ಭಾರತೀಯರು ವಿವಿಧ ಹಬ್ಬಗಳನ್ನು ತಮ್ಮದೇ ಆದ ವಿಶಿಷ್ಟರೀತಿಯಲ್ಲಿ ಆಚರಿಸುವಂತೆ ಜಾತ್ರೆಗಳನ್ನು ಮತ್ತು ಉರುಸುಗಳನ್ನು ಆಚರಿಸುತ್ತಾರೆ. ಉರುಸುಗಳು ಹಿಂದು ಸಂಸ್ಕೃತಿ ಮತ್ತು ಮುಸ್ಲಿಂ ಸಂಸ್ಕೃತಿಗಳ ಮಧುರ ಮಿಲನದಿಂದ ಹುಟ್ಟಿ ಬೆಳೆದು ಬಂದವುಗಳಾಗಿವೆ. ಪ್ರಾದೇಶಿಕವಾಗಿ ಪ್ರಚಲಿತವಿರುವ ಉರುಸುಗಳ ಆಚರಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಭಾವೈಕ್ಯದ ಹೆಗ್ಗುರುತುಗಳು ಸ್ಪಷ್ಟವಾಗಿ ಗೋಚರಿಸದಿರವು. ಕೆಲವೊಂದು ಉರುಸುಗಳು ಜಾತ್ರೆಗಳಾಗಿ, ಕೆಲವೊಂದು ಜಾತ್ರೆಗಳು ಉರುಸುಗಳಾಗಿ ಬಳಕೆಯಲ್ಲಿವೆ. ಆದರೆ ಜಾತ್ರೆ ಮತ್ತು ಉರುಸುಗಳು ಹಿಂದೂ ಮುಸ್ಲಿಂ ಭಾವೈಕ್ಯದ ಪವಿತ್ರ ಕ್ಷೇತ್ರಗಳಾಗಿವೆಯೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಅಜ್ಮೇರಿನ ಹ| ಖ್ವಾಜಾ ಮೊಯಿನುದ್ದೀನ್ ಚಿಸ್ತಿ, ದಿಲ್ಲಿಯ ಹ| ಶೇಖ ನಿಜಾಮುದ್ದೀನ್ ಔಲಿಯಾರವರ ಉರುಸುಗಳಲ್ಲಿ ಮುಸ್ಲೀಮರಂತೆ ಹಿಂದೂಗಳು ಉತ್ಸಾಹದಿಂದ ಪಾಲ್ಗೊಂಡು ಹರಕೆ ಸಲ್ಲಿಸುತ್ತಾರೆ. ತಬರ್ರು‍ಕ್ (ಪ್ರಸಾದ) ಸ್ವೀಕರಿಸಿ ಪುನೀತರಾದೆವೆಂದು ತೃಪ್ತಿಗೊಳ್ಳುತ್ತಾರೆ.

ಮಕಾನಪುರದ ಜಿಂದೇ ಷಾ ಮದಾರ ಉರುಸಿನಲ್ಲಿ ಹಿಂದೂ-ಮುಸ್ಲೀಮರು ಚಿಕ್ಕ ಮಕ್ಕಳಿಗೆ ಅಂಟಿದ ರೋಗ ರುಜಿನಗಳಿಂದ ಮುಕ್ತಗೊಳಿಸಲು ಬಂಗಾರ ಅಥವಾ ಬೆಳ್ಳಿಯ ಹಾರವನ್ನು ಕೊರಳಲ್ಲಿ ಹಾಕಲು ಹಿಂದೆ-ಮುಂದೆ ನೋಡುವುದಿಲ್ಲ.. ಉರುಸಿನ ದಿನ ನಡೆಯುವ ಕೆಂಡ ತುಳಿಯುವ ಸಂಪ್ರದಾಯ ಹಿಂದೂ ಸಂಸ್ಕೃತಿಯ ಗಾಢ ಪ್ರಭಾವದಿಂದ ಬಂದುದಾಗಿದೆ.

ಮುಂಬಯಿಯ ಹಾಜಿಮಲಂಗ ಬಾಬಾ ದರಗಾದ ಆಡಳಿತವನ್ನು ಒಂದು ಬ್ರಾಹ್ಮಣ ಕುಟುಂಬ ನಡೆಸುತ್ತದೆ. ದರಗಾದಲ್ಲಿ ಮುಸ್ಲಿಂ ಸಂಪ್ರದಾಯದ ಝಿಯಾರತ್‌ನಂತೆ ಒಮ್ಮೆ ಫಾತೆಹಾ ನಡೆದರೆ ಇನ್ನೊಂದು ಹೊತ್ತಿನಲ್ಲಿ ಹಿಂದುಗಳು ಲೋಬಾನದ ಹೊಗೆ ಹಾಕಿ ಪೂಜೆ ಮಾಡುತ್ತಾರೆ.

ಗುಲಬುರ್ಗಾದ ಖ್ವಾಜಾ ಬಂದಾನವಾಜರ ದರಗಾ ಧರ್ಮ ಸಮನ್ವಯ ದೃಷ್ಟಿಗೆ ಪುರಾವೆಯಾಗಿದೆ. ಉರುಸಿನ ಹಿಂದಿನ ದಿನ ನಡೆಯುವ ಸಂದಲ್ ಮೆರವಣಿಗೆಯಲ್ಲಿ ಮಷಾಲ್ (ದೀವಟಿಗೆ) ಹಿಡಿಯುವ ಹಕ್ಕು ಹಿಂದು ಭಕ್ತರದಾಗಿದೆ. ಉರುಸಿನ ದಿನ ಹಿಂದುಗಳು ಮುಸ್ಲೀಮರೊಂದಿಗೆ ಶಾಮೀಲಾಗಿ ಭಕ್ತಿ ಭಾವಾವೇಶದಿಂದ ಹರಕೆ ಸಲ್ಲಿಸುವುದನ್ನು ನೋಡಿದಾಗ ಮೈಮನ ಪುಳಕಿತವಾಗದಿರವು.

ಮುಳುಬಾಗಿಲು ಪ್ರಾಂತದ ಹ| ಬಾಬಾ ಹೈದರವಲಿ ಶಾ ಅವರ ಉರುಸಿನಲ್ಲಿ ಪ್ರದರ್ಶನಗೊಳ್ಳುವ ಕತ್ತಿವರಸೆ, ದೊಣ್ಣೆವರಸೆ, ಕುಸ್ತಿ, ಕವ್ವಾಲಿ ಕಾರ್ಯಕ್ರಮಗಳು ಕೋಮು ಸಾಮರಸ್ಯದ ಪ್ರತೀಕಗಳಾಗಿವೆ. ಗ್ಯಾರವಿ ತಿಂಗಳಿನಲ್ಲಿ ನಡೆಯುವ ಹ| ಮೆಹಬೂಬ ಸುಬಹಾನಿಯವರ ಉರುಸಿನಲ್ಲಿ ಜನಪದ ಕಲೆಗಳ ಮಹಾಪೂರವೇ ಹರಿದು ಬರುವುದನ್ನು ನೋಡಬಹುದು. ರಿವಾಯಿತ ಪದ ಮತ್ತು ಹೆಜ್ಜೆ ಕುಣಿತ ಸ್ಪರ್ಧೆಗಳು ಹಿಂದೂಮುಸ್ಲೀಮರನ್ನು ಒಂದು ಗೂಡಿಸುವ ಪ್ರಮುಖ ಕೊಂಡಿಯಾಗಿವೆ.

ಲಕ್ಷ್ಮೇಶ್ವರದ ದೂಧ ಪೀರಾರ ಉರುಸಿನಲ್ಲಿ ಹೊರಡುವ ಸಂದಲ್ ಮೆರವಣಿಗೆ ಹಿಂದೂ ಬಾಂಧವರ ಮನೆಯಿಂದ ಪ್ರಾರಂಭವಾಗುವುದು. ಅಮವಾಸ್ಯೆ ಮತ್ತು ಪ್ರತಿ ಗುರುವಾರ, ಗಾಳಿ ಪಿಶಾಚಿ ದೆವ್ವಗಳಿಂದ ಪೀಡಿತರಾದ ಜನ ದೂಧ ಪೀರಾರ ಸಮಾಧಿ ದರ್ಶನದಿಂದ ಪುನೀತರಾಗುವುದು ಭಾವೈಕ್ಯದ ಪ್ರತೀಕವಾಗಿದೆ.

ಇಳಕಲ್ಲಿನ ಮುರ್ತುಜಾ ಖಾದ್ರಿಯವರ ಉರುಸಿಗೆ ಸೇರುವ ಮೂರ್ನಾಲ್ಕು ಲಕ್ಷ ಜನರಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಿನದಾಗಿದೆ. ಉರುಸು ನಡೆಸುವ ದರ್ಗಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಹಿಂದೂಗಳೇ ಆಗಿರುವುದು ಮತ್ತು ಉರುಸಿನ ದಿನ ಸಲ್ಲಿಸುವ ಗಂಧ ಪುಷ್ಪಾದಿಗಳ ಸೇವೆಯೂ ಗೌಡ, ಕುಲಕರ್ಣಿ ಚವ್ಹಾಣ ಮನೆತನದವರದಾಗಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನ ಚಾಂಗದೇವರ ಜಾತ್ರೆ, ಶಿರಹಟ್ಟಿಯ ಫಕೀರಸ್ವಾಮಿ ಜಾತ್ರೆ, ಗುಲಬುರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಿಣಿಯ ಮೋನಪ್ಪಯ್ಯನ ಜಾತ್ರೆ ಮತ್ತು ಬೆಳಗಾಂವ ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ಜಾತ್ರೆ ಮುಂತಾದವು ಹಿಂದೂಗಳಿಗೆ ತಮ್ಮ ಬದುಕಿನ ಸಮಸ್ಯಗಳಿಗೆ ಪರಿಹಾರ ಒದಗಿಸುವ ಪುಣ್ಯಕ್ಷೇತ್ರಗಳಾಗಿರುವಂತೆ ಮುಸ್ಲೀಮರಿಗೂ ಆಗಿರುವುದು ಇವುಗಳ ವೈಶಿಷ್ಟ್ಯ.

ಹೀಗೆ ಹಿಂದೂ-ಮುಸ್ಲಿಮರನ್ನು ಒಂದುಗೂಡಿಸುವ, ಮತೀಯ ಸಾಮರಸ್ಯವನ್ನು ಗಟ್ಟಿಗೊಳಿಸುವ, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವ ಉರುಸುಗಳು ಆದರ್ಶ ಭಾರತದ ಏಳಿಗೆಗೆ ಅನಿವಾರ್ಯವಾದ ಮುಖ್ಯ ಸೂತ್ರಗಳಾಗಿವೆಯೆಂದರೆ. ಚಿನ್ನಕ್ಕೆ ಕುಂದಣ ಕೂಡಿಸಿದಂತಾಗುತ್ತದೆ.