ಧರ್ಮದ ದುರ್ಬಳಕೆಯಿಂದಾಗಿ ದೇಶದುದ್ದಕ್ಕೂ ಕೋಮು ದಳ್ಳುರಿ ಹೊತ್ತಿ ನೂರಾರು ಅಮಾಹಕರನ್ನು ಬಲಿತೆಗೆದುಕೊಳ್ಳುವ ಹೃದಯ ವಿದ್ರಾವಕ ಬರ್ಬರ ಕೃತ್ಯಗಳು ದಿನ ನಿತ್ಯದ ಸುದ್ದಿಗಳಾಗುತ್ತಿರುವಾಗ ಹಿಂದೂ ಮುಸ್ಲೀಮರನ್ನು ಭಾವನಾತ್ಮಕವಾಗಿ ಬೆಸೆಯುವ ‘ಉರುಸುಗಳು’ ಭಾವೈಕ್ಯತೆಯ ಸಂಕೇತವಾಗಿ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಇಂದಿಗೂ ಬಳಕೆಯಲ್ಲಿವೆ.

ಉರುಸು ಎಂದರೆ ಮಹಮ್ಮದೀಯ ಸಾಧುಗಳ ಪುಣ್ಯತಿಥಿ ಮತ್ತು ಅಂದು ನಡೆಸುವ ಜಾತ್ರೆ ಎಂದರ್ಥ ಸಾಹಿತ್ಯ ಪರಿಷತ್ ನಿಘಂಟುವಿನಲ್ಲಿದೆ.

[1] ಜಾನಪದ ವಿಶ್ವಕೋಶದಲ್ಲಿ ಮುಸ್ಲಿಂ ಜನಾಂಗದವರು ಆಚರಿಸುವ ಒಂದು ದೊಡ್ಡ ಉತ್ಸವ ಎಂಬರ್ಥ ಕೊಡಲಾಗಿದೆ.[2] ಆದರೆ ಕನ್ನಡ ವಿಶ್ವಕೋಶದಲ್ಲಿ, ಕಿಟೆಲ್ ಶಬ್ದಕೋಶದಲ್ಲಿ ಉರುಸು ಶಬ್ದಕ್ಕೆ ಅರ್ಥವಾಗಲಿ ವಿವರಣೆಯಾಗಲಿ ದೊರೆಯುವುದಿಲ್ಲ. ಅದೇನಿದ್ದರೂ ಉರುಸು ಎಂದರೆ ಪುಣ್ಯತಿಥಿ ಅಥವಾ ಸತ್ತವರ ನೆನಪಿಗಾಗಿ ಆಚರಿಸಲಾಗುವ ಒಂದು ಆಚರಣೆ ಎಂದು ಅರ್ಥೈಸಬಹುದು.

ಹಿನ್ನೆಲೆ :

ಪುಣ್ಯತಿಥಿಯ ಆಚರಣೆ, ಸಮಾಧಿಗಳ ಆರಾಧನೆ, ದರಗಾಗಳ ಝಿಯಾರತ ಭಾರತ ಪಾಕಿಸ್ತಾನ, ಬಂಗ್ಲಾದೇಶ, ಇರಾಕ್ ಮತ್ತು ಅಫಘಾನಿಸ್ತಾನಗಳಲ್ಲಿ ಮಾತ್ರ ಇದೆಯೇ ಹೊರತು ಉಳಿದ ಮುಸ್ಲಿಂ ರಾಷ್ಟ್ರಗಳಲ್ಲಿ ಕಂಡುಬರುವುದಿಲ್ಲ. ಅರಬ್ ರಾಷ್ಟ್ರಗಳಲ್ಲಿ ಪ್ರವಾದಿಗಳ, ಸೂಫಿಸಂತರ, ಮಹಾಪುರುಷರ ಸಮಾಧಿಗಳಿದ್ದರೂ ಅವೆಲ್ಲವನ್ನೂ ಆರಾಧನೆಗೆ ನಿಷಿದ್ಧಗೊಳಿಸಲಾಗಿದೆ. ಆದರೆ ಭಾರತೀಯ ಮುಸ್ಲೀಮರು ಈ ಆರಾಧನಾ ಕ್ರಮವನ್ನು ಕೈಗೊಳ್ಳುವುದಕ್ಕೆ ತಮ್ಮ ನಡುವೆ ಬಾಳಿದ ಸಂತರ, ಮಹಾಪುರುಷರ ಅದ್ಭುತ ಪವಾಡ ಸದೃಶ ಬದುಕಿನ ಮೇಲಿರುವ ಗೌರವ ಮತ್ತು ನೆನಪು ಮುಖ್ಯ ಕಾರಣವಾದರೆ ಪ್ರಾದೇಶಿಕ ಹಿಂದೂ ಸಂಸ್ಕೃತಿಯ ಗಾಢ ಪ್ರಭಾವವು ಇನ್ನೊಂದು ಕಾರಣವಾಗಿದೆ. ಮುಸ್ಲೀಮರಷ್ಟೇ ಹಿಂದೂಗಳು ಸಮಾಧಿ ಸ್ಥಳಗಳಿಗೆ ಭೆಟ್ಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಹರಕೆ ಬೇಡಿಕೊಳ್ಳುತ್ತಾರೆ. ಗೋರಿಗಳಿಗೆ, ದರಗಾಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುವುದು ಆರಾಧನೆ ಸಲ್ಲಿಸುವುದು ನಿಷಿದ್ಧವೆಂದರೂ ಭಾರತದ ಮುಗ್ಧ ಮುಸ್ಲೀಮರು ಹರಕೆ ಹೊರುವುದು, ಚಾದರ ಹೊದಿಸುವುದು, ಹೂವು ಏರಿಸುವದು, ಅಗರಬತ್ತಿ ಹೊತ್ತಿಸುವದು ಮುಂತಾದ ಕ್ರಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ವರ್ಷಕ್ಕೊಮ್ಮೆ ಎರಡು ವರ್ಷಕ್ಕೊಮ್ಮೆ ದರಗಾಗಳಲ್ಲಿ ವಾಡಿಕೆಯಂತೆ ಉರುಸು ನಡೆಸುತ್ತಾರೆ. ಈ ಉರುಸು ನಡೆಸುವ ಸಂಪ್ರದಾಯ ಸೂಫಿ ಪಂಥವು ಭಾರತಕ್ಕೆ ಕಾಲಿಟ್ಟನಂತರ (ಕ್ರಿ.ಶ. ೧೩-೧೪ ನೆಯ ಶತಮಾನದಲ್ಲಿ) ಪ್ರಾರಂಭವಾಗಿರಬೇಕೆಂದು ವಿದ್ವಾಂಸರ ಅಭಿಪ್ರಾಯ.[3]

ದರಗಾಗಳ ಝಿಯಾರತ ಪರ ಮತ್ತು ವಿರೋಧವಾದಗಳು ಮುಸ್ಲಿಂ ಸಮಾಜದಲ್ಲಿ ಆಗಾಗ ನಡೆಯುತ್ತಿದ್ದರೂ ಬಹುಸಂಖ್ಯಾತ ಸಾಮಾನ್ಯ ಮುಸ್ಲೀಮರು ಇದಾವುದಕ್ಕೂ ಚಿಂತಿಸದೆ ತಮ್ಮ ಬದುಕಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದರಗಾಗಳಿಗೆ, ಝಿಯಾರತ್ ನಡೆಸುವುದನ್ನು ವಿಶ್ವಾಸ ಮತ್ತು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಹಿಂದೂಗಳು ಸಹ ಉರುಸುರಗಳಲ್ಲಿ ಪಾಲ್ಗೊಂಡು ಕೋಮುಸೌಹಾರ್ದ ಕಾಪಾಡಿಕೊಂಡು ಬರುವಲ್ಲಿ ಬಹು ಮೂಲ್ಯ ಪಾತ್ರವಹಿಸಿದ್ದಾರೆ. ಹೀಗಾಗಿ ಉರುಸುಗಳು ಒಂದು ರೀತಿಯಿಂದ ಹಿಂದೂ-ಮುಸ್ಲೀಮರನ್ನು ಒಂದಗೂಡಿಸುವ ಪವಿತ್ರ ತಾಣಗಳಾಗಿವೆ. ಜನಪದ ಕಲೆಕಸರತ್ತು ಪ್ರದರ್ಶಿಸುವ ರಂಗಸಜ್ಜಿಕೆಯಾಗಿವೆ. ಎಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಮತೀಯ ಸಾಮರಸ್ಯ ಹುಟ್ಟು ಹಾಕುವ, ಭಾವೈಕ್ಯದ ಬೆಸುಗೆ ಗಟ್ಟಿ ಗೊಳಿಸುವ ಆಚರಣೆಗಳಲ್ಲಿ ಮೊಹರಂ ಹಬ್ಬವನ್ನು ಬಿಟ್ಟರೆ ಉರುಸುಗಳು ಅತ್ಯಂತ ಪ್ರಮುಖವಾಗಿವೆ.

ಭಾರತದ ಉರುಸುಗಳು :

ಭಾರತದಲ್ಲಿ ಪ್ರಚಲಿತವಿರುವ ಪ್ರಸಿದ್ಧವಾದ ಉರುಸುಗಳಲ್ಲಿ ಅಜ್ಮೇರಿನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ, ದಿಲ್ಲಿಯ ಹ| ಶೇಖ್ ನಿಜಾಮುದ್ದೀನ ಔಲಿಯಾ, ಮಕಾನ ಪುರದ ಜಿಂದೇಷಾ ಮದಾರ, ನಾಗೋರದ ಹ| ಖಾದಿರವಲಿ ಸಾಹೇಬ, ಮುಂಬಯಿಯ ಹಾಜಿಮಲಂಗ ಬಾಬಾ, ಗುಲಬರ್ಗಾ ಖ್ವಾಜಾ ಬಂದಾನವಾಜ, ಚಿತ್ತಾಕುಲದ ಹಜರತ್ ಕರಾಮುದ್ದೀನ್ ಷಾವಲಿ, ಮುಳಬಾಗಿಲದ ಹ| ಹೈದರಷಾವಲಿ, ಬಾಗಲಕೋಟಿಯ ಹ| ಮೆಹಬೂಬ ಸುಬಹಾನಿ, ಲಕ್ಷ್ಮೇಶ್ವರದ ದೂದ ಪೀರಾ, ಇಳಕಲ್ಲ ಮುರ್ತು ಜಾ ಖಾದ್ರಿ ಶಿಶುನಾಳದ ಪರೀಫಸಾಹೇಬರ ಉರುಸುಗಳನ್ನು ಹೆಸರಿಸಬಹುದು. ವಿಶೇಷವೆಂದರೆ ಕರ್ನಾಟಕದ ಉರುಸುಗಳಲ್ಲಿ ಜನಪದ ಹಾಡುಗಳನ್ನು, ಜನಪದ ಕಲೆಗಳನ್ನು ಪ್ರದರ್ಶಿಸುವುದ ಕಂಡುಬರುತ್ತದೆ.

ಈ ಸಂದರ್ಭದಲ್ಲಿ ಒಂದು ಮಾತನ್ನು ನೆನಪಿಡುವುದು ಅವಶ್ಯ. ಹ| ಮುಹ್ಮದ ಪೈಗಂಬರರ ಪುಣ್ಯತಿಥಿಯನ್ನು ‘ಬಾರಾವಫಾತ್’ ಎಂಬ ಹೆಸರಿನಿಂದ ಆಚರಿಸಿದರೆ, ಹ| ಇಮಾಮ ಹುಸೇನರು ಕರ್ಬಲಾ ಕಾಳಗದಲ್ಲಿ ಹೋರಾಡಿ ಹುತಾತ್ಮರಾದ ದಿನ (ಕ್ರಿ.ಶ. ೬೮೦ ಮೊಹರಂ ತಿಂಗಳ ೧೦ ನೆಯ ದಿನ) ವನ್ನು ಮೊಹರಂ ಹಬ್ಬವೆಂದು ಗುರುತಿಸುತ್ತಾರೆ. ಆದರೆ ಸೂಪಿ ಸಂತರ, ಮುಸ್ಲಿಂ ಮಹಾಪುರುಷರ ಪುಣ್ಯ ತಿಥಿಯನ್ನು ಅವರ ಹೆಸರಿನ ಉರುಸುಗಳೆಂದು ಕರೆದು ಆಚರಿಸುವುದು ಸಂಪ್ರದಾಯ.

ಆಜ್ಮೇರಿನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ :

ಹಿಂದು ಧರ್ಮದ ತತ್ವಗಳನ್ನು ಇಸ್ಲಾಮೀ ತತ್ವಗಳೊಂದಿಗೆ ಸಮೀಕರಿಸಿ ಎರಡು ಧರ್ಮಗಳನ್ನು ಅತೀ ಸಾಮೀಪ್ಯಕ್ಕೆ ತಂದ ಶ್ರೇಯಸ್ಸು ಭಾರತದ ಸೂಫಿ ಸಂತರಿಗೆ ಸಲ್ಲುತ್ತದೆ. ಈ ಸೂಫಿ ಸಂತರಲ್ಲಿ ಚಿಸ್ತಿಯಾ ಪಂಗಡದ ತತ್ವಗಳು ಭಾರತದ ಸಾಮಾನ್ಯ ಮುಸ್ಲೀಮರ ನೈತಿಕ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿ ವೈಯಕ್ತಿಕ ನಡುವಳಿಕೆಗಳಲ್ಲಿ ಮಹತ್ವದ ತಿರುವು ನೀಡಿದ್ದು ಗಮನಾರ್ಹ ಹಿಂದೂ ಭಕ್ತಿ ಪಂಥದ ಮೇಲೂ ಪ್ರಮುಖ ಪರಿಣಾಮ ಬೀರಿದವು ಪರಸ್ಪರ ಕೊಂಡುಕೊಳ್ಳುವಿಕೆಯಿಂದಾಗಿ ಸಮಾಧಿಸ್ಥಳಗಳು ಮುಸ್ಲೀಮರಿಗೆ ಮತ್ತು ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳಗಳಾಗಿ ಪರಿಣಮಿಸಿವೆ.

ಭಾರತದ ಸೂಫಿಸಂತರಲ್ಲಿ ಆಜ್ಮೇರಿದ ಖ್ವಾಜಾ ಮೊಯಿನುದ್ದೀನ ಚಿಸ್ತಿ ಅಗ್ರಗಣ್ಯರು. ಇವರ ದರಗಾ (ಗೋರಿ) ರಾಜಸ್ಥಾನ ರಾಜ್ಯದ ಆಜ್ಮೇರಿನಲ್ಲಿದ್ದು ಇಂದಿಗೂ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ.

ಒಡೆದು ಹೋದ ಬದುಕು ಬಯಕೆಗಳನ್ನು ಪುನಃ ರೂಪಿಸಬಲ್ಲವರು ಎಂಬ ಖ್ಯಾತಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರದು. ಇವರು ಸಮಾಧಿಯಾದ ದಿನದಂದು ಅಜ್ಮೇರಾದಲ್ಲಿ ನಡೆಯುವ ವಾರ್ಷಿಕ ಉರುಸು ದೇಶ ವಿದೇಶಗಳಲ್ಲಿ ಹೆಸರುವಾಸಿ ಲಕ್ಷೋಪಲಕ್ಷ ಭಕ್ತರು ಪ್ರಪಂಚದ ನಾನಾ ಭಾಗಗಳಿಂದ ಆಗಮಿಸಿ ಚಾದರ ಹೊದಿಸುವ ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ.

ಹಿಜರಿ ಶಕೆ ೫೩೦ (ಕ್ರಿ.ಶ. ೧೧೩೨) ಇರಾಣ ದೇಶದ ಸಿಸ್ತಾನ ಪ್ರಾಂತದಲ್ಲಿ ಜನಿಸಿದ ಖ್ವಾಜಾ ಮೊಯಿನುದ್ದೀನ್ ತಮ್ಮ ೮೦ ವರ್ಷಗಳ ಜೀವನದ ಕೊನೆಯ ಎರಡು ದಶಕಗಳಿಗಿಂತಲೂ ಹೆಚ್ಚಿನ ಸಮಯವನ್ನು ಭಾರತದಲ್ಲಿ ಕಳೆದರು. ಅಪಾರ ಭಕ್ತರ ನಂಬಿಕೆಗೆ ಪಾತ್ರರಾದ ಇವರಿಗೆ ಮರಣಾನಂತರ ಅವರ ಕಾರ್ಯಕ್ಷೇತ್ರವಾದ ಅಜ್ಮೇರದಲ್ಲಿ ಸಮಾಧಿಮಾಡಿ ಪ್ರತಿವರ್ಷ ಉರುಸು ನಡೆಸುತ್ತಾರೆ.[4]

ರಾಜಧಾನಿಯದೊರೆಗಳು, ಸರದಾರರು, ಸಿರಿವಂತರು ಶೇಖ ನಿಜಾಮುದ್ದೀನರಿಗೆ ತರತರದ ಭಷ್ಯ ಭೋಜ್ಯ ಮತ್ತು ವಸ್ತ್ರಗಳನ್ನು ಕಾಣಿಕೆಯ ರೂಪದಲ್ಲಿ ದಿನ ನಿತ್ಯ ಕಳಿಸುತ್ತಿದ್ದರು ಅದರಲ್ಲಿಯ ಒಂದು ಅಗಳು ಅನ್ನಕೂಡ ತಾವು ಮುಟ್ಟದೆ ಎಲ್ಲವನ್ನು ಅಲ್ಲಿ ಉಪಸ್ಥಿತರಿದ್ದ ಜರನಲ್ಲಿ ಹಂಚುತ್ತಿದ್ದರು.

ಸ್ವತಃ ಕವಿಗಳಾಗಿದ್ದ ನಿಜಾಮುದ್ದೀನರು ಕ್ರಿಶ ೧೩೨೫ ರಲ್ಲಿ ಇಹಲೋಕ ತ್ಯಜಿಸಿದರು. ಆ ದಿನ ದಿಲ್ಲಿಯಲ್ಲಿ ಅದ್ದೂರಿಯಿಂದ ಉರುಸು ನಡೆಯುತ್ತದೆ. ಉರುಸಿನಲ್ಲಿ ಹಿಂದೂ-ಮುಸ್ಲೀಮರು ಪಾಲ್ಗೊಂಡು ತಮ್ಮ ಹರಕೆಯನ್ನು ಸಲ್ಲಿಸುವುದುಂಟು.

ಮಕಾನಪುರದ ಜಿಂದೇಷಾ ಮದಾರ :

ಸೂಫಿ ಸಂತರಲ್ಲಿ ಒಬ್ಬರಾದ ಜಿಂದೇಷಾ ಮದಾರ ಅವರ ದರಗಾ ಉತ್ತರ ಪ್ರದೇಶದ ಮಕಾನಪುರದಲ್ಲಿದೆ. ಕ್ರಿಶ ೧೦೫೦ ರಲ್ಲಿ ಅಲೆಪ್ಪುನಲ್ಲಿ ಜನಿಸಿದ ಜಿಂದೇಷಾ ಮದಾರ ಭಾರತಕ್ಕೆ ಬಂದು ಮಕಾನಪುರದಲ್ಲಿ ತೀರಿಕೊಂಡರು ಇಂದು ಅವರ ದರಗಾ ಭಾರತದ ನಾನಾ ಕಡೆಗಿನ ಯಾತ್ರಿಕರನ್ನು ಆಕರ್ಷಿಸುತ್ತದೆ.

ಜಿಂದೇಷಾ ಮದಾರ ಅವರು ತಮ್ಮ ಗೋರಿಯಲ್ಲಿ ಪ್ರವಾದಿ ಹ| ಮುಹ್ಮದರ ಕೃಪೆಯಿಂದ ಇನ್ನೂ ಜೀವಂತವಾಗಿರುವರೆಂದು ಜನರ ನಂಬಿಕೆ. ಸದಾ ಕಪ್ಪು ಬಟ್ಟೆ ಧರಿಸುತ್ತಿದ್ದ ಇವರು ಇಂದ್ರಿಯ ಸಂಗ್ರಹಿಸಿ ಪೂರ್ಣಕಾದು ಬದುಕುತ್ತಿದ್ದರು ಇದಾವುದನ್ನು ತಿಳಿಯದೆ ಮಹಿಳೆಯೊಬ್ಬಳು ಸಂತರ ದರಗಾದಲ್ಲಿ ಪ್ರವೇಶಮಾಡಿದಳು ಭಯಂಕರ ರೋಗಕ್ಕೆ ತುತ್ತಾಗಿದ್ದ ಅವಳು ದರಗಾದಲ್ಲಿಯೇ ಸತ್ತದ್ದಕ್ಕಾಗಿ ಅಂದಿನಿಂದ ದರಗಾದಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿಷೇದಿಸಲಾಯಿತು. ಜಮಾದಿಲ್ ಅವ್ವಲ್ ಮಾಸದ ೧೭ನೆಯ ದಿನ ದೈವಾದೀನರಾದರು. ಪ್ರತಿವರ್ಷ ಆ ದಿನದಂದು ವಿಜ್ರಂಭಣೆಯಿಂದ ಉರುಸು ನಡೆಯುತ್ತದೆ.

ಸಂತರು ಚಿಕ್ಕಮಕ್ಕಳನ್ನು ಮಾರಕ ರೋಗಗಳಿಂದ ರಕ್ಷಿಸುವಲ್ಲಿ ಸಿದ್ಧಹಸ್ತರಾಗಿದ್ದರಂತೆ ಆದುದರಿಂದ ಅವರ ಹೆಸರಿನಲ್ಲಿ ಬಂಗಾರ ಅಥವಾ ಬೆಳ್ಳಿಯ ಹಾರವನ್ನು ಕೊರಳಲ್ಲಿ ಹಾಕಲು ಎಂಥ ಭಯಂಕರ ರೋಗಗಳಿದ್ದರೂ ಸರಿ ಅವರು ಗುಣಮುಖರಾಗುವರೆಂಬ ನಂಬಿಕೆ ಜನರಲ್ಲಿದೆ. ಆದರೆ ಉರುಸಿನ ದಿನ ಮಾದಲಿ (ಸಿಹಿ ಅಡಿಗೆ) ಮಾಡಿ ‘ಚಿರಾಗ್’ (ದೀಪ) ಹಚ್ಚಿ ಫಾತಿಹಾ ಮಾಡಿಸಿ ಸಂತರ ಹೆಸರಿನಲ್ಲಿ ಕೊರಳಿಗೆ ಹಾರ ಹಾಕಬೇಕು. ದೆವ್ವ ಭೂತ ಪಿಶಾಚಿ ಮುಂತಾದ ಪೀಡೆಗಳಿಂದ ಬಿಡುಗಡೆ ಪಡೆಯಲು ಸಾವಿರಾರು ಯಾತ್ರಿಕರು ದರಗಾಕ್ಕೆ ಭೆಟ್ಟಿಕೊಟ್ಟು ಹರಕೆ ಹೊರವುದುಂಟು.

ಉರುಸಿನ ದಿನದಂದು ಬೆಂಕಿಯಲ್ಲಿ ನಡೆಯುವುದು ಇಲ್ಲಿನ ಒಂದು ಧಾರ್ಮಿಕ ಸಂಪ್ರದಾಯ. ಸ್ವಚ್ಛ ಶುದ್ಧ ಬಟ್ಟೆ ಧರಿಸಿದ ಫಕೀರರು ‘ದವ ಮದಾರ ದಮ್ ಮದಾರ’ ಎಂದು ಉದ್ಛೋಷ ಮಾಡುತ್ತ ನಿಗಿನಿಗಿ ಕೆಂಡದಲ್ಲಿ ನಡೆಯುವುದು, ಅನಂತರ ಅವರ ಪಾದಗಳನ್ನು ಹಾಲು ಮತ್ತು ನೀರಿನಿಂದ ತೊಳೆದು ಸ್ವಚ್ಛಮಾಡುವ ದೃಶ್ಯ ರೋಚಕವಾದುದು. ಈ ಅಗ್ನಿಹಾಯುವ ಅಥವಾ ಕೆಂಡ ತುಳಿಯುವ ಸಂಪ್ರದಾಯ ಹಿಂದುಗಳಲ್ಲಿ ಮತ್ತು ಹಿಂದೂ ಮುಸ್ಲೀಮರು ಸೇರಿ ಆಚರಿಸುವ ಮೊಹರಂ ಹಬ್ಬದಲ್ಲಿ ರೂಢಿಯಲ್ಲಿದೆ.[5]

ನಾಗೋರದ ಖಾದಿರವಲಿ ಸಾಹೇಬ :

ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರ ಜಿಲ್ಲೆಯ ನಾಗೋರದಲ್ಲಿ ಸೂಫಿಸಂತ ಖಾದಿರವಲಿ ಸಾಹೇಬರ ದರಗಾ ಇದ್ದು ಹಿಂದೂ ಮುಸ್ಲೀಮರಿಗೆ ಪುಣ್ಯಸ್ಥಳವಾಗಿದೆ. ಸಂತರ ಮೇಲಿನ ಭಕ್ತಿಯ ಪ್ರತೀಕವಾಗಿ ತಂಜಾವೂರ ರಾಜನು ಇದನ್ನು ಕಟ್ಟಿಸಿದನೆಂದು ಹೇಳಲಾಗುತ್ತದೆ. ಕಟ್ಟಡ ಬಹು ಆಕರ್ಷಕವಾಗಿದೆ.

ಜಮಾದಿಲ್ ಆಖಿಲ್ ಇಂಗಳಿನ ಹತ್ತನೆಯ ದಿನ ಖಾದಿರವಲಿಯವರ ಉರುಸು ನಡೆಯುತ್ತದೆ. ಉರುಸಿನ ದಿನ ಮುಸ್ಲೀಮ ಬಾಂಧವರು ಸಿಹಿತಿಂಡಿ ತಯಾರಿಸಿ ಚಿರಾಕ್ ಬೆಳಗಿನ ಸಂತರ ಹೆಸರಿನಲ್ಲಿ ಫಾತಿಹಾ ಮಾಡಿಸುತ್ತಾರೆ. ಶ್ರದ್ಧಾ ಭಕ್ತಿಯಿಂದ ತಮ್ಮ ಸಮಸ್ಯೆಗಳ ನಿವಾರಣೆಗೆ ದುಆ ಬೇಡಿಕೊಳ್ಳುತ್ತಾರೆ.

ಖಾದಿರವಲಿ ಸಾಹೇಬರು ತಮ್ಮ ಜೀವಿತ ಕಾಲದಲ್ಲಿ ಅನೇಕ ಪವಾಡತಳನ್ನು ಮಾಡಿ ಪವಾಡ ಪುರುಷರೆನಿಸಿದ್ದರೂ ಮುಳುಗುತ್ತಿದ್ದ ಹಡಗ ಉಳಿಸಿದುದು, ಹೆಣ್ಣು ಮಗಳ ಮಾನ ಕಾಪಾಡಿದುದು-ಮುಂತಾದ ಪವಾಡಗಳು ಸಂತರ ಚರಿತ್ರೆಯ ಸುತ್ತ ಹೆಣೆದುಕೊಂಡಿವೆ. ಫಕೀರರು ತಮ್ಮ ಮೂಲಪುರುಷ ಖಾದಿರವಲಿಯೆಂದು ಹೇಳಿಕೊಂಡು ಪ್ರತಿವರ್ಷ ಉರುಸಿನಲ್ಲಿ ನೆರೆಯುವುದು ಕಂಡುಬರುತ್ತದೆ.

ಮುಂಬಯಿಯ ಹಾಜಿಮಲಂಗ ಬಾಬಾ :

ಮುಂಬಯಿ ಬಳಿ ಹಾಜಿಮಲಂಗನಲ್ಲಿ ಹಾಜಿಮಲಂಗ ಬಾಬಾರವರ ದರಗಾ ಇದ್ದು ಹಿಂದು ಮುಸ್ಲೀಮರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ದರಗಾದ ಆಡಳಿತವನ್ನು ಒಂದು ಬ್ರಾಹ್ಮಣ ಕುಟುಂಬ ನಡೆಸುತ್ತದೆ. ಇಲ್ಲಿ ಮುಸ್ಲಿಂ ಸಂಪ್ರದಾಯದ ಝಿಯಾರತನಂತೆ ಒಮ್ಮೆ ಫಾತಿಹಾ (ಆರಾಧನೆ) ನಡೆದರೆ ಇನ್ನೊಂದು ಹೊತ್ತಿನಲ್ಲಿ ಹಿಂದುಗಳು ಲೋಬಾನದ ಹೊಗೆ ಹಾಕಿ ಪೂಜೆ ಮಾಡುತ್ತಾರೆ.

ದರಗಾ ಕುರಿತು ಸಾಕಷ್ಟು ಮೂಢನಂಬಿಕೆಗಳು, ಐತಿಹ್ಯಗಳು ಜನಮನದಲ್ಲಿದ್ದರೂ ಹಿಂದೂ ಮುಸ್ಲೀಮರು ಒಂದಾಗಿ ತಮ್ಮ ಬದುಕಿನ ಸಮಸ್ಯೆಗಳನ್ನು ಹಾಜಿಮಲಂಗ ಬಾಬಾರವರಿಗೆ ಹೇಳಿಕೊಂಡು ಪರಿಹಾರ ದೊರಕಿಸಿಕೊಡಲು ವಿನೀತರಾಗಿ ಒತ್ತಾಯಿಸಲು ಪ್ರಾರ್ಥಿಸುತ್ತಾರೆ. ಬೇಡಿಕೆ ಪೂರ್ಣಗೊಂಡರೆ ಹರಕೆ (ಮನ್ನತ್) ತೀರಿಸಿ ತೃಪ್ತರಾಗುತ್ತಾರೆ.

ಗುಲಬುರ್ಗಾದ ಖಾಜಾ ಬಂದಾನವಾಜ :

ಕರ್ನಾಟಕದಲ್ಲಿ ಆಗಿಹೋದ ಮುಸ್ಲಿಂ ಮಹಾಪುರುಷರಲ್ಲಿ ಅತ್ಯಂತ ಸುಪ್ರಸಿದ್ಧರೆಂದರೆ ಹ| ಖ್ವಾಜಾ ಬಂದಾನವಾಜ. ಇವರಿಂದಾಗಿ ಗುಲಬುರ್ಗಾ ನಗರ ಕೇವಲ ದಕ್ಷಿಣ ಭಾರತದ ಜನರನ್ನು ಅಷ್ಟೆ ಅಲ್ಲ ಭಾರತದ ನಾನಾಭಾಗಗಳಿಂದಲೂ ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತದೆ.

ಖ್ವಾಜಾ ಬಂದಾನವಾಜರು ಹ| ಮುಹ್ಮದ ಪೈಗಂಬರ ಅವರ ವಂಶದಲ್ಲಿ ೨೨ನೆಯ ಪೀಳಿಗೆಯವರಾಗಿ ಜನಿಸಿದರು. ಇವರ ಪೂರ್ಣ ಹೆಸರು ಅಬುಲ್ ಫತೇಹ ಸದರುದ್ದೀನ್ ವಲಿಯುಲ್ ಅಕ್ಬರು ಸಾದಿಖ್ ಸಯ್ಯದ್ ಮುಹ್ಮದ ಹುಸೇನಿ ಗೇಸುದರಾಜ ಷಾಬಾಜ ಬಂದಾನವಾಜ ಆದರೆ ದೇಶದ ತುಂಬೆಲ್ಲ ಪ್ರಖ್ಯಾತವಾದ ಹೆಸರು ಖ್ವಾಜಾ ಬಂದಾನವಾಜ ಇವರ ತಂದೆ ಸಯ್ಯದ್ ಯುಸೂಫ ಹುಸೇನಿ, ತಾಯಿ ಸಯಿದಾ ಬೀಬಿ. ಬಂದಾನವಾಜರು ಹಿಜಿರಿ ಸಂವತ್ಸರದ ೭೨೧ ನೆಯ (ಕ್ರಿ.ಶ. ೧೩೨೧) ರಜಬ್ ತಿಂಗಳಿನ ೪ನೆಯ ದಿನ ಜನಿಸಿದರು. ೪೦ ವರ್ಷ ವಯಸ್ಸಿನಲ್ಲಿ ಬೀಬಿ ರಜಾಖಾತೂನ ಎಂಬವರೊಂದಿಗೆ ಮದುವೆಯಾದರು.

ಮಗಲ್ ಚಕ್ರವರ್ತಿ ಮುಹ್ಮದ ಬಿನ್ ತುಗಲಕನ ಆಜ್ಞೆಯಂತೆ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದಿಗೆ ವರ್ಗಾಯಿಸಿದಾಗ ರಾಜಾಜ್ಞೆಯಂತೆ ದಕ್ಷಿಣ ಭಾರತಕ್ಕೆ ವಲಸೆ ಬಂದಿದ್ದರು. ದಕ್ಷಿಣದಲ್ಲಿ ಕ್ರಿ.ಶ. ೧೩೯೭ ರಲ್ಲಿ ಆಳುತ್ತಿದ್ದ ಫಿರೋಜಷಾ ಬಹಮನಿ ಸುಲ್ತಾನ ಈ ಸೂಫಿ ಸಂತರ ಬಗ್ಗೆ ತಿಳಿದು ಉಂಬಳಿಗಳನ್ನು ಕೊಟ್ಟು ಗೌರವಾದರಗಳೊಂದಿಗೆ ಗುಲಬುರ್ಗಾಕ್ಕೆ ಆವ್ಹಾನಿಸಿದ. ಚಸ್ತಿಯಾ ಪಂಗಡದ ಇತರ ಸಂತರಂತೆ ಬಂದಾನವಾಜರು ರಾಜಾಶ್ರಯವನ್ನು ತಿರಸ್ಕರಿಸದೆ ಹೋದದ್ದು ಒಂದು ವಿಶೇಷ, ಇವರು ಗುಲಬುರ್ಗಾದಲ್ಲಿ ೨೨ ವರ್ಷ ಜೀವಿಸಿದ್ದು ಹಿಜರಿ ಸನ್ ೮೨೫ (ಕ್ರಿ.ಶ. ೧೪೩೨) ರ ಜಿಲ್ಕೈದ ತಿಂಗಳ ೧೬ನೆಯ ದಿನ ಸೋಮವಾರ ಅಲ್ಲಾಹನ ಸನ್ನಿದಾನ ಸೇರಿದರು. ಸುಲ್ತಾನ ಅಹ್ಮದ ಷಾ ಬಂದಾನವಾಜರ ಸಮಾಧಿಯ ಸುತ್ತ ಭವ್ಯವಾದ ಗುಂಬಜವುಳ್ಳ ಕಟ್ಟಡವನ್ನು ಪ್ರಾರಂಭಿಸಿದನು. ಅವನ ಮಗನಾದ ಸುಲ್ತಾನ ಅಲ್ಲಾವುದ್ದೀನನ ಆಳ್ವಿಕೆಯ ಕಾಲದಲ್ಲಿ ಕಟ್ಟಡದ ನಿರ್ಮಾಣ ಮುಕ್ತಾಯವಾಯಿತು. ಗಾರೆ ಮತ್ತು ಚಿತ್ರಶಿಲ್ಪ ಕೆಲಸವನ್ನು ಸುಲ್ತಾನ ಇಬ್ರಾಹಿಂ ಕುತುಬ್ ಷಹ ಮಾಡಿಸಿದ[6] ಖ್ವಾಜಾ ಬಂದಾನವಾಜರು ಕೇವಲ ಮಹಾನ್ ಸೂಫಿಸಂತರು ಮಾತ್ರ ಆಗಿರಲಿಲ್ಲ ವಿಪುಲ ಗ್ರಂಥಗಳನ್ನು ರಚಿಸಿದ ಲೇಖಕರು ಆಗಿದ್ದರು. ಉರ್ದು, ಪಾರ್ಸಿ ಮತ್ತು ಅರಬ್ಬೀ ಭಾಷೆಗಳಲ್ಲಿ ಗ್ರಂಥಗಳನ್ನು ಬರೆದ ಕೀರ್ತಿ ಇವರದಾಗಿದೆ. ಇವರು ರಚಿಸಿದ ಕೃತಿಗಳಲ್ಲಿ ಪ್ರಮುಖವಾಗಿಮೇರಾಜುಲ್ ಆಷಖೀನ್, ಜವಾಮೆ ಉಲ್ ಕಲಾಮ್, ಅದಾಬುಲ್ ಮುರಿದೀವ್, ಮಷಾಯ ಖುಲ್ ಅನ್ವರ್, ಅಸ್ಮಾಉಲ್ ಇಸ್ರಾರ್, ಖಿಲಾಫತ್ ನಾಮಾ, ಖಾತಿಮಾ, ಚಕ್ಕಿನಾಮಾ, ತಿಲಾವತುಲ್ ಮಜೀದ್, ಷಿಕಾರನಾಮಾ ಮುಂತಾದವುಗಳನ್ನು ಹೆಸರಿಸಬಹುದು.

ಗುಲಬುರ್ಗಾದಲ್ಲಿ ಬಂದಾನವಾಜರ ದರಗಾ ಚಾರಿತ್ರಿಕ ಹಾಗು ವಾಸ್ತುಶಿಲ್ಪದ ದೃಷ್ಟಿಯಿಂದ ನೋಡಬೇಕಾದ ಸ್ಥಳ. ಅಮೃತಶಿಲೆಯ ಹೊದಿಕೆಯಲ್ಲಿ ಕಣ್ಣು ಸೆಳೆಯುವ ಸಂತರ ಸಮಾಧಿ ಅದರ ಮೇಲೆ ರೇಶಿಮೆಯ ಹೊದಿಕೆ ಮತ್ತು ಭಕ್ತರು ಅರ್ಪಿಸಿದ ಹೂವಿನ ಗಲ್ಲೀಪ, ಸುತ್ತ ಮುತ್ತ ಪ್ರಶಾಂತ ಪರಿಸರ ಇವೆಲ್ಲ ಭಕ್ತರಿಗೆ ಭಾವುಕರಿಗೆ ಸುಖ ಸಂತೃಪ್ತಿಯನ್ನು ನೀಡುತ್ತವೆ. ಈ ಗುಂಬಜಿನಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಬಾಗಿಲಿನಿಂದಲೇ ಕಾಣುವ ಬಂದಾನವಾಜರ ಗೋರಿಯನ್ನು ನೋಡಿ ಗೌರವ ಸಲ್ಲಿಸಬಹುದು.

ಬಂದಾನವಾಜರು ಪೈಂಗಬರವಾಸಿಗಳಾದ ಪುಣ್ಯ ದಿನದಂದು ‘ಉರುಸು’ ಸಮಾರಂಭ ನೆರವೇರುತ್ತದೆ. ಜಾತಿ ಮತ ಬೇಧವಿಲ್ಲದೆ ಜನ ಸೇರುತ್ತಾರೆ ‘ಸಮಾ’ ಭಜನಾ ಮೇಳಗಳು ಏರ್ಪಡುತ್ತವೆ. ಅಲ್ಲಾಹನ, ಅಲ್ಲಾಹನ ದೂತರ, ಸೂಫಿ ನಂತರ ಗುಣಗಾನದ ಕವ್ವಾಲಿ ಮತ್ತು ಗಜಲ್‌ಗಳು ನಡೆಯುತ್ತವೆ. ಬಂದಾನವಾಜರ ಧರ್ಮ ಸಮನ್ವಯ ದೃಷ್ಟಿಗೆ ಸಾಕ್ಷಿಯಾಗಿ ಮುಸ್ಲೀಮರಂತೆ ಹಿಂದೂಗಳು, ಜೈನರು ಇದ್ದಾರೆ. ಉರುಸು ಪ್ರಾರಂಭದಲ್ಲಿ ಗುಮ್ಮಟಕ್ಕೆ ‘ಝೇಲಾ’ ಪುಷ್ಟಗುಚ್ಚ ಏರಿಸುವ ಸಂದರ್ಭದಲ್ಲಿ ಹಚ್ಚುವ ಸಂದಲ್ (ಗಂಧ) ವನ್ನು ದರಗಾಕ್ಕೆ ಒಯ್ಯುವಾಗ ಮಷಾಲ್ (ದೀವಟಿಗೆ) ಹಿಡಿಯುವ ಬಾಬು ಹಿಂದೂ ಭಕ್ತರದಾಗಿದೆ. ಇಂಥ ಸಾಮರಸ್ಯ ಸೂಚಕ ಸಂಪ್ರದಾಯ ಉರುಸು ಆರಂಭವಾದಂದಿನಿಂದ ಇರುವುದಾಗಿ ತಿಳಿದು ಬರುತ್ತದೆ. ನಗರದ ಪ್ರಮುಖ ಹಿಂದು ಕುಟುಂಬಗಳು ನೈವೇದ್ಯ ಪೂಜೆ ಸಲ್ಲಿಸುವುದನ್ನು ಕಾಣಬಹುದು. ಹೀಗೆ ಬಂದಾನವಾಜರು ಜೀವಿಸಿದ್ದಾಗ ಮಹಾವ್ಯಕ್ತಿಯಾಗಿ ಈಗಲೂ ಮಹಾಶಕ್ತಿಯಾಗಿ ಸಮಸ್ತ ಜಾತಿ ಜನಾಂಗದ ಜನ ಮನದಲ್ಲಿ ಹಚ್ಚಹಸಿರಾಗಿದ್ದಾರೆ.

ಚಿತ್ತಾಕುಲದ ಷಾ ಕರಾಮತ್ ಉದ್ದೀನ್ :

ಶಿವಶರಣರು, ಹರಿದಾಸರು ಸೂಫಿಸಂತರು ದೇವರನ್ನು ಕಾಣುವ ಅನೇಕ ಮಾರ್ಗಗಳನ್ನು ಶೋಧಿಸಿ ಪ್ರತಿಪಾದಿಸಿ ಅವುಗಳಲ್ಲಿ ಭಕ್ತಿ ಪಂಥವೇ ಶ್ರೇಷ್ಟವಾದುದೆಂದು ನಂಬಿದ್ದರು. ಮತ್ತು ದೇಶದ ಐಕ್ಯತೆಗೆ ಸಹಕಾರಿಯೆಂದು ಭಾವಿಸಿದ್ದರು ಸೂಫಿಸಂತರಲ್ಲಿ ಹ| ಪೀರ್ ಷಾ ಶಮ್ ಸುದ್ದೀನ್ ಉರ್ಫ ಷಾ ಕರಾಮತ್ ಉದ್ದೀನ್ ಒಬ್ಬರು.

ಗೌಸ ಆಜಮ್ ದಸ್ತಗೀರ ಅಬ್ದುಲ್ ಖಾದಿರ್ ಜಿಲಾನಿ ಅವರ ಹನ್ನೊಂದನೆಯ ಪೀಳಿಗೆಯವರಾದ ಕರಾಮತ್ ಉದ್ದೀನ್ ಅವರು ೩೬೧ ವರ್ಷಗಳ ಹಿಂದೆಯೇ ಕಾರವಾರ ಜಿಲ್ಲೆಯ ಚಿತ್ತಾಕುಲ (ಸದಾಶಿವಗಡ)ದಲ್ಲಿ ನೆಲೆಸಿ ಸಮಾಜ ಸೇವೆಯಲ್ಲಿ ನಿರತವಾಗಿ ಕೊನೆಯುಸಿರೆಳೆದರು. ಬಿಜಾಪುರದ ಅಲಿ ಆದಿಲ್ ಷಾ ಉಂಬಳಿಯಾಗಿ ನೀಡಿದ ವಿಶಾಲ ಸ್ಥಳದಲ್ಲಿ ಅವರ ಗೋರಿ (ಸಮಾಧಿ) ನಿರ್ಮಿಸಲಾಗಿದ್ದು ಪ್ರತಿವರ್ಷ ಉರುಸು ನಡೆಯುತ್ತದೆ.

ಈಗಲೂ ಚಿತ್ತಾಕುಲದ ಸುತ್ತ ಮುತ್ತಲಿನ ಜನ, ಸಂತರು ಜೀವಿತ ಕಾಲದಲ್ಲಿ ಮಾಡಿದ ಸಮಾಜಕಾರ್ಯಗಳನ್ನು ಪವಾಡಗಳನ್ನು ನೆನಸುತ್ತಾರೆ. ಬಿಜಾಪುರ ಬರಗಾಲದಿಂದ ತತ್ತರಿಸುತ್ತಿದ್ದಾಗ ಮಾನವೀಯ ಮೌಲ್ಯಗಳನ್ನು ಮೆರೆದು ಜನರು ಕಷ್ಟನಷ್ಟಗಳನ್ನು ನಿವಾರಿಸಿದುದು ಮೆಚ್ಚುವಂತಹದು. ಅಲಿ ಆದಿಲ್ ಷಾ ದೊರೆ ಸಂತರ ಕುರಣೆಯಿಂದ ಎರಡು ಗಂಡು ಮಕ್ಕಳನ್ನು ಪಡೆದುದು, ಸೂಪಾದಲ್ಲಿ ಲಿಂಗಾಯತ ಸಮಾಜದವರು ಪೂಜಿಸುತ್ತಿದ್ದ ಎತ್ತೊಂದು ಸತ್ತಾಗ ಅದಕ್ಕೆ ಜೀವದಾನ ಮಾಡಿ ಪುನಃ ಬದುಕಿಸಿದುದು ಅವಿಸ್ಮರಣೀಯ. ಪೋರ್ತುಗೀಜ ಸೇನಾನಿ ಗೋರಿಯಲ್ಲಿ ಸಂಪತ್ತು ಸಿಗುವುದೆಂಬ ದುರಾಶೆಯಿಂದ ಅಗೆದಾಗ ರಕ್ತಕಾರಿ ಮರಣಹೊಂದಿದನು.ಕ್ರಿ.ಶ. ೧೬೬೫ರಲ್ಲಿ ಅಬ್‌ಸಿನಿಯಾ ರಾಜನು ಪುನಃ ಗೋರಿಯನ್ನು ಕಟ್ಟಿಸಿ ಕರಾಮತ್ ಉದ್ದೀನ್‌ರ ಕರುಣೆ ಸಂಪಾದಿಸಿದ[7] ಬಗದಾದ್‌ನಿಂದ ಕರ್ನಾಟಕಕ್ಕೆ ಬಂದ ಸೂಫಿ ಸಂತ ಹ| ಶೇಖ ಶಮ್‌ಸುದ್ದೀನ್ ಷಾರ ಚರಿತ್ರೆ ನಂಬಿಕೆ ಪವಾಡ ಹಾಗೂ ದರಗಾದ ಮಹಿಮೆ ಅಪಾರವಾದುದು. ಪ್ರತಿವರ್ಷ ಸಫರ ತಿಂಗಳಿನ ೧೫ ನೆಯ ದಿನ ಸಂತರ ಉರುಸು ಚಿತ್ತಾಕುಲದಲ್ಲಿ ನಡೆಯುತ್ತದೆ. ಎಲ್ಲ ಜಾತಿ ಜನಾಂಗದ ಜರನು ಉತ್ಸಾಹದಿಂದ ‘ಉರುಸ್’ನಲ್ಲಿ ಪಾಲ್ಗೊಂಡು ಬೇಡಿಕೊಂಡ ಹರಕೆಗಳನ್ನು ಪೂರೈಸಿ ಪುನೀತರಾಗುತ್ತಾರೆ.

ಮುಳಬಾಗಿಲ ಹ| ಬಾಬಾ ಹೈದರವಲಿ :

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ನಡೆಯುವ ಹೈದರವಲಿಯವರ ಉರುಸು ತುಂಬ ಪ್ರಾಚೀನವಾದುದು ಮತ್ತು ಪ್ರಸಿದ್ಧವಾದುದು. ಮುಳುಬಾಗಿಲಿನಲ್ಲಿ ಹ| ಬಾಬಾ ಹೈದರವಲಿ ಅವರ ದರಗಾ ಇದ್ದು, ಇದು ಸುಮಾರು ೮೦೦ ವರ್ಷಗಳಷ್ಟು ಹಳೆಯದು.[8] ಇರಾನ್ ದೇಶದಿಂದ ಭಾರತಕ್ಕೆ ವಲಸೆ ಬಂದ ಬಾಬಾ ಹೈದರ ಅಲಿಯವರು ಮುಳುಬಾಗಿಲಿನಲ್ಲಿ ಕೊನೆಯುಸಿರೆಳೆದನು. ಅಂದಿನಿಂದ ಈಚೆಗೆ ಅವರ ಹೆಸರಿನಲ್ಲಿ ಉರುಸು ನಡೆಯುತ್ತಾ ಬಂದಿದೆ. ಮೊದಲ ಉರುಸನ್ನು ಪೆನುಗೊಡ (ಆಂಧ್ರಪ್ರದೇಶ) ದ ಬಾಬಾ ಫಕ್ರುದ್ದೀನ್ ನಡೆಸಿದರು. ಉರುಸು ಹನ್ನೆರಡು ದಿನ ನಡೆಯುವದು.

ಉರುಸಿನ ದಿನ ಕುರಾನ್ ಪಠಿಸುವರು ಮರುದಿನ ಭಾರತದ ವಿವಿಧ ಭಾಗದಿಂದ ಅನೇಕ ಫಕೀರರು ಆಗಮಿಸಿ ತಮ್ಮ ಯೋಗಶಕ್ತಿಯನ್ನು ಪ್ರದರ್ಶಿಸುವರು. ಹನ್ನೊಂದನೆಯ ದಿನ ಸಂದಲ್ (ಗಂಧ) ಮೆರವಣಿಗೆ ನಡೆಯುವದು. ಮೆರವಣಿಗೆಯ ಮುಂದೆ ಫಕೀರರು ದಯಾರೆ (ಒಂದು ವಿಧದ ಚರ್ಮವಾದ್ಯ) ಬಾರಿಸುತ್ತ ಚಾವಟಿ, ಕತ್ತಿಯಿಂದ ಮೈಗೆ ಹೊಡೆದುಕೊಳ್ಳುತ್ತ ಚಿಮುಟದ ರೀತಿಯ ಆಯುಧವನ್ನು ಕಣ್ಣಿಗೆ ಮತ್ತು ಹೊಟ್ಟೆಗೆ ಚುಚ್ಚಿ ಕೊಳ್ಳುತ್ತಾ ಅದ್ಭುತ ಚಮತ್ಕಾರಗಳನ್ನು ಪ್ರದರ್ಶಿಸುವರು. ಕತ್ತಿವರಸೆ, ದೊಣ್ಣೆವರಸೆ ಮುಂತಾದ ಜನಪದ ಕಲೆಗಳನ್ನು ತೋರಿಸುವರು. ಗಂಧವನ್ನು ಬಾಬಾರವರ ಸಮಾಧಿಯ ಮೇಲೆ ಚಿಮುಕಿಸಿ ಅನಂತರ ಮೆರವಣಿಗೆಯಲ್ಲಿ ತಂದ ಗಲ್ಲೀಪವನ್ನು ಹೊದಿಸುವರು. ಕೆಲವು ಭಕ್ತರು ಸಕ್ಕರಿ ಓದಿಸುವರು, ಹರಕೆ ಹೊರುವರು.

ಹನ್ನೆರಡನೆಯ ದಿನ ಹಗಲು ಕುಸ್ತಿ ಮುಂತಾದ ಮನೋರಂಜನೆಗಳು ರಾತ್ರಿ ಕವ್ವಾಲಿ ಕಾರ್ಯಕ್ರಮ ನಡೆಯುವವು. ಈ ಅವಧಿಯಲ್ಲಿ ಹಿಂದು-ಮುಸ್ಲಿಮರು ಪಾಲ್ಗೊಳ್ಳುವರು.

| ಮೆಹಬೂಬ ಸುಬಹಾನಿ :

ಹಿಜರಿ ಸನ್ ೪೭೧ ರಬಿಉಲ್ ಆಖಿರ ತಿಂಗಳಿನ ೯ನೆಯ ದಿನ ಹ| ಶೇಖ ಅಬ್ದುಲ್ ಜಿಲಾನಿಯವರು ಇರಾಕ್ ದೇಶದಲ್ಲಿ ಜನಿಸಿದರು. ೯೦ ವರ್ಷ ಸಮಾಜ ಸೇವೆಯಲ್ಲಿ ತೊಡಗಿದ ಇವರು ಹಿಜರಿ ಶಕೆ ೫೬೧ (ಕ್ರಿ.ಶ. ೧೧೬೫) ನೆಯ ರಬೀಉಲ್ ಆಖಿರ ತಿಂಗಳಿನ ೯ನೆಯ ದಿನ ಬಗದಾದ(ಇರಾಕ್)ನಲ್ಲಿ ಕೊನೆ ಯುಸಿರೆಳೆದರು. ಇವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಓಟೋಮನ್ ಸುಲ್ತಾನ್ ಸುಲೈಮಾನ್ ಸಾಕಷ್ಟು ಹಣ ಸೂರೆಮಾಡಿ ಅದ್ಭುತವಾದ ಕಟ್ಟಡವನ್ನು ಕಟ್ಟಿಸಿದನು. ಈಗಲೂ ಇವರ ದರಗಾ ಬಗದಾದನಲ್ಲಿ ಶೋಭಿಸುತ್ತಿದ್ದು ಭಕ್ತರಿಗೆ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಆದರೆ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಇವರ ಹೆಸರಿನ (ಅಬ್ದುಲ್ ಖಾದಿರ ಜಿಲಾನಿಯವರಿಗೆ ಕೇಸು ಪೀರ, ದಸ್ತಗೀರ, ಪೀರಾನೇ ಪೀರ, ಮೆಹಬೂಬ ಸುಬಹಾನಿಮುಂತಾದ ಹನ್ನೊಂದು ಹೆಸರುಗಳಿವೆ) ದರಗಾಗಳು ಇರುವುದು ವೈಶಿಷ್ಟ್ಯಪೂರ್ಣವಾಗಿದೆ.

ಕರ್ನಾಟಕ ರಾಜ್ಯದ ಬೆಳಗಾಂವ ಜಿಲ್ಲೆಯ ಸೌಂದತ್ತಿ ತಾಲೂಕಿನ ಹಿರೇಕುಂಬಿ, ಧಾರವಾಡ ಜಿಲ್ಲೆಯ ಕಾಗಿನೆಲ್ಲಿ, ವಿಜಾಪುರ ಜಿಲ್ಲೆಯ ಬಾಗಲಕೋಟೆ ಮುಂತಾದ ಊರುಗಳಲ್ಲಿ ಇವರ ದರಗಾಗಳಿದ್ದು ಪ್ರತಿವರ್ಷ ಉರುಸು ಜರುಗುವವು.

ನಗರಗಳಲ್ಲಿ ಮಾತ್ರ ಗ್ಯಾರವಿ ತಿಂಗಳಿನ ಪ್ರಾರಂಭದ ಹನ್ನೊಂದು ದಿನಗಳವರೆಗೆ ಮೆಹಬೂಬ ಸುಬಹಾನಿಯವರ ಚರಿತ್ರೆ ಮತ್ತು ಪವಾಡಗಳನ್ನು ವಿವರಿಸಿ ಹೇಳುವರು ಇದಕ್ಕೆ ‘ಗ್ಯಾರವಿ ಮಜಲೀಸ್’ ಎನ್ನುತ್ತಾರೆ. ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ಏರ್ಪಡಿಸುವುದುಂಟು.

ಹಿರೇಕುಂಬಿ ಗುಡ್ಡದ ಮೇಲೆ ಮಕ್ತುಂ ಹುಸೇನಿಯ ಗುಂಬಜದ ಪಕ್ಕ ಮೆಹಬೂಬ ಸುಬಹಾನಿಯವರ ದರಗಾ ಇದ್ದು ಪ್ರತಿವರ್ಷ ತಪ್ಪದೆ ಉರುಸು ನಡೆಯುವದು. ಅಲ್ಲದೆ ಪ್ರತಿ ಅಮವಾಸ್ಯೆ, ಹುಣ್ಣಿಮೆಯಂದು ಹಿಂದೂ ಮುಸ್ಲೀಮರು ದರಗಾದ ದರ್ಶನ ಮಾಡಿಕೊಂಡು ಸಕ್ಕರೆ ಓದಿಸುವರು. ಕೆಲವರು ಕಂದೂರಿ ಮಾಡಿ, ಮಕ್ಕಳ ಜವಳಾ (ತಲೆಗೂದಲು) ತೆಗೆಸಿ ಹರಕೆ ತೀರಿಸುವರು ಬಾಗಿಲಕೋಟಿಯ ಬಜಾರದಲ್ಲಿ ಮೆಹಬೂಬ ಸುಬಹಾನಿ ಮತ್ತು ಜಿಂದೇಷಾವಲಿ (ಮೆಹಬೂಬ ಸುಬಹಾನಿಯವರ ಗುರು) ಯವರ ದರಗಾ ಇದೆ. ಉರುಸಿನ ದಿನ ಹರಕೆ ಹೊತ್ತವರು ಮಾದ್ಲಿ (ಸಿಹಿ ಅಡಿಗೆ) ಮಾಡಿ ಚಿರಾಕ್ (ದೀಪ) ಹಚ್ಚಿ ಫಾತಿಹಾ ಮಾಡಿಸಿ ಹರಕೆಯ ವಸ್ತುಗಳನ್ನು ಅರ್ಪಿಸುವರು. ಬಂಧು ಮಿತ್ರರಿಗೆ ಆಮಂತ್ರಿಸಿ ‘ಗ್ಯಾರವಿ’ ಊಟ ಮಾಡಿಸುವರು.

ಬಾಗಲಕೋಟಿ, ಕಾಗಿನೆಲ್ಲಿ, ಹಿರೇಕುಂಬಿ, ಬೆಟಗೇರಿ, ಮುಂಡರಗಿ ಮುಂತಾದ ಊರುಗಳಲ್ಲಿ ಗಂಧ ಮತ್ತು ಉರುಸು ನಡೆದನಂತರ ಕವ್ವಾಲಿ, ಕುಸ್ತಿ, ರಿವಾಯಿತ ಪದ (ಮೊಹರಂ ಪದ), ಹೆಜ್ಜೆ ಪದಗಳ ಸ್ಪರ್ಧೆ ಏರ್ಪಡಿಸಿ ಆಕರ್ಷಕ ಬಹುಮಾನ ನೀಡುವರು.

ಲಕ್ಷ್ಮೇಶ್ವರದ ದೂಧ ಪೀರಾ :

ಪವಾಡ ಪುರುಷ ಸಯ್ಯದ ಸುಲೇಮಾನ ಬಾದಶಹಾ ನೂರೇ ಖಾದರಿ ಉರ್ಫ ದೂಧ ಪೀರಾ ಅವರು ಕ್ರಿ.ಶ. ೧೮೯೦ ರಂದು ಗುರುವಾರ ಕಾಲವಶರಾದರು. ಪ್ರತಿವರ್ಷ ಅವರ ಪುಣ್ಯದಿನವಾದ ಷವ್ವಾಲ್ ತಿಂಗಳಿನ ೧೨ನೆಯ ದಿನ ಧಾರವಾಡ ಜಿಲ್ಲಾ ಲಕ್ಷ್ಮೇಶ್ವರದ ಆಸಾರ ಮೊಹಲ್ಲಾದಲ್ಲಿ ಉರುಸು ಜರುಗುವದು. ಅಂದು ಸುತ್ತಮುತ್ತಲಿನ ಹಳ್ಳಿಯ ಅಸಂಖ್ಯಾತ ಹಿಂದೂಮುಸ್ಲೀಮರು ಅಲ್ಲಿ ತಪ್ಪದೇ ಬಂದು ಸೇರುವರು. ಸಂದಲ್ (ಗಂಧ) ಮೆರವಣಿಗೆ ಹಿಂದೂ ಭಕ್ತರ ಮನೆಯಿಂದ ಹೊರಡುವದು ಈ ಉರುಸಿನ ವೈಶಿಷ್ಟ್ಯವಾಗಿದೆ.

ಹಲವಾರು ವರ್ಷಗಳಿಂದ ಮೈಯಲ್ಲಿ ಸೇರಿಕೊಂಡ ಗಾಳಿ ಪಿಶಾಚಿ ದೆವ್ವಗಳು ಮಹಾಪುರುಷರ ಸಮೀಪ ಬರಲು ಪ್ರಾಣಭಯದಿಂದ ತತ್ತರಿಸಿ ಓಡಿಹೋಗುತ್ತವೆಂದು ಜನರ ನಂಬುಗೆ. ಆಗದವರು ಮಾಡಿಸಿದ ಮಾಟ ಮಂತ್ರ ತಂತ್ರಗಳಿಂದಾಗಿ ನರಳುವವರು ದೂಧ ಪೀರಾ ಸಮಾಧಿಯ ಆವರಣದಲ್ಲಿ ಪ್ರವೇಶಿಸಿದ ಕೂಡಲೇ ಅವುಗಳ ಪ್ರಭಾವ ಇಲ್ಲವಾಗುವುದಂತೆ. ಅಷ್ಟೆ ಅಲ್ಲ ಆಸಾರ ಭಾವಿಯ ನೀರನ್ನು ದೂಧ ಪೀರಾರ ಗದ್ದುಗೆಗೆ ಮುಟ್ಟಿಸಿ ಸ್ವೀಕರಿಸಿದರೆ ಎಂಥ ಗುಹ್ಯರೋಗಗಳು ವಾಸಿಯಾಗುತ್ತವೆಂದು ಭಕ್ತರು ಅನಿಸಿಕೆ. ಅಮವಾಸ್ಯೆ ಮತ್ತು ಗುರುವಾರ ತಪ್ಪದೇ ಲಕ್ಷ್ಮೇಶ್ವರದಲ್ಲಿ ಭಕ್ತರು ನೆರೆಯುತ್ತಾರೆ. ದೂಧ ಪೀರಾರವರ ಸಮಾಧಿ ದರ್ಶನದಿಂದ ಪುನೀತರಾಗುತ್ತಾರೆ. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯನ್ನು ಪಡೆದ ಈ ಉರುಸಿನ ಹೆಸರನ್ನು ಷವ್ವಾಲ್ ತಿಂಗಳಿಗೆ ಆರೋಪಿಸಿ ‘ದೂಧ ಕಾ ಮಹಿನಾ’ ಎಂದು ಕರೆಯುವದುಂಟು.

ಇಳಕಲ್ಲಿನ ಹ| ಮುರ್ತುಜಾ ಖಾದ್ರಿ :

ಹಿಂದು-ಮುಸ್ಲೀಮರನ್ನು ಭಾವನಾತ್ಮಕವಾಗಿ ಒಂದು ಗೂಡಿಸುವ ಮುರ್ತುಜಾ ಖಾದ್ರಿ ಸಂತರ ಉರುಸು ಭಾವೈಕ್ಯತೆಯ ಹೆಗ್ಗುರುತಾಗಿ ಬಳಕೆಯಲ್ಲಿದೆ. ಪ್ರತಿವರ್ಷ ಸುಮಾರು ಮೂರ್ನಾಲ್ಕು ಲಕ್ಷ ಜನ ಸೇರುವ ಉರುಸಿನಲ್ಲಿ ಹಿಂದೂಗಳ ಸಂಖ್ಯೆಯೇ ಹೆಚ್ಚು ಉರುಸು ನಡೆಸುವ ದರಗಾ ಸಮಿತಿಯ ಅಧ್ಯಕ್ಷರು, ಸದಸ್ಯರು ಹಿಂದೂಗಳೇ ಆಗಿದ್ದು ಉರುಸಿನ ದಿನ ಗಂಧ ಪುಷ್ಪಾದಿಗಳ ಸೇವೆಯೂ ಗೌಡ ಕುಲಕರ್ಣಿ ಚವ್ಹಾಣ ಮನೆತನದವರಿಂದ ನಡೆಯುವುದು ಇಲ್ಲಿನ ವೈಶಿಷ್ಟ್ಯವಾಗಿದೆ.

ಹಿಜರಿ ಸನ್ ೧೨೧೧ ರಜ್ಜಬ್ ತಿಂಗಳ ೨೨ ರಂದು ಜನಿಸಿದ ಮುರ್ತುಜಾ ಖಾದ್ರಿಯವರು. ಹದಿನಾರು ವಸಂತಗಳನ್ನು ಕಂಡಾಗ ಸಕಲ ವಿದ್ಯಗಳಲ್ಲಿ ಪಾರಂಗತರಾಗಿ ಪಂಡಿತರೆನಿಸಿಕೊಂಡಿದ್ದರು. ಕೆಲವರ್ಷಗಳ ನಂತರ ಮಕ್ಕಾಯಾತ್ರೆ ಮಾಡಿ ಬಂದ ಈ ಸಂತ ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡು ಹಿಜರಿ ಸನ್ ೧೨೯೦ ರಜಬ್ ತಿಂಗಳ ೨೯ ನೆಯ ದಿನ ಬೆಳಗಿನ ಜಾವ ಪರಲೋಕವಾಸಿಗಳಾದರು. ಇವರನ್ನು ಸಮಾಧಿಮಾಡಿದ ಸ್ಥಳದಲ್ಲಿ ಬೃಹತ್ ದರಗಾ ನಿರ್ಮಿಸಲಾಗಿದ್ದು ಹಿಂದೂ ಮುಸ್ಲೀಮರಿಗೆ ಪವಿತ್ರ ಪುಣ್ಯತಾಣವಾಗಿದೆ.

ಇತರ ಸಂತರು, ಮುಸ್ಲಿಮ ಮಹಾಪುರುಷರು :

ಮೇಲೆ ಉಲ್ಲೇಖಿಸಿ ವಿವರಿಸಿದ ಸಂತರಲ್ಲದೆ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಅಸಂಖ್ಯಾತ ಪವಾಡ ಪುರುಷರ ದರಗಾಗಳಿದ್ದು ಪ್ರತಿವರ್ಷ ಉರುಸು ನಡೆಯುತ್ತವೆ. ಅವುಗಳಲ್ಲಿ ತುಮಕೂರ ಜಿಲ್ಲೆಯ ಕೆಸರ ಮಡು ಗ್ರಾಮದ ಹ| ಮೋಮಿನ್ ಬಾದಷಹಾ ಖಾದ್ರಿ ಅಲ್ ಬಗದಾದಿ, ರಾಯಚೂರು ಜಿಲ್ಲೆಯ ಸಿಂಧನೂರ ತಾಲ್ಲೂಕಿನ ಹಸಮ ಕಲ್ಲಿನ ಮುಹ್ಮದ ಷರೀಫಖಾನ್, ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ನರೇಗಲ್ಲದ ರಹೀಮಾನ ಷಾವಲಿ, ಕುಂದಗೋಳ ತಾಲ್ಲೂಕಿನ ಶಿಶುನಾಳ ಶರೀಫ, ಸಾಹೇಬ, ಹುಲಗೂರಿನ ಖಾದಿರ ಷಾವಲಿ ಅಡ್ನೂರಿನ ಹುಸೇನ ಷಾವಲಿ, ಶಿರಹಟ್ಟಿಯ ಫಕೀರ ಸ್ವಾಮಿ, ಯಮನೂರಿನ ರಾಜಾ ಭಾಗ ಸವಾರ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸಯ್ಯದ ಮದನಿ, ಮಂಗಳೂರಿನ ಸಯ್ಯದಾನಿ ಬೀಬಿ, ಕಟ್ಟಾಡಿಯ ಫಕೀರ ಬಾಬಾವಲಿ ಕುಂದಾಪುರದ ಯುಸೂಫವಲಿ ಉರುಸುಗಳು ಪ್ರಮುಖವಾಗಿವೆ.

ಇವರ ಸಮಾಧಿ ಸ್ಥಳ (ದರಗಾ) ಗಳು ಒಂದಲ್ಲ ಒಂದು ರೀತಿಯ ಮಹತ್ವಪೂರ್ಣ ಚರಿತ್ರೆಗಳನ್ನೊಳಗೊಂಡಿವೆ. ಪವಾಡದ ಕತೆಗಳನ್ನೊಳಗೊಂಡಿವೆ. ಇವೆಲ್ಲ ಕ್ಷೇತ್ರಗಳು ಹಿಂದೂಮುಸ್ಲಿಮರ ಪವಿತ್ರ ಯಾತ್ರಾಸ್ಥಳಗಳಾಗಿವೆ. ಕೋಮು ಸೌಹಾರ್ದತೆ ಕಾಪಾಡಿಕೊಂಡು ಬರುವ ಪ್ರಮುಖ ರಕ್ಷಾತಾಣಗಳಾಗಿವೆಯೆಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ.[1] ಜೀ ವೆಂಕಟಸುಬ್ಬಯ್ಯ ಕನ್ನಡ ನಿಘಂಟು (ಕ.ಸಾ.ಪ. ಬೆಂಗಳೂರು ೧೯೭೭) ಪು : ೧೨೨

[2] ಚಂದ್ರಶೇಖರ ಕಂಬಾರ ಜಾ. ವಿಶ್ವಕೋಶ ಭಾಗ ೧ (ಕ.ಸಾ.ಪ. ಬೆ. ೧೯೮೫) ಪು : ೨೧೯

[3] ಉದಯವಾಣಿ ದೀಪಾವಳಿ ವಿಶೇಷಾಂಕ ೧೯೯೧ ಪುಟ ೨೧೪

[4] ತರಂಗ ವಾರಪತ್ರಿಕೆ ೩.೨.೧೯೯೧ ಪುಟ ೫೮, ಪ್ರಜಾವಾಣಿ ಪುರವಣಿ ೧೯.೨.೧೯೮೯ ಪುಟ ೧

[5] P. Thomas – Festivals of India.

[6] ಜಯತೀರ್ಥ ರಾಜ ಪುರೋಹಿತ ಖಾಜಾಬಂದಾನವಾಜ (ಏ ಬಿ ಎಚ್ ಪ್ರ ಬೆಂ ೧೯೮೦) ಪು ೩೮

[7] Ramazan Darga-The saint who came from Bagadad (Deccan Herald 4.2.95)

[8] ಚಂದ್ರಶೇಖರ ಕಂಬಾರ : ಜಾನಪದ ವಿಶ್ವಕೋಶ ಭಾಗ ೧ (ಕ.ಸಾ.ಪ.ಬೆಂ)