ಉರಿವ ಒಲೆಗಳ ಮುಂದೆ ಕೂತ ಈ ಹೆಣ್ಣು
ಆಶಿಸುತ್ತಾಳೆ ಆ ದ್ರೌಪದಿಯ ಅಕ್ಷಯ
ಪಾತ್ರೆಗೆ ! ಎಂಥ ಸಾರ್ಥಕವಾದ ರೂಪಕ
ಈ ದೇಶದ ಮಹಿಳೆಯರ ಚರಿತ್ರೆಗೆ,
ಉರಿಯುವುದು ಬರೀ ಒಲೆಯಲ್ಲ
ಅವಳೂ ಕೂಡ ಎಂಬ ವಾಸ್ತವಕ್ಕೆ.

ಉರಿವ ಒಲೆಗಳ ಮುಂದೆ
ನೆನೆಯುತ್ತಾಳೆ ನಿರ್ಮಲಾ
ಕಳೆದುಹೋದ ತನ್ನ ಎಳೆತನದ ದಿನಗಳನ್ನು,
ಕಿಚ್ಚಲ್ಲದ ಧಗೆಯನ್ನು ಹೊತ್ತಿಸಿದ
ತಾರುಣ್ಯದ ಸಂಬಂಧಗಳನ್ನು
ಗಡಿಯಾರದೊಳಗಿಂದ ಯಾವಾಗಲೋ ಬಂದು
ಮನಸ್ಸನ್ನು ಕದ್ದ ಸಂಗಾತಿಯನ್ನು
ಅವನೊಡನೆ ತಾನಿಟ್ಟ ಹೆಜ್ಜೆ ಗುರುತುಗಳನ್ನು.

ಉರಿವ ಒಲೆಗಳ ಮುಂದೆ
ನೋಡುತ್ತಾಳೆ ನಿರ್ಮಲಾ
ಪಾತ್ರೆಯ ಒಳಗೆ ಕೊತ ಕೊತ ಕುದಿವ ಅನುಭವಗಳನ್ನು,
ಸುತ್ತಲೂ ಮರ ಚಿಗುರಿ ಪರಿಮಳದ ಕೊಂಬೆಯ ತುಂಬ
ಹೂವಿನಾಭರಣವನ್ನು,
ಬಯಸುತ್ತಾಳೆ, ಆಲದ ಮರದ ದಟ್ಟ ಹಸುರಿನ ಕೆಳಗೆ
ಆಕಾಶದ ಸೂರ್ಯನನ್ನು
ತನ್ನ ನೆರಳೂ ಅಲ್ಲಿ ಮೂಡಿ ನಿಲ್ಲುವುದನ್ನು
ಹಾಗೆಯೇ ತನ್ನಂತರಂಗದಲ್ಲೊಂದಿಷ್ಟು ಬಿಡುವನ್ನು
ಕವಿತೆಯ ಜತೆಗೆ ತನ್ನ ಬಿಡುಗಡೆಯನ್ನು.

ಹಾರೈಸುತ್ತೇನೆ ನಾನು:
ಮೃದುವಾಗಿ ಎದೆಯ ಕದ ತಟ್ಟುವೀ
ಕವಿತೆಯೊಳಗಿರುವ ಈ ಮನಸ್ಸು
ಹೀಗೆಯೇ ನಿರಂತರವಾಗಿ ಉಳಿಸಿಕೊಂಡಿರಲಿ
ಉತ್ಕಟವಾದ ಜೀವನ ಪ್ರೀತಿಯನ್ನು
ಉರಿವ ಒಲೆಗಳ ನಡುವೆ ಬೆಳುದಿಂಗಳನ್ನು

(* ಶ್ರೀಮತಿ ಆರ್. ನಿರ್ಮಲಾ ಅವರ ‘ಉರಿವ ಒಲೆಗಳ ಮುಂದೆ’ ಎಂಬ ಕವನ ಸಂಗ್ರಹಕ್ಕೆ ಬರೆದ ಮುನ್ನುಡಿ ಕವಿತೆ.)