಕೋರರ ಭೇಟಿಯೂ ಆಯಿತು. ಪ್ರಾತಃ ಕಾಲ ಪುನಃ ರೋಮಾಂಚನಕಾರಿ ಯಾತ್ರೆ ಪ್ರಾರಂಬವಾಯಿತು. ಗಂಗಾ – ಗಂಡಕಿ ನದಿಗಳ ಸಂಗಮದಲ್ಲಿ ಭಯಾನಕತೆ ನಾಲ್ಕರಷ್ಟು ಹೆಚ್ಚಾಯಿತು. ಅದೇ ವೇಳೆಗೆ ದೋಣಿಯಲ್ಲಿ ನೀರು ನುಗ್ಗತೊಡಗಿತು. ಗುಮಾಯಿಬಾಬಾ ನೌಕೆ ನಡೆಸುತ್ತಿದ್ದ. ಮಿಕ್ಕ ಮೂವರು ಆಪ್ಟೇಜಿ, ಕಾಶೀನಾಥ ಮಿಶ್ರ ಮತ್ತು ಗಣೇಶ ದೋಣಯಿಂದ ನೀರನ್ನು ಹೊರಗೆ ಚೆಲ್ಲುತ್ತಿದ್ದರು. ಕೊನೆಯಲ್ಲಿ ಪರಮೇಶ್ವರನ ಕೃಪೆಯಿಂದ ಎಲ್ಲಾ ಸರಿಹೋಯಿತು. ಹದಿನೇಳನೇ ತಾರೀಖು ಸಾಯಂಕಾಲ ಆ ನೌಕೆ ಪಟ್ನಾದ ಮಹೇಂದ್ರ ಘಾಟನ್ನು ತಲುಪಿತು.

ಆಪ್ಟೇಜಿಯವರು ಗುಮಾಯಿಬಾಬಾನನ್ನು ಆಲಂಗಿಸಿದರು. ತಮ್ಮ ತಲೆಯ ಮೇಲಿನ ಸುಂದರ ರೇಶಿಮೆ ಪೇಟವನ್ನು ತೆಗೆದು ಅವನ ತಲೆಗೆ ಸುತ್ತಿದರು. ಗುಮಾಯಿ ಬಾಬಾ ಗದ್ಗದಿತನಾದ. ಬಗ್ಗಿ ಆಪ್ಟೇಜಿಯವರ ಕಾಲು ಮುಟ್ಟಿ ನಮಸ್ಕರಿಸಿದ.

ಕರ್ಮಯೋಗಿ

೧೯೩೦ರಲ್ಲಿ ಮಹಾತ್ಮಾ ಗಾಂಧಿಯವರು ಸತ್ಯಾಗ್ರಹದ ಕರೆ ಕೊಟ್ಟರು. ಸಂಘ ಸಂಸ್ಥಾಪಕ ಹೆಡಗೇವಾರರು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಪರಿಣಾಮವಾಗಿ ಅವರು ಜೈಲಿಗೆ ಹೋದರು. ಆಗ ಡಾಕ್ಟರ್ ಲಕ್ಷ್ಮಣರಾವ್ ಪರಾಂಜಪೆಯವರು ಅವರ ಹೊಣೆ ಹೊತ್ತರು. ಆದರೆ ಸಂಘ ಶಾಖೆಗಳನ್ನು ಸುಸೂತ್ರವಾಗಿ ನಡೆಸುವ ಜವಾಬ್ದಾರಿಯನ್ನು ಆಪ್ಟೇಜಿಯವರಿಗೆ ವಹಿಸಲಾಗಿತ್ತು. ಆ ದಿನಗಳಲ್ಲಿ ಅವರು ನಿರಂತರ ಕಾರ್ಯಮಗ್ನರಾಗಿ ಇರುತ್ತಿದ್ದರು.

ಆಪ್ಟೇಜಿಯವರು ಈಗ ನೌಕರಿಯನ್ನು ಬಿಟ್ಟಿದ್ದರು. ಸಂಘ ಕಾರ್ಯವೇ ಅವರ ಜೀವನ ಕಾರ್ಯವಾಯಿತು. ಎರಡು ವರ್ಷಗಳವರೆಗೆ ನಾಗಪುರ ಜಿಲ್ಲೆ ಮತ್ತು ವಿದರ್ಭದಲ್ಲಿ ಪ್ರವಾಸ ಮಾಡುತ್ತಿದ್ದರು.

೧೯೬೬ ರಲ್ಲಿ ಆಪ್ಟೇಜಿಯವರು ಡಾರ್ಜಲಿಂಗ್ ಗೆ ಹೋಗಿದ್ದರು. ಅಲ್ಲಿಂದ ಒಂದು ಸಾವಿರ ಅಡಿ ಬೆಟ್ಟದ ಹಾದಿ ಇಳಿದು ಭಗಿನಿ ನಿವೇದಿತರ ಸಮಾಧಿಗೆ ಹೋದರು. (ನಿವೇದಿತ ಅವರ ಮೊದಲಿನ ಹೆಸರು ಮಾರ್ಗರೇಟ್ ನೋಬಲ್.) ಸ್ವಲ್ಪ ಹೊತ್ತು ಧ್ಯಾನಾಸಕ್ತರಾಗಿ ಅಲ್ಲಿ ಕುಳಿತಿದ್ದರು. ಹಿಂದಿರುಗುವಾಗ ಅವರು ಭಾವ ಪೂರ್ಣರಾಗಿದ್ದರು. ಅವರಿಗೆ ಆಗ ಅರವತ್ತಮೂರು ವರ್ಷ. ಹತ್ತುವಾಗ ಕಷ್ಟವಾಗುತ್ತಿತ್ತು. ಪ್ರಕೃತಿಯೂ ನಾಜೂಕಾಗಿತ್ತು. ಆಗಾಗ ಏದುಸಿರು ಬಿಡುತ್ತಿದ್ದರು. ಆದರೂ ಉತ್ಸಾಹ ಅಪಾರವಾಗಿತ್ತು. ಆಗಾಗ ಏದುತ್ತಿದ್ದರು, ಆದರೂ ಉತ್ಸಾಹ ಅಪಾರವಾಗಿತ್ತು. ಜೊತೆಗಿದ್ದವರನ್ನು ಕುರಿತಯ “ನೋಡಿ ಸಹಸ್ರಾರು ಮೈಲಿ ದೂರವಿದ್ದ ಮಾರ್ಗರೇಟ್ ನೋಬಲ್ ಈ ದೇಶ ಧರ್ಮ ಸಂಸ್ಕೃತಿಗಳ ಪೂಜಾರಿಣಿಯಾಗುತ್ತಾಳೆ. ತನ್ನ ಪರಿವಾರ, ಸಮಾಜ ಹಾಗೂ ದೇಶವನ್ನೇ ತೊರೆದು ಸನ್ಯಾಸಿಯಾಗುತ್ತಾಳೆ. ಭಗಿನಿ ನಿವೇದಿತಾ ಎಂದು ಹೆಸರಿಟ್ಟುಕೊಂಡು ಭಾರದ ಮಾತೆಯ ಸೇವೆಯಲ್ಲಿ ತನ್ನ ಸರ್ವಸ್ವವನ್ನೂ ಅರ್ಪಿಸುತ್ತಾಳೆ. ಆಕೆಯ ಜೀವನದಿಂದ ಪ್ರೇರಣೆ ಪಡೆದು ನಮ್ಮ ಸಂಸ್ಕೃತಿಯ ಮಹತ್ವವನ್ನು ತಿಳಿಯೋಣ. ನಮ್ಮ ಸರ್ವಸ್ವವನ್ನು ಹೋಮ ಮಾಡಿ ಅದರ ಸೇವೆಯಲ್ಲಿ ತೊಡುಗುವುದು ಎಷ್ಟು ಅವಶ್ಯಕ ಎಂದು ಅರಿಯೋಣ” ಎಂದರು.

೧೯೪೦ ರ ಜೂನ್ ಇಪ್ಪತ್ತೊಂದರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾಕ್ಟರ್ ಹೆಡಗೇ ವಾಋ ರವರು ಸ್ವರ್ಗಸ್ಥರಾದರು. ಬಾಬಾ ಸಾಹೇಬರಿಗೆ ಅಪಾರ ದುಃಖವಾಯಿತು. ಇಪ್ಪತ್ನಾಲ್ಕು ಗಂಟೆ ಅವರೇನನ್ನೂ ತಿನ್ನಲಿಲ್ಲ. ನೀರೂ ಸಹ ಕುಡಿಯಲಿಲ್ಲ. ನಂತರ ಶೀಘ್ರವೇ ಚೇತರಿಸಿಕೊಂಡರು. ಅಳುತ್ತಾ ಕೂಡಲಿಲ್ಲ. ಎರಡರಷ್ಟು, ನಾಲ್ಕರಷ್ಟು ಉತ್ಸಾಹದಿಂದ ಸಂಘಕಾರ್ಯ ಮಾಡಲು ಪ್ರಾರಂಭಿಸಿದರು. ವ್ಯಕ್ತಿ ನಿಷ್ಠೆ ನಮ್ಮ ಸಮಾಜದ ಒಂದು ದೋಷ, ಹಿರಿಯ ಒಬ್ಬ ವ್ಯಕ್ತಿ ಹೋದರೆ ಅವರ ಕೆಲಸ ಮುಂದುವರಿಸಲು ಹತ್ತು ಜನ ಮುಂದಕ್ಕೆ ಬರಬೇಕು ಎಂದು ಅವರ ನಂಬಿಕೆ.

ಮಾತ್ರ ಭೂಮಿಗೆ ದೇಹ, ಶಕ್ತಿ ಅರ್ಪಿತ

ಯುವಕರಾದಾಗ ಆಪ್ಟೇಜಿಯವರಿಗೆ ಲೇಖನ ಕಾರ್ಯದಲ್ಲಿ ರುಚಿ ಇತ್ತು. ೧೯೨೮ ರಲ್ಲಿ ಅವರು ಪಂಜಾಬ್ ಕೇಸರಿ ಲಾಲಾ ಲಜಪತರಾಯರ ಚರಿತ್ರೆ ಬರೆದರು. ೧೯೩೦ ರಲ್ಲಿ ಶಿಲ್ಪ ಕಲಾನಿಧಿ ಕೃಷ್ಣಾಜಿ ವಿನಾಯಕ ವಝೆಯವರ ಜೀವನ ಚರಿತ್ರೆ ಪ್ರಕಟಿಸಿದರು. ಬಹಳ ವರ್ಷಗಳ ಕಾಲದ ನಂತರ “ನಮ್ಮ ರಾಷ್ಟ್ರ ಜೀವನದ ಪರಂಪರೆ” ಎಂಬ ಪುಸ್ತಕವನ್ನು ಬರೆದರು.

ಅವರು ಸ್ವತಃ ಬರೆದದ್ದು ಸ್ವಲ್ಪ. ಆದರೆ ನೂರಾರು ಲೇಖಕರಿಗೆ, ಕವಿಗಳಿಗೆ, ಸಂಪಾದಕರಿಗೆ ಮತ್ತು ಪ್ರಕಾಶಕರಿಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು. ಜಯಪುರದ ಸಂಸ್ಕೃತ ಮಾಸಪತ್ರಿಕೆ “ಭಾರತಿ” ಮತ್ತು ನಾಗಪುರದ ಸಂಸ್ಕೃತ ಮಾಸಿಕ ಪತ್ರ “ಭವಿತವ್ಯಂ” ಇವು ಅವರ ಪ್ರೇರಣೆಯ ಫಲಗಳು.

೧೯೪೮ ರ ಜನವರಿಯಲ್ಲಿ ಮತ್ತು ೧೯೪೯ ರಲ್ಲಿ ಅವರು ಕಾರಾಗೃಹದಲ್ಲಿದ್ದರು. ಕಾರಾಗೃಹವನ್ನು ಅಭ್ಯಾಸ ಕೇಂದ್ರವಾಗಿ ಪರಿವರ್ತಿಸಿದರು.

ಐವತ್ತು ವರ್ಷಗಳ ಕಾಲ ಸಂಘ ಕಾರ್ಯ ಮಾಡಿದರು. ಅನೇಕ ಸಂಕಟಗಳೊಡನೆ ಹೋರಾಡಿದರು. ಉತ್ತರೋತ್ತರ ಹೆಚ್ಚು ಹೆಚ್ಚು ಸಂಘ ಕಾರ್ಯ ಮಾಡುವುದೇ ಅವರ ಇಚ್ಛೆಯಾಗಿತ್ತು.

ಆಪ್ಟೇಜಿಯವರು ದಣಿದಿದ್ದರು. ಮುಪ್ಪಾಗಿದ್ದರು. ರೋಗಗ್ರಸ್ಥರಾಗಿದ್ದರು. ಕಣ್ಣುಗಳು ಸರಿಯಾಗಿ ಕಾಣುತ್ತಿರಲಿಲ್ಲ. ಓದುವ ಬರೆಯುವ ಆನಂದ ಅಲಭ್ಯವಾಗಿತ್ತು. “ಓದುವುದೇ ಇಲ್ಲವಾದರೆ, ಉಳಿಯುವುದೇತಕ್ಕೆ? ಎಂದು ಹೇಳುತ್ತಿದ್ದರು. ಆದರೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

೧೯೭೨ ನೇ ಜುಲ್‌ಐ ಇಪ್ಪತ್ತೆರಡರೆಂದು ಅವರು ಪ್ರಾತಃ ಸ್ಮರಣೆಗೆ ಬರಲಿಲ್ಲ. ಈ ಬಗ್ಗೆ ಚರ್ಚೆಯಾಯಿತು. “ಏಕೆ ಬರಲಿಲ್ಲ, ಆರೋಗ್ಯ ಸರಿ ಇಲ್ಲವೇ ನಿನ್ನೆ ಚೆನ್ನಾಗಿದ್ದರು”. ಸ್ವಲ್ಪ ಸಮಯದ ನಂತರ ಅವರ ಕೊಠಡಿಯ ಬಾಗಿಲನ್ನು ತಟ್ಟಲಾಯಿತು. ಆದರೆ ಉತ್ತ ಬರಲಿಲ್ಲ. ಮೇಲಿನ ಕಿಂಡಿಯಿಂದ ನೋಡಿದರು. ಅವರು ತಮ್ಮ ಹಾಸಿಗೆಯಲ್ಲೇ ಪ್ರಜ್ಞಾಶೂನ್ಯರಾಗಿದ್ದರು.

೧೯೭೨ ನೇ ಜುಲೈ ೨೬ ನೇ ರಾತ್ರಿ ಎಂಟು ಘಂಟೆ ಐವತ್ತು ನಿಮಿಷಕ್ಕೆ ತಮ್ಮ ೬೮ ನೇ ವಯಸ್ಸಿನಲ್ಲಿ ಆಪ್ಟೆ ಅವರು ತಮ್ಮ ಇಹಲೋಕದ ಯಾತ್ರೆ ಮುಗಿಸಿದರು. ಅಂದು ಗುರು ಪೌರ್ಣಮೆ. ಉಮಾಕಾಂತ ಕೇಶವ ಉರುಫ್ ಬಾಬಾ ಸಾಹೇಬ್ ಆಪ್ಟೆಯವರು ತಮ್ಮ ಜೀವನವನ್ನೇ ಗುರುಚರಣದಲ್ಲಿ ಅರ್ಪಿಸಿದರು. ದೇಶಕ್ಕಾಗಿ ತಮ್ಮನ್ನೇ ತೆಯ್ದುಕೊಂಡರು. ಜೀವನವಿಡೀ ಸದ್ದಿಲ್ಲದೆ ಕಾರ್ಯ ಮಾಡುತ್ತಿದ್ದರು. ಹೋಗುವಾಗಲೂ ಸದ್ದಿಲ್ಲದೇ ಹೊರಟುಹೋದರು.