ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನ ಬಿ.ಎಂ.ಶ್ರೀ.ಯವರ ಹತ್ತಿರದ ಸಂಬಂಧಿಕರಾಗಿ ಸಾಹಿತಿಕ ಹಿನ್ನೆಲೆಯಿರುವ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಉಮಾರಾವ್ ಪ್ರೊಫೆಸರ್ ತೀರ್ಥರಾವ್ ಆಜಾದ್ ಅವರ ಮಾರ್ಗದರ್ಶನದಲ್ಲಿ ಕಥಕ್ ನೃತ್ಯ ಶೈಲಿಯನ್ನು ಅಭ್ಯಾಸ ಮಾಡಿದರು.

ಬಾಲಿವುಡ್‌ನ ಮೆಟ್ರೋ ಗೋಲ್ಡ್‌ವಿನ್ ಮೇಯರ್ ಭಾರತದಲ್ಲಿ ತಯಾರಿಸಿದ ಮಾಯಾ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ಉಮಾ ಆ ಚಿತ್ರದಿಂದ ಪ್ರಪಂಚದಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಲ್ಪಟ್ಟರು. ನೃತ್ಯದ ಬಗ್ಗೆ ತಮಗಿದ್ದ ಸೆಳೆತದಿಂದ ಸಿನಿಮಾ ರಂಗಬಿಟ್ಟು ಚೆನ್ನೈನಲ್ಲಿ ಭರತನಾಟ್ಯದ ಐತಿಹಾಸಿಕ ಗುರು ಶ್ರೀಮತಿ ರುಕ್ಮಿಣಿದೇವಿ ಅರುಂಡೇಲ್ ಅವರ ಬಳಿ ಶಿಷ್ಯ ವೃತ್ತಿ ಸ್ವೀಕರಿಸಿದರು. ರುಕ್ಮಿಣಿದೇವಿ ಅವರ ಬಹುತೇಕ ಎಲ್ಲ ನೃತ್ಯ ನಾಟಕಗಳಲ್ಲೂ ಪ್ರಮುಖ ಪಾತ್ರವಹಿಸಿ, ಆ ಮೂಲಕ ವಿಶ್ವವ್ಯಾಪಿ ಪ್ರವಾಸ ಮಾಡಿದರು. ಉಮಾರ ಪ್ರತಿಭೆಯನ್ನು ಕಂಡ ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ.ಆರ್. ಮಾಧ್ಯಮದಲ್ಲಿ ಉಮಾರ ಬೆಳವಣಿಗೆಗೆ ಸರಿಯಾದ ಮಾರ್ಗ ತೋರಿಸಿದರು.

ನಂತರ ಸಿಂಗಪೂರ್ ಇಂಡಿಯನ್ ಫೈನ್ ಆರ್ಟ್ಸ್ ಸಂಸ್ಥೆಯಲ್ಲಿ ಭರತನಾಟ್ಯ ಮುಖ್ಯಸ್ಥೆಯಾಗಿ ಸೇರಿದ ಉಮಾ ತಾವು ಅಲ್ಲಿದ್ದ ಮೂರು ವರ್ಷಗಳ ಅವಧಿಯಲ್ಲಿ ತಮ್ಮ ಸುಂದರ ನೃತ್ಯ ರೂಪಕಗಳು, ಬೋಧನೆಯಲ್ಲಿ ತೋರಿಸುತ್ತಿದ್ದ ಶ್ರದ್ಧೆ ಇವುಗಳಿಂದ ಅಲ್ಲಿನ ರಸಿಕರ, ವಿದ್ಯಾರ್ಥಿಗಳ, ವಿಮರ್ಶಕರ ಮೆಚ್ಚುಗೆ ಪಡೆದರು.

ಪದ್ಮಶ್ರೀ ಎಂ.ಡಿ. ರಾಮನಾಥನ್ ಮತ್ತು ಬೂದನೂರು ಕೃಷ್ಣಮೂರ್ತಿಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತ, ಚಂದು ಪಣಿಕರ್ ಅವರಿಂದ ಕಥಕ್ಕಳಿ, ಶ್ರೀಮತಿ ಕಲ್ಯಾಣಿ ಕುಟ್ಟಿ ಅಮ್ಮ ಅವರಿಂದ ಮೋಹಿನಿ ಅಟ್ಟಂ ನೃತ್ಯ ಶೈಲಿಗಳನ್ನೂ ಅಭ್ಯಾಸ ಮಾಡಿರುವ ಉಮಾರಾವ್ ಓರ್ವ ಪರಿಪೂರ್ಣ ನೃತ್ಯ ಕಲಾವಿದೆಯಾದ ಇವರಿಗೆ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.