ಇಂಧನ, ಉರುವಲು ಉಳಿತಾಯ ಮಾಡಲೇಬೇಕಾದ ಅನಿವಾರ್ಯ ಇಂದು ಮಲೆನಾಡಿನ ಕೃಷಿಕರ ಸಮಸ್ಯೆ.  ಅನಿವಾರ್ಯಗಳೇ ಆವಿಸ್ಕಾರಗಳಿಗೆ ಕಾರಣ.  ಆವಿಷ್ಕಾರಗಳು ಸುಧಾರಣೆಯಾದಂತೆಲ್ಲಾ ಜನರಿಗೆ ಹೆಚ್ಚು ಪ್ರಿಯವಾಗುತ್ತಾ ಸಾಗುತ್ತವೆ.  ಜನರು ಬಳಸಿದಂತೆಲ್ಲಾ ಉಳಿತಾಯ ಸಾಧ್ಯವಾಗುತ್ತದೆ.  ಇದೇ ಆವಿಷ್ಕಾರವೊಂದರ ಯಶಸ್ಸು ಕೂಡ.  ಇದಕ್ಕೆ ಸೂಕ್ತ ಬೆಂಬಲ, ಸಹಾಯಗಳು, ಸಹಕಾರ ಸಂಘಸಂಸ್ಥೆಗಳಿಂದ, ಸರ್ಕಾರದಿಂದ ದೊರೆತರೆ ಬಡವರಿಗೂ ತಲುಪುತ್ತದೆ.  ಹೀಗೆ ಬೇರುಮಟ್ಟಕ್ಕೆ ತಲುಪಿದಾಗ ಮಾತ್ರ ಮಾಡಿದ ಕೆಲಸ ಸಾರ್ಥಕ.

ಮಲೆನಾಡಿನ ಮನೆಮನೆಗಳಲ್ಲಿ ಈಗ ಬೇನಾ ಒಲೆಗಳಿವೆ.

ಮಲೆನಾಡಿನಲ್ಲಿ ಮಳೆಗಾಲದಿಂದಲೇ ಅಡಿಕೆ ಕೊಯ್ಲು ಪ್ರಾರಂಭವಾಗಿಬಿಡುತ್ತದೆ.  ಹೆಚ್ಚಿನವರು ಕೆಂಪು ಅಡಿಕೆ ಮಾಡುವ ಪ್ರಯುಕ್ತ, ಕೊಯ್ದ ಅಡಿಕೆಯನ್ನು ಸಿಪ್ಪೆ ಬಿಡಿಸಿ ಬೇಯಿಸುತ್ತಾರೆ.  ಬೇಯಿಸಿದ ಮೇಲೆ ಬಿಸಿಲಿನಲ್ಲಿ ಒಣಗಿಸುತ್ತಾರೆ.  ಒಟ್ಟಾರೆ ಅಡಿಕೆ ಬೇಯಿಸಲು ಕಟ್ಟಿಗೆ ಬೇಕೇಬೇಕು.

ಹಿಂದೆಲ್ಲಾ ಕಾಡು ಎಲ್ಲೆಲ್ಲೂ ಇತ್ತು.  ಕಟ್ಟಿಗೆಗಾಗಿ, ಕುಂಟೆಗಾಗಿ ಎಷ್ಟು ಮರ ಕಡಿದರೂ ಯಾರೂ ಕೇಳುವವರಿರಲಿಲ್ಲ.  ಅಡಿಕೆ ಸುಗ್ಗಿಯಲ್ಲಿ ಪ್ರತಿ ಮನೆಯಲ್ಲೂ ಎರಡು ಗಾಡಿಯಷ್ಟು ಕಟ್ಟಿಗೆ ಬೇಕಾಗುತ್ತಿತ್ತು.  ತೆರೆದ ಬಾಯಿಯ ಒಲೆ.  ಎಷ್ಟು ಕಟ್ಟಿಗೆಯನ್ನಾದರೂ ಬಕಾಸುರನಂತೆ ತಿಂದುಹಾಕುತ್ತಿತ್ತು.  ಅಡಿಕೆ ಬೇಯುವುದು ಮುಖ್ಯವಾಗಿತ್ತು.  ಉರುವಲು ಎಷ್ಟು ಖರ್ಚಾದರೂ ಚಿಂತೆ ಇರಲಿಲ್ಲ.

ಕಾಡು ಕಡಿಮೆಯಾದಂತೆ ಕಟ್ಟಿಗೆಗೆ ಅಭಾವ ಪ್ರಾರಂಭವಾಯಿತು.  ಕಾಡು ಕಾವಲು, ಕಾಡು ರಕ್ಷಣೆ, ಕಾಡು ಸಂವರ್ಧನೆಯ ಕಾಲ ಬಂದಿತು.  ಒಂದು ಕ್ವಿಂಟಾಲ್ ಕಟ್ಟಿಗೆ ಸಿಗುವುದೂ ಕಷ್ಟವಾಯಿತು.  ಹೀಗಿರುವಾಗ ಅಡಿಕೆ ಕೃಷಿಕರು ಬೇಯಿಸುವುದು ಹೇಗೆ?  ಅಡಿಕೆ ಒಣಗಿಸುವುದೂ ಸಹ ಮಳೆಗಾಲದಲ್ಲಿ ಕಷ್ಟ.  ಡ್ರೈಯರ್‌ಗೂ ಸಹ ಕಟ್ಟಿಗೆ ಬೇಕು.  ಕೃಷಿ ತ್ಯಾಜ್ಯಗಳನ್ನು ಬಳಸಿಯೂ ಡ್ರೈಯರ್‌ನಲ್ಲಿ ಅಡಿಕೆ ಒಣಗಿಸಬಹುದಾಗಿತ್ತು.  ಆದರೆ ಬೇಯಿಸುವ ವಿಧಾನವನ್ನು ಪರಿಷ್ಕರಿಸಲೇಬೇಕಿತ್ತು.  ಅಡಿಕೆಯನ್ನು ಗ್ಯಾಸ್ ಮೂಲಕ, ವಿದ್ಯುತ್ ಮೂಲಕ ಬೇಯಿಸುವಿಕೆ ಬಹಳ ದುಬಾರಿ.  ಕೃಷಿ ತ್ಯಾಜ್ಯಗಳ ಉರಿಯ ಉಷ್ಣತೆ ಸಾಲದಾಗಿತ್ತು.  ಹೀಗಾಗಿ ಒಲೆಯ ಮಾದರಿಗಳನ್ನೇ ಬದಲಿಸಬೇಕಾಗಿತ್ತು.

ಈ ತರಹದಲ್ಲಿ ಬೇಳೂರಿನ ಕೃಷಿಕ ಹೆಗಡೆ ಸುಬ್ರಾಯರು ತಮ್ಮ ಪರಿಷ್ಕರಣೆ ಪ್ರಾರಂಭಿಸಿದರು.  ಅಡಿಕೆ ಬೇಯಿಸುವ ಒಲೆಯಲ್ಲಿ ಬೆಂಕಿಯುರಿ, ಬೇಯಿಸುವ ಹಂಡೆಗೆ ತಾಗುವುದಕ್ಕಿಂತ ಆಚೆ ಈಚೆ ಹೆಚ್ಚು ಹೋಗುವುದನ್ನು ಗಮನಿಸಿದರು.  ಕಟ್ಟಿಗೆಯ ಬೆಂಕಿಯ ಉರಿಯೆಲ್ಲಾ ಹಂಡೆಗೆ ಸುತ್ತಲೂ ತಾಗಿದರೆ ಹಂಡೆ ಬಲುಬೇಗ ಕಾಯುತ್ತದೆ ಎನ್ನುವುದು ಸಾಮಾನ್ಯ ಜ್ಞಾನ.  ಹಾಗೆ ಉರಿಯು ಹೊರಗೆ ಹೋಗದಂತೆ ಮಾಡುವ ವಿಧಾನವೇ ತಂತ್ರಜ್ಞಾನ.

ಈ ವಿಷಯವನ್ನು ಹೆಗಡೆ ಸುಬ್ರಾಯರು ಹಾಗೂ ಬೇಳೂರು ನಾಗಪ್ಪ ಇಬ್ಬರೂ ಪದೇ ಪದೇ ಚರ್ಚಿಸತೊಡಗಿದರು.  ನಕ್ಷೆಯನ್ನೂ, ಯೋಜನೆಯನ್ನೂ ತಯಾರಿಸತೊಡಗಿದರು. ಬೇಳೂರು ನಾಗಪ್ಪನವರು ಮನೆಯಲ್ಲೇ ಮಣ್ಣಿನಿಂದ ಒಲೆಯನ್ನು ಹಾಕಿಯೇಬಿಟ್ಟರು.

ಸಣ್ಣಬಾಯಿಯ ಒಲೆ, ಸುತ್ತಲೂ ಮಣ್ಣಿನ ಕಟ್ಟಡ.  ಒಳಗಿರುವ ಹಂಡೆಗೆ ಬೆಂಕಿಯ ಉರಿ, ಸುತ್ತಲೂ ತಾಗುವಂತೆ ಗಾಳಿಯಾಡುವ ವ್ಯವಸ್ಥೆ.  ಹಂಡೆ ಕೆಳಗೆ ಬೀಳದಂತಿರಲು ಹಂಡೆಯ ಕುತ್ತಿಗೆಯ ಬಳಿ ಬಿಗಿಯಾಗಿ ಮಣ್ಣು ಒತ್ತಿ ನಿಲ್ಲಿಸುವಂತಹ ನಿರ್ಮಾಣ.  ಹೊಗೆ ಹೊರಹೋಗಲು ವಾತಾಯನ (ವೆಂಟಿಲೇಟರ್) ವ್ಯವಸ್ಥೆ ಇವೆಲ್ಲಾ ಇತ್ತು.  ಮನೆಯಲ್ಲೇ ನಡೆದ ಪ್ರಯೋಗದಲ್ಲಿ ಕಡಿಮೆ ಕಟ್ಟಿಗೆ ಖರ್ಚಿನಲ್ಲಿ ಬೇಗ ಅಡಿಕೆ ಬೇಯುವುದು ತಿಳಿಯಿತು.  ಆದರೆ ಕೆಲವು ಸುಧಾರಣೆಗಳನ್ನು ಮತ್ತೆ ಮಾಡಬೇಕಾಯಿತು.  ಕಾರಣ ಒಂದೇ ವಾತಾಯನ ವ್ಯವಸ್ಥೆ ಇರುವ ಪ್ರಯುಕ್ತ ಹೊಗೆ ಬಾಯಿಯ ಮೂಲಕ ಹೊರಬರುತ್ತಿತ್ತು.  ಇದರಿಂದ ಬೆಂಕಿ ಉರಿಯು ನಂದಿ ಹೋಗುತ್ತಿತ್ತು.  ಕಟ್ಟಿಗೆ ಪ್ರಮಾಣ ಹಿಂದಿಗಿಂತಲೂ ಕಡಿಮೆ ಖರ್ಚು ಆಗಿದ್ದೇನೋ ಹೌದು.  ಆದರೆ ನಿರೀಕ್ಷಿತ ಅರ್ಧ ಪ್ರಮಾಣವಲ್ಲ.  ಮಣ್ಣಿನ ಒಲೆ ಬೆಂಕಿಯ ಉರಿಗೆ ಬೇಗ ಹಾಳಾಯಿತು.  ಹೀಗೆ ಏನೆಲ್ಲಾ ಸಮಸ್ಯೆಗಳಾದರೂ ಸುಧಾರಣೆಯ ಕೆಲಸ ಪ್ರಾರಂಭವಾಗಿತ್ತು.

ಎರಡನೇ ಹಂತದಲ್ಲಿ ನಾಗಪ್ಪನವರು ಒಳ್ಳೆಯ ಕೆಂಪುಮಣ್ಣು ತಂದರು.  ಅದಕ್ಕೆ ಸೂಕ್ತ ಪ್ರಮಾಣದ ಮರಳು ಸೇರಿಸಿ ಹದಗೊಳಿಸಿದರು.  ಒಲೆ ನಿರ್ಮಿಸಿದರು.  ಎರಡು ವಾತಾಯನ ವ್ಯವಸ್ಥೆ ಕಲ್ಪಿಸಿದರು.  ಬಲದಿಂದ ಬಂದ ಬೆಂಕಿಯ ಸುಳಿ ಎಡ ವಾತಾಯನದಲ್ಲೂ, ಎಡದಿಂದ ಬಂದ ಬೆಂಕಿಯ ಸುಳಿ ಬಲ ವಾತಾಯನದಲ್ಲೂ ಹೊಮ್ಮುವಂತೆ ಮಾಡಿದರು.  ಹೊಗೆ ಸಹ ಬಾಯಿಯನ್ನು ಬಿಟ್ಟು ವಾತಾಯನದಲ್ಲೇ ಹೊರಹೋಗತೊಡಗಿತು.  ಮಣ್ಣಿನ ಮಿಶ್ರಣ ಸರಿಯಾದ ಹದದಲ್ಲಿರುವ ಕಾರಣ ಹಂಡೆಯ ಕಂಠಕ್ಕೆ ಒತ್ತಿ ಕೂರಿಸಿದ ಮಣ್ಣು ಬಿರಿಬಂದು ಹಾಳಾಗದೇ ಗಟ್ಟಿಯಾಗಿ ನಿಂತಿತು.  ಹೀಗೆ ಸುಧಾರಣೆಯ ವಿಧಾನ ಯಶಸ್ವಿಯಾಯಿತು.  ಒಲೆಗೆ ಉಪಯೋಗಿಸಿದ ಉರುವಲಿನ ಪ್ರತಿ ಚಿಕ್ಕ ಚೂರಿನ ಬೆಂಕಿಯ ಉಷ್ಣತೆ ಸಹಾ ಒಲೆಯಿಂದ ಹೊರಬರದೇ ಹಂಡೆಗೆ ತಾಗತೊಡಗಿತು.  ಹಿಂದೆ ಬಳಸುತ್ತಿದ್ದ ಉರುವಲಿಗಿಂತಲೂ ಅರ್ಧ ಉರುವಲು ಸಾಕಾಗತೊಡಗಿತು.  ಹೀಗೆ ಬೇಳೂರು ನಾಗಪ್ಪ ಮಣ್ಣಿನ ಒಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನು ಅಕ್ಕಪಕ್ಕದ ಕೃಷಿಕರಿಗೂ ತಿಳಿಸಿದರು.  ತಾವೇ ಸ್ವತಃ ಅನೇಕರ ಮನೆಗಳಿಗೆ ಹೋಗಿ ಒಲೆ ನಿರ್ಮಿಸಿಕೊಟ್ಟರು.  ಉರುವಲು ಉಳಿತಾಯವಾಗುವ ರೀತಿಯನ್ನು ತೋರಿಸಿದರು.  ಕಟ್ಟಿಗೆ ಅಭಾವ ಇರುವ ಕಡೆಗಳಲ್ಲಿ ಈ ವಿಧಾನ ನಿಧಾನವಾಗಿ ಜನಪ್ರಿಯವಾಗತೊಡಗಿತು.

ಶಿವಮೊಗ್ಗ ಜಿಲ್ಲೆಯಲ್ಲಿ ಮಲೆನಾಡು ಅಡಿಕೆ ಕೃಷಿಕರ ಸಹಕಾರ ಸಂಘ ಮಾಮ್‌ಕೋಸ್ ಬಹಳ ಜನಪ್ರಿಯ.  ರೈತರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿರುತ್ತದೆ. ಬೇಳೂರು ನಾಗಪ್ಪನವರು ತಮ್ಮ ಉರುವಲು ಉಳಿತಾಯದ ಒಲೆಯ ವಿವರಣೆಗಳನ್ನು ಸಂಘಕ್ಕೆ ಕಳುಹಿಸಿದರು.  ಸದಸ್ಯರ ಎದುರು ಪ್ರಾತ್ಯಕ್ಷಿಕೆ ನಡೆಸಿದರು.  ಎಲ್ಲರಿಗೂ ಇವರ ವಿಧಾನ ಒಪ್ಪಿಗೆಯಾಯಿತು.  ಈ ವಿಧಾನದಲ್ಲಿ ಸಂಘದ ಯಾವುದೇ ಸದಸ್ಯರು ಒಲೆಯನ್ನು ಹಾಕಿಸಿದರೂ ಅವರಿಗೆ ಸಹಾಯಧನವಾಗಿ ೫೦೦ ರೂಪಾಯಿಗಳನ್ನು ನೀಡುವುದಾಗಿ ತೀರ್ಮಾನಿಸಿದರು.  ಇದರಿಂದ ಹಳ್ಳಿಹಳ್ಳಿಗಳಲ್ಲಿ ಜನ ಈ ವಿಧಾನದಲ್ಲಿ ಒಲೆ ನಿರ್ಮಿಸತೊಡಗಿದರು.  ಸಂಘದ ಸಹಾಯಧನವನ್ನೂ ಪಡೆದರು.  ಈ ಒಲೆ ಬೇನಾ ಒಲೆ ಎಂದು ಜನಪ್ರಿಯವಾಯಿತು.

ಬೇನಾ ಒಲೆ ನಿರ್ಮಾಣಕ್ಕೆ ಇಬ್ಬರು ಕೂಲಿಗಳು ಸಾಕು.   ಒಂದಿಷ್ಟು ಮಣ್ಣು ಹಾಗೂ ಮರಳು.  ಒಂದೇ ದಿನದಲ್ಲಿ ನಿರ್ಮಾಣ.  ನಾಗಪ್ಪನವರು ಅನೇಕ ತಂಡ ರಚಿಸಿ ಹಳ್ಳಿ ಹಳ್ಳಿಗಳಿಗೆ ಕಳುಹಿಸಿದರು.  ಒಲೆ ನಿರ್ಮಾಣ ಕಂಡುಹಿಡಿದ ಕಾರಣಕ್ಕಾಗಿ ಹಣವನ್ನು ಬಯಸಲಿಲ್ಲ.  ಬಂದ ಹಣವೆಲ್ಲಾ ಒಲೆ ನಿರ್ಮಿಸಿದ ತಂಡಕ್ಕೇ ಮೀಸಲು.  ಪ್ರಾರಂಭದಲ್ಲಿ ಇವರೇ ಸ್ವತಃ ನಿಂತು ನಿರ್ಮಿಸುತ್ತಿದ್ದರು.  ಕ್ರಮೇಣ ಜನರಿಗೆ ವಿವರಿಸಿ ಅವರೇ ಮೇಲ್‌ನಿಗಾ ವಹಿಸುವಂತೆ ಮಾಡಿದರು.  ಅನೇಕರು ತಮ್ಮದೇ ಆದ ಸುಧಾರಣೆಗಳನ್ನು ತಂದರು.  ಎರಡು ವಾತಾಯನದ ಬದಲು ನಾಲ್ಕು ವಾತಾಯನ.  ಒಲೆಯ ಬಾಯಿಗೆ ಕಬ್ಬಿಣದ ಚೌಕಟ್ಟು ಹೀಗೆ ೫೦೦ ರೂಪಾಯಿಗಳಿಗೆ ಎಷ್ಟು ಸುಧಾರಣೆ ಸಾಧ್ಯವೋ ಅದೆಲ್ಲಾ ಆಯಿತು.

ಬಂದಗದ್ದೆಯ ರಾಧಾಕೃಷ್ಣರವರು ಈ ಒಲೆಯ ವಿಶೇಷ ಅಧ್ಯಯನದ ದಾಖಲಾತಿ ಮಾಡಿದರು.  ಅವರು ಬೇನಾ ಒಲೆಗೆ ಕಟ್ಟಿಗೆಯ ಬದಲು ಅಡಿಕೆಮರದ ದಬ್ಬೆ, ಸೋಗೆ, ಹಾಳೆ, ಅಡಿಕೆ ಸಿಪ್ಪೆ, ಸಲ್ದು ಹೀಗೆ ಅಡಿಕೆ ತ್ಯಾಜ್ಯಗಳನ್ನೇ ಬಳಸಲು ಪ್ರಾರಂಭಿಸಿದರು.

ಒಲೆಯನ್ನು ನಿರ್ಮಿಸುವಾಗ ಹಂಡೆಯ ಸುತ್ತಲೂ ಎಂಟು ಇಂಚು ಜಾಗ ಖಾಲಿ ಬಿಟ್ಟು ಸುತ್ತಲೂ ಗೋಡೆಯ ನಿರ್ಮಾಣ ಮಾಡಿದರು.  ಗೋಡೆಯ ದಪ್ಪ ೧೦ ಇಂಚುಗಳು.  ಒಲೆಯ ಗೋಡೆಯ ಹೊರಮೈಗೆ ಗದ್ದೆಮಣ್ಣು ಅಥವಾ ಅಂಟಿನ ಗುಣದ ಜೇಡಿಮಣ್ಣನ್ನು ನುಣುಪಾಗಿರುವಂತೆ ಸವರಿದರು.  ಮೇಲಿನಿಂದ ಸಗಣಿಯಲ್ಲಿ ಸಾರಿಸಿದರು.  ಎರಡು ದಿನಕ್ಕೆ ಒಲೆಯ ಹೊರಮೈ ಒಣಗಿತು.  ಒಳಮೈ ಒಣಗಲು ಬೆಂಕಿ ಹಾಕಿದರು.

೮೦ ಲೀಟರಿನ ಹಂಡೆಯಲ್ಲಿ ಮೊದಲ ಸಾರಿ ಅಡಿಕೆ ಬೇಯಿಸಲು ಆರು ಕಿಲೋಗ್ರಾಂ ಉರುವಲು ಬೇಕು ಎನ್ನುತ್ತಾರೆ ರಾಧಾಕೃಷ್ಣ.  ಬೇಯುವ ಸಮಯ ಒಂದು ಗಂಟೆ ಹತ್ತು ನಿಮಿಷಗಳು.  ಅನಂತರದ ಪ್ರತಿ ಹಂಡೆ ಅಡಿಕೆ ಬೇಯಲು ಐದು ಕಿಲೋಗ್ರಾಂ ಉರುವಲು ಸಾಕು.  ೪೫ ನಿಮಿಷ ಸಮಯ ಬೇಕು ಎನ್ನುತ್ತಾರೆ.

ಹಿಂದಿನ ಒಲೆ ಇದ್ದಾಗ ಬೇಯಿಸಿದ ಅಡಿಕೆ ತೆಗೆಯುವುದು ಬಹಳ ಕಷ್ಟ.  ಬೆಂಕಿಯ ಉರಿ, ಹೊಗೆಯೆಲ್ಲಾ ಮೈ ಕೈ ಕಣ್ಣಿಗೆ ತೊಂದರೆ ಕೊಡುತ್ತಿದ್ದವು.  ಈಗ ಅಡಿಕೆ ಬೆಂದ ಮೇಲೆ ಉರಿ ಕಡಿಮೆ ಮಾಡಿಕೊಂಡು ವಾತಾಯನ ವ್ಯವಸ್ಥೆ ಅಂದರೆ ಚಿಮಣಿಯನ್ನು ಮುಚ್ಚಿಕೊಂಡರಾಯಿತು. ಹೆಂಗಸರು ಬೇಕಾದರೂ ಬೆಂದ ಅಡಿಕೆಯನ್ನು ಎತ್ತಿ ಹಾಕಬಹುದು ಎನ್ನುತ್ತಾರೆ ರಾಧಾಕೃಷ್ಣರ ಪತ್ನಿ ಮಂಗಳ.

ಬೇನಾ ಒಲೆಯ ಹಿಂದಿನ ಬೇಳೂರ ಸುಬ್ರಾಯರು ಇನ್ನಷ್ಟು ಸುಧಾರಣೆ ಹಾಗೂ ನವೀನತೆಗಳನ್ನು ಚಿಂತಿಸಿದರು.  ಬೇನಾ ಒಲೆ ಮಣ್ಣಿನದಾಗಿರುವ ಪ್ರಯುಕ್ತ ಸೂಕ್ತ ಮುಚ್ಚಿಗೆ ಇಲ್ಲದಿದ್ದರೆ ಮಳೆಗಾಲದಲ್ಲಿ ಹಾಳಾಗಿ ಬಿಡುತ್ತದೆ.  ಉರಿಯನ್ನು ಹೆಚ್ಚಿಸಿದಾಗ ಹೆಚ್ಚು ಉಷ್ಣತೆ, ತಗ್ಗಿಸಿದಾಗ ಕಡಿಮೆಯಾಗುತ್ತದೆ.  ಹಂಡೆಯನ್ನು ಉರಿಯು ಒಮ್ಮೆ ಮಾತ್ರ ಸುತ್ತುತ್ತದೆ.  ಇದೆಲ್ಲಾ ಸರಿಪಡಿಲು ಕೆಲವೊಂದು ಆಧುನಿಕತೆಗಳ ಅವಶ್ಯಕತೆ ಇರುವುದನ್ನು ಮನಗಂಡರು.  ಅವೇ ಇಟ್ಟಿಗೆ, ಸಿಮೆಂಟ್ ಮುಂತಾದವು.

ಹೀಗೆ ಬೇಸು (ಬೇಳೂರು ಸುಬ್ರಾಯ) ಒಲೆ ಸಿದ್ಧವಾಯಿತು.  ಒಲೆ ನಿರ್ಮಿಸುವ ವಿಧಾನವೆಲ್ಲಾ ಬೇನಾ ಒಲೆಯಂತೆಯೇ ಆದರೂ ಒಳಗೆ ವಾತಾಯನ ವ್ಯವಸ್ಥೆ ಸರಿಯಾಗಿರಲು ಅಷ್ಟಕೋನಾಕೃತಿಯನ್ನು ನೀಡಿದರು.  ನಾಲ್ಕು ಚಿಮಣಿಗಳನ್ನು ಇಟ್ಟರು.  ಸಿಮೆಂಟ್ ಗೋಡೆ ನಿರ್ಮಿಸಿದರು.  ಒಲೆಯ ಬಾಯಿ ಹಾಳಾಗದಿರಲು ಕಬ್ಬಿಣದ ರಾಡ್ ಹಾಕಿದರು.  ಒಲೆಗೆ ಮುಚ್ಚಳವನ್ನೂ ಮಾಡಿದರು.  ಹಂಡೆಯನ್ನು ಸುಮಾರು ೧೧ ಡಿಗ್ರಿ ಕೋನದಲ್ಲಿ ಬಾಗಿಸಿ ಒಲೆಯೊಳಗೆ ಜೋಡಿಸಿದರು.

ಮೊದಲಬಾರಿ ೮೦ ಲೀಟರಿನ ಹಂಡೆಯಲ್ಲಿ ಅಡಿಕೆ ಬೇಯಲು ಅರ್ಧಗಂಟೆ ಮಾತ್ರ ಸಾಕಾಯಿತು.  ಉರುವಲು ಪ್ರಮಾಣ ಸುಮಾರು ಎಂಟು ಕಿಲೋಗ್ರಾಂ.  ಆಮೇಲೆ ಕೇವಲ ೨೦ ನಿಮಿಷಗಳಿಗೊಮ್ಮೆ ಅಡಿಕೆ ಬೇಯಲು ತೊಡಗಿತು.  ಬೇನಾ ಒಲೆಯಲ್ಲಿ ವ್ಯರ್ಥವಾಗುತ್ತಿದ್ದ ಉರಿಯು ಇದರಲ್ಲಿ ಸಂಪೂರ್ಣ ಬಳಕೆಯಾಗುತ್ತಿತ್ತು.  ಕಟ್ಟಿಗೆಯು ಬೇಗ ಬೇಗ ಉರಿಯುತ್ತಿತ್ತು.  ಇಟ್ಟಿಗೆ ಹಾಗೂ ಸಿಮೆಂಟಿನ ಒಲೆಯಾದ ಕಾರಣ ಬಿಸಿಯ ಪ್ರಮಾಣ ಇನ್ನೂ ಹೆಚ್ಚಾಗಿತ್ತು.  ಅಡಿಕೆ ಪೂರ್ತಿ ಬೇಯುವ ಮೊದಲೇ ಉರಿಯನ್ನು ತೆಗೆದರೂ ಒಲೆಯ ಬಿಸಿಗೆ ಅಡಿಕೆ ಬೇಯುವಷ್ಟು ಬಿಸಿ ಇತ್ತು.   ಹಾಗಾಗಿ ಬೆಂದ ಅಡಿಕೆಯನ್ನು ಹಂಡೆಯಿಂದ ತೆಗೆಯುವಾಗ ಒಲೆಯು ಕೈಗೆ ತಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿತ್ತು.

ಅಡಿಕೆ ಬೇಯಿಸಲು ಒಬ್ಬ ಕೂಲಿಯಾಳು ಸಿದ್ಧವಾಗಿಯೇ ಇರಬೇಕಿತ್ತು.  ಹಂಡೆಗೆ ಅಡಿಕೆ ಹಾಕುವುದು, ಉರಿ ಹೆಚ್ಚಿಸುವುದು, ಅಡಿಕೆ ತಿರುವುವುದು ಹಾಗೂ ಉರಿ ಸರಿಪಡಿಸುವುದು.  ಅಷ್ಟೊತ್ತಿಗಾಗಲೇ ಬೆಂದು ಬಿಡುವ ಅಡಿಕೆ ತೆಗೆಯುವುದು, ತೆಗೆದ ಅಡಿಕೆಯನ್ನು ಒಣಗಲು ಹಾಕುವುದು ಇವೆಲ್ಲಾ ಒಂದೇ ಸಮನೆ ಆಗುವ ಕೆಲಸಗಳು.

ಬೇನಾ ಒಲೆಯಲ್ಲಿ ಅಡಿಕೆ ನಿಧಾನ ಬೇಯುವ ಕಾರಣ ಮನೆಯವರೇ ನಿಧಾನವಾಗಿ ಬೇರೆ ಕೆಲಸಗಳೊಂದಿಗೆ ಇದನ್ನು ನೋಡಿಕೊಳ್ಳಬಹುದಿತ್ತು.  ಆದರಿಲ್ಲಿ ಕೂಲಿ ಬೇಕೇ ಬೇಕಾಗಿತ್ತು.

ಸುಮಾರು ೧೦೦ ಇಟ್ಟಿಗೆ, ಸಿಮೆಂಟ್, ಕಬ್ಬಿಣದ ಚೌಕಟ್ಟು ನಿರ್ಮಾಣ ಹೀಗೆ ಬೇಸು ಒಲೆಯ ನಿರ್ಮಾಣದ ಖರ್ಚು ೧೦೦೦ ರೂಪಾಯಿಗಳನ್ನು ದಾಟದು.  ದೀರ್ಘಕಾಲ ಬಾಳಿಕೆ, ಮಳೆಗಾಳಿಗೆ ಹೆದರದು.  ಹೀಗೆ ಏನೆಲ್ಲಾ ಒಳ್ಳೆಯ ಗುಣಗಳೂ ಇವೆ.

ಅಡಿಕೆಗೆ ಬೆಲೆ ಇದ್ದಾಗ ಬೇಸು ಒಲೆಯನ್ನು ನಿರ್ಮಿಸಿಕೊಂಡರೆ ಭಾರವೆನಿಸದು.  ಬಡವರಿಗೆ ಬೇನಾ ಒಲೆಯೇ ಒಳ್ಳೆಯದು.  ಬೇನಾ ಒಲೆಯ ಖರ್ಚನ್ನು ಮಾಮ್‌ಕೋಸ್ ಕೊಡುವ ಪ್ರಯುಕ್ತ ರೈತರಿಗೆ ಯಾವ ಖರ್ಚೂ ಆಗದು.

ಮಲೆನಾಡಿನಲ್ಲಿಯೇ ಉರುವಲು ಉಳಿತಾಯದ ಕ್ರಾಂತಿ ಪ್ರಾರಂಭವಾಗಿರುವಾಗ ಬಯಲುಸೀಮೆಯಲ್ಲೂ ಅದು ಜಾರಿಯಾಗಲೇಬೇಕು.  ಅಡಿಕೆ ಬೆಳೆಯೀಗ ಗುಡ್ಡಕಣಿವೆಗಳಲ್ಲಿ ಮಾತ್ರವಲ್ಲ, ಅರೆ ಮಲೆನಾಡು, ಬಯಲುಸೀಮಗಳಲ್ಲೂ ಇದೆ.  ಚಾಲಿ ಮಾಡುವವರಿಗೆ ಉರುವಲು ಬೇಡ.  ಬೇಯಿಸಿ ಕೆಂಪಡಿಕೆ ಮಾಡುವವರೆಲ್ಲಾ ಈ ವಿಧಾನವನ್ನೇ ಅಳವಡಿಸಿಕೊಂಡರೆ ಉರುವಲಿನ ಚಿಂತೆ ತಪ್ಪುತ್ತದೆ.